ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇದು ಸೂಕ್ತ ಸಮಯವೇ? ಇಲ್ಲಿದೆ ಸಂಪೂರ್ಣ ಮಾಹಿತಿ
ಷೇರು ಮಾರುಕಟ್ಟೆಯಲ್ಲಿ ಈಗ ಹೂಡಿಕೆ ಮಾಡಬೇಕೆ ಅಥವಾ ಬೇಡವೇ ಎನ್ನುವ ಗೊಂದಲ ಸಾಕಷ್ಟು ಜನರದ್ದು. ಇದಕ್ಕೆ ಈಗ ಟಿವಿ9 ಕನ್ನಡ ಫೇಸ್ಬುಕ್ಲೈವ್ನಲ್ಲಿ ಉತ್ತರ ಸಿಕ್ಕಿದೆ. IndianMoneyಯ ಸಿ.ಎಸ್.ಸುಧೀರ್, ಆರ್ಥಿಕ ತಜ್ಞ ಸಿ.ಎ.ರುದ್ರಮೂರ್ತಿ ಹಾಗೂ ಹಿರಿಯ ಪತ್ರಕರ್ತ ಅರುಣ್ ಸುಂದರಂ ಮಾಹಿತಿ ನೀಡಿದ್ದಾರೆ.
ಕೊರೊನಾ ವೈರಸ್ ಭಾರತಕ್ಕೆ ಕಾಲಿಟ್ಟ ನಂತರ ಪಾತಾಳಕ್ಕೆ ತಲುಪಿದ್ದ ಷೇರು ಮಾರುಕಟ್ಟೆ ಈಗ ಚೇತರಿಕೆ ಕಂಡಿದೆ. ಸೆನ್ಸೆಕ್ ಹಾಗೂ ನಿಫ್ಟಿ ಐತಿಹಾಸಿಕ ಏರಿಕೆ ಕಂಡಿದೆ. ಕೆಲವರು ಮಾರುಕಟ್ಟೆಯಲ್ಲಿ ಗೂಳಿ ಓಟ ಮುಂದುವರಿಯಲಿದೆ ಎಂದರೆ, ಇನ್ನೂ ಕೆಲವರು, ಮಾರುಕಟ್ಟೆ ಕರೆಕ್ಷನ್ ಆಗಲಿದೆ ಎನ್ನುತ್ತಿದ್ದಾರೆ. ಹಾಗಾದರೆ, ಈ ಸಂದರ್ಭದಲ್ಲಿ ಹೂಡಿಕೆ ಮಾಡೋದು ಎಷ್ಟು ಸರಿ ಎನ್ನುವ ಪ್ರಶ್ನೆಯ ಬಗ್ಗೆ ಬುಧವಾರ ಟಿವಿ9 ಕನ್ನಡ ಆಯೋಜಿಸಿದ್ದ ಫೇಸ್ಬುಕ್ ಲೈವ್ನಲ್ಲಿ ತಜ್ಞರು ಚರ್ಚಿಸಿದರು. ಆ್ಯಂಕರ್ ಮಾಲ್ತೇಶ್ ಸಂವಾದ ನಿರ್ವಹಿಸಿದರು.
ಇಂಡಿಯಾಮನಿ ಸ್ಥಾಪಕ ಸಿ.ಎಸ್.ಸುಧೀರ್ ಮಾತನಾಡಿ, ಷೇರು ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ. ಅದೇ ರೀತಿ ಹಣದ ಹರಿವು ಕೂಡ ಹೆಚ್ಚಾಗಿದೆ. ಭಾರತದಲ್ಲಿ ಕೇವಲ 6 ಸಾವಿರ ಕಂಪೆನಿಗಳು ಮಾತ್ರ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿವೆ. ಇದರಲ್ಲಿ ಎಲ್ಲ ಕಂಪೆನಿಗಳ ಫಂಡಮೆಂಟಲ್ ಚೆನ್ನಾಗಿಲ್ಲ. ಹೀಗಾಗಿ, ಕೆಲವೇ ಷೇರುಗಳತ್ತ ಜನರು ವಾಲುತ್ತಿದ್ದಾರೆ ಎಂದರು.
ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು ಎನ್ನುವ ಕಿವಿಮಾತು ಸುಧೀರ್ ಅವರದ್ದು. ಷೇರು ಮಾರುಕಟ್ಟೆಯಲ್ಲಿ ಕೆಲವರು 10 ರೂಪಾಯಿ ಇಟ್ಟುಕೊಂಡು 100 ರೂಪಾಯಿ ಷೇರನ್ನು ಖರೀದಿ ಮಾಡುತ್ತಿದ್ದಾರೆ. ಈ ರೀತಿಯ ಬೆಳವಣಿಗೆ ತಪ್ಪು ಎನ್ನುತ್ತಾರೆ ಅವರು.
ಮಾರುಕಟ್ಟೆ ಏಳಲಿದೆಯೋ, ಬೀಳಲಿದೆಯೋ? ಒಬ್ಬ ರೋಗಿ ಐಸಿಯು ಸೇರಿ ಚೇತರಿಕೆ ಕಾಣುತ್ತಿದ್ದಾನೆ ಎಂದರೆ ಅವರಿಗೆ ವೆಂಟಿಲೇಟರ್ ಕಂಟಿನ್ಯೂ ಮಾಡಬೇಕು. ಇಲ್ಲದಿದ್ದರೆ, ವ್ಯಕ್ತಿ ಸಾಯುತ್ತಾನೆ. ಷೇರು ಮಾರುಕಟ್ಟೆಯ ಪರಿಸ್ಥಿತಿ ಕೂಡ ಹಾಗೆಯೇ. ಈಗಿರುವ ಹರಿವು ಹೀಗೆಯೇ ಮುಂದುವರಿದರೆ ಮಾರುಕಟ್ಟೆ ಏರುತ್ತದೆ. ಇಲ್ಲದಿದ್ದರೆ ಸ್ಟಾಕ್ ಮಾರ್ಕೆಟ್ ಬೀಳುತ್ತದೆ. ಟ್ರೇಡರ್ಗಳು ಮನಸ್ಸು ಮಾಡಿದರೆ ಸ್ಟಾಕ್ ಮಾರುಕಟ್ಟೆ ಏಳಲೂಬಹುದು, ಬೀಳಲೂಬಹುದು ಎನ್ನುತ್ತಾರೆ ಸುಧೀರ್.
ಷೇರು ಮಾರುಕಟ್ಟೆಯಲ್ಲಿ ಒಬ್ಬರೋ ಇಬ್ಬರು ಹಣ ಮಾಡಿರಬಹುದು. ಅದನ್ನು ಮಾತ್ರ ಜನ ನೋಡುತ್ತಿದ್ದಾರೆ. ಆದರೆ, ಲಕ್ಷಾಂತರ ಜನ ಮನೆ ಕಳೆದುಕೊಂಡಿದ್ದಾರೆ. ಇಬ್ಬರು ಹಣ ಮಾಡುತ್ತಿದ್ದಾರೆ ಎಂದರೆ, 98 ಜನರು ನಷ್ಟ ಅನುಭವಿಸುತ್ತಿದ್ದಾರೆ ಎಂದರ್ಥ. ಹೀಗಾಗಿ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಕೊಳ್ಳಬೇಡಿ. ಜಾಗರೂಕವಾಗಿ ಹೂಡಿಕೆ ಮಾಡಿ ಎಂಬುದು ಸುಧೀರ್ ಕಳಕಳಿ.
ಚಿನ್ನದ ಮೇಲೆ ಹೂಡಿಕೆ ಎಂದಾಗ ಸಾಕಷ್ಟು ಜನರು ಆಭರಣ ಖರೀದಿ ಮಾಡುತ್ತಾರೆ. ಆದರೆ, ಈ ರೀತಿ ಮಾಡೋದು ತಪ್ಪು ಅನ್ನೋದು ಸುಧೀರ್ ಅಭಿಪ್ರಾಯ. ಚಿನ್ನದ ಮೇಲೆ ಹೂಡಿಕೆ ಮಾಡುವುದಾದರೆ, ಆಭರಣ ಕೊಳ್ಳಬೇಡಿ. ಚಿನ್ನದ ಗಟ್ಟಿ, ಚಿನ್ನದ ಬಾಂಡ್ ಅಥವಾ ಡಿಜಿಟಲ್ ರೂಪದಲ್ಲಿ ಚಿನ್ನ ಖರೀದಿಸಿ ಎನ್ನುತ್ತಾರೆ ಅವರು.
ಹಂತ ಹಂತವಾಗಿ ಹೂಡಿಕೆ ಮಾಡಿ ಹಂತಹಂತವಾಗಿ ಹೂಡಿಕೆ ಮಾಡುವ ಎಸ್ಐಪಿ (ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್) ಒಳ್ಳೇದು ಎನ್ನುವುದು ರುದ್ರಮೂರ್ತಿ ಅವರ ಕಿವಿಮಾತು. ಅತಿ ಕಡಿಮೆ ಬೆಲೆಯಲ್ಲಿ ಷೇರನ್ನು ಕೊಂಡುಕೊಳ್ಳುತ್ತೇನೆ ಹಾಗೂ ಅತಿ ಹೆಚ್ಚಿನ ಬೆಲೆಗೆ ಷೇರನ್ನು ಮಾರುತ್ತೇನೆ ಎನ್ನುವುದು ಸಾಧ್ಯವೇ ಇಲ್ಲ. ನಾಳೆಯೇ ನಾನು ಲಕ್ಷಾಂತರ ರೂಪಾಯಿ ಮಾಡುತ್ತೇನೆ ಎಂದರೆ ಅದು ಅಸಾಧ್ಯವಾದ ಮಾತು. ಹೀಗಾಗಿ, ಒಮ್ಮೆಲೇ ದೊಡ್ಡ ಹಣ ಹಾಕೋದು ಬೇಡ. ಹೀಗಾಗಿ, ಷೇರು ಮಾರುಕಟ್ಟೆಯಲ್ಲಿ ಹಂತ ಹಂತವಾಗಿ ಹೂಡಿಕೆ ಮಾಡಬೇಕು ಎನ್ನುತ್ತಾರೆ ಅವರು.
ಲಾಂಗ್ಟರ್ಮ್ ಇನ್ವೆಸ್ಟ್ಮೆಂಟ್… ಅನೇಕರು ಟ್ರೇಡಿಂಗ್ಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಅಂದರೆ, ಒಂದು ಷೇರನ್ನು ಕೊಂಡು ಕಡಿಮೆ ಅವಧಿಯಲ್ಲೇ ಅದನ್ನು ಮಾರುವುದು. ಆದರೆ, ಈ ರೀತಿ ಮಾಡದೇ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಆದ್ಯತೆ ಕೊಡಿ ಎಂದಿದ್ದಾರೆ ರುದ್ರಮೂರ್ತಿ. ಒಂದು ಷೇರನ್ನು ಕೊಂಡುಕೊಳ್ಳುವುದಕ್ಕೂ ಮೊದಲು ಅಧ್ಯಯನ ಮಾಡಿ. ಲಾಂಗ್ಟರ್ಮ್ ಇಡೋಕೆ ಹೆಚ್ಚು ಆದ್ಯತೆ ನೀಡುವುದು ಒಳಿತು ಎನ್ನುತ್ತಾರೆ ಅವರು.
ಹೂಡಿಕೆಗೆ ಭರವಸೆ ಮುಂದಿನ ವರ್ಷಗಳಲ್ಲಿ ಯಾವ ವಲಯದ ಷೇರುಗಳ ಏರಿಕೆ ಕಾಣುತ್ತದೆ ಎನ್ನುವ ಬಗ್ಗೆಯೂ ರುದ್ರಮೂರ್ತಿ ಮಾಹಿತಿ ನೀಡಿದ್ದಾರೆ. ಮುಂದಿನ ವರ್ಷಗಳಲ್ಲಿ ಟ್ರಾವೆಲ್ ಹಾಗೂ ಪ್ರವಾಸೋದ್ಯಮ ಹೀಗೆಯೇ ಡೌನ್ ಆಗಿರಲಿದೆ. ಐಟಿ ಮತ್ತು ಫಾರ್ಮಾ ಭಾರೀ ಏರಿಕೆ ಕಾಣುತ್ತೆ ಅನ್ನೋದು ಅವರ ಮಾತು.
ಮಾರುಕಟ್ಟೆ ಜ್ಞಾನ ಇಲ್ಲದಿದ್ದರೆ ಮ್ಯೂಚವಲ್ ಫಂಡ್ ಉತ್ತಮ. ಡಬಲ್ ಹಣ ಮಾಡಿಕೊಡಲಾಗುತ್ತದೆ ಎಂದರೆ ಅದರ ಆಸೆಗೆ ಬೀಳಬೇಡಿ. ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸರಿಯಾಗಿಟ್ಟುಕೊಳ್ಳಿ. ಉತ್ತಮ ಫಂಡ್ಹೌಸ್ ಆರಿಸಿಕೊಳ್ಳಿ ಎಂದು ಎಚ್ಚರಿಕೆ ಹೇಳುತ್ತಾರೆ.
ಜಿಡಿಪಿ ಚೇತರಿಕೆ ಜನರಲ್ಲಿ ಕೊರೊನಾ ಭಯ ದೂರವಾಗುತ್ತಿದೆ. ಇದರಿಂದ ದೇಶದ ಆರ್ಥಿಕತೆ ಅಭಿವೃದ್ಧಿ ಕಾಣುತ್ತಿರುವುದು ಸ್ಪಷ್ಟವಾಗುತ್ತಿದೆ. ಹೀಗಾಗಿ, ಭಾರತದ ಆರ್ಥಿಕತೆ ಮತ್ತೆ ಮೊದಲಿನ ರೂಪಕ್ಕೆ ಬರುತ್ತಿದೆ ಎಂದು ಹಿರಿಯ ಪತ್ರಕರ್ತ ಅರುಣ್ ಸುಂದರಂ ಹೇಳಿದ್ದಾರೆ. ಅಲ್ಲದೆ, ಹೂಡಿಕೆಮಾಡುವಾಗ ಸಾಕಷ್ಟು ಎಚ್ಚರಿಕೆಯಿಂದ ಮಾಡಿ ಎನ್ನುವ ಕಿವಿಮಾತು ಹೇಳಿದ್ದಾರೆ.
Published On - 5:39 pm, Wed, 6 January 21