Poetry : ಅವಿತಕವಿತೆ ; ‘ರಶಿಯಾದ ಕುಡುಗೋಲಿಗೆ ಕೇರಳದ ತೆಂಗಿನಕಾಯಿ ಸೀಳಿದರೆ ಸಿಹಿನೀರ ಬುಗ್ಗೆ’

Journey of Poetry : ‘ನಿಗೂಢವಾದ ಸೌಂದರ್ಯದ ಹುಡುಕಾಟ. ದುಃಖಗಳ ಜೊತೆಗಿನ ಏಕಾಂತದ ಪಯಣ. ಅಥವಾ ಅವ್ಯಕ್ತ ಸುಖಗಳ ತಪ್ತತೆ ಅಥವಾ ಪುರಾಣಗಳ ಬೆನ್ನು ಹತ್ತಿ ಆದಿಮ ಕಾಲಕ್ಕೆ ಪಯಣ ಹೊರಡುವುದು. ಕವಿತೆಯಲ್ಲಿ ಇವೆಲ್ಲ ದುಸ್ಸಾಹಸಗಳನ್ನು ಮಾಡಿರುವೆ. ಡಾ. ವಿಕ್ರಮ ವಿಸಾಜಿ

Poetry : ಅವಿತಕವಿತೆ ; ‘ರಶಿಯಾದ ಕುಡುಗೋಲಿಗೆ ಕೇರಳದ ತೆಂಗಿನಕಾಯಿ ಸೀಳಿದರೆ ಸಿಹಿನೀರ ಬುಗ್ಗೆ’
Follow us
|

Updated on:Nov 28, 2021 | 7:58 AM

Kannada Poetry : ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಕಲಬುರ್ಗಿಯಲ್ಲಿ ವಾಸವಾಗಿರುವ ಕವಿ, ಅನುವಾದಕ, ಪ್ರಾಧ್ಯಾಪಕ ಡಾ. ವಿಕ್ರಮ ವಿಸಾಜಿ ಸದ್ಯದಲ್ಲೇ ‘ಡೆಸ್ಡಿಮೋನಾಳ ಕರವಸ್ತ್ರ’ ಕವನ ಸಂಕಲವನ್ನು ಹೊರತರಲಿದ್ದಾರೆ. ಈ ಸಂದರ್ಭದಲ್ಲಿ ಅವರ ಕವಿತೆಗಳು ನಿಮ್ಮ ಓದಿಗೆ.   

*

ಬಾಲ್ಯದಲ್ಲಿಯೇ ಕವಿತೆಯ ಮೋಡಿಗೆ ಮರುಳಾದ ಮನಸ್ಸು ವಿಕ್ರಮ ವಿಸಾಜಿಯವರದು. ಹಲವು ‘ಬಾಲಪ್ರತಿಭೆ’ಗಳಂತೆ ಮುಸುಳಿಹೋಗದೆ, ಕನ್ನಡ ಸಾಹಿತ್ಯ, ವಿಮರ್ಶೆ ಮತ್ತು ಎಲ್ಲಕ್ಕಿಂಥ ಹೆಚ್ಚಾಗಿ ಜೀವನದ ಗಂಭೀರ ವಿದ್ಯಾರ್ಥಿಯಾಗಿ ಬೆಳೆದವರು. ಏಕಲವ್ಯನ ಹಾಗೆ ಕಲಿಯುವುದು ಅವರಿಗೆ ಅನಿವಾರ್ಯವಾಯಿತು. ಆದರೆ ‘ತಮಾಷಾ’ ಸಂಕಲನ ಅವರನ್ನು ಪ್ರಸಿದ್ಧಿಯ ಪ್ರಖರ ಬೆಳಕಿನ ಕೆಳಗೆ ತಂದಿತು. ಆ ಬೆಳಕು ಅವರ ಕಣ್ಣುಗಳನ್ನು ಕೋರೈಸದೆ, ಇನ್ನಷ್ಟು ಮತ್ತಷ್ಟು ಧ್ಯಾನಪರತೆಯ ಕಡೆಗೆ ಕರೆದೊಯ್ಯಿತು. ಹರೆಯದ ಹುಚ್ಚುಹೊಳೆ ಕೇವಲ ತನ್ನನ್ನು ಕಂಡುಕೊಳ್ಳುತ್ತದೆ, ಸಂಗಾತಿಯನ್ನು ಬಣ್ಣಿಸುತ್ತದೆ. ಆದರೆ ಈ ಕವಿ ಜಲಪಾತದ ನೀರನ್ನು ಹೃದಯದ ಕಾಲುವೆಗಳಲ್ಲಿ ಹರಿಸಿ, ಒಲುಮೆಯ ಬೆಳೆ ತೆಗೆಯುತ್ತಾರೆ. ಇದು ದೇಹವನ್ನು ಮರೆಯದೆ, ಅದನ್ನು ಮೀರುವ ಕವಿತೆಯಾಗುತ್ತದೆ. ಹೀಗೆ ಬಹುಮುಖಿಯಾದ ಮತ್ತು ಓದುಗರನ್ನು ಮುಟ್ಟುವ, ತಟ್ಟುವ ಕವಿತೆಗಳು ಇವರವು. ಡಾ. ಎಚ್. ಎಸ್. ರಾಘವೇಂದ್ರ ರಾವ್, ಅನುವಾದಕ, ವಿಮರ್ಶಕ

ವಿಕ್ರಮ ವಿಸಾಜಿ ವಿದ್ವತ್ತು ಮತ್ತು ಕರ್ತಾರಶಕ್ತಿಯ ಅಪರೂಪದ ಸಂಗಮ. ಈ ಎರಡೂ ಪ್ರವೃತ್ತಿಗಳು ಒಂದಾಗಿ ಪ್ರಸ್ತುತ ಕವಿತಾಗುಚ್ಛದಲ್ಲಿ ಹೊಸತೊಂದು ಹದಕ್ಕೆ ಬಂದಿವೆ. ಬೆಕೆಟ್, ಯೇಟ್ಸ್, ಬೋದಿಲೇರ್‌ರ ಕುರಿತ ವಿಶಿಷ್ಟ ಕವಿತೆಗಳು ಈ ಕವಿಯ ಅಧ್ಯಯನಶೀಲತೆಯನ್ನು ಬಿಂಬಿಸಿದರೆ, ಇರುವಣಿಗೆಯಿಂದ ಬಂದ ಸಂಡೂರು ಕಾಡು, ಬಂದೇ ನವಾಜರನ್ನು ಕುರಿತ ಕವಿತೆಗಳು ಇವರ ವಿದ್ವತ್ತಿನ ಸೃಜನಮುಖಕ್ಕೆ ಹಿಡಿದ ಕನ್ನಡಿಗಳು. ಹೀಗೆ ಸಹಜ ಮತ್ತು ವ್ಯುತ್ಪತ್ತಿ ಪ್ರತಿಭೆಗಳ ಸಮತೋಲನ ಇವತ್ತು ಅಪರೂಪ. ವಸ್ತುವಿನ ಏಕತಾನತೆಯಿಂದ ಬಿಡುಗಡೆ ಪಡೆದ ಈ ಕವಿತೆಗಳು ತೆರೆದ ಮನದಿಂದ ಜಗತ್ತಿನ ಬಹುಕುಳತೆಯನ್ನು ಒಳಗೊಂಡಿವೆ. ಜೊತೆಗೆ ಗದ್ಯ ಮತ್ತು ಪದ್ಯ ಲಯಗಳ ಬೆರಕೆಯೂ ಇಲ್ಲಿ ಗಮನಾರ್ಹ. ಪ್ರಸ್ತುತ ಸಂಕಲನದ ಮೂಲಕ ವಿಕ್ರಮ ವಿಸಾಜಿ ಕನ್ನಡ ಕಾವ್ಯದಲ್ಲಿ ಇನ್ನೊಮ್ಮೆ ತನ್ನ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ. ಎಚ್. ಎಸ್. ಶಿವಪ್ರಕಾಶ, ಕವಿ, ನಾಟಕಕಾರ

*

ಅಯ್ಯಪ್ಪ ಪಣಿಕ್ಕರ್ ಓದುವ ಕೋಣೆ

ಕೋಣೆಯ ಪ್ರವೇಶ ಬಾಗಿಲಿಗೆ ಬೀಗ ಚೌಕಟ್ಟಿನ ಮೂಲೆಗೆ ಜೇಡ ಜಾಲ ಕಟ್ಟಿಗೆಯ ಆತ್ಮ ಹೊಕ್ಕ ಗೆದ್ದಲು ಇರುವೆಗಳ ಸರಾಗ ಚಲನೆ ಹೇಗೊ ಹುಡುಕಿಕೊಂಡಿವೆ ದಾರಿ. ಕಬ್ಬಿಣದ ವಿಕಾರಳ ಬೀಗ ಸಡಿಲಿಸಿದೆ ಬಾಹು ಲಟಿಕೆ ಮುರಿದ ಬಾಗಿಲ ಮೈ, ರೊಯ್ಯನೆ ನುಗ್ಗಿದ ಗಾಳಿಯಲ್ಲಿ ಅಯ್ಯಪ್ಪ ಪಣಿಕ್ಕರರ ಉಸಿರು.

ತೆರೆದ ಹಾಳೆಗಳಲ್ಲಿ ಜೀವದ ಬಸಿರು ಚಿತ್ತ ಕಾಟು ಕೂಟುಗಳ ಲೋಕದಲ್ಲೆ ಊರ್ವಶಿ ಪುರೂರವರ ಬೇಟದಾಟ ಟೈಪರೈಟರಿನ ಚಿಕ್ಕ ಚಿಕ್ಕ ಕೊರಕಲುಗಳಲ್ಲಿ ಭಾವ ವಿಭಾವ ಅನುಭಾವದ ನೀರ ನೆಲೆ. ಬದುಕಿನ ಪಾತಾಳಕ್ಕೆ ಹಿಡಿದ ಭೂತಗನ್ನಡಿ ಒಡೆದ ಕನ್ನಡಿಯಲ್ಲಿ ಬುದುಕಿನ ಆಲಾಪ.

ಬೆರಳ ತುದಿಯಲ್ಲಿ ಪೆನ್ನಿನ ಮಸಿ ಕಪಾಟುಗಳ ಪುಸ್ತಕ ಸರಣಿಯಲ್ಲಿ ಪಣಿಕ್ಕರರ ಬೆರಳ ಅದೃಶ್ಯ ಕಂಪನ. ಗೆರೆ ಗುರುತು ಟಿಪ್ಪಣಿಯ ನಿಬಿಡ ಲೋಕ ಎದ್ದು ನಿಂತಿವೆ ಪೂರ್ವ ಪಶ್ಚಿಮ. ಕಟ್ಟಿಗೆಯ ಮಜಬೂತು ಖುರ್ಚಿಯಲ್ಲಿ ಇನ್ನೂ ಪವಡಿಸಿದೆ ಅಮೂರ್ತ ದೇಹ.

ಪಕ್ಕದಲ್ಲೆ ತಲೆಯೇರಿದ ಟೊಪ್ಪಿಗೆ ಕಪ್ಪು ಫ್ರೇಮಿನ ಕನ್ನಡಕದಲ್ಲಿ ಹಲವು ದೇಶಗಳ ವಕ್ರೀಭವನದ ಬೆಳಕು ಆ್ಯಶ್ ಟ್ರೇ ಒಳಗೆ ಸುಳಿವ ಹೊಗೆಯ ಸ್ತಬ್ಧಚಿತ್ರ ರೇಡಿಯೊಕ್ಕೀಗ ದಶಕಗಳ ಮೌನ ಕೋಣೆಯುದ್ದಕ್ಕೂ ಹಲವು ಪಾತ್ರಗಳ ನಿರಂತರ ನಾದ ತರಂಗ ಗಾನ.

(ಮಲಯಾಳ ಮೂಲ : ಊರ್ವಶಿ ಗೀತ ನಾಟಕ – ಅಯ್ಯಪ್ಪ ಪಣಿಕ್ಕರರ ಕೃತಿಗಳು, ಅನುವಾದ : ಸಿ.ರಾಘವನ್, ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ, 2003)

*

AvithaKavithe Poetry Column by Kannada Poet writer Dr Vikram Visaji

ವಿಕ್ರಮರ ಕೃತಿಗಳು

ಒಳಗಿನ ಕೋಣೆ

ಹಗಲು ರಾತ್ರಿಗಳ ಪರಿಭ್ರಮಣ ಸೂರ್ಯ ಚಂದ್ರ ಋತುಮಾನಗಳ ಗಾನಮೇಳ ಸಿಡಿಲು ಮಿಂಚು ಗುಡುಗುಗಳ ಕಾರ್ಮೋಡ ಕೋವಲಂ ಬೀಚಿನಿಂದೆದ್ದ ಮೇಘಗಳ ತಪ್ತ ತಿರುಗಾಟ ಹಿನ್ನೀರಿನಲ್ಲಿ ಬಾತುಕೋಳಿ ಮತ್ತು ಮೀನಿನ ಚೆಲ್ಲಾಟ ಕೃಷ್ಣ ರಾಧೆಯ ಪ್ರೇಮಕ್ಕೆ ಬಿಚ್ಚಿಕೊಂಡ ನವಿಲ ಗರಿಗಳು ಗೋಪಿಕೆಯರ ಮೈಯ ಬಟ್ಟೆ ಒದ್ದೆಯಾಗಿಸಿದ ಹಿನ್ನೀರು ಕಾಲಿಗೆ ಕಚುಗುಳಿ ಇಟ್ಟ ಮೀನ ಮರಿಗಳು ಹಿನ್ನೀರಿನಲಿ ಪ್ರತಿಬಿಂಬಿಸಿದೆ ನಕ್ಷತ್ರಲೋಕ ಪಣಿಕ್ಕರರ ಕಾವ್ಯದ ಬಲೆಯೊಳಗೆ ನಾದ ರೂಪ ಶಬ್ದ ಸಂಗೀತ ಸಾಂಗತ್ಯ ಮೈಚಾಚಿದ ನೀರಿಗೆ ಚಂದ್ರನ ಕಚಗುಳಿ ಎಲ್ಲಿ ನೋಡಿದಲ್ಲಲ್ಲಿ ಕಾಮನಬಿಲ್ಲಿನ ಬಾಗು ಬಳುಕು.

ಬೇಟೆ ಮತ್ತು ಬೇಟದ ಪೂರ್ವದಲ್ಲಿ ಇರುವುದೊಂದೆ ನಿಶ್ಚಲ ನಿತಾಂತ ನಿಶ್ಯಬ್ದ ಮೌನ ತೆಂಗಿನ ತೋಪುಗಳ ಹಿಂದೆ ಹಸಿರು ಗುಡ್ಡ ಅಲ್ಲಿ ನಾರಾಯಣ ಮುನಿ ಧ್ಯಾನ ಲೀನ ‘ಮಂದ ಮಾರುತವೆ ಬಾ ಬಾ ಮಧುರ ಸ್ವಪ್ನವೆ ಬಾ ಬಾ ಸುಮ ಸುಗಂಧವೆ ಬಾ ಬಾ ನನ್ನ ನಲ್ಲನೆ ಬಾ ಬಾ’ ಊರ್ವಶಿಯ ಅನವರತ ಮೊರೆತ ದೇಹವ ಕಾಮಿಸಿದ್ದಕ್ಕೆ ಮಾನವ ಜನ್ಮದ ಶಾಪ ಬದುಕು ಹಲವು ಶಾಪಗಳ ರುದ್ರ ಕೂಪ ಎಲ್ಲವೂ ಕನಸಿನಂತೆ ಕ್ಷಣಭಂಗುರ ಬಿರುಗಾಳಿಯಲ್ಲೂ ಎತ್ತಿ ನಿಲ್ಲಿಸಲಾಗಿದೆ ಮುಗುಚಿ ಬಿದ್ದ ನಾವೆ ಮುಂದಿನ ಪಯಣಕೆ ಕಣ್ಣುಬಿಟ್ಟರೆ ಪ್ಯಾಸೇಜ್ ಟು ಅಮೇರಿಕಾ ಆಸ್ಟ್ರಿಯಾ, ಯುಗೋಸ್ಲೊವಿಯಾ, ರೋಮಾನಿಯಾ ರಶಿಯಾದ ಕುಡುಗೋಲಿಗೆ ಕೇರಳದ ತೆಂಗಿನ ಕಾಯಿ ಸೀಳಿದರೆ ಸಿಹಿನೀರ ಬುಗ್ಗೆ.

ಮಯಕೊವಸ್ಕಿಯ ತುಂಟ ನಲ್ಲೆ ಹಿಮರಾಶಿಯಲ್ಲಿ ಒಂಟಿ ಡಾ.ಜೀವಾಗೊ ರೂಸೊ ಮೊಳಗಿಸಿದ ಸ್ವಾತಂತ್ರ್ಯದ ಕೂಗು ಮಾರ್ಕ್ಸ್​ನ ಕ್ರಾಂತಿಯ ಕೆಂಬಣ್ಣ ಲೆನಿನ್ ಕಲಿಸಿದ ಒಂಭತ್ತು ಪಾಠಗಳು ಗಾಂಧೀಜಿ ಕಲಿತ ಮೂರು ಪಾಠಗಳು ಎಷ್ಟು ಹುಡುಕಿದರೂ ದಕ್ಕದೇ ಇರುವ ಬದುಕಿನ ನೂರಾರು ನೋಟಗಳು ಬದುಕು ವಿಚಿತ್ರ ಸುಳಿಗಳ ಕಪ್ಪು ಕಡಲ ರಾಶಿ.

ತಿಲಕರ ಘೋಷಣೆ, ಟ್ಯಾಗೋರರ ಪ್ರಾರ್ಥನೆ ಸಂಕೋಲೆಗಳ ಕಳಚಿದ ರಾಮನ್‌ಪಿಳ್ಳೈ ಕಟ್ಟಳೆಗಳ ಮುರಿದ ಕುಮಾರನ್ ಆಶಾನ್ ಯಾವ ವ್ಯಕ್ತಿಯೂ ಇನ್ನೊಬ್ಬನ ಪಡಿನೆಳಲಲ್ಲ ಯಾವ ರಾತ್ರಿಯೂ ಇನ್ನೊಂದು ರಾತ್ರಿಯಂತಿಲ್ಲ

ಚಾಮುಂಡಿ ಬೆಟ್ಟದಲ್ಲಿ ವಿದಗ್ಧ ಮನಸ್ಸು ಅರಳಿದೆ ಪುರಂದರ ವಿಠಲನ ಹಾಡಿಗೆ. ಕರಗಿದೆ ಸಿಡುಬು ಕಲೆಯ ಪುಷ್ಪಯ್ಯನ ಕಂಠಕ್ಕೆ ಮಹಾದುಃಖದ ಗೋತ್ರಯಾನದಲ್ಲಿ ದೇವಿಸ್ತೋತ್ರ ಸ್ಮೃತಿ ವಿಸ್ಮೃತಿಯ ಜುಗಲ್ಬಂದಿಗೆ ಸಮಾಧಾನ ಹಿಡಿಯಷ್ಟು ಪ್ರೇಮದ ಮಹಾಧನ.

ಬದುಕಿನ ಕುರುಕ್ಷೇತ್ರದಲ್ಲಿ ನಿಂತಿಲ್ಲ ಅಗ್ನಿಪೂಜೆ ಮೃತ್ಯುಪೂಜೆ ತೆಂಗಿನ ತೋಪುಗಳಲ್ಲಿ ಇಣುಕುವ ಚಂದ್ರಬಿಂಬ ಅಂತರ್ಮುಖಿ ಗುಹೆಗಳಲ್ಲಿ ಸಣ್ಣಗೆ ಉರಿವ ಮಿಣುಕು ದೀಪದ ಬೆಳಕು ಪಕ್ಕದಲ್ಲೆ ಭೋರ್ಗರೆವ ಕಡಲು.

• ಊರ್ವಶಿ ಗೀತ ನಾಟಕ (ಅಯ್ಯಪ್ಪ ಪಣಿಕ್ಕರರ ಕೃತಿಗಳು, ಅನುವಾದ : ಸಿ.ರಾಘವನ್, ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ)

AvithaKavithe Poetry Column by Kannada Poet writer Dr Vikram Visaji

ಕೈಬರಹದೊಂದಿಗೆ ಡಾ. ವಿಕ್ರಮ ವಿಸಾಜಿ

ಕವಿತೆ ಒಂದು ಸ್ಪಂದನೆ. ಅನುಭವಗಳೊಂದಿಗೆ, ಲೋಕದೊಂದಿಗೆ, ಜನರೊಂದಿಗೆ ಅಥವಾ ಎಷ್ಟೋ ಸಲ ನನ್ನೊಂದಿಗಿನ ಸ್ಪಂದನೆ. ಕವಿತೆಯಲ್ಲಿ ಮಾತ್ರ ಸಾಧ್ಯವಾಗುವ ಗುಟ್ಟಿನ ಅನಾವರಣ. ಇಂಥ ಗುಟ್ಟಿನ ಜೊತೆ ನಡೆಸುವ ಸರಸ. ನಿಗೂಢವಾದ ಸೌಂದರ್ಯದ ಹುಡುಕಾಟ. ದುಃಖಗಳ ಜೊತೆಗಿನ ಏಕಾಂತದ ಪಯಣ. ಅಥವಾ ಅವ್ಯಕ್ತ ಸುಖಗಳ ತಪ್ತತೆ. ಅಥವಾ ಪುರಾಣಗಳ ಬೆನ್ನು ಹತ್ತಿ ಆದಿಮ ಕಾಲಕ್ಕೆ ಪಯಣ ಹೊರಡುವುದು. ಕವಿತೆಯಲ್ಲಿ ಇವೆಲ್ಲ ದುಸ್ಸಾಹಸಗಳನ್ನು ಮಾಡಿರುವೆ. ಕವಿತೆ ಎಂದರೆ ಏನೆಂದು ಹೇಳುವುದು? ಎಲ್ಲವೂ ಒಂದಿಲ್ಲೊಂದು ಬಗೆಯಲ್ಲಿ ಕಲೆತು ಇನ್ನೇನೊ ಆಗಿ ರೂಪುಗೊಳ್ಳುತ್ತದೆ. ಒಮ್ಮೆ ವಾಸ್ತವಗಳಲ್ಲಿ, ಇನ್ನೊಮ್ಮೆ ಕನಸುಗಳಲ್ಲಿ, ಮಗದೊಮ್ಮೆ ಕಲ್ಪನೆಗಳಲ್ಲಿ ಎಲ್ಲೆಂದರಲ್ಲಿ ತಿರುಗುವ ಅರೆ ಎಚ್ಚರದ ಅರೆ ನಿದ್ದೆಯ ಪಯಣವಿದು. ಭಾಷೆಯ, ಲಯದ, ನಾದದ ಜೊತೆಯಲ್ಲಿ ಹೆಜ್ಜೆ ಹಾಕಿ ಅದರ ಜೀವಂತಿಕೆಯನ್ನು ತುಂಬಿಕೊಳ್ಳುವ ತವಕ. ಇದೆಲ್ಲವೂ ಇಷ್ಟವಾಗುವ ಸಂಗತಿ. ಇದುವೇ ಕಾವ್ಯ ಅಥವಾ ಇದುವೇ ಜೀವನ ಎನಿಸುತ್ತದೆ. ಅನುಭವದ ವಿವಿಧ ಸ್ತರಗಳನ್ನು ದಾಟುತ್ತ ಹೋದಂತೆ ಅದೀಗ ತನಗೆ ತಾನೇ ಎಲ್ಲಿಗೋ ಒಯ್ದು ನಿಲ್ಲಿಸುವುದು. ಹಾಗೆ ನಿಲ್ಲಿಸುವ ತಾಣ ಯಾವುದು, ಎಂತು, ಏನದು? ಏನೊಂದೂ ಗೊತ್ತಾಗದ ಸ್ಥಿತಿಯದು.

ಇನ್ನು, ನಾನು ಕವಿತೆಗಳನ್ನು ಅನುವಾದಿಸಿದ್ದು ತುಂಬ ಕಡಿಮೆ. ಕೆಲ ಗ್ರೀಕ್ ಕವಿತೆಗಳನ್ನು ಡಾ. ವಿಜಯಾ ಗುತ್ತಲ್ ಅವರ ಮಾರ್ಗದರ್ಶನದಲ್ಲಿ ಅನುವಾದಿಸಿದ್ದೆ. ಇನ್ನೊಂದು ಅಪರಿಚಿತ ಲೋಕದೊಂದಿಗೆ ತಿಂಗಳುಗಟ್ಟಲೆ ಸಂವಾದಿಸಿದ ಖುಶಿ. ಹೊಸ ಸಂಸ್ಕೃತಿ, ಹೊಸ ಮಾತು, ಹೊಸ ಪುರಾಣದಿಂದ ಕಲಿಯಲಿಕ್ಕೆ ಸಾಧ್ಯವಾಯಿತು. ಇದೆಲ್ಲ ಕಾವ್ಯದ ವಿಸ್ಮಯವನ್ನು ಇನ್ನಷ್ಟು ಮನದಟ್ಟ ಮಾಡಿತು.

*

ಸಮಗಾರ ಹರಳಯ್ಯ

ಸೇಡಂ ರಸ್ತೆಯ ತಿರುವಿನಲ್ಲಿ ಕುಳಿತಿರುವರು ಸಮಗಾರ ಹರಳಯ್ಯ ಹರಕು ಛತ್ರಿ ಅಡ್ಡ ಹಿಡಿದು ಉರಿವ ಬಿಸಿಲು ಚಾಚಿದೆ ತನ್ನ ಕೊರಳು ಹರಳಯ್ಯನವರ ಮೇಲೊಂದಿಷ್ಟು ನೆರಳು ನೆರಳಿಗೂ ಹೊಂಚು ಹಾಕುವ ಬಿಸಿಲ ಬೆರಳು.

ಉಳಿ, ರೆಂಪಿಗಿ, ಕೊಡತಿ, ಮಸಗಲ್ಲು, ಚಿಮಟಗಿ ಸಂದಾನ, ರೆಬಿಟ್ಟು, ಸುಲೇಚನ, ದಾರ, ಸೂಜಿ, ಮಂತಣಿ, ಪಾಲಿಶ್ ಬಣ್ಣ, ಕಟ್ಟಿಗೆ ಮಣಿ ಹರಳಯ್ಯನವರ ಸಕಲ ಸಂಪತ್ತು. ಕಿತ್ತು ತಿನ್ನುವ ಬಡತನಕ್ಕೆ ಸವಾಲೊಡ್ಡಿದೆ ಮುರುಕು ಪೆಟ್ಟಿಗೆ ಅಂಟು ಹಾಕಿ ಎಡ ಬಲಕ್ಕೆ ಮೇಲೆ ಕೆಳಕ್ಕೆ ಗುದ್ದಿದರೆ ಬಾಯಿ ಮುಚ್ಚುವ ಅಂಚು. ಉಂಗುಟ ಕಿತ್ತಿ, ಪನ್ನಿ ಕಡಿದು ಮುಂಭಾಗ ಹಿಂಭಾಗ ತೆರೆದರೆ ಬಾಯಿ, ಎಲ್ಲದಕ್ಕೂ ಉಂಟು ಅದರದೇ ಆದ ಹಕೀಕತ್ತು ಮತ್ತು ಇಲಾಜು. ಹಿಮ್ಮಡಿಗೆ ನಾಲ್ ಹಾಕಿ ರೆಬಿಟ್ಟು ಬಡಿದರೆ ಕಾಣಿಸಬಹುದು ಇರುವುದಕ್ಕಿಂತಲೂ ಕೊಂಚ ಎತ್ತರ ಧೂಳು ಕೊಡವಿ ಮೇಲಿಷ್ಟು ಕರಿಬಣ್ಣ ತಿಕ್ಕಿದರೆ ಬಿಸಿಲಿಗೆ ಸೆಡ್ಡು ಹೊಡೆವ ಹೊಳಪು.

ಹರಳಯ್ಯನವರು ಪಾದ ನೋಡಿ ಅಂಗೈಯೊಡ್ಡುವರು ಅವರಿವರ ಪಾದವೇರಿದ ಮೆಟ್ಟು ಇವರ ತೊಡೆ ಮೇಲೆ ಜಳಕಕ್ಕೆ ತಂದಿಟ್ಟ ಕೂಸಿನಂತೆ ಅತ್ತಿತ್ತ ಹೊರಳಾಡುವುದು ಕೈಗೆ ಬಂದ ಕೆರದ ಧೂಳು ಇವರ ವಿಭೂತಿ ಮೈಬೆವರು ಮಂತಣಿಯ ನೀರಲ್ಲಿ ಬೆರೆತು ಪೂಜೆಗೆ ಸಲ್ಲುವ ಪವಿತ್ರ ಜಲ. ಚಪ್ಪಲಿ ಮತ್ತು ಕಣ್ಣಿನ ನಡುವೆ ಸೃಷ್ಟಿಯಾಗಿದೆ ಧ್ಯಾನ ಧೂಳು ತುಂಬಿ, ಮೈಹರಿದು, ತೊಡೆ ಮೇಲೆ ಹೊರಳಾಡಿದ್ದ ಚಪ್ಪಲಿಯೆ ಹರಳಯ್ಯನವರ ಅಂಗೈಯೊಳಗಿನ ಇಷ್ಟಲಿಂಗ. ಮಳೆ ಗಾಳಿ ಬಿಸಿಲು ಯಾವುದೂ ತೊಡಕಲ್ಲ ಪೂಜೆಗೆ ಪೂಜೆ ಎಂಬುದು ಏನೆಂದು ಅರಿತವರಿಗೆ.

*

AvithaKavithe Poetry Column by Kannada Poet writer Dr Vikram Visaji

ವಿಕ್ರಮರ ಕೃತಿಗಳು

ಚಪ್ಪಲಿಗಳು

ಅಂಗಡಿಯ ಚಪ್ಪಲಿಗಳಿಗೆ ಥರಾವರಿ ಕನಸು ಹೆಣ್ಣು ಪಾದ, ಗಂಡು ಪಾದ, ತೃತೀಯ ಪಾದ, ಮಗುವಿನ ಪಾದ. ಯಾರ ಪಾದಕ್ಕೆ ಮೈ ಚಾಚುವುದೊ ಪುಟ್ಟ ಪುಟ್ಟ ಹೆಜ್ಜೆಗೆ ಜೊತೆಯಾಗುವುದೊ ಜಾರಿಸಿ, ಉರುಳಿಸಿ, ಎಬ್ಬಿಸಿ ಮುನ್ನಡೆವುದೊ ಯಾರ ಜೊತೆ ಎಷ್ಟು ದಿನದ ಸಂಸಾರವೊ ಯಾರ ಜಗಳಕ್ಕೆ ಮತ್ಯಾರ ಕೈಯೊಳಗಿನ ಅಸ್ತ್ರವೊ ಯಾರ ಜೊತೆ ಹೊರಟು ಇನ್ಯಾರ ಜೊತೆ ಪಲಾಯನವೊ ಬದುಕು ವಿಚಿತ್ರ ಗೊಂದಲಗಳ ಜೇಡ ಜಾಲ.

ಆಹಾ! ಕಾರಿನ ಮೆತ್ತನೆ ಹಾಸಿಗೆ ಓಹೊ! ಕಾಡು ಮುಳ್ಳಿನ ತಿವಿತ ರಸ್ತೆಯ ಗಲೀಜು, ಧೂಳಿನ ಮುಸುಕು ಹೊಲದ ಬದುವಿನ ಕೆಸರ ಆಸರೆ ಹಸೆಮಣೆ ಏರಿದವಳ ಹೊಸ ಗೆಳತಿ

ಚೇಳಿಗೆ ರಭಸದ ಪೆಟ್ಟು ಕುಡಿದ ಕಾಲಿಗೆ ಕಣ್ಣಾಮುಚ್ಚಾಲೆ ಒಂದು ಎರಡಾಗಿ ಎರಡು ನಾಕಾಗಿ ಮುಗಿಯದ ಮೋಜು. ಇಳಿ ಪಾದಕೆ ಮುಪ್ಪು ಭಾರಗೊಂಡ ನಡೆಗೆ ದೀರ್ಘ ಸ್ವರ.

ತೀರಿಕೊಂಡವರ ನೆನಪು ಹೊತ್ತು ಮೂಲೆ ಸೇರಿದ ಚಪ್ಪಲಿಗೆ ನಿರಂತರ ನೆನಪಿನ ನಡಿಗೆ. ಚಪ್ಪಲಿ ಸಮೇತ ಬಾವಿಯಲ್ಲಿ ಬಿದ್ದವರ ಜೊತೆ ಮೊದಲ ಸಲ ಈಜು ಕಲಿತ ನೆನಪು. ಮದುವೆಗೂ ಸಾಕ್ಷಿ, ಮಸಣಕೂ ಸಾಕ್ಷಿ ನಡೆದಷ್ಟೂ ತೆರೆದುಕೊಳ್ಳುವ ಕಥಾಹಂದರ.

ಯಾರೊ ತಲೆಮೇಲೆ ಹೊತ್ತ ನೆನಪು ಇನ್ಯಾರೊ ಸಿಂಹಾಸನದ ಮೇಲಿಟ್ಟ ನೆನಪು ಯಾರದೊ ತೊಡೆ ಚರ್ಮ ಇನ್ಯಾರದೊ ಶಿರಸ್ತ್ರಾಣ ಚರಿತ್ರೆಯ ಸಿಕ್ಕುಗಳಲ್ಲಿ ಅಪ್ಪಚ್ಚಿ.

ಈಗೀಗ ದಿನಾ ಹುಟ್ಟುವ ಗಲಭೆಗಳಲ್ಲಿ ಎದೆಸೀಳುವ ಗೋಲಿಬಾರುಗಳಲ್ಲಿ ಅಡ್ಡಾದಿಡ್ಡಿ ಛಿದ್ರವಾಗಿ ಬೀಳುವ ಅವಕಾಶ ಮೈಮೇಲೊಂದಿಷ್ಟು ರಕ್ತದ ಕಲೆ.

ಈಗೀಗಂತೂ, ಚಪ್ಪಲಿಗಳಿಗೆ ಭಯ ಅಂಗಡಿ ಬಿಟ್ಟು ಹೊರಬರಲು. ಆದರೂ ಕಾಯುವವು ಯಾರದರೂ ಈ ಇಂಥ ಕಾಲದಲ್ಲೂ ಧರಿಸಿ ಹೊರಬರುವರೆಂದು.

*

AvithaKavithe Poetry Column by Kannada Poet writer Dr Vikram Visaji

ವಿಕ್ರಮರ ಕೃತಿಗಳು

ಕವಿ ಗೆಳೆಯನ ಕುರಿತ ಶೋಕಗೀತೆ

ಆಸ್ಪತ್ರೆಯ ಹಾಸಿಗೆಯಲ್ಲಿ ಒಂದೇ ಮೊರೆತ ಅನವರತ; ‘ನಾನು ಬದುಕಬೇಕು, ಉಳಿಸಿ ನಾನು ಬದುಕಬೇಕು’. ಸಾವ ಸನ್ನಿಧಿಯಲ್ಲಿ ಕಾಲು ತಿಕ್ಕಿ ಅಳುವ ಮಗು. ತಾನೇ ಸೃಷ್ಟಿಸಿದ ನೆತ್ತರ ನವಿಲ ಆಕ್ರಂದನ. ಹನುಮಂತನಿಗೆ ಸಿಕ್ಕಿದ್ದು ಸಂಜೀವಿನಿಯಲ್ಲ ವಿಷ. ಕಡಲ ದಂಡೆಯ ಉಬ್ಬರದಲ್ಲಿ ಬದುಕು ಮೀರಲಾರದ ಸುಳಿ. ಉಸಿರಾಟದ ಏರುಪೇರಿಗೆ ತಾಳತಪ್ಪಿವೆ ನದಿಯ ನೀರ ಅಲೆ. ಬದುಕು ಎರಡಲಗಿನ ಗರಗಸ ಒಮ್ಮೆ ಬೆನ್ನ ಹುರಿ ಕೊಯ್ದರೆ, ಇನ್ನೊಮ್ಮೆ ಎದೆ ಸೀಳಿದೆ. ಸುಮ್ಮನಿರಲಾರದವನೆದುರು ಮತ್ತೊಂದು ದಾಳ. ಕಪ್ಪು ರೂಪಕಗಳ ಚಕ್ರವರ್ತಿ ಧರೆಗುರುಳಿ ಮಣ್ಣುಸೇರಿದೆ ಕಾವ್ಯದ ಅಸಲೀ ಪ್ರತಿಮೆ.

ಬದುಕೆಂದರೆ ಕೇರಿ ಬದುಕೆಂದರೆ ಅವಮಾನ ಬದುಕೆಂದರೆ ಕಣ್ಣೀರು ಬದುಕೆಂದರೆ ಚಡಪಡಿಕೆ ಬದುಕೆಂದರೆ ಪ್ರೇಮ ಬದುಕೆಂದರೆ ಕಾಮ ಬದುಕೆಂದರೆ ಸಾವು ನಾಗರಘಟ್ಟದ ತೆಂಗಿನ ತೋಪಿನಲ್ಲಿ ಕಂಡ ನವಿಲ ಹೊತ್ತು ತಂದಿದ್ದಾನೆ ಹೊಲಗೇರಿಗೆ ‘ಹೊಲಗೇರಿ ಹಾದಿಯಲಿ ಸೋಬಾನೆ ದೀಪಗಳು’. ಕೊಚ್ಚೆಗುಂಡಿಯಲ್ಲಿ ಹೊಳೆವ ನಕ್ಷತ್ರಗಳು ಬದುಕು ದಿಕ್ಕುಗಾಣದ ಅವ್ವನ ಹರಿದ ಸೀರೆ ಗುಡಿಸಲಲ್ಲಿ ನೇತುಬಿದ್ದ ಅಪ್ಪನ ಹೆಣ ಕೀಲೆಣ್ಣೆ ಮಾರುವವನ ಬದುಕಿಗೆ ಜಂಗು. ಕೋರ್ಟು ಕಚೇರಿಗಳ ಅಲೆದಾಟ ಇಲ್ಲ ಸಾಧ್ಯವೇ ಇಲ್ಲ ಎನಿಸಿದಾಗ ಒಪ್ಪಿಕೊಂಡ ಸೋಲು.

ಏನೂ ಅರಿಯದ ಕಂದನ ಕಂಗಳಲ್ಲಿ ಕಣ್ಣೀರು ‘ಜಗದ ಸಂತೆಯಲಿ ಕಣ್ಣೀರು ಮಾರುವ ಕೆಲಸ’ ಬದುಕೆಂದರೆ ಬಡಿದಾಟ, ಹೇಲುಚ್ಛೆ, ತೆಂಗಿನ ತೋಪಿನಲ್ಲಿ ಕಂಡ ಬೆಳದಿಂಗಳು, ತುಂಡು ಭೂಮಿಯಲಿ ಬೆಳೆದು ನಿಂತ ಅಂಗುಲಂಗುಲ ಸಜ್ಜೆ. ಹೊಲದೊಳಗೆ ಬೆನ್ನು ಬಾಗಿಸಿ ದುಡಿವ ಅವ್ವ. ಪಕ್ಕದಲ್ಲೆ ಒಣಗಿದ ಕೆರೆಯಲ್ಲಿ ಮೈಸೆಟೆಸಿ ಬಿದ್ದಿದೆ ಏಡಿ.

ಎದೆಗೆ ಬಿದ್ದ ಅಕ್ಷರದಲ್ಲಿ ಬೆಳಕು ಕತ್ತಲೆಗಳ ನಡುವಿನ ಅಂತರದ ಹುಡುಕಾಟ. ಅಸ್ಪೃಶ್ಯನೆಂಬ ಅರಿವಿನಲ್ಲಿ ಮಾರ್ದವ ಕನಸು ‘ಅಳುವೇ ಅಕ್ಷರ ಬಾವಲಿಯಾಗಿ ಹುಡುಕ ಹೊರಟಿದೆ ಹೊಸ ವೃಕ್ಷ’ ಕಾವ್ಯವೆಂದರೆ ನೋವಿನ ಸುರಂಗಕ್ಕೆ ಬಿಟ್ಟ ಬಾಣ. ಕುಡಿದಾಗ ಬೇಂದ್ರೆ, ಎಚ್ಚರಾದಾಗ ಗದ್ದರ್ ಹಗಲು ಇರುಳು ಕಾವ್ಯದ ಬೆವರು. ಬೆಂಕಿ ಕೊಳಲಿಗೆ ತುಟಿಯಿಟ್ಟು ನುಡಿಸಿದ ಉನ್ಮತ್ತ ರಾಗದಲ್ಲಿ ಮಿಥುನಶಿಲ್ಪದ ಮಾಟ ಸುಡುವ ಕಣ್ಣೀರು, ಅವಮಾನದ ಕತ್ತಲು.

‘ಅಗ್ನಿಮಾಂಸದ ಕುಲುಮೆ’ಯಲ್ಲಿ ಬೆಂದರಳಿದೆ ಇದು ಈ ಲೋಕದ್ದಲ್ಲದ ನುಡಿ ಇದು ಈ ಲೋಕದ್ದಲ್ಲದ ಅನುಭವ ಇದು ಈ ಲೋಕದ್ದಲ್ಲದ ಗಾಯ ಇದು ಈ ಲೋಕದ್ದಲ್ಲದ ಬೆಳಕು – ಎಂದು ಗಲಿಬಿಲಿಗೊಂಡಾಗ ಇದು ಇಲ್ಲಿಯದೇ ಈ ಹಟ್ಟಿಯದೇ ನನ್ನ ತೊಡೆಯ ಚರ್ಮ ಸುಲಿದು ಮಾಡಿದ ಎಕ್ಕಡದ ಕಾವ್ಯವೆಂದು ಹೀ ಹೀ ಹೀ ಹೀ ಹೀ ನಗುವಿನ ಅಲೆ ಅಪ್ಪನ ಗೋಣಿಗೆ ಬಿಗಿದುಕೊಂಡ ಹಗ್ಗಕ್ಕೆ ರಕ್ತದ ಕಲೆೆ ಅವುಚಿ ಕಚ್ಚಿಕೊಂಡ ನಾಲಿಗೆಯಲ್ಲಿ ಇರುವೆ ಸಾಲು. ತಮ್ಮನ ಹೊಟ್ಟೆಯೊಳಗೆ ನುಗ್ಗಿದ ಚಾಕುವಿಗೆ ಮೊದಲ ಸಾವಿನ ಸಂಭೋಗ. ಕಟ್ಟಿಕೊಂಡ ಬದುಕಿನಲ್ಲಿ ನಿಲ್ಲದ ಹಾವು ಏಣಿಯ ಆಟ.

ಬದುಕ ತಿರುಗುಣಿಯಲ್ಲಿ ಶೈಲಜೆಯ ಸಾಂತ್ವನ ಕಣ್ಣು ತೆರೆದಾಗ ಪ್ರತಿನಿತ್ಯ ಬಡಿದಾಟ ಕುಡಿತ, ರಕ್ತ, ಸಾವು, ಸಂಕಟ, ಚೀರಾಟ ಕನಸ ತುಂಬಾ ಗಾಯಗೊಂಡ ನವಿಲು ಬದುಕು ಬದುಕಲೇಬೇಕಾದ ಸುಂದರ ನರಕ. ಕಲಾಸಿಪಾಳ್ಯದ ಗುಜುರಿಗೆ ಬಿದ್ದ ಬಸ್ಸುಗಳಲ್ಲಿ ಹುಳು ಹತ್ತಿದ ಕಾಮದ ನಾಕನರಕ ಇದು ನೋಡು ನಿಜದ ಇಂಡಿಯಾ ನನ್ನ ಕಾವ್ಯ ತೊಟ್ಟಿಲು, ನನ್ನ ಮದ್ಯದ ಬಟ್ಟಲು, ನನ್ನ ಕಾವ್ಯ ಗರ್ಭಕಟ್ಟುವ ತಾಣ. ಬಸವನಗುಡಿಯ ಬಂಡೆಗಲ್ಲಿನ ಮೇಲೆ ಕುಳಿತು ‘ಹುದುಗಲಾರದ ದುಃಖ ಹುದುಗಿರಿಸಿ ಎದೆಯೊಳಗೆ’ ಹಾಡಿದ ಹಾಡೊಳಗೆ ಉರಿವ ತಾಜಮಹಲು.

ಬಂದೇನವಾಜರ ಅಂಗಳದಲ್ಲಿ ಸಣ್ಣಗೆ ಮೈನಡುಕ ತನಗೇನೊ ಆಗಿದೆಯೆಂದು ಒದ್ದಾಟ ಬದುಕಿನ ಬೂದಿಯಿಂದ ರಂಗೋಲಿ ಚಿತ್ರ ಉರಿಯ ರೂಪಕಗಳಲ್ಲಿ ಉರಿದ ಬದುಕು.

‘ಗೋವು ತಿಂದು ಗೋವಿನಂತಾದವನ’ ಕಂಗಳಲ್ಲಿ ಹುಲಿಯ ನೆರಳು ಹೊಸ ಸುದ್ದಿಗಾಗಿ ಕಾದಿರುವನು ಬಂದ ಸುದ್ದಿಯಲಿ ಪ್ರಾಣ ಕರಗಿ ಒಳಗಿನ ದನಿ ಅಂಬಾ ಎಂದು ಹಲುಬಿ ಅವ್ವನ ಹರಿದ ಸೀರೆಯ ಸೆರಗಿನಲ್ಲಿ ಶಾಶ್ವತ ನಿದ್ದೆಗೆ ಜಾರಿದೆ ಗುಂಗುರು ಕೂದಲಿನ ಮಗು.

(ಕವಿ, ಗೆಳೆಯ ಎನ್.ಕೆ.ಹನುಮಂತಯ್ಯನ ಕುರಿತು ಬರೆದದ್ದು)

*

ಶಬ್ದೋಪಾಸನೆ

ಲಯವು ನೀನೆ | ಆಲಯವು ನೀನೆ ಪದವು ನೀನೆ | ಪದಾರ್ಥವು ನೀನೆ ಶೌರ್ಯವು ನೀನೆ | ಶೋಕವು ನೀನೆ ಶಬ್ದವು ನೀನೆ | ನಿಶಃಬ್ದವು ನೀನೆ

ತಮಂಧವು ನೀನೆ | ಜೋತಿಯು ನೀನೆ ಬಿಂದುವು ನೀನೆ | ಗರ್ಭವು ನೀನೆ ಪ್ರೇಮವು ನೀನೆ | ಶಾಂತಿಯು ನೀನೆ ಚಿತ್ರವು ನೀನೆ | ವಿಚಿತ್ರವು ನೀನೆ

ಕಾಮವು ನೀನೆ | ವೈರಾಗ್ಯವು ನೀನೆ ಪ್ರಶ್ನೆಯು ನೀನೆ | ದಾರಿಯು ನೀನೆ ಅಹಂಕಾರವು ನೀನೆ | ನಿರಹಂಕಾರವು ನೀನೆ ಪ್ರಾಣವು ನೀನೆ | ಪ್ರಮಾಣವು ನೀನೆ

ಸ್ವಧರ್ಮವು ನೀನೆ | ಪರಧರ್ಮವು ನೀನೆ ಭರತನ ಭೋಗವು ನೀನೆ | ಬಾಹುಬಲಿಯ ಸನ್ಯಾಸವು ನೀನೆ ಆದಿನಾಥನ ವೈಭವ ದೃಶ್ಯವು ನೀನೆ | ನೀಲಾಂಜನೆಯ ಅದೃಶ್ಯವು ನೀನೆ ತೊಡೆತಟ್ಟಿದ ಭೀಮನು ನೀನೆ | ತೊಡೆಭಂಗಿತ ಸುಯೋಧನ ನೀನೆ

ಸೀತಾಗ್ನಿಯು ನೀನೆ | ದ್ರೌಪದಿಯ ಶ್ರೀಮುಡಿ ನೀನೆ ಶಾಕುಂತಲೆಯ ಸ್ಮೃತಿಯು ನೀನೆ | ದುಷ್ಯಂತನ ವಿಸ್ಮೃತಿಯು ನೀನೆ ಅಕ್ಕನ ಪ್ರೇಮದ ಸಿಂಚನ ನೀನೆ | ಚೆನ್ನನ ಪ್ರೇಮದ ಕಂಪನ ನೀನೆ ಬಸವನ ಭಕ್ತಿಯು ನೀನೆ | ಅಲ್ಲಮನ ವಿರಕ್ತಿಯು ನೀನೆ

ಚಂದ್ರಮತಿಯ ಪ್ರಲಾಪವು ನೀನೆ | ಮನೋರಮೆಯ ಸರಸವು ನೀನೆ ಕವಿಶೈಲದ ಇಂಚರ ನೀನೆ | ಸಾಧನಕೇರಿಯ ಮಳೆಯೂ ನೀನೆ ಪುಟ್ಟ ವಿಧವೆಯ ದುಗುಡವು ನೀನೆ | ಜಡೆಯಾಚೆಗಿನ ಮುಖದ ಮೌನವು ನೀನೆ ನೀರೊಳು ಮಿಡಿವ ವೀಣೆಯು ನೀನೆ | ಕೇರಿಯಲಿ ಮೊಳಗುವ ಹಲಗೆಯು ನೀನೆ

ಕಾಡಿಗೆ ಹೋದ ಜೋಗಿಯು ನೀನೆ | ಜಾತ್ರೆಗೆ ಬಂದ ಶಿವನು ನೀನೆ ಮೋಹನ ಮುರುಳಿಯ ಗಾನವು ನೀನೆ | ಆಹಾ! ಪುರುಷಾಕಾರವು ನೀನೆ ಕುಸುಮಳ ಕಂದನ ಅಳುವು ನೀನೆ | ಹೊಲೆ ಮಾದಿಗರ ಹಾಡೂ ನೀನೆ ಅರಿವಿನ ಸಾವಿರ ದಾರಿಯು ನೀನೆ | ಕೊನೆಮೊದಲಿಲ್ಲದ ಗುರಿಯು ನೀನೆ

*

AvithaKavithe Vikram Visaji

ವಿಕ್ರಮರ ಕೃತಿಗಳು

ಪರಿಚಯ : ಡಾ. ವಿಕ್ರಮ ವಿಸಾಜಿ ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರು. ಮೂಲ ಬೀದರ ಜಿಲ್ಲೆಯ ಭಾಲ್ಕಿ. ಮೊದಲ ಕವನ ಸಂಕಲನ ಹೈಸ್ಕೂಲಿನಲ್ಲಿದ್ದಾಗಲೇ ಪ್ರಕಟ. ಕಂಬಾರರ ಕಾವ್ಯದ ಕುರಿತ ಮಹಾಪ್ರಬಂಧಕ್ಕೆ ಪಿಎಚ್‌.ಡಿ. ಪದವಿ. ಮತ್ತೆ ಬಂತು ಶ್ರಾವಣ, ರಸಂಗಂಗಾಧರ, ನಾದಗಳು ನುಡಿಯಾಗಲೇ, ವಿಕ್ರಮ ವಿಸಾಜಿ ಕವಿತೆಗಳು, ರಕ್ತವಿಲಾಪ, ಬಿಸಿಲ ಕಾಡಿನ ಹಣ್ಣು, ಪಠ್ಯದ ಭವಾವಳಿ, ಗೂಡು ಕಟ್ಟುವ ಚಿತ್ರ, ತಮಾಷಾ, ಸಿಮೊನ್ ದ ಬೋವಾ ಪ್ರಕಟಿತ ಕೃತಿಗಳು.

ಇದನ್ನೂ ಓದಿ : Poetry : ಅವಿತಕವಿತೆ ; ‘ನೆಲೆ ಇಲ್ಲದ ಊರಲ್ಲಿ ನೆಲೆ ಹುಡುಕುತ ಹೊರಟೇನು ತಂಟೆ-ತಕರಾರುಗಳನ್ನು ಎಂಟಾಣೆಗೆ ಮಾರೇನು’ 

Published On - 7:42 am, Sun, 28 November 21

ತಾಜಾ ಸುದ್ದಿ
ಉತ್ತರ ಕನ್ನಡ: ಗುಡ್ಡ ಕುಸಿತದಲ್ಲಿ ಸಂಬಂಧಿಕರನ್ನ ಕಳೆದುಕೊಂಡು ಮಹಿಳೆಯ ಗೋಳಾಟ
ಉತ್ತರ ಕನ್ನಡ: ಗುಡ್ಡ ಕುಸಿತದಲ್ಲಿ ಸಂಬಂಧಿಕರನ್ನ ಕಳೆದುಕೊಂಡು ಮಹಿಳೆಯ ಗೋಳಾಟ
ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಮಿಲಿಟರಿ: ಮಣ್ಣು ತೆರವು ಕಾರ್ಯಾಚರಣೆ ಶುರು
ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಮಿಲಿಟರಿ: ಮಣ್ಣು ತೆರವು ಕಾರ್ಯಾಚರಣೆ ಶುರು
ನೀರಿನಲ್ಲಿ ಈಜಿಕೊಂಡು ಹೋಗಿ ಗ್ರಾಮಗಳಿಗೆ ಬೆಳಕು ನೀಡಿದ ಪವರ್ ಮ್ಯಾನ್
ನೀರಿನಲ್ಲಿ ಈಜಿಕೊಂಡು ಹೋಗಿ ಗ್ರಾಮಗಳಿಗೆ ಬೆಳಕು ನೀಡಿದ ಪವರ್ ಮ್ಯಾನ್
ನಟಿಯರ ಕ್ರಿಕೆಟ್: ರೋಷಾವೇಷದಲ್ಲಿ ಬ್ಯಾಟ್ ಬೀಸಿದ ಸಪ್ತಮಿ ಗೌಡ
ನಟಿಯರ ಕ್ರಿಕೆಟ್: ರೋಷಾವೇಷದಲ್ಲಿ ಬ್ಯಾಟ್ ಬೀಸಿದ ಸಪ್ತಮಿ ಗೌಡ
ಕನ್ನಡಿಗರ ಉದ್ಯೋಗ ಮೀಸಲಾತಿಗೆ ವಿರೋಧಿಸಿದ ಕಿರಣ್ ಮಜುಂದಾರ್ ಸಂಸ್ಥೆಗೆ ಮಸಿ
ಕನ್ನಡಿಗರ ಉದ್ಯೋಗ ಮೀಸಲಾತಿಗೆ ವಿರೋಧಿಸಿದ ಕಿರಣ್ ಮಜುಂದಾರ್ ಸಂಸ್ಥೆಗೆ ಮಸಿ
ತಮಿಳುನಾಡಿನೊಂದಿಗಿನ ನೀರು ಸಂಘರ್ಷಕ್ಕೆ 1 ವರ್ಷ ವಿರಾಮ: ಕುಮಾರಸ್ವಾಮಿ
ತಮಿಳುನಾಡಿನೊಂದಿಗಿನ ನೀರು ಸಂಘರ್ಷಕ್ಕೆ 1 ವರ್ಷ ವಿರಾಮ: ಕುಮಾರಸ್ವಾಮಿ
ಮಿಲಿಟರಿ ಬರುವ ಕಾಲ ಬರುತ್ತೆ, ಕರೆದುಕೊಂಡು ಬರೋಣ: ಹೆಚ್​ಡಿಕೆ ಎಚ್ಚರಿಕೆ
ಮಿಲಿಟರಿ ಬರುವ ಕಾಲ ಬರುತ್ತೆ, ಕರೆದುಕೊಂಡು ಬರೋಣ: ಹೆಚ್​ಡಿಕೆ ಎಚ್ಚರಿಕೆ
ಪ್ರತಿ ಭಾನುವಾರ ಫ್ಯಾಮಿಲಿ ಬದಲು ಫ್ಯಾನ್ಸ್​ಗೆ ಸಮಯ ಮೀಸಲು: ಧ್ರುವ ಸರ್ಜಾ
ಪ್ರತಿ ಭಾನುವಾರ ಫ್ಯಾಮಿಲಿ ಬದಲು ಫ್ಯಾನ್ಸ್​ಗೆ ಸಮಯ ಮೀಸಲು: ಧ್ರುವ ಸರ್ಜಾ
ತಮಿಳುನಾಡಿನ ನೀರಿನ ದಾಹ ತಣಿಸಿದ ಕಾವೇರಿ, ಎಷ್ಟು ಹರಿಯುತ್ತಿದೆ ಎಂದು ನೋಡಿ
ತಮಿಳುನಾಡಿನ ನೀರಿನ ದಾಹ ತಣಿಸಿದ ಕಾವೇರಿ, ಎಷ್ಟು ಹರಿಯುತ್ತಿದೆ ಎಂದು ನೋಡಿ
ವಿಡಿಯೋ: ದರ್ಶನ್ ಪ್ರಕರಣದ ಬಗ್ಗೆ ಕೊನೆಗೂ ಮಾತನಾಡಿದ ನಟ ಧ್ರುವ ಸರ್ಜಾ
ವಿಡಿಯೋ: ದರ್ಶನ್ ಪ್ರಕರಣದ ಬಗ್ಗೆ ಕೊನೆಗೂ ಮಾತನಾಡಿದ ನಟ ಧ್ರುವ ಸರ್ಜಾ