Poetry : ಅವಿತಕವಿತೆ ; ‘ನೆಲೆ ಇಲ್ಲದ ಊರಲ್ಲಿ ನೆಲೆ ಹುಡುಕುತ ಹೊರಟೇನು ತಂಟೆ-ತಕರಾರುಗಳನ್ನು ಎಂಟಾಣೆಗೆ ಮಾರೇನು’

Poet : ‘ಯಾವ ಕಾವ್ಯ ಜನರ ಶ್ರಮದ ಬದುಕಿನ ಮಧ್ಯದಿಂದ ಮೂಡಿ ಬರುತ್ತದೆಯೋ ಆ ಕಾವ್ಯ ಹೆಚ್ಚು ದಿನ ಬಾಳುತ್ತದೆ ಮತ್ತು ಬದುಕನ್ನು ಒರೆಗಲ್ಲಿಗೆ ಹಚ್ಚುತ್ತದೆ. ಜೊತೆಗೆ ಬದುಕನ್ನು ತಿದ್ದುತ್ತದೆ, ತಿದ್ದಬೇಕು. ಇಂತಹ ಎಲ್ಲ ಆಶಯಗಳನ್ನು ಇಟ್ಟುಕೊಂಡು ನಾನು ಕವಿತೆಯನ್ನು ಬರೆಯತೊಡಗಿದೆ.’ ಡಾ. ಸದಾಶಿವ ದೊಡ್ಡಮನಿ

Poetry : ಅವಿತಕವಿತೆ ; ‘ನೆಲೆ ಇಲ್ಲದ ಊರಲ್ಲಿ ನೆಲೆ ಹುಡುಕುತ ಹೊರಟೇನು ತಂಟೆ-ತಕರಾರುಗಳನ್ನು ಎಂಟಾಣೆಗೆ ಮಾರೇನು’

Kannada Poetry : ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಕವಿ, ಪ್ರಾಧ್ಯಾಪಕ ಡಾ. ಸದಾಶಿವ ದೊಡ್ಡಮನಿ ಅವರ ಕವನ ಸಂಕಲನ ‘ಇರುವುದು ಒಂದೇ ರೊಟ್ಟಿ’ ಸದ್ಯದಲ್ಲೇ ಇಳಕಲ್ಲಿನಲ್ಲಿ ಬಿಡುಗಡೆಯಾಗಲಿದೆ. ಈ ಸಂದರ್ಭದಲ್ಲಿ ಅವರ ಕೆಲ ಕವಿತೆಗಳು ನಿಮ್ಮ ಓದಿಗೆ. 

*

ಈ ಹೊತ್ತಿನಲ್ಲಿ ಅನೇಕರು ಮುಕ್ತ ಛಂದಸ್ಸಿನಲ್ಲಿ ಬರೆಯುತ್ತಿರುವುದು ಸರಿಯಷ್ಟೆ. ಅದನ್ನು ಪಕ್ವ ಮಾಡಿಕೊಳ್ಳುವ ಮನಸ್ಥಿತಿ ಎಲ್ಲರಿಗೂ ದಕ್ಕುವುದಿಲ್ಲ. ಈ ದೃಷ್ಟಿಯಲ್ಲಿ ಕವಿ ಸದಾಶಿವ ಅವರ ಕವಿತೆಗಳು ಸರಳತೆಯಲ್ಲಿ ಜೀವ ಪಡೆದ ಸೂರ್ಯಕಾಂತಿ ಹೂಗಳಂತೆ, ಸೂರ್ಯನತ್ತ ಮುಖ ತಿರುಗಿಸಿ ನಳನಳಿಸುತ್ತಿವೆ. ಕವಿಗೆ ಸಹನೆಯೇ ತಾಯಿ. ಅದು ದಕ್ಕಿ ಬಿಟ್ಟರೆ ಬರವಣಿಗೆ ಗೆದ್ದಂತೆ. ಇದನ್ನು ದುಃಖದ ಮುಗುಳ್ನಗೆ ಎನ್ನಬಹುದು. ಕವಿತೆಗಳಲ್ಲಿ ತನ್ನನ್ನು ದುಃಖಿಸಿ, ನುಡಿದ ಈ ಕಾವ್ಯ ಒಂದು ಅನನ್ಯವಾದ ಅನುಭವವನ್ನು ಕೊಡುತ್ತದೆ.
ಸುಬ್ಬು ಹೊಲೆಯಾರ್, ಕವಿ

ಅವ್ವ ಕಹಿವುಂಡೂ ಬೇವಿನ ಮರದ ನೆರಳಾದ ಬಗೆಯನ್ನು, ಬೆಂಕಿ-ಬಿಸಿಲುಗಳ ಝಳದಲ್ಲಿ ಸುಟ್ಟುಕೊಂಡರೂ ಬೆಳದಿಂಗಳೇ ಆದ ಪರಿಯನ್ನು ಅನನ್ಯವಾಗಿ ಕಟ್ಟಿಕೊಡುವ ಡಾ. ಸದಾಶಿವ ದೊಡಮನಿಯವರ ಈ ‘ಇರುವುದು ಒಂದೇ ರೊಟ್ಟಿ’ ಎಂಬ ಸಂಕಲನದ ಉದ್ದಕ್ಕೂ ಹಸಿವು, ಅವಮಾನ, ಬಡತನದಂತಹ ವರ್ತಮಾನದ ತಲ್ಲಣಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಸದಾ ಹಸಿರಾದ ಆತ್ಮವಿಶ್ವಾಸ, ಆತ್ಮಗೌರವಗಳನ್ನು ಕಾಪಿಟ್ಟುಕೊಂಡೇ ಭವಿತವ್ಯದ ಬಗೆಗೆ ಭರವಸೆಯನ್ನು ಕಳೆದುಕೊಳ್ಳದೇ ಆತ್ಮವಿಶ್ವಾಸದ ಊರುಗೋಲಿಡಿದೇ ಸಾಗುವ ಛಲವಾದಿಗಳಾದ ಬಡವರ ಬದುಕಿನ ಶಕ್ತಿಯನ್ನು ಎತ್ತಿ ಹಿಡಿಯುವ ಸಾಲುಗಳನ್ನು ಈ ಸಂಕಲನ ಮತ್ತೆ ಮತ್ತೆ ಧ್ವನಿಸುತ್ತದೆ.
ಡಾ. ಟಿ. ಯಲ್ಲಪ್ಪ, ಕವಿ. 

*

ಪ್ರೇಮ ಭಿಕ್ಷೆ

ಏನು ಕೇಳಿದೆ ನೀನು
‘ಹಿಡಿ ಪ್ರೀತಿ’ಯೇ?
‘ಹಿಡಿ’ ಹಾಗಾದರೆ
ಹೃದಯ ಕಡಲಲ್ಲಿ ಹಾಕಿ
ಅದೇ ಪ್ರೀತಿ ಕಡಗೋಲಿಲೆ ಮಥಿ-ಮಥಿಸಿ
ಹಂಚು ಮನ-ಮನೆಗೆ

ಏನು ಕೇಳಿದೆ ನೀನು
‘ಹಿಡಿ ಪ್ರೀತಿ’ಯೇ?
ಹೃದಯ ತುಂಬಿ ತಂದಿರುವೆ
ಅಳೆಯದೇ ತೆಗೆದುಕೋ ಅದೇ ಉಣ್ಣು,
ಅದೇ ಉಣಿಸು ಮುಚ್ಚಿಡಬೇಡ
ಗೆದ್ದಲು ಹತ್ತುತ್ತದೆ
ಹಂಚು ಪರರಿಗೆ
ಅಳತೆ ಮಾಡದೆ

ಏನು ಕೇಳಿದೆ ನೀನು
‘ಹಿಡಿ ಪ್ರೀತಿ’ಯೇ
‘ಹಿಡಿ’ ತೆಗೆದುಕೋ
ಅನ್ನ, ಧನಕ್ಕೆ ಇರಬಹುದು ಬಡತನ
ಉಂಟೇ ಪ್ರೀತಿಗೆ?
ಎಂದೂ ಇರದು
ಹಂಚಿದಷ್ಟು ಬೆಳೆಯುವುದು
ಅದೇ ಪ್ರೀತಿಯ ಗುಣವು
ಪ್ರೀತಿಯೇ ಬೇಡಿ, ಪ್ರೀತಿಯೇ ಹಂಚು
ಎಂದೆಂದಿಗೂ
ಜಗದಲ್ಲಿ ಸಿಗುವುದು
ಎಂದೆಂದಿಗೂ ಒಂದೇ
ಅದೇ ಪ್ರೀತಿಯ ಹುಡಿ
ಅದರಲ್ಲಿಯೇ ಹೃದಯ ಹೊರಳಾಡಲಿ
ಬಿಟ್ಟುಬಿಡು
ಹೃದಯಕ್ಕೆ ಅಂಟಿದ ಪ್ರೀತಿ ಹುಡಿಯ
ಪ್ರತಿ ಹೃದಯಕ್ಕೆ
ಮುಡಿಸುತ್ತಲೇ ನೀ ಸಾಗು
ಆಗುವೆ ಕೊನೆಗೆ ನೀ ಪ್ರೇಮ ಭಿಕ್ಷೆ
ಜಗದ ಅಕ್ಷು

ಅಪ್ಪ

ಅಪ್ಪನ ಕೈಯ ಮ್ಯಾಲೆ
ಎಷ್ಟೊಂದು ಕೆರೆ-ಬಾವಿಗಳು, ಒಡ್ಡು-ಬಾಂದಾರ
ಗಳು ತಲೆ ಎತ್ತಿದವು!

ಅಪ್ಪ ತೋಡಿದ ಕೆರೆ-ಬಾವಿ ಎಂದೂ ಬತ್ತಲಿಲ್ಲ
ಹಾಕಿದ ಒಡ್ಡು-ಬಾಂದಾರಗಳು ಎಂದೂ ಒಡೆಯಲಿಲ್ಲ
ಇಡೀ ಊರಿಗೆ ಊರೇ ಅಪ್ಪ ತೋಡಿದ ಕೆರೆ_ಬಾವಿಯ ನೀರು
ಕುಡಿಯುತ್ತಾರೆ
ಅಪ್ಪ ಮಾತ್ರ ಕೆರೆ-ಬಾವಿ ಮುಟ್ಟಾಂಗಿಲ್ಲ,
ಮುಟ್ಟಿ ನೀರು ಕುಡಿಯಾಂಗಿಲ್ಲ

ಅಪ್ಪ ಬಿತ್ತಿದ ಬೀಜ ಎಂದೂ ಹುಸಿ ಹೋಗಲಿಲ್ಲ
ಒಂದು ಎರಡಾಗಿ, ಎರಡು ಮೂರು, ನಾಲ್ಕಾಗಿ
ನೆಲ ತುಂಬ ಹಸಿರು ಮೂಡಿ
ದವಸ, ಧಾನ್ಯ ಹುಲುಸಾಗಿ ಬೆಳೆದರೂ
ಅಪ್ಪನಿಗೆ ಕಡಗಣದ ಮಣ್ಕಾಳೇ ಕೊಡುಗೆ!

ಅಪ್ಪ ಕಟ್ಟಿದ ಮನೆ-ಮಹಲು, ಗುಡಿ-ಗುಂಡಾರ
ಅಪ್ಪನ ಬೆವರ ಹನಿಯ ಫಲ
ಒಂದು ಕಲ್ಲು, ಹಿಡಿ ಮಣ್ಣು ಉದಿರಿಲ್ಲ
ಇಂದಿಗೂ ಗಟ್ಟಿಮುಟ್ಟಾಗಿ ನಿಂತಿವೆ
ಉಳ್ಳವರಿಗೆ ಆಶ್ರಯ ತಾಣವಾಗಿವೆ
ಅಪ್ಪನ ಶ್ರಮಕ್ಕೆ ಭಾಷ್ಯ ಬರೆಯುತ್ತಿವೆ
ಅಪ್ಪ ಮಾತ್ರ ಇಂದಿಗೂ ಅದೇ ಮುರುಕು ಗುಡಿಸಲಲ್ಲಿ
ಸೂರ್ಯ, ಚಂದ್ರರ ಜೊತೆಯಲ್ಲಿ ಹೈರಾಣದ ಕತೆ
ಹೇಳುತ್ತಲೇ ಇದ್ದಾನೆ
ತೊಡೆಯ ಮೇಲಿನ ಮೊಮ್ಮಗಳು ಹೂಂಗುಟ್ಟುತ್ತಲೇ
ಇದ್ದಾಳೆ

 

AvithaKavithe Sadashiva Doddamani

ಸದಾಶಿವರ ಹೊಸ ಕವನ ಸಂಕಲನ ಮತ್ತು ಕೈಬರಹ

ಕವಿತೆ ನನಗೆ ಆತ್ಮ ಸಂಗಾತದ ಜೀವಬಂಧು. ಕವಿತೆ, ಅವ್ವ ಮಾಡಿದ ರೊಟ್ಟಿ ಥರ ಸ್ವಾದ ಮತ್ತು ಸತ್ವ. ಅವ್ವ ಮಾಡಿದ ರೊಟ್ಟಿ ಮತ್ತು ಕವಿತೆ ಇವೆರಡೂ ನನಗೆ ಬೇರೆ ಬೇರೆ ಅಂತ ಅನಿಸಲೇ ಇಲ್ಲ. ಅವೆರಡೂ ನನಗೆ ತುಂಬಾ ಕಾಡಿದ ಜೀವ ಪ್ರಜ್ಞಾ ಪದಾರ್ಥಗಳು. ಲೋಕ ಹಸಿವಿನ ಪ್ರಜ್ಞಾ ಪ್ರತೀಕವಾದ ಕವಿತೆ ಮತ್ತು ರೊಟ್ಟಿ ನನಗೆ ಆತ್ಮ ಸಂಗಾತದ ಜೀವ ಬಂಧು ಆದದ್ದು ಒಂದು ವಿಶೇಷ. ಸೋಲು, ಅವಮಾನ, ದಾರಿದ್ರ್ಯದಲ್ಲಿ ಮುಳುಗೇಳುವಾಗ ಆಸರೆಯ ಸ್ತಂಭವಾಗಿ, ಸಾಂತ್ವಾನದ ತಾಯಿಯಾಗಿ ನನಗೆ ಆಶ್ರಯ ನೀಡಿದ್ದು ಕವಿತೆ. ರೊಟ್ಟಿ ತಾಯಿಯ ಕರಳು ಪ್ರೀತಿಯ ದ್ಯೋತಕ. ಆ ಗುಣವಿಶೇಷವನ್ನು ನಾನು ಕವಿತೆಯಲ್ಲಿ ಕಂಡಿದ್ದೇನೆ. ಹೀಗಾಗಿ ಸಾಹಿತ್ಯದ ಎಲ್ಲ ಪ್ರಕಾರಗಳಿಗಿಂತಲೂ ನನಗೆ ಕವಿತೆ ತುಂಬಾ ಇಷ್ಟ.

“ನೆಲೆ ಇಲ್ಲದ ಊರಲ್ಲಿ
ನೆಲೆ ಹುಡುಕುತ ಹೊರಟೇನು
ತಂಟೆ-ತಕರಾರುಗಳನ್ನು ಎಂಟಾಣೆಗೆ ಮಾರೇನು”

ಎನ್ನುವಂತಹ ತುಂಬಾ ವಿಷಮ ಪರಿಸ್ಥಿತಿಯಲ್ಲಿ ನನ್ನ ಜೀವಂತಿಕೆಗೆ ಸಾಕ್ಷಿಯಾಗಿ ನನ್ನ ಅಂತರಂಗದ ಗೆಳೆಯನಾಗಿ ಕೈ ಹಿಡಿದು ಮುನ್ನಡೆಸಿದ್ದು ಕವಿತೆ. ಹಾಗಾಗಿ ನಾನು ನನ್ನ ಬದುಕನ್ನು, ಸಮಾಜದ ವೈರುಧ್ಯಗಳನ್ನು, ಮನುಷ್ಯಪರ ಕಾಳಜಿಯನ್ನು ಕವಿತೆಯಲ್ಲಿ ಕಟ್ಟಿಕೊಡುವ ಅಭೀಪ್ಸೆಯಿಂದ ನಾನು ನನ್ನ ಬರೆವಣಿಗೆಯ ಅಭಿವ್ಯಕ್ತಿಯ ಮಾಧ್ಯಮವಾಗಿ ಕಾವ್ಯವನ್ನು ಆಯ್ದುಕೊಂಡೆ. ಹೀಗಾಗಿ ನನ್ನ ಕಾವ್ಯ ಅತಿಯಾದ ಸಂಕೇತ, ಪ್ರತಿಮೆ, ರೂಪಕಗಳ ಭಾರದಿಂದ ಬಾಗುವುದಾಗಲಿ ಸಂಕೀರ್ಣತೆಯಿಂದ ನರಳದೇ ನಿರಾಭರಣದಿಂದ ಕೂಡಿರುತ್ತದೆ. ನಾನು ಪ್ರಾಚೀನ, ಮಧ್ಯಕಾಲೀನ, ಹೊಸಗನ್ನಡ ಹಾಗೂ ಇತ್ತೀಚಿನ ಇಡೀ ಸಾಹಿತ್ಯವನ್ನು, ಕಾವ್ಯವನ್ನು ಗಂಭೀರವಾಗಿ ಓದಿಕೊಂಡವವನು. ಅದರಲ್ಲೂ ಮುಖ್ಯವಾಗಿ ಆಯಾ ಕಾಲಘಟ್ಟದ ಕಾವ್ಯ ವಸ್ತು, ಭಾಷೆ, ಸ್ವರೂಪ, ಅಭಿವ್ಯಕ್ತಿ ಕ್ರಮ ಮೊದಲಾದವುಗಳನ್ನು ಪ್ರಜ್ಞಾಪೂರ್ವಕವಾಗಿ ಗಮನಿಸಿದವನು. ಹೀಗಾಗಿ ಆ ಕಾವ್ಯದ ರಸ, ಧ್ವನಿಯಂತಹ ಮೀಮಾಂಸಿಕ ತತ್ವಗಳು ನನ್ನಲ್ಲಿ ಸೂಕ್ಷ್ಮತೆಯನ್ನುಂಟು ಮಾಡಿದವು. ಅದರ ಜೊತೆಗೆ ಬದುಕಿನ ಸಂವೇದನೆಗಳು ಮಾಗಿ, ಕಾವ್ಯ ರೂಪ ತಾಳತೊಡಗಿದವು. ಆ ಮೂಲಕ ನನ್ನನ್ನು ಕವಿಯಾಗಿಸಿದವು. ಕಾವ್ಯವೆಂದರೆ ‘ಜನರ ನೋವಿಗೆ ಮಿಡಿವ ಪ್ರಾಣ ಮಿತ್ರ’ ಎಂದು ಭಾವಿಸಿದವನು ನಾನು. ಕಾವ್ಯದ ಕಾರ್ಯವೇ ಅಂತಹದ್ದು. ಯಾವ ಕಾವ್ಯ ಜನರ ಶ್ರಮದ ಬದುಕಿನ ಮಧ್ಯದಿಂದ ಮೂಡಿ ಬರುತ್ತದೆಯೋ ಆ ಕಾವ್ಯ ಹೆಚ್ಚು ದಿನ ಬಾಳುತ್ತದೆ. ಮತ್ತು ಬದುಕನ್ನು ಒರೆಗಲ್ಲಿಗೆ ಹಚ್ಚುತ್ತದೆ. ಜೊತೆಗೆ ಬದುಕನ್ನು ತಿದ್ದುತ್ತದೆ, ತಿದ್ದಬೇಕು. ಇಂತಹ ಎಲ್ಲ ಆಶಯಗಳನ್ನು ಇಟ್ಟುಕೊಂಡು ನಾನು ಕವಿತೆಯನ್ನು ಬರೆಯತೊಡಗಿದೆ. ಅದು ನನ್ನ ಕಾವ್ಯದಲ್ಲಿ ಒಡಮೂಡಿದೆ. ಆ ಕಾರಣದಿಂದ ಕಾವ್ಯ ನನಗೆ ಅತ್ಯಾಪ್ತವಾಗಿ, ಸಶಕ್ತವಾಗಿ ನಾನು ಕವಿತೆಯೊಂದಿಗೆ ಕವಿತೆ ನನ್ನೊಂದಿಗೆ ಜೊತೆಜೊತೆಯಾಗಿ ಸಾಗಲು ಸಾಧ್ಯವಾಯಿತು.

*

ಮನಸ್ಸುಗಳು ತುಂಬಾ ಮಲಿನವಾಗಿವೆ ಗೆಳೆಯಾ

ಮನಸ್ಸುಗಳು ತುಂಬಾ
ಮಲಿನವಾಗಿವೆ ಗೆಳೆಯಾ
ಶುಚಿಗೊಳಿಸಬೇಕು
ಕೆರೆ-ಬಾವಿ ಹುಡುಕುತ್ತಿದ್ದೇನೆ
ಪುಣ್ಯ ಜಲವಿದ್ದರೆ ನೋಡಿ ಹೇಳು
ಕಾಯುತ್ತಿರುತ್ತೇನೆ

ಮಾತುಗಳು ತುಂಬಾ
ಅಶುದ್ಧವಾಗಿವೆ ಗೆಳೆಯಾ
ಶುದ್ಧಗೊಳಿಸಬೇಕು
ಕಡಲು-ಕಿನಾರೆ ಹುಡುಕುತ್ತಿದ್ದೇನೆ
ಪುಣ್ಯ ಜಲವಿದ್ದರೆ ನೋಡಿ ಹೇಳು
ಕಾಯುತ್ತಿರುತ್ತೇನೆ

ಕಣ್ಣುಗಳು ತುಂಬಾ
ಹೇಸಿಗೆಯಾಗಿವೆ ಗೆಳೆಯಾ
ತೊಳೆಯಬೇಕು
ಹಳ್ಳ-ಕೊಳ್ಳಗಳ ಹುಡುಕುತ್ತಿದ್ದೇನೆ
ಪುಣ್ಯ ಜಲವಿದ್ದರೆ ನೋಡಿ ಹೇಳು
ಕಾಯುತ್ತಿರುತ್ತೇನೆ

ವಿಚಾರಗಳು ತುಂಬಾ
ಮೊಂಡಾಗಿವೆ ಗೆಳೆಯಾ
ಹರಿತಗೊಳಿಸಬೇಕು
ವಿವೇಕದ ಸಾಣಿ ಹುಡುಕುತ್ತಿದ್ದೇನೆ
ನಂಬಿಕೆ ಇದ್ದರೆ ನೋಡಿ ಹೇಳು
ಕಾಯುತ್ತಿರುತ್ತೇನೆ

*

ಅನ್ನ ಸಂತರ್ಪಣೆ

ಅವ್ವಾ, ನಡಿಯೇ ಅಲ್ಲ ಹೋಗೋಣ
ಅನ್ನ ಸಂತರ್ಪಣೆ ಇದೆ
ಉಂಡು ಹೊಟ್ಟೆ ತುಂಬಿಸಿಕೊಳ್ಳೋಣ
ಅವ್ವ, ನಡೆಯಲಾಗುತಿಲ್ಲ ಕೈ ಸ್ವಲ್ಪ ಹಿಡಿಯೇ
ಮೂರು ದಿನವಾಯಿತು ಹೊಟ್ಟೆಗೆ
ಒಂದು ಅಗಳೂ ಅನ್ನ ಬಿದ್ದಿಲ್ಲ
ಕಳ್ಳು ಬತ್ತಿ ಬಳ್ಳಿಯಂತಾಗ್ಯಾವೆ
ತಲೆ ಸುತ್ತು ಬರುತ್ತಿದೆ ಅನ್ನವಿಲ್ಲದೆ
ಅವ್ವಾ, ಅಲ್ಲಿ ನಡಿಯೇ ಹೋಗೋಣ

ನಿನ್ನದೂ ನನ್ನಂತೆಯೇ ಪಾಡು ಅಲ್ವೆ ಅವ್ವಾ
ಉಗುಳು ನುಂಗಿಯೇ ಕಣ್ಣಲ್ಲಿ ಜೀವ ಹಿಡಿದಿರುವೆ
ಹೊಟ್ಟೆ ಬೆನ್ನಿಗಂಟಿದೆ
ಕೈ ಸಣ್ಣಗಾಗಿವೆ
ಅವ್ವಾ, ನಡಿಯೇ ಅಲ್ಲಿ ಹೋಗೋಣ

ಅವ್ವಾ, ನೋಡೇ ಅಲ್ಲಿ
ಪತ್ರೋಳಿಯಲ್ಲಿ ಅದೆಷ್ಟು ಅನ್ನ ಬೀಸಾಕಿದ್ದಾರೆ
ಬಾಯಲ್ಲಿ ನೀರೊಡೆಯುತ್ತಿದೆ!
ಬಳೆದು ತರಲೇ?
ಬೇಡವೇ? ಬಿಡು ಹಾಗಾದರೆ…

ಅವ್ವಾ, ನಡಿಯೇ ಅಲ್ಲಿಗಾದರೂ ಹೋಗೋಣ
ಅನ್ನ ಸಂತರ್ಪಣೆಯಲ್ಲಿ ಉಂಡು,
ಅನ್ನ ಸಂತರ್ಪಣೆ ಮಾಡುವವರ ತಾಯ್ ಹೊಟ್ಟೆ
ತಣ್ಣಗಿರಲೆಂದು ಹರಿಸೋಣ
ಅವ್ವಾ, ನಡಿಯೇ ಅಲ್ಲಿ ಹೋಗೋಣ

*

ಪರಿಚಯ : ಡಾ. ಸದಾಶಿವ ದೊಡಮನಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬೂದಿಹಾಳ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ. ಎ. ಕನ್ನಡ ಸ್ನಾತಕೋತ್ತರ ಪದವಿ. ‘ಧಾರವಾಡ ಮತ್ತು ಹಲಸಂಗಿ ಗೆಳೆಯರ ಗುಂಪು : ಒಂದು ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಸದ್ಯ ಇಲಕಲ್ಲಿನ ಶ್ರೀ ವಿಜಯ ಮಹಾಂತೇಶ ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.  ‘ಧರೆ ಹತ್ತಿ ಉರಿದೊಡೆ’, ‘ನೆರಳಿಗೂ ಮೈಲಿಗೆ’ ಕವನ ಸಂಕಲನ, ‘ದಲಿತ ಸಾಹಿತ್ಯ ಸಂಚಯ’ ಸಂಪಾದಿತ ಕೃತಿ, ‘ಪ್ರತಿಸ್ಪಂದನ’ ವಿಮರ್ಶೆ ಕೃತಿಗಳು ಪ್ರಕಟಗೊಂಡಿವೆ.

ಇದನ್ನೂ ಓದಿ : Poetry : ಅವಿತಕವಿತೆ ; ‘ಮದುವೆಗೆ ಪುರಾವೆ ಸಿಕ್ಕ ಹಾಗೆ ಸುಖಕ್ಕೆ ಖಾತ್ರಿ ಸಿಗಬಹುದಾ?’

Click on your DTH Provider to Add TV9 Kannada