Poetry : ಅವಿತಕವಿತೆ ; ‘ಮದುವೆಗೆ ಪುರಾವೆ ಸಿಕ್ಕ ಹಾಗೆ ಸುಖಕ್ಕೆ ಖಾತ್ರಿ ಸಿಗಬಹುದಾ?’

Poetry : ‘ಏಕಾಂತದಲ್ಲಿ ಮತ್ತು ಗೌಪ್ಯವಾಗಿ ಕವಿತೆಗಳನ್ನು ಓದುವಾಗ ಇದು ಎಲ್ಲರ ಆತ್ಮಚರಿತ್ರೆಯೇ ಅಲ್ಲವಾ ಎನಿಸುತ್ತದೆ. ವಾಚ್ಯವಾಗಿ ಹೇಳಲಾಗದ ಸೂಕ್ಷ್ಮ ಸಂಗತಿಗಳೇ ತಾನೇ ದಾಖಲಾಗಬೇಕಾದ್ದು, ಅವನ್ನು ಕವಿತೆಗಳು ಮೈತುಂಬಿಸಿಕೊಂಡು ನನ್ನನ್ನು ಹಗುರಾಗಿಸುತ್ತವೆ. ಕವಿತೆ ಪಂಚೇಂದ್ರಿಯದ ಹಾಗೇ. ರುಚಿ, ನೋಟ, ಸ್ಪರ್ಶ ಎಲ್ಲವನ್ನೂ ದಕ್ಕಿಸುತ್ತದೆ. ಹಾಗಾಗಿಯೇ ಕವಿತೆ ನನಗಿಷ್ಟ.’ ಹೆಚ್.ಸಿ. ಭವ್ಯ ನವೀನ್

Poetry : ಅವಿತಕವಿತೆ ; ‘ಮದುವೆಗೆ ಪುರಾವೆ ಸಿಕ್ಕ ಹಾಗೆ ಸುಖಕ್ಕೆ ಖಾತ್ರಿ ಸಿಗಬಹುದಾ?’
Follow us
ಶ್ರೀದೇವಿ ಕಳಸದ
|

Updated on: Nov 14, 2021 | 8:37 AM

Kannada Poetry : ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಉಪನ್ಯಾಸಕಿ, ಪಿಎಚ್​.ಡಿ ಸಂಶೋಧನಾರ್ಥಿಯಾಗಿರುವ ಹೆಚ್. ಸಿ. ಭವ್ಯ ನವೀನ ಅವರ ಎರಡನೇ ಕವನ ಸಂಕಲನ ಮತ್ತು ಮೊದಲ ಕಥಾಸಂಕಲನ ಅಚ್ಚಿನಮನೆಗೆ ಹೋಗಲು ಕಾಯುತ್ತಿವೆ. ಈ ಸಂದರ್ಭದಲ್ಲಿ ಆಯ್ದ ಕವಿತೆಗಳು ನಿಮ್ಮ ಓದಿಗೆ.

ಗರ್ಭದೊಳಗಿರುವ ಕೂಸಿನ ಮೇಲೆ ತಾಯೊಬ್ಬಳು ಕವಿತೆ ಬರೆದು, ಅದನ್ನು ಆ ಮಗುವಿಗೂ ಕೇಳಿಸದಂತೆ ಮೆಲುವಾಗಿ ಹಾಡಿದರೆ, ಆ ಹಾಡು ಭವ್ಯ ಅವರು ಬರೆದ ಕವಿತೆಯ ಹಾಗಿರುತ್ತದೆ. ಎದುರಿಗಿರುವವರನ್ನು, ಸುತ್ತಲಿನ ಜಗವನ್ನು ಮೆಚ್ಚಿಸಲು, ಅನುಮೋದನೆ ಪಡೆಯಲು ಅವರು ಹಾಡುವುದಿಲ್ಲ. ಮಂಜಿನ ಹಾಗೆ ಕೊರೆಯುವ ನಿಜವನ್ನು ಅಷ್ಟೇ ತಂಪಾಗಿ ಆಕೆ ಹೇಳಬಲ್ಲರು. ಹಾಗಾಗಿಯೇ ಅದು ಸತ್ಯದ ಸುಡುಸುಡು ಗುಣದೊಂದಿಗೆ ಅದೇ ಸತ್ಯದ ತಂಪಿನ ಗುಣವನ್ನೂ ಹೊಂದಿರುತ್ತದೆ. ಅವರ ಕವನದಲ್ಲಿ ಹುಡುಕಿದರೂ ಆವೇಶದ ಸಾಲುಗಳು ಕಾಣಸಿಗುವುದಿಲ್ಲ, ಘೋಷಣೆಗಳು ಎದುರಾಗುವುದಿಲ್ಲ, ಹೇಳಬೇಕಾದ್ದೆಲ್ಲವನ್ನೂ ಅವರು ಸಮಾಧಾನದ ದನಿಯಲ್ಲೇ ಹೇಳುತ್ತಾರೆ. ಅದಷ್ಟೇ ಆಗಿದ್ದಿದ್ದರೆ ಅದು ಗದ್ಯವೂ ಆಗಿಬಿಡಬಹುದಿತ್ತು, ಆದರೆ ಅವರ ಮಾತುಗಳಲ್ಲಿನ ಕುಸುರಿ ಕೆಲಸ ಮತ್ತು ಪದಗಳ ಸಂತೆಯ ನಡುವೆ ಎದುರಾಗುವ ಮೌನದ ಒಳನೋಟ ಅವರ ಬರಹಗಳನ್ನು ಪದ್ಯವಾಗಿಸಿಬಿಡುತ್ತದೆ.

ಸುಮಾರು ವರ್ಷಗಳಿಂದ ನಾನು ಅವರ ಪದ್ಯಗಳನ್ನು ಓದುತ್ತಾ ಬಂದಿದ್ದೇನೆ. ಕವನ ಕಟ್ಟುವ ಕಸುಬು ಅವರಿಗೆ ಕರಗತವಾಗಿದ್ದರೂ ಸಹ… ಜಗದೆಲ್ಲಾ ಜಂಬರಗಳನ್ನೂ ತಲೆಯ ಮೇಲೆ ಹೊತ್ತು, ಕವನಗಳಿಗೆ ಕೊಡಬೇಕಾದ ಸಮಯ ಅವರು ಕೊಡುತ್ತಿಲ್ಲ ಎನ್ನುವುದು ಅವರ ಕುರಿತ ನನ್ನ ತಕರಾರು. ಆಗೆಲ್ಲಾ ತಮ್ಮ ಇಬ್ಬರು ಗೌರಿಯರನ್ನು ನನ್ನ ಮುಂದೆ ಹಿಡಿವ ಭವ್ಯ ಜೀವಂತ ಕವಿತೆಗಳನ್ನು ಪ್ರತಿ ಕ್ಷಣ ಬರೆಯುತ್ತಾ, ಬೆಳೆಸುತ್ತಾ ಇರುವಾಗ ಕೈ ಮುಟಿಗೆಯಲ್ಲಿ ಹಿಡಿಯದ ಕವಿತೆಗಳನ್ನು ಕುರಿತು ಕೊರಗುವುದೇಕೆ ಎಂದಂತೆನಿಸಿ ಸುಮ್ಮನಾಗಿ ಬಿಡುತ್ತೇನೆ. ಈ ಹುಡುಗಿಯನ್ನು ಕುರಿತು ನನಗೆ ಇನ್ನೊಂದು ತಕರಾರೂ ಇದೆ. ಅದು ಇವರಿಗಿರುವ ಭಯಂಕರ ಸಂಕೋಚ! ಜಗದ ಬಿಸಾತು ಬಿಟ್ಟು ಮೊದಲ ಕೋಗಿಲೆ, ಮೊದಲ ರಾಗ ಹಾಡದೆ ಇದ್ದಿದ್ದರೆ ಜಗಕ್ಕೆ ಕೋಗಿಲೆ ಹಾಡುತ್ತದೆ ಎಂದು ತಿಳಿಯದೆಯೇ ಹೋಗುತ್ತಿತ್ತು ಅಲ್ಲವೆ? ಕಳೆದು ಹೋದ ಹೆಣ್ಣೊಬ್ಬಳ ಕಪ್ಪುಕೆಂಪಿನ ಪರ್ಸ್ ಒಳಗೆ ಏನೇನಿತ್ತು ಎಂದು ವಿವರಿಸುತ್ತಲೇ ಇದ್ದಕ್ಕಿದ್ದಂತೆ ಮಿಂಚೊಂದು ಹೊಳೆದ ಹಾಗೆ ಅವರು ಆ ಇಡೀ ಪರ್ಸ್ ಅನ್ನು ಹೆಂಗಸೊಬ್ಬಳು ಕಳೆದುಕೊಂಡ ಹುಡುಗಿತನದ ರೂಪಕವನ್ನಾಗಿಸಿಬಿಡುತ್ತಾರೆ. ಮಿಂಚು ಹುಳುವಿನಂತಹ ಇಂತಹ ಸಾಲುಗಳು ಅವರ ಶಕ್ತಿ. ಈ ಮಿಂಚು ಹುಳುಗಳು ಕಾವ್ಯದ ದಾರಿಯಲ್ಲಿ ಅವರು ಬಹುದೂರ ನಡೆಯಲು ಬೆಳಕು ತೋರಿಸಲಿ ಎನ್ನುವ ಹಾರೈಕೆ ನನ್ನದು. ಎನ್. ಸಂಧ್ಯಾರಾಣಿ, ಕವಿ, ಲೇಖಕಿ 

ಭವ್ಯ ಅವರ ಕವಿತೆಗಳು ವೈಯಕ್ತಿಕ ನೆಲೆಯಲ್ಲಿ ತಮ್ಮೊಂದಿಗೆ ತಾವು ಆಡುತ್ತಿರುವ ಮಾತಿನಂತೆ ಭಾಸವಾಗುತ್ತಾ ಒಂದು ಸಾರ್ವತ್ರಿಕತೆಯ ಆವರಣಕ್ಕೆ ಜಿಗಿಯುತ್ತವೆ. ಪ್ರೀತಿಯ ಹಂಬಲ, ನೋವು, ಕನಸು, ಸಾರ್ಥಕ-ನಿರರ್ಥಕ ಗಳಿಗೆಗಳು ವ್ಯಕ್ತಿಗಿದ್ದಂತೆ ಕಾಲ, ಯುಗಕ್ಕೂ ಇರುತ್ತವೆ. ಮುಟ್ಟುವ ಹಂಬಲ, ಮುಟ್ಟಿದರೂ ತಟ್ಟಲು ಸಾಧ್ಯವಾಗದ ಸ್ಥಿತಿ ಇಲ್ಲಿದೆ. ಸಿಂಡ್ರೆಲ್ಲ ಬಯಸಿದ ಒಂದು ನಿರುಮ್ಮಳ ಬದುಕು ಕಿರೀಟದಡಿಯಲ್ಲಿ ನಲುಗುವ ವ್ಯಂಗ್ಯವನ್ನು ‘ಮುಫ್ತಿಗೆ ರಾಜಕುಮಾರ ಸಿಗಬಹುದು, ಅವನ ಪ್ರೀತಿಯಲ್ಲ’ ಎನ್ನುವ ಸಾಲು ಹಿಡಿದಿಡುವ ರೀತಿ ಮಾರ್ಮಿಕವಾಗಿದೆ. ಮುಂದುವರಿದು, ಇನ್ನೊಂದು ಕವಿತೆಯಲ್ಲಿ, ಚರಿತ್ರೆ ಎಂಬುದು ‘ಗಾಯದ ಮೊದಲಿನ ಹೋರಾಟ’, ‘ಗಾಯದ ನಂತರದ ನೋವು’ ಎನ್ನುವಾಗ ಇದು ಕಾಲಮಾನದ ಕತೆಯ ಜೊತೆಗೆ ಎಲ್ಲರದೂ ಆಗುತ್ತದೆ. ಕಳೆದುಹೋದ ಪರ್ಸ್ ನೊಳಗೆ ಅಡಗಿದ್ದ ನೆನಪು, ಭರವಸೆ, ಕನವರಿಕೆಗಳನ್ನು ಹಂಬಲಿಸುವಾಗ ಮಿಡಿತ ಕಳೆದುಕೊಂಡ ಮನುಷ್ಯ ಜಗತ್ತಿನೊಳಗೆ ಜೀವವಿರದ ವಸ್ತು ನಮ್ಮನ್ನು ಜೀವಂತವಾಗಿಸಿರುವ ಪರಿ ಕಾಣುತ್ತದೆ. ಕನಸಿದ ಆಕಾಶಕ್ಕೆ ಕೊನೆಗೊಮ್ಮೆ ನೀಕುವುದು ಸಾಧ್ಯವಾದರೂ ಅದು ಬರಡಾಗಿರುವುದು ಕಂಡು ಉಂಟಾಗುವ ನಿರಾಸೆ ಇಲ್ಲಿ ನಮ್ಮದೇ ಆದ ಹೊಸ ಆಗಸ ನಿರ್ಮಿಸುವ ಹಂಬಲವನ್ನು ಮೂಡಿಸುತ್ತದೆ. ಪ್ರೇಮದ ಸಾರ್ಥಕ ಗಳಿಗೆಗಳು, ಅದು ಹುಟ್ಟಿಸುವ ಬೇಗೆ, ತಲ್ಲಣಗಳನ್ನು ಈಗಾಗಲೇ ಸಿದ್ಧ ಪ್ರತೀಕಗಳನ್ನು ಒಡೆಯುವ ಮೂಲಕ ಕವಿ ಕಾಣಿಸುತ್ತಾರೆ. ಮುಟ್ಟುವ ಹಂಬಲ, ಮುಟ್ಟಲಾಗದ ನೋವು ಉದ್ದಕ್ಕೂ ನಮ್ಮನ್ನು, ಪೀಳಿಗೆಗಳನ್ನು ಕಾಡುತ್ತಾ ಬಂದಿದೆ. ಇದು ವ್ಯಕ್ತಿಗತ ಹಂಬಲವಷ್ಟೇ ಅಲ್ಲ, ಸಮುದಾಯಗಳ ಒಡಲಾಳದ ನೋವೂ ಹೌದು. ಡಾ. ಭಾರತೀದೇವಿ. ಪಿ. ಕವಿ, ಲೇಖಕಿ

*

ಸಿಂಡ್ರೆಲಾ ಮತ್ತು ಮುಫ್ತಿಗೆ ಸಿಕ್ಕ ರಾಜಕುಮಾರ

ಹ್ಞಾಂ… ಸಿಂಡ್ರೆಲಾ ರಾಜಕುಮಾರನ ಕೇಳಿರಲಿಲ್ಲ ಹಿಮದ ರಾತ್ರಿಯ ವಿಹಾರ ಮತ್ತು ತೂತು ನಕ್ಷತ್ರಗಳಿಲ್ಲದ ಒಂದು ಗೌನು ಎರಡೇ ಕೇಳಿದ್ದು ರಾಜಕುಮಾರ ಮುಫ್ತಿಗೆ ಸಿಕ್ಕ

ಕಿರೀಟ ತೊಟ್ಟ ರಾಜಕುಮಾರನ ಜತೆ ಇದ್ದೇನೆ ನಾನೂ… ಹೊಳೆಯುವ ನಕ್ಷತ್ರಗಳನ್ನೇ ಹೊದ್ದುಕೊಂಡು ತಿರುಗಬಹುದಿತ್ತು ಆದರೆ ಮುಫ್ತಿಗೆ ರಾಜಕುಮಾರ ಸಿಗಬಹುದು ಅವನ ಪ್ರೀತಿಯಲ್ಲ

ಫೇರಿಟೇಲ್​ಗಳ ಅಚ್ಚಿಸಿ, ಹೊಲೆದು ಮಾರುಕಟ್ಟೆಗೆ ಕಳಿಸುವ ಕ್ರಿಯಾಶೀಲ ಕೂಲಿ ನಾನು ರಾಜಕುಮಾರ ತುಂಬಾ ಸಾಹುಕಾರ

ನನ್ನ ಅಂಗಳದಲ್ಲೂ ಗುಲಾಬಿಗಳು ನಗಲಿ ಅಂತ ನೀರೆರೆಯುತ್ತೇನೆ ಅವನು ಮುಗುಳು ಮೊಗ್ಗುಗಳನೆಲ್ಲಾ ಬಿಡಿಸಿ ಅರಮನೆಯ ಅತಿಥಿಗಳಿಗೆ ನೆಲಹಾಸು ಮಾಡುತ್ತಾನೆ

ರಾಜಕುಮಾರ ಯುದ್ಧ ಗೆದ್ದು ರಾಜ್ಯ ಕಟ್ಟುತ್ತಾನೆ, ನಾನು ತಿಲಕವಿಟ್ಟು ಕಳಿಸಿ ಏಕಾಂತದಲ್ಲಿ ಸೆಣಸುತ್ತೇನೆ…

ಕೇಳಿದರೆ ರಾಜ್ಯಕ್ಕೇ ನನ್ನ ಹೆಸರಿಡುತ್ತಾನೆ… ಪಾಪ! ಆದರೆ, ಕೇಳದೆಯೂ ಅನಾಮತ್ತು ಕೊಡುವ ಒಂದು ಮುತ್ತಿನಾಸೆ ಹಾಗೇ ಕರಗೀತು

ಹೌದು, ಅವಳಿಗೆ ನಡುರಾತ್ರಿ ರಾಜಕುಮಾರ ಸಿಕ್ಕಿದ ಸರೀ… ಇವಳು ರಾಜಕುಮಾರಿಯಾದಳಾ…? ಹಾ.. ಅವರಿಬ್ಬರೂ ಮದುವೆಯಾಗಿ ಸುಖವಾಗಿದ್ದರು ಅಂತಂದರು ಯಾರೋ.

ಮದುವೆಗೆ ಪುರಾವೆ ಸಿಕ್ಕ ಹಾಗೆ ಸುಖಕ್ಕೆ ಖಾತ್ರಿ ಸಿಗಬಹುದಾ?

*

ವದರುಗಿಡ

ಎಷ್ಟು ನಿರ್ಮನಸ್ಸು ಎಲ್ಲಾ ಕೊಚ್ಚಿಹೋಗುವಷ್ಟು ಏಳುವಾಗ ಮುಳುಗುವಾಗ ಗುರುತಾಗುತ್ತಿಲ್ಲ ಅಮಾಯಕ.. ಆಪಾದಿತ.. ಅಮಾಯಕ ಆಪಾದಿತ

ಬಟಾಬದುಕು ಅಡಿಪಾಯಗಳಲ್ಲಿ ನಾವು ತುಂಬಿದ್ದೇನು ನಿಲುಗಂಬಗಳು ಅಷ್ಟು ಸಲೀಸಾಗಿದ್ದವಾ ಬೇರುಬಿಟ್ಟ ಆಲದಜ್ಜ ಎಷ್ಟ ಕಟ್ಟಿಡಬಹುದಿತ್ತು ಅಯ್ಯೋ ಸುಳ್ಳು ಸುಳ್ಳೇ ಕಡಲೇ… ನಿನಗೆ ಹೆಸರೇನಿಡಲಿ ನೀನು ಸೇರಬಹುದಾದ ಹೆಗ್ಗಡಲ ಹರಿವಿನ ಅರಿವೊಳಗೆ ನೀನೂ ನಾಮಾವಶೇಷ.. ನಾನೂ!

ಸಂಕಟಗಳಿಗೆ ಮಾತು ಹಚ್ಚಿದರೆ ಜಗದ ಕಿವಿ ಚುಚ್ಚುವ ಶಬ್ಧಾಂತರಂಗಗಳು ಕುಸಿದು ಬೀಳುವ ಸೂರ ಕೆಳಗೆ ಆಳಕ್-ಹಬ್ಬಿದ ಕನಸು.. ಆಚೆ ಅದೇ ಆಕಾಶದ ಕೆಳಗೆ ವದರುಗಿಡ ಬದುಕು ಎನ್ನುವುದು ಎಷ್ಟು ಅಖಂಡಿತ ನಿರ್ದಯಿ.. ಮತ್ತು ಸಮಾನತವಾದಿ

ಅಳೆದಷ್ಟೂ ಅಳೆದುಕೊಳ್ಳದ ಭರಪೂರ ಜೀವಪ್ರೀತಿ ಧೋ ಧೋ ಸುರಿವ ಸವಾಲು ಕಡುಪ್ರೀತಿಯ ಮಣ್ಣಿನ ಗೊಂಬೆ ಮರಳಬೇಕಲ್ಲ ಮಣ್ಣಾಗಿ.. ನಾನೇನು ಬೇರೆಯವಳಾ, ಹೇಳಿದ್ದೇನೆ.. ಆ ತೃಣಮಪಿ ನ ಚಲತಿಯ ಕಾರಣಿಕನಿಗೆ ಸಾಯುವುದಿದದ್ದರೆ ಮೊದಲು ಮೆದುಳೇ ಸಾಯಲಿ ಒಂದರೆ ಘಳಿಗೆ ಹೃದಯ ಹೃದ್ಯವಾಗಿ ಮಿಡಿಯಲಿ

*

Avithkavithe HS Bhavya Naveen

ಕೈಬರಹದೊಂದಿಗೆ ಭವ್ಯ

ಹೇಳಲಿಕ್ಕೆ ಸುಮಾರಿರುತ್ತದೆ. ಕವಿತೆಗಳು ಮಾತ್ರ ನನ್ನನ್ನು ಸದಾ ಕೇಳಿಸಿಕೊಳ್ಳುತ್ತವೆ. ಹೊಟ್ಟೆಯೊಳಗಿನ ಸಾವಿರ ಅಸಹನೆಗಳನ್ನು, ಸಣ್ಣಪುಟ್ಟ ಖುಷಿ-ದುಗುಡಗಳನ್ನೂ, ಅಸಂಖ್ಯ ಆಸೆ- ಮುಜುಗರಗಳ ನಗೆಯನ್ನು ಅಷ್ಟೊಂದು ವಿಶ್ವಾಸದಿಂದ ನಗುವುದಕ್ಕೆ ನನಗೆ ಅವಕಾಶ ಮಾಡಿಕೊಡುವುದು ಕವಿತೆಗಳೇ.

ಎಲ್ಲರ ಒಳಗೂ ಕವಿತ್ವ ಢಾಳಾಗಿದೆ ಅಂತ ಅಂದುಕೊಂಡದ್ದಕ್ಕೇ ನಾನು ಬರೆಯುತ್ತೇನೆ, ಮತ್ತು ಅದಕ್ಕಾಗಿಯೇ ಕೇವಲ ಬರೆದು ಮುಚ್ಚಿಟ್ಟುಕೊಳ್ಳುತ್ತೇನೆ. ಏಕಾಂತದಲ್ಲಿ ಮತ್ತು ಗೌಪ್ಯವಾಗಿ ಕವಿತೆಗಳನ್ನು ಓದುವಾಗ ಇದು ಎಲ್ಲರ ಆತ್ಮಚರಿತ್ರೆಯೇ ಅಲ್ಲವಾ ಎನಿಸುತ್ತದೆ. ವಾಚ್ಯವಾಗಿ ಹೇಳಲಾಗದ ಸೂಕ್ಷ್ಮ ಸಂಗತಿಗಳೇ ತಾನೇ ದಾಖಲಾಗಬೇಕಾದ್ದು, ಅವನ್ನು ಕವಿತೆಗಳು ಮೈತುಂಬಿಸಿಕೊಂಡು ನನ್ನನ್ನು ಹಗುರಾಗಿಸುತ್ತವೆ. ಕವಿತೆ ಪಂಚೇಂದ್ರಿಯದ ಹಾಗೇ. ರುಚಿ, ನೋಟ, ಸ್ಪರ್ಶ ಎಲ್ಲವನ್ನೂ ದಕ್ಕಿಸುತ್ತದೆ. ಹಾಗಾಗಿಯೇ ಕವಿತೆ ನನಗಿಷ್ಟ.

ಆಯಾ ಕ್ಷಣದ ತೀವ್ರತೆಗಳನ್ನು ಅಲ್ಲಲ್ಲಿಯೇ ಬಿಟ್ಟು, ಹೊಸತನ್ನು ತೀವ್ರವಾಗಿ ಅನುಭವಿಸುವುದಕ್ಕೆ ಅವಕಾಶ ಮಾಡಿಕೊಡುವ ಕವಿತೆಗಳು ಪ್ರೀತಿ-ವಿಷಾಧ-ಪ್ರತಿಭಟನೆ-ದೋಷಾರೋಪ ಪಟ್ಟಿಗಳೆಲ್ಲವನ್ನೂ ಅತೀ ತಣ್ಣಗೆನ್ನುವಂತೆ ಹೇಳಿ ಮುಗಿಸುವ ನನ್ನ ಚಾಳಿಗೆ ಒಗ್ಗಿಕೊಂಡು ಆಗೀಗಾದರೂ ನನಗೆ ಭರ್ತಿ ಭರ್ತಿ ಒಲಿಯುತ್ತಲೇ ಇರುತ್ತವೆ. ನಾನವಕ್ಕೆ ಯಾವತ್ತೂ ಋಣಿ.

*

ಹೆಂಗಸೊಬ್ಬಳ ಹುಡುಗಿತನದ…

ಅಪರೂಪದ ನಗು ನಗುವ ಹೊತ್ತಿನಲ್ಲೇ ಎಲ್ಲೋ ಕೈ ತಪ್ಪಿದೆ.. ಅಡ್ಡಕ್ಕೆ ಉದ್ದವಿದ್ದ, ಉದ್ದಕ್ಕೆ ಗಿಡ್ಡವಿದ್ದ ಹಳೇ ಮದುವಣಗಿತ್ತಿಯಂತೆ ಇಷ್ಟಿಷ್ಟೇ ದಪ್ಪವಾಗುತ್ತಿದ್ದ ಕಪ್ಪು ಕೆಂಪಿನ ನನ್ನ ಪರ್ಸು

ಪರ್ಸ್ ಅಂದರೆ ಬರೀ ಪರ್ಸ್ ಅಲ್ಲ. ಹೆಂಗಸೊಬ್ಬಳ ಹುಡುಗಿತನದ ಕುರುಹು ಅಡ್ಡಾಡುವ ಆತ್ಮಚರಿತ್ರೆ ಅದೊಂದು ಅಲ್ಲಾವುದ್ದೀನನ ದೀಪ ತೀವ್ರವಾದ ಜಗತ್ತು…

ಮತ್ತು ಆವತ್ತು ಕೈ ತಪ್ಪುವ ಹೊತ್ತು ಚೂರುಪಾರು ಕಾಸಿತ್ತು ಅದರೊಳಗೆ ಚೂರೇ ಚೂರು ಕಸ ಬ್ರಹ್ಮಾಂಡ ಅವಿಸಿಕೊಂಡಿದ್ದ ಒಂದು ಸ್ವಯಾರ್ಜಿತ ಪೆನ್ನೆರಡವು ಕಾಲು ನೋವಿಗೆ ಬರೆದ ಪ್ರಿಸ್ಕ್ರಿಪ್ಷನ್ ಅಮ್ಮನೂರಿನ ದೇವರಡ್ಡೆಯ ಹಸೆಅಕ್ಕಿ ಒಡೆದ ಬಳೆಚೂರಿತ್ತು, ಕನ್ನಡಕ ಒರೆಸುವ ಬಟ್ಟೆತುಂಡು ಅಮ್ಮನ ತುರುಬಿಗೆ ತಂದ ಯೂಪಿನ್ನು ಪುಟಾಣಿ ಕಾಜಲ್, ಗಲ್ ಗಲ್ – ಎನ್ನುವ ಎರಡು ಕೀಗೊಂಚಲುಗಳಿದ್ದವು ಕಾಣುವಂತೆ ಮತ್ತೂ ಎಷ್ಟೊಂದು ಕೀಲಿಗಳಿದ್ದವು ಕಣ್ಣಿಗೆ ಕಾಣದಂತೆ… ಪರ್ಸಿನ ಅಂಚಲ್ಲಿ ಪುಳ್ಳಗೆ ಆಸೆ ಹುಟ್ಟಿಸುವ ನನ್ನ ಬ್ಲ್ಯಾಕ್ ಅಂಡ್ ವೈಟ್ ಫೋಟೋ ವಯಸ್ಸಿನ ಗುಟ್ಟು ಬಿಟ್ಟುಕೊಡುವ ಒಂದು ಅಪ್ಲಿಕೇಷನ್ನು ಕ್ಯಾಪಿಲ್ಲದ ಒಂದು ಪೆನ್ನು, ಮತ್ತೇನೇನಿತ್ತೋ ಇನ್ನೂ…

ಎಟಿಎಂ ಇಟ್ಟಿರಲಿಲ್ಲ ಸದ್ಯ! ಮುದುಡಿಟ್ಟಿದ್ದ ದಿನಸಿ ಚೀಟಿಯಲ್ಲಿ ಅಪ್ಪಟ ಗೃಹಿಣಿತನವಿತ್ತು ನನ್ನ ಹೂ ಮಗುವಿನ ಪಾಸ್ಪೋರ್ಟ್ ಫೋಟೋ ಕವರಿನಲ್ಲಿ ವಿವರಿಸಲಾರದ ಕಾಳಜಿಯಿತ್ತು ಮತ್ತು ಮತ್ತು ಅಲ್ಲಿ… ಅರ್ಧಬಂರ್ಧ ಗೀಚಿದ್ದ ಅವನ ಚಿತ್ರವಿತ್ತು ಯಾವುದೋ ಕನಸಿನ ನೀಲಿನಕಾಶೆ ಕಣ್ಣೀರ ಬೀಜಗಳಿದ್ದ ಚಿತ್ತಾರದ ಕರ್ಚೀಫು ಒಳಜಿಪ್ಪಿನ ಮೂಲೆಯಲ್ಲಿ ಉಳಿದ ಒಂಟೀ ಒಂಟಿ ಸದ್ದಾಗದ ಗೆಜ್ಜೆ!

ಮುಟ್ಟಿದರೆ ನನ್ನ ಅಂಗೈನಷ್ಟೇ ಬೆಚ್ಚಗಿರುತ್ತಿತ್ತು ಎದೆಗಾನಿಸಿ ಕೂರುವಷ್ಟು ಆಪ್ತವಾಗಿತ್ತು ಹಣೆಕೊಟ್ಟರೆ ಲಾಲಿಯ ನಿದ್ದೆ ತೂಗುತ್ತಿತ್ತು ನನ್ನ ಚಿಲ್ಲರೆ ಚಿಲ್ಲರೆ ತಲೆಹರಟೆಗಳ, ಸಿಟ್ಟು ಸೆಡವುಗಳ ಎದ್ದೂಬಿದ್ದು ಸಹಿಸಿಕೊಳ್ಳುತ್ತಿತ್ತು ನನ್ನ ಪರ್ಸು

ಹೆಂಗಸೊಬ್ಬಳ ಹುಡುಗಿತನದ ಪರ್ಸ್ ಜೀವಜಗತ್ತಿನ ಖಾಸಾ ಖಾಸಾ ವಿಸ್ಮಯದ ಪಳೆಯುಳಿಕೆ ಯುದ್ದ ಸನ್ನದ್ಧಳಂತೆ ಸದಾ ಧೈರ್ಯ ತುಂಬುತ್ತಿದ್ದ ಭಾವನೆಗಳ ಕಾಡತೂಸುಗಳ ಹೊತ್ತ ಯಾರು ಕೈ ಬಿಟ್ಟರೂ ಕೈ ಬಿಡದ ಪರ್ಸು… ಕಳೆದುಹೋಗಿದೆ, ಹೆಂಗಸೊಬ್ಬಳ ಹುಡುಗಿತನದ…

*

ಕಳುವಾದ ಸಂಗತಿಗಳು…

ಸದಾ ಮುತ್ತುಗಳೇ ಕಳೆಯುವುದಿಲ್ಲ ಒಮ್ಮೊಮ್ಮೆ ಕಳೆಯುತ್ತವೆ ಸವೆದಿಟ್ಟ ಹುಣಸೇಬೀಜ ಸೆಟ್ಟಾಟದ ಬಳೆಚೂರು ಕಳೆಯುತ್ತವೆ ಜತೆ… ಪುಟಾಣಿ ಹೆಜ್ಜೆ ಕಳೆದು ಹೋಗುತ್ತವೆ ಮೈಲಿಗೆಯಿಲ್ಲದ ನಗೆ ಮುಜುಗರವಿಲ್ಲದ ಅಳು

ಕಳೆಯುತ್ತವೆ ಕುಂಟೆಬಿಲ್ಲೆ ಮನೆ ಗಿರಿಗಿಟ್ಲೆ ಆಕಾಶ ಹೌದು ಕಳೆದೇಹೋಗುತ್ತಾಳೆ ರತ್ತೋ ರತ್ತೋ ಆಟದ ಬಸವಿ ಗೊಂಬೆ ಮದುವೆಯ ಮದುವಣಗಿತ್ತಿ

ಸದಾ ರೂಪಾಯಿಗಳೇ ಮುಗಿಯುವುದಿಲ್ಲ ಆಗಾಗ ಮುಗಿಯುತ್ತವೆ ಹಸಿರು… ನೀಲಿ ಗೋಲಿ ಶುಂಠಿ ಪೆಪ್ಪರ್ಮೆಂಟು ಮುಗಿಯುತ್ತವೆ ಚಿತ್ರ ಪುಸ್ತಕದ ಹಾಳೆ ದಿನಕ್ಕೊಂದು ಕತೆ ಮುಗಿದು ಹೋಗುತ್ತವೆ ಕರಾರಿಲ್ಲದ ಪ್ರೀತಿ ತಕರಾರಿಲ್ಲದ ಮುನಿಸು

*

ಅಮ್ಮ ಕೆತ್ತಿಕೊಟ್ಟ ಕನಸಿನ ಏಣಿ ಮತ್ತು ಗುಡ್ಡಾದ ಆಕಾಶ

ನೀಲೀ ಕ್ಯಾನ್ವಸ್ಸಿನ ಮೇಲೆ ಆಗಾಗ ರಂಗ್ಬಿರಂಗಿ, ರಂಗಿದ್ದೂ ಬೇರಂಗಿ ಎಂದೆಂದಿಂದ ಹಾಗೇ ಇದ್ದೂ ಈಗ ಎಂದಿನಂತಿಲ್ಲ; ಅಪ್ಪೀ… ಯಾಕೋ ಈ ಆಕಾಶಾನೂ ಗುಡ್ಡಾಯಿತಲ್ಲ..

ಅಮ್ಮ ಕೆತ್ತಿಕೊಟ್ಟದ್ದು ಕನಸಿನ ಏಣಿ ಸೂಜಿಮಲ್ಲೆ ಕನಕಾಂಬರಿ ಪಾರಿಜಾತ ಎಲ್ಲಾ ಕೊಟ್ಟ ಕನಸನು ಏರಿದವರೇ…

ಈಗ ಪೆಂಟ್ ಹೌಸಿನ ಮೂಲೆಯಲ್ಲಿ ಕ್ಲಾಸಿಕ್ ಮರಗಳು ಆಂಥೋರಿಯಂ ಜರ್ಬರಾ ಜತೆಗೆ ಫ್ಲೋರಲ್ ಪ್ರಿಂಟ್ ದುಪಟ್ಟಾದ ಪಾತರಗಿತ್ತಿಯೂ ಸೇರಿ ಮುಟ್ಟೇ ಹೊರಟವು ನಕ್ಷತ್ರ ಚಂದ್ರ ಬೆಳದಿಂಗಳು ಈಗ ಗುಡ್ಡನೆಯ ಆಕಾಶದಲ್ಲಿ ಯಾರಾದರೂ ಕದಿಯಬಹುದು ಈ ಹಗಲು ಈ ಇರುಳು..

ಅಮ್ಮನೇ ಕೆತ್ತಿಕೊಟ್ಟಿದ್ದು ಕನಸಿನ ಏಣಿ ಎತ್ತರ… ಎತ್ತರ… ಅಷ್ಟೆತ್ತರ ಸರೀ… ಆಕಾಶ ಕುಸಿದು ಕುಸಿದು ಮನೆಯ ಮಾಡಿಗೆ ಬಂದಾಗ ಕನಸುಗಳೂ ಕುಸೀತವಲ್ವೇನೋ ಅಪ್ಪಿ ಏಣಿಗಿಂತ ಕಿರಿದಾಯಿತು ಆಕಾಶ ತಂ ತಮಾಷಿಗಲ್ಲ ಸತ್ಯಕ್ಕೂ.. ಈ ಜಗದ ನೆತ್ತಿ ಈಗ ಗಟ್ಟಿಗಿಲ್ಲ

ಜಗತ್ ಹಿಂಗೇ ಅಪ್ಪಿ ಕೋಣೆಯ ಸೂರಿಗೇ ಬೇಕು ಆಕಾಶ ಒಪ್ಪವಾಗುತ್ತಿದೆ ಎಲ್ಲಾ ಆಕಾಶಾನೇ ಗುಡ್ಡಾಗಿದೆಯಲ್ಲ ಆದ್ರೆ.. ಚುಕ್ಕಿ ಚುಕ್ಕಿಯೇ ಅಲ್ಲ ಬೆಂಕಿಯುಂಡೆ ಆ… ಆ..ಕಾಶ ಮನುಷ್ಯನೆದೆಯಂತೆ ನಿರ್ವಾತ ಆ ನೀಲಿ; ಗಾಯವಿಲ್ಲದ ನೋವಿನ ಬಣ್ಣ ಈಗೇನು ಮಾಡುವುದು ಬಚಾವಿಗೆ

ನಾನೀಗ ಆಕಾಶದ ಕೆಳಗೆ ಕೂತು ಹೊಸದೊಂದು ಆಕಾಶ ನೇಯುತ್ತಿದ್ದೇನೆ

*

Avithakavithe HC Bhavya Naveen

ಭವ್ಯ ಅವರ ಮೊದಲ ಕವನ ಸಂಕಲನ

ಮುಟ್ಟಬೇಕಿತ್ತು..?

ಅವನು ಹೇಳಿದ್ದು ಸರಿ ಮುಟ್ಟಬೇಕಿತ್ತು ನರನರಗಳೂ ಆಗಾಗ ಅಪರಿಚಿತ ಸುಖ ಕೇಳುತ್ತವೆ ಆ ಸುಖಕ್ಕೆ ಹೆಸರಿಲ್ಲ, ಅನಾಮಿಕ

ಅವನು ಹೇಳಿದ್ದ ಗೆರೆ ಅಳಿದ ಮೇಲೆ ಬೇಕಾದರೆ ಎಳೆಯಬಹುದು ಸರಳ ರೇಖೆಯ ಈಚೆ ಬಂಧಿಯಾಗುವುದು ಪ್ರೇಮಗೇಡಿತನ

ಬದುಕುವುದಕ್ಕೆ ವಯಸ್ಸಾಗುವುದಿಲ್ಲ ಹುಡುಗಿ ನಿನ್ನ ತುಂಬುಗೆನ್ನೆ ಇಳಿಬಿದ್ದಾಗಲೂ ನೀನು ತುಂಬು ಹುಡುಗಿಯೇ ಅಂದಿದ್ದ ಇಳಿಸಂಜೆಗಳಲ್ಲಿ ನಗುವುದಕ್ಕೆ ಪ್ರೀತಿಸುವುದಕ್ಕೆ ಮುಜುಗರದಿಂದ ಮುತ್ತಿಟ್ಟು ಬೆಳ್ಳಿಕೂದಲ ನೇವರಿಸುವುದೂ ಅಡ್ಡಿ ಇಲ್ಲ ನನಗೆ.. ಆದರೆ, ಮುಟ್ಟಬೇಕಲ್ಲ ಎಲೆಯ ಎಳೇ ಹಸಿರನ್ನ ಮಿಡಿಗಾಯಿಗಳನ್ನ ಚಿಗುರು ಕೊಂಬೆಗಳ ಹುಷಾರಾಗಿ ಜೀಕಬೇಕಲ್ಲ ಅಂತಲೂ ಕೇಳಿದ್ದ

ಅವನು ಕಾಮನಬಿಲ್ಲಿಗೆ ಕಾಮನೆಗಳಿಲ್ಲ ಅಂದಿದ್ದ.. ಮೋಡಗಳ ಮುಟ್ಟಿ ಆಕಾಶಕ್ಕೆ ನಾಚಿಸಬೇಕು ಅಂದಿದ್ದ ಕತ್ತಲೆಯಲಿ ಬಣ್ಣವಿಲ್ಲ ಅಂತಿಲ್ಲ ಗುರುತಾಗಬೇಕಾದ ದರ್ದಿಲ್ಲ ನೀನು ಮತ್ತು ನೆರಳು ಪರಸ್ಪರ ಸಾಕಾಗುವುದಿಲ್ಲ ಸ್ಪರ್ಶಗಳ ದಕ್ಕಿಸಿಕೊಳ್ಳುವುದು ತಪಸ್ಸು ಅವನು ಹೀಗೆ ಏನೆಲ್ಲಾ ಹೇಳಿದ್ದ ಅಂಗೈ ತುಂಬಾ ಹೃದಯವಿರುವಾಗ ಯಾತನೆಗಳು ಮೈ ತುಂಬುತ್ತವೆ.. ಅವನು ಹೇಳಿದ್ದು ಸರಿ ಮುಟ್ಟಬೇಕಿತ್ತು

ಹಾಗಂತ ಮುಟ್ಟಲಾಗುವುದಿಲ್ಲ ಅನ್ನುವುದೂ ಕೆಡುಕೇನಲ್ಲ ಜೀವಂತಿಕೆಯಿಂದ ಒಲಿಸುವಾಗ ನಾನು ಪರವಶಳಾಗಿ ಕೇಳಿಸಿಕೊಳ್ಳುತ್ತೇನೆ

*

ಪರಿಚಯ : ಹೆಚ್.ಸಿ. ಭವ್ಯ ನವೀನ, ಹಾಸನದವರು. ‘ನಾನು ನಕ್ಷತ್ರ’ ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿತ ಕವನ ಸಂಕಲನ. ‘ಕನ್ನಡ ಇ-ಪತ್ರಿಕೆಗಳ ಅಧ್ಯಯನ’ ಕುರಿತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಫೆಲೋಶಿಪ್. ಸ್ಥಳೀಯ ಪತ್ರಿಕೆಯ ಸಾಪ್ತಾಹಿಕ ಮತ್ತು ವಿಶೇಷ ಸಂಚಿಕೆ ರೂಪಿಸುವುದು ಪ್ರೀತಿಯ ಕೆಲಸ. ಇದರ ಹೊರತಾಗಿ ಒಗ್ಗಿಸಿಕೊಂಡಿರುವ ಕತೆ, ಕವಿತೆಗಳೇ ಅವರ ಪರಿಚಯ.

ಇದನ್ನೂ ಓದಿ : Poetry : ಅವಿತಕವಿತೆ : ‘ಅವ್ವನ ಹರಿದ ಸೆರಗಿಗೆ ಅಂಟಿದ ಅನ್ನದ ಅಗುಳು ಹಂಚಿತಿಂದ ನೆನಪು’

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ