Poetry : ಅವಿತಕವಿತೆ : ‘ಅವ್ವನ ಹರಿದ ಸೆರಗಿಗೆ ಅಂಟಿದ ಅನ್ನದ ಅಗುಳು ಹಂಚಿತಿಂದ ನೆನಪು’

Poem : ‘ಕಾವ್ಯ ನನ್ನೊಳಗೆ ಬೆಂಕಿಯಾಗಿ ದಹಿಸುವ ಮತ್ತು ಪ್ರೇಯಸಿಯಾಗಿ ಮುದ್ದಿಸುವ ಭಾವವನ್ನು ಸೃಷ್ಟಿಸುತ್ತಾ ಅವಮಾನ, ಸೋಲು, ಅಸಹಾಯಕತೆ, ಅಭದ್ರತೆಯಲ್ಲಿ ನನ್ನೊಂದಿಗೆ ಹೆಜ್ಜೆಹಾಕುತ್ತಿರುವ ಆತ್ಮಬಂಧು ಎನಿಸುತ್ತದೆ. ಮನುಷ್ಯನ ಪಾದದ ಮುಮ್ಮುಖ ಚಲನೆ ಮತ್ತು ಚಿತ್ತದ ಹಿಮ್ಮುಖ ಚಲನೆಯಲ್ಲಿ ಅದು ಸೃಷ್ಟಿಸುವ ಅಸಮಾನತೆ, ಶೀಲ ಅಶ್ಲೀಲ ಪ್ರತಿಷ್ಠೆಯಲಿ ಪ್ರತಿನಿತ್ಯ ಕಾಡುವ ಸಂಗತಿಯನ್ನು ಧ್ಯಾನಿಸಿ ದಾಖಲಿಸಬಹುದು.’ ರಾಮಪ್ಪ ಕೋಟಿಹಾಳ

Poetry : ಅವಿತಕವಿತೆ : ‘ಅವ್ವನ ಹರಿದ ಸೆರಗಿಗೆ ಅಂಟಿದ ಅನ್ನದ ಅಗುಳು ಹಂಚಿತಿಂದ ನೆನಪು’
Follow us
|

Updated on:Nov 07, 2021 | 7:37 AM

Kannada Poetry : ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಹೂವಿನಹಡಗಲಿಯ ಉತ್ತಂಗಿಯಲ್ಲಿ ಶಿಕ್ಷಕರಾಗಿರುವ ಕವಿ ರಾಮಪ್ಪ ಕೋಟಿಹಾಳ ಅವರು ಎರಡನೇ ಕವನ ಸಂಕಲನ ‘ಮಣ್ಣಿನ ಮುಖ’ ಸಿದ್ಧಪಡಿಸಿಕೊಂಡಿರುವ ಈ ಹೊತ್ತಿನಲ್ಲಿ ಕೆಲ ಕವಿತೆಗಳು ನಿಮ್ಮ ಓದಿಗೆ. 

*

ಗೆಳೆಯ ರಾಮಪ್ಪನ ಮೊದಲ ಸಂಕಲನ ‘ಕೆರ ಹೊತ್ತ ಬಸವ’‌ 2005ರ ಸುಮಾರಿಗೆ ಒಂದು ಸಣ್ಣ ಸಂಚಲನ ಸೃಷ್ಟಿಸಿತ್ತು. ಆಗ ಹೂವಿನ ಹಡಗಲಿ ತಾಲೂಕಿನ ಅಂಚಿನಲ್ಲಿರುವ ತುಂಗಭದ್ರಾ ನದಿ ದಂಡೆಮೇಲಿನ ಕೋಟಿಹಾಳ್ ಎಂಬ ಕುಗ್ರಾಮದ‌ ಒಟ್ಟು 50 ಮನೆಗಳಲ್ಲಿ 46 ಮನೆಗಳು ಜಂಗಮರವಾದರೆ 2 ಪರಿಶಿಷ್ಟ ಪಂಗಡ ಮತ್ತು ಒಂದು ಕುರುಬ ಜನಾಂಗಕ್ಕೆ ಸೇರಿದ್ದವು. ಉಳಿದೊಂದು ಮನೆ ದಲಿತ ಸಮುದಾಯಕ್ಕೆ ಸೇರಿದ ರಾಮಪ್ಪನವರದು. ಈ ಪುಸ್ತಕ ಪ್ರಕಟವಾದ ನಂತರ ಶೀರ್ಷಿಕೆಯ ಕಾರಣಕ್ಕೆ ಈ ಕುಟುಂಬ ಊರವರಿಂದ ಪ್ರಾಣಬೆದರಿಕೆಯಿಂದ ಹಿಡಿದು ಬಹಳ ಉಪಟಳ ಅನುಭವಿಸಬೇಕಾಯಿತು. ಅಲ್ಲದೆ, ಈ ಪುಸ್ತಕ ಪ್ರಕಟವಾದದ್ದಕ್ಕೆ ಅಂತಹ ಪ್ರೋತ್ಸಾಹವೂ ಮನೆಯವರಿಂದ ಇರಲಿಲ್ಲ. ‘ಸಾಲಿ ಕಲಿತೆನ ಅಂದ್ರೆ… ಮತ್ತೇನ್ ದಾಳಿ ತಂದಿಟ್ನಪ್ಪ ನನ್ ಮಗ!’ ಅಂತ ರಾಮಪ್ಪನ‌ ತಂದೆ ತಾಯಿ‌ ಆತಂಕಿತರಾಗಿದ್ದರು. ಏಕೆಂದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ‘ಬಸವಣ್ಣಪ್ಪಗ ಕೆರವು ಹೊರಸ್ತಿಯೇನ್ಲೇ…’ ಅಂತ ನಡುದಾರಿಯಲ್ಲಿ ನಿಲ್ಲಿಸಿ ಜಗಳ ತೆಗೆದದ್ದು, ಗುಡುಸ್ಲಿ‌ ಮುಂದ ನಿಂತ್ ಬಾಯಿಗ್ ಬಂದಂಗ ಬೈದಾಡಿ ಹೋಗಿದ್ದು ಆಗ‌ ತಾನೆ ಪರಿಚಯವಾಗಿದ್ದ ನನ್ನ ಮುಂದೆ ತನ್ನನ್ನೇ ತಾನು ಗೇಲಿ ಮಾಡಿಕೊಳ್ಳುವ ಅಸಹಾಯಕ ಧಾಟಿಯಲ್ಲಿ ಹೇಳಿಕೊಂಡಿದ್ದ. ರಾಮಪ್ಪನ‌ ಮಗ್ಧತೆ ಹುಂಬತನ‌ ನನಗೀಗಲೂ ನೆನಪಿದೆ. ನಮ್ಮ ಸಭ್ಯ ನಾಗರಿಕ ಸಮಾಜ ನಂಬಲು ಸಾಧ್ಯವೇ ಇಲ್ಲದಂತಹ ಆತನ‌ ಬದುಕಿನ‌ ಕೆಲವು ಕರಾಳ ಘಟನೆಗಳನ್ನು ನನ್ನ ‌ಮುಂದೆ ಹೇಳಿಕೊಂಡಾಗ ನಾನು ಅಕ್ಷರಶಃ ಥಂಡಾ ಹೊಡೆದು ಹೋದೆ. ಅವೇನಾದರೂ ಪುಸ್ತಕರೂಪದಲ್ಲಿ ಬರಬಹುದಾದರೆ ಮರಾಠಿ ಆತ್ಮಕಥೆಗಳಿಗೆ ಸರಿಮಿಗಿಲಾದ ಅದ್ಭುತ ಅನುಭವ ಕಥನ ಕನ್ನಡಕ್ಕೆ ದಕ್ಕುವುದರಲ್ಲಿ ನನಗೆ ಯಾವುದೇ ಸಂಶಯವಿಲ್ಲ. ಈಗಲೂ ಒತ್ತಾಯ ಮುಂದುವರೆದಿದೆ; ಆತ ಮನಸು‌ ಮಾಡ‌ಬೇಕಷ್ಟೆ!

ಈಗ ನೋಡಿದರೆ ಇಂತಹ ಗೆಳೆಯ ‘ಮಣ್ಣಿನ ಮುಖ’ ಎಂಬ ಹೆಸರಿನಲ್ಲಿ ಮತ್ತೊಂದು ಕವಿತೆಯ ಕಟ್ಟು ಸಜ್ಜು ಮಾಡಿಕೊಂಡು ನಿಂತಿದ್ದಾನೆ. ಏನು‌ ಹೇಳಲಿ, ಯಾವ ಧೈರ್ಯ ನೀಡಲಿ? ನಾವು ನಿಜಕ್ಕೂ ಮತ್ತೊಮ್ಮೆ ಸಾಹಿತ್ಯವನ್ನು ಅಳೆಯುವ ಮಾನದಂಡಗಳನ್ನು ಬದಲಾಯಿಸಿಕೊಳ್ಳಲೇಬೇಕಾದ ಸಂದಿಗ್ಧತೆಯ ಕಾಲದಲ್ಲಿದ್ದೇವೆ ಅನಿಸುತ್ತದೆ. ಗೆಳೆಯನಿಗೆ ಶುಭವಾಗಲಿ. ಯಾವ ವಿಮರ್ಶೆಯ ವಕಾಲತ್ತು ಇಲ್ಲದೆ ಕವಿತೆಗಳೇ ಎಲ್ಲವನೂ ಮಾತಾಡುತ್ತಿವೆ. ಹಸಿವು ಮತ್ತು ಅವಮಾನವನ್ನು ಜತನವಾಗಿ ಉಳಿಸಿಕೊಂಡು ಬರುವ ‘ಬಡವರ ನಗುವಿನ ಶಕ್ತಿ’ ಗೆ ನನ್ನ ನಮನಗಳು. ‌‌ಆರಿಫ್ ರಾಜಾ, ಕವಿ

ರಾಮಪ್ಪ ಕೋಟಿಹಾಳ ಅವರದು ಅಪ್ಪಟ ದಲಿತ ದನಿ. ದಲಿತ ಬದುಕಿನ ವಿವಿಧ ಅನುಭವಗಳೇ ಹರಳುಗಟ್ಟಿ ಕವಿತೆಗಳಾಗಿ ಹೊಮ್ಮುತ್ತವೆ. ತುಳಿತಕ್ಕೊಳಗಾದವರ ಪರವಾಗಿ ಇವರು ಎತ್ತುವ ದನಿಯಲ್ಲಿ ಸ್ಪಷ್ಟತೆ ಇದೆ ಸೂಕ್ಷ್ಮತೆಯೂ ಇದೆ. ಅಡಿಗಲ್ಲಿನಲ್ಲಿ ಅಡಗಿದ ಕವಿತೆಯ ಆತ್ಮ ಓದುತ್ತಾ ಹೋದಂತೆ ಕಾಡಲು ಶುರುಮಾಡುತ್ತದೆ. ಒಟ್ಟಾರೆಯಾಗಿ ದಮನಿತ ಬದುಕಿನ ದನಿಯ ಅನಾವರಣ ವೈವಿಧ್ಯಮಯವಾಗಿ, ಪ್ರಯೋಗಶೀಲತೆಯಿಂದ ಕೂಡಿದೆ. ಎಚ್. ಶೇಷಗಿರಿರಾವ್, ಲೇಖಕರು

*

ಆ ಕೈಗಳು

ಆ ಕೈಗಳು ತೆರೆದ ಅಂಗೈಗಳು

ಕಪ್ಪು ಬಣ್ಣದಲೆ ಅದ್ದಿದಂತವು ಕಲ್ಲು ಮುಳ್ಳುಗಳಲಿ ಸಿಕ್ಕು ಮಾಸಿದ ಗೆರೆಗಳು ಸಪೂರ ದೇಹದ ಈ ಕೈಗಳು ಆಕಾಶವನು ಬಳಸಿ ಬಂದಿವೆ ಹಕ್ಕಿಯ ಒಲವು ಚುಕ್ಕಿಯ ಬೆರಗು ಈ ಕಪ್ಪು ಕೈಗಳು ಸೂರ್ಯನ ಸವರಿ ಬಂದಿವೆ ಚಂದ್ರನಲಿ ಕಲೆಯಾಗಿ ನಿಂತಿವೆ.

* ಎಲ್ಲರ ನೋವ ಹೊರುವ ಕತ್ತಲ ಹಕ್ಕಿಗಳು

ಒಂದು ಊರು ಒಂದು ಕೇರಿ ಒಂದು ಭಾಷೆ ಅಥವಾ ಒಂದು ಮಳ ಭೂಮಿ ಇಲ್ಲದೆ ಸ್ಮಶಾನಹೊತ್ತು ತಿರುಗುವ ಕತ್ತಲ ಹಕ್ಕಿಗಳು ಎಲ್ಲರ ನೋವ ಎದೆ ಮೇಲೆ ಹೊರುವ ಹೊಲೆಮಾದಿಗರು

ಕತ್ತಲಲಿ ನೋವಿನ ರೆಕ್ಕೆ ಹರಡಿ ನಿದ್ದೆಹೋಗುವ ಹಕ್ಕಿಗಳು ನಗರದ ಬಸ್​ಸ್ಟ್ಯಾಂಡ್​, ಗಲ್ಲಿ, ಕಸದತೊಟ್ಟಿ, ಸ್ಮಶಾನಗಳಲಿ ಅನ್ನ ಹುಡುಕುತ್ತಾ ಸೂರ್ಯನಿಗೆ ಎದುರಾಗಿ ನಿಲ್ಲಬಲ್ಲವು

ಮಲದ ಗುಂಡಿಗೆ ಬಿದ್ದು ಪ್ರತಿ ದಿನ ಪ್ರಾಣ ಬಿಡುವ ಚರಂಡಿ, ಚನಿವಾರಗಳಲಿ ಮನೆ ಮಾಡಿ ತಮ್ಮದೇ ತೊಗಲು ಸುಲಿದು ಕೆರಮಾಡಿ ಕೊಟ್ಟು ಪಾದ ಕಾಪಾಡುವ ಕಪ್ಪು ತೋಗಲಿನ ಹಕ್ಕಿಗಳು

ಒದ್ದ ನಿಮ್ಮ ಪಾದಗಳನು ಮುದ್ದಿಸುವ ವನವಾಸದಲ್ಲಿ ರಾಮಚಂದ್ರನ ಜೋತೆಯಾಗಿದ್ದ ನೆಲದ ಚುಕ್ಕಿಗಳು

ಕಾಡುಬೆಕ್ಕೊಂದು ಬಳಲಿ ಬೆಳಕಿಗೆ ಕಣ್ಣು ಬಿಟ್ಟಂತೆ ನಕ್ಕವರೊಂದಿಗೆ ನಗುತ್ತವೆ ಅತ್ತವರೊಂದಿಗೆ ಅಳುತ್ತವೆ ಪ್ರತಿರಾತ್ರಿ ಉರಿವ ಕನಸಿನೊಂದಿಗೆ ಬದುಕುತ್ತವೆ

ಹಸಿವಿನ ಹುತ್ತದಲಿ ಕುಳಿತು ಚಾವಂಗಿ ಆಡುತ್ತವೆ ಹಾರಾಡುತ್ತವೆ ಮಂತ್ರಿ ಮಹಾರಾಜರ ಹಾಡ ಹಾಡುತ್ತವೆ ಮೌನವಾಗಿ ನಿಟ್ಟುಸಿರ ಬಿಡುವ ನಿಮ್ಮ ಕಣ್ಣಕಿಡಿಯಿಲಿ ಸಣ್ಣಕಿಂಡಿ ಹುಡುಕುತ್ತವೆ

ಸುತ್ತಲೂ ಹಸಿವಿನ ಹೊತ್ತ ಹಕ್ಕಿಗಳು ನೀಲಿ ಬೆಳಕಲಿ ಹಾರಾಡುತ್ತಾ ಅರಿವಿನ ಉರಿಯಲಿ ಮುಳಿಗೇಳುತ್ತವೆ ಹಸಿವಿನ ಕಣಿವೆಯಲಿ ಮನೆಮಾಡಿವೆ

*

AvithaKavithe Ramappa Kotihal

ಕೈಬಹದೊಂದಿಗೆ ರಾಮಪ್ಪ ಕೋಟಿಹಾಳ

ಕಾವ್ಯ ನನ್ನೊಳಗೆ ಬೆಂಕಿಯಾಗಿ ದಹಿಸುವ ಮತ್ತು ಪ್ರೇಯಸಿಯಾಗಿ ಮುದ್ದಿಸುವ ಭಾವವನ್ನು ಸೃಷ್ಟಿಸುತ್ತಾ ಅವಮಾನ, ಸೋಲು, ಅಸಹಾಯಕತೆ, ಅಭದ್ರತೆಯಲ್ಲಿ ನನ್ನೊಂದಿಗೆ ಹೆಜ್ಜೆಹಾಕುತ್ತಿರುವ ಆತ್ಮಬಂಧು ಎನಿಸುತ್ತದೆ. ಮನುಷ್ಯನ ಪಾದದ ಮುಮ್ಮುಖ ಚಲನೆ ಮತ್ತು ಚಿತ್ತದ ಹಿಮ್ಮುಖ ಚಲನೆಯಲ್ಲಿ ಅದು ಸೃಷ್ಟಿಸುವ ಅಸಮಾನತೆ, ಶೀಲ ಅಶ್ಲೀಲ ಪ್ರತಿಷ್ಠೆಯಲಿ ಪ್ರತಿನಿತ್ಯ ಕಾಡುವ ಸಂಗತಿಯನ್ನು ಧ್ಯಾನಿಸಿ ದಾಖಲಿಸಬಹುದು.

ಹೆಜ್ಜೆಗಳು

ಸೂರ್ಯ ಅಡಗುವ ಮುನ್ನ ದೀಪ ಹಿಡಿದು ಅವಳ ಮನೆ ಅಂಗಳದಲಿ ಉರಿದೆ

ಅವಳ ಮುಂಗುರುಳು ಎದೆಗೆ ತಾಕಿ ಕಣ್ಣಲ್ಲಿ ಕಲ್ಲುಸಕ್ಕರೆ ಕರಗುತಿದೆ

ಪಂಚಾಂಗ ತರಬೇತಿಯಲಿ ಕಾಗೆ ತನ್ನ ಬಣ್ಣ ಬದಲಾಯಿಸಲು ಹೋಗಿ ರೆಕ್ಕೆ ಸುಟ್ಟುಕೊಂಡಿತು. ಹಸಿವು ತಾಳದೆ ಅಂಗೈ ಮಾಂಸ ತಿನ್ನಲು ಬರುತಿದೆ

*

ನಕ್ಷತ್ರ

ಒಂದು ನಕ್ಷತ್ರ ಇನ್ನಿಲ್ಲದಂತೆ ಕಾಡುತ್ತದೆ

ಬೇಸಿಗೆಯಲಿ ಅಂಗಳದಲಿ ಅಮ್ಮ ತೋರಿದ ನಕ್ಷತ್ರ

ಗುಮ್ಮನಿಗೆ ಹೆದರದೆ ನಿಂತಾಗ ಅಕ್ಕ ತೋರಿಸಿದ ನಕ್ಷತ್ರ

ತರಗತಿ ಶಿಕ್ಷಕರು ಪ್ರಯೋಗಾಲಯಕ್ಕೆ ಹಿಡಿದು ತಂದ ನಕ್ಷತ್ರ

ಮಾವ ಕುಡಿದು ಬಂದಾಗ ನಗುವ ನಕ್ಷತ್ರ

ಅವ್ವ ರೊಟ್ಟಿಸುಟ್ಟು ಹಿಟ್ಟನಿಟ್ಟು ಮಕ್ಕಳ ಮಲಗು ಪರಿ ನೋಡುವ ನಕ್ಷತ್ರ

ದಣಿಗಳಹೊಲದಲಿ ಅಪ್ಪನ ಜೀತದ ಕಾಲ ಸೂಚಕ ನಕ್ಷತ್ರ

ನಕ್ಷತ್ರವೊಂದು ಪ್ರತಿನಿತ್ಯ ಕಾಡೇ ಕಾಡುತ್ತದೆ

* ಅವರು ಬಂದರು

ಅವರು ಮೌನದ ಗೋಡೆಯ ಒಡೆದು ಬಂದವರು ಮಾತಿನ ಪಲ್ಲಂಗದಲಿ ಕುಂತು ಎದ್ದವರು

ಆ ಕತ್ತಲು ರಾತ್ರಿ ಕುತ್ತಿಗೆಗೆ ಕೈ ಹಾಕಿದರು ಬಿಡಿಸಲು ಹೋದಷ್ಟು ಹಿಚುಕಿದರು ಕತ್ತಲ ಮುಖಕೆ ಗುರುತಿಲ್ಲ ಧ್ವನಿ ಪರಿಚಯವಿಲ್ಲ

ಬೆವರೊಡೆದು ನೀರಡಿಸಿ ಕಣ್ಣು ಬೆಳ್ಳಗಾಯಿತು ಗಂಟಲು ಬಿಗಿತ ಹೆಚ್ಚುತ್ತಾ ಹೊಯಿತು ಕಸುವನ್ನೆಲ್ಲ ಮುಷ್ಠಿಮಾಡಿ ಜಿಗಿದೆ ಹಿಂದೆ ನೋಡದೆ ಓಡಿದೆ ಪ್ರತಿ ನಿತ್ಯ ನನ್ನ ಸುತ್ತಲೇ ಸುತ್ತುವ ಮುಖಗಳು ಆ ಮುಖಗಳೇ ಎನಿಸುತ್ತವೆ ಒಂದು ದಿನವೂ ನನ್ನ ಮುಟ್ಟಲಿಲ್ಲ ಇನ್ನೂ ಮಾತಾಡಿಸಿಯೂ ಇಲ್ಲ *

AvithKavithe Ramappa Kotihal

ರಾಮಪ್ಪ ಅವರ ಮೊದಲ ಕವನ ಸಂಕಲನ

ಮಣ್ಣ ಪರಿಮಳ

1. ಹಸಿದಾಗ ಚಂದ್ರರೊಟ್ಟಿಯಾಗಿ ಅಣಕಿಸುತ್ತಾನೆ ಚುಕ್ಕೆಗಳು ಅನ್ನದಗಳಾಗಿ ಕೆಣಕುತ್ತವೆ

2 ಹಸಿವು ಮನುಷ್ಯನ ಮನಸ್ಸನ್ನು ಬೆಸೆಯಬಲ್ಲದು

3. ಹಸಿವು ಕತ್ತಲಲ್ಲಿ ಸೆರಗುಹಾಸಿ ಬೆತ್ತಲು ಬೆವರು ಹರಿಸಿ ಜೀತಕ್ಕಿರುವ ಅನನ್ಯತೆ

4. ಗಡಿಗೆಯ ಹಿಟ್ಟಿನೊಂದಿಗೆ ಕನಸು ಹುಟ್ಟಿ ಗೌಡರ ಹೊಲದಲಿ ನೆತ್ತರ ನೆಲ್ಲಿಕಾಯಿಗೆ ಬಾಯಿಹಾಕಿದಾಗ ಮೈಯೆಲ್ಲ ಉರಿ

5. ಹಸಿವಿನ ಚರಿತ್ರೆ ಹೊಟ್ಟೆಯಲಿ ಕುದಿಯುವಾಗ ಬೆಳ್ಳಿ ಬಂಗಾರವ ಬಳ್ಳದಲಿ ಅಳೆಯುವುದನ್ನು ಮೇಷ್ಟ್ರು ಹೇಳುತ್ತಿದ್ದರು

6. ಊರ ಹಬ್ಬಕೆ ಅಪ್ಪನೆ ಕುರಿ ಎಂದು ತಿಳಿದಾಗ ನೀರದಾರಿಯಲಿ ಇಟ್ಟ ಆಯುಧಗಳು ಕಣ್ಣೀರು ಹಾಕುತ್ತಿದ್ದವು

7. ಕಾಲು ಹಿಡಿದು ಪಾವು ಕಾಳು ತಂದ ದಿನ ನಕ್ಷತ್ರಗಳು ಕಳಾ ಹೀನವಾಗಿ ಗ್ರಹ ತಾರೆ ನಿಲ್ಲದೆ ಓಡಿದವು

8. ಮೈಕೈ ಮುಳ್ಳುಗಳಾಗಿ ತುತ್ತು ಅನ್ನ ದಕ್ಕದಿದ್ದಾಗ ಅಪ್ಪ ನಾವು ಹಸಿವಿಗೆ ಹುಲ್ಲು ತಿನ್ನುವಂತಿದ್ದರೆ ಚನ್ನಾಗಿರುತ್ತಿತ್ತೆಂದು ನಗುತಿದ್ದ.

9. ಆನೆಯಂತಹ ಅವ್ವ ಕೋಲಿನಂತಾಗಿ ಹುಂಚಿ ಚಿಗುರು ತಿನ್ನುತ್ತಿರಲು ಹಿಂದಿನ ಜನ್ಮದಲಿ ಜಿರಾಫೆ ಆಗಿದ್ದಳೇನೋ ಎನಿಸುತಿತ್ತು.

10. ಉಪ್ಪು ಹೊತ್ತ ಕಡಲು ಹಸಿವು ಹೊತ್ತ ಒಡಲು ತುಂಬ ವಿಶಾಲ

11. ಸೂರ್ಯ ಚಂದ್ರರನು ಹುರಿದು ಸಾರು ಮಾಡಿದ ಅವ್ವ ಉಣ್ಣದೆ ಮಲಗಿದಳು

12. ಒಬ್ಬಂಟಿ ಹುಡುಗಿ ಊರ ಮುಂದಿನ ವನವಾದಳು ವನಹೊಕ್ಕು ಬಂದವರೆಲ್ಲ ಒಡೆಯರಾದರು

* ಪರಿಚಯ : ರಾಮಪ್ಪ ಕೋಟಿಹಾಳ (ಮಾದರ) ಅವರ ಹುಟ್ಟೂರು ಹೂವಿನಹಡಗಲಿ ತಾಲೂಕಿನ ಕೋಟಿಹಾಳ. ಉತ್ತಂಗಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿರುವ ಇವರ ಮೊದಲ ಕವನ ಸಂಕಲನ ‘ಕೆರಹೊತ್ತ ಬಸವ’. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ‘ಎಸ್. ಎಸ್. ಹಿರೇಮಠರ ಸಂಶೋಧನೆಯಲ್ಲಿ ದಲಿತ ಸಂಸ್ಕೃತಿ ಚಿಂತನೆಯ ಸ್ವರೂಪ’ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : Poetry : ಅವಿತಕವಿತೆ ; ‘ನೀ ಮಾಡಿದ್ದೇನು, ದುಡಿದು ತಂದಿದ್ದೇನು, ಮಾಡಿಟ್ಟ ಆಸ್ತಿಯೇನು?’

Published On - 7:09 am, Sun, 7 November 21

ತಾಜಾ ಸುದ್ದಿ
ರಮ್ಯಾ ಬದಲು ರಚಿತಾ: ಪ್ರೇಕ್ಷಕರು ಒಪ್ಪಿಕೊಳ್ತಾರಾ? ನಾಗಶೇಖರ್ ಹೇಳಿದ್ದಿಷ್ಟು
ರಮ್ಯಾ ಬದಲು ರಚಿತಾ: ಪ್ರೇಕ್ಷಕರು ಒಪ್ಪಿಕೊಳ್ತಾರಾ? ನಾಗಶೇಖರ್ ಹೇಳಿದ್ದಿಷ್ಟು
ವಾಲ್ಮೀಕಿ ನಿಗಮ ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಶಿಕ್ಷೆ ನಿಶ್ಚಿತ: ಸಿಎಂ
ವಾಲ್ಮೀಕಿ ನಿಗಮ ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಶಿಕ್ಷೆ ನಿಶ್ಚಿತ: ಸಿಎಂ
ಉಡುಪಿ ಜಿಲ್ಲೆ ಮೇಲೆ ಕರುಣೆ ತೋರದ ವರುಣದೇವ, ತಗ್ಗು ಪ್ರದೇಶಗಳು ಜಲಾವೃತ!
ಉಡುಪಿ ಜಿಲ್ಲೆ ಮೇಲೆ ಕರುಣೆ ತೋರದ ವರುಣದೇವ, ತಗ್ಗು ಪ್ರದೇಶಗಳು ಜಲಾವೃತ!
ಆ ಘಟನೆಗಳ ಬಗ್ಗೆ ಕೇಳಿದ್ದಕ್ಕೆ ಕೈ ಮುಗಿದ ನಿರ್ದೇಶಕ ನಾಗಶೇಖರ್​
ಆ ಘಟನೆಗಳ ಬಗ್ಗೆ ಕೇಳಿದ್ದಕ್ಕೆ ಕೈ ಮುಗಿದ ನಿರ್ದೇಶಕ ನಾಗಶೇಖರ್​
ಬಿಜೆಪಿ ಸರ್ಕಾರದ ಹಗರಣಗಳನ್ನು ತನಿಖೆ ಮಾಡಿಸುವುದು ನಿಜವೇ ಇಲ್ಲ ಬಟ್ಟೆ ಹಾವೇ?
ಬಿಜೆಪಿ ಸರ್ಕಾರದ ಹಗರಣಗಳನ್ನು ತನಿಖೆ ಮಾಡಿಸುವುದು ನಿಜವೇ ಇಲ್ಲ ಬಟ್ಟೆ ಹಾವೇ?
ಬೆಂಗಳೂರಿನಿಂದ ತೆರಳಬೇಕಿದ್ದ 21 ಇಂಡಿಗೋ ವಿಮಾನಗಳು ರದ್ದು: ಪ್ರಯಾಣಿಕರು ಗರಂ
ಬೆಂಗಳೂರಿನಿಂದ ತೆರಳಬೇಕಿದ್ದ 21 ಇಂಡಿಗೋ ವಿಮಾನಗಳು ರದ್ದು: ಪ್ರಯಾಣಿಕರು ಗರಂ
ಬಿಜೆಪಿ ಅಧಿಕಾರದಲ್ಲಿದ್ದಾಗ ಬಾರದ ಈಡಿ ಈಗ್ಯಾಕೆ ಬಂದಿದೆ ಎಂದ ಸಿದ್ದರಾಮಯ್ಯ
ಬಿಜೆಪಿ ಅಧಿಕಾರದಲ್ಲಿದ್ದಾಗ ಬಾರದ ಈಡಿ ಈಗ್ಯಾಕೆ ಬಂದಿದೆ ಎಂದ ಸಿದ್ದರಾಮಯ್ಯ
ಯಾವ ಪರುಷಾರ್ಥಕ್ಕಾಗಿ ಅಧಿವೇಶನ ನಡೆಸಲಾಗುತ್ತಿದೆ ಅಂತ ಅರ್ಥವಾಗುತ್ತಿಲ್ಲ!
ಯಾವ ಪರುಷಾರ್ಥಕ್ಕಾಗಿ ಅಧಿವೇಶನ ನಡೆಸಲಾಗುತ್ತಿದೆ ಅಂತ ಅರ್ಥವಾಗುತ್ತಿಲ್ಲ!
ವಾಲ್ಮೀಕಿ ಹಗರಣ: ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿ ನೇರಪ್ರಸಾರ
ವಾಲ್ಮೀಕಿ ಹಗರಣ: ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿ ನೇರಪ್ರಸಾರ
ಜೈಲಲ್ಲಿ ಇಬ್ಬರು ದರ್ಶನ್​ಗಳ ಸಮಾಗಮ-ದರ್ಶನ್ ಪುಟ್ಟಣ್ಣಯ್ಯ ಮೀಟ್ಸ್ ದರ್ಶನ್
ಜೈಲಲ್ಲಿ ಇಬ್ಬರು ದರ್ಶನ್​ಗಳ ಸಮಾಗಮ-ದರ್ಶನ್ ಪುಟ್ಟಣ್ಣಯ್ಯ ಮೀಟ್ಸ್ ದರ್ಶನ್