Poetry : ಅವಿತಕವಿತೆ ; ‘ಅವಳ ಕೇರಿಯಲ್ಲಿ ಸೇಫ್ಟಿಪಿನ್ನು ಮಾರುವ ಒಂದು ಅಂಗಡಿಯನ್ನಾದರೂ ತೆರೆಯಿರಿ!’
Poem : ‘ನನ್ನ ಪ್ರಕಾರ ಕವಿತೆ ಒಗಟಂತೂ ಅಲ್ಲವೇ ಅಲ್ಲ. ಕ್ಲಿಷ್ಟ ಅರ್ಥವಲಯಗಳನ್ನು ಹೊಂದಿದ್ದರೂ ಓದಿನ ಅನುಭವ ಕೊಡದ ಕವಿತೆಗಳಿಗಿಂತ ಸರಳವಾಗಿದ್ದರೂ ಅದರ ಹಿಂದೆ, ಅರ್ಥವಲಯಗಳನ್ನು ಹೊಂದಿರುವ ಕವಿತೆಗಳನ್ನು ನಾನು ಇಷ್ಟಪಡುತ್ತೇನೆ. ಪ್ರತಿ ಕವಿತೆಗೆ ಸಾಮಾಜಿಕ ಜವಾಬ್ದಾರಿ ಇರಬೇಕು ಎಂದು ಅಭಿಪ್ರಾಯ ಪಡುವವನು ನಾನು.’ ವಿಲ್ಸನ್ ಕಟೀಲ್
Kannada Poetry : ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಕೊಂಕಣಿ ಮತ್ತು ಕನ್ನಡದ ಕವಿ ವಿಲ್ಸನ್ ಕಟೀಲ್ ಅವರ ಕೆಲ ಕವಿತೆಗಳು ನಿಮ್ಮ ಓದಿಗೆ.
*
ಜೀವಪರವಾದ ಆಲೋಚನೆಗಳೊಂದಿಗೆ ಸ್ಪಷ್ಟವಾಗಿ ಅನುಭವವನ್ನು ಮಂಡಿಸುವ ವಿಲ್ಸನ್ ಕಟೀಲ್ ಹೊಸ ತಲೆಮಾರಿನ ಕೊಂಕಣಿ ಕವಿ. ಈಗ ಕನ್ನಡದ ಕವಿಯೂ ಹೌದು. ಇವರು ಕಾವ್ಯಾನುಭವವನ್ನು ಫ್ಯಾಂಟಸಿಯೊಂದಿಗೆ ಬೆರೆಸಿ ಕವಿತೆ ಮಾಡುತ್ತಾರೆ. ಹರಿತ ಶೈಲಿ, ತಾಜಾತನ ಇಲ್ಲಿನ ಕವಿತೆಗಳಲ್ಲಿ ಮುಟ್ಟಿ ಅನುಭವಿಸಬಹುದಾದ ಸಾಮಾನ್ಯ ಗುಣಗಳು. ‘ಕಾವ್ಯದ ಜೀವಂತಿಕೆ’ ಹಾಗಂದರೇನು ತಿಳಿಯಬಯಸುವವರು ಇವರ ರಚನೆಗಳನ್ನೊಮ್ಮೆ ಓದಿ ನೋಡಬೇಕು. ಒಣ ಶಬ್ದ, ವಾಕ್ಯ, ವಿವರಗಳಲ್ಲಿ ಸೊಕ್ಕಿ ಹೋಗಿರುವ ಕವಿ-ಓದುಗರಿಗೆ ಮುಕ್ತಿ ನೀಡಬಲ್ಲ ನಮ್ಮ ಕೆಲವೇ ಕೆಲವು ಸಮಕಾಲೀನರಲ್ಲಿ ವಿಲ್ಸನ್ ಕಟೀಲ್ ಒಬ್ಬರು. ಅದೇ ಹಳೆಯ ಮಾತಿನಲ್ಲಿ ಹೇಳುವುದಾದರೆ, ಆಕೃತಿಯಲ್ಲಿ ಹಳಬನಾಗಿ ಆಶಯದಲ್ಲಿ ಹೊಸಬನಾಗಿರುವ ಇವತ್ತಿನ ಕವಿ ಎದುರಿಸುವ ಬಿಕ್ಕಟ್ಟು ಭಾವದ್ದಲ್ಲ; ಅ-ಭಾವದ್ದು! ಕಾವ್ಯದ ಶರೀರದಲ್ಲೇ ಅಂತರ್ಗತವಾಗಿರುವ ಕಥನದ ಆಕರ್ಷಣೆ ವಿಲ್ಸನ್ ಕಟೀಲ್ ಕವಿತೆಗಳ ಯಶಸ್ಸಿನ ಗುಟ್ಟೂ ಹೌದು. ಆರಿಫ್ ರಾಜಾ, ಕವಿ
ಅದೆಷ್ಟು ಹೊಸತನದಿಂದ ನಳನಳಿಸುತ್ತವೆ ವಿಲ್ಸನ್ ಅವರ ಕವಿತೆಗಳು! ತಾಜಾ ಎನಿಸುವ ಇಮೇಜುಗಳ ಸೃಷ್ಟಿ, ಬದುಕನ್ನು ಅರ್ಥಮಾಡಿಸುವ ಭಿನ್ನ ಗ್ರಹಿಕೆಯ ದಾರಿ, ಸಂಯಮದಿಂದ ಭಾಷೆಯನ್ನು ಬಳಸುವ ಔಚಿತ್ಯಪ್ರಜ್ಞೆ ಮತ್ತು ಸಲೀಸಾಗಿ ಭಾವಕ್ಕೆ ತಕ್ಕಂಥ ಪದಬಳಕೆಯ ಜಾಣ್ಮೆ, ಸಾಮಾನ್ಯವಾದ ಜಾಡಿನಿಂದ ಬಿಡಿಸಿಕೊಂಡ ಕಾವ್ಯ ಬಂಧುರ ಇವೆಲ್ಲವೂ ಇವರ ಕವಿತೆಗಳಲ್ಲಿ ಸಂಯೋಜಿತಗೊಂಡು ಒಂದು ಕ್ಷಣ ನಮ್ಮನ್ನು ಹಿಡಿದು ನಿಲ್ಲಿಸುತ್ತವೆ. ಇವೆಲ್ಲಕ್ಕಿಂತಲೂ ಮುಖ್ಯವಾಗಿ ಅವರಿಗೆ ಪ್ರಭುತ್ವ-ರಾಜಕಾರಣಗಳನ್ನು ಅದರೆಲ್ಲ ಆಯಾಮಗಳಲ್ಲಿ ಕಾವ್ಯದ ಮುಖೇನ ಕಾಣಿಸುವ ಶಕ್ತಿಯಿದೆ. ಡಾ. ಎಚ್.ಎಸ್. ಸತ್ಯನಾರಾಯಣ, ವಿಮರ್ಶಕರು
*
ಭೂಮಿಗೆ ಬಿದ್ದ ಚಂದ್ರ
ಇದ್ದಕ್ಕಿದ್ದಂತೆ ಒಂದಿರುಳು ಚಂದ್ರ ಜಾರಿ ಧೊಪ್ಪನೆ ಭೂಮಿಗೆ ಬಿದ್ದ!
ಖಂಡ-ಖಂಡಗಳ ನಡುವೆ ಹರಿದು ಛಿದ್ರಗೊಂಡು ಚದುರಿದ ಬಿದ್ದ ಆತನ ದೇಹವನ್ನು ಸರಕಾರಗಳು ಸೇರಿ ಅಂತಾರಾಷ್ಟ್ರೀಯ ಒಪ್ಪಂದದಡಿ ಹೊಲಿದು ಮತ್ತೆ ಎತ್ತಿ ನಿಲ್ಲಿಸಿದುವು
ಈಗ ಆಗಸದಲ್ಲಿ ಚಂದಿರನ ದೇಹತುಂಬಾ ಗಾಯದ ಗೆರೆಗಳು
ಭೂಮಿಯ ದೇಶಗಳು ಆ ಗೆರೆಗಳನ್ನುಕಂಡು ತಂತಮ್ಮ ಗಡಿಗಳೆಂದು ಸಂಭ್ರಮ ಪಡುತ್ತಿವೆ!
*
ಸೇಫ್ಟಿ ಪಿನ್
ದಾರಿಗಡ್ಡ ನಿಂತು ಚುಚ್ಚಿದ ಮುಳ್ಳನ್ನು ಗಾಯದೊಳ ಹೊಕ್ಕು ಮೆದುವಾಗಿ ಹೊರತೆಗೆಯಲು ನೆರವಾದದ್ದು ಒಂದು ಸೇಫ್ಟಿ ಪಿನ್
ನಂಬಿದ ಗುಂಡಿ ಕೈಕೊಟ್ಟಾಗ ರವಿಕೆಯ ಎರಡೂ ಪಕ್ಕೆಗಳನ್ನು ಕಚ್ಚಿ ಹಿಡಿದು ಅವಳೆದೆಯ ಗೌಪ್ಯತೆಯನ್ನು ಕಾಪಾಡಿದ್ದು ಇದೇ ಸೇಫ್ಟಿ ಪಿನ್
ಜನಜಂಗುಳಿಯ ನಡುವೆ ಕಿಬ್ಬೊಟ್ಟೆ ಸವರುವ ಪರಕೀಯ ಬೆರಳುಗಳೊಂದಿಗೆ ಯುದ್ಧ ಸಾರಲು ಆಯುಧವಾದದ್ದು ಮತ್ತಿದೇ ಸೇಫ್ಟಿ ಪಿನ್
ಪೊಲೀಸು ಠಾಣೆ, ನ್ಯಾಯಾಲಯಗಳೆಲ್ಲಾ ಆಮೇಲಿನ ವಿಚಾರ ಈಗ ತುರ್ತಾಗಿ ಅವಳ ಕೇರಿಯಲ್ಲಿ ಸೇಫ್ಟಿ ಪಿನ್ನು ಮಾರುವ ಒಂದು ಅಂಗಡಿಯನ್ನಾದರೂ ತೆರೆಯಿರಿ!
*
ದಾರಿಯಲ್ಲಿ ಸಿಕ್ಕ ಕವಿತೆಗಳು
–1-
ಬೆತ್ತಲಾಗಿದೆ ದಾರಿ ಸುಮ್ಮನೆ ನಡೆದು ಬಿಡು ಗೆಳತಿ… ನಿನ್ನ ನಾಟ್ಯ ನೇಯ್ದ ಹೆಜ್ಜೆಗಳನ್ನು ದಾರಿ ಉಟ್ಟುಕೊಳ್ಳಲಿ…
-2-
ಓಹ್! ದಾರಿತುಂಬೆಲ್ಲಾ ಒಣ ಎಲೆಗಳು ಮುನಿಸಿಕೊಂಡ ವಸಂತ ಇದೇ ದಾರಿಯಲ್ಲಿ ನಡೆದುಕೊಂಡು ಹೋಗಿರಬೇಕು…
-3-
ಎಷ್ಟು ತೆಳ್ಳಗಿತ್ತು ಗೆಳತಿ ಶಾಲೆಗೆ ಕರೆದೊಯ್ಯುತ್ತಿದ್ದ ನಮ್ಮೂರ ಕಾಲು ದಾರಿ ಅಲ್ಲಿ – ನಾವಿಬ್ಬರು ಕೈ ಕೈ ಹಿಡಿದು ಸಾಗಿದರೆ ನಮ್ಮ ನೆರಳೂ ಬೇಲಿಯ ಆಚೆ ಇರುತ್ತಿತ್ತು!
ಇಂದು
ಎಷ್ಟು ಅಗಲವಾಗಿದೆ ನೋಡು ನಮ್ಮ ಜೊತೆ ಧರ್ಮ, ಪ್ರತಿಷ್ಠೆ, ಅಂತಸ್ತು ಎಲ್ಲವೂ ಜಾತ್ರೆಯಾಗಿ ಮೆರಣಿಗೆ ಹೋಗುವಷ್ಟು!
-4-
ಎಡವಿ ಬಿದ್ದವರಷ್ಟು ಈ ಹಾದಿಯನ್ನು ಹತ್ತಿರದಿಂದ ಕಂಡವರು ಬೇರಾರೂ ಇಲ್ಲ!
-5-
ಊರಲ್ಲಿ ಮಹಾನ್ ಅನ್ನಿಸಿಕೊಂಡವನೊಬ್ಬ ಮೆರವಣಿಗೆ ಹೋದ ಬಳಿಕ ಹಾದಿ ಹೀಗೆಂದಿತು – ಇನ್ನೊಂದು ಜೊತೆ ಚಪ್ಪಲಿ ನನ್ನನ್ನು ತುಳಿದುಕೊಂಡು ಹೋಯಿತು…
ತುಂಬಾ ಸರಳವಾಗಿ, ಕವಿತೆ ಎಂದರೆ ನಾನು ನನ್ನ ಅನುಭವಕ್ಕೆ ಬರುವ ಸಂಗತಿಗಳಿಗೆ, ನನ್ನ ಸಮಾಜಕ್ಕೆ ನೀಡುವ ಸ್ಪಂದನೆ ಎಂದು ತಿಳಿದುಕೊಂಡಿದ್ದೇನೆ. ನನ್ನ ಪ್ರಕಾರ ಕವಿತೆ ಒಗಟಂತೂ ಅಲ್ಲವೇ ಅಲ್ಲ. ಕ್ಲಿಷ್ಟ ಅರ್ಥವಲಯಗಳನ್ನು ಹೊಂದಿದ್ದರೂ ಓದಿನ ಅನುಭವ ಕೊಡದ ಕವಿತೆಗಳಿಗಿಂತ ಸರಳವಾಗಿದ್ದರೂ ಅದರ ಹಿಂದೆ, ಅರ್ಥವಲಯಗಳನ್ನು ಹೊಂದಿರುವ ಕವಿತೆಗಳನ್ನು ನಾನು ಇಷ್ಟಪಡುತ್ತೇನೆ. ಪ್ರತಿ ಕವಿತೆಗೆ ಸಾಮಾಜಿಕ ಜವಾಬ್ದಾರಿ ಇರಬೇಕು ಎಂದು ಅಭಿಪ್ರಾಯ ಪಡುವವನು ನಾನು.
ಕವಿ ಅಥವಾ ಸಾಹಿತಿ ಸಮಾಜದಲ್ಲಿ ಒಬ್ಬ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ, ಆತನಿಗೆ ಎಲ್ಲರೂ ಗೌರವ ಕೊಡಬೇಕು, ಆತನೊಡನೆ ಮಾತಾಡಬೇಕಾದರೆ ಆತನ ಎಲ್ಲಾ ಸಾಹಿತ್ಯವನ್ನು ಓದಿರಬೇಕು – ಇಂಥ ಮೂಢನಂಬಿಕೆಗಳನ್ನು ನಾನು ನಂಬುವುದಿಲ್ಲ. ಕವಿ ಒಬ್ಬ ಸಾಮಾನ್ಯ ವ್ಯಕ್ತಿ. ಈ ಸಾಮಾನ್ಯತೆಯಲ್ಲಿಯೇ ಅವನಿಗೆ ಸಮಾಜದಲ್ಲಿ ನಡೆಯುವ ಶೋಷಣೆ, ಅನ್ಯಾಯಗಳ ಅರಿವಾಗುವುದು. ಈ ಅರಿವೇ ಕವಿತೆಗಳಲ್ಲಿ ಆತನಿಂದ ಪ್ರತಿಮೆಗಳನ್ನು ಹೊರಹೊಮ್ಮಿಸುತ್ತದೆ ಎಂದು ನನ್ನ ಅಭಿಪ್ರಾಯ.
ನಾನು ಮೂಲತಃ ಕೊಂಕಣಿ ಕವಿ. ಕೊಂಕಣಿ ನನ್ನ ತಾಯಿಭಾಷೆ. ಕೊಂಕಣಿ ಹಾಗೂ ಕನ್ನಡ ಭಾಷೆಗಳ ಮೂಲಗಳು ಬೇರೆಬೇರೆ. ಆದ್ದರಿಂದ ನನ್ನ ವೈಯಕ್ತಿಕ ಅನುಭವದಂತೆ, ಕೊಂಕಣಿಯಲ್ಲಿ ರಚಿಸುವ ಒಂದು ಸರಳ ಕವಿತೆಗೂ ಅರ್ಥವಲಯಗಳು, ಧ್ವನಿಗಳು ಸಲೀಸಾಗಿ ದಕ್ಕಿಬಿಡುತ್ತವೆ. ಕನ್ನಡದ ನುಡಿಗೆ ಇದನ್ನು ಒಗ್ಗಿಸುವುದು ನನಗೆ ಅಷ್ಟೊಂದು ಸುಲಭಸಾಧ್ಯವಿಲ್ಲ. ಆದರೂ ಒಂದು ಅನುಭವ ಕವಿತೆಯಾದರೆ ಕನ್ನಡಕ್ಕೂ ಒಗ್ಗುತ್ತದೆ ಎಂಬ ಧೈರ್ಯ ಬಂದಾಗ ಮಾತ್ರ ನಾನು ಕನ್ನಡದಲ್ಲಿ ಬರೆಯುತ್ತೇನೆ.
ಕವಿತೆ ನನ್ನನ್ನು ಹಲವು ಸಲ ಕಾಪಾಡಿದೆ. ಜೀವಂತಿಕೆ ತುಂಬಿದೆ. ನಾನು ಬದುಕಿರುವುದಕ್ಕೆ ಸಾಕ್ಷಿಯಾಗಿದೆ ಎಂಬ ಸಮಾಧಾನವಿದೆ ನನಗೆ. ಇತ್ತೀಚೆಗಂತೂ ಪ್ರತಿ ಕವಿತೆಯ ಹುಟ್ಟೂ ಕೂಡಾ ದಿಗ್ಭ್ರಮೆ ಆತಂಕಗಳಲ್ಲಿಯೇ ಆಗುತ್ತಾ ಇದೆ ಎಂಬುವುದೇ ದುರಂತ. ಈ ಆತಂಕಗಳು ಹಲವು ಸಲ ಕವಿತೆಯಾಗಿಸುವ ಅನುಭವಗಳನ್ನು ಕವಿತೆಯಾಗಿಸಲು ಬಿಡದಷ್ಟು ಕಾಡುತ್ತವೆ. ನನ್ನ ಪ್ರಕಾರ ಇದು ಕವಿಗಳಿಗೆ ಸಂಘರ್ಷ ಮತ್ತು ಪರೀಕ್ಷೆಯ ಕಾಲ. ಯಾರು ಕವಿಯಾಗಿ ತಮ್ಮ ಜವಾಬ್ದಾರಿ ನಿಭಾಯಿಸುತ್ತಾರೆ, ಯಾರು ತಮ್ಮನ್ನು ತಾವು ಸ್ವಾರ್ಥಕ್ಕಾಗಿ ಮಾರಿಕೊಳ್ಳುತ್ತಾರೆ – ಇವೆಲ್ಲವನ್ನೂ ನಮ್ಮ ಬರವಣಿಗೆಗಳು ಅಳೆಯುತ್ತವೆ.
*
ಶ್ರೀಮಂತರ ಔತಣ ಕೂಟಗಳು
ಶ್ರೀಮಂತರ ಔತಣಕೂಟಗಳಿಗೆ ಖಾಲಿ ಹೊಟ್ಟೆಯಲ್ಲಿ ಹೋಗಲೇಬಾರದು!
ಪಾನೀಯದ ಲೋಟವನ್ನು ಶೀದಾ ತುಟಿಗಿಟ್ಟು ಒಂದೇ ಗುಕ್ಕಿನಲ್ಲಿ ಕುಡಿಯುವಂತಿಲ್ಲ ತುಟಿಸಂದಿಯಿಂದಿಳಿವ ರಸಹನಿಯನ್ನು ನಾಲಗೆ ಹೊರಳಿಸಿ ನೆಕ್ಕುವಂತಿಲ್ಲ ಹೀರುಕೊಳವೆ ಮೆಲ್ಲನೆ ಇಳಿಬಿಟ್ಟು ಸಾವಕಾಶವಾಗಿ ಮೇಲೆಳೆಯಬೇಕು. ಪೂರ್ತಿ ಖಾಲಿ ಮಾಡದಿದ್ದರೆ ಇನ್ನೂ ಒಳ್ಳೆಯದು.. ನೆನಪಿಡಿ: ಶ್ರೀಮಂತರ ಔತಣಕೂಟಗಳಿಗೆ ತಮ್ಮದೇ ಆದ ಹಸಿವು-ದಾಹಗಳಿರುತ್ತವೆ!
ತಟ್ಟೆಯಲ್ಲಿಟ್ಟ ರೊಟ್ಟಿಯನ್ನು ಇಷ್ಟಪಟ್ಟಂತೆ ತುಂಡರಿಸಿ ಮತ್ತೆ ಮತ್ತೆ ಸಾರಿನಲ್ಲಿ ಅದ್ದಿ ಬಾಯೊಳಗೆ ತುರುಕಿಸುವಂತಿಲ್ಲ.. ಎರಡೇ ಬೆರಳುಗಳಿಂದ ಚೂರು ಸಾರಿಗೆ ತಾಗಿಸಿ ಸಾವಧಾನದಿಂದ ನಾಲಗೆಗೆ ದಾಟಿಸಬೇಕು ನೆನಪಿಡಿ : ಶ್ರೀಮಂತರ ಔತಣಕೂಟಗಳಲ್ಲಿ ಬಟ್ಟಲಿನ ಮಾನಕ್ಕೆ ಎಂಜಲು ತಾಗಬಾರದು!
ಮಾಂಸದ ತುಂಡಾದರೋ ಜಗಿಜಗಿದು, ಮೂಳೆಯನ್ನು ಕಚ್ಚಿ ಪುಡಿಪುಡಿ ಮಾಡಿ ಒಳಗಿನ ಸಾರವನ್ನು ಸುರಸುರನೆ ಮನಸೋ ಇಚ್ಛೆ ಹೀರುವಂತಿಲ್ಲ ಹೊರಮೈಯನ್ನು ಮಾತ್ರವೇ ಚುಂಬಿಸಿ ಹಾಗೆಯೇ ಬಿಟ್ಟುಬಿಡಬೇಕು ನೆನಪಿಡಿ: ಶ್ರೀಮಂತರ ಔತಣಕೂಟಗಳು ಹಸಿವು ನೀಗಿಸಲು ಏರ್ಪಟ್ಟವಲ್ಲ!
ಮುಖ್ಯವಾಗಿ ಬಟ್ಟಲು ಬರಿದೇ ಮಾಡುವಂತಿಲ್ಲ, ಅಗುಳಂಟಿದ ಬೆರಳನ್ನು ಚೀಪುವಂತಿಲ್ಲ… ಒಂದು ತುತ್ತನ್ನಾದರೂ ಉಳಿಸಬೇಕು ಹಾಗೆಯೇ ನೆನಪಿಡಿ: ಶ್ರೀಮಂತರ ಔತಣಕೂಟಗಳಲ್ಲಿ ಉಣ್ಣುವುದೂ ನಿಮಗೆ ವಹಿಸುವ ಕೆಲಸ!
ಕೊನೆಗೆ ಹೊರಬರುಬರುವಾಗ- ದಾಕ್ಷಿಣ್ಯಕ್ಕೊಳಪಟ್ಟು ಎರಡನೇ ಬಾರಿ ಬಡಿಸಿಕೊಳ್ಳದೇ ಬಿಟ್ಟ ಬಿರಿಯಾನಿಯನ್ನೋ, ಪಲಾವನ್ನೋ ಆಸೆಗಣ್ಣಲ್ಲಿ ಎದುರಿಸಬಹುದು ಆದರೆ…
ಮರ್ಜಿಗೆಂದು ಬಡಿಸಿಕೊಂಡವರು ಮುಟ್ಟಿಯೂ ನೋಡದೆ ತೊಟ್ಟಿಗೆಸೆದ ರಾಶಿ ರಾಶಿ ಅನ್ನವನ್ನು ನೋಡುವ ಧೈರ್ಯ ಅರೆ ಹೊಟ್ಟೆಯಲ್ಲಿಯೇ ಕೈ ತೊಳೆದ ನಿಮಗಂತೂ ಖಂಡಿತಾ ಇರಲಿಕ್ಕಿಲ್ಲ…
ಪರಿಚಯ : ವಿಲ್ಸನ್ ಕಟೀಲ್ ಕಾವ್ಯನಾಮದಿಂದ ಬರೆಯುವ ವಿಲ್ಸನ್ ರೋಶನ್ ಸಿಕ್ವೇರಾ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಟೀಲಿನವರು. ಹುಟ್ಟಿದ್ದು 31.08.1980. ಕಾರಣಾಂತರಗಳಿಂದ ಎಂಜಿನಿಯರಿಂಗ್ ವ್ಯಾಸಂಗವನ್ನು ತ್ಯಜಿಸಿ ಸಾಹಿತ್ಯದತ್ತ ಆಕರ್ಷಣೆ. ತಮಿಳು ಹಾಡುಗಳಿಂದ ಸ್ಫೂರ್ತಿಗೊಂಡು ಕಾವ್ಯದತ್ತ ಒಲವು. ತನ್ನ ತಾಯಿಭಾಷೆ ಕೊಂಕಣಿಯಲ್ಲಿ ಕತೆ, ಕವಿತೆ, ಗೀತೆ ಹಾಗೂ ಇನ್ನಿತರ ಸಾಹಿತ್ಯ ಕೃಷಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೊಂಕಣಿಯಲ್ಲಿ ಇದುವರೆಗೆ ‘ದೀಕ್ ಆನಿ ಪೀಕ್’, ‘ಪಾವ್ಳೆ’, ‘ಎನ್‍ಕೌಂಟರ್’ ಕವನ ಸಂಕಲನಗಳು ಪ್ರಕಟವಾಗಿವೆ. ಮೂರು ಬಾರಿ ಅತ್ಯುತ್ತಮ ಗೀತರಚನೆಗಾಗಿ, ಮಾಂಡ್ ಸೊಭಾಣ್ ಸಂಸ್ಥೆ ಕೊಡಮಾಡುವ ಜಾಗತಿಕ ಸಂಗೀತ ಪುರಸ್ಕಾರಕ್ಕೆ ಭಾಜನರಾಗಿದ್ಡಾರೆ. ಇವರಿಗೆ ‘ಕಿಟಾಳ್ ಯುವ ಪುರಸ್ಕಾರ’ವೂ ಪ್ರಾಪ್ತಿಯಾಗಿದೆ. ‘ಎನ್ ಕೌಂಟರ್’ ಕವನ ಸಂಕಲನಕ್ಕೆ 2017 ರ ಪ್ರತಿಷ್ಠಿತ ವಿಮಲಾ ವಿ. ಪೈ ಕಾವ್ಯ ಪುರಸ್ಕಾರ ಪ್ರಾಪ್ತಿಯಾಗಿದೆ.
ಕನ್ನಡದಲ್ಲೂ ಅಪರೂಪಕ್ಕೆ ಬರೆಯುತ್ತಿದ್ದ ಇವರ ಕವಿತೆಗಳು ಟಿ.ಎಸ್. ಗೊರವರ ಸಂಪಾದಕತ್ವದ ‘ಸಂಗಾತ’ ಪತ್ರಿಕೆಯ ಮೊದಲ ಸಂಚಿಕೆಯಲ್ಲಿ ಪ್ರಕಟಗೊಂಡು ಕಾವ್ಯಾಸಕ್ತರ ಗಮನ ಸೆಳೆದವು. ನಂತರ ‘ಸಂಗಾತ ಪತ್ರಿಕೆ’ ಪ್ರಕಾಶನದಿಂದಲೇ ಇವರ ಮೊದಲ ಸಂಕಲನ ‘ನಿಷೇಧಕ್ಕೊಳಪಟ್ಟ ಒಂದು ನೋಟು’ ಪ್ರಕಟಗೊಂಡಿತು. ‘ಯುವಕವಿಗಳ ಪ್ರಥಮ ಸಂಕಲನ’ ವಿಭಾಗದ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆಯಿತು.
ಪ್ರಸ್ತುತ ‘ಆರ್ಸೊ’ ಕೊಂಕಣಿ ಮಾಸಿಕ ಪತ್ರಿಕೆಯ ಸಂಪಾದಕ ಹಾಗೂ ‘ಕಿಟಾಳ್’ ಸಾಹಿತ್ಯ ಜಾಲತಾಣದ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ : Poetry : ಅವಿತಕವಿತೆ ; ‘ಮುಂದೆ ಖಂಡಿತ ಅವರು ನಮ್ಮ ಮಣ್ಣು ಮುಕ್ಕಿಸಲಿದ್ದಾರೆ’
Published On - 8:04 am, Sun, 5 September 21