- Kannada News Photo gallery Cricket photos Bhuvneshwar Kumar Record-Breaking 250 T20 Wickets in India
IPL 2025: ಏಕೈಕ ವೇಗದ ಬೌಲರ್; ದಾಖಲೆ ಬರೆದ ಭುವನೇಶ್ವರ್ ಕುಮಾರ್
Bhuvneshwar Kumar: ಭುವನೇಶ್ವರ್ ಕುಮಾರ್ ಅವರು ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ, ಭಾರತದಲ್ಲಿ ಟಿ20 ಕ್ರಿಕೆಟ್‌ನಲ್ಲಿ 250 ವಿಕೆಟ್‌ಗಳನ್ನು ಪಡೆದ ಮೊದಲ ವೇಗದ ಬೌಲರ್ ಎಂಬ ದಾಖಲೆ ನಿರ್ಮಿಸಿದ್ದಾರೆ. ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಒಂದು ವಿಕೆಟ್ ಪಡೆದ ಅವರು, ಟಿ20 ಕ್ರಿಕೆಟ್‌ನಲ್ಲಿ 322 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದು ಭಾರತೀಯ ಟಿ20 ಕ್ರಿಕೆಟ್‌ನಲ್ಲಿ ಅಪ್ರತಿಮ ಸಾಧನೆ.
Updated on: May 23, 2025 | 10:25 PM

ಟೀಂ ಇಂಡಿಯಾದಲ್ಲಿ ಆಡಿ ವರ್ಷಗಳೇ ಕಳೆದರೂ ಐಪಿಎಲ್‌ನಲ್ಲಿ ಮಾತ್ರ ತಮ್ಮ ಕರಾರುವಕ್ಕಾದ ದಾಳಿಯನ್ನು ಮುಂದುವರೆಸಿರುವ ಭುವನೇಶ್ವರ್ ಕುಮಾರ್ ಆರ್‌ಸಿಬಿ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಭಾರತದ ಯಾವೊಬ್ಬ ವೇಗದ ಬೌಲರ್ ಮಾಡದ ಸಾಧನೆಯನ್ನು ಭುವಿ ಮಾಡಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಐಪಿಎಲ್ನ 65 ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೊಂಚ ದುಬಾರಿಯಾದರೂ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ಭುವನೇಶ್ವರ್ ಭಾರತದಲ್ಲಿ ಟಿ20 ಕ್ರಿಕೆಟ್‌ನಲ್ಲಿ 250 ವಿಕೆಟ್‌ಗಳನ್ನು ಪಡೆದ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಭಾರತದಲ್ಲಿ ಟಿ20ಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಪಿಯೂಷ್ ಚಾವ್ಲಾ ಅವರ ಹೆಸರಿನಲ್ಲಿದ್ದು, ಅವರು ಟಿ20 ಕ್ರಿಕೆಟ್‌ನಲ್ಲಿ 289 ವಿಕೆಟ್‌ಗಳನ್ನು ಪಡೆದಿದ್ದಾರೆ. ಯುಜ್ವೇಂದ್ರ ಚಹಾಲ್ 287 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ 4 ಓವರ್‌ಗಳಲ್ಲಿ 43 ರನ್‌ಗಳಿಗೆ ಒಂದು ವಿಕೆಟ್ ಪಡೆದರು. ಅವರು ಟ್ರಾವಿಸ್ ಹೆಡ್ ಅವರ ಪ್ರಮುಖ ವಿಕೆಟ್ ಪಡೆಯುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ದಾಖಲೆ ನಿರ್ಮಿಸಿದರು.

ಭುವನೇಶ್ವರ್ ಕುಮಾರ್ ಅವರ ಟಿ20 ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಚುಟುಕು ಮಾದರಿಯಲ್ಲಿ 305 ಪಂದ್ಯಗಳನ್ನಾಡಿರುವ ಭುವಿ 322 ವಿಕೆಟ್‌ಗಳನ್ನು ಪಡೆದಿದ್ದಾರೆ. ಕೇವಲ 7.32 ರ ಎಕಾನಮಿ ದರದಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ಐಪಿಎಲ್‌ನಲ್ಲಿ ಭುವಿ 187 ಪಂದ್ಯಗಳಲ್ಲಿ 194 ವಿಕೆಟ್‌ಗಳನ್ನು ಪಡೆದಿದ್ದಾರೆ.

ಭುವನೇಶ್ವರ್ ಕುಮಾರ್ ಕಳೆದ ಮೂರು ವರ್ಷಗಳಿಂದ ಟೀಂ ಇಂಡಿಯಾದಿಂದ ಹೊರಗಿದ್ದಾರೆ. ಅವರು ಕೊನೆಯ ಬಾರಿಗೆ 2022 ರಲ್ಲಿ ಟೀಂ ಇಂಡಿಯಾ ಪರ ಆಡಿದ್ದರು, ಅಂದಿನಿಂದ ಭುವಿ ತಂಡಕ್ಕೆ ಆಯ್ಕೆಯಾಗಿಲ್ಲ. ಗಾಯ ಮತ್ತು ಕಳಪೆ ಪ್ರದರ್ಶನ ಭುವಿಯನ್ನು ಟೀಂ ಇಂಡಿಯಾದಿಂದ ಹೊರಹಾಕುವಂತೆ ಮಾಡಿತು.

ಪಂದ್ಯದ ಬಗ್ಗೆ ಹೇಳುವುದಾದರೆ, ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 231 ರನ್ ಗಳಿಸಿತು. ಹೈದರಾಬಾದ್ ಪರ ಇಶಾನ್ ಕಿಶನ್ 94 ರನ್, ಅಭಿಷೇಕ್ ಶರ್ಮಾ 34 ರನ್, ಹೆನ್ರಿಕ್ ಕ್ಲಾಸೆನ್ 24 ಮತ್ತು ಅನಿಕೇತ್ ವರ್ಮಾ 26 ರನ್ ಗಳಿಸಿದರು.

ಬೌಲಿಂಗ್ ಬಗ್ಗೆ ಹೇಳುವುದಾದರೆ, ಆರ್‌ಸಿಬಿ ಪರ ರೊಮಾರಿಯೊ ಶೆಫರ್ಡ್ 2 ಓವರ್‌ಗಳಲ್ಲಿ 14 ರನ್‌ಗಳಿಗೆ 2 ವಿಕೆಟ್‌ಗಳನ್ನು ಪಡೆದರೆ, ಭುವನೇಶ್ವರ್ ಕುಮಾರ್ ಮತ್ತು ಲುಂಗಿ ಎನ್‌ಗಿಡಿ ತಲಾ ಒಂದು ವಿಕೆಟ್ ಪಡೆದರು. ಎನ್‌ಗಿಡಿ 4 ಓವರ್‌ಗಳಲ್ಲಿ 51 ರನ್‌ಗಳನ್ನು ನೀಡಿದರೆ, ಸುಯಶ್ ಶರ್ಮಾ 45 ರನ್‌ಗಳಿಗೆ ಒಂದು ವಿಕೆಟ್ ಮತ್ತು ಕೃನಾಲ್ ಪಾಂಡ್ಯ 38 ರನ್‌ಗಳಿಗೆ ಒಂದು ವಿಕೆಟ್ ಪಡೆದರು.














