IPL 2025: ಹೀಗಾದ್ರೆ RCB ಎಲಿಮಿನೇಟರ್ ಪಂದ್ಯವಾಡಬೇಕಾಗುತ್ತೆ..!
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 65 ಪಂದ್ಯಗಳ ಮುಕ್ತಾಯದ ವೇಳೆಗೆ ಅಂಕ ಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್ ತಂಡವು ಅಗ್ರ ಅಲಂಕರಿಸಿದರೆ, ಪಂಜಾಬ್ ಕಿಂಗ್ಸ್ ತಂಡವು ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಇನ್ನು ಆರ್ಸಿಬಿ ತಂಡವು ಮೂರನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ.
Updated on: May 24, 2025 | 8:33 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಸನ್ರೈಸರ್ಸ್ ಹೈದರಾಬಾದ್ (SRH) ತಂಡ ಸೋಲುಣಿಸಿದೆ. ಈ ಸೋಲಿನೊಂದಿಗೆ ಆರ್ಸಿಬಿ ತಂಡ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ.

ಈ ಕುಸಿತದೊಂದಿಗೆ ಇದೀಗ ಆರ್ಸಿಬಿ ತಂಡಕ್ಕೆ ಎಲಿಮಿನೇಟರ್ ಪಂದ್ಯದ ಆತಂಕ ಎದುರಾಗಿದೆ. ಏಕೆಂದರೆ ಮುಂದಿನ ಪಂದ್ಯದಲ್ಲಿ ಆರ್ಸಿಬಿ ತಂಡವು ಗೆದ್ದರೂ ಒಟ್ಟು ಅಂಕಗಳ ಸಂಖ್ಯೆ 19 ಕ್ಕೇರಲಿದೆ. ಆದರೆ ಅತ್ತ ಗುಜರಾತ್ ಟೈಟಾನ್ಸ್ ತಂಡವು ಸಿಎಸ್ಕೆ ವಿರುದ್ಧ ಗೆದ್ದರೆ ಒಟ್ಟು 20 ಅಂಕಗಳನ್ನು ಪಡೆಯಲಿದೆ.

ಇದೇ ವೇಳೆ ಪಂಜಾಬ್ ಕಿಂಗ್ಸ್ ತಂಡವು ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳಿಗೆ ಸೋಲುಣಿಸಿದರೆ, ಒಟ್ಟು 21 ಅಂಕಗಳನ್ನು ಪಡೆಯಲಿದೆ. ಈ ಮೂಲಕ ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಬಹುದು.

ಹೀಗಾದಲ್ಲಿ, ಆರ್ಸಿಬಿ ತಂಡವು ಕೊನೆಯ ಪಂದ್ಯದಲ್ಲಿ ಗೆದ್ದರೂ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಲಿದೆ. ಈ ಮೂಲಕ ಎಲಿಮಿನೇಟರ್ ಪಂದ್ಯವಾಡಬೇಕಾಗುತ್ತದೆ. ಇಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ಸೋತ ತಂಡ ಐಪಿಎಲ್ನಿಂದ ಹೊರಬೀಳುತ್ತದೆ. ಹೀಗಾಗಿಯೇ ಪ್ಲೇಆಫ್ಗೆ ಪ್ರವೇಶಿಸಿರುವ ಎಲ್ಲಾ ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯವಾಡುವ ಅವಕಾಶವನ್ನು ಎದುರು ನೋಡುತ್ತಿದೆ.

ಮೊದಲ ಕ್ವಾಲಿಫೈಯರ್ ಪಂದ್ಯವಾಡುವ ತಂಡವು ಗೆದ್ದರೆ ನೇರವಾಗಿ ಫೈನಲ್ಗೆ ಎಂಟ್ರಿ ಕೊಡಲಿದೆ. ಹಾಗೆಯೇ ಸೋತ ತಂಡಕ್ಕೆ ಮತ್ತೊಂದು ಅವಕಾಶ ದೊರೆಯಲಿದೆ. ಅಂದರೆ ಎರಡನೇ ಕ್ವಾಲಿಫೈಯರ್ ಪಂದ್ಯವಾಡುವ ಮೂಲಕ ಫೈನಲ್ಗೇರುವ ಅವಕಾಶ ಸಿಗಲಿದೆ. ಹೀಗಾಗಿಯೇ ಅಂಕ ಪಟ್ಟಿಯಲ್ಲಿ ಮೊದಲ ಅಥವಾ ಎರಡನೇ ಸ್ಥಾನ ಅಲಂಕರಿಸುವ ಅವಕಾಶವನ್ನು ಎಲ್ಲಾ ತಂಡಗಳು ಎದುರು ನೋಡುತ್ತಿದೆ.

ಇಲ್ಲಿ ಲೀಗ್ ಹಂತದ ಪಂದ್ಯಗಳ ಮುಕ್ತಾಯದ ವೇಳೆಗೆ ಅಂಕ ಪಟ್ಟಿಯಲ್ಲಿ ಮೊದಲ ಮತ್ತು ದ್ವಿತೀಯ ಸ್ಥಾನಗಳನ್ನು ಪಡೆಯುವ ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯವಾಡಲಿದೆ. ಇನ್ನು ಪಾಯಿಂಟ್ಸ್ ಟೇಬಲ್ನಲ್ಲಿ ಮೂರನೇ ಮತ್ತು ನಾಲ್ಕನೇ ಸ್ಥಾನಗಳನ್ನು ಪಡೆಯುವ ತಂಡಗಳು ಎಲಿಮಿನೇಟರ್ ಪಂದ್ಯವಾಡಲಿದೆ. ಎಲಿಮಿನೇಟರ್ ಪಂದ್ಯದಲ್ಲಿ ಸೋತ ತಂಡ ಐಪಿಎಲ್ನಿಂದ ಹೊರಬಿದ್ದರೆ, ಗೆದ್ದ ತಂಡ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ತಂಡದೊಡನೆ ಎರಡನೇ ಕ್ವಾಲಿಫೈಯರ್ ಪಂದ್ಯವಾಡಲಿದೆ. ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದ ತಂಡ ಫೈನಲ್ಗೆ ಎಂಟ್ರಿ ಕೊಡಲಿದೆ.
