Poetry : ಅವಿತಕವಿತೆ ; ‘ಮುಂದೆ ಖಂಡಿತ ಅವರು ನಮ್ಮ ಮಣ್ಣು ಮುಕ್ಕಿಸಲಿದ್ದಾರೆ’

Soulmate : ‘ನಾನು ಕನ್ನಡ ಕಲಿತೆ; ಹೀಗಾಗಿ ನನ್ನ ಮನೆಮಾತಿನಿಂದಲೇ ದೂರವಾದೆ. ಅದೇ ಎಲ್ಲರೂ ಹೇಳುತ್ತಾರಲ್ಲ ತಾಯ್ನುಡಿ ಅಂತ ಅದರಿಂದ. ಈಗೀಗ ನನಗೆ ಕನಸುಗಳು ಕೂಡ ಕನ್ನಡದಲ್ಲೇ ಬೀಳುತ್ತಿವೆ. ನನ್ನ ಪಾಲಿಗೆ, ಕನ್ನಡವೆಂಬುದು ಅನ್ನ ಕೊಡುವ ಬದುಕೂ ಹೌದು; ನನಗೆ ನಾನೇ ಮಾಡಿಕೊಂಡ ಆತ್ಮವಂಚನೆಯೂ ಹೌದು; ಕೆಲವೊಮ್ಮೆ ಎಲ್ಲರೂ ಹೇಳುವ ಹಾಗೆ ಆತ್ಮಸಂಗಾತವೂ ಹೌದು!’ ಆರೀಫ್ ರಾಜಾ

Poetry : ಅವಿತಕವಿತೆ ; ‘ಮುಂದೆ ಖಂಡಿತ ಅವರು ನಮ್ಮ ಮಣ್ಣು ಮುಕ್ಕಿಸಲಿದ್ದಾರೆ’
Follow us
ಶ್ರೀದೇವಿ ಕಳಸದ
|

Updated on:Aug 29, 2021 | 11:15 AM

Kannada Poetry : ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ.  ಕವಿ ಆರೀಫ್ ರಾಜಾ ಅವರ ಹೊಸ ಕವನಸಂಕಲನ ಎದೆ ಹಾಲಿನ ಪಾಳಿ ಸದ್ಯದಲ್ಲೇ ಸಂಗಾತ ಪುಸ್ತಕದಿಂದ ಪ್ರಕಟವಾಗಲಿದೆ. ಈ ಸಂದರ್ಭದಲ್ಲಿ ಅವರ ಕೆಲ ಕವಿತೆಗಳು ನಿಮ್ಮ ಓದಿಗೆ. 

ಕನ್ನಡದಲ್ಲಿ ಕಳೆದ ಎರಡು ದಶಕಗಳಲ್ಲಿ ಕಾವ್ಯರಚನೆಯಲ್ಲಿ ತೊಡಗಿಕೊಂಡಿರುವ ಆರಿಫ್ ಕವಿತೆಗಳಲ್ಲಿ ಹಿಂದಿನಿಂದಲೂ ನಾನು ಗಮನಿಸಿದ ವಿಶಿಷ್ಟ ಅಂಶವೊಂದಿದೆ. ತಮ್ಮ ಕವಿತೆಯ ಮೂಲಕ ಕೆಲವು ಕವಿಗಳು ಭಾವನೆಯೊಂದನ್ನು ಅಭಿವ್ಯಕ್ತಿಗೊಳಿಸುತ್ತಾರಾದರೆ ಇನ್ನಿತರರು ತಾವು ಬರೆಯುವ ಸಾಲುಗಳನ್ನು ವಿಚಾರವೊಂದರ ಅಭಿವ್ಯಕ್ತಿಗೆಂದು ಬಳಸಿಕೊಳ್ಳುತ್ತಾರೆ. ಇನ್ನೂ ಕೆಲವರ ಆಸಕ್ತಿ ಇರುವುದು ಪ್ರತಿಮಾ ನಿರ್ಮಾಣದಲ್ಲಿ. ಕಳೆದ ನೂರು ವರ್ಷಗಳಲ್ಲಿ ಕನ್ನಡದಲ್ಲಿ ಈ ಮೂರನ್ನೂ ತಮ್ಮ ರಚನೆಗಳಲ್ಲಿ ಯಶಸ್ವಿಯಾಗಿ ಅಳವಡಿಸಿಕೊಂಡ ಕವಿಗಳು ನಾಕೈದು ಮಂದಿ ಮಾತ್ರ. ಅವರು ಕೂಡ ತಮ್ಮ ಎಲ್ಲ ಬರಹಗಳಲ್ಲೂ ಇದನ್ನು ನೆರವೇರಿಸಿಲ್ಲ. ಒಮ್ಮೆ ಭಾವನೆಗೆ ಒತ್ತು ನೀಡುವ ಕವಿತೆ ಬರೆದರೆ ಇನ್ನೊಮ್ಮೆ ವಿಚಾರದ ತುಣುಕೊಂದು ಗೋಚರಿಸುವ ಕವನರಚನೆ ನಡೆಸಿದ್ದಾರೆ ಹಾಗೂ ಮತ್ತೊಂದು ಸಲ ಪ್ರತಿಮೆ ಕಟ್ಟುವಲ್ಲಿ ನಿರತರಾಗಿದ್ದಾರೆ. ಅನೇಕ ಸಂದರ್ಭಗಳಲ್ಲಿ ಅವರು ಈ ಮೂರರಲ್ಲಿ ಎರಡನ್ನೋ ಅಥವಾ ಮೂರನ್ನು ಕೂಡವೋ ಒಂದೇ ಕವಿತೆಯಲ್ಲಿ ಆವಿಷ್ಕರಿಸುವಲ್ಲಿ ಯಶಸ್ವಿಯಾಗಿರಬಹುದು. ಆದರೆ ಅಂಥ ಉದಾಹರಣೆಗಳು ವಿರಳ ಹಾಗೂ ಪ್ರಾಸಂಗಿಕ. ಆರಿಫ್‍ರ ಬಹುತೇಕ ಕವಿತೆಗಳು ಭಾವನೆ, ವಿಚಾರ ಹಾಗೂ ಪ್ರತಿಮೆಯ ಸಮನ್ವಯ ಹೊಂದಿರುವುದು ಅವರ ಕಲೆಗಾರಿಕೆಯ ಅಸಾಮಾನ್ಯ ಗುಣವಾಗಿದೆ. ಇದು ಅವರನ್ನು ಆಧುನಿಕ ಕನ್ನಡದ ಇತರ ಕವಿಗಳಿಗಿಂತ ಭಿನ್ನರಾಗಿ ನಿಲ್ಲುವಂತೆ ಮಾಡಿದೆ ಎಂಬುದು ನನ್ನ ಅನಿಸಿಕೆ. ಮನು ವಿ. ದೇವದೇವನ್, ಭಾರತೀಯ ಇತಿಹಾಸಜ್ಞ

ಕನ್ನಡದ ವಿಭಿನ್ನ ಪ್ರತಿಭೆಗಳಲ್ಲಿ ಆರಿಫ್ ಅವರದು ಮುಖ್ಯವಾದ ಹೆಸರು. ಅಂತರಂಗ ಮತ್ತು ಬಹಿರಂಗಗಳ ನಡುವೆ ಸಂವೇದನೆಗಳ ಸೇತುವೆ ಕಟ್ಟುವುದರ ಜೊತೆಗೆ, ಸಾಮಾಜಿಕತೆ ಹಾಗೂ ಸೃಜನಶೀಲತೆಯ ಬೆನ್ನ ಮೊಳೆಯಾದ ಕಲ್ಪಕತೆಯನ್ನು ವಿಪುಲವಾಗಿ ಪಡೆದಿರುವುದು ಇದಕ್ಕೆ ಮುಖ್ಯ ಕಾರಣ. ಮಾಧ್ಯಮಗಳಿಂದ ಸಿಗುವ ತಾತ್ಕಾಲಿಕ ಕ್ಲೀಷೆಗೆ ಮನಸ್ಸು ಕೊಡದಂತೆ ಅವರನ್ನು ಹುಸಿಯಿಲ್ಲದ ವಿನಯವು ಕಾಪಾಡಿದೆ. ಆತ್ಮವಿಶ್ವಾಸ ಇದ್ದವರಿಗೆ ಗರ್ವ ಇರುವುದಿಲ್ಲ. ಒಂದು ಕಡೆ ಎಡಪಂಥೀಯವಾದ ಧೋರಣೆಗಳು ಮತ್ತು ಇನ್ನೊಂದು ಕಡೆ ಅನುಕರಣೆಗೆ ನಿಲುಕದ ಎಚ್. ಎಸ್. ಶಿವಪ್ರಕಾಶ್ ಅವರ ಪ್ರಭಾವ ಇವೆರಡನ್ನೂ ಒಳಗೊಂಡು ಮೀರುವುದು ಅವರಿಗೆ ಸಾಧ್ಯವಾಗಿದೆ. ಡಾ. ಎಚ್. ಎಸ್. ರಾಘವೇಂದ್ರ ರಾವ್, ಹಿರಿಯ ವಿಮರ್ಶಕರ

*

ಯಾರಿಗೂ ಕಾಣದ್ದು ಎಲ್ಲರಿಗೂ ಕಾಣುವುದು

ಎಲ್ಲರಿಗೂ ಕಾಣುವುದು ನಮಗೂ ಕಂಡರೆ ಸಮಸ್ಯೆಯೇನಿಲ್ಲ

ಆದರೆ ನಮಗಷ್ಟೇ ಕಂಡರೆ..?

ಉದಾಹರಣೆಗೆ ಹೈವೆ ಬದಿ ಹೊಟ್ಟೆಯೊಡೆದು ಬಿದ್ದ ಚಂದ್ರಮಾ

ಕೇವಲ ಒಂದು ರೊಟ್ಟಿಗಾಗಿ ಕಸದ ತೊಟ್ಟಿಯಲಿ ಬಿಸಾಡಿದ ಸೂರ್ಯನ ಯೋನಿಯನು ಹೆಗಲ ಮೇಲೆ ಹೊತ್ತು ಊರಿಂದ ಊರಿಗೆ ಸಾಗುವ ಆ ತಿರುಬೋಕಿ ಪಾದಗಳು

ನಿಮಗೆ ಕಂಡ ಹಾಗೆ ನಮಗೂ ಕಂಡು ಬಿಟ್ಟರೆ ಆ ಬಿರುಕು ಬಿಟ್ಟ ಪಾದಗಳು?

ಅಚ್ಚರಿಯೇನಲ್ಲ ರಕ್ತ ರಂಜಿತ ಚಿತ್ತಾರ ಬಿಡಿಸುತ್ತಾ ಸಾಗುವ ಆ ಕಡುಗೆಂಪು ದಾಸವಾಳದ ದಳಗಳು

ಮಾರ್ಚ್ ಫಾಸ್ಟ್ ಹೊರಟ ಆ ನೆತ್ತರ ಪಾದಗಳನು ಎಂದೂ ಮುಗಿಯದ ರಸ್ತೆಯೆ ತಾಯ ನಾಲಿಗೆಯಾಗಿ ನೆಕ್ಕಿದಾಗ ಅಂಗೈ ಬೆವರವುದು

ಮತ್ತೆ ಲಾಕೌಟ್ ಆದ ಮುಖಗಳ ಮೆರವಣಿಗೆ

ಮನೆಯ ಹೊರಗೂ ಮನೆಯ ಒಳಗೂ

ಬೆಡ್ರೂಮಿನಿಂದ ಬೀದಿಯತನಕ ದಿನದಿಂದ ದಿನಕ್ಕೆ ಮರಳುಗಾಡಿನಂತೆ ವಿಸ್ತರಿಸುತ್ತಿರುವ ಅವರ ಕರಳುಗಣ್ಣಿನ ಭಾಷೆ

ಅವರೆದೆಯ ಮೇಲೆ ಸದಾ ಪಢಪಢಿಸುವ ಜೋಡಿ ಬೂದು ಪಾರಿವಾಳಗಳು

ಅವರ ಹಿಂದೆ ಮುಂದೆ ಬೀದಿ ಬಸವಿಯಂತೆ ತಿರುತಿರುಗಿ ಬಜಾರಿನಲಿ ಬಿಕರಿಯಾಗುವ ಸಾಂವಿಧಾನಿಕ ಶಬ್ದಗಳು

ಈಗ ಎಲ್ಲಿ ಹಾರಿ ಹೋದವು?

ನನ್ನ ಬುಗುಲು ಹೊರಗಿನದಲ್ಲ ಒಳಗಿನದು

ಯಾರಿಗೂ ಕಾಣದ್ದು ನಮಗಷ್ಟೇ ಕಂಡು ಬಿಟ್ಟರೆ!

ನಿಮ್ಮ ಪ್ರಕಾರ ಮುರಕಲು ರೊಟ್ಟಿಗಳನು ಬಿಟ್ಟರೆ ಅವರಲ್ಲಿ ನಡೆದು ಹೋದರೆಂಬುದಕ್ಕೆ ಏನೆಂದರೆ ಏನೂ ಸಾಕ್ಷಿ ಉಳಿದಿರಲಿಲ್ಲ

ಹೌದು ತಂಗಳು ಚಂದ್ರನನು ಮಲಗಸಿ ರೈಲು ಹಳಿಗಳ ಮೇಲೆ ಅವರೂ ತಣ್ಣಗೆ ಹೊರಟು ಹೋದರು!

*

ಶಾಪ

ಪರಸ್ಪರ ಇಬ್ಬರಿಗೂ ಒಂದು ಶಾಪವಿತ್ತು

ನನಗೆ ಚುಚ್ಚಿದರೆ ಅವನಿಗೆ ಗಾಯವಾಗಲೆಂದು ಅವನಿಗೆ ಚುಚ್ಚಿದರೆ ನನಗೆ ನೋವಾಗಲೆಂದು

ಹೀಗಾಗಿ ಈ ಗುಟ್ಟನು‌ ಗುಟ್ಟಾಗಿ ತಿಳಿದ ಮೇಲೆ ಅವನು

ತನಗೆ ತಾನೇ ಹಿಂಸಿಸಿಕೊಂಡು ದಿನಾ ರಾತ್ರಿ ನನಗೆ ನೋವುಣಿಸುತ್ತಿದ್ದಾನೆ!

*

AvithaKavithe Arif Raja

ಕೈಬರಹದೊಂದಿಗೆ ಆರೀಫ್ ರಾಜಾ

ಕಾವ್ಯದಲ್ಲಿ ಗೆಲುವೆಂಬದು

ನನಗೀಗ ‌ನೆನಪಾಗುತಿದೆ; ಬಹಳ ಹಿಂದೆ, ಅಜಮಾಸು ನಾಲ್ಕೈದು ವರ್ಷಗಳ‌ ಹಿಂದೆ, ಯೂ-ಟ್ಯೂಬಿನಲ್ಲಿ ನೋಡಿದ್ದು. ಒಂದು ನಿಮಿಷ ಒಂಭತ್ತು ಸೆಕೆಂಡಿನ‌ ವಿಡಿಯೋ ಕ್ಲಿಪ್ ಅದು. ತಿರು ತಿರುಗಿಸಿ ಅದನ್ನೇ ನೋಡಿದ್ದೆ:

There are times When one must be silent in order to hear the music behind the noise of the rain.

..I’M SORRY

ಈ ಮೇಲಿನ‌ ಮಾತು ಭಾಷಣ ಮಾಡಲು ವೇದಿಕೆಗೆ ಬಂದು ಕನಿಷ್ಟ ಭಾಷಣವನ್ನು ಓದಲಿಕ್ಕಾಗದೆ ಹಾಳೆಯನ್ನು ಬೊಕ್ಕಣದಲ್ಲಿ ಮಡಚಿಟ್ಟುಕೊಂಡು ಗದ್ಗದಿತನಾಗಿ ವೇದಿಕೆಯಿಂದ ನಿರ್ಗಮಿಸಿದ‌‌ Suspended step of the stork ಎಂಬ ಯುದ್ಧ ವಿರೋಧಿ ಗ್ರೀಕ್ ಸಿನಿ‌‌ಮಾ ನಿರ್ದೇಶಕ Theo Angelopoulos ನದು

ಹೌದು. ಅವನು ಹೇಳಿದ್ದು ಸರಿಯಾಗಿಯೇ ಇತ್ತು ನಾವೀಗ ನಿಜವಾಗಿಯೂ ಮೌನವಾಗಿದ್ದೇವೆ: ಯುದ್ದ, ಕಾಯಿಲೆ, ಜಾತಿ, ಧರ್ಮ, ಗಂಡು, ಹೆಣ್ಣು ನೆಲ ಜಲ ಮರ ಗಿಡ ಬಳ್ಳಿ ಮತ್ತಿನ್ನ್ಯಾವ ಕಾರಣಕ್ಕಾಗಿಯೋ ನಾವೀಗ ಮೌನವಾಗಿದ್ದೇವೆ!

ನಿಜ ಹೇಳಬೇಕೆಂದರೆ ನನ್ನ ‌ಕತೆಯೂ ಬೇರೇನಿಲ್ಲ.

ನನ್ನೊಂದಿಗೆ ನಾನು ಸಂವಹನ ಕಳೆದುಕೊಳ್ಳುತ್ತಿದ್ದೇನೆ ಅಂತ ಅನಿಸಿದಾಗ, ನಾನು ಕವಿತೆ ಬರೆಯಲಾರಂಭಿಸುತ್ತೇನೆ. ಕವಿತೆ ಕೇವಲ ನನ್ನ ಹೊರಗಿನ ಗದ್ದಲವಲ್ಲ, ನನ್ನೊಳಗಿನ ಗದ್ದಲವೂ ಹೌದು.

ನಿಮಗೆ ಹೇಳಲೇಬೇಕಾದ ಇನ್ನೊಂದು ಗುಟ್ಟಿನ‌ ವಿಷಯವೇನೆಂದರೆ

ನಾನು ಕನ್ನಡ ಕಲಿತೆ; ಹೀಗಾಗಿ ನನ್ನ ಮನೆಮಾತಿನಿಂದಲೇ ದೂರವಾದೆ. ಅದೇ ಎಲ್ಲರೂ ಹೇಳುತ್ತಾರಲ್ಲ ತಾಯ್ನುಡಿ ಅಂತ ಅದರಿಂದ. ಈಗೀಗ ನನಗೆ ಕನಸುಗಳು ಕೂಡ ಕನ್ನಡದಲ್ಲೇ ಬೀಳುತ್ತಿವೆ. ನನ್ನ ಪಾಲಿಗೆ, ಕನ್ನಡವೆಂಬುದು ಅನ್ನಕೊಡುವ ಬದುಕೂ ಹೌದು; ನನಗೆ ನಾನೇ ಮಾಡಿಕೊಂಡ ಆತ್ಮವಂಚನೆಯೂ ಹೌದು; ಕೆಲವೊಮ್ಮೆ ಎಲ್ಲರೂ ಹೇಳುವ ಹಾಗೆ ಆತ್ಮಸಂಗಾತವೂ ಹೌದು!

ಯಾಕೆ ಅಂತ ಮುಂದೆ ಯಾವಾಗಲಾದರೂ ವಿವರವಾಗಿ ಬರೆಯುವೆ. ಈ‌ ನಯ ನಾಜೂಕಿನ‌ ರೂಪಕಗಳ ‌ಹಂಗು‌ ತೊರೆದು‌ ಹಾಗೊಮ್ಮೆ ಬರೆಯಲು ಸಾಧ್ಯವಾಗುವುದಾದರೆ? ನೇರವಾಗಿ ನಿರ್ದಾಕ್ಷಿಣ್ಯವಾಗಿ‌ ನನ್ನೊಳಗೇ ಇಣುಕಿ..

ಏಕೆಂದರೆ ಕಾವ್ಯದಲ್ಲಿ ಗೆಲುವೆಂಬುದು ಕವಿಯೊಬ್ಬನ ಗೋರಿಯ ಮೇಲೆ ಅವನ ಅಭಿಮಾನಿಗಳು ಬರೆವ ಕಡೆಯ ಬರಹ!

*

ನನಗಿಂತ ಮೊದಲು

ನನಗಿಂತ ಮೊದಲು ಕತ್ತಲು ಹುಟ್ಟಿತು ಅದಕ್ಕೆ ಸಾವು ಎಂದು ಕೂಗಲಾಯಿತು

ನನಗಿಂತ ಮೊದಲು ಬೆಳಕು ಹುಟ್ಟಿತು ಅದಕ್ಕೆ ಸೂರ್ಯ ಎಂದು ನಮಿಸಲಾಯಿತು

ನನಗಿಂತ ಮೊದಲು ಪ್ರೀತಿ ಹುಟ್ಟಿತು ಅದಕ್ಕೆ ಭೂಮಿ ಎಂದು ಪೂಜಿಸಲಾಯಿತು

ನನಗಿಂತ ಮೊದಲು ನನ್ನ ಕಣ್ಣೀರು ಹುಟ್ಟಿತು ಅದಕ್ಕೆ ಕವಿತೆ ಎಂದು ಹೆಸರಿಡಲಾಯಿತು

*

ಮಣ್ಣು

ಆಗ ನಾವು ಮಣ್ಣು ತಿನ್ನುತ್ತಿದ್ದೆವು ನಮ್ಮ ತಂದೆ ತಾಯಿಗಳು ನಮ್ಮನ್ನು ತಡೆಯಲಿಲ್ಲ ಈಗ ನಮ್ಮ ಮಕ್ಕಳು ಮಣ್ಣು ತಿನ್ನವುದ ತಪ್ಪಿಸಿದೆವು

ಮುಂದೆ ಖಂಡಿತ ಅವರು ನಮ್ಮ ಮಣ್ಣು ಮುಕ್ಕಿಸಲಿದ್ದಾರೆ

*

ಪರಿಚಯ : ಆರಿಫ್‌ ರಾಜಾ ಅವರು ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಅರಕೇರಾ ಗ್ರಾಮದವರು. 1983 ಡಿಸೆಂಬರ್‌ 6ರಂದು ಜನನ. ಬಾಗಲಕೋಟೆ ಜಿಲ್ಲೆಯ ಇಳಕಲ್ಲಿನಲ್ಲಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಹಲವು ಕವಿತೆಗಳು ಇಂಗ್ಲಿಷ್, ಸ್ಪ್ಯಾನಿಷ್, ಪರ್ಷಿಯನ್ ಸೇರಿದಂತೆ ತಮಿಳು, ತೆಲುಗು, ಮಲಯಾಳಂ, ಹಿಂದಿ, ಗುಜರಾತಿ, ಪಂಜಾಬಿ, ಅಸ್ಸಾಮಿ ಮುಂತಾದ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. 2012ರ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತರಾದ ಇವರು, ಸೈತಾನನ ಪ್ರವಾದಿ, ಜಂಗಮ ಫಕೀರನ ಜೋಳಿಗೆ, ಬೆಂಕಿಗೆ ತೊಡಿಸಿದ ಬಟ್ಟೆ, ನಕ್ಷತ್ರ ಮೋಹ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಭಾವನಾತ್ಮಕ ತಾಕಲಾಟವನ್ನು ಬಹುಸಂಸ್ಕೃತಿಯ ನೆಲೆಯಲ್ಲಿ ಪುನರ್‌ಸಂಘಟಿಸುವ ಇವರ ರಚನೆಗಳಲ್ಲಿ ಹೊಸ ನುಡಿಗಟ್ಟಿದೆ ಎಂದು ವಿಮರ್ಶಕರು ಗುರುತಿಸಿದ್ದಾರೆ.

ದಿನಕರ ದೇಸಾಯಿ ಪ್ರಶಸ್ತಿ, ಬೇಂದ್ರೆ ಪುಸ್ತಕ ಬಹುಮಾನ, ಕ.ಸಾ.ಪ. ಅರಳು ಪ್ರಶಸ್ತಿ, ಗುಲ್ಬರ್ಗ ವಿಶ್ವವಿದ್ಯಾಲಯದ ಪುಸ್ತಕ ಬಹುಮಾನ ಮುಂತಾದ ಪ್ರಶಸ್ತಿಗಳು ದೊರೆತಿವೆ. 2012 ರಲ್ಲಿ ಕೇರಳದ ತ್ರಿವೇಂದ್ರಮ್ ನಲ್ಲಿ ನಡೆದ ‘ಕೃತ್ಯ’ ಇಂಟರ್ನ್ಯಾಷನಲ್ ಪೊಯೆಟ್ರಿ ಫೆಸ್ಟಿವಲ್​ನಲ್ಲಿ ಭಾಗವಹಿಸಿರುತ್ತಾರೆ.

ಇದನ್ನೂ ಓದಿ : Poetry : ಅವಿತಕವಿತೆ ; ‘ಒಂದು ವಿಶ್ವಾಸವನ್ನು ಕಾಯಲು ಎಂಥ ಸುಂದರ ಕಾವಲು’

Published On - 9:51 am, Sun, 29 August 21

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ