Yakshagana: ಬರೆದದ್ದರಲ್ಲಿ ಏನೂ ಇಲ್ಲ ಅನಿಸಿದರೆ ಒಂದು ವಿಡಿಯೋ ಹಾಕಿದ್ದೇನೆ; ಅದನ್ನು ನೋಡಿ ನಕ್ಕುಬಿಡಿ

YakshaRanga: ಇದೆಲ್ಲಾ ಬರೆದದ್ದು ವ್ಯಾಪಾರಿಗೆ ಇನ್ನಷ್ಟು ಚೆನ್ನಾಗಿ ವ್ಯಾಪಾರ ಮಾಡಲು, ಸಾಮಾನ್ಯರಿಗೆ ಹೆಚ್ಚು ಉಳಿತಾಯ ಮಾಡುವಂತೆ ಯೋಚನೆ ಮಾಡಲು ಸಹಾಯ ಮಾಡಬಹುದು. ಗ್ರಾಹಕರು ಇದನ್ನು ಗಮನಿಸಿ ಚುರಕಾಗಬಹುದು ಎಂದು.

Yakshagana: ಬರೆದದ್ದರಲ್ಲಿ ಏನೂ ಇಲ್ಲ ಅನಿಸಿದರೆ ಒಂದು ವಿಡಿಯೋ ಹಾಕಿದ್ದೇನೆ; ಅದನ್ನು ನೋಡಿ ನಕ್ಕುಬಿಡಿ
ಪುರಾಣ ಪಾತ್ರಗಳ ವರ್ತಮಾನ (ಚಿತ್ರ: ಮುರಳಿಮೋಹನ ಅಬ್ಬೆಮನೆ)
Follow us
ganapathi bhat
|

Updated on:Sep 05, 2021 | 4:56 PM

ಬೆಂಗಳೂರಿನ ಬೀದಿಯೊಂದರಲ್ಲಿ ಚಪ್ಪಲಿ ತೆಗೆದುಕೊಳ್ಳಲು ಓಡಾಡುತ್ತಿದ್ದೆ. ಎರಡು ಮೂರು ಚಪ್ಪಲಿ ಅಂಗಡಿಗಳ ವಿಚಾರಣೆಯ ಬಳಿಕ ನನ್ನ 200- 300 ರೂಪಾಯಿ ರೇಂಜಿನ ಚಪ್ಪಲಿ ಎಷ್ಟು ಹುಡುಕಿದರೂ ಅಷ್ಟೆ. ಅದಕ್ಕಿಂತ ಒಳ್ಳೆಯದು ಬೇಕೆಂದಾದರೆ ನನ್ನ ರೇಂಜು ದೊಡ್ಡದು ಮಾಡಿಕೊಳ್ಳಬೇಕು ಎಂದು ಗೊತ್ತಾಯಿತು. ಒಂದು ಒಳ್ಳೆಯದು ಇರುವಾಗ ಇನ್ನೊಂದು ರಫ್ ಯೂಸಿಗೆ, ಸಾಧಾರಣದ್ದು ಇರಲಿ ಸಾಕು ಎಂಬ ನೆಲೆಯಲ್ಲಿ ರೇಂಜು ಹೆಚ್ಚು ಮಾಡುವ ಗೋಜಿಗೆ ಹೋಗಲಿಲ್ಲ. ಅಂತಿಮವಾಗಿ ಒಂದು ಅಂಗಡಿ ಹೊಕ್ಕೆ. ಇದಕ್ಕೆಷ್ಟು ಎಂದು ಕೇಳಿದೆ. 250 ಅಂದ.‌ ‘ಇದರಲ್ಲಿ ಇಂಥಾದ್ದೇ ಆದರೆ ಸ್ವಲ್ಪ ಹೀಗಿನದು ಬರುವುದಿಲ್ಲವೇ?’ ಕೇಳಿದೆ. ಬರುತ್ತದೆ. ಆದರೆ ಅದಕ್ಕೆ 350 ಆಗುವುದು ಎಂದ. ‘ಹೋಹೋ, ನಮಗೆ ಬೇಕಾದ್ದಕ್ಕೆ ಆಗುವಾಗ ನಿಮ್ಮದು 350 ಆಗಿಬಿಡುತ್ತದಲ್ಲಾ’ ಅನಿಸಿಬಿಟ್ಟಿತು. ಬಾಯಿ ಬಿಡಲಿಲ್ಲ. ‌ಸಣ್ಣಗೆ ನಗುಬಂತು. ಸರಿ ಅಣ್ಣಾ. ನೀವು 350 ರದ್ದೇ ಕೊಡಿ. ಆದರೆ ನಾನು 300 ಮಾತ್ರ ಕೊಡುವೆ. ಆಗದೇ? ಎಂದು ನಗುತ್ತಾ ಕೇಳಿದೆ. ಹೆಚ್ಚು ಚರ್ಚೆ ಮಾಡುವುದು ನನಗೆ ಆಗಿಬರದ ವಿಷಯ. ಆದರೂ ಚರ್ಚೆಯೇ ಮಾಡದಿದ್ದರೆ ಗ್ರಾಹಕತನಕ್ಕೆ ಅವಮಾನ‌ ಎಂಬ ಭಾವ ಬರುವುದುಂಟು. ನಾನೇನು ಕಮ್ಮಿ ಅಂತ ಅನಿಸುವ ಮೊದಲು ಒಮ್ಮೆಯಾದರೂ ಕಡಿಮೆಗೆ ಕೇಳಬೇಕು ಎನ್ನುವ ಯೋಚನೆ. ಹೇಳಿದಷ್ಟಕ್ಕೇ ಕೊಂಡುಕೊಂಡರೆ ಮರ್ಯಾದೆಗೆ ಕಡಿಮೆ. ಅದೂ ಚಪ್ಪಲಿ ಅಂಗಡಿಗಳಲ್ಲಿ ಕೇಳಬೇಕೇ? ಅಂತೂ 320 ಕ್ಕೆ ವಹಿವಾಟು ಮುಗಿಯಿತು.

ಮಾರಾಟಗಾರ ಹಾಗೆ ಯೋಚಿಸಬಹುದೇ? ಗ್ರಾಹಕರಿಗೆ ಎರಡು ಬಗೆ ತೋರಿಸಿದಾಗ ಕೊಳ್ಳುವವ ಸ್ಪಷ್ಟವಾಗಿ ನನಗೆ ಇಂಥಾದ್ದೇ ಬೇಕು ಎಂದು ಹೇಳಲು ತೊಡಗುತ್ತಾನೆ.‌ ಆ ಬೇಡಿಕೆಯ ವಸ್ತುವಿಗೆ ಅಂಗಡಿಯಾತ 100 ರೂಪಾಯಿ ಹೆಚ್ಚು ಹೇಳಿಬಿಡಬಹುದಲ್ಲಾ? ಹೇಗೂ ಕೊಳ್ಳುವವನಿಗೆ ಅಂಥಾದ್ದೆ ಬೇಕು ಅಂತಾದರೆ ಅದಕ್ಕೆ ಡಿಮ್ಯಾಂಡು ಉಂಟುಮಾಡುವ ಕೆಲಸ ಅಂಗಡಿಯವ ಮಾಡಲೂಬಹುದು.

ಈಗ ಇಲ್ಲಿ ನಾನು ಹೇಳಬೇಕಿರುವ ವಿಷಯ ನಂದಿ ಶೆಟ್ಟರದು. ವಿಕ್ರಮಾದಿತ್ಯ ಅಥವಾ ಶನೀಶ್ವರ ಮಹಾತ್ಮೆ ಎಂಬ ಯಕ್ಷಗಾನ ಪ್ರಸಂಗದಲ್ಲಿ ನಂದಿ ಶೆಟ್ಟಿ ಎಂಬ ವ್ಯಾಪಾರಿಯ ಪಾತ್ರವೊಂದು ಬರುವುದುಂಟು. ಅದನ್ನು ಕೆಲವರು ಕೆಲವು ಬಗೆಯಲ್ಲಿ ಚಿತ್ರಿಸಿರುವುದನ್ನು ನೋಡಿದ್ದೇನೆ. ಆದರೆ, ಹವ್ಯಾಸಿ ಯಕ್ಷಗಾನ ಕಲಾವಿದ ಶ್ರೀರಮಣ ಆಚಾರ್ಯ ಕಾರ್ಕಳರ ನಂದಿ ಶೆಟ್ಟಿಯನ್ನು ಬಹಳ ಇಷ್ಟಪಟ್ಟು, ಹತ್ತಿರದಿಂದ, ಹೆಚ್ಚು ಬಾರಿ ನೋಡಿದವ ನಾನು. ಅವರು ನಾನು ಯಕ್ಷಗಾನ ಕಲಿತ ಉಡುಪಿ, ಅಂಬಲಪಾಡಿಯ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾಮಂಡಳಿಯಲ್ಲಿ (ಬಡಗು) ವೇಷ ಮಾಡುತ್ತಿದ್ದರು. ವಿಕ್ರಮಾದಿತ್ಯನ ಕತೆಯಲ್ಲಿ ಅವರದೇ ನಂದಿ ಶೆಟ್ಟಿ. ಅವರು ಜಿಪುಣತನ, ವ್ಯಾಪಾರಿಯ ಮನೋಭಾವ, ಉಳಿತಾಯ ಇಷ್ಟರ ಮಟ್ಟಿಗೂ ಇರಬಹುದು ಎಂದು ಚೆನ್ನಾಗಿ ಹೇಳುತ್ತಿದ್ದರು.

ಉಂಡ ಕೈಯಲ್ಲಿ ಕಾಗೆಯನ್ನು ಓಡಿಸಲು ಹೋಗುವುದಿಲ್ಲ. ಕೈಗಂಟಿದ ಅನ್ನದ ಅಗುಳು ಕಾಗೆಗೆ ಸಿಕ್ಕರೆ ಎಂಬ ಮಾತಿನ ವಿವರಣೆಯಿಂದ ತೊಡಗಿ ಮುಂದುವರಿಯುತ್ತಿದ್ದರು. ಅಂಗಡಿಯಲ್ಲಿ ಒಂದೇ ಬಗೆಯ ತುಪ್ಪವನ್ನು ಮೂರು ಕರಡಿಗೆಯಲ್ಲಿ ಹಾಕಿಡುತ್ತಿದ್ದರಂತೆ. ಮೂರು ಕರಡಿಗೆಗೂ ಮೂರು ಕಡ್ಡಿ ಮುಳುಗಿಸಿಡುವುದು. ಗ್ರಾಹಕರು ಬಂದಾಗ ಮೂರು ಕಡ್ಡಿ ತೆಗೆದು ರುಚಿಗೋ ವಾಸನೆಗೋ ಕೊಟ್ಟು, ‘ನೋಡಿ ಮಾರಾಯ್ರೆ, ಇದಕ್ಕೆ ಹತ್ತು ವರಹ, ಇದಕ್ಕೆ ಹದಿನೈದು ವರಹ, ಇದಕ್ಕೆ ಇಪ್ಪತ್ತು ವರಹ’ ಎನ್ನುವುದಂತೆ. ಮೂರೂ ಒಂದೇ ತುಪ್ಪ. ಮೂರಕ್ಕೂ ಬೇಸಿಕ್ ಪ್ರೈಸ್ ಹತ್ತು ವರಹವೇ ಆಗಿರುವುದು. ಅದು ಆ ಮೂರರಲ್ಲಿ ಯಾವ ಕ್ರಯಕ್ಕೆ ಮಾರಾಟವಾದರೂ ನಷ್ಟವೇನಿಲ್ಲ. ಲಾಭವೇ ಹೆಚ್ಚು. ಬಡವನಾದರೆ ಹತ್ತು, ಮಧ್ಯಮನಾದರೆ ಹದಿನೈದು, ಇಪ್ಪತ್ತು ವರಹದ್ದೇ ಕೊಡಿ ಗೌಜಿ ಆಗಲಿ ಅನ್ನುವುದಾದರೆ ಅಷ್ಟೂ ಕಾಸು ಬಂದು ಕಿಸೆಗೆ ಬಿತ್ತು.

ನಂದಿ ಶೆಟ್ಟರು ಒಂದು ಹರಕೆ ಹೊತ್ತಿದ್ದರಂತೆ. ದೇವರೇ ಹೀಗೆ ಹೀಗಾದರೆ ನಾನು ನಿನಗೆ ಒಂದು ಕರಡಿಗೆಯೊಳಗೆ ಕೂಡಿಟ್ಟ ನಾಣ್ಯವೆಲ್ಲಾ ಕೊಡುವೆ ಎಂದು. ಹರಹರಾ ಎಂದಾಗ ಆಗಬೇಕಾದ್ದು ಆಗಿಬಿಟ್ಟಿತು. ದೇವರಿಗೆ ಈಗ ಕರಡಿಗೆ ತುಂಬಿದ ನಾಣ್ಯ ಒಪ್ಪಿಸಬೇಕಲ್ಲಾ ಎಂಬ ಭಾವವೂ. ಅದಕ್ಕೊಂದು ಉಪಾಯ. ಅತ್ತ ದೇವರಿಗೂ ಬೇಸರ ಆಗಬಾರದು ತಾನೂ ಹಣ ಕಳೆದುಕೊಳ್ಳಬಾರದು.‌ ‘ಕರಡಿಗೆ ತುಂಬಿದ ನಾಣ್ಯಗಳನ್ನು ಮೇಲಕ್ಕೆ ಎಸೆಯುತ್ತೇನೆ ದೇವರೇ.. ಬೇಕಾದಷ್ಟು ನೀನು ಇಟ್ಟುಕೊ. ಬೇಡವಾದರೆ, ನನ್ನ ಮೇಲೆ ಕನಿಕರವಿದ್ದರೆ ಮರಳಿ‌ ಕೊಡು’ ಎಂದರಂತೆ. ದೇವರು ಕರುಣಾಮಯಿಯಾಗಿ ಒಂದೂ ನಾಣ್ಯ ಇಟ್ಟುಕೊಳ್ಳದೆ ಎಲ್ಲವನ್ನೂ ಕೆಳಕ್ಕೆ ಉದುರಿಸಿಕೊಟ್ಟ. ನಂದಿ ಶೆಟ್ಟರಿಗೆ ಸಂತೃಪ್ತಿ.

ನಂದಿ ಶೆಟ್ಟರು ಉಣ್ಣುವಾಗ ಪಕ್ಕದಲ್ಲಿ ಸಣ್ಣ ಬಟ್ಟಲು ತುಪ್ಪ ಇಟ್ಟುಕೊಳ್ಳುವುದಂತೆ. ಗಂಜಿಯ ಜೊತೆಗೆ ತುಪ್ಪದ ಪರಿಮಳ ಮೂಸುವುದು ಮಾತ್ರ. ತಿಂದರೆ ತುಪ್ಪ ಖರ್ಚಾಗುವುದಿಲ್ಲವೇ? ಹಾಗಾಗಿ. ಅಂಗಡಿಯ ದೇವರ ಪೀಠದ ಮೇಲೆ ಹಚ್ಚಿದ ಊದುಬತ್ತಿಯನ್ನು ಮತ್ತು ಬತ್ತಿಯನ್ನು ದಿನವೂ ಉರಿಸಿ ಆರಿಸುವುದು. ಒಂದು ದಿನಕ್ಕೆ ಬರುವುದು ತಿಂಗಳಿಗೆ ಬಂತೆಂಬ ಖುಷಿ. ಇದನ್ನು ತಿಳಿದುಕೊಂಡು ನೀವು ಹಾಗೇ ಮಾಡುತ್ತೀರಿ ಎಂದು ನಾನೇನು ನಂಬುವುದಿಲ್ಲ.

ಸಾಮಾನ್ಯ ಊರಿನ ಅಂಗಡಿ ಮಾಲಿಕರೊಬ್ಬರ ಇನ್‌ಫಾರ್ಮಲ್ ಸಂದರ್ಶನವನ್ನು ಯೂಟ್ಯೂಬಿನಲ್ಲಿ ನೋಡಿದ್ದೆ. ಅವರು ಅಂಗಡಿ ನಡೆಸುವುದು, ಗ್ರಾಹಕರನ್ನು ಉಳಿಸುವುದು ಸುಲಭದ ಕೆಲಸ ಅಲ್ಲವೇ ಅಲ್ಲ ಎಂದು ಮತ್ತು ಅಂಗಡಿ ನಡೆಸುವವನಿಗೆ ಏನೇನು ಗುಣ ಬೇಕು ಎಂದೂ ವಿವರಿಸಿದ್ದರು. ಅವರು ಅಂಗಡಿಗೆ ಬರುವ ಮಕ್ಕಳಿಗೆ ಸಣ್ಣ ಮಿಠಾಯಿ ಉಡುಗೊರೆ ಕೊಡುತ್ತಿದ್ದರಂತೆ. ಮಕ್ಕಳ ಸಲುವಾಗಿ ಮನೆಯವರು ಅಂಗಡಿಗೆ ಬರುತ್ತಾರೆ ಮತ್ತು ‘ಅಂಗಡಿಯವರಿಗೆ ನಮ್ಮ ಮಗು ಕಂಡ್ರೆ ಇಷ್ಟ’ ಎಂದು ಮನೆಯವರು ಅಂಗಡಿಗೆ ಅಟ್ಯಾಚ್ ಆಗಿಬಿಡುತ್ತಾರೆ. ಸಣ್ಣ ಸಾಮಾನು ತರಲು ಮಗುವನ್ನು ಕಳಿಸಿದರೆ, ಮಗು ಕಣ್ಣುಮುಚ್ಚಿ ಅದೇ ಅಂಗಡಿ ಕಡೆಗೆ ಬರುತ್ತದೆ ಎನ್ನುವುದು ಅವರ ಸೂತ್ರ. ಹಾಗೆಂದು ಆ ನಡತೆಯಲ್ಲಿ ಪ್ರೀತಿ ಇಲ್ಲ ಎಂದು ಅರ್ಥವಲ್ಲ. ಏನೇ ಆಗಲಿ, ಇಂಥಾ ಕಡೆ ಸರ್ವೀಸ್ ಮುಖ್ಯ ಎಂದು ನಾನು ಬೋರಾದಾಗ ಮಾತನಾಡಲು ಹೋಗುವ ಹಿರಿಯ ಗೆಳೆಯರೊಬ್ಬರು ಹೇಳುತ್ತಿರುತ್ತಾರೆ.

ಯಕ್ಷಗಾನದಲ್ಲಿ ನಮ್ಮ ಸುತ್ತಮುತ್ತಲಿನ ಪಾತ್ರಗಳು ಬೇಕಾದಷ್ಟು ಬಂದುಬಿಡುತ್ತವೆ. ವ್ಯಾಪಾರಿ, ಮರದ ಕೆಲಸ ಮಾಡುವವ, ಕಟ್ಟಿಗೆ ಕಡಿಯುವವ, ಅಡುಗೆ ಭಟ್ಟ, ಪೂಜೆ ಭಟ್ಟ, ಸೇಂದಿ ಮಾರುವವ, ಅಗಸ ಇತ್ಯಾದಿ ಇತ್ಯಾದಿ. ವರ್ತಮಾನದ ಘಟನೆಗಳನ್ನು ಆಧರಿಸಿ ಈ ಪಾತ್ರಗಳು ಜೀವತಾಳುತ್ತವೆ. ಇತರ ಗಂಭೀರ ಪಾತ್ರಗಳು ಕೂಡ ವರ್ತಮಾನವನ್ನು ಬಳಸಿಕೊಂಡು ಮಾತನಾಡುವುದೂ ಇದೆ. ಇರಲಿ.

ಇದೆಲ್ಲಾ ಬರೆದದ್ದು ವ್ಯಾಪಾರಿಗೆ ಇನ್ನಷ್ಟು ಚೆನ್ನಾಗಿ ವ್ಯಾಪಾರ ಮಾಡಲು, ಸಾಮಾನ್ಯರಿಗೆ ಹೆಚ್ಚು ಉಳಿತಾಯ ಮಾಡುವಂತೆ ಯೋಚನೆ ಮಾಡಲು ಸಹಾಯ ಮಾಡಬಹುದು. ಗ್ರಾಹಕರು ಇದನ್ನು ಗಮನಿಸಿ ಚುರಕಾಗಬಹುದು ಎಂದು. ಬರೆದದ್ದರಲ್ಲಿ ಏನೂ ಇಲ್ಲ ಅನಿಸಿದರೆ ಕೆಳಗೆ ಒಂದು ವಿಡಿಯೋ ಹಾಕಿದ್ದೇನೆ ಅದನ್ನು ನೋಡಿ ನಕ್ಕುಬಿಡಿ.

ಬರಹ: ಗಣಪತಿ ದಿವಾಣ

***

ಟಿವಿ9 ಕನ್ನಡ ಡಿಜಿಟಲ್‌ ಹೊಸ ಪ್ರಯತ್ನ ಪುರಾಣ ಪಾತ್ರಗಳು, ಪುರಾಣದ ಘಟನೆಗಳು, ಅನುಭವ, ಆಸ್ವಾದನೆ ಬದುಕಿಗೆ ದಾರಿದೀಪ ಆಗಬಲ್ಲವು. ಒಂದಷ್ಟು ಹೊಸನೋಟ, ತಿಳುವಳಿಕೆಯನ್ನೂ ನೀಡಬಲ್ಲವು. ಮನಸಿಗೆ ಸಂತೋಷ, ನೆಮ್ಮದಿಯನ್ನೂ ತುಂಬಬಲ್ಲವು.

ಪುರಾಣ ಪಾತ್ರಗಳನ್ನು ತಿಕ್ಕಿ, ತೀಡಿ, ವಿರೋಧಿಸಿ, ಪ್ರಶ್ನಿಸಿ, ಎದುರಿಸಿ, ಒಪ್ಪಿ, ಅಪ್ಪುವ ಅವಕಾಶ ಯಕ್ಷಗಾನ ಕಲಾ ವಲಯದ ಜನತೆಗೆ ಹೆಚ್ಚು. ಪುರಾಣ ಪಾತ್ರಗಳನ್ನೂ ದಿನವೂ ಮಾತನಾಡಿಸುವಂತೆ.. ಏಕೆಂದರೆ ಇಲ್ಲಿ ದಿನನಿತ್ಯವೂ ನೂರಾರು ಆಟ.

ಈ ನೆಲೆಯಲ್ಲಿ ʼಪುರಾಣ ಪಾತ್ರಗಳ ವರ್ತಮಾನʼ ಎಂಬ ಸರಣಿಯನ್ನು ಪುರಾಣ ಮತ್ತು ಯಕ್ಷಗಾನದ ಸಮೀಕರಣದೊಂದಿಗೆ ಆರಂಭಿಸಿದ್ದೇವೆ. ಸದ್ಯ ಆಯ್ದ ಸಹೃದಯರು ಪುರಾಣ ಪಾತ್ರಧಾರಿಗಳಾಗಿ ತಮ್ಮ ಅನುಭವ, ಅದರ ತಯಾರಿಯಲ್ಲಿನ ಅನುಭವ, ಅಥವಾ ರಂಗಸ್ಥಳದಲ್ಲಿ ಪುರಾಣ ಪಾತ್ರಗಳನ್ನು ಕಂಡ ಬಗೆ, ರಂಗದ ಹಿಂದಿನ ಚೌಕಿಯ ನೆನಪು, ಮತ್ತು ಅದರಿಂದ ಬದುಕಿಗೇನು? ಬದುಕಲ್ಲಿ ಏನು? ಎಂದು ಚರ್ಚಿಸುತ್ತಾರೆ.

ಮುಂದೆ ಇದನ್ನು ವಿಸ್ತರಿಸುವ ಇರಾದೆ ಇದೆ. ಈ ನೆಲೆಯಲ್ಲಿ ತಾವೂ ಕೂಡ ಮೇಲಿನ ಉದ್ದೇಶಕ್ಕೆ ಸರಿಯಾಗಿ ತಮ್ಮ ಬರಹವನ್ನು ನಮಗೆ ಕಳುಹಿಸಿಕೊಡಬಹುದು. ಮೇಲ್ ಮಾಡುವಾಗ ‘ಯಕ್ಷಗಾನ’, ‘ಯಕ್ಷರಂಗ’ ಅಥವಾ ‘ಪುರಾಣ ಪಾತ್ರಗಳ ವರ್ತಮಾನ’ ಸರಣಿಗೆ ಲೇಖನ ಎಂದು ನಮೂದಿಸಲು ಮರೆಯಬೇಡಿ.

ನಮ್ಮ ಇಮೇಲ್‌ ವಿಳಾಸ:  tv9kannadadigital@gmail.com 

ಇದನ್ನೂ ಓದಿ: Yakshagana: ಭೂಜಾತೆ ಸೀತೆಗೆ ಭೂಮಿಯಷ್ಟೇ ಸಹನೆ; ಅದು ನಮಗೆ ದಾರಿದೀಪ  

ಇದನ್ನೂ ಓದಿ: Yakshagana: ಬಡತನವೋ ಸಿರಿತನವೋ ಎಳೆಯರನ್ನು ಬಾಧಿಸದಿರಲಿ

Published On - 4:26 pm, Sun, 29 August 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ