ಜಾತಿ ನಿಂದನೆ ಆರೋಪದಡಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಲಾಯರ್ ಜಗದೀಶ್ ಬಂಧನ
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸ್ಪರ್ಧಿಸಿದ್ದ ಲಾಯರ್ ಜಗದೀಶ್ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಜಾತಿ ನಿಂದನೆ ಆರೋಪದಲ್ಲಿ ಕೊಡಿಗೆಹಳ್ಳಿ ಠಾಣೆ ಪೊಲೀಸರು ಜಗದೀಶ್ ಅವರನ್ನು ಅರೆಸ್ಟ್ ಮಾಡಿದ್ದಾರೆ. ಮಂಜುನಾಥ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ.

ವಿವಾದಗಳಿಗೂ, ಲಾಯರ್ ಜಗದೀಶ್ (Lawyer Jagadish) ಅವರಿಗೂ ಎಲ್ಲಿಲ್ಲದ ನಂಟು. ಸದಾ ಅವರು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಸದಾ ಕಾಲ ಸದ್ದು ಮಾಡುತ್ತಾರೆ. ಇತ್ತೀಚೆಗೆ ಅವರ ವಿರುದ್ಧ ಜಾತಿ ನಿಂದನೆ ಆರೋಪ ಎದುರಾಗಿತ್ತು. ಮಂಜುನಾಥ್ ಎಂಬುವವರು ನೀಡಿದ್ದ ದೂರಿನ ಮೇರೆಗೆ ಎಫ್ಐಆರ್ (FIR) ದಾಖಲು ಮಾಡಲಾಗಿತ್ತು. ಇಂದು (ಆಗಸ್ಟ್ 22) ಬೆಂಗಳೂರಿನಲ್ಲಿ ಲಾಯರ್ ಜಗದೀಶ್ ಅವರನ್ನು ಬಂಧಿಸಲಾಗಿದೆ. ‘ಬಿಗ್ ಬಾಸ್ ಕನ್ನಡ’ (Bigg Boss Kannada) ಶೋನಲ್ಲಿ ಇದ್ದಾಗಲೂ ಜಗದೀಶ್ ಅವರು ವಿವಾದಗಳನ್ನು ಮಾಡಿಕೊಂಡಿದ್ದರು.
ಬೆಂಗಳೂರಿನ ಕೊಡಿಗೆಹಳ್ಳಿ ಠಾಣೆ ಪೊಲೀಸರಿಂದ ವಕೀಲ ಜಗದೀಶ್ ಅವರ ಬಂಧನ ಆಗಿದೆ. ಅವರನ್ನು ಠಾಣೆಗೆ ಕರೆತಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಲಾಯರ್ ಜಗದೀಶ್ ಅವರು ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪ ಇದೆ. ಗುರುವಾರ (ಆಗಸ್ಟ್ 21) ಅವರಿಗೆ ನೋಟಿಸ್ ನೀಡಲು ತೆರಳಿದ್ದಾಗ ಮನೆಯ ಬಾಗಿಲು ತೆರೆಯದೇ ಹೈಡ್ರಾಮಾ ಮಾಡಿದ್ದರು.
ಪೊಲೀಸರಿಂದ ಬಂಧನಕ್ಕೆ ಒಳಗಾಗುವಾಗ ಜಗದೀಶ್ ಅವರು ಫೇಸ್ಬುಕ್ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದರು. ‘ಯಾರೂ ಅಶಾಂತಿ ಮಾಡಬೇಡಿ. ಇದು ಸಾಮಾನ್ಯ ಪ್ರಕ್ರಿಯೆ’ ಎಂದು ಅವರು ಹೇಳಿದ್ದಾರೆ. ಅಲ್ಲದೇ ಈ ವಿಡಿಯೋದಲ್ಲಿನ ಕ್ಯಾಪ್ಷನ್ನಲ್ಲಿ ತಮ್ಮ ನಿಲುವು ಏನು ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.
‘ನಮಸ್ಕಾರ ಕರ್ನಾಟಕ. ಇಂದು ಕೊಡಿಗೆಹಳ್ಳಿ ಪೊಲೀಸರು ನನ್ನನ್ನು ವಶಕ್ಕೆ ಪಡೆದಿದ್ದಾರೆ. ನಾನು ಧರ್ಮಸ್ಥಳ ಅತ್ಯಾಖಂಡ ವಿರುದ್ಧ ಸತ್ಯವನ್ನು ಹೇಳಿದ್ದೇ ತಪ್ಪೇ ಸಮಾಜದಲ್ಲಿ ತಪ್ಪು ನಡೆದಾಗ ಧ್ವನಿ ಎತ್ತುವುದು ನಮ್ಮ ಸಂವಿಧಾನಿಕ ಹಕ್ಕು. ನ್ಯಾಯಕ್ಕಾಗಿ ಹೋರಾಡುವುದು ಅಪರಾಧವಲ್ಲ’ ಎಂದು ಅವರು ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಫ್ಯಾನ್ ಪೇಜ್ ನಿರ್ವಹಣೆಗೆ ದರ್ಶನ್ 25 ಲಕ್ಷ ಖರ್ಚು ಮಾಡ್ತಾರೆ; ಲಾಯರ್ ಜಗದೀಶ್
ಇಂದು (ಆಗಸ್ಟ್ 22) ಫೇಸ್ಬುಕ್ನಲ್ಲಿ ಜಗದೀಶ್ ಅವರು ಸರಣಿ ಪೋಸ್ಟ್ ಮಾಡಿದ್ದಾರೆ. ‘ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ನಾನು ಸಾಕಿದ ನಾಯಿಗಳಿಗೆ ವಿಷ ಹಾಕಿ ಕೊಂದಿದ್ದಾರೆ. ಇದು ಕೇವಲ ಪ್ರಾಣಿಗಳ ಮೇಲೆ ನಡೆದ ದೌರ್ಜನ್ಯವಲ್ಲ. ನನ್ನ ಕುಟುಂಬದ ಮೇಲಿನ ಕ್ರೂರ ದಾಳಿ’ ಎಂದು ಪೋಸ್ಟ್ ಮಾಡಿದ್ದಾರೆ. ಬಳಿಕ, ಇನ್ನೊಂದು ನಾಯಿಗೂ ಹಿಂಸೆ ನೀಡಿರುವ ಬಗ್ಗೆ ತಿಳಿಸಿದ್ದಾರೆ.
‘ನಮ್ಮ ಮನೆಯ ಮತ್ತೊಂದು ನಾಯಿಯ ಕಾಲಿಗೆ ಬಲವಾಗಿ ಹೊಡೆದು ಭಾರಿ ನೋವುಂಟು ಮಾಡಿದ್ದಾರೆ. ನಿರಪರಾಧ ಪ್ರಾಣಿಗೆ ಇಂತಹ ಕ್ರೂರ ಕೃತ್ಯ ಮಾಡಿದವರ ವಿರುದ್ಧ ನ್ಯಾಯ ದೊರಕಬೇಕೆಂದು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ಪ್ರಾಣಿಗಳನ್ನು ಪ್ರೀತಿಸಿ. ಅವುಗಳಿಗೂ ಜೀವ, ಭಾವನೆ ಇದೆ. ಕ್ರೂರತೆಗೆ ನಾವು ಮೌನವಾಗಬಾರದು’ ಎಂದು ಅವರು ಬರೆದುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



