Poetry : ಅವಿತಕವಿತೆ ; ‘ನೀ ಮಾಡಿದ್ದೇನು, ದುಡಿದು ತಂದಿದ್ದೇನು, ಮಾಡಿಟ್ಟ ಆಸ್ತಿಯೇನು?’

Poem : ‘ನನ್ನ ಮನದಲ್ಲಿ ಏಳುವ ಅಲೆಗಳ ಉಬ್ಬರಿಳಿತ ಒಂದು ಹನಿಯಾಗಿ ಕ್ರೋಢೀಕರಣಗೊಳ್ಳುವುದು ಕವಿತೆಯಲ್ಲೇ ಎನ್ನಿಸಿದಾಗ ಈ ಪ್ರಕಾರವನ್ನು ಗಂಭೀರವಾಗಿ ಪರಿಗಣಿಸಿದೆ. ಕ್ರಮೇಣ ಕವಿತೆಗಳೇ ನನ್ನ ಅರುಹುವಿಕೆಯ ತಾಣ ಎಂದೆನ್ನಿಸತೊಡಗಿತು.’ ಶಾಂತಾ ಜಯಾನಂದ್  

Poetry : ಅವಿತಕವಿತೆ ; ‘ನೀ ಮಾಡಿದ್ದೇನು, ದುಡಿದು ತಂದಿದ್ದೇನು, ಮಾಡಿಟ್ಟ ಆಸ್ತಿಯೇನು?’
Follow us
ಶ್ರೀದೇವಿ ಕಳಸದ
|

Updated on:Oct 31, 2021 | 11:07 AM

Kannada Poetry : ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಕವಿ ಶಾಂತಾ ಜಯಾನಂದ್ ಅವರ ಪ್ರಥಮ ಕವನ ಸಂಕಲನ ‘ಹುಡುಗಿಟ್ಟ ಭಾವಗಳ ಮತ್ತೆ ನುಡಿಸಿ’ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ಸಂದರ್ಭದಲ್ಲಿ ಅವರ ಕವಿತೆಗಳು ನಿಮ್ಮ ಓದಿಗೆ.    

ಕನ್ನಡದ ನವೋದಯ ಪೂರ್ವಕಾಲದಿಂದಲೂ ಗುರುತಿಸಬಹುದಾದ ಆಧುನಿಕ ಮಹಿಳಾ ಕಾವ್ಯ ಇಂದು ಹಿಂದೆಂದಿಗಿಂತಲೂ ವೈವಿಧ್ಯಮಯವಾಗಿ ಬೆಳೆದು, ತನ್ನದೇ ಆದ ತಾತ್ವಿಕತೆಯ ಕಡೆಗೆ ಮುಖ ಮಾಡಿದೆ. ಪಂಥ-ಪಂಗಡಗಳ ಹಿನ್ನೆಲೆಯಲ್ಲಿ ಈ ಕಾವ್ಯವನ್ನು ಸೀಳಲಾಗದು. ಒಂದು ಕ್ಷಣ ಪುರುಷರಿಗೂ ಮಾದರಿಯಾಗಬಹುದಾದ ಕಾಳಜಿಗಳೊಂದಿಗೆ ಅದು ತನ್ನ ಸ್ವಂತಿಕೆಯನ್ನ ಈಗ ಸಾಬೀತುಗೊಳಿಸಿದೆ. ಪ್ರಸ್ತುತ ಶಾಂತಾ ಜಯಾನಂದರವರ ಕವಿತೆಗಳ ಈ ಗುಚ್ಚ ಧರೆ-ಗೆರೆ, ಮನೆ-ಮಳೆ, ದೇವರು, ಧರ್ಮ, ದಾಂಪತ್ಯದ ಸಾಂಕೇತಿಕತೆಗಳನ್ನು ಮುರಿದು ಕಟ್ಟುತ್ತ, ಮನುಷ್ಯರ ಕಾವ್ಯ ಹಾಡುವ, ಮನಸ್ಸುಗಳ ಕಾಡುವ ಹಾಡಾಗಿ ಹೊರಹೊಮ್ಮಿದೆ. ಕವಯತ್ರಿ ಶಾಂತಾ ಜಯಾನಂದ ಸಖನಿಗಾಗಿ ಬದುಕ ಕಾಪಿಟ್ಟವಳು, ಹುದಿಗಿಟ್ಟ ಭಾವಗಳ ನುಡಿಸಿ ಹೊರಗೆ ಹೊರಟವಳು, ಮೈಗೆ ಮೂಡಿದ ಒಂದೊಂದು ಗೆರೆಯೂ ಆತನ ರುಜುವೆಂದು ಸಂಭ್ರಮಿಸಿದವಳು, ಹೆಣ್ಣಾದ ಕಾರಣ ಬುದ್ಧಳಾಗಲಾರೆ ಎಂದು ಸಂಕಟ ಪಟ್ಟವಳು, ಹೃದಯದ ಕಪಾಟಿನಲ್ಲಿ ಒಲವ ಬಚ್ಚಿಟ್ಟುಕೊಂಡು ದುಃಖಕ್ಕೆ ತುಟಿ ಕಚ್ಚಿ ಹಿಡಿದವಳು. ಎಲ್ಲಕ್ಕೂ ಮಿಗಿಲಾಗಿ ಬಾಲೆಯರ ಬಾಳಿಗೆ ಬೆಳಕಾಗಿ ಬನ್ನಿ ಎಂದು ಜಗದ ದೇವರಿಗೆಲ್ಲ ಮೊರೆಯನಿಟ್ಟವಳು. ಕಾರಣ ಹೆಣ್ಣು ಅವಳು.  ರಾಗಂ, ಲೇಖಕರು 

ಕವಿತೆ ಹುಟ್ಟಲು ಅಭದ್ರತೆ ಮತ್ತು ಸಂಕಟಗಳಿಂದ ರೂಪುಗೊಂಡ ಜೀವನಾನುಭವ ಇರಬೇಕು ಎನ್ನುತ್ತದೆ ಕಾವ್ಯಧರ್ಮ. ಈ ಹಿನ್ನೆಲೆಯಲ್ಲಿ ಹಸಿವು, ಅಸಹಾಯಕತೆ, ಬದುಕಿನ ಸಂಕಷ್ಟಗಳು ಕನ್ನಡ ಕಾವ್ಯದಲ್ಲಿ ಹಲವು ಬಗೆಯ ರೂಪಕಗಳಾಗಿ ರಚಿಸಲ್ಪಟ್ಟಿವೆ ಮತ್ತು ರಚಿಸಲ್ಪಡುತ್ತಿವೆ. ಇದು ಅಭದ್ರತೆಯೊಳಗೆ ಅರಳುವ ಸೃಜನಶೀಲತೆಯ ಭಿತ್ತಿಯಾದರೆ, ಹಸಿವು ಬಾಯಾರಿಕೆ ಹಿಂಸೆ ಇನ್ನಿತರ ಸಂಕಟಗಳಿಲ್ಲದ ಭಾವ ಜಗತ್ತಿನ ಅಭದ್ರತೆಗಳು ಇಡೀ ಸ್ತ್ರೀ ಸಂಕುಲವನ್ನೇ ಬಾಧಿಸಿವೆ. ಹೇಳಿಕೊಳ್ಳಲಾಗದ, ಹೇಳಿಕೊಂಡರೂ ಹೇಳುವ ಬಗೆಯನ್ನು ಕಂಡುಕೊಳ್ಳುವ ಅಥವಾ ಯಾರಿಗೂ ಏನನ್ನೂ ಹೇಳಿಕೊಳ್ಳದೆ ತನ್ನೊಳಗೆ ತಾನು ಅನುಭವಿಸಿದ ಸಂಕೋಚ ಮತ್ತು ತಳಮಳಗಳಿಗೆ ಮಾತು ಕೊಡುವ ಮಹಿಳಾ ಕಾವ್ಯದ ನಿರೂಪಣೆಗಳು ನಮ್ಮ ಕಾವ್ಯಪರಂಪರೆಯಲ್ಲಿವೆ. ಈ ಹಾದಿಯಲ್ಲಿ ಶಾಂತಾ ಜಯಾನಂದ್ ಅವರ ಕವಿತೆಗಳು ತನ್ನದೇ ಆದ ಹೊಸತನಗಳಿಂದ ಕೂಡಿವೆ. ಅವರ ಪ್ರತಿ ಕವಿತೆಯನ್ನು ಓದಿ ಅದಕ್ಕೆ ಮಾತಾಗುವಾಗ ಕವಿ-ಸಹೃದಯ ಸಂಬಂಧದ ಅರ್ಥ ವಿಸ್ತರಿಸಿಕೊಂಡಂತೆ ಅವರ ಕವಿತೆಗಳ ಜೊತೆಗಿನ ಯಾನದಲ್ಲಿ ನನಗೆ ತೋರುತ್ತದೆ. ಅವರ ಒಟ್ಟು ಕವಿತೆಗಳು ಪ್ರಕೃತಿಯನ್ನು ಒಳಗೊಳ್ಳುತ್ತಲೇ ಸಮಾಜ, ಕುಟುಂಬ ಮತ್ತು ಭಾವುಕ ಜಗತ್ತಿಗೆ ಬೇಕಾದ ಆತ್ಮೀಯತೆಯ ಸ್ಪರ್ಶಕ್ಕಾಗಿ ಹಾತೊರೆಯುತ್ತವೆ. ಡಾ. ಬೇಲೂರು ರಘುನಂದನ್, ಕವಿ

*

ಬುದ್ಧ ಮತ್ತು ತಾಯಿ 

ನಟ್ಟಿರುಳ ರಾತ್ರಿಯಲಿ ಬದುಕು ಬೇಸರ ವೆನಿಸಿ ನೆಟ್ಟಗೆ ನಡೆದು ಹೋದೆ ನೀನು ಜ್ಞಾನೋದಯವನ್ನು ಅರಸುತ್ತಾ 

ನಾನು ನಿನ್ನ ಮಡದಿ ನಿನ್ನಂತೆ ನಡುರಾತ್ರಿಯಲಿ ಬದುಕು ಬೇಸರವೆನಿಸಿದಾಗ ಮನೆಯ ಬಿಟ್ಟು ತೆರಳಬಹುದೇ?

ನೀನು ಕಂಡ ಬೋಧಿ ವೃಕ್ಷ ಜ್ಞಾನೋದಯದ ಹಾದಿಯಲಿ ಅರಸೊತ್ತಿಗೆ ಕರ್ತವ್ಯವಿರಲು ಕರುಳ ಬಳ್ಳಿಯ ವಾತ್ಸಲ್ಯವಿರಲು ನಿನ್ನಂತೆ ನಾನು ಬರಲು ಸಾಧ್ಯವೇ?

ನೀನೆಂದೆ ಸ್ವತಂತ್ರ ಸನ್ಯಾಸಿ ನಾನು ಅರಮನೆಯೆಂಬ ಸೆರೆಮನೆಯಲ್ಲಿ ಬಂಧಿ ನೀನು ಬುದ್ಧ ಲೋಕ ಮಾನ್ಯ ನಾನೊಬ್ಬಳು ತಾಯಿ ಅಷ್ಟೇ 

*

ಹುದುಗಿಟ್ಟ ಭಾವಗಳ ಮತ್ತೆ ನುಡಿಸಿ

ಬರೆಯಲೇ ಬೇಕಿದೆ ನಾನು ಹುದುಗಿಟ್ಟ ಭಾವಗಳ ನುಡಿಸಬೇಕಿದೆ ತೆರೆದಿಟ್ಟ ಭಾವಗಳ ಬೇಲಿಯೊಳಗಿನ ಬದುಕ ನನ್ನದೇ ಪದಗಳಲಿ ಬರೆಯಲೇ ಬೇಕಿದೆ

ಹುದುಗಿಟ್ಟ ಭಾವಗಳು ಸ್ಫೋಟಗೊಂಡಿವೆ ಉಸಿರಿಡಿದು ಪದಗಳಲ್ಲಿ ಅರುಹಿ ನುಡಿಸಬೇಕಿದೆ ಕಾಲ ಪಕ್ಷವಾಗಿದೆ

ಕವಿಯಾಗಲೆಂದಲ್ಲಾ ಸನ್ಮಾನಕ್ಕೆಂದಲ್ಲ. ಕುದಿಕುದಿದು ಉಪ್ಪಳಿಸಿ ದುಃಖಿಸಿ, ಹೊರ ಬರಬೇಕಿದೆ ನಿರಾಳವಾಗಬೇಕಿದೆ

ಕೊರಳೊಳಗೆ ಉಸಿರುತುಂಬಿ ಶಿವನ ಡಮರುಗದಂತೆ ಒಮ್ಮೆ ಸುಮ್ಮನೆ ಹರಿಯುವ ಗಂಗೆಯಂತೆ ಒಮ್ಮೊಮ್ಮೆ ಲಾವರಸ ಉಕ್ಕಿಸುವ ಅಗ್ನಿ ಪರ್ವತದಂತೆ ಮತ್ತೊಮ್ಮೆ ಶಾಂತವಾಗಿ ನಿಂತ ಹಿಮಾಲಯದಂತೆ ಕವಿತೆ ಯಾಗಬೇಕಿದೆ ಹಗುರ ವಾಗಬೇಕಿದೆ

ಮಳೆ ಬಿದ್ದ ಮೇಲೆ ಮೋಡ ಹಗುರಾದಂತೆ ಅಂತರಂಗ ಬನಿಯಬೇಕಿದೆ, ಹುದುಗಿಟ್ಟ ಭಾವಗಳ ಮತ್ತೆ ನುಡಿಸಬೇಕಿದೆ ನುಡಿಸಲೇಬೇಕಿದೆ

*

AvithaKavithe Shantha Jayanand

ನನ್ನ ಭಾವನೆ ಮತ್ತು ಅನುಭವಗಳನ್ನು ವ್ಯಕ್ತಪಡಿಸಲು ಬೇರೆ ಪ್ರಕಾರಗಳು ಅಷ್ಟು ಆಪ್ಯಾಯಮಾನವೆನ್ನಿಸದ ಕಾರಣ ನಾನು ಕವಿತೆಯನ್ನೇ ಆಯ್ಕೆ ಮಾಡಿಕೊಂಡೆ. ಬೇಂದ್ರೆ, ಕೆ.ಎಸ್. ನರಸಿಂಹಸ್ವಾಮಿ, ಎಚ್​.ಎಸ್​. ವೆಂಕಟೇಶಮೂರ್ತಿಯಂಥವರ ಕವಿತೆಗಳನ್ನು ಓದುತ್ತ, ಅವು ನನ್ನದೇ ಭಾವಗಳು ಅನ್ನಿಸುತ್ತ ಹೋದಂತೆ ನನಗೂ ಕವಿತೆಯ ಕಡೆ ಒಲವು ಮೂಡಿತು. ಕ್ರಮೇಣ ಕವಿತೆಗಳೇ ನನ್ನ ಅರುಹುವಿಕೆಯ ತಾಣ ಎಂದೆನ್ನಿಸತೊಡಗಿತು. ನನ್ನ ಮನದಲ್ಲಿ ಏಳುವ ಅಲೆಗಳ ಉಬ್ಬರಿಳಿತ ಒಂದು ಹನಿಯಾಗಿ ಕ್ರೋಢೀಕರಣಗೊಳ್ಳುವುದು ಕವಿತೆಯಲ್ಲೇ ಎನ್ನಿಸಿದಾಗ ಈ ಪ್ರಕಾರವನ್ನು ಗಂಭೀರವಾಗಿ ಪರಿಗಣಿಸಿದೆ.  

ಮನೆ

ಗೆಳತಿಯರೆಲ್ಲಾ “ಮನೆಯನ್ನು ನಿಮ್ಮ ಯಜಮಾನರು ಚೆನ್ನಾಗಿ ಕಟ್ಟಿಸಿದ್ದಾರೆ” ಎನ್ನುತ್ತಾರೆ ನಾನು ನಕ್ಕು ಸುಮ್ಮನಾದೆ

ಬಂಧುಗಳೆಲ್ಲಾ “ನಿನ್ನ ಗಂಡ ದುಡಿದು ಕಟ್ಟಿಸಿದ ಮನೆ ಸುಂದರವಾಗಿದೆ” ನನಗೆ ನಕ್ಕು ಸುಮ್ಮನಾಗಲು ಆಗಲಿಲ್ಲ

ದೂರದ ನೆಂಟರು “ಅವರಿಗೇನು ಕಡಿಮೆ ಅರಮನೆಯಂಥಾ ಮನೆ ಕಟ್ಟಿಸಿದ್ದಾರೆ” ಎನ್ನುತ್ತಾರೆ ಯಾವ ಪ್ರತಿಕ್ರಿಯೆಗಳನ್ನೂ ನೀಡಲು ಮನಸ್ಸಾಗಲಿಲ್ಲ

ಅವರು ನಾನು ಒಂದಾದ ದಿನದಿಂದ ಮನೆ ಮಕ್ಕಳ ಬಗ್ಗೆ ಯೋಚಿಸಿದ್ದೇವೆ ನನ್ನನ್ನು ಬಿಟ್ಟು ಅವರನ್ನು ಮಾತ್ರ ಕಾಣುವ ಲೋಕಕ್ಕೆ ಏನು ಹೇಳಬೇಕೋ ! ತಿಳಿಯುತ್ತಿಲ್ಲ

ಮನೆಯೆಂದರೆ ಇಟ್ಟಿಗೆ ಸಿಮೆಂಟುಗಳ ಮಿಶ್ರಣವಲ್ಲ ಸತಿಪತಿಯರು ಒಂದಾಗಿ ಬೆರೆತ ಬೆಚ್ಚನೆಯ ಗೂಡು ಇನ್ನೂ ಯಾರಿಗೂ ತಿಳಿಯುತ್ತಿಲ್ಲ

*

ಬಾಳ ಸಂಜೆಯ ಪ್ರಶ್ನೆಗಳು  

ಸೂರ್ಯ ಮುಳುಗಿದ ಕುರುಹು ಕೆಂಪಾಗಿದೆ ಆಗಸ ಇಳಿ ಸಂಜೆ ಇನ್ನು ಕತ್ತಲಾವರಿಸಿಲ್ಲ

ಪಯಣದಲಿ ಬಂಡಿಗೆ ಎಳೆಗರುವ ನೊಗಕೆ ಕಟ್ಟಿ ಹೆಗಲಿಗೆ ಹೆಗಲ ಕೊಟ್ಟು ಉದಯಿಸುವ ರವಿಯೊಡನೆ ಕೆಂಡ ಬಿಸಿಲು ಮಧ್ಯಾಹ್ನದ ಉರಿ ಬಿಸಿಲು

ಎಳೆದ ಬಾಳ ಬಂಡಿಯಲಿ ಎಲ್ಲೂ ಕಾಣಬರುತ್ತಿಲ್ಲ ಹೆಜ್ಜೆ ಗುರುತುಗಳು ಇನ್ನು ಕತ್ತಲಾವರಿಸಿಲ್ಲ. ತಿರುಗಿ ನೋಡಿ ದುಃಖ ಉಮ್ಮಳಿಸುತ್ತಿದೆ ಕಾಣದಾಗಿವೆ ನಾ ನಡೆದ ಹೆಜ್ಜೆ ಗುರುತುಗಳು

ನೀ ಮಾಡಿದ್ದೇನು? ದುಡಿದು ತಂದಿದ್ದೇನು? ಮಾಡಿಟ್ಟ ಆಸ್ತಿಯೇನು? ಯಾವ ದಾಖಲೆಗಳಿಲ್ಲ ಕೇಳಿದ ಗಟ್ಟಿ ಧ್ವನಿಗೆ ಎಲ್ಲವೂ ಬರೀ ಶೂನ್ಯ ಇನ್ನೂ ಕತ್ತಲಾವರಿಸಿಲ್ಲ

ನಾ ಮಾಡಿದ್ದೇನು ಕಣ್ಣು ಕತ್ತಲು ಬರುತ್ತಿದೆ ಹೌದು ನಾ ಮಾಡಿದ್ದೇನು? ಹೃದಯ ಅದುರಿದ ಅನುಭವ, ಸುಮ್ಮನೆ ನಗಬೇಕೆನಿಸಿದೆ. ಓದಿ, ಬರೆದು ಸಂಬಳ ತಂದಿದ್ದರೆ ದಾಖಲೆ ಇರುತ್ತಿತ್ತು ಪ್ರಶ್ನೆಗೆ ಉತ್ತರವಿರುತ್ತಿತ್ತು

ನಡೆದ ಹೆಜ್ಜೆಗಳಿಗೆ ಹಿಂದೆ ಬಿಟ್ಟು ಸಾಗಿಬಂದ ದಾರಿಗೆ ದಾಖಲಾತಿ ಸೃಷ್ಟಿಸಬೇಕಿತ್ತು ಆದರೇನು ಮಾಡುವುದು ಹೆಜ್ಜೆಗಳೇ ಅಳಿಸಿವೆಯಲ್ಲಾ? ಇನ್ನೂ ಕತ್ತಲಾವರಿಸಿಲ್ಲಾ.  

ಅಸ್ತಿತ್ವ ಹುಡುಕಿ ಅಳಿಸಿದ ಹೆಜ್ಜೆ ಗುರುತುಗಳ ಹುಡುಕಿ, ನೀ, ಮಾಡಿದ್ದೇನು? ಎನ್ನುವಾಗ ಇಲ್ಲ ಇನ್ನು ಕತ್ತಲಾವರಿಸಿಲ್ಲ ಬಾಳ ಸಂಜೆಯ ಪ್ರಶ್ನೆಯೆದುರು ಇನ್ನೂ ಕತ್ತಲಾವರಿಸಿಲ್ಲ 

*

AvithaKavithe Shantha Jayanand

ಬಿಡುಗಡೆಗೆ ಸಿದ್ಧವಾಗಿರುವ ಶಾಂತಾ ಅವರ ಕವಿತಾ ಸಂಕಲನ

ಗೆರೆ 

ಜೀವನದ ನೋವಿನಾನುಭವದ ಗೆರೆಗಳನ್ನೆ ಮುಖದ ತುಂಬ ಹೊತ್ತ ಚೆಲುವಿನಾ ಪಳೆಯುಳಕೆ ನೀನಲ್ಲವೇ?

ನಿನ್ನಮುಖಾರವಿಂದದಲಿ ಮೂಡಿರುವ ಒಂದೊಂದು ಗೆರೆಯು ನೀಬದುಕಿದ ಬದುಕಿನ ರುಜುವು 

ನೋವನ್ನುಂಡು ನೋವನ್ನೇ ಹೊದ್ದಿರುವಂತಿದೆ ದುಃಖದ ಮಡುವಲ್ಲೇ ಈಜಿದೆಯಾ? ಎಂತಹ ಸೌಂದರ್ಯವತಿ ನೀನು ಯಾರ ಮನದರಸಿಯೋ ಹೀಗೇತಕೆ ಹತಾಶೆಯೇ ಮೈವೆತ್ತಂತಿದೆ?

ತಬ್ಬಿ ಸಾಂತ್ವಾನಿಸಲೇನಿನ್ನ ಮನದನೋವಿಗೆ ಮುಲಾಮಿಲ್ಲವೇ ಒಮ್ಮೆ ದುಃಖಳಿಸಿ ಅತ್ತುಬಿಡು ಹರಿದು ಹೋಗಲಿ ಹಿಡಿದಿಟ್ಟ ದುಃಖದಾ ಮಡುವು

ಬದುಕಿನಾ ಬವಣೆಗಳಿಗೆ ತಿಲಾಂಜಲಿಯನ್ನಿತ್ತು ಬುದ್ದನಾಗಬೇಕಿತ್ತು ನೀನು ಹೆಣ್ಣು ಜೀವಕ್ಕಲ್ಲಿಯದು ಬುದ್ದನಾಗುವ ಸ್ವಾತಂತ್ರ್ಯ ಬದುಕಿನುದ್ದಕ್ಕು ವಿಷಾದವೇ ಮಂತ್ರವಲ್ಲವೇ 

*

ಕೃತಿ : ಹುದುಗಿಸಿಟ್ಟ ಭಾವಗಳ ಮತ್ತೆ ನುಡಿಸಿ (ಕವಿತಾ ಸಂಕಲನ) ಪುಟ : 85 ಬೆಲೆ : ರೂ. 90 ಮುಖಪುಟ ಕಲೆ : ಜಬೀವುಲ್ಲಾ ಎಂ. ಅಸದ್ ಮುಖಪುಟ ವಿನ್ಯಾಸ : ಕೆ. ಪುರುಷೋತ್ತಮ ಪ್ರಕಾಶನ : ಕಾಜಾಣ ಪ್ರಕಾಶನ, ಬೆಂಗಳೂರು

(ಸಂಕಲನ ಖರೀದಿಗೆ ಸಂಪರ್ಕಿಸಿ : 9483793275 )

ಪರಿಚಯ :  ಬೆಂಗಳೂರಿನಲ್ಲಿ ವಾಸಿಸುವ ಶಾಂತಾ ಜಯಾನಂದ್ ಅವರು ತರೀಕೆರೆ ಮೂಲದವರು. ಶಿವಮೊಗ್ಗದಲ್ಲಿ ಶಿಕ್ಷಣ. ಬಾಲ್ಯದಿಂದಲೇ ಸಾಹಿತ್ಯ, ಕ್ರೀಡೆ, ನಾಟಕ ಮತ್ತು ಗಾಯನದಲ್ಲಿ ಆಸಕ್ತಿ. ಸಮಾಜಶಾಸ್ತ್ರ ಮತ್ತು ಕನ್ನಡ ಸಾಹಿತ್ಯದಲ್ಲಿ ಎಂ.ಎ ಪದವಿಯನ್ನು ಪಡೆದುಕೊಂಡ ಇವರು ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಎಂ. ಫಿಲ್ ಪದವಿಯನ್ನು ಪೂರೈಸಿದ್ದಾರೆ. ಚಂದನವಾಹಿನಿಯಲ್ಲಿ ನಿರೂಪಕಿಯಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಡಾಕ್ಯುಮೆಂಟರಿ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಇವರು ಎಂ.ಎಸ್ ರಾಮಯ್ಯ,  ಲಾ ಮತ್ತು ಮ್ಯಾನೇಜ್ಮೆಂಟ್ ಕಾಲೇಜು ಹಾಗೂ ಇಂಡಿಯನ್ ಅಕಾಡೆಮಿ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 

ಇದನ್ನೂ ಓದಿ : Poetry : ಅವಿತಕವಿತೆ ; ‘ದೂರದ ಬೆಟ್ಟಗಳು ನನ್ನಿಂದ ನಿನ್ನನು ಮರೆಮಾಚಿಹವು, ಹತ್ತಿರದಲ್ಲಿರುವವು ನನ್ನನು ಆವರಿಸಿಕೊಂಡಿಹವು’

Published On - 9:31 am, Sun, 31 October 21

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ