Poetry : ಅವಿತಕವಿತೆ : ಅರಿವುದು ಬೇರೆ ಅನುಭವ ಬೇರೆ, ಅನುಭವ ನನಗಿಲ್ಲ

Poem : ‘ಈ ಪಯಣದಲ್ಲಿ 'ಬಾಲ್ಯದಲ್ಲಿ ನನಗೊದಗಿಬಂದ ಮಾಯಾದೀಪ' ಕಾವ್ಯವು ಸ್ವತಃ ಬೆಳೆಯುತ್ತ ನನ್ನನ್ನೂ ಬೆಳೆಸುತ್ತಿದೆ. ಅದು ನಮ್ಮ ಕಾವ್ಯ ಪರಂಪರೆಯ ಬೆಳಕಿನ ಹಾದಿಯ ನಡಿಗೆ. ಅದರಲ್ಲಿ ಸುಖವಿದೆ, ಸಂತೋಷವಿದೆ ಮತ್ತು ಅದು ಸಂಪೂರ್ಣ ವ್ಯಕ್ತಿತ್ವದ ಶರಣಾಗತಿಯನ್ನೇ ಬಯಸುವ ಘನ ಕಾಯಕ ಎಂಬುದೂ ಅರ್ಥವಾಗಿದೆ. ಅದು ನನ್ನ ಕೈಲಿರುವಂತೆಯೇ ನಾನೂ ಕಾವ್ಯದ ಕೈಯಲ್ಲಿದ್ದೇನೆ.‘ ಚಿಂತಾಮಣಿ ಕೊಡ್ಲೆಕೆರೆ

Poetry : ಅವಿತಕವಿತೆ : ಅರಿವುದು ಬೇರೆ ಅನುಭವ ಬೇರೆ, ಅನುಭವ ನನಗಿಲ್ಲ
Follow us
ಶ್ರೀದೇವಿ ಕಳಸದ
|

Updated on:Sep 26, 2021 | 8:33 AM

Kannada Poetry : ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ.  ಹಿರಿಯ ಕವಿ ಚಿಂತಾಮಣಿ ಕೊಡ್ಲೆಕೆರೆ ಅವರ ‘ಮೈ ಮರೆತು ಕುಣಿವೆ’ ಹೊಸ ಕವನ ಸಂಕಲನ ವಸಂತ ಪ್ರಕಾಶನದಿಂದ ನಿನ್ನೆಯಷ್ಟೇ ಬಿಡುಗಡೆಯಾಯಿತು. ಈ ಸಂದರ್ಭದಲ್ಲಿ ಅವರ ಕವಿತೆಗಳು ನಿಮ್ಮ ಓದಿಗೆ.

ಚಿಂತಾಮಣಿಯವರ ಇತ್ತೀಚಿನ ಕವಿತೆಗಳು… ಅತ್ಯಂತ ಹಗುರವಾದ-ಊದಿದರೆ ಹಾರಿ ಹೋದಾವು ಎನಿಸುವಂಥ-ಕವನಗಳು, ಆದರೆ ಅಷ್ಟೇ ಅರ್ಥಗೌರವದಿಂದ ಕೂಡಿದವು. ಮುಟ್ಟಿದರೆ ಎಲ್ಲಿ ಅಪಾಯವಾದೀತೋ ಎಂಬ ಪಾತರಗಿತ್ತಿ ರೂಪದವು. ಮಗುವಿನ ಮುಗ್ಧತೆ ಇದೆ, ಅಂಥ ಮುಗ್ಧತೆಯನ್ನು ಓದುಗರಲ್ಲಿ ಇವು ಎಬ್ಬಿಸುತ್ತವೆ ಕೂಡ. ಆದರೆ ಮನುಷ್ಯ ಕೆಲವೊಮ್ಮೆ ಕ್ರಿಟಿಕಲ್ ಆಗುತ್ತಾನೆ, ಆಗ ಇಲ್ಲಿನ ಕೆಲವು ಕವನಗಳು ಜಾಳೆನಿಸಬಹುದು. ಅದು ಓದುಗನ ಸಮಸ್ಯೆ. ದಾರಿ ನಡೆಯುವಾಗ ಆಚೀಚೆ ನೋಡಲು ಪುರುಸೊತ್ತಿಲ್ಲದ ಕಾಲದಲ್ಲಿ ನಾವಿದ್ದೇವೆ. ಇಂಥ ವೇಳೆ ಮನುಷ್ಯ ಮನಸ್ಸನ್ನು ಮಿದುವಾಗಿರಿಸುವ ಈ ಕವನಗಳು ಒಟ್ಟಾರೆಯಾಗಿ ಅಮೂಲ್ಯ ಎನ್ನುವುದರಲ್ಲಿ ಸಂದೇಹವಿಲ್ಲ. ಓದಿ ಆನಂದಿಸುವ ಸಹನೆ ಬೇಕು, ಅಷ್ಟೆ. ಮುಖ್ಯವಾಗಿ ಅಹಂಕಾರವನ್ನು ಮೀರುವ ಗುಣ. ಕೆ.ವಿ.ತಿರುಮಲೇಶ್, ಹಿರಿಯ ಸಾಹಿತಿ

ಕಣ್ಣು ಸರಿಯಾಗಿ ಕಾಣಿಸದ ಶಬರಿ ತನ್ನ ತಪಸ್ಸಾದ ರಾಮನಿಗಾಗಿ ಸಿಹಿಸಿಹಿಯಾದ ಬುಗುರಿಯನ್ನೇ ಆಯ್ದು ಸೇರಿಸಿದಂತೆ ಚಿಂತಾಮಣಿ ಕೂಡ್ಲೆಕೆರೆಯವರು ತಮ್ಮ ಕವನದ ಪ್ರತಿ ಶಬ್ದವನ್ನೂ ಸಹನೆಯಿಂದ ಕಾದು ಆರಿಸಿದಂತಿದೆ. ಅವರ ಕವನ ಇಂಥ ಎಚ್ಚರಿಕೆಯಿಂದ ಕಟ್ಟಿದ ಶಿಲ್ಪದಂತೆ ಕಂಡರೆ ಅಚ್ಚರಿಯಿಲ್ಲ. ಹಾಗಾಗಿ ಇಲ್ಲಿನ ಕವಿತೆಗಳಿಗೆಲ್ಲ ಒಂದು ಛಂದೋಬದ್ಧ ಗೇಯತೆ ತನ್ನಿಂತಾನೇ ಪ್ರಾಪ್ತವಾದಂತಿದೆ. ಚಿಂತಾಮಣಿಯವರ ಕವಿತೆಗಳಲ್ಲಿ ದೇವರು ಪ್ರತ್ಯಕ್ಷನಾಗುವುದು ಸಾಮಾನ್ಯ ವಿದ್ಯಮಾನ. ಇದನ್ನು ಜಯಂತ ಕಾಯ್ಕಿಣಿಯವರು “ಕನ್ನಡದಲ್ಲಿ ದೇವರನ್ನು ವಿಶಿಷ್ಟ ವಿನೋದದಿಂದ ಎದುರು ಹಾಕಿಕೊಂಡ ಅಪರೂಪದ ಕವಿ ನೀನು.” ಎಂದು ಗುರುತಿಸಿದ್ದಾರೆ. ಚಿಂತಾಮಣಿಯವರ ದೇವರು ಕೂಡ ಧಾರ್ಮಿಕ, ರಾಜಕೀಯ, ಆಧ್ಯಾತ್ಮಿಕ ವಲಯದ ದೇವರಲ್ಲ. ಇವನು ಬೇರೆಯೇ ದೇವರು! ದೇವರನ್ನು ಮಾತನಾಡಿಸುವ ಚಿಂತಾಮಣಿಯವರು ವರ್ತಮಾನದ “ಚಿಲ್ಲರೆ ಸಂಗತಿ”ಗಳನ್ನೂ, ಕೊಡಲೆಂದು ತಂದೂ ಕೊಡಲಾರದೆ ಉಳಿಸಿಕೊಂಡ “ಪುಡಿಗಾಸಿ”ನ ಭಾರವನ್ನೂ, ಬೀದಿಬದಿಯ ಒಂದು ನಾಯಿಯ ಕೊನೆಯದಿನದ “ನಾಯಿಪಾಡ”ನ್ನೂ ಸೂಕ್ಷ್ಮದೃಷ್ಟಿಯಲ್ಲಿ ಗಮನಿಸುವ ವ್ಯವಧಾನವುಳ್ಳವರು. ಈ ಚಿತ್ರಗಳು ಮನಸ್ಸಿನಲ್ಲಿ ಬಹುದೀರ್ಘಕಾಲ ಉಳಿಯುವಂತೆ, ನಮ್ಮ ಮೌನವನ್ನು ಕಲಕುವಂತೆ ಮಾಡಬಲ್ಲ ಹೃದಯವಂತಿಕೆಯುಳ್ಳವರು. ಹೀಗೆ ಪಾರಮಾರ್ಥಿಕಕ್ಕೂ, ವರ್ತಮಾನಕ್ಕೂ ಏಕಕಾಲಕ್ಕೆ ಸಲ್ಲುವಂತೆ, ಬುದ್ಧಿಗೂ ಭಾವಕ್ಕೂ ಏಕಕಾಲಕ್ಕೆ ನಿಲುಕುವಂತೆ, ಕಾವ್ಯಕ್ಕೂ ಶ್ರಾವ್ಯಕ್ಕೂ ಏಕಕಾಲಕ್ಕೆ ಒದಗುವಂತೆ ಕವಿತೆ ಕಟ್ಟಬಲ್ಲ ಚಿಂತಾಮಣಿಯವರು ಕನ್ನಡದ ದೇವರಕೋಣೆಯಲ್ಲಿ ಉರಿಯುತ್ತಿರುವ ನಂದಾದೀಪದಂತೆ ತಮ್ಮ ಪಾಡಿಗೆ ತಾವು ಬೆಳಗುತ್ತಿದ್ದಾರೆ. (‘ಮೈ ಮರೆತು ಕುಣಿವೆ’ ಬೆನ್ನುಡಿಯಿಂದ) ನರೇಂದ್ರ ಪೈ, ಕಥೆಗಾರ, ವಿಮರ್ಶಕ

*

ವಿಶ್ವವೆ ಕುಟುಂಬ

ವಿಶ್ವವೆ ಕುಟುಂಬ ಎನ್ನುವರಂತೆ ಉದಾರ ಹೃದಯಿಗಳು ಕುಟುಂಬವೆ ವಿಶ್ವ ಎನ್ನುವರಿವರು ಗೂಡು ಕಟ್ಟಿದವರು

ವಿಶ್ವ ಕುಟುಂಬಕೆ ಗೋಡೆಗಳೆಲ್ಲಿವೆ? ಚಾವಣಿ ಆಗಸವೇ! ಕುಟುಂಬ ವಿಶ್ವದ ಕಟ್ಟುಪಾಡುಗಳ ಹೇಳಿ ಮುಗಿಸಬಹುದೆ?

ಸೂರ್ಯ ಚಂದ್ರ ತಾರೆ ಬೆಳಗುವವು ವಿಶ್ವಗೃಹದ ರೂಪ ಗೂಡಿನ ಕತ್ತಲೆ ಕಳೆಯುತ್ತಿರುವುದು ಸಣ್ಣ ಎಣ್ಣೆ ದೀಪ

ವಿಶ್ವೇಶ್ವರನದು ಇಡೀ ಜಗತ್ತು ನಿರಾಕಾರನಂತೆ ನಮ್ಮ ಮನೆಗಳಲಿ ಪಟಗಳಲಿದ್ದು ಕಳೆಯುತಿರುವ  ಚಿಂತೆ

ಅಗಾಧ ವಿಶ್ವದ ವಿಸ್ಮಯಗೊಳಿಸುವ ಬೆಳೆಗಳ ಸಮೃದ್ಧಿ ನಮ್ಮ ಮನೆಗಳಲಿ  ಬೊಗಸೆಗಳಲ್ಲಿ ತರುವುದು ಸಂತೃಪ್ತಿ

ವಿಶ್ವವ್ಯಾಪಕ ಮಹಾನ್ ಕುಟುಂಬದ ದೇವಿ ಜಗಜ್ಜನನಿ ತಾಯಿಯ ರೂಪದಲಿಳಿದುಬಂದಳು ಮನೆಗೆ ಮಹಾಲಕುಮಿ

ವಿಶ್ವಕುಟುಂಬಿಯ ಮೇರೆಗಳಿಲ್ಲದ ಅನಂತ ಬಯಲಲ್ಲಿ ಗೂಡು ಕಟ್ಟುವವು ಕೋಟಿ ಜೀವಗಳು ಉದಿಸಿ ಅಳಿವವಿಲ್ಲಿ

ವಿಶ್ವೇಶ್ವರನದು ಇಡೀ ಬ್ರಹ್ಮಾಂಡ ನಾವೂ ಅವನವರೇ ಗೊಂಬೆ ಮನೆಗಳಲಾಡುತ್ತಿರುವೆವು ಸಂಜೆಯಿಳಿವವರೆಗೆ

AvithaKavithe Chintamani Kodlekere

ಕವಿ ಚಿಂತಾಮಣಿ ಕೊಡ್ಲೆಕೆರೆ ಅವರ ಹೊಸ ಕವನ ಸಂಕಲನ ಮತ್ತು ಕೈಬರಹ

ಯಾಕೆ ಕಾವ್ಯದ ಮೊರೆ ಹೋಗುವೆ?

ಚಿಕ್ಕವನಿದ್ದಾಗ ನಾನು ಗಾಳಿಗೆ ತೂರಿ ಹೋಗುವ ಹಾಗಿದ್ದೆ ಎಂದು  ಹೇಳಿದರೆ ಈಗ  ಯಾರಾದರೂ ನಗಬಹುದು. ಮತ್ತೆ ಮತ್ತೆ ಕಾಯಿಲೆ ಬೀಳುತ್ತಿದ್ದೆ (ಇದು ಹೆಚ್ಚು ಕಡಿಮೆ ಕಾಲೇಜು ಓದುವವರೆಗೂ ಮುಂದುವರಿಯಿತು).  ದುರ್ಬಲ ಶರೀರದೊಡನೆ ಯಾರನ್ನೂ ಮುಖ ಕೊಟ್ಟು ನೋಡದಷ್ಟು ನಾಚಿಕೆ ಬೇರೆ. ನನ್ನ ಮಾತುಗಳೆಲ್ಲವೂ ಮನಸಿನಲ್ಲೇ ಉಳಿಯುತ್ತಿದ್ದವು. ಸಿಟ್ಟು, ಅಸಮಾಧಾನ, ನಿಜವಾದ ಅನಿಸಿಕೆ, ಪ್ರೀತಿಯ ಎರಡು ಮಾತು… ಯಾವುದೂ ಸಾಧ್ಯವಿರಲಿಲ್ಲ. ಆ ಚಿಕ್ಕ ವಯಸ್ಸಿನಲ್ಲೇ ನನಗೆ ದೃಷ್ಟಿದೋಷ ಕಾಣಿಸಿಕೊಂಡಿತು. ಅದನ್ನೂ ಎಷ್ಟೋ ವರ್ಷ ಯಾರಿಗೂ ಹೇಳದೇ ಕಳೆದುಬಿಟ್ಟೆ. ತಂದೆಯವರೇ ಅದನ್ನು ಒಮ್ಮೆ ಶಾಲೆಯಲ್ಲಿ ಪಾಠ ಹೇಳುವಾಗ ಗೊತ್ತುಮಾಡಿ ಕನ್ನಡಕ ಕೊಡಿಸಿದರು. ಓದುವುದರಲ್ಲಿ ತುಂಬಾ ಚುರುಕಾಗಿದ್ದೆ.  ಕೈಗೆ ಏನು ಸಿಕ್ಕರೂ ಓದುತ್ತಿದ್ದೆ. ಕವಿತೆಗಳೆಂದರೆ ಇಷ್ಟ. ಅವನ್ನು ದೊಡ್ಡ ಧ್ವನಿಯಲ್ಲಿ ಒಬ್ಬನೇ ಕೂತು ಓದಿಕೊಳ್ಳುವುದೆಂದರೆ ಇಷ್ಟ. ಹೀಗೆ ಒಂದು ದಿನ ಪದ್ಯ ಬರೆದುಬಿಟ್ಟೆ. ಆಗಿನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದವನು! ನಾನು ಬರೆದುದನ್ನು ಓದಿದ ನನಗಿಂತ ಎರಡು ವರ್ಷ ದೊಡ್ಡವಳಾದ ಅಕ್ಕ ತನ್ನ ತಮ್ಮ  ಕವಿ ಎಂದು ಘೋಷಣೆ ಮಾಡಿದಳು. ಅದಕ್ಕಾಗಿ ನಾವಿಬ್ಬರೂ ಸೇರಿ ಒಂದು ವಿಶೇಷ ಪಟ್ಟಿಯನ್ನೇ (ನೋಟ್ ಬುಕ್) ಸಿದ್ಧಪಡಿಸಿದೆವು. ಅಲ್ಲಿಂದ ಇಲ್ಲಿಯವರೆಗೂ ಪದ್ಯ ಬರೆಯುವುದು  ಮುಂದುವರಿದಿದೆ.

ನನ್ನ ಅದೃಷ್ಟ ಚೆನ್ನಾಗಿತ್ತು. ಪದ್ಯ ಓದಿದ ಹಿರಿಯರು ಅದನ್ನು ಮೆಚ್ಚಿದರು. ನೇರ ಅಭಿವ್ಯಕ್ತಿಯಲ್ಲಿ ಹಿಂಜರಿತವಿದ್ದ ನನಗೆ ಕವಿತೆ ಅಂತರಂಗದ ಮಾತುಗಳ ವಾಹಿನಿಯಾಯಿತು. ಕಾಲೇಜಿಗೆ ಬರುವ ಹೊತ್ತಿಗೆ ಪದ್ಯಗಳು ಪತ್ರಿಕೆಗಳಲ್ಲಿ ಪ್ರಕಟವಾಗತೊಡಗಿದವು. ಆ ವಯಸ್ಸಿಗೆ ಅದರಿಂದ ಸಿಕ್ಕ ಮನ್ನಣೆಯೂ ನನ್ನ ಆತ್ಮವಿಶ್ವಾಸ ಹೆಚ್ಚಿಸಿತು.

ನನಗೇ ಗೊತ್ತಿಲ್ಲದೇ ಕವಿತೆ ನನ್ನೊಳಗಿನ ನುಡಿಗಳನ್ನು ಆಡುವ ಬಗೆಯಾಗಿ ಒದಗಿಬಂದಿತು. ಮುಂದೆ ವಿಜ್ಞಾನ ಓದಿದರೂ ಸ್ವಂತ ಆಸಕ್ತಿಯಿಂದ  ಕಾವ್ಯಶಾಸ್ತ್ರ ಓದಿಕೊಂಡೆ. ದೊಡ್ಡ ಕವಿಗಳನ್ನು ಸಮಗ್ರವಾಗಿ ಓದಿದೆ. ವ್ಯಕ್ತಿಯಾಗಿಯೂ, ಬರಹಗಾರನಾಗಿಯೂ ನನ್ನ ಆಸಕ್ತಿಗಳು ಬೆಳೆಯುತ್ತಾ ಬಾಳಿನ ಮೂಲ ಪ್ರಶ್ನೆಗಳು ಕೌತುಕ ಹುಟ್ಟಿಸತೊಡಗಿದವು. ಅನುಭಾವದ ಹಾದಿಯಲ್ಲಿ ಸಾಧಕನಾಗಿಯೂ, ಶೋಧಕನಾಗಿಯೂ ಹುಡುಕಾಟ ನಡೆದಿದೆ. ಈ ಪಯಣದಲ್ಲಿ ‘ಬಾಲ್ಯದಲ್ಲಿ ನನಗೊದಗಿಬಂದ ಮಾಯಾದೀಪ’ ಕಾವ್ಯವು ಸ್ವತಃ ಬೆಳೆಯುತ್ತ ನನ್ನನ್ನೂ ಬೆಳೆಸುತ್ತಿದೆ. ಅದು ನಮ್ಮ ಕಾವ್ಯ ಪರಂಪರೆಯ ಬೆಳಕಿನ ಹಾದಿಯ ನಡಿಗೆ. ಅದರಲ್ಲಿ ಸುಖವಿದೆ, ಸಂತೋಷವಿದೆ ಮತ್ತು ಅದು ಸಂಪೂರ್ಣ ವ್ಯಕ್ತಿತ್ವದ ಶರಣಾಗತಿಯನ್ನೇ ಬಯಸುವ ಘನ ಕಾಯಕ ಎಂಬುದೂ ಅರ್ಥವಾಗಿದೆ. ಅದು ನನ್ನ ಕೈಲಿರುವಂತೆಯೇ ನಾನೂ ಕಾವ್ಯದ ಕೈಯಲ್ಲಿದ್ದೇನೆ.

AvithaKavithe Chintamani Kodlekere

ಚಿಂತಾಮಣಿ ಅವರ ಪುಸ್ತಕಗಳು

ಮದುವೆ  ಸೀರೆ 

“ನೆನಪಿಡಿ ಈ ಸಲ ಕೊಡಲೇಬೇಕು ಸೀತೆಗೊಂದು ಸೀರೆ” ಮದುವೆಯ ಕೆಲಸಗಳೆಷ್ಟೋ ಇದ್ದವು ಮರೆತೆ ಹಲವು ಸಾರೆ

ಮಡದಿ ಮುನಿದಳು ಸೀರೆ ತರುವುದನು ಸದಾ ಮರೆವೆನೆಂದು ಕೊಂಡು ತಂದೆವು ಸೀರೆ, ಶಲ್ಯ ದಂಪತಿಗೊಂದೊಂದು

ಯಾರಿರಬಹುದು ಈ ಸೀತಮ್ಮ? ತಿಳಿಯಲೆ ಇಲ್ಲ ಬಿಡಿ ‘ಸಂಬಂಧಿಕರದೆ ಹೆಸರು ತಿಳಿಯದು’ ಬರುವುದು ಚುಚ್ಚುನುಡಿ

ಯಾರೋ ಹತ್ತಿರದವರೇ, ಸರಿ ಬಿಡು ಅದಕೇ ಈ ಕೋಪ ಬಂಧುಗಳೀಗ ಮನೆಗೆ ಬರುವುದೂ ತುಂಬಾ ಅಪರೂಪ

ಮರುದಿನ ನವಮಿ. ರಾಮದೇವರದು. ಒಗಟು ಒಡೆಯಿತಂದು. ಸೀರೆ,  ಶಲ್ಯ ಅವರ ಮುಂದಿಟ್ಟು ಕೈ ಮುಗಿದಳು ನಿಂದು

ತಾಯೀ, ನಿನ್ನನೇ ಮರೆತುಬಿಟ್ಟೆನೇ ಇಲ್ಲೇ ಇದ್ದೂ ಪಕ್ಕ! ಮಣಿವೆನು, ಮೂಢನ ಮನ್ನಿಸಿರೆಂದೆ ರಾಮನೂ ನಸು ನಕ್ಕ    

       AvithaKavithe Chintamani Kodlekere

ಚಿಂತಾಮಣಿ ಅವರ ಪುಸ್ತಕಗಳು

ಮತ್ತೆ ನಾವಿಬ್ಬರು 

ಅರೆರೆ, ಮತ್ತೆ ನಾವಿಬ್ಬರು ಒಬ್ಬರಿಗೊಬ್ಬರು

ಮೂವತ್ತು ವರ್ಷಗಳ ಹಿಂದೆ ನಿನ್ನ ಕೈ ಹಿಡಿದು ನಾನಾದೆ ಚತುರ್ಭುಜ

ಅನಿಸಿತ್ತು ಎಲ್ಲವೂ ಭಾರೀ ಮಜ

ಪಲ್ಲವಿಸಿ ನಮ್ಮ ಸಂಬಂಧ ಬಂದರಿಬ್ಬರು ಹೆಣ್ಣುಮಕ್ಕಳು ಬೆಳೆದರಿಬ್ಬರು ಹೆಣ್ಣುಮಕ್ಕಳು

ಎಲ್​ಕೆಜಿ, ಯುಕೆಜಿ, ಯುನಿಫಾರ್ಮು ಎಕ್ಸಾಮು ಕಾಲೇಜು ಕ್ಯಾಂಪಸ್ಸು

ಎಲ್ಲ ದಾಟಿ

ಎಂಥ ಸೋಜಿಗ ನೋಡು ಜೀವದ ಗೆಳತಿ,

ನಮ್ಮಂತೆಯೇ ಅವರೂ ಸಂಗಾತಿ ಕೈ ಹಿಡಿದು ಹಗೂರ ನಡೆದು

ಗಾರ್ಹಪತ್ಯಾಗ್ನಿಯ ಸುತ್ತಿ ಗಿರಿಶಿಖರಗಳ ಹತ್ತಿ ದೂರದಲಿ ಕಾಣುವರು ಅರುಂಧತಿ ತಾರೆ

ಈಗ

ಅವರ ಬದುಕಿನ ಹಾದಿ ಬೇರೆ

ಮತ್ತೆ ಹಿಂದಿನ ಹಾಗೆ ನಾವಿಲ್ಲಿ  ಇಬ್ಬರು ಒಬ್ಬರಿಗೊಬ್ಬರು

ನಿಜ ನನ್ನ ರಾಜ ಹಾಗನಿಸೀತು ಸಹಜ

ಆದರೆ ಇರುವುದು ನಮ್ಮ ಜೊತೆ ಕಳೆದ ದಿನಗಳ ಆಪ್ತ ಜೀವನದ ಕಥೆ

ಮುಂದೂ ಇದೆ ಸಾಕಷ್ಟು ಹಾದಿ ನಡೆವ ಜತೆಗೂಡಿ

ಮಕ್ಕಳ ಹಾದಿಗಳೂ ಇಲ್ಲೇ ಅಕ್ಕ ಪಕ್ಕ ಮತ್ತೆ, ಯಾಕೆ ದುಃಖ?

ನಾವಿನ್ನೂ ನೋಡದ ನೋಟ, ಕಾಣದ ಹಕ್ಕಿ ಕೇಳದ ಹಾಡು

ಮುದಗೊಳಿಸಲಾರವೇ ಮುಂದಿನ ಹಾದಿ? ಕಾದು ನೋಡು

ನಮ್ಮ ಮುಂದೂ ಇದೆ ಸಾಕಷ್ಟು ಹಾದಿ ಸ್ವಲ್ಪ ನಗೆಯಾಡಿ

ಗಟ್ಟಿಯಾಗಿ ಹೇಳೋಣ: ನಾವೀಗ  ಇಬ್ಬರು ಒಬ್ಬರಿಗೊಬ್ಬರು

                                                                                                                 

AvithaKavithe Chintamani Kodlekere

ಚಿಂತಾಮಣಿ ಕೊಡ್ಲೆಕೆರೆ ಅವರ ಪುಸ್ತಕಗಳು

ಅಜ್ಜ ಮೊಮ್ಮಗ 

ಶೇಷಜ್ಜನಿಗೆ ಕಾಲಬದಿಯಲ್ಲಿ ಕಾಣಿಸಿಕೊಂಡಿತು ಹುಣ್ಣು ತೊಂದರೆ ಇದ್ದಿತು ಮಧುಮೇಹದ್ದು

ಮಾಡಿತು ಅವನನು ಹಣ್ಣು ದೂರದ ನಗರದ ಆಸ್ಪತ್ರೆಯಲಿ ಹತ್ತು ದಿನ ಅವನ ವಾಸ ಅಜ್ಜನ ಜೊತೆಯಲಿ ಮೊಮ್ಮಗನಿದ್ದನು

ಅಜ್ಜನಿಗೂ ಸಂತೋಷ! ವೈದ್ಯರು ಹೇಳಿದ ಎಕ್ಸ್ ರೇ ಟೆಸ್ಟು ಎಲ್ಲವ ಲಗುಬಗೆ ಮುಗಿಸಿ ಅಜ್ಜ ಹೇಳುವನು ಅವನ ಕಥೆಗಳನು

ಕಣ್ಣನಾಗಾಗ ಒರೆಸಿ ಆದ ಮೋಸಗಳು ಪಟ್ಟ ಕಷ್ಟಗಳು ನಡುವೆ ಈ ಹಾಳು  ರೋಗ ಅಮರಿಕೊಂಡಿತು. ಗಾಬರಿ ಬಿದ್ದು

ದಿಕ್ಕುಗೆಟ್ಟು ಕೂತಾಗ ಹೇಳಿದರೊಬ್ಬರು: “ರೋಗ ಬಂದದ್ದು ದೇಹಕ್ಕೆ, ನಿನಗಲ್ಲ ” ಹಿರಿಯರ ಮಾತು, ಘನತತ್ತ್ವವಿದು ಅರ್ಥ ಸರಳವಾಗಿಲ್ಲ!

ದುಡುಕಿದ ಮೊಮ್ಮಗ, ಕಾಲೇಜ್ ಹುಡುಗ ಅರ್ಥ ಆಯ್ತಜ್ಜ ನನಗೆ ನೀನೇ ಬೇರೆ,ದೇಹವೆ  ಬೇರೆ ರೋಗವಿದೆ  ಅದರೊಳಗೆ!

ನಾಕು ದಿನ ಬಿಟ್ಟು ಡಾಕ್ಟರು ಹುಣ್ಣನು ಶಸ್ತ್ರ ಚಿಕಿತ್ಸೆ ಮಾಡಿ ತೆಗೆಯುವಾಗಜ್ಜ ಕೂಗುತಿದ್ದರು ಭೂಮಿ ಬಾನು ಒಂದಾಗಿ

ಚಕಿತ ಮೊಮ್ಮಗ! “ದೇಹದ ನೋವಿಗೆ ಅಜ್ಜ ಅಳುತಿರುವುದೇಕೆ?” ಅಂದು ಸಂಜೆಯೇ ಅಜ್ಜನ ಬಳಿಯೇ ಕೇಳಿಯೂ ಬಿಡಬೇಕೇ?

ನಕ್ಕ ಶೇಷಜ್ಜ. ಸುಲಭವಲ್ಲ ಮಗೂ ದೇಹವ ದಾಟುವುದು ದೇಹಕ್ಕಂಟಿದ ಬಾಳು ನಮ್ಮದು ಸತ್ಯವು ಮರೆಯುವುದು

ಅರಿವುದು ಬೇರೆ, ಅನುಭವ ಬೇರೆ ಅನುಭವ ನನಗಿಲ್ಲ ನನ್ನ ಬಾಳಂತೂ ಹೀಗೇ ಕಳೆಯಿತು ಮಿಕ್ಕುದು ಶಿವ ಬಲ್ಲ!

*

ಕೃತಿ : ಮೈ ಮರೆತು ಕುಣಿವೆ (ಕವನ ಸಂಕಲನ) ಲೇಖಕರು : ಚಿಂತಾಮಣಿ ಕೊಡ್ಲೆಕೆರೆ ಪುಟ : 80 ಬೆಲೆ : ರೂ. 85 ಮುಖಪುಟ ವಿನ್ಯಾಸ : ಅಪಾರ ಪ್ರಕಾಶನ : ವಸಂತ ಪ್ರಕಾಶನ, ಬೆಂಗಳೂರು

(ಈ ಸಂಕಲನದ ಖರೀದಿಗೆ ಸಂಪರ್ಕಿಸಿ : 9886399125)

ಪರಿಚಯ : ಚಿಂತಾಮಣಿ ಕೊಡ್ಲೆಕೆರೆಯವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕವಿ, ಕತೆಗಾರ, ಪ್ರಬಂಧಕಾರ ಮತ್ತು ವಿಮರ್ಶಕ. ಜನನ: ಜನವರಿ 1961 (ಹುಟ್ಟಿದ್ದು ತಾಯಿಯ ತವರೂರು ಅಘನಾಶಿನಿಯಲ್ಲಿ).  ಕರಾವಳಿಯ ಸುಪ್ರಸಿದ್ಧ ಶಿವ ಕ್ಷೇತ್ರ  ಗೋಕರ್ಣದ ಚಿಂತಾಮಣಿಯವರ ಶಿಕ್ಷಣ ಹಿರೇಗುತ್ತಿ, ಕುಮಟಾ, ಸಿರಸಿ, ಧಾರವಾಡ, ತ್ರಿವೇಂದ್ರಮ್  ಮತ್ತು ಬೆಂಗಳೂರಿನಲ್ಲಿ ನಡೆಯಿತು. ಬಳಿಕ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಕನ್ನಡ ಕಾವ್ಯ ಮತ್ತು ತಾತ್ವಿಕತೆಗಳ ಸಂಬಂಧದ ಕುರಿತಾದ ಸಂಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದರು. ಬಿ. ಎಸ್ .ಎನ್. ಎಲ್.ನಲ್ಲಿ ಮೂವತ್ತೈದು ವರ್ಷ ಸೇವೆ ಸಲ್ಲಿಸಿ ನಿವೃತ್ತರು.

“ಈ ಜಗತ್ತು”(1988),  “ಭೂಮಧ್ಯರೇಖೆ”(1992), “ಗೋವಿನಹೆಜ್ಜೆ”(1994), “ತಲೆಮಾರಿನ ಕೊನೆಯ ಕೊಂಡಿ”(2003), “ಉಪ್ಪಿನ ಗೊಂಬೆ”(2010) ಮತ್ತು “ನೀರಹೆಜ್ಜೆ”(2016) ಚಿಂತಾಮಣಿಯವರ ಕವನ ಸಂಕಲನಗಳು. “ಬಭ್ರುವಾಹನ ಎಂಬ ಇರುವೆ” ಮತ್ತು  “ಮಾಯಾವಿ ಮಾಂಗಿ” ಕಥಾಸಂಕಲನಗಳು. “ಜನಕನ ಕನಸು”(ಅಂಕಣ ಬರಹ), “ಮೊದಲ ಮನೆಯ ಮೆಟ್ಟಿಲು” ಮತ್ತು  “ಟಪಾಲು ಬಸ್ಸು” ಪ್ರಬಂಧ ಸಂಕಲನಗಳು. “ಅಂತರಂಗದ ಆಕಾಶ” (ಸಂಪ್ರಬಂಧ). “ಸಿಂಡ್ರೆಲಾ ಅಂಬ್ರೆಲಾ” ಮಕ್ಕಳ ಪದ್ಯಸಂಕಲನವಲ್ಲದೆ ಮಕ್ಕಳಿಗಾಗಿ ಇನ್ನೂ  ಐದು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪುರಸ್ಕಾರ, ಪುತಿನ ಕಾವ್ಯ ಪ್ರಶಸ್ತಿ, ಮಾಸ್ತಿ ಕಥಾ ಪ್ರಶಸ್ತಿ , ಡಿ.ಎಸ. ಕರ್ಕಿ ಕಾವ್ಯ ಪ್ರಶಸ್ತಿ, ಬಿ.ಎಚ್.ಶ್ರೀಧರ ಕಾವ್ಯ ಪ್ರಶಸ್ತಿ ,ಕನ್ನಡ ಸಾಹಿತ್ಯ ಪರಿಷತ್ತಿನ ಮುದ್ದಣ ರತ್ನಾಕರವರ್ಣಿ ಕಾವ್ಯ ಪ್ರಶಸ್ತಿ (ಎರಡು ಬಾರಿ) ಲಭಿಸಿದೆ. ಕನ್ನಡದ ಸುಪ್ರಸಿದ್ಧ ಪತ್ರಿಕೆಗಳ ವಾರ್ಷಿಕ ಕಥಾಸ್ಪರ್ಧೆಗಳಲ್ಲಿ ಬಹುಮಾನಿತರು. ಗೋಕರ್ಣದಲ್ಲಿ ನಡೆದ ಕುಮಟಾ ತಾಲೂಕಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು (2014).

ಇದನ್ನೂ ಓದಿ : Poetry : ಅವಿತಕವಿತೆ ; ‘ನಿನ್ನ ಸೇರಿ ಉಪ್ಪಾಗಲಾರೆ ಎಂದಿತು ತನ್ನೆಡೆ ಹರಿದುಬಂದ ನದಿ’            

Published On - 7:55 am, Sun, 26 September 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ