Albert Camus : ಅಭಿಜ್ಞಾನ ; ಸಿರಿವಂತರ ಔತಣಕೂಟಗಳನ್ನು ತಿರಸ್ಕರಿಸುತ್ತಿದ್ದ, ಸಾಹಿತ್ಯ ಪುರಸ್ಕಾರಗಳಿಂದ ದೂರವಿರುತ್ತಿದ್ದ

Money and Influence : ‘ಪತ್ರಿಕಾರಂಗ ಮತ್ತು ಚಲನಚಿತ್ರ ಕ್ಷೇತ್ರಗಳಲ್ಲಿ ಹಣ ಬೀರುವ ಪ್ರಭಾವವನ್ನು ಕಂಡು ಆತ ಆಘಾತಕ್ಕೊಳಗಾಗುತ್ತಿದ್ದ. ತನ್ನಂತೆಯೇ ಮಕ್ಕಳು ಮಿತವ್ಯಯಿಗಳಾಗಿರಬೇಕು ಮತ್ತು ಬಡತನವನ್ನು ಎಂದೂ ಉಪೇಕ್ಷಿಸಬಾರದೆಂಬುದು ಆತನ ನಿಲುವಾಗಿತ್ತು. ಹಾಗೆಂದೇ, ಬೆಳೆಯುತ್ತಿರುವ ಮಕ್ಕಳು ಎಂದಿಗೂ ದುಡ್ಡಿನ ಭೌತಿಕ ಸ್ವರೂಪ ನೋಡದಂತೆ ಎಚ್ಚರ ವಹಿಸುತ್ತಿದ್ದ.’

Albert Camus : ಅಭಿಜ್ಞಾನ ; ಸಿರಿವಂತರ ಔತಣಕೂಟಗಳನ್ನು ತಿರಸ್ಕರಿಸುತ್ತಿದ್ದ, ಸಾಹಿತ್ಯ ಪುರಸ್ಕಾರಗಳಿಂದ ದೂರವಿರುತ್ತಿದ್ದ
ಲೇಖಕ ಅಲ್ಬರ್ಟ್ ಕಮೂ
Follow us
ಶ್ರೀದೇವಿ ಕಳಸದ
|

Updated on:Dec 21, 2021 | 9:35 AM

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com

*

ಕಥೆಗಾರ, ಅನುವಾದಕ ಕೇಶವ ಮಳಗಿ ಅವರ ‘ಕಮೂ : ತರುಣ ವಾಚಿಕೆ’ಯಿಂದ.

*

ಕಮೂವಿಗೆ ಹಣವೆಂದರೆ ಮೊದಲಿನಿಂದಲೂ ಇರುಸುಮುರುಸೆ. ತೃಪ್ತಿಪಡುವುದು ಮತ್ತು ಬಡತನವನ್ನು ಅವಮಾನವೆಂದು ತಿಳಿಯದಿರುವುದು ಪ್ರಜ್ಞಾಪೂರ್ವಕವಾಗಿ ರೂಢಿಸಿಕೊಂಡು ಬಂದ ಸ್ವಭಾವವಾಗಿತ್ತು. ಆದಾಗ್ಯೂ, ಪ್ಯಾರಿಸಿನ ಸಿರಿವಂತ ಲೇಖಕರಂತೆ ಕೃತಿಗಳಿಂದ ಬರುವ ಗೌರವಧನದ ಬಗ್ಗೆ ಅಸಡ್ಡೆ ತೋರುವವನಲ್ಲ. ಆತನ ದಿನನಿತ್ಯದ ಬದುಕು ಸಾಗುತ್ತಿದ್ದುದೇ ಕೃತಿಗಳು ಮತ್ತು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಲೇಖನಗಳು ಒದಗಿಸುತ್ತಿದ್ದ ಗೌರವಧನದಿಂದ, ಕಮೂ ಎಂದೂ ದುಂದುವೆಚ್ಚ ಮಾಡುವವನಲ್ಲ. ಪತ್ರಿಕಾರಂಗ ಮತ್ತು ಚಲನಚಿತ್ರ ಕ್ಷೇತ್ರಗಳಲ್ಲಿ ಹಣ ಬೀರುವ ಪ್ರಭಾವವನ್ನು ಕಂಡು ಆತ ಆಘಾತಕ್ಕೊಳಗಾಗುತ್ತಿದ್ದ. ತನ್ನಂತೆಯೇ ಮಕ್ಕಳು ಮಿತವ್ಯಯಿಗಳಾಗಿರಬೇಕು ಮತ್ತು ಬಡತನವನ್ನು ಎಂದೂ ಉಪೇಕ್ಷಿಸಬಾರದೆಂಬುದು ಆತನ ನಿಲುವಾಗಿತ್ತು. ಹಾಗೆಂದೇ, ಬೆಳೆಯುತ್ತಿರುವ ಮಕ್ಕಳು ಎಂದಿಗೂ ದುಡ್ಡಿನ ಭೌತಿಕ ಸ್ವರೂಪ ನೋಡದಂತೆ ಎಚ್ಚರ ವಹಿಸುತ್ತಿದ್ದ. ಜೀವನದಲ್ಲಿ ಯಶಸ್ಸು ಪಡೆದ ಮನುಷ್ಯರು ಅತಿಯಾದ ಭೌತಿಕ ವಸ್ತುವಾಹನಗಳನ್ನು ಹೊಂದಿರಬಾರದೆಂದು ಆತ ಬಯಸುತ್ತಿದ್ದ.

ಕಿರಿಕಿರಿ. ಪ್ಯಾರಿಸಿನ ಬುದ್ಧಿಜೀವಿಗಳೆಂದರೆ ಮೊದಲಿನಿಂದಲೂ ಆತನಿಗೆ ಸೋಗಲಾಡಿತನ, ಅಪಾತ್ರತೆ, ಸಣ್ಣತನ, ತಣ್ಣಗಿನ ಪ್ರವೃತ್ತಿ, ಪ್ರಭಾವ ಬೀರುವುದು, ದ್ವೇಷಾಸೂಯೆ, ಪಕ್ಷಪಾತ ಮತ್ತು ಸ್ವಾರ್ಥಗಳು ಕಮೂನನ್ನು ತಳಮಳಕ್ಕೀಡುಮಾಡುತ್ತಿದ್ದವು. ಹಾಗೆಂದೇ, ಸಾಹಿತ್ಯ ಪುರಸ್ಕಾರಗಳನ್ನು ಆತ ಸ್ವೀಕರಿಸುತ್ತಿರಲಿಲ್ಲ. ಒಂದೊಮ್ಮೆ ಫ್ರಾನ್ಸಿನ ಅಧ್ಯಕ್ಷರ ಭೋಜನಕೂಟದ ಆಹ್ವಾನವನ್ನು ಕಮೂ ತಿರಸ್ಕರಿಸಿದ್ದ. ಫ್ರಾನ್ಸಿನ ರಾಜಮನೆತನವನ್ನು ಪ್ರತಿನಿಧಿಸುತ್ತಿದ್ದ ಕೌಂಟ್ ಮತ್ತು ಕೌಂಟೆಸ್ಸರನ್ನು ಭೇಟಿಯಾಗಲು ನಿರಾಕರಿಸುವುದು ಕೂಡ ಆತನಿಗೆ ಸುಲಭವಾಗಿತ್ತು. ಇಂಥವರೊಂದಿಗೆ ಕೃತಕತೆಯಲ್ಲಿ ವ್ಯಕ್ತಿತ್ವ ಕಳೆದುಕೊಳ್ಳುವುದಕ್ಕಿಂತ, ಗೆಳೆಯರೊಂದಿಗೆ ಕೆಫೆಗಳಲ್ಲಿ, ಬಾರ್‌ಗಳಲ್ಲಿ, ಬೀದಿಗಳಲ್ಲಿ, ಮಕ್ಕಳೊಂದಿಗೆ ಮನೆಯಲ್ಲಿ ಕಾಲ ಕಳೆಯುವುದು ಸಾರ್ಥಕ ಎಂದಾತ ಬಗೆಯುತ್ತಿದ್ದ. “ಸಿರಿವಂತರು ಸಂಘಟಿಸುವ ಸಂತೋಷಕೂಟಗಳ ಕೃತಕತೆ ನನಗೆ ಬೇಸರ ಹುಟ್ಟಿಸುತ್ತವೆ ಮಾತ್ರವಲ್ಲ, ಭಯಭೀತನನ್ನಾಗಿಸುತ್ತವೆ ಎಂದು ಗೇಲಿ ಮಾಡುತ್ತಿದ್ದ ಸಾರ್ತ್ರರಂಥ ದೊಡ್ಡ ಲೇಖಕರು ಸಾಮಾಜಿಕ ಪ್ರತಿಷ್ಠೆಗಾಗಿ ಹಪಹಪಿಸುವುದು, ಅವರ ಪಕ್ಷಪಾತ ಧೋರಣೆ, ಕೀಳು ನಿಲುವು, ದ್ವಿಮುಖ ನೀತಿಗಳು ಆತನನ್ನು ಕಂಗೆಡಿಸುತ್ತಿದ್ದವು. ಸಾಧ್ಯವಾದರೆ ಜೀವಮಾನವಿಡೀ ಇಂಥವರ ಮತ್ತು ಪ್ಯಾರಿಸ್‌ನ ಸಹವಾಸವಿಲ್ಲದೆ ಬದುಕಬೇಕು ಎಂದು ತಹತಹಿಸುತ್ತಿದ್ದ.

1950ರ ಹೊತ್ತಿಗೆ ಕಮೂಗೆ ಸಮಯವೇ ಅಭಾವವೆನ್ನುವಂತಾಯಿತು. ತನ್ನ ಕೃತಿಗಳ ಯೋಚಿಸಲಾರದಷ್ಟು ಆತ ಕೆಲಸದಲ್ಲಿ ತೊಡಗಿರುತ್ತಿದ್ದ. ತನ್ನ ಕ್ರಿಯಾಶೀಲತೆಗೆ ನಪುಂಸಕತ್ವ ಆವರಿಸಿದೆ ಎಂದು ಗಾಬರಿಗೊಳ್ಳುತ್ತಿದ್ದ. ಹೀಗಾದಾಗಲೆಲ್ಲ ಮಕ್ಕಳೊಂದಿಗೆ ಪ್ರವಾಸ ಮಾಡಿ ಹೊಸ ಅನುಭವ ಪಡೆಯುವುದು ಆತನಿಗೆ ಸುಖ ನೀಡುತ್ತಿತ್ತು. ಪುಟ್ಟ ಮಕ್ಕಳು ಆತನಿಗೆ ಭರವಸೆ ಮತ್ತು ಮುಗ್ಧತೆಯ ಸಂಕೇತವಾಗಿದ್ದರು. ಮಗ ಜಾನ್, ನೋಡಲು ತನ್ನ ತಂದೆಯಂತೆಯೂ, ಮಾನಸಿಕವಾಗಿ ತಾಯಿಯಂತೆಯೂ ಇದ್ದಾನೆ ಎಂದುಕೊಳ್ಳುತ್ತಿದ್ದ. ಮಗಳು ಕ್ಯಾಥರೀನ್‌ಳ ಸಂಗೀತಾಸಕ್ತಿ ಆತನನ್ನು ಮಂತ್ರಮುಗ್ಧನನ್ನಾಗಿಸುತ್ತಿತ್ತು. ಮುಕ್ತವಾಗಿದ್ದು, ತಕ್ಷಣವೇ ಪ್ರತಿಕ್ರಿಯಿಸುವ ಗುಣವಿರುವ ಈಕೆ ಭವಿಷ್ಯದ ಬದುಕನ್ನು ಚೆನ್ನಾಗಿ ನಿಭಾಯಿಸಬಲ್ಲಳು ಎಂದುಕೊಳ್ಳುತ್ತಿದ್ದ.

Abhijnana excerpt of Albert Camus tharuna Vachike by Kannada writer Keshav Malagi published by Sangata Pustaka

ಲೇಖಕ ಕೇಶವ ಮಳಗಿ ಕೃತಿಯೊಂದಿಗೆ

ಈ ಕಾಲದಲ್ಲಿ ‘ದಿ ರೆಬೆಲ್’ ಪ್ರಕಟವಾಯಿತು. ಪ್ರತಿಗಳೇನೊ ಮಾರಾಟವಾಗುತ್ತಿವೆ, ಆದರೆ ಯಾರೂ ಓದುತ್ತಿಲ್ಲವೆನ್ನಿಸುತ್ತದೆ ಎಂಬ ವಾತಾವರಣವಿತ್ತು. ಪುಸ್ತಕದಲ್ಲಿನ ವಿಷಯದಿಂದಾಗಿ, ಸಮಾಜವಾದಿಗಳು, ಮಾರ್ಕ್ಸ್‌ವಾದಿಗಳು ಮತ್ತು ಕಮ್ಯೂನಿಸ್ಟ್‌ರೊಂದಿಗೆ ಕಮೂನ ಜಗಳಗಳಿಂದಾಗಿ ಎಲ್ಲ ಬುದ್ಧಿಜೀವಿಗಳು ತುಟಿ ಹೊಲೆದುಕೊಂಡು ಕುಳಿತಿದ್ದರು. ಸಾರ್ತ್ರರಂಥ ಲೇಖಕರು ವ್ಯಕ್ತಿಗತ ನೆಲೆಯಲ್ಲಿ ಕಮೂ ಮೇಲೆ ದಾಳಿ ಮಾಡತೊಡಗಿದ್ದರು. ಅತ್ಯಂತ ಕಠೋರ ಲೇಖನ ಸಮರಗಳು ಆರಂಭವಾದವು.

ಇಬ್ಬರ ನಡುವೆಯೂ 1952, ಡಿಸೆಂಬರ್: ಕೆಲವು ಜೆಕ್ ಕಮ್ಯೂನಿಸ್ಟ್ ಸಂಗಾತಿಗಳು ಸರ್ಕಾರಕ್ಕೆ ದ್ರೋಹ ಬಗೆದರೆಂದು ಅವರನ್ನು ಹತ್ಯೆ ಮಾಡಲಾಯಿತು. ಶಾಂತಿ ಸಂಧಾನಕ್ಕೆಂದು ಜಾನ್ ಪಾಲ್-ಸಾರ್ತ್ರ ವಿಯೆನ್ನಕ್ಕೆ ತೆರಳಿದ್ದು ಕಮೂವನ್ನು ಕೆರಳಿಸಿತು. ‘ಸಾಮಾನ್ಯವಾಗಿ ವಿಯೆನ್ನಕ್ಕೆ ಹೋಗುವುದೆಂದರೆ ಶೀತಲ ಸಮರದ ಕ್ರಿಯೆಯಂತೆ ನೋಡಲಾಗುತ್ತದೆ. ಆದರೆ, ಜೆಕ್ ಪತ್ರಿಕೆಗಳಲ್ಲಿ ವರದಿಯಾದಂತೆ ಈ ಸಂಗಾತಿಗಳು ‘ಯಹೂದಿ’ಗಳಾಗಿದ್ದರು ಎಂಬುದನ್ನು ಗಮನಿಸಿಯೂ ಅಲ್ಲಿಗೆ ತೆರಳುವುದು ನನ್ನ ಕಲ್ಪನೆಯನ್ನು ಮೀರಿದುದಾಗಿದೆ. ಬಲಪಂಥೀಯರು ಹಿಟ್ಲರ್‌ನ ಮಹಾಸಾಮರ್ಥ್ಯಕ್ಕೆ ಮರುಳಾಗಿದ್ದಂತೆಯೇ, ಎಡಪಂಥೀಯರು ಕಮ್ಯೂನಿಸ್ಟರ ಮಹಾಸಾಮರ್ಥ್ಯಕ್ಕೆ ಬೆರಗಾಗಿದ್ದಾರೆ. ಈ ಭಾರಿ ಶಕ್ತಿಸಾಮರ್ಥ್ಯಕ್ಕೆ ‘ದಕ್ಷತೆ’ಯ ಲೇಪನ ನೀಡಲಾಗುತ್ತದೆ’. ಸ್ಟಾಲಿನ್ ಮೃತನಾಗುವ ಮೂರು ತಿಂಗಳ ಮೊದಲಷ್ಟೇ, ಈ ಯಹೂದಿ ವೈದ್ಯರುಗಳು ಸರ್ಕಾರದ ವಿರುದ್ಧ ಹಿಂಸಾತ್ಮಕ ಜನಾಂಗೀಯ ದಂಗೆಯನ್ನು ಆಯೋಜಿಸಿದ್ದರು ಎಂದು ಶಂಕಿಸಲಾಗಿತ್ತು. ಈ ಗುಮಾನಿ ಅವರನ್ನು ನೇಣಿಗೇರಿಸುವಂತೆ ಮಾಡಿದ್ದವು.

ಫ್ರೆಂಚ್ ಬುದ್ಧಿಜೀವಿಗಳ ಕುರಿತು ಕಮೂ ಮುಂದುವರೆದು ಬರೆದ: ‘ಈ ಬುದ್ಧಿಜೀವಿಗಳು ಅತ್ಯಂತ ಜಾಣತನದಿಂದ ಮಾಡುವುದೆಲ್ಲ, ಹಿಂಸಾ ಶಿಬಿರಗಳಲ್ಲಿ ಯಾರು ಒಳ್ಳೆಯ ಮೇಲ್ವಿಚಾರಕನಾಗಿದ್ದಾನೆ ಮತ್ತು ಯಾರು ಒಳ್ಳೆಯ ಮತ್ತು ದುಷ್ಟ ಜನಾಂಗೀಯ ವಿರೋಧಿಯಾಗಿದ್ದಾನೆ ಎಂದು ಕಂಡು ಹಿಡಿಯುವುದು. ಇದು ನನ್ನಲ್ಲಿ ವಾಂತಿಯನ್ನು ಹುಟ್ಟಿಸುತ್ತದೆ.’ ತನ್ನ ಕಟುವಾದ ನೈತಿಕ ನಿಲುವುಗಳಿಂದ, ತಾನೇ ಸೃಷ್ಟಿಸಿದ ಕಥೆ-ಕಾದಂಬರಿಗಳ ಮುಖ್ಯಪಾತ್ರಗಳಂತೆ ಕಮೂ ಅಕ್ಷರಶಃ ಏಕಾಂಗಿಯಾಗಿದ್ದ. ಹೇಳದೆ ಕೇಳದೆ ಅಪ್ಪಳಿಸುವ ಕ್ಷಯ, ಬೆಳೆಯುತ್ತಿರುವ ಮಕ್ಕಳು, ಇದೀಗ ಆತನ ಹೆಂಡತಿ ಫ್ರಾನ್ಸಿಗೆ ಅಂಟಿಕೊಂಡ ಗಂಭೀರ ಕಾಯಿಲೆ ಆತ ಕುಗ್ಗುವಂತೆ ಮಾಡುತ್ತಿದ್ದವು. ಸಂಕಷ್ಟಗಳ ಬಂದಿಯಾಗಿದ್ದ ಕಮೂ ನಿಧಾನಕ್ಕೆ ಹೊರ ಮತ್ತು ಒಳಲೋಕಗಳಲ್ಲಿ ತಾನು ಕುಸಿಯುತ್ತಿರುವಂತೆ ಭಾವಿಸಿದ.

ಸೌಜನ್ಯ : ಸಂಗಾತ ಪುಸ್ತಕ, ಧಾರವಾಡ. 9341757653

ಇದನ್ನೂ ಓದಿ : Autobiography : ಅಭಿಜ್ಞಾನ ; ‘ನನ್ನ ಮೊದಲ ಸಂಬಳವೆಂದರೆ, ತಾರಿ ದಾಟಲು ಸಾಕಾಗದಷ್ಟು ಕಾಸು’

Published On - 9:34 am, Tue, 21 December 21

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್