Suad Amiry : ಅಭಿಜ್ಞಾನ ; ‘ನಾನು ಮರ್ಯಾದಸ್ಥ ಕುಟುಂಬದಿಂದ ಬಂದ ಹುಡುಗಿ, ನಾವು ಹೀಗೆಲ್ಲಾ ಮಾಡುವುದು ಬೇಡ!’
Menopausal Palestine: Women at the Edge ; ‘ನನ್ನ ತಂದೆತಾಯಿಯರು ಒಬ್ಬರನ್ನೊಬ್ಬರು ‘ಹಬೀಬಿ, ಹಬೀಬ್ತಿ’ (ಪ್ರಿಯಕರ, ಪ್ರಿಯತಮೆ) ಎಂದು ಕರೆಯುವ ಅಭ್ಯಾಸ ಇಟ್ಟುಕೊಂಡಿದ್ದರಿಂದ ನನಗೆ ಐದು ವರ್ಷ ಆಗುವವರೆಗೂ ನನ್ನ ಅಪ್ಪನ ನಿಜವಾದ ಹೆಸರೇ ಗೊತ್ತಿರಲಿಲ್ಲ.’ ಸವೂದ್ ಅಮೀರಿ
Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ : tv9kannadadigital@gmail.com
*
ಪ್ಯಾಲೆಸ್ಟೈನಿನ ಲೇಖಕಿ ಸವೂದ್ ಅಮೀರಿ (Saud Amiry) ಬರೆದ Menopausal Palestine: Women at the Edge ಕೃತಿಯಿಂದ.
*
1940ರ ಆರಂಭ. ಅವಳಿಗೆ ಇಪ್ಪತ್ತೆಂಟು, ಅವನಿಗೆ ಮೂವತ್ತೈದು. ಅವಳು ತನ್ನ ಮನೆಯೆದುರಿಗಿದ್ದ, ಅವನೂ ಕೆಲಸ ಮಾಡುತ್ತಿದ್ದ ಬ್ಯಾಂಕಿನಲ್ಲೇ ಕೆಲಸಕ್ಕೆ ಸೇರಿದಳು. ಪರಸ್ಪರ ಪರಿಚಯವಾಗಿ ಒಂದೆರಡು ವರ್ಷ ಕಳೆಯುತ್ತಿದ್ದಂತೆ ಅವರಿಬ್ಬರಲ್ಲಿ ಪ್ರೀತಿ ಮೂಡಿತು. ಮುಂದಿನೆರಡು ವರ್ಷಗಳಲ್ಲಿ ಕೈಹಿಡಿಯುವುದು, ಮೃದುವಾಗಿ ತಬ್ಬುವುದು, ಕೆನ್ನೆಗೆ ಮುತ್ತಿಡುವುದು… ಈ ಮಧುರ ಹಂತಗಳನ್ನೆಲ್ಲಾ ದಾಟಿ ಮದುವೆಯ ತನಕ ಬಂದು ನಿಂತಿತು. ಮದುವೆಯಾಯಿತು. ಆ ರಾತ್ರಿ ಮದುಮಗ ಸಾಕಷ್ಟು ನಿರೀಕ್ಷೆ, ಸ್ಥೈರ್ಯದಿಂದ ತನ್ನನ್ನು ತಾ ಹುರಿಗೊಳಿಸಿಕೊಂಡು ಕಾಯುತ್ತಿದ್ದ.
‘ಇಲ್ಲಾ ಇಲ್ಲಾ… ಸಾಧ್ಯವಿಲ್ಲ. ನೀನು ನನಗೆ ಹೀಗೆಲ್ಲಾ ಮಾಡಬಾರದು. ನಾನು ಒಳ್ಳೆಯ ಮರ್ಯಾದಸ್ಥ ಕುಟುಂಬದಿಂದ ಬಂದ ಹುಡುಗಿ. ನಾವೀಗ ಇದನ್ನೆಲ್ಲಾ ಮಾಡುವುದು ಬೇಡ’ ಆಕೆ ನಿರಾಕರಿಸಿದಳು.
ಆಕೆ ತಾನು ಒಂದೊಳ್ಳೆಯ ಮತ್ತು ಮರ್ಯಾದಸ್ಥ ಕುಟುಂಬದಿಂದ ಬಂದ ಹುಡುಗಿ ಎನ್ನುವುದನ್ನೇ ಒತ್ತಿಒತ್ತಿ ಹೇಳಿದಾಗ ಅವನು, ‘ನಾವಿಬ್ಬರೂ ಈಗ ನಮ್ಮದೇ ಆದ ಒಳ್ಳೆಯ ಮತ್ತು ಮರ್ಯಾದಸ್ಥ ಕುಟುಂಬವನ್ನು ಹೊಂದುವ ಸಮಯ ಬಂದಿದೆ’ ಎಂದು ಹೇಳಿದ. ಆದರೂ ಆಕೆ ಒಪ್ಪಲಿಲ್ಲ.
ಆಗ ಮಧುಚಂದ್ರವನ್ನು ಮೊಟಕುಗೊಳಿಸಿ ಅವರಿಬ್ಬರೂ ಹಿಂದಿರುಗಿದರು. ಅವನಿಗೆ ತನ್ನ ಹುಡುಗಿಯನ್ನು ಆ ಮರ್ಯಾದಸ್ಥ ತಂದೆತಾಯಿಯರ ಬಳಿಗೆ ಕೊಂಡೊಯ್ಯುವುದನ್ನುಳಿದು ಬೇರೆ ದಾರಿ ಇರಲಿಲ್ಲ. ‘ನೀವು ಅವಳಿಗೆ ಜೀವನದ ಅರ್ಥವನ್ನು ತಿಳಿಸಿಕೊಟ್ಟ ಮೇಲೆ ನಾನು ಬಂದು ಅವಳನ್ನು ಕರೆದೊಯ್ಯುತ್ತೇನೆ’ ಎಂದ.
ಒಂದು ವಾರದಲ್ಲಿ ಅವನು ವಾಪಸ್ ಬಂದ. ಸರಿಯಾಗಿ ಒಂಬತ್ತು ತಿಂಗಳ ನಂತರ ಅವರ ಮೊದಲ ಮಗು ನದೀಂ ಜನಿಸಿದ. ಮತ್ತೆ ಮೂರು ವರ್ಷಗಳ ನಂತರ ಎರಡನೇ ಮಗು ಅಂದರೆ, ನಾನು ಹುಟ್ಟಿದೆ. ಮತ್ತೆ ಮೂರು ವರ್ಷ ಕಳೆದು ನನ್ನ ತಮ್ಮ ಜಮಾಲ್ ಜನಿಸಿದ. ಅವರು ಪ್ರತಿ ಮೂರು ವರ್ಷಕ್ಕೊಮ್ಮೆ ಪ್ರೀತಿ ಮಾಡುತ್ತಿದ್ದಿರಬೇಕು. ಅದು ಒಂದು ದಶಕದಲ್ಲಿ ಮೂರು ಬಾರಿಗಿಂತ ಸ್ವಲ್ಪ ಹೆಚ್ಚಿದ್ದರೂ ಇರಬಹುದಾದರೂ ಕಡಿಮೆಯಾಗಿರಲಿಕ್ಕೆ ಸಾಧ್ಯವೇ ಇಲ್ಲ.
ನನ್ನ ತಂದೆತಾಯಿಯರು ಒಬ್ಬರನ್ನೊಬ್ಬರು ‘ಹಬೀಬಿ, ಹಬೀಬ್ತಿ’ (ಪ್ರಿಯಕರ, ಪ್ರಿಯತಮೆ) ಎಂದು ಕರೆಯುವ ಅಭ್ಯಾಸ ಇಟ್ಟುಕೊಂಡಿದ್ದರಿಂದ ನನಗೆ ಗೊಂದಲವಾಗಿ ನಾನು ತಪ್ಪು ಭಾವಿಸಿದ್ದಿರಬೇಕು. ನನಗೆ ಐದು ವರ್ಷ ಆಗುವವರೆಗೂ ನನ್ನ ಅಪ್ಪನ ನಿಜವಾದ ಹೆಸರು ಹಬೀಬಿ ಅಲ್ಲಾ, ರಶ್ದೀ ಅಂತ ನನಗೆ ಗೊತ್ತಿರಲೇ ಇಲ್ಲ.
ಸೌಜನ್ಯ : Women Unlimited
ಇದನ್ನೂ ಓದಿ : Vincent van Gogh : ಅಭಿಜ್ಞಾನ ; ಸೂಳೆಕೆರೆಗಳಿಗೆ ಹೋಗಿದ್ದು ಸುಖದ ಕ್ಷಣಗಳನ್ನು ಅರಸುತ್ತ ಅಲ್ಲ
Published On - 10:48 am, Fri, 17 December 21