Bell Hooks : ‘ಗಂಡು-ಹೆಣ್ಣಿನ ಯುದ್ಧಕ್ಕೆ ಕಾರಣ ಲೈಂಗಿಕತಾವಾದೀ ತಾರತಮ್ಯ, ಶೋಷಣೆ ಮತ್ತು ದಮನ’
Feminism : ‘ಯಾರಿಗೆ ಯಾರೂ ಅಧೀನರಲ್ಲ. ಹಾಗಾಗಿ ಪರಸ್ಪರ ಸಂವಾದವು ಕ್ರಮೇಣವಾಗಿಯಾದರೂ ಗಂಡು-ಹೆಣ್ಣನ್ನು ಸಕಾರಾತ್ಮಕವಾಗಿ ಪರಿವರ್ತಿಸುತ್ತದೆ. ಸ್ತ್ರೀವಾದೀ ಚಳುವಳಿಯು ಇಬ್ಬರ ನಡುವಣ ಕದನಗಳಿಗೆ ಖಂಡಿತವಾಗಿಯೂ ಕೊನೆಯನ್ನು ಕಾಣಿಸುತ್ತದೆ. ಇಬ್ಬರ ನಡುವಣ ಸಂಬಂಧಗಳ ಮಾದರಿಯೇ ಹೊಸ ಸ್ವರೂಪವನ್ನು ಪಡೆದುಕೊಳ್ಳುತ್ತದೆ.’ ಬೆಲ್ ಹುಕ್ಸ್
Bell Hooks : ಸಾಹಿತ್ಯಲೋಕದಲ್ಲಿ ಗಮನ ಸೆಳೆದ ಸ್ತ್ರೀವಾದಿ ಲೇಖಕಿ ಬೆಲ್ ಹುಕ್ಸ್ (69) ನಿನ್ನೆ ಅಮೆರಿಕಾದಲ್ಲಿ (ಡಿ.15) ನಿಧನರಾಗಿದ್ದಾರೆ. 1952ರಲ್ಲಿ ಗ್ಲೋರಿಯಾ ಜೀನ್ ವಾಟ್ಕಿನ್ಸ್‌ನಲ್ಲಿ ಜನಿಸಿದ ಇವರು, 1978ರಲ್ಲಿ ‘ಅಂಡ್ ದೇರ್ ವಿ ವೆಪ್ಟ್’ ಮೊದಲ ಕವನ ಸಂಕಲನ ಪ್ರಕಟಿಸಿದರು. ಕವಿತೆ, ಮಕ್ಕಳ ಕಾದಂಬರಿ, ಸಾಹಿತ್ಯ ವಿಮರ್ಶೆ ಮತ್ತು ಆತ್ಮಕಥನ ಸೇರಿದಂತೆ ಒಟ್ಟು 40 ಕೃತಿಗಳನ್ನು ರಚಿಸಿದ್ದಾರೆ. ಇವರ ಕೃತಿಗಳು ವರ್ಣಬೇಧ ನೀತಿ, ಸ್ತ್ರೀವಾದ ಮತ್ತು ಸಾಮಾಜಿಕ ಸಮಸ್ಯೆ, ನ್ಯಾಯ-ಅನ್ಯಾಯಗಳ ಬಗೆಗೆ ಕೇಂದ್ರೀಕೃತಗೊಂಡಿವೆ. ಬೆಲ್ ಅವರ ‘ಫೆಮಿನಿಸಂ ಈಸ್ ಫಾರ್ ಎವೆರಿಬಡಿ: ಪ್ಯಾಶನೇಟ್ ಪಾಲಿಟಿಕ್ಸ್’ ಕೃತಿಯನ್ನು ಕನ್ನಡದ ಸ್ತ್ರೀವಾದಿ ಲೇಖಕಿ ಎಚ್. ಎಸ್. ಶ್ರೀಮತಿ ಅವರು ಕನ್ನಡಕ್ಕೆ ತಂದಿದ್ದು ಸಂಗಾತ ಪುಸ್ತಕ ಇದನ್ನು 2020ರಲ್ಲಿ ಪ್ರಕಟಿಸಿದೆ; ‘ಸ್ತ್ರೀವಾದ : ಅಂಚಿನಿಂದ ಕೇಂದ್ರದೆಡೆಗೆ’ ಕೃತಿಯಿಂದ ಆಯ್ದ ಭಾಗ ನಿಮ್ಮ ಓದಿಗೆ.
*
ಸ್ತ್ರೀವಾದೀ ಚಳುವಳಿಯ ಮಹತ್ವ
ಅಮೆರಿಕದಲ್ಲಿ ನಡೆಯುತ್ತಿರುವ ಸಮಕಾಲೀನ ಸ್ತ್ರೀವಾದೀ ಚಳುವಳಿಯು ಜಗತ್ತಿನ ಎಲ್ಲೆಡೆಯೂ ಮಹಿಳೆಯರ ಮೇಲೆ ಶೋಷಣೆ ಮತ್ತು ದಮನಗಳು ನಡೆಯುತ್ತಿವೆ ಎಂಬುದರತ್ತ ಗಮನವನ್ನು ಸೆಳೆಯಿತು. ಈ ಹಂತ ಒಟ್ಟಾರೆಯ ಸ್ತ್ರೀವಾದೀ ಹೋರಾಟಗಳಿಗೆ ಲಭಿಸಿದ ಮುಖ್ಯವಾದ ಒಂದು ಕೊಡುಗೆ ಎನ್ನಬಹುದು. ಲೈಂಗಿಕತಾವಾದೀ ಅನ್ಯಾಯಗಳು ಆಗುತ್ತಿವೆ ಎಂಬುದನ್ನು ಎತ್ತಿ ತೋರಿಸಬೇಕೆಂಬ ಭರದಲ್ಲಿ ಮಹಿಳೆಯರು ಪುರುಷ ದಬ್ಬಾಳಿಕೆಯ ಧೋರಣೆ ಮತ್ತು ನಡವಳಿಗಳ ಮೇಲೆ ತಮ್ಮೆಲ್ಲ ಗಮನವನ್ನೂ ಕೇಂದ್ರೀಕರಿಸಿದರು. ಇದು ಸ್ತ್ರೀವಾದವು ಹೆಣ್ಣು ಮತ್ತು ಗಂಡುಗಳ ನಡುವೆ ಯುದ್ಧವನ್ನು ಘೋಷಿಸಿದೆ ಎಂಬ ಅಭಿಪ್ರಾಯವು ನೆಲೆಗೊಳ್ಳಲು ಕಾರಣವಾಯಿತು ಎಂಬುದು ದುರಂತದ ಮಾತು.
ಸ್ತ್ರೀವಾದವು ಗಂಡು ಮತ್ತು ಹೆಣ್ಣುಗಳಿಬ್ಬರನ್ನೂ ಸಕಾರಾತ್ಮಕವಾಗಿ ಬದಲಿಸುತ್ತದೆ; ಅದು ನಡೆಸುವ ರಾಜಕೀಯ ಹೋರಾಟವು ಲೈಂಗಿಕತಾವಾದೀ ದಮನಗಳನ್ನು ಕೊನೆಗಾಣಿಸುವ ಉದ್ದೇಶದ್ದು ಎಂಬ ಅರ್ಥವು ಮುನ್ನೆಲೆಗೆ ಬರಲೇ ಇಲ್ಲ. ಈ ಬಿಳಿಯ ಮಹಿಳೆಯರ ಉದಾರವಾದೀ ಧೋರಣೆಯ ವಾಕ್ಚಾತುರ್ಯಗಳಲ್ಲಿ ‘ಗಂಡಸರಿಗೆ ಸ್ತ್ರೀವಾದೀ ಚಳುವಳಿಗಳಿಂದ ಆಗಬೇಕಾದ್ದು ಏನೂ ಇಲ್ಲ’ ಎಂಬ ತಪ್ಪು ಸಂದೇಶಗಳೇ ರವಾನೆಯಾದದ್ದು. ಅಷ್ಟೇಕೆ ಈ ಚಳುವಳಿಗಳೇನಾದೂ ಸಫಲಗೊಂಡರೆ ಗಂಡಸರು ತಮ್ಮದೆಲ್ಲವನ್ನೂ ಕಳೆದುಕೊಂಡು ಬಿಡುತ್ತಾರಷ್ಟೇ ಎಂದು ಕೂಡಾ ತಿಳಿಯುವಂತೆ ಆಯಿತು. ಬಿಳಿಯ ಮಹಿಳೆಯರಂತೂ ‘ಗಂಡಸರ ಎಲ್ಲ ಸೌಲಭ್ಯಗಳನ್ನೂ ಹೆಂಗಸರು ಕಸಿದುಕೊಂಡು ಬಿಡಬೇಕು ಎಂಬುದಕ್ಕಾಗಿಯೇ ಈ ಚಳುವಳಿಯು ನಡೆಯುತ್ತಿದೆ’ ಎಂಬಂತೆ ರಭಸವನ್ನು ತೋರಿದರು. ಅವರ ಈ ಬಗೆಯ ಸಿಟ್ಟು, ಸೆಡವು, ಮತ್ತು ಹಗೆತನಗಳು ಅದೆಷ್ಟು ತೀವ್ರವಾಗಿದ್ದವೆಂದರೆ ಅವರಿಗೆ ತಾವು ಯಾವುದರ ವಿರುದ್ಧವಾಗಿ ಹೋರಾಡುತ್ತಿದ್ದೇವೆ ಎಂಬ ವಿವೇಚನೆಯೂ ಉಳಿಯದಂತೆ ಆಯಿತು; ವೈಯಕ್ತಿಕ ಹಟಗಳಿಂದ ಹೊರಬಂದು ಚಳುವಳಿಯನ್ನು ಒಂದು ಸಾರ್ವಜನಿಕ ವೇದಿಕೆಯಾಗಿ ಪರಿವರ್ತಿಸಲು ಅವರಿಂದ ಸಾಧ್ಯವೇ ಆಗಲಿಲ್ಲ. ಕೆಲವೊಮ್ಮೆ ಅವರು ತಮ್ಮನ್ನು ತಾವು “ತೀವ್ರವಾದೀ ಸ್ತ್ರೀವಾದಿಗಳು’’ ಕರೆದುಕೊಳ್ಳುತ್ತಿದ್ದರು.
ಆದರೆ ಅವರ ನಡೆಗಳು ಕ್ರಾಂತಿಗಿಂತಲೂ ಪ್ರತಿಕ್ರಿಯಾತ್ಮಕವಾಗಿದ್ದವು ಎಂಬುದೇ ವಾಸ್ತವ. ಈ ಲೋಕದ ಎಲ್ಲ ಗಂಡಸರೂ ಲೋಕದ ಎಲ್ಲ ಹೆಂಗಸರ ಪರಮ ಶತ್ರುಗಳೇ ಆಗಿದ್ದಾರೆ ಎಂಬುದು ಈ ಹೆಂಗಸರ ತಡೆಯಿಲ್ಲದ ವಾದ. ಇದಕ್ಕೆ ಪರಿಹಾರವಾಗಿ ಅವರು ನಾವು ಪ್ರತ್ಯೇಕ ಮಹಿಳಾಲೋಕವೊಂದನ್ನು ಕಟ್ಟಿಕೊಂಡು ಬಿಡಬೇಕು ಎಂಬ ಹುಚ್ಚು ಪ್ರಸ್ತಾವವನ್ನು ಇರಿಸಿದರು. ನಾವಷ್ಟೇ ಇರುವ ಪ್ರತ್ಯೇಕ ಸಮುದಾಯದ ಕಲ್ಪನೆ. ಇಲ್ಲಿ ನಮ್ಮದೇ ಯಜಮಾನಿಕೆ ; ಪುರುಷರು ನಮ್ಮ ಅಧೀನದಲ್ಲಿ ಇರುತ್ತಾರೆ ; ಮೀರಿದರೆ ಈ ಲೋಕದಿಂದಲೇ ಅವರನ್ನು ಹೊರಗೆ ಹಾಕಿಬಿಡುವುದು ಅಷ್ಟೆ. ಅವರ ಈ ಬಗೆಯ ಕೋಪವು ಕೆಲವೊಂದು ಮಹಿಳೆಯರು ಬಯಸುವ ಬಗೆಯ ವ್ಯಕ್ತಿಸ್ವಾತಂತ್ರ‍್ಯ, ಪ್ರತಿರೋಧ ಮತ್ತು ಬದಲಾವಣೆಗಳ ಭಾವಗಳಿಗೆ ಉತ್ತೇಜನವೆನಿಸಿ ಒದಗಬಹುದೇನೋ. ಮಹಿಳೆಯರು ಪ್ರಜ್ಞಾಪೂರ್ವಕವಾಗಿ ಒಂದುಗೂಡಿ ಸಂಬಂಧಗಳನ್ನು ಕಲ್ಪಿಸಬೇಕು ಎಂಬ ಒಂದು ವಿಶೇಷ ಗುರಿಗಾಗಿ ನೆರವಾಗಿ ಒದಗಲೂ ಬಹುದು. ಆದರೆ ಇಂಥ ಆಲೋಚನಾ ಕ್ರಮವು ಸ್ತ್ರೀವಾದೀ ಚಳುವಳಿಯ ಮಹತ್ವವನ್ನು, ಜನಸಾಮಾನ್ಯರನ್ನೂ ಒಳಗೊಂಡು ಎಲ್ಲರಿಗೂ ಗೊಂದಲಗಳಿಲ್ಲದೆ ಸರಿಯಾದ ಬಗೆಯಲ್ಲಿ ಅರ್ಥ ಮಾಡಿಸುವಲ್ಲಿ ಇಂತಿಷ್ಟೂ ನೆರವಾಗಲಿಲ್ಲ.
ವಾಸ್ತವದಲ್ಲಿ ಗಂಡು ಮತ್ತು ಹೆಣ್ಣುಗಳಲ್ಲಿ ಯುದ್ಧವೊಂದು ಆರಂಭ ಗೊಂಡಿರುವುದು ಲೈಂಗಿಕತಾವಾದೀ ತಾರತಮ್ಯ, ಶೋಷಣೆ ಮತ್ತು ದಮನಗಳ ಕಾರಣದಿಂದಲೇ. ನಿಜ ಹೇಳಬೇಕೆಂದರೆ ಮನೆಯೇ ಈ ಕದನದ ಮೊದಲ ರಣಭೂಮಿ. ಇತ್ತೀಚೆಗೆ ಗಂಡು ಮತ್ತು ಹೆಣ್ಣುಗಳು ಮನೆಯಲ್ಲಿ ಮಾತ್ರವೇ ಅಲ್ಲದೆ ಸಾರ್ವಜನಿಕ ವಲಯಗಳಲ್ಲಿಯೂ ಒಟ್ಟೊಟ್ಟಿಗೆ ಇರಬೇಕಾದ ಸಂದರ್ಭಗಳು ಸಾಮಾನ್ಯವಾಗಿದೆ. ಹಾಗಾಗಿ ಈಗ ನಮ್ಮ ರಣಭೂಮಿಯು ಕೂಡಾ ಎಲ್ಲೆಡೆಗೂ ವಿಸ್ತರಿಸಿ ಹರಡಿಕೊಂಡಿದೆ. ಸ್ತ್ರೀವಾದೀ ಚಳುವಳಿಯು ಅವಕಾಶವಾದೀ ಮತ್ತು ಪ್ರತಿಕ್ರಿಯಾತ್ಮಕ ಧೋರಣೆಗಳೊಂದಿಗೆ ಶಾಮೀಲಾಗುವುದಿಲ್ಲ ಎನ್ನುವುದಾದರೆ ಮಾತ್ರ ಈ ಸಮಸ್ಯೆಯನ್ನು ಚಳುವಳಿಯು ಪರಿಹರಿಸಬಲ್ಲುದು. ಗಂಡು ಮತ್ತು ಹೆಣ್ಣುಗಳು ಸೌಹಾರ್ದಯುತವಾಗಿ ಬೆರೆತು ಬಾಳಬಹುದಾದ ಒಂದು ಆದರ್ಶ ನೆಲೆಯನ್ನು ಕಲ್ಪಿಸಬಲ್ಲ ಸಾಮರ್ಥ್ಯ ಅದಕ್ಕಿದೆ.
ಇಲ್ಲಿ ಪರಸ್ಪರವಾಗಿ ವಿರೋಧಗಳು ಬಂದಾಗ ಅವರಿಬ್ಬರಲ್ಲಿ ಜಗಳಗಳು ಬರುವುದಿಲ್ಲ ಎಂದೇನಿಲ್ಲ. ಆದರೆ ಇದನ್ನು ವಿಮರ್ಶಿಸುವ, ಟೀಕಿಸುವ ಅವಕಾಶಗಳು ಇಬ್ಬರಿಗೂ ಸಮಾನವಾಗಿರುತ್ತವೆ. ಯಾರಿಗೆ ಯಾರೂ ಅಧೀನರಲ್ಲ. ಹಾಗಾಗಿ ಪರಸ್ಪರ ಸಂವಾದವು ಕ್ರಮೇಣವಾಗಿಯಾದರೂ ಇಬ್ಬರನ್ನೂ ಸಕಾರಾತ್ಮಕವಾಗಿ ಪರಿವರ್ತಿಸುತ್ತದೆ. ಸ್ತ್ರೀವಾದೀ ಚಳುವಳಿಯು ಇಬ್ಬರ ನಡುವಣ ಕದನಗಳಿಗೆ ಖಂಡಿತವಾಗಿಯೂ ಕೊನೆಯನ್ನು ಕಾಣಿಸುತ್ತದೆ. ಇಬ್ಬರ ನಡುವಣ ಸಂಬಂಧಗಳ ಮಾದರಿಯೇ ಹೊಸ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಏಕೆಂದರೆ ಅವರು ಈಗ ಪರಸ್ಪರ ಪೈಪೋಟಿಗೆ ಇಳಿಯುವುದಿಲ್ಲ; ಪರಸ್ಪರ ಹೀಯಾಳಿಕೆ ಮಾಡುವ, ಅವಮಾನಿಸುವ ಭಾವವೇ ಅವರಲ್ಲಿ ಈಗ ಇಲ್ಲ. ಇದರ ಪರಿಣಾಮವೆಂದರೆ ಇಬ್ಬರಲ್ಲಿ ಯಾರೊಬ್ಬರೂ ಏಕಾಂಗಿತನವನ್ನು ಅನುಭವಿಸುವುದಿಲ್ಲ. ದ್ವೇಷವೇ ಮನುಷ್ಯರ ಮೂಲಗುಣ ಎಂಬ ಅಭಿಪ್ರಾಯವನ್ನು ವಿನಾಕಾರಣವೇ ಹರಡಲಾಗಿದೆ. ಚಳುವಳಿಯು ಇದನ್ನು ಪರಸ್ಪರ ಹಿತವಾದ ಭಾವ, ಆತ್ಮೀಯತೆ, ಮತ್ತು ಸೌಹಾರ್ದ ಗುಣಗಳನ್ನಾಗಿ ಪರಿವರ್ತಿಸುತ್ತದೆ.
ಆದರೆ ಸ್ತ್ರೀವಾದೀ ಚಳುವಳಿಯು ಇಂಥ ಸಕಾರಾತ್ಮಕ ಪರಿಣಾಮಗಳನ್ನು ತರಬಲ್ಲ ಸಾಮರ್ಥ್ಯದ್ದಾಗಿದೆ ಎಂಬುದನ್ನು ಚಳುವಳಿಯನ್ನು ಹಿಡಿತದಲ್ಲಿ ಇರಿಸಿಕೊಂಡಿದ್ದ ಉದಾರವಾದಿ ಮಹಿಳೆಯರು ಮತ್ತು ಅವರ ಹಿಂಬಾಲಕರು ನಿರ್ಲಕ್ಷಿಸಿ ಬಿಟ್ಟರು. ಚಳುವಳಿಯಲ್ಲಿ ಇದ್ದವರ ಪೈಕಿ ದೊಡ್ಡ ದನಿ ತೆಗೆದು ಮಾತನಾಡುತ್ತಿದ್ದವರು ಬಿಳಿಯ ಬೂರ್ಜ್ವಾ ಮಹಿಳೆಯರೇ. ಮಹಿಳೆಯರನ್ನು ಸೇವಕಿಯರು ಎಂದು ನಡೆಸಿಕೊಳ್ಳಲಾಗುತ್ತಿದೆ; ಮೊದಲಿಗೆ ನಾವು ಮಹಿಳೆಯರು ಇದನ್ನು ನಿರಾಕರಿಸಿ ನಿಲ್ಲಬೇಕು ಎಂಬುದನ್ನೇ ಹಿಡಿದು ಹೆಂಗಸರ ಮೇಲೆ ಒತ್ತಡವನ್ನು ಹೇರುತ್ತಿದ್ದರು. ಗಂಡಸರು ತಪ್ಪಾಗಿ ನಡೆದುಕೊಳ್ಳುತ್ತಾರೇನೋ ಹೌದು; ಈ ಕುರಿತು ಹೆಂಗಸರು ಗಂಡಸರೊಂದಿಗೆ ಮಾತನಾಡಿ ಅವರನ್ನು ತಿದ್ದಬಹುದು ಎಂಬ ಸಾಧ್ಯತೆಗಳನ್ನು ಅವರು ಪರಿಗಣಿಸಲು ಕೂಡಾ ಹೋಗಲಿಲ್ಲ. ಈ ದಿಸೆಯಲ್ಲಿ ಸ್ತ್ರೀವಾದೀ ಚಳುವಳಿಯು ಪುರುಷರಿಗೆ ಮಾತ್ರವೇ ಅಲ್ಲ ಮಹಿಳೆಯರಿಗೆ ಕೂಡಾ ಸರಿಯಾಗಿ ತಿಳಿಸಿ ಹೇಳಬಲ್ಲುದು ಎಂಬುದನ್ನು ನಂಬಲು ಸಿದ್ಧರಿರಲಿಲ್ಲ. ಸ್ತ್ರೀವಾದೀ ಚಳುವಳಿಯು ಸ್ತ್ರೀಪುರುಷರಿಗೂ ಸಮಾನವಾಗಿ ನೆರವಾಗಿ ನಿಲ್ಲುವ ಗುಣದ್ದಾಗಿದೆ ಎಂಬ ತಿಳುವಳಿಕೆಯನ್ನು ಅವರು ನಿರಾಕರಿಸಿಬಿಟ್ಟರು. ಸ್ತ್ರೀವಾದದಿಂದ ತಮಗೆ ವೈಯಕ್ತಿಕವಾಗಿ ಏನು ಲಾಭವಾದೀತು ಎಂಬುದರತ್ತಲೇ ಅವರ ಗಮನವೆಲ್ಲವೂ ಕೇಂದ್ರೀಕೃತವಾಗಿತ್ತು. ತಮ್ಮ ಸ್ವಂತದ ಅನುಭವವೊಂದನ್ನೇ ಪ್ರಮಾಣವೆಂಬಂತೆ ಭಾವಿಸಿ ಎಲ್ಲರ ಅನುಭವಗಳೂ ಹೀಗೆಯೇ ಇರುವುದು ಎಂದು ಸಾರ್ವತ್ರೀಕರಿಸಿ ಬಿಟ್ಟರು.
ಇಂಥ ಸ್ವಮೋಹಿಗಳ ಹಿಡಿತದಲ್ಲಿ ಉಳಿದ ಚಳುವಳಿಯು ಸಮುದಾಯ ಆಧರಿತವಾಗಿ ರೂಪುಗೊಳ್ಳಲು ಸಾಧ್ಯವಾಗಲೇ ಇಲ್ಲ. ಹೀಗಿದ್ದರೂ ಕಾಲಕ್ರಮದಲ್ಲಿ ಹಲವು ಮಹಿಳಾ ಸಂಘ ಸಂಸ್ಥೆಗಳು ಹುಟ್ಟಿಕೊಂಡವು. ಅಲ್ಲಿ ಮುಂದಾಳುಗಳಾಗಿ ಕೆಲಸ ಮಾಡುತ್ತಿದ್ದ ಮಹಿಳೆಯರು ವಿವಿಧ ಸಮುದಾಯಗಳವರು ಚಳುವಳಿಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಭಾವಿಸಿದರು. ಬಿಳಿಯ, ಅನುಕೂಲವಂತ, ಮಧ್ಯಮ ವರ್ಗದ, ಅಥವಾ ಕಾಲೇಜು ಶಿಕ್ಷಿತ ಮಹಿಳೆಯರಷ್ಟೇ ಇರುವುದು ಎಂದಾಗಬಾರದು; ಇನ್ನುಳಿದ ಹತ್ತುಹಲವು ಸಮುದಾಯಗಳ ಮಹಿಳೆಯರೂ ಇಲ್ಲಿ ಸೇರುವುದು ಅಗತ್ಯ ಎಂದು ಅವರು ಭಾವಿಸಿದರು. ಈವರೆಗೂ ಸ್ತ್ರೀವಾದಿಗಳಾರೂ ಜನಸಾಮಾನ್ಯ ಮಹಿಳಾ ಸಮುದಾಯಗಳಿಗೆ ಸ್ತ್ರೀವಾದೀ ಚಳುವಳಿಯ ಮಹತ್ವವನ್ನು ಕುರಿತು ಸರಿಯಾದ ತಿಳುವಳಿಕೆಯನ್ನು ಒದಗಿಸ ಬೇಕಿದೆ ಎಂದು ಭಾವಿಸಿರಲೇ ಇಲ್ಲ. ಬಿಳಿಯ ಮಹಿಳೆಯರ ಯಜಮಾನಿಕೆಯು ಸಾಮಾಜಿಕ ಸಮಾನತೆಗೆ ಮಾತ್ರವೇ ಗಮನ ಹರಿಸಿದ್ದು; ತಮ್ಮ ಈ ಮಂತ್ರವು ಎಲ್ಲ ಸಮುದಾಯಗಳ ಮಹಿಳೆಯರಿಗೂ ಸಮಾನವಾಗಿ ಅನ್ವಯಿಸುತ್ತದೆ ಎಂಬ ಧೋರಣೆಯನ್ನು ಚಳುವಳಿಯ ಉದ್ದಕ್ಕೂ ಅವರು ಹರಡಿದರು. ಚಳುವಳಿಯನ್ನು ಸಮುದಾಯ ಆಧರಿತವೆನಿಸಿ ಕಟ್ಟಲು, ಅದನ್ನು ತಳಮೂಲದಿಂದ ಒಟ್ಟುಗೂಡಿಸಲು ಸಾಧ್ಯವಾಗಲಿಲ್ಲ; ಎಲ್ಲ ಸಮುದಾಯಗಳ ಮಹಿಳೆಯರೂ ಒಂದುಗೂಡಲೇ ಇಲ್ಲ ಎಂದಮೇಲೆ ಚಳುವಳಿಯ ಸಕಾರಾತ್ಮಕ ಮಹತ್ವವನ್ನು ಎಲ್ಲರೊಂದಿಗೂ ಹಂಚಿಕೊಳ್ಳಬೇಕಿತ್ತು ಎಂಬ ಮಾತಿಗೆ ಅರ್ಥವೇ ಇಲ್ಲ.
ಇವೆಲ್ಲವೂ ಒಟ್ಟು ಸೇರಿದ ಪರಿಣಾಮವೆಂದರೆ ಸ್ತ್ರೀವಾದೀ ಸಂಘಸಂಸ್ಥೆಗಳನ್ನು ಕಟ್ಟಿಕೊಂಡಿರುವ ಯಾರಿಗೋ ಕೆಲವರಿಗೆ ಸ್ತ್ರೀವಾದೀ ಚಳುವಳಿಯು ನೆರವಾಗುತ್ತದೆಯೇ ಹೊರತು ಉಳಿದ ಸಾಮಾನ್ಯ ಮಹಿಳೆಯರಿಗೂ ಆ ಚಳುವಳಿಗೂ ಏನೇನೂ ಸಂಬಂಧವಿಲ್ಲ ಎಂಬ ಅಭಿಪ್ರಾಯವು ಹರಡಿತು. ಸ್ತ್ರೀವಾದವು ಅತ್ತ ಅಂಚಿಗೆ ಸರಿದು ಹೋಯಿತೇಕೆ ಎಂಬುದನ್ನು ಇದು ವಿವರಿಸುತ್ತದೆ. ಈಚೆಗೆ ಸ್ತ್ರೀವಾದೀ ಚಳುವಳಿಯ ಈ ಸೋಲುಗಳನ್ನು ಕುರಿತು ಸಾಕಷ್ಟು ಟೀಕೆಗಳು ಬರುತ್ತಿವೆ ಎಂಬುದು ನಿಜ. ಆದರೆ ಈ ಯಾವ ವಿಮರ್ಶೆಗಳೂ ನಮ್ಮ ತಂತ್ರಗಳನ್ನು ಮತ್ತು ನಡವಳಿಗಳನ್ನು ನಾವು ಮರುಪರಿಶೀಲಿಸ ಬೇಕಿದೆ ಎಂಬ ಮಾತನ್ನು ಮುಖ್ಯವೆಂದು ತಿಳಿದ ಹಾಗೇ ಇಲ್ಲ. ಇಂದಿನ ಸ್ತ್ರೀವಾದವು ಇಷ್ಟೆಲ್ಲ ಕುಂದುಕೊರತೆಗಳ ನಡುವೆಯೂ ತನ್ನ ಸಿದ್ಧಾಂತಗಳನ್ನು ಮತ್ತು ಅಭ್ಯಾಸಗಳನ್ನು ತಡೆಯೇ ಇಲ್ಲದಂತೆ ಗಟ್ಟಿಯಾಗಿ ಹಿಡಿದಿಟ್ಟು ಕೊಂಡಿದೆ. ಸಾಕಷ್ಟು ಮಟ್ಟಿಗೆ ಸಾಂಸ್ಥೀಕರಣವೂ ಆಗಿದೆ. ಆದರೆ ನಾವು ನಿಜವಾಗಿಯೂ ಲೈಂಗಿಕತಾವಾದೀ ದಮನಗಳನ್ನು ಕೊನೆಗಾಣಿಸ ಬೇಕೆಂದು ಬಯಸುತ್ತೇವೆ ಎಂದಾದರೆ, ಚಳುವಳಿಯು ಹೋಗುತ್ತಿರುವ ದಾರಿಯನ್ನು ಬದಲಿಸಲು ನಾವು ಪ್ರಯತ್ನಿಸಬೇಕು. ಅಂಥ ಬದಲಾವಣೆಗಾಗಿ, ಮೊದಲಿಗೆ ನಾವು ನಡೆಸುವ ವಿಶ್ಲೆಷಣೆಗಳ ಮಾದರಿಯಲ್ಲಿಯೇ ಬದಲಾವಣೆಗಳನ್ನು ತರುವ ಅಗತ್ಯವಿದೆ. ಲೈಂಗಿಕತಾವಾದೀ ದಮನಗಳನ್ನು ನಿವಾರಿಸಿದರೆ ಮಾತ್ರವೇ ನಮ್ಮ ಬದುಕುಗಳು ಸಕಾರಾತ್ಮಕವಾದ ಪರಿವರ್ತನೆಗಳನ್ನು ಕಾಣುವುದು ಸಾಧ್ಯ ಎಂಬ ಮಾತನ್ನು ಆಧರಿಸಿಯೇ ನಮ್ಮ ವಿಶ್ಲೇಷಣೆಗಳು ಮೊದಲುಗೊಳ್ಳಬೇಕು.
ಸ್ತ್ರೀವಾದೀ ಹೋರಾಟಗಳಲ್ಲಿ ನಿರತರಾಗಿರುವ ಹಲವರು ಇಂದು ಲೈಂಗಿಕತಾವಾದೀ ದಮನಗಳನ್ನು ಕೊನೆಗಾಣಿಸಬೇಕಾದ್ದು ನಮ್ಮ ತುರ್ತಿನ ಅಗತ್ಯ ಎಂಬುದನ್ನು ಸಮರ್ಥಿಸುತ್ತಾರೆ. ಏಕೆಂದರೆ ಉಳಿದ ಇನ್ನೆಲ್ಲ ಬಗೆಯ ದಮನಗಳೂ ಕೂಡಾ ಲೈಂಗಿಕತಾವಾದೀ ಧೋರಣೆಗಳ ಮೂಲದವೇ ಆಗಿರುತ್ತವೆ ಎಂಬುದರ ಅರಿವು ಅವರಿಗೆ ಇದೆ. ಜನಾಂಗೀಯವಾದ, ಮತ್ತು ವರ್ಗರಚನೆಗಳು ಲೈಂಗಿಕತಾವಾದದ ಮೂಲದವೇ ಆಗಿವೆ. ಈ ಬಗೆಯ ವಿಶ್ಲೇಷಣೆಯು ಲೈಂಗಿಕತಾವಾದವನ್ನು ನಿರ್ಮೂಲನ ಮಾಡುವಲ್ಲಿ ನಮಗೆ ನೆರವಾಗುತ್ತದೆ. ಜನಾಂಗವಾದೀ ಅಥವಾ ವರ್ಗವಾದೀ ದಮನಗಳನ್ನು ಗಮನಿಸುವುದಕ್ಕೂ ಮೊದಲು, ಇವುಗಳಿಗಿಂತಲೂ “ಹಳೆಯದೂ,” ಮತ್ತು “ಮೂಲಭೂತವಾದುದೂ” ಆದ ಲೈಂಗಿಕತಾವಾದೀ ದಮನಗಳ ಕಡೆಗೆ ನಮ್ಮ ಗಮನವು ಹರಿಯಬೇಕಾದ ಅಗತ್ಯವಿದೆ. ಈ ವಿವರಣೆಗೆ ದಮನಗಳನ್ನು ಕೂಡಾ ಹೀಗೆ ಶ್ರೇಣೀಕರಣಗೊಳಿಸಿ ತೋರಿಸಬಹುದು, ಮತ್ತುಅವುಗಳಲ್ಲಿ ಲೈಂಗಿಕತಾವಾದೀ ದಮನವೇ ಅತ್ಯಂತ ತೀವ್ರವಾದುದು ಎಂದು ಸಾಬೀತು ಮಾಡಲೂಬಹುದು ಎಂಬ ಅರ್ಥವನ್ನು ಹಚ್ಚಬಾರದು. ಹಾಗೆ ತಿಳಿದರೆ ಯಾವ ಬಗೆಯ ದಮನದ ಕಡೆಗೆ ಮೊದಲು ಗಮನವನ್ನು ಹರಿಸಬೇಕು ಎಂಬ ಪೈಪೋಟಿಯನ್ನು ಅನಗತ್ಯವಾಗಿ ಸೂಚಿಸಿದ ಹಾಗೆ ಆಗುತ್ತದೆ.
ಲಿಂಗಪಾತ್ರ ವಿಭಜನೆಗಳು ಪ್ರಾಚೀನ ನಾಗರಿಕತೆಗಳಲ್ಲಿಯೇ ಕಂಡುಬರುತ್ತವೆ ಎಂದು ನಾವೀಗ ತಿಳಿದಿದ್ದೇವೆ ನಿಜ. ಆದರೆ ಇಂಥ ವಿಭಜನೆಯು ಸಾಮಾಜಿಕವಾಗಿ ಮಹಿಳೆಯರ ಶೋಷಣೆ ಮತ್ತು ದಮನಗಳಿಗೆ ಕಾರಣವಾಗಿತ್ತು ಎಂಬುದನ್ನು ಸಮರ್ಥಿಸಲು ನಮ್ಮಲ್ಲಿ ಯಾವ ಆಧಾರಗಳೂ ಇಲ್ಲ. ನಮಗೆ ಇಂದು ಗೊತ್ತಿರುವ ನಾಗರಿಕತೆಗಳ ಪೈಕಿ ಪುರಾತನ ಕಪ್ಪು ಆಫ್ರಿಕದ ನಾಗರಿಕತೆಯೇ ಅತ್ಯಂತ ಪ್ರಾಚೀನವಾದುದು ಎನ್ನಲಾಗುತ್ತದೆ. ಜನಾಂಗ ಅಥವಾ ವರ್ಗಭೇದಗಳ ಮಾತು ಅಲ್ಲಿ ಇರಲಿಲ್ಲವೆಂದು ಕೂಡಾ ತಿಳಿಯಲಾಗಿದೆ. ಲೈಂಗಿಕತಾವಾದ, ಜನಾಂಗೀಯವಾದ, ಮತ್ತು ವರ್ಗವಾದಗಳು ಪಶ್ಚಿಮದಲ್ಲಿ ಮಾತ್ರವೇ ಅಲ್ಲದೆ ಜಾಗತಿಕವಾಗಿ ಕಂಡುಬರುವ ದಬ್ಬಾಳಿಕೆಯ ಹಲವು ವ್ಯವಸ್ಥೆಗಳ ಲಕ್ಷಣಗಳು ಎಂಬಂತೆ ಇಂದು ನಮಗೆ ತೋರುತ್ತಿರಬಹುದು. ಆದರೆ ಪಶ್ಚಿಮದ ತಾತ್ವಿಕ ಆದರ್ಶಗಳೇ ಈ ಬಗೆಯ ದಮನಕಾರೀ ಮನಸ್ಥಿತಿಗಳಿಗೆ ಕಾರಣವಾಗಿರಬಹುದು ಎನಿಸುತ್ತದೆ. ಒಟ್ಟಾರೆಯ ಮಾನವ ಅಭಿವೃದ್ಧಿಯ ವಿಕಸನದ ಮಾದರಿಯನ್ನು ಗಮನದಲ್ಲಿರಿಸಿ ಈ ಮಾತು ನಿಜವೇ ಎಂದು ಪರೀಕ್ಷಿಸಲು ಹೊರಟಾಗ ಈ ಮಾತು ಸರಿಯಾಗಿ ಅರ್ಥವಾಗದೆ ಹೋಗಬಹುದು. ಆದರೆ ಪಶ್ಚಿಮದ ಸಂದರ್ಭಗಳನ್ನು ಗಮನಿಸಿದಾಗ ಇದು ಹೆಚ್ಚು ಅರ್ಥವಾಗುತ್ತದೆ. ಸಾಂಪ್ರದಾಯಿಕವಾದ ಪಾಶ್ಚಾತ್ಯ ಚಿಂತನಾ ವಿಧಾನಗಳು ಈ ಸಮಾಜದಲ್ಲಿ ಕಂಡುಬರುವ ಎಲ್ಲ ಬಗೆಯ ದಮನಗಳನ್ನೂ ಸಮರ್ಥಿಸುವಂತೆ ಇವೆ. ಪಾಶ್ಚಾತ್ಯ ಸಂಸ್ಕೃತಿ ಚಿಂತನೆಯಲ್ಲಿ ಪ್ರಧಾನವಾದ ಒಂದು ವಿರೋಧಾಭಾಸವಿದೆ. ಈ ಚಿಂತನೆಯು ಮೊದಲಿಗೆ ಜನರನ್ನು ಶ್ರೇಷ್ಠರು ಮತ್ತು ಕನಿಷ್ಠರು ಎಂದು ವಿಂಗಡಿಸುತ್ತದೆ. ಆಮೇಲೆ ಶ್ರೇಷ್ಠರು ಕನಿಷ್ಠರನ್ನು ನಿಯಂತ್ರಿಸಬೇಕು ಎಂದು ಹೇಳುತ್ತದೆ.
ಪೂರ್ಣ ಓದಿಗಾಗಿ ಸಂಪರ್ಕಿಸಿ : ಸಂಗಾತ ಪುಸ್ತಕ, ಧಾರವಾಡ 9341757653
*
ಇದನ್ನೂ ಓದಿ : Feminism; ನಾನೆಂಬ ಪರಿಮಳದ ಹಾದಿಯಲಿ: ನಿರ್ದಿಷ್ಟ ಸಾಮಾಜಿಕ ಪ್ರಕ್ರಿಯೆಗಳಿಂದ ಆಕೆ ಹೆಣ್ಣಾಗುತ್ತಾಳೆ ವಿನಾ ಹುಟ್ಟಿನಿಂದಲ್ಲ
Published On - 7:40 pm, Thu, 16 December 21