Book Release : ಅಚ್ಚಿಗೂ ಮೊದಲು ; ‘ಕವಿಜೋಡಿಯ ಆತ್ಮಗೀತ’ ಇಂದು ಸಂಜೆ ನಿಮಗೊಪ್ಪಿಸಲಿದ್ದಾರೆ ನಟರಾಜ್ ಹುಳಿಯಾರ್
Sylvia Plath and Ted Hughes : ‘ಎಂಟು ತುಂಬುವ ಹೊತ್ತಿಗೆ ಕವಿಯಾಗಿದ್ದಳು, ಶಾಲೆಯ ಕಣ್ಮಣಿಯಾಗಿದ್ದಳು, ಹದಿನೆಂಟು ತುಂಬುವ ಹೊತ್ತಿಗೆ ಕವಿಯಾಗಿದ್ದಳು, ಸಾಯಲು ಅಣಿಯಾಗಿದ್ದಳು’
Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.
ಟಿವಿ9 ಕನ್ನಡ ಡಿಜಿಟಲ್ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್ ನಂಬರ್ ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com
ಕೃತಿ : ಕವಿಜೋಡಿಯ ಆತ್ಮಗೀತ (ಟೆಡ್ ಹ್ಯೂಸ್, ಸಿಲ್ವಿಯಾ ಪ್ಲಾತ್ ಕಥಾ ಕಾವ್ಯ) ಲೇಖಕರು : ಡಾ. ನಟರಾಜ್ ಹುಳಿಯಾರ್ ಪುಟ : 130 ಬೆಲೆ : ರೂ. 120 ಮುಖಪುಟ ವಿನ್ಯಾಸ : ಮುರಳೀಧರ ರಾಠೋಡ ಪ್ರಕಾಶನ : ಪಲ್ಲವ ಪ್ರಕಾಶನ, ಚನ್ನಪಟ್ಟಣ
*
ಇಂದು ಸಂಜೆ 6ಕ್ಕೆ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಎಚ್. ಎನ್. ಸಭಾಂಗಣದಲ್ಲಿ ಲೇಖಕ, ಅನುವಾದಕ, ನಟರಾಜ್ ಹುಳಿಯಾರ್ ಅವರ ‘ಕವಿಜೋಡಿಯ ಆತ್ಮಗೀತ’ ಬಿಡುಗಡೆ. ಈ ಸಂದರ್ಭದಲ್ಲಿ ಟೆಡ್ ಹ್ಯೂಸ್ ಮತ್ತು ಸಿಲ್ವಿಯಾ ಪ್ಲಾತ್ ಕವಿಜೋಡಿಯ ‘ರಂಗಪ್ರವೇಶ’ ಮತ್ತು ಹುಳಿಯಾರರ ಆಶಯ ನಿಮ್ಮ ಓದಿಗೆ.
*
ಅವಳು : ಎಂಟು ತುಂಬುವ ಹೊತ್ತಿಗೆ ಕವಿಯಾಗಿದ್ದಳು ಶಾಲೆಯ ಕಣ್ಮಣಿಯಾಗಿದ್ದಳು ಹದಿನೆಂಟು ತುಂಬುವ ಹೊತ್ತಿಗೆ ಕವಿಯಾಗಿದ್ದಳು ಸಾಯಲು ಅಣಿಯಾಗಿದ್ದಳು
ಅವನು : ಮುಂದೊಮ್ಮೆ ಕವಿಯಾಗುವನೆಂದು ಶಾಲೆಯ ಮೇಷ್ಟ್ರುಗಳು ಕನಸು ಕಂಡಿದ್ದರು ಹದಿನೆಂಟು ತುಂಬುವ ಹೊತ್ತಿಗೆ ಕವಿಯಾಗಿದ್ದನು ಕವಿತೆ ಬರೆದುಕೊಂಡೇ ಬದುಕಲು ಅಣಿಯಾಗಿದ್ದು.
ಅವಳು : ಅಮೆರಿಕದ ಪ್ರೊಫೆಸರೊಬ್ಬನ ನಾಜೂಕು ಮಗಳು ಅಮ್ಮ ಸ್ಕೂಲ್ ಟೀಚರಾಗಿದ್ದಳು ಆ ಹುಡುಗಿಯ ಹೆಸರು ಸಿಲ್ವಿಯಾ ಪ್ಲಾತ್ ; ಅಪ್ಪ ಅಮ್ಮ ಅವಳನ್ನು ‘ಸಿವ್ವಿ’ ಎನ್ನುತ್ತಿದ್ದರು. ಕಡಲಿನ ಅಲೆಗಳ ಜೊತೆಗೆ ಅವಳ ಬಾಲ್ಯದ ಲೋಕ.
ಅವನು : ಇಂಗ್ಲೆಂಡಿನ ಹಳ್ಳಿ ಬಡಗಿಯ ಒರಟು ಮಗ ಅಮ್ಮ ಹಳ್ಳಿಯ ಚಂದುಳ್ಳಿ ಚೆಲುವೆ ಆ ಹುಡುಗನ ಹೆಸರು ಟೆಡ್ ಹ್ಯೂಸ್ ; ಗೆಳೆಯರು ಅವನನ್ನು ‘ಟೆಡ್ಡಿ’ ಎನ್ನುತ್ತಿದ್ದರು. ಕಾಡುಮೇಡು ಹಕ್ಕಿ, ಪ್ರಾಣಿ ಜೊತೆಗೆ ಅವನ ಬಾಲ್ಯದ ಲೋಕ.
ಅಮೆರಿಕದ ಸಿವ್ವಿಯೂ ಇಂಗ್ಲೆಂಡಿನ ಟೆಡ್ಡಿಯೂ ಒಂದು ಸಂಭ್ರಮದ ಸಂಜೆ ಇದ್ದಕ್ಕಿದ್ದಂತೆ ಎದುರುಬದುರಾದರು ಮುಂದೊಮ್ಮೆ ಜೊತೆಯಾದರು.
ಸಿವ್ವಿಯೂ ಟೆಡ್ಡಿಯೂ ಜೊತೆಗೂಡಿ ಕವಿತೆ ಓದಿ ಕವಿತೆ ಬರೆದು ಬೆಳೆದು ಹೊಳೆದು ಉರಿದು ಅಳಿದ ಮೇಲೆ ಉಳಿದ ಪ್ರತಿಮೆ-ಉಪಮೆ-ಗಿಪಮೆ ಪದ ಪದಾರ್ಥ ಶಬ್ದ ನಿಶ್ಯಬ್ದ…
ಒಂದು ಸುಂದರ ಮಧ್ಯಾಹ್ನ ಆ ಪುಸ್ತಕದ ಅಂಗಡಿಯಲ್ಲಿ ಕವಿ ಟೆಡ್ ಹ್ಯೂಸ್ ಜೀವನಚರಿತ್ರೆ ಸಿಕ್ಕಿದ್ದು ಆಕಸ್ಮಿಕವಾಗಿತ್ತು. ಇಪ್ಪತ್ತು ವರ್ಷಗಳ ಕೆಳಗೆ ನನ್ನ ಅಂಕಣವೊಂದರಲ್ಲಿ ಸಣ್ಣ ಟಿಪ್ಪಣಿ ಬರೆದಾಗ ನೆನೆದಿದ್ದ ಆ ಕವಿಲೋಕವನ್ನು ಮತ್ತೆ ಎದುರುಗೊಳ್ಳಲು ನನ್ನ ಓದುಗ ಮನಸ್ಸು ಸಹಜ ಸಿದ್ಧತೆಯಲ್ಲಿದ್ದಂತಿತ್ತು. ಇಂಗ್ಲೆಂಡಿನ ತರುಣ ಕವಿ ಟೆಡ್ ಹ್ಯೂಸ್‌ಗೆ ಒಂದು ಸಂಜೆಯ ಪಾರ್ಟಿಯಲ್ಲಿ ಅಮೆರಿಕದ ಉದಯೋನ್ಮುಖ ಕವಯಿತ್ರಿ ಸಿಲ್ವಿಯಾ ಪ್ಲಾತ್ ಸಿಕ್ಕಳು. ಅವರಿಬ್ಬರ ನಡುವಣ ಆರಂಭದ ಆಕರ್ಷಣೆ ತೀವ್ರ ಮೋಹವಾಗಿ, ಪ್ರೇಮವಾಗಿ ಬೆಳೆಯಿತು; ಸಿಲ್ವಿಯಾ-ಟೆಡ್ 1956ರಲ್ಲಿ ಮದುವೆಯಾದರು. ಇಬ್ಬರೂ ಅತ್ಯಂತ ಪ್ರತಿಭಾಶಾಲಿ ಇಂಗ್ಲಿಷ್ ಕವಿಗಳಾಗಿ ಅರಳತೊಡಗಿದರು. ಕಾವ್ಯವೇ ಬದುಕೆಂಬಂತೆ ಕಂಡಿದ್ದ ಅವರು ಕವಿತೆ, ಕತೆ, ನಾಟಕ, ವಿಮರ್ಶೆ… ಹೀಗೆ ಹಲವು ಪ್ರಕಾರಗಳಲ್ಲಿ ಬರೆದರು. ಬರಬರುತ್ತಾ ಅವರ ಬದುಕಿನಲ್ಲಿ ಏರುಪೇರುಗಳಾದವು. ಟೆಡ್ ಹ್ಯೂಸ್‌ನಿಂದ ಬೇರೆಯಾದ ಸಿಲ್ವಿಯಾ ಕಾವ್ಯನಾಮದಲ್ಲಿ ತನ್ನ ‘ಬೆಲ್ ಜಾರ್’ ಕಾದಂಬರಿ ಪ್ರಕಟಿಸಿದ ನಂತರ, ಒಂದು ರಾತ್ರಿ ತನ್ನೆರಡು ಪುಟ್ಟ ಮಕ್ಕಳನ್ನು ಬಿಟ್ಟು ತನ್ನ ಬದುಕನ್ನು ಕೊನೆಗಾಣಿಸಿಕೊಂಡಳು…
ಟೆಡ್ ಹ್ಯೂಸ್(1930-1998) ಮತ್ತು ಸಿಲ್ವಿಯಾ ಪ್ಲಾತ್(1932-1963) ಎಂಬ ಕವಿಜೋಡಿಯ ಬದುಕು, ಅವರಿಬ್ಬರ ನೂರಾರು ಕವಿತೆಗಳು, ಹಲವು ಪ್ರಕಾರಗಳಲ್ಲಿನ ಅವರ ಬರಹಗಳು; ಕವಿತೆ ಬರೆಯಲು ಅವರ ಸಿದ್ಧತೆ, ಶ್ರಮ, ಕಾತರ, ಚಡಪಡಿಕೆ, ಹತಾಶೆ, ಸಂಭ್ರಮ…ನಿಧಾನಕ್ಕೆ ನನ್ನೊಳಗೆ ಇಳಿಯತೊಡಗಿದವು. ಇವೆಲ್ಲ ನನ್ನೊಳಗೆ ಬೆಳೆದಂತೆ ಈ ಕವಿಜೋಡಿಯ ಸಂಕೀರ್ಣ ಲೋಕವನ್ನು ಗದ್ಯದಲ್ಲೋ, ಕತೆಯ ರೂಪದಲ್ಲೋ ಹೇಳಿದರೆ ಅವರ ಕವಿಸೂಕ್ಷ್ಮಗಳು ಮಾಯವಾಗಿಬಿಡಬಹುದು ಎನ್ನಿಸಿತು; ಪ್ರತಿಮೆ, ರೂಪಕಗಳೇ ತುಂಬಿದಂತಿದ್ದ ಈ ಇಬ್ಬರ ಲೋಕವನ್ನು, ಅನುಭವವನ್ನು ಕತೆಯಾಗಿಸುವುದು ಕೂಡ ಕಷ್ಟವಿತ್ತು… ಹಾಗಾಗಿ ಇದು ಕಥಾಕಾವ್ಯವಾಯಿತು.
ಈ ಪುಸ್ತಕದ ಖರೀದಿಗೆ : 9480353507
*
ಪರಿಚಯ : ನಟರಾಜ್ ಹುಳಿಯಾರ್ ಅವರು ತುಮಕೂರು ಜಿಲ್ಲೆಯ ಹುಳಿಯಾರಿನವರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ‘ಆಧುನಿಕ ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ’ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಮತ್ತೊಬ್ಬ ಸರ್ವಾಧಿಕಾರಿ, ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು, ಮಾಯಾಕಿನ್ನರಿ (ಕಥಾಸಂಕಲನಗಳು), ರೂಪಕಗಳ ಸಾವು (ಕವಿತೆಗಳು), ಗಾಳಿಬೆಳಕು (ಸಾಂಸ್ಕತಿಕ ಬರಹಗಳು), ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ (ತೌಲನಿಕ ಅಧ್ಯಯನ), ಇಂತಿ ನಮಸ್ಕಾರಗಳು (ಲಂಕೇಶ್-ಡಿ.ಆರ್. ನಾಗರಾಜ್ ಕುರಿತ ಸೃಜನಶೀಲ ಕಥಾನಕ), ಶೇಕ್ಸ್ ಪಿಯರ್ ಮನೆಗೆ ಬಂದ (ನಾಟಕ),ಶಾಂತವೇರಿ ಗೋಪಾಲಗೌಡ(ಜೀವನಚರಿತ್ರೆ), ಕಾಮನ ಹುಣ್ಣಿಮೆ (ಕಾದಂಬರಿ), ಕನ್ನಡಿ (ಪ್ರಜಾವಾಣಿ ಅಂಕಣ ಬರಹಗಳು). ಹಸಿರು ಸೇನಾನಿ, ತೆರೆದ ಪಠ್ಯ, ಶೇಕ್ಸ್ಪಿಯರ್: ಕನ್ನಡ ಸ್ಪಂದನ; ಆಫ್ರಿಕಾ ಸಾಹಿತ್ಯ ವಾಚಿಕೆ, ಲೋಹಿಯಾ ಚಿಂತನೆ (ಸಂಪಾದಿತ ಕೃತಿಗಳು). ಸ್ವಾತಂತ್ರ್ಯದ ಅಂತರ್ಜಲ, ಉತ್ತರ ದಕ್ಷಿಣ, ಭಾಷೆ ಮತ್ತು ಇತಿಹಾಸ, ಕಣ್ಣೆದುರಿನ ಪ್ರಶ್ನೆಗಳು, ಮಾನವಕುಲದ ಏಕತೆ; ಮಾರ್ಕ್ಸ್, ಗಾಂಧಿ, ಸಮಾಜವಾದ; ಕಣ್ಣೆದುರಿನ ಪ್ರಶ್ನೆಗಳು (ಲೋಹಿಯಾ ಕನ್ನಡಾನುವಾದಗಳ ಸಂಪಾದಿತ ಕೃತಿಗಳು), ಲೋಕ ಸಾಹಿತ್ಯ ಮಾಲಿಕೆಯ 11 ಕೃತಿಗಳು; ಭಾರತೀಯ ಭಾಷಾ ನಾಟಕ ಮಾಲಿಕೆಯ 15 ಕೃತಿಗಳು.
*
ಇದನ್ನೂ ಓದಿ : Book Release : ಅಚ್ಚಿಗೂ ಮೊದಲು : ಕಲಾವಿದ ಪುಂಡಲೀಕ ಕಲ್ಲಿಗನೂರರ ‘ಚಾಲುಕ್ಯರ ಶಿಲ್ಪಕಲೆ’ ಕೃತಿ ಇಂದಿನಿಂದ ಲಭ್ಯ
Published On - 3:35 pm, Sat, 11 December 21