‘ಜನಪ್ರತಿನಿಧಿಗಳೇ ಎಚ್ಚರವಿರಲಿ’ ; ‘ಒಮ್ಮೆ ಹೆಣ್ತನ ಅನುಭವಿಸಿ, ಆಮೇಲೆ ಅತ್ಯಾಚಾರದ ಆನಂದವನ್ನು ಹಂಚಿಕೊಳ್ಳುವಿರಂತೆ’
Rape : ‘ಅತ್ಯಾಚಾರ ಎಂಬುದು ಹೆಣ್ಣಿನ ಮಾನಸಿಕ ಮತ್ತು ದೈಹಿಕ ಸ್ಥಿತಿಯ ಮೇಲೆ ಮಾಡುವ ಪರಿಣಾಮಗಳ ಘೋರತೆಯ ಅರಿವು ಗಂಡಸರಿಗಿಲ್ಲ. ಜೊತೆಗೆ ಇವತ್ತಿಗೂ ಗಂಡಸ್ತನ ಎಂಬುದು ಇಲ್ಲಿ ಹೆಚ್ಚುಗಾರಿಕೆಯಾಗಿಯೇ ಬಿಂಬಿತವಾಗಿದೆ. ಆದ್ದರಿಂದ ಗಂಡಸ್ತನದ ಶಕ್ತಿ ಪ್ರದರ್ಶನದಲ್ಲಿ ಅತ್ಯಾಚಾರದಂತಹ ವಿಕೃತ ಕ್ರಿಯೆಗಳು ಕೂಡಾ ಅವರಲ್ಲಿ ನಾಚಿಕೆ, ತಳಮಳ ಹುಟ್ಟಿಸುವುದೆ ಇಲ್ಲ.‘ ಅಕ್ಷತಾ ಹುಂಚದಕಟ್ಟೆ
Rape : ನಿನ್ನೆ ವಿಧಾನಸಭೆಯ ಅಧಿವೇಶನ ನಡೆಯುವ ಸಂದರ್ಭದಲ್ಲಿ ಮಾಜಿ ಸಭಾಧ್ಯಕ್ಷ ಹಾಗೂ ಹಾಲೀ ಕಾಂಗ್ರೆಸ್ ಮುಖಂಡ ಕೆ.ಆರ್. ರಮೇಶ್ ಕುಮಾರ್ ಅತ್ಯಾಚಾರದ ಬಗ್ಗೆ ಆಡಿದ ಮಾತು ದೇಶಾದ್ಯಂತ ಚರ್ಚೆ ಆಗುತ್ತಿದೆ. ಹಾಲೀ ಸಭಾಧ್ಯಕ್ಷ, ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡುತ್ತ, ಸದನ ನಡೆಸಲು ಆಗುವ ತೊಂದರೆ ವಿವರಿಸುತ್ತ, ‘ಎಲ್ಲರೂ ಮಾತನಾಡಬೇಕು, ಎಲ್ಲ ವಿಷಯ ಚರ್ಚೆ ಆಗಬೇಕು ಎನ್ನುತ್ತಾರೆ, ಈಗ ನಾನು ಯಾವ ಹಂತ ತಲುಪಿದ್ದೇನೆ ಎಂದರೆ- Let us enjoy the situation’ ಎಂದರು. ಆಗ ಎದ್ದುನಿಂತು ಮಾತನಾಡಿದ ರಮೇಶ್ ಕುಮಾರ್, ‘There is a saying. If rape is inevitable. Women should lie down and enjoy the rape’ ಎಂದು ಹೇಳದರು. ಆಗ ಪೀಠದಲ್ಲಿ ಕುಳಿತಿದ್ದ ಕಾಗೇರಿ ಅವರು ನಕ್ಕು ಸುಮ್ಮನಾದರು. ಇಂದು ಕ್ಷಮೆ ಯಾಚಿಸಿ ಈ ಅಧ್ಯಾಯಕ್ಕೆ ಕೊನೆ ಹಾಡೋಣ ಎಂದು ವಿನಂತಿಸಿದರು. ಆದರೆ, ಇದನ್ನು ಇಷ್ಟಕ್ಕೆ ಬಿಟ್ಟುಬಿಡಬೇಕೆ? ಮಹಿಳೆಯರ ಬಗ್ಗೆ ಇಂತಹ ಮನಃಸ್ಥಿತಿ ಹೊಂದಿದವರು ನಮ್ಮನ್ನು ಪ್ರತಿನಿಧಿಸಬೇಕೆ? ಇಂಥ ಮನಃಸ್ಥಿತಿಗಳ ಬದಲಾವಣೆ ಹೇಗೆ? ಇದು ಚರ್ಚಿಸಲೇಬೇಕಾದ ವಿಷಯ.
ಟಿವಿ9 ಕನ್ನಡ ಡಿಜಿಟಲ್ ಈ ಹಿನ್ನೆಲೆಯಲ್ಲಿ ‘ಜನಪ್ರತಿನಿಧಿಗಳೇ ಎಚ್ಚರವಿರಲಿ’ ಹೊಸ ಸರಣಿಯನ್ನು ಪ್ರಾರಂಭಿಸಿದೆ. ನಿಮ್ಮ ಪ್ರತಿಕ್ರಿಯಾತ್ಮಕ ಬರಹಗಳನ್ನು ಸುಮಾರು 300 ಪದಗಳಲ್ಲಿ ಕಳಿಸಬಹುದು. ಜೊತೆಗೊಂದು ಭಾವಚಿತ್ರವಿರಲಿ. tv9kannadadigital@gmail.com
*
ಶಿವಮೊಗ್ಗದಲ್ಲಿ ವಾಸಿಸುತ್ತಿರುವ ಲೇಖಕಿ, ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ ಅವರ ಪ್ರತಿಕ್ರಿಯೆ.
*
ಲಿಂಗಸೂಕ್ಷ್ಮತೆ ಎನ್ನುವುದು ನಮ್ಮಲ್ಲಿ ಬೇರನ್ನೇ ಬಿಟ್ಟಿಲ್ಲ, ಇನ್ನು ಕಾಂಡ ಕೊಂಬೆ, ಹೆರೆ ಎಲ್ಲ ನಂತರದ ಮಾತಾಯಿತು ಎಂಬುದಕ್ಕೆ ನಿನ್ನೆಯ ವಿಧಾನಸಭಾ ಅಧಿವೇಶನದಲ್ಲಿ ನಡೆದ ಸಭಾಪತಿ ಮತ್ತು ಮಾಜಿ ಸಭಾಪತಿಗಳ ಮಾತುಕತೆ ಸಾಕ್ಷಿಯಾಗಿದೆ. ಸದನದ ನಡುವಳಿಕೆಗೆ ಸಂಬಂಧಿಸಿದಂತೆ, “ರೇಪ್ ಅನಿವಾರ್ಯವಾದರೆ ಮಲಗಿ ಆನಂದಿಸಿ ” ಎಂಬ ಮಾತನ್ನು ಮಾಜಿ ಸಭಾಪತಿಗಳು ಸದನದಲ್ಲಿ ನಾಚಿಕೆಗೆಟ್ಟು ಆಡಿದರೆ ಹಾಲಿ ಸಭಾಪತಿಗಳು ಆನಂದತುಂದಿಲರಾಗಿ ಅದನ್ನು ಹೌದು ಹೌದು ಹಾಗೆ ಮಾಡುವೆ ಎಂದು ಒಪ್ಪಿಗೆಯ ಠಸ್ಸೆ ಒತ್ತುತ್ತಾರೆ… ಅದೂ ಸದನದಲ್ಲಿ. ಇಬ್ಬರಿಗೂ ತಾವು ಹೀನಾಯವಾದ, ವಿಕೃತ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತಿದ್ದೇವೆ ಎಂಬ ಅಂಶ ಲವಲೇಶವು ಭಾದಿಸುವುದಿಲ್ಲ ಎಂದರೆ ಅದಕ್ಕೆ ಏನು ಹೇಳಬೇಕು.
ಅತ್ಯಾಚಾರ ಹೆಣ್ಣುಮಕ್ಕಳ ಮೇಲಾಗುವ ಅತಿ ಹೀನಾಯ ಕೃತ್ಯ. ಗಂಡಸರು ಅದರ ಬಗೆಗೆ ಜೋಕ್ ಕೂಡಾ ಮಾಡಬಲ್ಲರು ಏಕೆಂದರೆ ಅವರಿಗೆ ಅದರ ಅನುಭವ ಇರಲಿ. ಅದರ ಭಯಾನುಕತೆಯನ್ನು ಕಲ್ಪಿಸಿಕೊಂಡು ಕೂಡಾ ಇರುವುದಿಲ್ಲ. ಆದ್ದರಿಂದಲೇ ಅವರು ಸರಳವಾಗಿ ಮತ್ತು ಸುಂದರವಾಗಿ ಅದನ್ನು ಅನುಭವಿಸಿ ಎಂದು ಜೋಕ್ ಕಟ್ಟಿ ನಗಬಲ್ಲರು, ಇಂತದೊಂದು ಕ್ಲೀಷೆಯ ಗಾದೆಯನ್ನು ಕಟ್ಟಬಲ್ಲರು. ಅದನ್ನು ಸದನವೆಂಬುದು ಸಾರ್ವಜನಿಕ ಸ್ಥಳ ಎಂದು ನೋಡದೇ ಆಡಿ ನಗಬಲ್ಲರು. ತಾವು ಕುಳಿತ ಘನವಾದ ಸ್ಥಾನಕ್ಕೆ ಇಂತ ಮಾತು ಯಾವುದೇ ರೀತಿಯಲ್ಲೂ ಸಮಂಜಸ ಅಲ್ಲ ಎಂಬುದರ ಅರಿವಿದ್ದರೂ, ಅಂತದನ್ನು ಆಡಬಲ್ಲರು, ಆಡಿ ಅರಗಿಸಿಕೊಂಡು ಏನೂ ಆಗಿಲ್ಲ ಎಂಬಂತೆ ಆಡುತ್ತಲೇ ಹೋಗಬಲ್ಲರು.
ಏಕೆಂದರೆ ಇಲ್ಲಿ ಅತ್ಯಾಚಾರ ಎಂಬುದು ಹೆಣ್ಣಿನ ಮಾನಸಿಕ ಮತ್ತು ದೈಹಿಕ ಸ್ಥಿತಿಯ ಮೇಲೆ ಮಾಡುವ ಪರಿಣಾಮಗಳ ಘೋರತೆಯ ಅರಿವು ಗಂಡಸರಿಗಿಲ್ಲ. ಜೊತೆಗೆ ಇವತ್ತಿಗೂ ಗಂಡಸ್ತನ ಎಂಬುದು ಇಲ್ಲಿ ಹೆಚ್ಚುಗಾರಿಕೆಯಾಗಿಯೇ ಬಿಂಬಿತವಾಗಿದೆ. ಆದ್ದರಿಂದ ಗಂಡಸ್ತನದ ಶಕ್ತಿ ಪ್ರದರ್ಶನದಲ್ಲಿ ಅತ್ಯಾಚಾರದಂತಹ ವಿಕೃತ ಕ್ರಿಯೆಗಳು ಕೂಡಾ ಅವರಲ್ಲಿ ನಾಚಿಕೆ, ತಳಮಳ ಹುಟ್ಟಿಸುವುದೆ ಇಲ್ಲ…
ಇತ್ತೀಚೆಗೆ ನಡೆದ ಚಲನಚಿತ್ರೋತ್ಸವವೊಂದರಲ್ಲಿ ನಾನೊಂದು ಸಿನಿಮಾ ನೋಡಿದೆ; ಟುನೀಷಿಯ ದೇಶದ ಅರೇಬಿಕ್ ಭಾಷೆಯ ‘ಬ್ಯೂಟಿ ಅಂಡ್ ದಿ ಡಾಗ್ಸ್’ ಎಂಬ ಹೆಸರಿನ ಚಲನಚಿತ್ರವದು. ಅದರ ನಿರ್ದೇಶಕಿ ಕೌಥರ್ ಬೆನ್ ಹನಿಯ ಎಂಬ ಹೆಣ್ಣುಮಗಳು. ಅತ್ಯಾಚಾರಕ್ಕೀಡಾದ ಹೆಣ್ಣುಮಗಳು ತನ್ನ ಮೇಲಾದ ಹೇಯಕೃತ್ಯಕ್ಕೆ ಕಾರಣರಾದ ಆರೋಪಿಗಳ ಮೇಲೆ ಅಪರಾಧ ಪ್ರಕರಣ ದಾಖಲಿಸಲು ಹೊರಟಾಗ ವ್ಯವಸ್ಥೆ ಅವಳ ಮೇಲೆ ಹಲ್ಲೆ ಮಾಡುತ್ತದೆ, ಅವಮಾನ ಮಾಡುತ್ತದೆ, ಹಗೆತನ ಸಾಧಿಸುತ್ತದೆ. ಹೀಗೆ ಮತ್ತೆಮತ್ತೆ ಅತ್ಯಾಚಾರ ಎಸಗುತ್ತದೆ. ಈ ಸಿನಿಮಾ ನೋಡಿದ ಅಲ್ಲಿದ್ದ ಎಲ್ಲ ಪ್ರೇಕ್ಷಕರ ಕಣ್ಣಲ್ಲಿ ನೀರಿತ್ತು. ಮತ್ತು ಎಲ್ಲರೂ ಹೇಳಿದ್ದು ದೇಶ, ಕಾಲ ಎಲ್ಲವನ್ನು ಮೀರಿ ಎಲ್ಲೆಡೆಯು ಅತ್ಯಾಚಾರಕ್ಕೊಳಗಾದ ಮತ್ತು ಅದನ್ನು ಪ್ರತಿರೋಧಿಸಲು ಹೊರಡುವ ಹೆಣ್ಣಿನ ಸ್ಥಿತಿ ಹೀಗೆ ಇರುತ್ತದೆ. ಅದಕ್ಕೆ ಕಾರಣ ಲಿಂಗಸೂಕ್ಷ್ಮತೆಯಂತ ವಿಷಯಗಳ ಕುರಿತು ಅಜ್ಞಾನ, ಅನಾದರ ಮತ್ತು ಗಂಡಸ್ತನದಂತ ವಿಷಯಗಳ ಕುರಿತು ಇಲ್ಲಿರುವ ಅತಿರೇಕದ ಕಲ್ಪನೆಗಳು. ಅದಕ್ಕೆ ‘ಒಮ್ಮೆ ಒಡಲುಗೊಂಡು ನೋಡ’ ಎಂಬ ದೇವರದಾಸಿಮಯ್ಯನ ಸಾಲನ್ನು ಉಲ್ಲೇಖಿಸಿ ಮಾನ್ಯ ಸಭಾಪತಿಗಳು ಮತ್ತು ಮಾಜಿ ಸಭಾಪತಿಗಳಲ್ಲಿ ಸವಿನಯ ವಿನಂತಿ ಅವರುಗಳು ಒಮ್ಮೆ ಸ್ವತಃ ಹೆಣ್ಣಿನ ಒಡಲುಗೊಂಡು ಹೆಣ್ತನವನ್ನು ಅನುಭವಿಸಲಿ ನಂತರ ಅತ್ಯಚಾರವನ್ನು ಆನಂದವಾಗಿ ಮಾರ್ಪಡಿಸಿಕೊಂಡು ಅನುಭವಿಸುವ ಕ್ರಿಯೆಯ ಬಗೆಗೆ ಮಾತನ್ನಾಡಲಿ….
ಹೆಣ್ಣಿನ ಒಡಲು ಮತ್ತು ಮನಸು ಅವರಿಗೆ ಹೇಳಿಕೊಡುವ ಆನಂದದ ಪಾಠಗಳೇ ಬೇರೆ ಇರುತ್ತವೆ. ಅವು ಲಿಂಗಸೂಕ್ಷ್ಮತೆಯಿಂದ ಖಂಡಿತಾ ಕೂಡಿರುತ್ತವೆ.
ಇದನ್ನೂ ಓದಿ : Tirath Singh Rawat Controversy ; ತೀರಥ್ ಸಿಂಗ್ ಅವರಿಗೊಂದು ಪತ್ರ : ಏಕಾಂತವಾಸದಲ್ಲಿ ಮನಸ್ಸಿನ ಕೊಳೆಯನ್ನು ತೊಳೆದುಕೊಳ್ಳಿ ಸರ್