ಜನಪ್ರತಿನಿಧಿಗಳೇ ಎಚ್ಚರವಿರಲಿ : ‘ಯಾವ ದೈಹಿಕ ದೌರ್ಜನ್ಯವೂ ಆಕೆಯೊಳಗಿನ ‘ತನ್ನತನ’ವನ್ನು ಕಸಿಯಲಾರದು

ಜನಪ್ರತಿನಿಧಿಗಳೇ ಎಚ್ಚರವಿರಲಿ : ‘ಯಾವ ದೈಹಿಕ ದೌರ್ಜನ್ಯವೂ ಆಕೆಯೊಳಗಿನ ‘ತನ್ನತನ’ವನ್ನು ಕಸಿಯಲಾರದು
ಲೇಖಕಿ ರಮ್ಯಾ ಶ್ರೀಹರಿ

Shameless Politicians : ‘ಹೆಣ್ಣು, ಗಂಡು, ಲೈಂಗಿಕತೆ, ದೇಹ, ದೇಶ, ಭಾಷೆ, ಸಂಸ್ಕೃತಿ, ಇತಿಹಾಸ ಎಲ್ಲವುಗಳಿಗೆ ತಮ್ಮ ಅನುಕೂಲಕರವಾದ ಅರ್ಥ ಕಲ್ಪಿಸುವ ಅವರ ಕುಯುಕ್ತಿಗೆ, ಲೇವಡಿಗೆ ಬಲಿಯಾಗದೆ ಅವರ ಬಾಲಿಶ, ಬುದ್ಧಿಹೀನ ಮಾತುಗಳನ್ನು ಖಂಡಿಸುತ್ತಲೇ ನಮ್ಮ ಭಾಷೆಯನ್ನು ಸಂಯಮಭರಿತ, ಸಂವೇದನಾಶೀಲವಾಗಿ ಉಳಿಸಿ ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬೇಕು. ಇದೇ, ಅವರಿಗೆ ಮತ್ತು ಅವರ ಮಾತುಗಳಿಗೆ ನಾವು ಕೊಡಬಹುದಾದ ಪ್ರತಿಕ್ರಿಯೆ.’ ರಮ್ಯಾ ಶ್ರೀಹರಿ

ಶ್ರೀದೇವಿ ಕಳಸದ | Shridevi Kalasad

|

Dec 17, 2021 | 2:24 PM

Rape : ನಿನ್ನೆ ವಿಧಾನಸಭೆಯ ಅಧಿವೇಶನ ನಡೆಯುವ ಸಂದರ್ಭದಲ್ಲಿ ಮಾಜಿ ಸಭಾಧ್ಯಕ್ಷ ಹಾಗೂ ಹಾಲೀ ಕಾಂಗ್ರೆಸ್​ ಮುಖಂಡ ಕೆ.ಆರ್​. ರಮೇಶ್​ ಕುಮಾರ್​ ಅತ್ಯಾಚಾರದ ಬಗ್ಗೆ ಆಡಿದ ಮಾತು ದೇಶಾದ್ಯಂತ ಚರ್ಚೆ ಆಗುತ್ತಿದೆ. ಹಾಲೀ ಸಭಾಧ್ಯಕ್ಷ, ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡುತ್ತ, ಸದನ ನಡೆಸಲು ಆಗುವ ತೊಂದರೆ ವಿವರಿಸುತ್ತ, ‘ಎಲ್ಲರೂ ಮಾತನಾಡಬೇಕು, ಎಲ್ಲ ವಿಷಯ ಚರ್ಚೆ ಆಗಬೇಕು ಎನ್ನುತ್ತಾರೆ, ಈಗ ನಾನು ಯಾವ ಹಂತ ತಲುಪಿದ್ದೇನೆ ಎಂದರೆ- Let us enjoy the situation’ ಎಂದರು. ಆಗ ಎದ್ದುನಿಂತು ಮಾತನಾಡಿದ ರಮೇಶ್​ ಕುಮಾರ್​, ‘There is a saying. If rape is inevitable. Women should lie down and enjoy the rape’ ಎಂದು ಹೇಳದರು. ಆಗ ಪೀಠದಲ್ಲಿ ಕುಳಿತಿದ್ದ ಕಾಗೇರಿ ಅವರು ನಕ್ಕು ಸುಮ್ಮನಾದರು. ಇಂದು ಕ್ಷಮೆ ಯಾಚಿಸಿ ಈ ಅಧ್ಯಾಯಕ್ಕೆ ಕೊನೆ ಹಾಡೋಣ ಎಂದು ವಿನಂತಿಸಿದರು. ಆದರೆ, ಇದನ್ನು ಇಷ್ಟಕ್ಕೆ ಬಿಟ್ಟುಬಿಡಬೇಕೆ? ಮಹಿಳೆಯರ ಬಗ್ಗೆ ಇಂತಹ ಮನಃಸ್ಥಿತಿ ಹೊಂದಿದವರು ನಮ್ಮನ್ನು ಪ್ರತಿನಿಧಿಸಬೇಕೆ? ಇಂಥ ಮನಃಸ್ಥಿತಿಗಳ ಬದಲಾವಣೆ ಹೇಗೆ? ಇದು ಚರ್ಚಿಸಲೇಬೇಕಾದ ವಿಷಯ. 

ಟಿವಿ9 ಕನ್ನಡ ಡಿಜಿಟಲ್ ಈ ಹಿನ್ನೆಲೆಯಲ್ಲಿ ‘ಜನಪ್ರತಿನಿಧಿಗಳೇ ಎಚ್ಚರವಿರಲಿ’ ಹೊಸ ಸರಣಿಯನ್ನು ಪ್ರಾರಂಭಿಸಿದೆ. ನಿಮ್ಮ ಪ್ರತಿಕ್ರಿಯಾತ್ಮಕ ಬರಹಗಳನ್ನು ಸುಮಾರು 300 ಪದಗಳಲ್ಲಿ ಕಳಿಸಬಹುದು. ಜೊತೆಗೊಂದು ಭಾವಚಿತ್ರವಿರಲಿ. tv9kannadadigital@gmail.com

*

ಬೆಂಗಳೂರಿನಲ್ಲಿ ವಾಸಿಸುತ್ತಿರುವ ಲೇಖಕಿ ರಮ್ಯಾ ಶ್ರೀಹರಿ ಅವರ ಪ್ರತಿಕ್ರಿಯೆ.

*

ಲೈಂಗಿಕ ದೌರ್ಜನ್ಯಗಳಾದಾಗ ನಾವು ಪಿತೃಪ್ರಧಾನ ವ್ಯವಸ್ಥೆ, ಗಂಡುಮಕ್ಕಳನ್ನು ಬೆಳೆಸುವ ರೀತಿ, ಹೆಣ್ಣಿನ ಸ್ವಾತಂತ್ರ್ಯ, ಹೆಣ್ಣನ್ನು ಭೋಗವಸ್ತುವಿನಂತೆ ನೋಡುವುದು, ಮಹಿಳೆಯ ಸುರಕ್ಷತೆ ಎಲ್ಲದರ ಬಗ್ಗೆ ಮಾತನಾಡುತ್ತೇವೆ .ಈ ಮಾತುಕತೆಗಳಲ್ಲಿ ಎಂತಹ ಭಾಷೆ ಬಳಸುತ್ತಿದ್ದೇವೆ ಎನ್ನುವುದರ ಬಗ್ಗೆ ಸಾಕಷ್ಟು ಗಮನ ಕೊಟ್ಟಿದ್ದೇವೆಯೇ? ಹಿಂದೆಲ್ಲ ಸಿನೆಮಾಗಳಲ್ಲಿ, ಮಾಧ್ಯಮಗಳಲ್ಲಿ ‘ಮಾನಭಂಗ’, ‘ಶೀಲಹರಣ’ ಇಂಥವೇ ಪದಗಳನ್ನು ಉಪಯೋಗಿಸುತ್ತಿದ್ದರು. ಈಗಲೂ ‘ಅತ್ಯಾಚಾರ’, ‘ರೇಪ್’ ಎನ್ನುವ ಪದಗಳಿಗೆ ರೋಚಕತೆಯನ್ನು ಲೇಪಿಸುತ್ತಲೇ ಮಾತನಾಡುತ್ತವೆ ಕೆಲವು ಅಸೂಕ್ಷ್ಮ ಮನಸ್ಸುಗಳು.

ಲೈಂಗಿಕ ದೌರ್ಜನ್ಯಕ್ಕೆ ಹೆಣ್ಣು, ಗಂಡು, ತೃತೀಯಲಿಂಗಿಗಳು ಎಲ್ಲರೂ ಒಳಗಾಗಬಹುದಾಗಿದ್ದರೂ, ಲೈಂಗಿಕ ದೌರ್ಜನ್ಯ ಎನ್ನುವುದು ಗಂಡುಹೆಣ್ಣಿನಿಂದ ಯಾವುದೋ ಪಾವಿತ್ರ್ಯವನ್ನು ಶಾಶ್ವತವಾಗಿ ಕಿತ್ತುಕೊಂಡು ಬಿಡುವ ಕ್ರಿಯೆ ಎನ್ನುವಂತೆ ಮಾತನಾಡುವುದು ಕೇವಲ ರೂಢಿಯ ವಿಷಯವಲ್ಲ. ಅದರ ಹಿಂದೆ ರಾಜಕೀಯವಿದೆ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಲೈಂಗಿಕತೆ ಮತ್ತು ಭಾಷೆ ಎರಡೂ ರಾಜಕೀಯವೇ, ಎರಡೂ ಅಧಿಕಾರದ ಸುತ್ತಲೇ ತನ್ನನ್ನು ತಾನು ಆಯೋಜಿಸಿಕೊಳ್ಳುತ್ತಿರುತ್ತವೆ.

ಮೊದಲನೆಯದಾಗಿ ನಾವು ಲೈಂಗಿಕ ದೌರ್ಜನ್ಯವನ್ನು ಅದೊಂದು ಬಗೆಯ ಲೈಂಗಿಕ ಕ್ರಿಯೆ ಎನ್ನುವ ರೀತಿಯಲ್ಲಿ ಮಾತನಾಡುವುದನ್ನು ಬಿಟ್ಟುಬಿಡಬೇಕು, ಅದೊಂದು ದೌರ್ಜನ್ಯ, ಅಮಾನವೀಯತೆ, ಪೈಶಾಚಿಕತೆ ಎನ್ನುವುದನ್ನು ಮಾತಿನಲ್ಲಿ ಪ್ರಜ್ಞಾಪೂರ್ವಕವಾಗಿ ಅಭಿವ್ಯಕ್ತಿಸಬೇಕು. ಲೈಂಗಿಕತೆಯ ಕುರಿತು ಮಾತನಾಡುವಾಗ ನಾವು ಉಪಯೋಗಿಸುವ ಭಾಷೆ ಬದಲಾಗದೆ ನಮ್ಮ ಧೋರಣೆ ಬದಲಾಗುವುದಿಲ್ಲ. ಭಾಷೆಯನ್ನೇ ರಾಜಕೀಯ ದಾಳವಾಗಿ ಉಪಯೋಗಿಸುತ್ತ ನಮ್ಮ ಅಲೋಚನೆಗಳಲ್ಲಿ ತಮ್ಮ ಅಧಿಕಾರ ಸ್ಥಾಪಿಸಬಯಸುವ ರಾಜಕೀಯ ನಾಯಕರನ್ನು ಎಲ್ಲ ಕಾಲವೂ ಕಂಡಿದೆ. ಹೆಣ್ಣು, ಗಂಡು, ಲೈಂಗಿಕತೆ, ದೇಹ, ದೇಶ, ಭಾಷೆ, ಸಂಸ್ಕೃತಿ, ಇತಿಹಾಸ ಎಲ್ಲವುಗಳಿಗೆ ತಮ್ಮ ಅನುಕೂಲಕರವಾದ ಅರ್ಥ ಕಲ್ಪಿಸುವ ಅವರ ಕುಯುಕ್ತಿಗೆ, ಲೇವಡಿಗೆ ಬಲಿಯಾಗದೆ ಅವರ ಬಾಲಿಶ, ಬುದ್ಧಿಹೀನ ಮಾತುಗಳನ್ನು ಖಂಡಿಸುತ್ತಲೇ ನಮ್ಮ ಭಾಷೆಯನ್ನು ಸಂಯಮಭರಿತ, ಸಂವೇದನಾಶೀಲವಾಗಿ ಉಳಿಸಿ ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬೇಕು. ಇದೇ, ಅವರಿಗೆ ಮತ್ತು ಅವರ ಮಾತುಗಳಿಗೆ ನಾವು ಕೊಡಬಹುದಾದ ಪ್ರತಿಕ್ರಿಯೆ.

ದೇಹ ಹುಟ್ಟಿನಿಂದ ಭೌತಿಕವಾಗಿ ತನ್ನೊಂದಿಗಿದ್ದರೂ ಹೆಣ್ಣು ಅದನ್ನು ತನ್ನದೆಂದು ಗುರುತಿಸಿಕೊಂಡು ದೇಹಪ್ರಜ್ಞೆಯೊಂದನ್ನು ಜಾಗೃತಗೊಳಿಸಿಕೊಳ್ಳುವುದೆಂದರೆ ಅವಳಿಗೆ ಅದೊಂದು ಜೀವಮಾನದ ಸಾಧನೆಯೇ ಸರಿ. ಪ್ರಕೃತಿ, ಸಮಾಜ, ಸಂಪ್ರದಾಯ, ಕುಟುಂಬ, ತಾಯ್ತನ ಏನೆಲ್ಲ ವ್ಯವಸ್ಥೆಗಳನ್ನು ಹಾದುಹೋಗಬೇಕು ಅವಳು ತನ್ನ ದೇಹವನ್ನು ತನ್ನ ಸಹಜ ನೆಲೆಯಾಗಿ ಕಂಡುಕೊಳ್ಳಲು. ಇದೆಲ್ಲದರ ಮೂಲಕ ಅವಳನ್ನು ನಿಜಕ್ಕೂ ನಿಯಂತ್ರಿಸುತ್ತಿರುವ ಅಗೋಚರ ಶಕ್ತಿಯೆಂದರೆ ಅದುವೇ ಅವಳ ದೇಹದ, ಲೈಂಗಿಕ ಅನುಭವಗಳ, ಬಯಕೆಗಳ ಕುರಿತು ಮಾತನಾಡುವಾಗ ಸಮಾಜ ಉಪಯೋಗಿಸುವ ಅವಮಾನಕಾರಿಯಾದ ಅಸೂಕ್ಷ್ಮವಾದ ಭಾಷೆ. ಇಂತಹ ಭಾಷೆಯನ್ನೇ ಅಂತರ್ಗತಗೊಳಿಸಿಕೊಂಡ ಹೆಣ್ಣು ತನಗಾದ ದೌರ್ಜನ್ಯವನ್ನು ಕುರಿತು ತನ್ನೊಳಗೆ ತಾನೇ ಮಾತನಾಡಿಕೊಳ್ಳುವ ಸಂದರ್ಭದಲ್ಲೂ ಉಪಯೋಗಿಸುತ್ತಿದ್ದರೆ ದೌರ್ಜನ್ಯದ ಆಘಾತದಿಂದ ಅವಳು ಹೊರಬರುವುದಾದರೂ ಹೇಗೆ?

ಅವಳು ತನ್ನ ಲೈಂಗಿಕ ಅನುಭವಗಳ ಕುರಿತು ಮಾತನಾಡಿದರೆ ಏನೋ ಅಪಚಾರವಾಗಿಹೋಯ್ತು ಎಂದಾಡುವುದು ಒಂದು ಕಡೆಯಾದರೆ ಅವಳಿಗೆ ಮಾನ, ಮರ್ಯಾದೆ, ಶೀಲ, ನಡತೆ, ಪಾವಿತ್ರ್ಯತೆಯ ಸಂಕೋಲೆ ತೊಡಿಸಿ ಅವಮಾನದ ಭಯವನ್ನು ಹುಟ್ಟುಹಾಕುವ ಮೂಲಕವೇ ಅವಳ ಸ್ವಾತಂತ್ರ್ಯವನ್ನು ಕಟ್ಟಿಹಾಕುವ ವಿಕೃತಿ ಇನ್ನೊಂದು ಕಡೆ.

ಲೈಂಗಿಕ ದೌರ್ಜನ್ಯಗಳಾದಾಗ ಹೆಣ್ಣಿಗೆ ಮಾನಸಿಕ ಆಘಾತ ಆಗುವುದಂತೂ ನಿಜ, ದೌರ್ಜನ್ಯಕ್ಕೊಳಗಾದ ಹೆಣ್ಣು ತಕ್ಷಣ ಅದರ ಕುರಿತು ಮಾತನಾಡಲಾರಳು. ಕಾರಣ: ಆಘಾತದ ಕುರಿತು ಮಾತನಾಡಲು ಅವಳ ಬಳಿ ಅವಮಾನವನ್ನು ಗೆದ್ದು ಬಂದ ತನ್ನದೇ ಸಶಕ್ತ ಭಾಷೆ, ಪರಿಭಾಷೆ ಇದೆಯೇ? ಅದಕ್ಕೇ ಅವಳಿಗೆ ತನಗಾದ ಅನುಭವಗಳನ್ನು ಬಿಚ್ಚಿಡಲು ‘ಮೀಟೂ’ನಂತಹ ಸಾಮೂಹಿಕ ಬಲ ನೀಡುವ ಅಲೆಯೊಂದು ಬೇಕಾಗಿತ್ತು. ದೌರ್ಜನ್ಯಕ್ಕೆ ಒಳಗಾದ ಎಲ್ಲರೂ ದನಿಗೂಡಿಸಿದಾಗಲಷ್ಟೇ ನಾವೂ ನಮ್ಮ ದನಿಯನ್ನು ಕಂಡುಕೊಳ್ಳಬಲ್ಲೆವು. ಲೈಂಗಿಕ ದೌರ್ಜನ್ಯ ಹೆಣ್ಣಿಗೆ ಆಘಾತಕಾರಿಯೇನೋ ಹೌದು ಆದರೆ ಅದೇನೂ ಮರಣಶಾಸನವಲ್ಲ, ಅದನ್ನು ಮೀರಿ ಬದುಕಿ ತೋರಿಸಬಲ್ಲೆವು ಎನ್ನುವ ಸಂದೇಶವನ್ನು ತೀಕ್ಷ್ಣವಾಗಿಯೇ ಮುಟ್ಟಿಸಬೇಕಿದೆ ಸಮಾಜಕ್ಕೆ.

ಹೌದು, ಅನೇಕ ಬಾರಿ ಲೈಂಗಿಕ ದೌರ್ಜನ್ಯಗಳಾದಾಗ ಹೆಣ್ಣು ಅದನ್ನು ತಡೆಯುವಲ್ಲಿ ವಿಫಲಳಾಗುತ್ತಾಳೆ, ಅದರರ್ಥ ಅವಳು ಏನೂ ಮಾಡಲಾರದೆ ತನ್ನ ಹಣೆಬರಹದಲ್ಲಿ ಬರೆದದ್ದನ್ನು ಒಪ್ಪಿ ಅನುಭವಿಸುತ್ತಾಳೆ ಎಂದಲ್ಲ. ತನ್ನ ದೇಹದ ಮೇಲಾಗುತ್ತಿರುವ ದೌರ್ಜನ್ಯವು ತನ್ನೊಳಗಿನ ಅಮೂಲ್ಯವಾದ ತನ್ನತನವನ್ನು ಕಸಿಯಲಾರದು ಎನ್ನುವ ಅರಿವಿದೆ ಅವಳಿಗೆ. ನಡೆಯುತ್ತಿರುವ ದೌರ್ಜನ್ಯವನ್ನು ನಿಷ್ಕ್ರಿಯತೆಯಿಂದ ಸಹಿಸಿಕೊಂಡು ಅದನ್ನೇ ಸ್ವೀಕರಿಸಿ ಸಂತೋಷಪಡಬೇಕೆಂಬ ಅಸಹ್ಯಕರವಾದ ಮನಸ್ಥಿತಿ ಪ್ರಜೆಗಳ ಹಿತಕ್ಕಾಗಿ ದುಡಿಯುವ ಪ್ರತಿಜ್ಞೆ ಮಾಡಿರುವ ನಾಯಕರಲ್ಲಿರುವುದು ಶೋಚನೀಯವೇ ಸರಿ!

ಇದನ್ನು ಓದಿ : ಜನಪ್ರತಿನಿಧಿಗಳೇ ಎಚ್ಚರವಿರಲಿ : ‘ರಾಜಕಾರಣಿಗಳ ಮನೆಯ ಹೆಣ್ಣುಮಕ್ಕಳೇ, ನಿಮ್ಮವರನ್ನು ಸಾರ್ವಜನಿಕವಾಗಿ ಖಂಡಿಸಿ’

Follow us on

Most Read Stories

Click on your DTH Provider to Add TV9 Kannada