ಜನಪ್ರತಿನಿಧಿಗಳೇ ಎಚ್ಚರವಿರಲಿ : ‘ರಾಜಕಾರಣಿಗಳ ಮನೆಯ ಹೆಣ್ಣುಮಕ್ಕಳೇ, ನಿಮ್ಮವರನ್ನು ಸಾರ್ವಜನಿಕವಾಗಿ ಖಂಡಿಸಿ’

ಜನಪ್ರತಿನಿಧಿಗಳೇ ಎಚ್ಚರವಿರಲಿ : ‘ರಾಜಕಾರಣಿಗಳ ಮನೆಯ ಹೆಣ್ಣುಮಕ್ಕಳೇ, ನಿಮ್ಮವರನ್ನು ಸಾರ್ವಜನಿಕವಾಗಿ ಖಂಡಿಸಿ’
ಲೇಖಕಿ ಜಯಶ್ರೀ ಜಗನ್ನಾಥ

Self Respect : ‘ಹೌದು, ನಾನೊಂದು "ಯುಟೋಪಿಯಾ"ದ ಕಲ್ಪನೆಯಲ್ಲಿದ್ದೇನೆ. ಇದ್ಯಾವುದೂ ನಾನು ಬದುಕಿರುವವರೆಗಂತೂ ಸಾಧ್ಯವಿಲ್ಲ. ಅಲ್ಲಿಯವರೆಗೆ ಸದನದಲ್ಲಿ ಹೊಲಸು ಮಾತನಾಡುವವರೂ ಅದಕ್ಕೆ ಗಹಗಹಿಸಿ ನಗುವವರೂ ಹೆಣ್ಣುಮಕ್ಕಳ ಆತ್ಮಗೌರವದ ಕೆನ್ನೆಗೆ ಬಾರಿಸಿದಂತೆ ನಡೆದುಕೊಂಡು ಏನೂ ಆಗೇ ಇಲ್ಲ ಎನ್ನುವಂತೆ ಮುಂದೆಹೋಗುತ್ತಲೇ ಇರುತ್ತಾರೆ.’ ಜಯಶ್ರೀ ಜಗನ್ನಾಥ

ಶ್ರೀದೇವಿ ಕಳಸದ | Shridevi Kalasad

|

Dec 17, 2021 | 1:41 PM

Rape : ನಿನ್ನೆ ವಿಧಾನಸಭೆಯ ಅಧಿವೇಶನ ನಡೆಯುವ ಸಂದರ್ಭದಲ್ಲಿ ಮಾಜಿ ಸಭಾಧ್ಯಕ್ಷ ಹಾಗೂ ಹಾಲೀ ಕಾಂಗ್ರೆಸ್​ ಮುಖಂಡ ಕೆ.ಆರ್​. ರಮೇಶ್​ ಕುಮಾರ್​ ಅತ್ಯಾಚಾರದ ಬಗ್ಗೆ ಆಡಿದ ಮಾತು ದೇಶಾದ್ಯಂತ ಚರ್ಚೆ ಆಗುತ್ತಿದೆ. ಹಾಲೀ ಸಭಾಧ್ಯಕ್ಷ, ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡುತ್ತ, ಸದನ ನಡೆಸಲು ಆಗುವ ತೊಂದರೆ ವಿವರಿಸುತ್ತ, ‘ಎಲ್ಲರೂ ಮಾತನಾಡಬೇಕು, ಎಲ್ಲ ವಿಷಯ ಚರ್ಚೆ ಆಗಬೇಕು ಎನ್ನುತ್ತಾರೆ, ಈಗ ನಾನು ಯಾವ ಹಂತ ತಲುಪಿದ್ದೇನೆ ಎಂದರೆ- Let us enjoy the situation’ ಎಂದರು. ಆಗ ಎದ್ದುನಿಂತು ಮಾತನಾಡಿದ ರಮೇಶ್​ ಕುಮಾರ್​, ‘There is a saying. If rape is inevitable. Women should lie down and enjoy the rape’ ಎಂದು ಹೇಳದರು. ಆಗ ಪೀಠದಲ್ಲಿ ಕುಳಿತಿದ್ದ ಕಾಗೇರಿ ಅವರು ನಕ್ಕು ಸುಮ್ಮನಾದರು. ಇಂದು ಕ್ಷಮೆ ಯಾಚಿಸಿ ಈ ಅಧ್ಯಾಯಕ್ಕೆ ಕೊನೆ ಹಾಡೋಣ ಎಂದು ವಿನಂತಿಸಿದರು. ಆದರೆ, ಇದನ್ನು ಇಷ್ಟಕ್ಕೆ ಬಿಟ್ಟುಬಿಡಬೇಕೆ? ಮಹಿಳೆಯರ ಬಗ್ಗೆ ಇಂತಹ ಮನಃಸ್ಥಿತಿ ಹೊಂದಿದವರು ನಮ್ಮನ್ನು ಪ್ರತಿನಿಧಿಸಬೇಕೆ? ಇಂಥ ಮನಃಸ್ಥಿತಿಗಳ ಬದಲಾವಣೆ ಹೇಗೆ? ಇದು ಚರ್ಚಿಸಲೇಬೇಕಾದ ವಿಷಯ. 

ಟಿವಿ9 ಕನ್ನಡ ಡಿಜಿಟಲ್ ಈ ಹಿನ್ನೆಲೆಯಲ್ಲಿ ‘ಜನಪ್ರತಿನಿಧಿಗಳೇ ಎಚ್ಚರವಿರಲಿ’ ಹೊಸ ಸರಣಿಯನ್ನು ಪ್ರಾರಂಭಿಸಿದೆ. ನಿಮ್ಮ ಪ್ರತಿಕ್ರಿಯಾತ್ಮಕ ಬರಹಗಳನ್ನು ಸುಮಾರು 300 ಪದಗಳಲ್ಲಿ ಕಳಿಸಬಹುದು. ಜೊತೆಗೊಂದು ಭಾವಚಿತ್ರವಿರಲಿ. tv9kannadadigital@gmail.com

*

ಮೈಸೂರಿನಲ್ಲಿ ವಾಸಿಸುತ್ತಿರುವ ಲೇಖಕಿ ಜಯಶ್ರೀ ಜಗನ್ನಾಥ ಅವರ ಪ್ರತಿಕ್ರಿಯೆ

*

ಎರಡು ವಾರಗಳ ಹಿಂದಷ್ಟೇ ಪಾಂಡಿಚೆರಿಯ ಆದಿಶಕ್ತಿ ತಂಡದವರು ಪ್ರಸ್ತುತಪಡಿಸಿದ “ಭೂಮಿ” ನಾಟಕವನ್ನು ನೋಡಿದೆ. ಆ ನಾಟಕದ ಒಳಗೊಂದು ನಾಟಕದ ತಯ್ಯಾರಿ ನಡೆಯುತ್ತಿರುತ್ತದೆ. ಶುಕ್ರಾಚಾರ್ಯರ ಮಗಳನ್ನು ದೊರೆ ಬಲಾತ್ಕಾರ ಮಾಡುವ ದೃಶ್ಯದ ತಯ್ಯಾರಿಯಲ್ಲಿ, ನಟಿ ಪ್ರತಿಭಟಿಸುತ್ತಾಳೆ. “ಈ ನಾಟಕದಲ್ಲಿಯಾದರೂ ನನ್ನ ದೃಷ್ಟಿಕೋನದಿಂದ ಈ ದೃಶ್ಯವನ್ನು ನಿರೂಪಿಸಲು ಒಂದು ಅವಕಾಶ ಬೇಕು” ಎಂದು ಕೇಳಿಕೊಳ್ಳುತ್ತಾಳೆ. ಆಗಲಿ, ಆ ಬಗೆಯ ನಿರೂಪಣೆಯನ್ನೂ ಮಾಡಿ ನೋಡೋಣ ಅಂತ ನಿರ್ದೇಶಕರಿಂದ ಒಪ್ಪಿಗೆ ದೊರೆತಾಗ, ಬಲಾತ್ಕರಿಸಲು ಬಂದ ದೊರೆ ಪಾತ್ರದ ನಟನನ್ನು ಹಿಗ್ಗಾಮುಗ್ಗಾ ತದಕುತ್ತಾಳೆ.

ಅದೊಂದು ನಾಟಕ. ಅದರೊಳಗೊಂದು ನಾಟಕ. ನಡೆಯುತ್ತಿರುವುದು ಬರಿಯ ಪಾತ್ರಧಾರಣೆಯಷ್ಟೇ. ಆದರೂ ನೋಡುತ್ತಿರುವ ಎಲ್ಲಾ ಪ್ರೇಕ್ಷಕರೂ, ಹೆಚ್ಚಾಗಿ ಮಹಿಳಾ ಪ್ರೇಕ್ಷಕರೂ ಆ ನಟಿ ದೊರೆಯನ್ನು ಬಡಿಯಲು ಪ್ರಾರಂಭಿಸಿದಂತೆ ತಟ್ಟಲು ಪ್ರಾರಂಭಿಸಿದ ಚಪ್ಪಾಳೆಯ ಸದ್ದು ಅವಳು ಆ ಬಲಾತ್ಕಾರಿಯನ್ನು ಹೊಡೆಯುತ್ತಿದ್ದಂತೆ ಮುಗಿಲು ಮುಟ್ಟಿತು. ಅದೇಕೆ ಆ ದೃಶ್ಯವನ್ನು ಅಷ್ಟೊಂದು ಸಭಿಕರು ಸಂಭ್ರಮಿಸಿದರು? ತಮ್ಮ ತಮ್ಮ ಜೀವನದಲ್ಲಿ ಎಲ್ಲಿಯೋ ಒಂದು ಕಡೆ ತಮ್ಮ ಒಪ್ಪಿಗೆಯಿಲ್ಲದೆ ತಮ್ಮನ್ನು ಮುಟ್ಟಿರಬಹುದಾದ ಕೈಗಳು, ತಟ್ಟಿರಬಹುದಾದ ದೇಹದ ಭಾಗಗಳು, ನಾಚಿಕೆ ಹೇಸಿಗೆ ಅವಮಾನಗಳಿಂದ ಮುದುಡಿರಬಹುದಾದ ಅಂಗಾಂಗಗಳು, ಕೇಳಿ ನಡುಗಿದ ಹೇಸಿಗೆಯ ಮಾತುಗಳು, ಲೇವಡಿ ಮಾಡಿ ಅಸಹ್ಯವಾಗಿ ನಕ್ಕ ನಗು, ರೋಸಿರಬಹುದಾದ ಮನಸ್ಸುಗಳು ಇವೆಲ್ಲವುಗಳಿಗೂ ಒಂದು ನ್ಯಾಯ ದೊರೆತಂತಾಗಿ ಯಾವುದೋ ನಾಟಕದ ಯಾವುದೋ ದೃಶ್ಯದಲ್ಲಿ ಹೆಣ್ಣೊಬ್ಬಳು ತನ್ನನ್ನು ಅತಿಕ್ರಮಿಸಲು ಬಂದ ಗಂಡಿಗೆ ಬಾರಿಸುವುದನ್ನು ಆ ಒಂದು ಕ್ಷಣದ ಮಟ್ಟಿಗಾದರೂ ಸಂಭ್ರಮಿಸಿರಬಹುದಲ್ಲವೇ?

ಆ ನಾಟಕದಲ್ಲಿ ನಿರ್ದೇಶಕರು ಆ ನಟಿಗೆ ತಯ್ಯಾರಿಯಲ್ಲಿ ಮಾತ್ರಾ ಆ ರೀತಿಯ ನಿರೂಪಣೆಗೆ ಅವಕಾಶ ನೀಡುತ್ತಾರೆ. ಅದು ಅಸಹಜ ಎಂದು ನಿರಾಕರಿಸಿ ಕಡೆಗೆ ಅತ್ಯಾಚಾರವಾಗುವುದನ್ನೇ ಉಳಿಸಿಕೊಳ್ಳುತ್ತಾರೆ.

ನನಗೆ ನಮ್ಮ ವಿಧಾನಸಭೆಯಲ್ಲಿ ನಡೆದ ಅಸಹ್ಯವಾದ ಘಟನೆಯ ಬಗ್ಗೆ ಪ್ರತಿಕ್ರಿಯಿಸುವುದಕ್ಕೆ ಏನೂ ಉಳಿದಿಲ್ಲ.

ಹಾಗಾದರೆ ಏನು ಮಾಡಬಹುದು? ಬೇಕಾದಷ್ಟು. ಆದರೆ ಯಾರೂ ತಯಾರಿಲ್ಲ. ಪುರುಷರಾಗಲೀ ಮಹಿಳೆಯರಾಗಲೀ ತಯಾರಿಲ್ಲ. ಇವೆಲ್ಲಾ ನಡಯದೇ ಇರುವ ಕನಸುಗಳು. ಆದರೂ ಬರೆಯುತ್ತಿದ್ದೇನೆ.

ಆದರೂ ನನಗನ್ನಿಸಿದ್ದನ್ನು ಹೇಳುತ್ತೇನೆ.

ಮಹಿಳೆಯರೇನು ಮಾಡಬಹುದು?

1. ಹಾಗೆ ಮಾತನಾಡಿದ ಸದನದ ಸದಸ್ಯರ ಕುಟುಂಬದ ಮಹಿಳೆಯರು ಅವರನ್ನು ಸಾರ್ವಜನಿಕವಾಗಿ ಖಂಡಿಸಬೇಕು.

2. ಯಾರೇ ಆಗಲಿ ಅತ್ಯಾಚಾರದ ಬಗ್ಗೆ ಹಗುರವಾಗಿ ಮಾತನಾಡಿದರೆ ಅವರ ಮಕ್ಕಳು ಹೆಂಡತಿ ಅವರನ್ನು ಸಾರ್ವಜನಿಕವಾಗಿ ಖಂಡಿಸಬೇಕು.

3. ಟಿವಿ ಸರಣಿಗಳಲ್ಲಿ ಬರುವ ಪುರುಷಪ್ರಧಾನ ನೀಚವ್ಯಕ್ತಿತ್ವ ಪಾತ್ರಗಳನ್ನು ಗುರುತಿಸಿ ಅದನ್ನು ಮಕ್ಕಳು ನೋಡಿ ಮನಸ್ಸು ಮಾರ್ಪಾಡಾಗದಂತೆ ಕಾಪಾಡಬೇಕು.

4. ಸಾರ್ವಜನಿಕ ಸ್ಥಳಗಳಲ್ಲಿ ಪುರುಷರು ಮಾತುಕತೆಗಳಲ್ಲಿ ಮೇರೆ ಮೀರಿದರೆ ಒಟ್ಟಾಗಿ ಪ್ರತಿಭಟಿಸಿ ಅವರಿಗೆ ಸಾರ್ವಜನಿಕವಾಗಿ ಅವಮಾನ ಮಾಡಬೇಕು.

5. ತಾನು ಪುರುಷರಿಗಿಂತ ಕೀಳಲ್ಲ ಎಂಬುದನ್ನು ಆಂತರ್ಯದಲ್ಲಿ ಮಹಿಳೆಯು ನಂಬುವಂತಾಗಬೇಕು.

ಪುರುಷರೇನು ಮಾಡಬಹುದು?

1. ಧಾರ್ಮಿಕ ಸಂಘಸಂಸ್ಥೆಗಳನ್ನು ನಡೆಸುವವರು, ಅಲ್ಲಿಯ ಧಾರ್ಮಿಕ ಮುಂದಾಳುಗಳು ಈ ವರ್ತನೆಯನ್ನು ಸಾರ್ವಜನಿಕವಾಗಿ ಖಂಡಿಸಿ ಅಂಥ ಹೊಲಸು ಮಾತನಾಡುವವರಿಗೆ ನಮ್ಮ ಸಂಸ್ಥೆಗಳೊಳಗೆ ಪ್ರವೇಶವನ್ನು ತಾತ್ಕಾಲಿಕವಾಗಿಯಾದರೂ ನಿಷೇಧಿಸಿದ್ದೇವೆ ಎಂದು ಹೇಳುವ ನೈತಿಕ ಸಾಮರ್ಥ್ಯ ಬೇಕು.

2. ಅತ್ಯಾಚಾರದ ಬಗ್ಗೆ ಹಗುರವಾಗಿ ಮಾತನಾಡುವ, ನಗುವ ಯಾರೇ ಆಗಲೀ ಅವರನ್ನು ಸಾರ್ವಜನಿಕವಾಗಿ ಖಂಡಿಸುವ ಮತ್ತು ತಮ್ಮದೇ ಹೆಣ್ಣುಮಕ್ಕಳು ಹೇಸಿಗೆ ಪಡದಂಥ ನಡವಳಿಕೆಯನ್ನು ಆಚರಿಸಲು ಪುರುಷರು ನಿರ್ಧರಿಸಬೇಕು.

3. ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ತೊಂದರೆ ಉಂಟುಮಾಡುವ ಪುರುಷರಿದ್ದರೆ, ಅದು ತಮ್ಮ ಸಮಸ್ಯೆಯಲ್ಲ ಎಂದು ನಿರ್ವಿಕಾರವಾಗಿರದೆ, ಅದಕ್ಕೆ ತಲೆ ಹಾಕಿ ಅಂಥ ಪುರುಷರನ್ನು ಖಂಡಿಸುವ ಮನಸ್ಠೈರ್ಯ ಬೆಳೆಸಿಕೊಳ್ಳಬೇಕು.

ಹೌದು, ನಾನೊಂದು “ಯುಟೋಪಿಯಾ”ದ ಕಲ್ಪನೆಯಲ್ಲಿದ್ದೇನೆ. ಇದ್ಯಾವುದೂ ನಾನು ಬದುಕಿರುವವರೆಗಂತೂ ಸಾಧ್ಯವಿಲ್ಲ. ಅಲ್ಲಿಯವರೆಗೆ ಸದನದಲ್ಲಿ ಹೊಲಸು ಮಾತನಾಡುವವರೂ ಅದಕ್ಕೆ ಗಹಗಹಿಸಿ ನಗುವವರೂ ಹೆಣ್ಣುಮಕ್ಕಳ ಆತ್ಮಗೌರವದ ಕೆನ್ನೆಗೆ ಬಾರಿಸಿದಂತೆ ನಡೆದುಕೊಂಡು ಏನೂ ಆಗೇ ಇಲ್ಲ ಎನ್ನುವಂತೆ ಮುಂದೆಹೋಗುತ್ತಲೇ ಇರುತ್ತಾರೆ.

ಹೆಣ್ಣುಮಕ್ಕಳೇ ನಿಮಗೆ ಈ ರೀತಿಯ ಭವಿಷ್ಯ ಬೇಕೇ? ನಮ್ಮ ಪೀಳಿಗೆಗಿಂತ ಹೆಚ್ಚು ಸುರಕ್ಷಿತವಾದ ವಾತಾವರಣ ಬೇಡವೇ? ಹಾಗಿದ್ದರೆ ಆ ಬದಲಾವಣೆ ನಿಮ್ಮನಿಮ್ಮ ಕುಟುಂಬದಲ್ಲಿಯೇ ಪ್ರಾರಂಭವಾಗಬೇಕು. ಎಲ್ಲಿಯವರೆಗೆ ಅತ್ಯಾಚಾರದ ಬಗ್ಗೆ ಹಗುರವಾಗಿ ಮಾತನಾಡುವ, ನಗುವ ಪುರುಷರ ಸ್ವಂತ ಹೆಣ್ಣು ಮಕ್ಕಳು ಅವರನ್ನು ಸಾರ್ವಜನಿಕವಾಗಿ ದಬಾಯಿಸುವುದಿಲ್ಲವೋ ಅಲ್ಲಿಯವರೆಗೆ ಪುಟಾಣಿ ಹೆಣ್ಣು ಕಂದಮ್ಮಗಳಿಗೂ ಅಪಾಯ ತಪ್ಪಿದ್ದಲ್ಲ.

ಇದನ್ನೂ ಓದಿ : ‘ಜನಪ್ರತಿನಿಧಿಗಳೇ ಎಚ್ಚರವಿರಲಿ’ ; ‘ಒಮ್ಮೆ ಹೆಣ್ತನ ಅನುಭವಿಸಿ, ಆಮೇಲೆ ಅತ್ಯಾಚಾರದ ಆನಂದವನ್ನು ಹಂಚಿಕೊಳ್ಳುವಿರಂತೆ’

Follow us on

Related Stories

Most Read Stories

Click on your DTH Provider to Add TV9 Kannada