ಜನಪ್ರತಿನಿಧಿಗಳೇ ಎಚ್ಚರವಿರಲಿ : ಪಿತೃಪ್ರಧಾನ ಸಂಸ್ಕೃತಿಯ ಕೊಚ್ಚೆಯಲ್ಲಿ ಹುಟ್ಟಿಹರಿದಾಡುತ್ತಿರುವ ಹುಳುಗಳೇ ಅದು ‘ನಾಣ್ಣುಡಿಯಲ್ಲ ಕೀಳುನುಡಿ’

Politicians : ‘ಸದನವೆಂದರೆ ಇವರ ಶಯ್ಯಾಗೃಹವೆಂದುಕೊಂಡಿದ್ದಾರೆ. ಲಜ್ಜೆಯಿಲ್ಲದೇ ಕುಳಿತು ನೀಲಿಚಿತ್ರ ನೋಡುವುದೇನು, ಬಾಯಿಗೆ ಬಂದಹಾಗೆ ಮಹಿಳೆಯರ ಬಗ್ಗೆ ಜೋಕ್ ಮಾಡುವುದೇನು? ಇವರು ಮಾಡಿದ ಹಗರಣಗಳು ಸದ್ದಿಲ್ಲದೇ ಮುಚ್ಚಿಹೋಗುತ್ತವೆ. ಯಾಕೆಂದರೆ ಇವರು ಗಂಡಸರು! ಅಧಿಕಾರದಲ್ಲಿರುವ ಗಂಡಸರು ಸಾಮಾನ್ಯರಲ್ಲ!’ ರೇಣುಕಾ ನಿಡಗುಂದಿ

ಜನಪ್ರತಿನಿಧಿಗಳೇ ಎಚ್ಚರವಿರಲಿ : ಪಿತೃಪ್ರಧಾನ ಸಂಸ್ಕೃತಿಯ ಕೊಚ್ಚೆಯಲ್ಲಿ ಹುಟ್ಟಿಹರಿದಾಡುತ್ತಿರುವ ಹುಳುಗಳೇ ಅದು ‘ನಾಣ್ಣುಡಿಯಲ್ಲ ಕೀಳುನುಡಿ’
ಲೇಖಕಿ ರೇಣುಕಾ ನಿಡಗುಂದಿ
Follow us
ಶ್ರೀದೇವಿ ಕಳಸದ
|

Updated on:Dec 17, 2021 | 3:25 PM

Rape : ನಿನ್ನೆ ವಿಧಾನಸಭೆಯ ಅಧಿವೇಶನ ನಡೆಯುವ ಸಂದರ್ಭದಲ್ಲಿ ಮಾಜಿ ಸಭಾಧ್ಯಕ್ಷ ಹಾಗೂ ಹಾಲೀ ಕಾಂಗ್ರೆಸ್​ ಮುಖಂಡ ಕೆ.ಆರ್​. ರಮೇಶ್​ ಕುಮಾರ್​ ಅತ್ಯಾಚಾರದ ಬಗ್ಗೆ ಆಡಿದ ಮಾತು ದೇಶಾದ್ಯಂತ ಚರ್ಚೆ ಆಗುತ್ತಿದೆ. ಹಾಲೀ ಸಭಾಧ್ಯಕ್ಷ, ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡುತ್ತ, ಸದನ ನಡೆಸಲು ಆಗುವ ತೊಂದರೆ ವಿವರಿಸುತ್ತ, ‘ಎಲ್ಲರೂ ಮಾತನಾಡಬೇಕು, ಎಲ್ಲ ವಿಷಯ ಚರ್ಚೆ ಆಗಬೇಕು ಎನ್ನುತ್ತಾರೆ, ಈಗ ನಾನು ಯಾವ ಹಂತ ತಲುಪಿದ್ದೇನೆ ಎಂದರೆ- Let us enjoy the situation’ ಎಂದರು. ಆಗ ಎದ್ದುನಿಂತು ಮಾತನಾಡಿದ ರಮೇಶ್​ ಕುಮಾರ್​, ‘There is a saying. If rape is inevitable. Women should lie down and enjoy the rape’ ಎಂದು ಹೇಳದರು. ಆಗ ಪೀಠದಲ್ಲಿ ಕುಳಿತಿದ್ದ ಕಾಗೇರಿ ಅವರು ನಕ್ಕು ಸುಮ್ಮನಾದರು. ಇಂದು ಕ್ಷಮೆ ಯಾಚಿಸಿ ಈ ಅಧ್ಯಾಯಕ್ಕೆ ಕೊನೆ ಹಾಡೋಣ ಎಂದು ವಿನಂತಿಸಿದರು. ಆದರೆ, ಇದನ್ನು ಇಷ್ಟಕ್ಕೆ ಬಿಟ್ಟುಬಿಡಬೇಕೆ? ಮಹಿಳೆಯರ ಬಗ್ಗೆ ಇಂತಹ ಮನಃಸ್ಥಿತಿ ಹೊಂದಿದವರು ನಮ್ಮನ್ನು ಪ್ರತಿನಿಧಿಸಬೇಕೆ? ಇಂಥ ಮನಃಸ್ಥಿತಿಗಳ ಬದಲಾವಣೆ ಹೇಗೆ? ಇದು ಚರ್ಚಿಸಲೇಬೇಕಾದ ವಿಷಯ. 

ಟಿವಿ9 ಕನ್ನಡ ಡಿಜಿಟಲ್ ಈ ಹಿನ್ನೆಲೆಯಲ್ಲಿ ‘ಜನಪ್ರತಿನಿಧಿಗಳೇ ಎಚ್ಚರವಿರಲಿ’ ಹೊಸ ಸರಣಿಯನ್ನು ಪ್ರಾರಂಭಿಸಿದೆ. ನಿಮ್ಮ ಪ್ರತಿಕ್ರಿಯಾತ್ಮಕ ಬರಹಗಳನ್ನು ಸುಮಾರು 300 ಪದಗಳಲ್ಲಿ ಕಳಿಸಬಹುದು. ಜೊತೆಗೊಂದು ಭಾವಚಿತ್ರವಿರಲಿ. tv9kannadadigital@gmail.com

*

ದೆಹಲಿಯಲ್ಲಿ ವಾಸಿಸುತ್ತಿರುವ ಲೇಖಕಿ ರೇಣುಕಾ ನಿಡಗುಂದಿ ಅವರ ಪ್ರತಿಕ್ರಿಯೆ.

*

ಸದನದ ಕಲಾಪಗಳು ನೇರ ಪ್ರಸಾರವಾಗುತ್ತಿವೆ, ಮಹಿಳೆಯರಾದಿಯಾಗಿ ನಾಡಿನ ಜನತೆ ಕೇಳಿಸಿಕೊಳ್ಳುತ್ತಿದ್ದಾರೆ ಎಂಬ ಎಚ್ಚರವೂ ಇರದ ನಮ್ಮ ಜನನಾಯಕರು “ರೇಪ್ ಆದಾಗ ತಡೆಯಲು ಸಾಧ್ಯವಾಗದಿದ್ರೆ ಮಲಗಿ ಎಂಜಾಯ್ ಮಾಡಿಬಿಡಬೇಕು” ಎನ್ನುತ್ತಾರಲ್ಲ, ಥೂ… ಮೈಯುರಿಯುತ್ತದೆ ಕೇಳಿಯೇ. ಇವರೆಷ್ಟು ಮರ್ಯಾದಸ್ಥರು, ಸುಸಂಸ್ಕೃತರು ಎಂದು ಇವರ ಕೀಳು ಮಾತುಗಳಿಂದಲೇ ವ್ಯಕ್ತವಾಗುತ್ತದೆ. ಈ ಮಾತನ್ನು ಹೇಳುವಂತೆ ಪ್ರೇರೇಪಿಸಿದ ಸಭಾಪತಿಗಳಿರಲಿ, ಅದನ್ನು ದೊಡ್ಡ ಘನಂದಾರಿ ವ್ಯಾಖ್ಯಾನ ಎನ್ನುವಂತೆ ಉಲ್ಲೇಖಿಸಿದ ಸುರೇಶ್ ಕುಮಾರ್ ಆಗಿರಲಿ ಅಥವಾ ಅಲ್ಲಿ ಕುಳಿತು ಹಲ್ಲು ಕಿಸಿದ ಯಾರೇ ಆಗಲಿ ನಮ್ಮ ಪಿತೃಪ್ರಧಾನ ಸಂಸ್ಕೃತಿಯ ಕೊಚ್ಚೆಯಲ್ಲಿ ಹುಟ್ಟಿಹರಿದಾಡುತ್ತಿರುವ ಹುಳುಗಳೇ ಅವು. ಈ ಕೊಳಕು ಮನಸ್ಥಿತಿಯನ್ನು ತಿದ್ದಲು ಬಹುಶಃ ಪ್ರಳಯವೇ ಆಗಿ ಹೊಸದೊಂದು ಭೂಮಿ ಉದ್ಭವಿಸಿಬರಬೇಕು.

ಇವರು ಇಂಥ ಮಾತುಗಳನ್ನಾಡಿದ್ದು ಇದೇ ಮೊದಲಲ್ಲ, ಈ ಹಿಂದೆಯೂ ಇದೇ ಮಾತನ್ನು ದೊಡ್ಡ ಇಂಗ್ಲೀಷ್ ಪಂಡಿತರಂತೆ ಕೋಟ್ ಮಾಡಿದ್ದು ನೆನಪಿದೆ. ಯಾವುದೇ ಟಿಪ್ಪಣಿಯನ್ನಾಗಲಿ, ನಾಣ್ಣುಡಿಯನ್ನಾಗಲಿ ಉಲ್ಲೇಖಿಸುವಾಗ ಒಂದು ಸೂಕ್ಷ್ಮತೆ ಇರಬೇಕು. ತಾವು ಎಲ್ಲಿದ್ದೇವೆ ಎಂಬ ಎಚ್ಚರವಿರಬೇಕು. ಸದನವೆಂದರೆ ಇವರ ಶಯ್ಯಾಗೃಹವೆಂದುಕೊಂಡಿದ್ದಾರೆ. ಲಜ್ಜೆಯಿಲ್ಲದೇ ಕುಳಿತು ನೀಲಿಚಿತ್ರ ನೋಡುವುದೇನು, ಬಾಯಿಗೆ ಬಂದಹಾಗೆ ಮಹಿಳೆಯರ ಬಗ್ಗೆ ಜೋಕ್ ಮಾಡುವುದೇನು? ಇವರು ಮಾಡಿದ ಹಗರಣಗಳು ಸದ್ದಿಲ್ಲದೇ ಮುಚ್ಚಿಹೋಗುತ್ತವೆ. ಯಾಕೆಂದರೆ ಇವರು ಗಂಡಸರು! ಅಧಿಕಾರದಲ್ಲಿರುವ ಗಂಡಸರು ಸಾಮಾನ್ಯರಲ್ಲ!

ಹೆಣ್ಣುಮಕ್ಕಳ ಸಬಲೀಕರಣ, ಮಹಿಳೆಯರ ಹಕ್ಕುಗಳ ಬಗ್ಗೆ ಭಾಷಣ ಬಿಗಿಯುವ ಇಂಥ ಗಂಡಸರು ವಾಸ್ತವದಲ್ಲಿ ಮಹಿಳೆಯರ ಏಳಿಗೆಗಾಗಿ ಯಾವತ್ತು ಬಯಸಿಲ್ಲ. ಮಹಿಳೆಯರು ಬೇಡುತ್ತಿರುವ ಮೀಸಲಾಯ್ತಿಯನ್ನೂ ಕೊಡುವ ಮನಸ್ಥಿತಿ ಆಡಳಿತದ ಸೂತ್ರ ಹಿಡಿದಿರುವ ಯಾವೊಬ್ಬನಿಗೂ ಇಲ್ಲ. ಎತ್ತುವ ದನಿಯನ್ನು ಹತ್ತಿಕ್ಕುವ ತಂತ್ರಬಲ್ಲರಿವರು. ಇತ್ತೀಚೆಗೆ ನಮಗೆಲ್ಲ ಗೊತ್ತಿರುವಂತೆ “ಬೇಟಿ ಬಚಾವೋ ಬೇಟಿ ಪಡಾವೋ” ಯೋಜನೆಗಾಗಿ ಮೀಸಲಿಟ್ಟಿದ್ದ ಹಣವನ್ನೂ ನುಂಗಿ ನೊಣೆದ ಬಗ್ಗೆ ಸುದ್ದಿಯಾಯಿತು ಆದರೆ ಈ ಎಲ್ಲಿಯೂ ಈ ಬಗ್ಗೆ ಗಟ್ಟಿ ಚರ್ಚೆಯಾಗಲಿಲ್ಲ. ಇದೇ ರೀತಿ ಅತ್ಯಾಚಾರಕ್ಕೊಳಪಟ್ಟ ಸಂತ್ರಸ್ತೆಯರ ಕಲ್ಯಾಣಕ್ಕಾಗಿಯೇ ಮೀಸಲಿರುವ ನಿರ್ಭಯಾ ಫಂಡ್ ಏನಾಗಿದೆ? ಬಳಕೆಯಾಗುತ್ತಿದೆಯೇ? ಇಲ್ಲ ಹೀಗೆಯೇ ನುಂಗಿ ನೊಣೆಯುವವರ ಬಾಯಿಗೆ ಬಿದ್ದಿದೆಯೇ ಎಂದು ತಳಮೂಲದ ತನಿಖೆಯಾಗಬೇಕು, ಆದರೆ ತನಿಖೆಯನ್ನು ಕಾರ್ಯರೂಪಕ್ಕೆ ಇಳಿಸುವವರು ಯಾರು? ಮಹಿಳೆಯರ ಕಲ್ಯಾಣಕ್ಕಾಗಿ ಇರುವ ಎಷ್ಟೋ ಯೋಜನೆಗಳು ಬರಿ ಹೆಸರಲ್ಲಿವೆ, ಯೋಜನೆಗಳ ಲಾಭ/ ಪ್ರಯೋಜನೆಗಳು ಯಾವೊಬ್ಬ ಮಹಿಳೆಯನ್ನೂ ತಲುಪದೇ ಇಲ್ಲವೆಂದರೆ ಅದಕ್ಕೆ ಇಂಥ ಕೀಳು ಮನಸ್ಥಿತಿ, ಮಹಿಳೆಯರ ಬಗ್ಗೆ ಕಿಂಚಿತ್ತೂ ಗೌರವ, ಆಕೆಯೂ ಒಬ್ಬ ಮನುಷ್ಯಳು ಎಂಬುದನ್ನೂ ಸಹ ಗಣನೆಗೆ ತಂದುಕೊಳ್ಳದ ಹೀನ ಮನಸ್ಥಿತಿಯ ಇಂಥ ಗಂಡಸರೇ ತುಂಬಿರುವ ನಮ್ಮ ವ್ಯವಸ್ಥೆಯೇ ಕಾರಣ. ಇದಕ್ಕೆ ಕೆಲವರು ಹೊರತಾಗಿರಬಹುದು, ಒಳ್ಳೆಯ ವಿಚಾರವಂತರೂ ಇರಬಹುದು, ಆದರೆ ಪಕ್ಷಾತೀತವಾಗಿ ಯೋಚಿಸಿದರೆ ಇವತ್ತು ಇಪ್ಪತ್ತೊಂದನೆಯ ಶತಮಾನದ ಉತ್ತರಾರ್ಧದಲ್ಲಿಯೂ ನಾವು ಅಲ್ಲಿಯೇ ಇದ್ದೇವೆ ಪುರುಷಕೇಂದ್ರಿತ ವ್ಯವಸ್ಥೆಯ ಬಲಿಪಶುಗಳಾಗಿ ಬದುಕುತ್ತಿದ್ದೇವೆ.

ಆಡಳಿತಕ್ಕೆ ಬರುವುದೇ ಇವರು ತಮ್ಮ ಹಣಬಲದಿಂದ ಆ ಮೂಲಕವೇ ತಮ್ಮ ತಲೆಮಾರುಗಳು ಕುಳಿತು ಉಣ್ಣುವಷ್ಟು ಗಳಿಸಿ ಮೆರೆಯುವ ಐಷಾರಾಮಿ ಜೀವನಕ್ಕಾಗಿ. ಬಡವರು ಬಡವರಾಗಿಯೇ ಶ್ರೀಮಂತರು ಇನ್ನೂ ಹೆಚ್ಚು ಶ್ರೀಮಂತರಾಗಿಯೇ ಉಳಿಯುತ್ತಾರೆ. ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಪ್ರಧಾನ ಮಂತ್ರಿಯಿಂದ ಹಿಡಿದು ಸಣ್ಣಪುಟ್ಟ ಮಂತ್ರಿಗಳವರೆಗೂ ಇದೇ ರಾಜಕೀಯ ನಡೆಯುತ್ತದೆ. ವಿರಾಟ್ ಕೊಹಲಿಯ ಮೇಲಿನ ಸಿಟ್ಟಿಗೆ ಅವನ ಮಗುವನ್ನು “ರೇಪ್” ಮಾಡ್ತೀವಿ ಎನ್ನುವ ಬೆದರಿಕೆಯೊಡ್ಡುವ ಕ್ರೂರಿಗಳು, ದೀಪಿಕಾ ಪಡುಕೋಣ್ ಜೆಎನ್​ಯೂಗೆ ಹೋದದ್ದಕ್ಕೆ ಎಸಿಡ್ ಎರಚ್ತೀವಿ, ರೇಪ್ ಮಾಡ್ತೀವಿ “ಎನ್ನುವ ಬೆದರಿಕೆಯೊಡ್ಡುವ ಗಂಡಸರಿಗೆ ಇದುವರೆಗೂ ಯಾವ ಶಿಕ್ಷೆಯೂ ಇಲ್ಲ. “ರೇಪ್” ಎಂದರೆ ಏನೆಂದುಕೊಂಡಿದ್ದಾರೆ? ಅದನ್ನು ಎಸಗುವ ವ್ಯಕ್ತಿಯ ವಿಕೃತಿಗೆ ಬಲಿಯಾಗುವ ಹೆಣ್ಣೊಬ್ಬಳ ಘನತೆಯನ್ನು ಎತ್ತಿಹಿಡಿಯಬೇಕಾದಲ್ಲಿ ಇಂಥ ಹಗುರಮಾತುಗಳೇ? ರೇಪ್ ಬಳಿಕ ಹೆಣ್ಣೊಬ್ಬಳ ಬದುಕು ಮಾತ್ರವಲ್ಲ ಅವಳೊಂದಿಗಿನ ಇಡೀ ಕುಟುಂಬದ ನೆಮ್ಮದಿಯೂ ಕೊನೆಗೊಂಡಿರುತ್ತದೆ. ಹೆಣ್ಣುಮಕ್ಕಳಿರಬೇಕಲ್ಲವೇ ಇವರ ಮನೆಗಳಲ್ಲಿ? ಮನುಷ್ಯ ಸಂವೇದನೆಯೂ ಸತ್ತು ಹೋಯಿತೇ? ಇಂಥವರಿಂದ ಯಾವ ಸಾಮಾಜಿಕ ನ್ಯಾಯವನ್ನು ನಾವು ನಿರೀಕ್ಷಿಸಬಹುದು?

ಅತ್ಯಾಚಾರಕ್ಕೊಳಗಾದ ಮಹಿಳೆಯರು ತಮ್ಮ ಮೇಲಾದ ಅತ್ಯಾಚಾರಕ್ಕೆ ತಾವೇ ಕಾರಣರೇನೋ ಎನ್ನುವಂಥ ಅಪರಾಧಿ ಭಾವನೆಯಿಂದ ಅದನ್ನು ವರದಿ ಮಾಡಲು ಇಷ್ಟಪಡುವುಲ್ಲ ಅಥವಾ ಹಿಂಜರಿಯುತ್ತಾರೆ. ಅತ್ಯಾಚಾರಕ್ಕೆ ಅವಳೇ ಸ್ವತಃ ಕಾರಣ ಎನ್ನುವಂತೆ ಅವಳನ್ನು ಈ ಸಮಾಜ ನೋಡುತ್ತದೆ. ಮತ್ತು ವರದಿಯಾದ ಘಟನೆಗಳು ಯಾವ ರೀತಿಯಲ್ಲಿ ಪರ್ಯವಸಾನಗೊಳ್ಳುತ್ತವೆಂಬುದಕ್ಕೆ ಉನ್ನಾವಿನ ಕೇಸುಗಳನ್ನು ನೋಡಬಹುದು. ಇದೇ ಪಿತೃಪ್ರಭುತ್ವದ ದೃಷ್ಟಿಕೋನಗಳು ಸ್ತ್ರೀದ್ವೇಷಪೂರಿತವಾಗಿವೆ ಮತ್ತು ಲಿಂಗ ಅಸಮಾನತೆಯನ್ನು ಪೀಳಿಗೆಯಿಂದ ಪೀಳಿಗೆಗೆ ರವಾನಿಸಲಾಗುತ್ತಿವೆ. ಇದು ಅತ್ಯಾಚಾರದ ವ್ಯಾಪಕ ಸಾಮಾಜಿಕ ಮತ್ತು ಸಾಂಸ್ಥಿಕ ಸ್ವೀಕಾರಕ್ಕೆ ಕಾರಣವಾಗಿದೆಯೆಂಬುದನ್ನು ಅಲ್ಲಗಳೆಯಲಾಗದು. ಹಿಂದೆ ಮುಲಾಯಮ್ ಸಿಂಗ್ ಅವರಂಥ ಹಿರಿಯರೂ “ಲಡಕೇ ಹೈ ಗಲತಿ ಹೋ ಜಾತಿ ಹೈ” ಅಂತ ಅತ್ಯಾಚಾರವೆಂಬುದು ಗಂಡಸು ಹೆಂಗಸಿನ ದೇಹದ ಮೇಲೆ ಸಾಧಿಸುವ ಹಕ್ಕು ಎನ್ನುವಂತೆ ಸಮರ್ಥಿಸಿಕೊಂಡಿದ್ದರು. ಸಮಾಜವೂ ಗಂಡಸಿನ ಎಲ್ಲ ದೌರ್ಜನ್ಯಗಳನ್ನು ಅದು ಹಾಗೆಯೇ ಇರತಕ್ಕದ್ದು ಎನ್ನುವಂತೆ ಸ್ವೀಕರಿಸುತ್ತದೆ ಕೂಡ.

ಹೀಗೆ ಎಲ್ಲೆಂದರಲ್ಲಿ ಬೇಕಾಬಿಟ್ಟಿ ಹೆಣ್ಣಿನ ಬಗ್ಗೆ ಕೀಳಾಗಿ ಮಾತನಾಡಿದವರಿಗೆ ಕಠಿಣ ಶಿಕ್ಷೆವಿಧಿಸುವ ಒಂದು ಕಾನೂನು ಬೇಕಿದೆ ನಮ್ಮ ದೇಶಕ್ಕೆ. ಅಂಥದ್ದೊಂದು ಶಿಕ್ಷೆ ಇದ್ದರೆ ಅದು ಚಾಲ್ತಿಗೆ ಬರಬೇಕು. ಸದನದಲ್ಲಿ ಕೀಳಾಗಿ ಮಾತನಾಡಿದವರನ್ನು ಮೊದಲು ಸ್ಥಾನದಿಂದ ವಜಾಗೊಳಿಸಿ ಸಮಸ್ತ ಮಹಿಳೆಯರ ಕ್ಷಮೆಯಾಚಿಸಬೇಕು. ಕೀಳು ಮಾತು ಜೋಕುಗಳಿಗೆ ಹಲ್ಲು ಕಿರಿದು ಆನಂದಿಸುವ ಈ ಗಂಡಸರಿಗೆ ಅದು “ನಾಣ್ಣುಡಿಯಲ್ಲ , ಕೀಳುನುಡಿ” ಎಂದು ಯಾರಾದರೂ ಹೇಳಿ!

ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು?

ಇದನ್ನೂ ಓದಿ : ಜನಪ್ರತಿನಿಧಿಗಳೇ ಎಚ್ಚರವಿರಲಿ : ‘ಯಾವ ದೈಹಿಕ ದೌರ್ಜನ್ಯವೂ ಆಕೆಯೊಳಗಿನ ‘ತನ್ನತನ’ವನ್ನು ಕಸಿಯಲಾರದು

Published On - 3:23 pm, Fri, 17 December 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ