Savitribai Phule : ಅಚ್ಚಿಗೂ ಮೊದಲು : ಸಂಗೀತಾ ಮುಳೆಯ ‘ಸಾವಿತ್ರಿಬಾಯಿ ಫುಲೆ ಮತ್ತು ನಾನು’ ಕನ್ನಡದ ಓದುಗರಿಗೆ ಇಂದಿನಿಂದ ಲಭ್ಯ

Writer : ‘ಮೊದಲಿಗೆ ಕ್ಷಮೆ ಯಾಚಿಸುತ್ತೇನೆ. ಜಾತಿಯ ಬಗ್ಗೆ ಪುಸ್ತಕ ಬರೆಯುವಾಗ ಲೇಖಕರ ಜಾತಿ ಮುಖ್ಯವಾಗುತ್ತದೆ. ನಾನು ಸವಲತ್ತುಳ್ಳ ಮರಾಠಾ ಜಾತಿಗೆ ಸೇರಿದವಳಾಗಿದ್ದೇನೆ. ಈ ಅರಿವಿಟ್ಟುಕೊಂಡೇ ಈ ಪುಸ್ತಕ ಬರೆದಿದ್ದೇನೆ. ನನ್ನ ದಲಿತ ಸಹೋದರಿಯರಂತೆ ನನಗೆ ಜೀವನಾನುಭವ ಇಲ್ಲದುದ್ದಕ್ಕಾಗಿ ಹಾಗೂ ಅವರ ನಿರೂಪಣೆಯನ್ನು ಹೈಜಾಕ್ ಮಾಡಿದ್ದಕ್ಕಾಗಿ ಮಾತ್ರ ನಾನು ಕ್ಷಮೆ ಯಾಚಿಸುತ್ತೇನೆ.’ ಸಂಗೀತಾ ಮುಳೆ

Savitribai Phule : ಅಚ್ಚಿಗೂ ಮೊದಲು : ಸಂಗೀತಾ ಮುಳೆಯ ‘ಸಾವಿತ್ರಿಬಾಯಿ ಫುಲೆ ಮತ್ತು ನಾನು’ ಕನ್ನಡದ ಓದುಗರಿಗೆ ಇಂದಿನಿಂದ ಲಭ್ಯ
ಲೇಖಕಿ ಸಂಗೀತಾ ಮುಳೆ, ಅನುವಾದಕರಾದ ಕೆಸ್ತಾರ್ ವಿ. ಮೌರ್ಯ, ವಿಕಾಸ್ ಆರ್. ಮೌರ್ಯ
Follow us
|

Updated on:Dec 05, 2021 | 9:16 AM

ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

ಕೃತಿ : ಸಾವಿತ್ರಿಬಾಯಿ ಫುಲೆ ಮತ್ತು ನಾನು ಇಂಗ್ಲಿಷ್ : ಸಂಗೀತಾ ಮುಳೆ ಕನ್ನಡಕ್ಕೆ : ಕೆಸ್ತಾರ್ ವಿ. ಮೌಲ್ಯ, ವಿಕಾಸ್ ಆರ್. ಮೌಲ್ಯ ಪುಟ : 120 ಬೆಲೆ : ರೂ. 120 ಮುಖಪುಟ ವಿನ್ಯಾಸ : ಗಿರೀಶ ತಾಳೀಕಟ್ಟೆ   ಪ್ರಕಾಶನ : ಅಹರ್ನಿಶಿ, ಬೆಂಗಳೂರು

*

ಈ ಕೃತಿಯನ್ನು ಇಂದು ಬೆಳಗ್ಗೆ 10ಕ್ಕೆ ಹಾಸನದ ಸಂಸ್ಕೃತ ಭವನದಲ್ಲಿ ಲೇಖಕಿ ಬಾನು ಮುಷ್ತಾಕ್ ಅವರು ಬಿಡುಗಡೆ ಮಾಡಲಿದ್ಧಾರೆ.

*

ಮೊದಲಿಗೆ ಕ್ಷಮೆ ಯಾಚಿಸುತ್ತೇನೆ. ಜಾತಿಯ ಬಗ್ಗೆ ಪುಸ್ತಕ ಬರೆಯುವಾಗ ಲೇಖಕರ ಜಾತಿ ಮುಖ್ಯವಾಗುತ್ತದೆ. ನಾನು ಸವಲತ್ತುಳ್ಳ ಮರಾಠಾ ಜಾತಿಗೆ ಸೇರಿದವಳಾಗಿದ್ದೇನೆ. ಹೀಗೊಂದು ಸವಲತ್ತುಳ್ಳ ಜಾತಿಯಿಂದ ಬಂದವಳಾಗಿದ್ದೇನೆಂಬ ಅರಿವಿಟ್ಟುಕೊಂಡೇ ಈ ಪುಸ್ತಕವನ್ನು ಬರೆದಿದ್ದೇನೆ. ನನ್ನ ದಲಿತ ಸಹೋದರಿಯರಂತೆ ನನಗೆ ಜೀವನಾನುಭವ ಇಲ್ಲದುದ್ದಕ್ಕಾಗಿ ಹಾಗೂ ಅವರ ನಿರೂಪಣೆಯನ್ನು ಹೈಜಾಕ್ ಮಾಡಿದ್ದಕ್ಕಾಗಿ ಮಾತ್ರ ನಾನು ಕ್ಷಮೆ ಯಾಚಿಸುತ್ತೇನೆ ಸಂಗೀತಾ ಮುಳೆ, ಲೇಖಕರು

ಭಾರತದಲ್ಲಂತೂ ಜಾತಿ, ವರ್ಗ, ಲಿಂಗ ಎಲ್ಲಾ ಕಡೆಯಿಂದಲೂ ಹೆಣ್ಣು ಶೋಷಿತಳೇ ಆಗಿದ್ದಾಳೆ. ದಲಿತೇತರ ಹೆಣ್ಣಿಗೆ ಹೋಲಿಸಿಕೊಂಡರೆ ದಲಿತ ಹೆಣ್ಣಿನದ್ದು ಮತ್ತಷ್ಟು ಶೋಚನೀಯ ಸ್ಥಿತಿಯಾಗಿದೆ.  ‘ಸಾವಿತ್ರಿಬಾಯಿ ಫುಲೆ ಮತ್ತು ನಾನು’ ಪುಸ್ತಕವು ಇಂಥ ದಲಿತ ಹೆಣ್ಣಿನ ಸಂಕಟ, ಸಂಕೋಚ, ಸಂಕಲ್ಪಗಳನ್ನು ಗಟ್ಟಿಯಾಗಿ ಒಳಗೊಂಡಿದೆ. ಮೀಸಲಾತಿ ಪಡೆದ ಮೊದಲ ಪೀಳಿಗೆಯ ದಲಿತ ಹೆಣ್ಣಿನ ಆಕ್ರಂದನ, ಅಸಹಾಯಕತೆ, ಆಕ್ರೋಶದ ದನಿ ನಮ್ಮನ್ನು ಆವರಿಸುತ್ತದೆ. ಶೋಷಣೆಯ ವಿರುದ್ಧ ಮೈಕೊಡವಿ ನಿಲ್ಲುವ ಯುವತಿಯೊಬ್ಬಳ ಬಾಳಲ್ಲಿ ಸಾವಿತ್ರಿಬಾಯಿ ಫುಲೆ ಅದೆಂತಹ ಮಹತ್ವದ ಪಾತ್ರ ವಹಿಸುತ್ತಾರೆ ಎಂಬುದನ್ನು ಸಂಗೀತಾ ಮನಮುಟ್ಟುವಂತೆ ಬರೆದಿದ್ದಾರೆ. ಕೆಸ್ತಾರ್ ವಿ. ಮೌರ್ಯ, ಅನುವಾದಕರು

*

ಮೊದಲನೇ ಸೆಮಿಸ್ಟರ್ ಫಲಿತಾಂಶ ಬಂತು. ನನ್ನ ಪಾಲಿಗೆ ಅದು ಅತ್ಯಂತ ಕೆಟ್ಟ ಫಲಿತಾಂಶವಾಗಿತ್ತು. ಬಹಳ ಹಿಂದೆಯೇ ಮರೆಯಲಾಗದ ಒಂದು ಕೆಟ್ಟ ಕನಸು ಬಿದ್ದಿತ್ತು. ಅದರಲ್ಲಿ ಬಲವಂತವಾಗಿ ನನ್ನ ತಲೆಯನ್ನು ನೀರು ತುಂಬಿರುವ ಬಕೆಟ್ಟಿನಲ್ಲಿ ಮುಳುಗಿಸಲಾಗಿತ್ತು. ಆ ಭಯಾನಕ ಕನಸು ನನಗಿನ್ನೂ ನೆನಪಿದೆ. ಉಸಿರಾಟಕ್ಕೆ ತೊಂದರೆಯಾಗಿ ಕೈ ಕಾಲುಗಳನ್ನು ಬಡೆದ ಹುಚ್ಚುಹುಚ್ಚಿನ ಕನಸದು. ಈಗಲೂ ನನಗೆ ಅದೇ ಅನುಭವವಾಯಿತು ಫಲಿತಾಂಶವನ್ನು ನೋಡಿದ ಕೂಡಲೇ ನೀರಿನಲ್ಲಿ ಮುಳುಗಿದ ಹಾಗಾಯಿತು. ಉಸಿರುಕಟ್ಟಿ ಸಾವನ್ನಪ್ಪಿದಂತಾಯಿತು.

ಎಲ್ಲಾ ವಿಷಯಗಳಲ್ಲೂ ಫೇಲಾಗಿದ್ದೆ. ಈ ಹಿಂದೆ ಯಾವ ವಿಷಯದಲ್ಲಿಯೂ ಫೇಲಾಗದವಳು ಇಂದು ಎಲ್ಲಾ ವಿಷಯಗಳಲ್ಲೂ ಫೇಲಾಗಿದ್ದೆ. ನಾನು ಶಾಲೆ ಮತ್ತು ಕಾಲೇಜುಗಳಲ್ಲಿದ್ದಾಗ ಚೆನ್ನಾಗಿಯೇ ಓದುತ್ತಿದ್ದೆ. ಆದರೆ ಈ ಇಂಜಿನಿಯಂಗ್ ಕೋರ್ಸ್ ಬೇರೊಂದು ರೀತಿಯದ್ದಾಗಿತ್ತು. ಹಲವು ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಪರೀಕ್ಷೆ ಬರೆದಿದ್ದೆ. ತಾತ್ಕಾಲಿಕವಾಗಿ ವಾಡಾದಲ್ಲಿ ವಾಸಿಸುತ್ತಿದ್ದ ಸುನೀತಳನ್ನು ಗಣಿತದ ಸಮಸ್ಯೆಗಳ ಬಗ್ಗೆ ವಿಚಾರಿಸಿದ್ದೆ. ಆದರೆ ಅವಳಿಗೂ ಸಹ ನನ್ನಂತೆಯೇ ಆಗಿತ್ತು. ಅವಳು ಶಿಕ್ಷಕರನ್ನು ಕೇಳಿ ತಿಳಿದು ಮತ್ತೆ ನನಗೆ ಹೇಳಿಕೊಡುವುದಾಗಿ ತಿಳಿಸಿದ್ದಳು. ಆದರೆ ಮತ್ತೆಂದೂ ಅದರ ಬಗ್ಗೆ ನಮ್ಮ ನಡುವೆ ಚರ್ಚೆಗಳಾಗಲಿಲ್ಲ. ಉಪನ್ಯಾಸಕರ ಮತ್ತು ಪ್ರಾಧ್ಯಾಪಕರ ವಿಷಯದಲ್ಲಿಯೂ ಅದೇ ಆಯಿತು. ಅವರು ಯಾವಾಗಲೂ ಕಾರ್ಯನಿರತರಾಗಿರುತ್ತಿದ್ದರು. ಪ್ರತಿಯೊಂದು ಪಾಠ ಮುಗಿದ ನಂತರ ಅವರಿಂದ ನಮಗೆ ಅರ್ಥವಾಗದೆ ಇರುವುದನ್ನು ಕೇಳಿ ತಿಳಿದುಕೊಳ್ಳಲು ಸಮಯವೇ ಸಿಗುತ್ತಿರಲಿಲ್ಲ. ಹಾಗಾಗಿ ಓದು ಹಾಗೆಯೇ ಉಳಿದು ಹೋಯಿತು. ಉತ್ತರವಿಲ್ಲದ ಪ್ರಶ್ನೆಗಳ ಸಂಖ್ಯೆ ಬೆಳೆಯುತ್ತಾ ಹೋಯಿತು.

ಮುಂಬರುವ ಪರೀಕ್ಷೆಯಲ್ಲಿ ನಾನು ಈ ಎಲ್ಲಾ ವಿಷಯಗಳಲ್ಲಿ ಪಾಸಾಗದಿದ್ದರೆ ಮುಂದಿನ ವರ್ಷ ಮನೆಯಲ್ಲಿಯೇ ಕುಳಿತುಬಿಡುವ ಎಲ್ಲಾ ಸಾಧ್ಯತೆಗಳಿತ್ತು. ಇದರರ್ಥ ಇಡೀ ವರ್ಷ ನನ್ನ ಹಳ್ಳಿಯಲ್ಲೆ ಉಳಿಯುವುದು ಹಾಗೂ ಮುಂದಿನ ವರ್ಷ ಹೊಸ ಬ್ಯಾಚಿನ ವಿದ್ಯಾರ್ಥಿಗಳ ಜೊತೆ ಕೂರುವುದು. ಅದರ ಜೊತೆಗೆ ಈಗಾಗಲೇ ಅಂಟಿಸಿದ್ದ ಹಣೆಪಟ್ಟಿಗಳ ಜೊತೆಗೆ ಫೇಲಾದವಳೆಂಬ ಹಣೆಪಟ್ಟಿಯೂ ಸಹ ಸೇರಿಕೊಳ್ಳುತ್ತಿತ್ತು.

ಮತ್ತೆ ಹಳ್ಳಿಗೆ ಹಿಂದಿರುಗುವ ಯಾವುದೇ ಆಲೋಚನೆ ನನ್ನಲ್ಲಿರಲಿಲ್ಲ. ಅದು ನನ್ನಿಂದ ಅಸಾಧ್ಯದ ಮಾತಾಗಿತ್ತು. ಬಹಳ ಹಿಂದೆಯೇ ಅದರ ಬಗ್ಗೆ ಯೋಚಿಸುವುದನ್ನು ಬಿಟ್ಟಿದ್ದೆ. ಫೇಲಾದರೆ ಹಾಸ್ಟೆಲ್‌ನಲ್ಲಿ ಉಳಿಯಲು ಸಾಧ್ಯವಿರಲಿಲ್ಲ. ನಾನು ಪಡೆದಿದ್ದ ಸಾಲದಲ್ಲಿ ಹೆಚ್ಚುವರಿಯಾಗಿ ಒಂದು ವರ್ಷ ಉಳಿಯಲು ಆಗುತ್ತಿರಲಿಲ್ಲ. ಜೊತೆಗೆ ಆ ಸಾಲವನ್ನು ತೀರಿಸಲು ಸಹ ಆಗುವುದಿಲ್ಲ. ಅದು ಬಿಟ್ಟು ಈ ನಗರದಲ್ಲಿ ಉಳಿಯಲು ನನಗೆ ನೆಂಟರಿಷ್ಟರು ಯಾರೂ ಇಲ್ಲ. ಆದ್ದರಿಂದ ನಾನು ಮತ್ತೆ ಫೇಲಾಗಬಾರದಿತ್ತು. ಆದರೆ ಪಾಸಾಗುವುದಾದರೂ ಹೇಗೆ? ವಿಷಯಗಳನ್ನು ಅರ್ಥಮಾಡಿಕೊಳ್ಳಲು ತಿಣುಕಾಡುತ್ತಿದ್ದೆ. ನನಗೆ ಸಹಾಯ ಮಾಡಲು ಹೆತ್ತವರು, ಶಿಕ್ಷಕರು ಅಥವಾ ಸ್ನೇಹಿತರು ಯಾರೂ ಸಹ ಇರಲಿಲ್ಲ.

Acchigoo Modhalu excerpt of Savitribai Phule mattu naanu by Sangeeta Mulay translated by Kestar V Mourya Vikas R Mourya published by Aharnishi

ಸೌಜನ್ಯ : ಅಂತರ್ಜಾಲ

ಕೊನೆಗೆ ನಮ್ಮ ವಿಭಾಗದ ಮುಖ್ಯಸ್ಥರೊಂದಿಗೆ ಮಾತನಾಡಲು ನಿರ್ಧರಿಸಿದೆ. ನನಗೆ ತಿಳಿಯದ ವಿಷಯಗಳಲ್ಲಿ ಸಹಾಯ ಕೇಳಲು ಮುಂದಾದೆ. ಹೀಗೆ ಮಾಡಲು ಇಷ್ಟವಿಲ್ಲದಿದ್ದರೂ ನನ್ನನ್ನು ನಾನು ಈ ದಾರಿಯಲ್ಲಿ ಮುನ್ನಡೆಸಲು ತೀರ್ಮಾನಿಸಿದೆ. ಬೇರೆ ಆಯ್ಕೆಗಳಿರಲಿಲ್ಲ. ಎಲ್ಲಾ ವಿಷಯಗಳಲ್ಲೂ ಪಾಸಾಗಲೇಬೇಕಿತ್ತು ಅಷ್ಟೆ. ಅಂದು ನಮ್ಮ ವಿಭಾಗದ ಮುಖ್ಯಸ್ಥರ ಕೊಠಡಿಯ ಬಾಗಿಲನ್ನು ತಟ್ಟಿದೆ. ‘ವಿದ್ಯಾರ್ಥಿಗಳಿಗಾಗಿ ನಮ್ಮ ಬಾಗಿಲುಗಳು ಸದಾ ಮುಕ್ತವಾಗಿರುತ್ತವೆ’ ಎಂದು ನಮಗೆ ತಿಳಿಸಲಾಗಿತ್ತು. ಪಠ್ಯದ ಕುರಿತ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ವಿದ್ಯಾರ್ಥಿಗಳು ಯಾವುದೇ ಹಿಂಜರಿಕೆ ಇಲ್ಲದೆ ಸ್ವತಂತ್ರವಾಗಿ ಬರಬಹುದೆಂದು ಸಹ ಹೇಳಲಾಗಿತ್ತು. ಆದರೆ ನಾನು ಈ ವಿಷಯದ ಬಗ್ಗೆ ಹೆಚ್ಚು ಗಮನ ಹರಿಸಿರಲಿಲ್ಲ. ಏಕೆಂದರೆ ಅದರ ಅವಶ್ಯಕತೆ ನನಗೆಂದಿಗೂ ಬರುವುದಿಲ್ಲ ಎಂದುಕೊಂಡಿದ್ದೆ. ಯಾವುದನ್ನು ನಾನೆಂದಿಗೂ ಮಾಡುವುದಿಲ್ಲ ಎಂದುಕೊಂಡಿದ್ದೆನೋ ಅದನ್ನೇ ಇಂದು ಮಾಡಿದ್ದೆ. ಹೆಚ್.ಒ.ಡಿ ಅಪ್ಪಣೆ ನೀಡಿದ ದನಿ ಕೇಳಿಸಿತು. ಧನ್ಯವಾದಗಳನ್ನು ಹೇಳುತ್ತಾ ಒಳ ಹೋದೆ. ಮೀಸಲಾತಿಯ ಬಗೆಗಿನ ಮುಳ್ಳಿನಂತಹ ಮಾತುಗಳನ್ನು ಬಿಟ್ಟು ಬೇರೆಲ್ಲವನ್ನೂ ನಿಭಾಯಿಸಬಲ್ಲವಳಾಗಿದ್ದೆ. ಅವರ ನಗು ನನ್ನನ್ನು ಸ್ವಾಗತಿಸಿತು. ನನ್ನ ಕಪ್ಪು ಬಣ್ಣ ಅವರನ್ನು ಕಳೆಗುಂದಿಸಲಿಲ್ಲ. ಒಳ್ಳೆಯದಾಗುತ್ತದೆ ಎಂದುಕೊಂಡೆ.

‘ಹೇಳಿ ಏನಾಗಬೇಕಿತ್ತು?’ ಎಂದು ಕೇಳಿದರು.

‘ಮ್.. ನಾನು ಮೀಸಲಾತಿ ಪಡೆದ ವಿದ್ಯಾರ್ಥಿ’ ಎಂದು ನನ್ನಲ್ಲೇ ಗೊಣಗಿಕೊಂಡು ಸುಮ್ಮನಾದೆ. ಅವರು ನಕ್ಕರು. ಆ ನಗುವಿನಲ್ಲಿ ಉತ್ತೇಜನ ನೀಡುವ ಆಶಯವಿತ್ತು. ಆಮೇಲೆ ನಾನವರತ್ತ ನೋಡದೇ ಮರು ಮಾತಾಡದೇ ನನ್ನ ಜೇಬಿಗೆ ಕೈಹಾಕಿ ಕಾಗದದಲ್ಲಿ ಬರೆದಿದ್ದ ಟಿಪ್ಪಣಿಯನ್ನು ಹೊರ ತೆಗೆದೆ. ನನಗೇನು ಹೇಳಬೇಕೆಂದಿತ್ತೋ ಅದೆಲ್ಲವನ್ನೂ ಅದರಲ್ಲಿ ಬರೆದಿಟ್ಟುಕೊಂಡಿದ್ದೆ. ಇದನ್ನು ಬಿಟ್ಟು ಬೇರೆ ದಾರಿ ಹಿಡಿಯಲು ನನ್ನಿಂದ ಅಸಾಧ್ಯ. ಟಿಪ್ಪಣಿಯನ್ನು ಕೈಯಲ್ಲಿ ಹಿಡಿದು ಅದನ್ನೇ ನೋಡುತ್ತಾ ಮುಂದುವರೆದೆ.

(ಈ ಪುಸ್ತಕದ ಖರೀದಿಗೆ ಸಂಪರ್ಕಿಸಿ : 9449174662)

ಇದನ್ನೂ ಓದಿ : Short Stories : ಅಚ್ಚಿಗೂ ಮೊದಲು : ನಟ ಅನಂತನಾಗ ಅವರಿಂದ ನಾಳೆ ಅನನ್ಯ ತುಷಿರಾ ‘ಅರ್ಧ ನೆನಪು ಅರ್ಧ ಕನಸು’ ಕಥಾ ಸಂಕಲನ ಬಿಡುಗಡೆ

Published On - 9:04 am, Sun, 5 December 21