Art Exhibition : ‘ದಿ ಅನ್‍ರೂಲಿ ಸಿಂಟ್ಯಾಕ್ಸ್’ ರವಿಕುಮಾರ ಕಾಶಿಯವರ ನಗರಾನುಭವದ ಕಲಾತ್ಮಕ ಅನುಸಂಧಾನ ಇಂದಿನಿಂದ ನಿಮಗಾಗಿ
The Unruly Syntax : ‘ನಗರದ ಅನುಭವವೇ ಒಂದು ಕೊಲಾಜ್‌ನಂತಹದ್ದು. ಬಗೆಬಗೆಯ ದನಿಗಳು ಸನಿಹದಲ್ಲಿದ್ದು, ಒಂದೇ ಆವರಣದಲ್ಲಿ ತಾಕಲಾಡುವಾಗ ಹುಟ್ಟುವ ಸಂಘರ್ಷವನ್ನು ಇವು ಪ್ರತಿನಿಧಿಸುತ್ತವೆ. ಕಲಾಕೃತಿಯ ಚೌಕಟ್ಟಿನ ಒಳಗೆ ಅನೇಕ ಬಿಂಬಗಳನ್ನು ಬಳಸಿ ಇಂತಹ ಹೊಯ್ದಾಟದ ಅನುರಣವನ್ನು ನನ್ನ ಕೃತಿಗಳಲ್ಲಿ ಹೊರಡಿಸುವ ಯತ್ನ ಮಾಡಿದ್ದೇನೆ.‘ ರವಿಕುಮಾರ ಕಾಶಿ
Contemparary Art : ‘ಈ ಕೃತಿಗಳಲ್ಲಿ ನನ್ನ ಸಮಯಕ್ಕೆ ನಾನು ಹೇಗೆ ಸಾಕ್ಷಿಯಾಗಬಹುದು ಎಂಬ ಪ್ರಶ್ನೆ ಸದಾ ಹಿನ್ನ್ನೆಲೆಯಲ್ಲಿ ಕೆಲಸ ಮಾಡಿದೆ. ಒಂದು ನಗರಾನುಭವದ ಪದರಗಳನ್ನು ದೃಶ್ಯ ರೂಪದಲ್ಲಿ ಸಂಯೋಜಿಸುವಾಗ, ಅದು ಸೂಚ್ಯವೂ ಆಗಿರಬೇಕು ಮತ್ತು ನನ್ನ ಕಾಲದ ರಾಜಕೀಯ, ಸಾಮಾಜಿಕ, ಆರ್ಥಿಕ ಸಂದರ್ಭ, ಸ್ಥಿತಿಗತಿಗಳ ಎಳೆಗಳ ನಡುವೆಯೇ ಈ ದೃಶ್ಯ ಸಂಸ್ಕೃತಿಯ ವಿವರಗಳು ತಮ್ಮ ಸ್ಥಾನವನ್ನು, ಅರ್ಥವನ್ನು ಕಂಡುಕೊಳ್ಳಬೇಕೆ ಹೊರತು ದ್ವೀಪಗಳ ರೀತಿಯಲ್ಲಿ ಇರಬಾರದು ಎಂಬ ಎಚ್ಚರವಹಿಸಿದ್ದೇನೆ.’ ರವಿಕುಮಾರ ಕಾಶಿ, ಸಮಕಾಲೀನ ಕಲಾವಿದ, ಬರಹಗಾರ, ಶಿಕ್ಷಕ
*
‘ದಿ ಅನ್‍ರೂಲಿ ಸಿಂಟಾಕ್ಸ್’ ಏಕವ್ಯಕ್ತಿ ಚಿತ್ರಪ್ರದರ್ಶನವು ಬೆಂಗಳೂರಿನ ‘ಸುಮುಖ’ ಗ್ಯಾಲರಿಯಲ್ಲಿ ಇಂದು ಆರಂಭವಾಗಿದೆ. ಈ ಪರಿಕಲ್ಪನೆಯ ಹಿಂದಿನ ವಿಚಾರಗಳನ್ನು ರವಿಕುಮಾರ ಹಂಚಿಕೊಂಡಿದ್ದಾರೆ.
*
ನಾನು ಹುಟ್ಟಿ ಬೆಳೆದದ್ದೇ ಬೆಂಗಳೂರು ನಗರದಲ್ಲಿ. ಮಧ್ಯೆ ಸ್ನಾತಕ್ಕೋತ್ತರ ಪದವಿ ಮತ್ತು ಇತರೆ ಅಧ್ಯಯನಗಳಿಗೆ ಹೋಗಿದ್ದೂ ಸಹ ನಗರಗಳಿಗೆ. ಹಾಗಾಗಿ ನಗರದ ಅನುಭವವನ್ನು ಕೃತಿಯಾಗಿಸುವುದು ನನ್ನ ಅನೇಕ ಕೃತಿಗಳಲ್ಲಿ ಕಂಡುಬರುವ ಒಂದು ಎಳೆ. ರಜೆಗೆಂದು ನಗರದಿಂದ ಹೊರಕ್ಕೆ ಕೆಲವಾರು ದಿನ ಹೊರಗೆ ಹೋಗಿ ಮರಳಿ ಬಂದಾಗ ನಗರದ ದೃಶ್ಯ ವಿವರದ ದಟ್ಟಣೆ ತೀವ್ರವಾಗಿ, ಇದು ಚೀರಾಟವೇನೋ ಎಂಬಂತೆ, ಅನುಭವಕ್ಕೆ ಬರುತ್ತದೆ.
ನಾನು ಒಂದು ದಶಕಕ್ಕೂ ಹೆಚ್ಚಿನ ಕಾಲ ಬೆಂಗಳೂರು ನಗರದ ದೃಶ್ಯ ಸಂಸ್ಕೃತಿಯನ್ನು ಛಾಯಾಚಿತ್ರದಲ್ಲಿ ದಾಖಲಿಸುತ್ತಾ ಬಂದಿದ್ದೇನೆ. ಹೀಗೆ ಸೆರೆಹಿಡಿದ ಫ್ಲೆಕ್ಸ್ ಬ್ಯಾನರ್‌ಗಳು, ಪೋಸ್ಟರ್‌ಗಳು, ವಾಹನಗಳ ಮೇಲೆ ಕಂಡುಬರುವ ಚಿತ್ರಗಳು, ಅಂಗಡಿಗಳ ಮೇಲೆ ಕೈಯಿಂದ ಬಿಡಿಸಿದ ಚಿತ್ರಗಳು ಮತ್ತು ಇನ್ನೂ ಅನೇಕ ದೃಶ್ಯ ವಿವರಗಳನ್ನು ಈ ಕೃತಿಗಳಲ್ಲಿ ಅಳವಡಿಸಿಕೊಂಡಿದ್ದೇನೆ. ಆಡಿನ ತಲೆ, ಓಡುತ್ತಿರುವ ಕುದುರೆ, ಕದನಕ್ಕಿಳಿದ ಕೋಣ, ಪುಟ್ಟ ಹಕ್ಕಿಗೂಡು ಅಥವಾ ಭಗತ್ ಸಿಂಗ್, ಆಝಾದ್, ಅಂಬೇಡ್ಕರ್, ವಿವೇಕಾನಂದ, ಸಂಗೊಳ್ಳಿ ರಾಯಣ್ಣರಂತಹ ಐತಿಹಾಸಿಕ ವ್ಯಕ್ತಿಗಳು, ದೇಶ ಪ್ರೇಮದ ರೂಪಗಳು, ಅಥವಾ ನೋ ಪಾರ್ಕಿಂಗ್, ತಂದೆಯ ಕನಸು ಎಂಬ ವಾಕ್ಯಗಳು ಇವನ್ನೆಲ್ಲ ಬಳಸುವಾಗ ಅವುಗಳ ವಾಚ್ಯಾರ್ಥವಷ್ಟೆ ಅಲ್ಲದೆ ವಿಸ್ತರಿಸಿದ ವಲಯದಲ್ಲಿ ಅವು ಸೂಚಿಸುವ ಇನ್ನಿತರ ಅರ್ಥಗಳನ್ನೂ ಸಹ ಗಮನದಲ್ಲಿ ಇಟ್ಟುಕೊಂಡೇ ಕೃತಿ ರಚನೆಯಾಗಿದೆ. ಈ ರೂಪಗಳು ಸಮೂಹದ ಆಸೆ, ಆತಂಕ, ನಿರಾಸೆ, ಅಪೇಕ್ಷೆ ಇವುಗಳ ದೃಶ್ಯ ಸಂಜ್ಞೆಗಳಾಗುತ್ತವೆ. ಬೆಂಗಳೂರಿಗೆ ವಿಶಿಷ್ಟವಾದ ಕನ್ನಡ ಮತ್ತು ಇಂಗ್ಲಿಷ್ ಮಿಶ್ರಣವನ್ನೂ ಇಲ್ಲಿ ಕಾಣಬಹುದು.
ನಗರದ ಅನುಭವವೇ ಒಂದು ಕೊಲಾಜ್‌ನಂತಹದ್ದು. ಬಗೆಬಗೆಯ ದನಿಗಳು ಸನಿಹದಲ್ಲಿದ್ದು, ಒಂದೇ ಅವರಣದಲ್ಲಿ ತಾಕಲಾಡುವಾಗ ಹುಟ್ಟುವ ಸಂಘರ್ಷವನ್ನು ಇವು ಪ್ರತಿನಿಧಿಸುತ್ತವೆ. ಕಲಾಕೃತಿಯ ಚೌಕಟ್ಟಿನ ಒಳಗೆ ಅನೇಕ ಬಿಂಬಗಳನ್ನು ಬಳಸಿ ಇಂತಹ ಹೊಯ್ದಾಟದ ಅನುರಣವನ್ನು ನನ್ನ ಕೃತಿಗಳಲ್ಲಿ ಹೊರಡಿಸುವ ಯತ್ನ ಮಾಡಿದ್ದೇನೆ. ನಗರದ ಹೊರವಲಯದಲ್ಲಿ ಕೈಯಿಂದ ಚಿತ್ರಿಸಿದ ದೊಡ್ಡ ದೊಡ್ಡ ಹೋರ್ಡಿಂಗ್ಗಳು ಸ್ವಲ್ಪ ಕಾಲ ಹಾಗೇ ಬಿಟ್ಟಾಗ ಅದು ನಿಧಾನವಾಗಿ ಬಿಸಿಲಿಗೆ ಝಳಕ್ಕೆ, ವಾತಾವರಣಕ್ಕೆ ನಿಧಾನ ಹಾಳಾಗುವಾಗ ಹಿಂದಿನ ಪದರಗಳಲ್ಲಿ ಇದ್ದ ಯಾವುದೋ ಅಕ್ಷರದ ಭಾಗ, ಇನ್ನಾವುದೋ ರೂಪದ ಒಂದು ತುಣುಕು ಕಾಣುತ್ತದಲ್ಲ ಅಂತಹ ಒಂದು ಸ್ಥಿತಿಯನ್ನು ನಗರದ ದೃಶ್ಯಾನುಭವದ ರೂಪಕವಾಗಿ, ಸಂಯೋಜನೆಯ ತಂತ್ರವಾಗಿ ಬಳಸಿದ್ದೇನೆ.
ಈ ಕೃತಿಗಳಲ್ಲಿ ನನ್ನ ಸಮಯಕ್ಕೆ ನಾನು ಹೇಗೆ ಸಾಕ್ಷಿಯಾಗಬಹುದು ಎಂಬ ಪ್ರಶ್ನೆ ಸದಾ ಹಿನ್ನ್ನೆಲೆಯಲ್ಲಿ ಕೆಲಸ ಮಾಡಿದೆ. ಒಂದು ನಗರಾನುಭವದ ಪದರಗಳನ್ನು ದೃಶ್ಯರೂಪದಲ್ಲಿ ಸಂಯೋಜಿಸುವಾಗ, ಅದು ಸೂಚ್ಯವೂ ಆಗಿರಬೇಕು ಮತ್ತು ನನ್ನ ಕಾಲದ ರಾಜಕೀಯ, ಸಾಮಾಜಿಕ, ಆರ್ಥಿಕ ಸಂದರ್ಭ, ಸ್ಥಿತಿಗತಿಗಳ ಎಳೆಗಳ ನಡುವೆಯೇ ಈ ದೃಶ್ಯ ಸಂಸ್ಕೃತಿಯ ವಿವರಗಳು ತಮ್ಮ ಸ್ಥಾನವನ್ನು, ಅರ್ಥವನ್ನು ಕಂಡುಕೊಳ್ಳಬೇಕೆ ಹೊರತು ದ್ವೀಪಗಳ ರೀತಿಯಲ್ಲಿ ಇರಬಾರದು ಎಂಬ ಎಚ್ಚರ ವಹಿಸಿದ್ದೇನೆ.
(ಜನವರಿ 22ರವರೆಗೆ ನಡೆಯಲಿರುವ ಈ ಪ್ರದರ್ಶನವನ್ನು ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 10.30ರಿಂದ ಸಂಜೆ 6ರ ತನಕ ವೀಕ್ಷಿಸಬಹುದಾಗಿದೆ. ಸ್ಥಳ : ಸುಮುಖ ಗ್ಯಾಲರಿ, 24/10, ಬಿಟಿಎಸ್ ಡಿಪೋ ರಸ್ತೆ, ವಿಲ್ಸನ್ ಗಾರ್ಡನ್, ಬೆಂಗಳೂರು. ದೂರವಾಣಿ – 080 2229 2230)
ರವಿಕುಮಾರ ಕಾಶಿ, ವಿವೇಕ ಶಾನಭಾಗರ ‘ಸಕೀನಾಳ ಮುತ್ತು’ ಕಾದಂಬರಿಯ ಮುಖಪುಟದ ಹಿಂದಿನ ವೃತ್ತಾಂತವನ್ನಿಲ್ಲಿ ಬಿಚ್ಚಿಟ್ಟಿದ್ದಾರೆ : Installation Art : ತೈವಾನ್ಗೆ ಹೊರಡುವ ಮೊದಲೇ ‘ಸಕೀನಾಳ ಮುತ್ತು’ ಮುಖಪುಟದೊಳಗೆ ಈ ಕಲಾಕೃತಿ ಅಡಗಿದ್ದು ಹೇಗೆ?
Published On - 2:17 pm, Sat, 4 December 21