Short Stories : ಅಚ್ಚಿಗೂ ಮೊದಲು : ನಟ ಅನಂತನಾಗ ಅವರಿಂದ ನಾಳೆ ಅನನ್ಯ ತುಷಿರಾ ‘ಅರ್ಧ ನೆನಪು ಅರ್ಧ ಕನಸು’ ಕಥಾ ಸಂಕಲನ ಬಿಡುಗಡೆ

Writing : ‘ನೀನಿಲ್ಲಿ ದಾಟಿಸಿದ್ದು ದಾಟಿಸಲೆತ್ನಿಸಿದ್ದು ಭಾವವನ್ನಷ್ಟೇ, ನಮ್ಮನ್ನು ದಾಟಿಸಿ ನೀನು ಮುಕ್ತವಾಗಲಾರೆ ಎಂಬಂತೆ ಕಥೆ ಮುಗಿಸಿದಾಗಲೊಮ್ಮೆ ಅಂಚಿಗೆ ನಿಂತು ನಕ್ಕಿವೆ. ನಾನೂ ಅಷ್ಟೇ ಪ್ರೀತಿಯಿಂದ ಅವನ್ನು ಎದೆಗಾನಿಸಿಕೊಂಡಿದ್ದೇನೆ. ಅವುಗಳ ಒಡನಾಟದಲ್ಲಿ ನಾನು ನನಗೇ ಮತ್ತಷ್ಟು ನಿಚ್ಚಳವಾಗಿದ್ದೇನೆ.’ ಅನನ್ಯ ತುಷಿರಾ

Short Stories : ಅಚ್ಚಿಗೂ ಮೊದಲು : ನಟ ಅನಂತನಾಗ ಅವರಿಂದ ನಾಳೆ ಅನನ್ಯ ತುಷಿರಾ ‘ಅರ್ಧ ನೆನಪು ಅರ್ಧ ಕನಸು’ ಕಥಾ ಸಂಕಲನ ಬಿಡುಗಡೆ
ಲೇಖಕಿ ಅನನ್ಯತುಷಿರಾ (ಸವಿತಾ ಆರ್. ಇನಾಮದಾರ್)
Follow us
ಶ್ರೀದೇವಿ ಕಳಸದ
|

Updated on:Dec 04, 2021 | 5:54 PM

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

ಕೃತಿ : ಅರ್ಧ ನೆನಪು ಅರ್ಧ ಕನಸು (ಕಥಾ ಸಂಕಲನ) ಲೇಖಕರು : ಅನನ್ಯ ತುಷಿರಾ (ಸವಿತಾ ಆರ್. ಇನಾಮದಾರ) ಪುಟ : 152 ಬೆಲೆ : ರೂ. 150 ಮುಖಪುಟ ವಿನ್ಯಾಸ : ಸುಧಾಕರ ಧರ್ಬೆ  ಪ್ರಕಾಶನ : ಅಂಕಿತ ಪುಸ್ತಕ, ಬೆಂಗಳೂರು

ಅನನ್ಯ ತುಷಿರಾ (ಸವಿತಾ ಆರ್. ಇನಾಮದಾರ್) ಮೂಲತಃ ವಿಜಯಪುರ ಜಿಲ್ಲೆಯ ತಾಳೀಕೋಟೆಯವರು. ಬೆಂಗಳೂರಿನ ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿ ಸಹಾಯಕ ಆಯುಕ್ತರ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಮೊದಲ ಕವನ ಸಂಕಲನ ‘ಅನನ್ಯ ನಿನಾದ’. ಪ್ರಸ್ತುತ ಮೊದಲ ಕಥಾ ಸಂಕಲನವನ್ನು ಹಿರಿಯ ನಟ ಅನಂತನಾಗ ನಾಳೆ (ಡಿ.5) ಬೆಂಗಳೂರಿನ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ವರ್ಲ್ಡ್​ ಕಲ್ಚರ್ ಸಭಾಂಗಣದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.

* ಬದುಕನ್ನು ಅಪಾರವಾಗಿ ಪ್ರೀತಿಸುವ ಕತೆಗಾರ್ತಿ, ತನ್ನ ಬಾಲ್ಯದಿಂದ ಹೆಕ್ಕಿದ ಘಟನೆಗಳನ್ನು ವರ್ತಮಾನದ ಬೆಳಕಿನಲ್ಲಿಟ್ಟು ನೋಡುವುದು ಅವರಿಗೆ ಇಷ್ಟ. ಅವರ ಕತೆಗಳ ಪಾತ್ರಗಳು ಕೂಡ ಅಷ್ಟೇ ವಿಶಿಷ್ಟವಾದವು. ಸುಮ್ಮನೆ ಕತೆ ಹೇಳುತ್ತಾ, ಅದನ್ನು ಓದಿದ ನಂತರ ಆ ಕತೆಗಳು ಒಂದು ಅನುಭವವಾಗಿ ನಮ್ಮೊಳಗೆ ಉಳಿಯಬೇಕು ಎಂದು ಬಯಸುವ ಕತೆಗಾರ್ತಿ ಅನನ್ಯಾ. ಹೀಗಾಗಿ ಅವರು ಕತೆಗಳನ್ನು ಬರೆಯುವಾಗ ಸರಳವಾಗಿ ಹೇಳುತ್ತಾರೆಯೇ ಹೊರತು ತಂತ್ರಗಳ ಭಾರವನ್ನು ಕತೆಯ ಮೇಲೆ ಹೊರಿಸುವುದಿಲ್ಲ. ಯಾವ ಅವಸರವೂ ಇಲ್ಲದೇ, ತನ್ನ ಬಿಡುವಿನ ಅವಧಿಯಲ್ಲಿ ಸಂತೋಷದಿಂದ ಕತೆ ಬರೆಯುವ ಅನನ್ಯಾ ಮುಂದಿನ ಕತೆಗಳಿಗಾಗಿ ಈ ಕತೆಗಳನ್ನು ಓದಿದವರೆಲ್ಲ ಕಾಯುತ್ತಾರೆ ಎಂದು ಹೇಳಬಲ್ಲೆ. ಜೋಗಿ, ಕಥೆಗಾರ, ಪತ್ರಕರ್ತ

ಮಾನವೀಯ ಮಿಡಿತ, ಬದುಕಿನ ನಿಗೂಢತೆ, ಸಮುದಾಯದಲ್ಲಿನ ಮೋಸ-ವಂಚನೆ, ಜಾತಿಪದ್ಧತಿಯ ಕೆಡುಕು, ವಿದೇಶಗಳಲ್ಲಿನ ಮಕ್ಕಳ ನೆನಪಲ್ಲಿ ಅನಾಥರಾಗಿಬಿಟ್ಟ ವೃದ್ಧರ ಸಂಕಟ, ಭಿನ್ನ ಸ್ವಭಾವದ ದಂಪತಿಗಳ ನಡುವಿನ ಬಿರುಕು… ಮೊದಲಾದ ವೈವಿಧ್ಯಪೂರ್ಣ ವಸ್ತುವಿನ ಜತೆಯಲ್ಲೇ ಆಧುನಿಕ ಡಿಜಿಟಲ್ ಬದುಕಿನ ಕೊಡುಗೆಯಾದ ಫೇಸ್‌ಬುಕ್‌ನಿಂದಾಗಿ ಉಂಟಾದ ಆವಾಂತರದ ವಸ್ತುವೂ ಈ ಕಥೆಗಳ ಸೃಷ್ಟಿಗೆ ಕಾರಣವಾಗಿದೆ. ಇದು ಮೊದಲ ಸಂಕಲನ ಎಂಬುದನ್ನು ಮರೆಸುವ ಹಾಗೆ ತಕ್ಕಮಟ್ಟಿಗೆ ಪಳಗಿದ ಕತೆಗಾರ್ತಿಯಂತೆ ಅನನ್ಯಾ ಅವರು ಈ ಕಥೆಗಳನ್ನು ಹೇಳಿದ್ದಾರೆ. ಸುಬ್ರಾಯ ಚೊಕ್ಕಾಡಿ, ಕವಿ, ಲೇಖಕ

ನೀನಿಲ್ಲಿ ದಾಟಿಸಿದ್ದು ದಾಟಿಸಲೆತ್ನಿಸಿದ್ದು ಭಾವವನ್ನಷ್ಟೇ, ನಮ್ಮನ್ನು ದಾಟಿಸಿ ನೀನು ಮುಕ್ತವಾಗಲಾರೆ ಎಂಬಂತೆ ಕಥೆ ಮುಗಿಸಿದಾಗಲೊಮ್ಮೆ ಅಂಚಿಗೆ ನಿಂತು ನಕ್ಕಿವೆ. ನಾನೂ ಅಷ್ಟೇ ಪ್ರೀತಿಯಿಂದ ಅವನ್ನು ಎದೆಗಾನಿಸಿಕೊಂಡಿದ್ದೇನೆ. ಅವುಗಳ ಒಡನಾಟದಲ್ಲಿ ನಾನು ನನಗೇ ಮತ್ತಷ್ಟು ನಿಚ್ಚಳವಾಗಿದ್ದೇನೆ. ಒತ್ತಡದಿಂದ ಕಥೆ ಹೆಣೆಯಲು ಹುಟ್ಟುವ ಕಥೆ ಹೇಗೆ ಭಿನ್ನವಾಗಿರುತ್ತೆ ಅನ್ನುವದನ್ನು ಸ್ವತಃ ಈಗ ನನಗೆ ನಾನೇ ಫೀಲ್ ಮಾಡಬಲ್ಲೆ ಎನ್ನುವ ಮಟ್ಟಿಗೆ. ಹಾಗೊಂದು ಕಥೆ ರೂಪುಗೊಂಡರೆ ನನ್ನಲ್ಲೊಂದು ಮಮತೆ ಹುಟ್ಟುವುದೇ ಇಲ್ಲ ಅನ್ನುವುದನ್ನು ನಾನು ಅನುಭವಿಸಿದ್ದೇನೆ. ಅನನ್ಯ ತುಷಿರಾ, ಲೇಖಕಿ

‘ಮುಳುಗು’ ಕಥೆಯ ಆಯ್ದ ಭಾಗ

ನೀಲ ಬಂದವಳೇ ಅಪ್ಪನ ಮುಖ ನೋಡಿದಳು. ಕಣ್ಣೊಳಗಿನ ಚಿಂತೆ ಕಾಣಿಸಿತವಳಿಗೆ. ಗೌಡರ ಮನೆಯ ಸ್ನೇಹಿತೆ ಜಾನಕಿ ಗದ್ದೆ ಕಡೆ ಸಿಕ್ಕಾಗ ಅಷ್ಟಿಷ್ಟು ವಿಷಯ ಕಿವಿಗೆ ಬಿದ್ದಂತಾಗಿತ್ತು. ಅಪ್ಪಯ್ಯನ ಚಿಂತೆಗೆ ತಾನೇ ಕಾರಣವಾದೆನಲ್ಲ ಎನ್ನಿಸಿತವಳಿಗೆ.

‘ನೀಲೂ, ಮುಖ ತೊಳೆದು ತಟ್ಟೆ ಹಾಕ್ಕೋ. ಹಂಗೆ ಅಪ್ಪಯ್ಯಂಗೂ ಕರಿ ಊಟಕ್ಕೆ’ ಸಾತವ್ವಿ ಕರೆಯುವದಕ್ಕೂ, ಚನ್ನಯ್ಯ ಅಲ್ಲಿಗೆ ಬರುವದಕ್ಕೂ ಸರಿ ಹೋಯಿತು. ಇಬ್ಬರೂ ಅಷ್ಟಿಷ್ಟು ಮಾತನಾಡಿ ಊಟ ಮುಗಿಸಿದ್ದರು. ಚನ್ನಯ್ಯ ಎಂದಿನಂತೆ ಗದ್ದೆ ಹಾದಿ ಹಿಡಿದ.

‘ಅತ್ತೆ, ಅಪ್ಪಯ್ಯನ ಚಿಂತೆಗೆ ನಾನೇ ಕಾರಣವಾದೆ ಅಲ್ಲವಾ?..’ ಎನ್ನುತ್ತಾ ಅಡುಗೆ ಮನೆ ಕಂಬಕ್ಕೊರಗಿ ಕುಳಿತಳು. ನೀಲಳ ಮುಖ ನೋಡಿ ಸಂಕಟ ಬಾಯಿಗೇ ಬಂತು ಸಾತವ್ವಿಗೆ. ರೊಟ್ಟಿಯ ಕೊಣಮಿಗೆ ಎತ್ತಿಟ್ಟು, ಕೈ ಒರೆಸುತ್ತ, ನೀಲಳ ಬಳಿ ಬಂದು, ತಲೆ ನೇವರಿಸಿದಳು.

‘ಅಲ್ಲಾ ಕೂಸೇ, ಎಲ್ಲ ಬಿಟ್ಟು ಅದಕ್ಯಾಕೆ ನೀನು ಕಾರಣ ಆದೀಯ? ವಿಧಿಬರಹ ಏನಿರತ್ತೋ ..ಆ ಮಗಿ ಹಣೆಬರಹ ಆಟೇ ಇತ್ತು..ಹಂಗಾತು..ಓದ್ದೋಳಾಗಿ ನೀ ಹಿಂಗ್ ಮಾತಾಡೋದು ಸರೀನಾ ಹೇಳು. ಸುಮ್ಕೆ ಮನಸೀಗೆ ಏನೇನೋ ಹಚ್ಕೋಬೇಡಾ . ಎಲ್ಲಾ ಒಳ್ಳೇದಕ್ಕೇ ಆಗೋದು. ನಿನ್ ಅಪ್ಪಯ್ಯಗ ಗೊತ್ತಾದ್ರೆ ಮತ್ತೀಟು ಬೇಜಾರಾದಾನು. ನಡಿ ನಡಿ..ಒತ್ತಿನ ಕಡೆ ಹೋಗಿ ಕಮಲವ್ವಗೆ ಸಿಕ್ಕು ಬರುವಾ.. ಹ್ಞಾಂ, ಗ್ಯಾಪ್ಕ ಇರ್ಲಿ, ಅಪ್ಪಯ್ಯನ ಹತ್ರಾ ಏನೂ ಅನಬೇಡಾ..ಮತ್ತೆ ಬೇಜಾರಾಗ್ತಾನೆ..’

ನೀಲಳಿಗೆ ಅತ್ತೆಯ ಮಾತು ಪೂರ್ಣ ಸಮಾಧಾನ ತರಲಿಲ್ಲವಾದರೂ..ತನ್ನನ್ನು ತಾನೇ ಸಮಾಧಾನಿಸಿಕೊಳ್ಳೋ ಪ್ರಯತ್ನ ಮಾಡ್ತಾ ಅತ್ತೆಯ ಜೊತೆ ಒತ್ತಿನ ಕಡೆ ಹೆಜ್ಜೆ ನಡೆದಿದ್ದಳು. ಮಾತಾಡುವ ಮನಸ್ಸು ಇಬ್ಬರಿಗೂ ಇರಲಿಲ್ಲ.

ಬಿ.ಎಸ್ಸಿ. ಮುಗಿಸಿದ ನೀಲ ಮುಂದಿನ ಓದು ಶುರುವಾಗುವವರೆಗೆ ತೋಟದ ಆಚೀಚೆ ಮಕ್ಕಳಿಗೆ ಕೆಲದಿನ ಮನೆಪಾಠ ಮಾಡಿಲು ಯೋಚಿಸಿದ್ದಳು. ತನ್ನ ಓದಿಗಾಗಿ ಅಪ್ಪಯ್ಯ ಅತ್ತೆ ಕಷ್ಟ ಪಡುತ್ತಿರುವುದು ಅವಳಿಗೂ ಗೊತ್ತಿತ್ತು. ಮನೆಪಾಠದಿಂದ ಅಪ್ಪಯ್ಯನಿಗೆ ಆಷ್ಟಿಷ್ಟು ಸಹಾಯವಾಗಬಹುದೆಂದು ಕಷ್ಟಪಟ್ಟು ಮನೆಯಲ್ಲಿ ಒಪ್ಪಿಸಿದ್ದಳು. ಮನಸಿಲ್ಲದಿದ್ದರೂ ಮಗಳಿಗೆ ಇಲ್ಲವೆನ್ನಲಾಗದೇ ಚನ್ನಯ್ಯ ಒಪ್ಪಿಗೆ ನೀಡಿದ್ದ. ಹಾಗೆ ಶುರುವಾಗಿತ್ತು ನೀಲಳ ಮನೆಪಾಠದ ಕೆಲಸ..ಎಲ್ಲರೊಂದಿಗೆ ಬೇಗನೆ ಬೆರೆತು ಹೋಗುವ ನೀಲಳಿಗೆ ಮಕ್ಕಳನ್ನು ಸೆಳೆಯುವದು ಕಷ್ಟವಾಗಲಿಲ್ಲ. ಚೆನ್ನಾಗಿ ಪಾಠವಾಗುತ್ತಿತ್ತಾದ್ದರಿಂದ ತಿಂಗಳುಗಳು ಕಳೆದಂತೆ

ಕ್ರಮೇಣ ಮಕ್ಕಳ ಸಂಖ್ಯೆಯೂ ಹೆಚ್ಚಿತ್ತು. ಚನ್ನಯ್ಯ, ಸಾತವ್ವಿಗೂ ಏನೋ ಹೆಮ್ಮೆ.

Acchigoo Modhalu excerpt of ardha nenapu ardha kanasu by writer ananya tushira published by ankita pustaka

ಅನನ್ಯ ಅವರ ಮೊದಲ ಕವನ ಸಂಕಲನ

ಅಷ್ಟರಲ್ಲೇ ಅವಗಢವಾಗಿತ್ತು. ತೋಪಿನ ಬಸಯ್ಯನ ಮಗಳು ಅವತ್ತು ಬೆಳಿಗ್ಗೆ ಮನೆಪಾಠಕ್ಕೆ ಬರುವಾಗ ಅವ್ವ ಮನೆಲಿಲ್ಲ ಅನ್ನುವ ಕಾರಣಕ್ಕೆ ತನ್ನ ತಮ್ಮ ಶಿವರಾಜನ್ನೂ ತನ್ನೊಂದಿಗೆ ಕರೆತಂದಿದ್ದಳು. ಎಂದಿನಂತೆ ಪಾಠ ಮುಗಿಸಿದ ನೀಲ ಮನೆಗೆಲಸಕ್ಕೆ ಹೊರಡುವ ಮುನ್ನ ಮುಖ ತೊಳೆಯಲು ಹಿತ್ತಲಿಗೆ ಬಂದಿದ್ದಳು. ಇನ್ನೇನು ತಂಬಿಗೆಗೆ ನೀರೆತ್ತಬೇಕು ಎನ್ನುವಷ್ಟರಲ್ಲಿ ಯಾರೋ ಕಿಟಾರನೆ ಕಿರುಚಿದ ಸದ್ದು. ಒಂದೇ ಉಸಿರಿಗೆ ಓಡಿದ್ದಳು. ಅನಾಹುತ ಬಾಯಿ ತೆರೆದಿತ್ತು. ಮನೆಗೆ ಹೊರಟಿದ್ದ ವನಜಳ ತಮ್ಮ ಶಿವು ಕೈ ಕೊಸರಿಕೊಂಡು ಮುಂದೆ ಓಡಿದ್ದ. ಅದೇ ಭರದಲ್ಲಿ ಕೆಳಗೆ ಬಿದ್ದ ಪುಸ್ತಕಗಳನ್ನು ಎತ್ತಲು ವನಜ ಕೆಳಗೆ ಬಗ್ಗಿದ್ದಳು. ಅಷ್ಟರಲ್ಲಿ ಶಿವು ಅಲ್ಲಿಯೇ ತೆರೆದಿದ್ದ ಕೊಳವೆ ಬಾವಿಗೆ ಜಾರಿಬಿದ್ದಿದ್ದ. ವನಜ ನೋಡನೋಡುತ್ತಲೇ ತಮ್ಮ ತಳಸೇರಿದ್ದ. ಅವಳು ಚೀರಿದ ಸದ್ದಿಗೇ ನೀಲ ದೌಡಾಯಿಸಿದ್ದು. ಆಚೀಚೆ ತೋಟದವರೆಲ್ಲ ಜಮಾಯಿಸಿದರು. ಊರೊಳಗೆ ಹೋಗಿದ್ದ ಚನ್ನಯ್ಯ, ಸಾತವ್ವಿ ಸುದ್ದಿ ತಿಳಿದು ಓಡಿಬಂದರು. ಗಂಟೆ ಕಳೆಯುವದರೊಳಗೆ ಟಿ ವಿ ಛಾನೆಲ್ನವರು, ದಿನಪತ್ರಿಕೆ ವರದಿಗಾರರು, ಅಗ್ನಿಶಾಮಕದಳ, ಭೂ ವಿಜ್ಞಾನ ಇಲಾಖೆ, ತಹಸೀಲ್ದಾರ , ಸಿ ಇ ಓ, ಸಚಿವರು..ಹೀಗೆ ಜನರ ದಂಡೇ ಸೇರಿತ್ತು.

ಅದೇಷ್ಟೋ ಆಳ ಕೊರೆದರೂ ನೀರು ಚಿಮ್ಮದ ಕೊಳವೆ ಬಾವಿಯನ್ನು ಚೆನ್ನಯ್ಯ ಕಲ್ಲು ಚಪ್ಪಡಿ ಎಳೆದು ಮುಚ್ಚಿದ್ದ. ಮಾಡಿದ ಸಾಲ ತಲೆ ಮೇಲೇ ಬಂದಿತ್ತು. ಮಳೆಯೂ ಇಲ್ಲದೇ ಬೆಳೆಯೂ ಕೈ ಕೊಟ್ಟಿತ್ತು. ಹಾಗೂ ಹೀಗೂ ಮಾಡಿ, ಎತ್ತುಗಳನ್ನೂ ಬಾಡಿಗೆಗೆ ಬಿಟ್ಟು ಮನೆಖರ್ಚು ನೀಗಿಸುತ್ತ ನಡೆದಿದ್ದ. ಅಪ್ಪನಿಗೆ ಆಸರೆಯಾದೀತೆಂದೇ ನೀಲ ಮನೆಪಾಠ ಶುರು ಮಾಡಿದ್ದಳು‌. ಈಗ ಎರಡೂ ಸಂಗತಿಗಳು ಒಂದಕ್ಕೊಂದು ಬೆರೆತು, ವರ್ತುಲವನ್ನೇ ಸೃಷ್ಟಿ ಮಾಡಿದ್ದವು.

ಈ ಸಂಕಲನದ ಖರೀದಿಗೆ ಸಂಪರ್ಕಿಸಿ : ಅಂಕಿತ ಪುಸ್ತಕ

ಇದನ್ನೂ ಓದಿ : Poetry Collection : ಅಚ್ಚಿಗೂ ಮೊದಲು ; ಕವಿ ಸ್ಮಿತಾ ಮಾಕಳ್ಳಿಯ ‘ಒಂದು ಅಂಕ ಮುಗಿದು’ ನಿಮ್ಮ ಕೈಸೇರಲು ಇನ್ನೊಂದೇ ವಾರ

Published On - 5:31 pm, Sat, 4 December 21

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ