Uttara Karnataka : ‘ನಾವು ಉತ್ತರ ಕರ್ನಾಟಕದ ಮಂದಿ ನಮಗ ಕಾಂಪ್ರೊಮೈಸ್ ಮಾಡ್ಕೊಳ್ಳಲಿಕ್ಕೆ ಬರೂದಿಲ್ಲ’

Amirbai Karnataki : ‘ಯಾಕ ಅಮೀರ್​ಬಾಯಿ ಮುಂಬೈಕಡೆ ಮುಖಾ ಮಾಡಿದ್ರು? ; ಮೈಸೂರು ಕರ್ನಾಟಕದ ಸಿನಿಮಾದ ಕತೀನೇ ಬ್ಯಾರೇ, ಮ್ಯೂಸಿಕ್ಕೇ ಬ್ಯಾರೇ. ಮೈಸೂರು ಕಡೆಯವರು ಇವರಿಗೆ ಅವಕಾಶಾನೂ ಕೊಡಲಿಲ್ಲ. ಇವರೂ ರಿಸ್ಕ್ ತಕ್ಕೊಳ್ಳಿಲ್ಲ. ಅಮೀರಬಾಯಿಯವರನ್ನ ಈ ಮಂದಿ  ಬೆಳಸತಿದ್ದಿಲ್ಲ. ಮೊದಲನೇದು ಮುಸಲರಾಕಿ ಅಂತಿದ್ದರು. ಎರಡ್ನೇದು ನಮ್ಮ ಭಾಷಾ ಬರೂದಿಲ್ಲ ಅಂತಿದ್ದರು. ಮೂರನೇದು ಹಿಂದೂಸ್ತಾನಿ ಗಾಯಕಿ ನಿಮ್ಮದು ಅಂತಿದ್ದರು.’

Uttara Karnataka : ‘ನಾವು ಉತ್ತರ ಕರ್ನಾಟಕದ ಮಂದಿ ನಮಗ ಕಾಂಪ್ರೊಮೈಸ್ ಮಾಡ್ಕೊಳ್ಳಲಿಕ್ಕೆ ಬರೂದಿಲ್ಲ’
ಡಾ ರಹಮತ್ ತರೀಕೆರೆ
Follow us
ಶ್ರೀದೇವಿ ಕಳಸದ
|

Updated on:Dec 04, 2021 | 10:07 AM

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com 

*

ಹಿರಿಯ ಲೇಖಕ ಡಾ. ರಹಮತ್ ತರೀಕೆರೆ ಅವರು ಬರೆದ ‘ಅಮೀರ್​ಬಾಯಿ ಕರ್ನಾಟಕಿ’ ಹಾಡುನಟಿಯ ಜೀವನ ಕಥನದಿಂದ.

*

ಅಮೀರ್​ಬಾಯಿ ಯಾಕ ಕನ್ನಡ ಸಿನಿಮಾಗಳಲ್ಲಿ ಹೆಚ್ಚು ಕೆಲಸ ಮಾಡಲಿಲ್ಲ ಎಂದು ಪಹಿಲಾ ಸವಾಲು ಹಾಕಿದೆ. ‘ಧಾರವಾಡದ ಭಾಷೆಯನ್ನು ಮೈಸೂರು ಬೆಂಗಳೂರು ಸಿನಿಮಾ ಜನ ಒಪ್ಪಕೊಳ್ಳದೇ ಇದ್ದುದೇ ಕಾರಣ’ ಎಂದು ಥಟ್ಟನೆ ಜವಾಬು ಸಿಕ್ಕಿತು. ಜತೆಗೇ ಧಾರವಾಡ ಭಾಷೆಯ ಬಗ್ಗೆ ಬೆಂಗಳೂರು ಜನ ಪ್ರವೃತ್ತಿ ನೆನಪಾಗಿ, ಒಮ್ಮೆ ಕುಲಕರ್ಣಿಯವರ ಗೆಳೆಯರೊಬ್ಬರು ಬೆಂಗಳೂರಿನ ಪ್ರಸಿದ್ಧ ಸಿನಿಮಾ ನಿರ್ದೇಶಕರಿಗೆ ಪರಿಚಯಿಸುತ್ತ ‘ಈ ಸೂಳೀಮಗ ಭಾಳ ಅನಾಹುತ ಅದಾನ. ಟೇಲೆಂಟೆಡ್ ಪರ್ಸನ್​. ಇವನ ಕಡೆ ಅದ್ಭುತ ಭಾಷಾ ಅದ. ಒಂದಂದ್ರ ಧಾರವಾಡ ಬಿಡ್ಲಿಕ್ಕ ತಯಾರಿಲ್ಲ. ಅಲ್ಲೇ ಸಾಯ್ತೀನಿ ಅಂತಾನ’ ಎಂದರಂತೆ. ಅದಕ್ಕೆ ಆ ನಿರ್ದೇಶಕರು ‘ನೀವೇನೇ ಹೇಳಿ ಇವರೆ, ಈ ದಾರವಾಡದ್ದು ಒಂಥರಾ ಕಾಮಿಡಿ ಲ್ಯಾಂಗ್ವೇಜ್’ ಎಂದರಂತೆ. ಅದನ್ನು ನೆನಪಿಸಿಕೊಂಡು ಕುಲಕರ್ಣಿ ಹೇಳಿದರು ;

‘ನೋಡ್ರೀ, ನಮ್ಮ ಉತ್ತರ ಕರ್ನಾಟಕದ ಭಾಷೆ ಮ್ಯಾಲ ನಿಮ್ಮ ದಕ್ಷಿಣ ಕರ್ನಾಟಕದವರ ಅಭಿಪ್ರಾಯ ಇದು ನಮ್ಮ ಭಾಷೆ ಕನ್ನಡಾನೇ ಅಲ್ಲ. ಅಕಸ್ಮಾತ್ ಅದನ್ನ ಬಳಸಿಕೊಂಡರ, ಕಾಮಿಡಿಯೊಳಗ ಬಳಸ್ಕೋಬೇಕು. ಏನು ಬದ್ನೀಕಾಯಿ ಕಾಮಿಡಿ? 2008ನೇ ಇಸವಿಯೊಳಗೇ ಹೀಂಗದ ಅಂದರ, ಇನ್ನ 50-60 ವರ್ಷದ ಹಿಂದ ಹೆಂಗಿರಬೇಕು? ಅದಕ್ಕೇ ನಮ್ಮ ಅಮೀರಬಾಯಿ ಅವರು, ನಿಮ್ಮ ವ್ಯವಹಾರಾನೇ ಬ್ಯಾಡಾ ಅಂತ ಮುಂಬೈ ಕಡಿ ಹೋದರು. ಇದರ ಜತೀಗಿ ಮೈಸೂರು ಕರ್ನಾಟಕದ ಸಿನಿಮಾದ ಕತೀನೇ ಬ್ಯಾರೇ ; ಮ್ಯೂಸಿಕ್ಕೇ ಬ್ಯಾರೇ; ಮೈಸೂರು ಕಡೆಯವರು ಇವರಿಗೆ ಅವಕಾಶಾನೂ ಕೊಡಲಿಲ್ಲ. ಇವರೂ ರಿಸ್ಕ್ ತಕ್ಕೊಳ್ಳಿಲ್ಲ. ಅಮೀರಬಾಯಿಯವರನ್ನ ಈ ಮಂದಿ  ಬೆಳಸತಿದ್ದಿಲ್ಲ. ಮೊದಲನೇದು ಮುಸಲರಾಕಿ ಅಂತಿದ್ದರು. ಎರಡ್ನೇದು ನಮ್ಮ ಭಾಷಾ ಬರೂದಿಲ್ಲ ಅಂತಿದ್ದರು. ಮೂರನೇದು ಹಿಂದೂಸ್ತಾನಿ ಗಾಯಕಿ ನಿಮ್ಮದು ಅಂತಿದ್ದರು. ಬಸವರಾಜ ಮನ್ಸೂರ್ ಯಾಕ ಬೆಂಗಳೂರು ಫಿಲ್ಮ್ ಇಂಡಸ್ಟ್ರೀ ಬೆಳಸಗೊಡಲಿಲ್ಲ. ನಮ್ಮ ಹಂದಿಗನೂರು ಸಿದ್ರಾಮಪ್ಪ, ಮಧ್ವರಾವ ಉಮರ್ಜಿ, ಎಲಿಗಾರ ಸಿದ್ಧಯ್ಯ ಉಳದಿದ್ರೂ ಅಂದ್ರ, ನಿಮ್ಮ ಅಣ್ಣಾವರು ಏನೂ ಆಗತಿದ್ದಿಲ್ಲ ತಿಳಕೋರಿ.’

ಭಾರತೀಯ ಚಿತ್ರರಂಗದ ದಿಗ್ಗಜರು ಅಮೀರ್​ಬಾಯಿ ಕರ್ನಾಟಕಿ ಮತ್ತು ವಿ. ಶಾಂತಾರಾಮ್ (ಶಾಂತಾರಾಮ್ ರಾಜಾರಾಮ್ ಒಣಕುದ್ರೆ)

ಇಟ್ಟರೇ ಶಾಪ ಎಂಬ ಜಂಗಮಶೆಟ್ಟಿಯವರ ಎಚ್ಚರಿಗೆ ತುಸುವೇ ದರ್ಶನವಾಯಿತು.  ‘ಕರ್ನಾಟಕಿ’ ಎಂಬ ಅಡ್ಡಹೆಸರನ್ನು ಅಮೀರ್​ಬಾಯಿ ಇಟ್ಟುಕೊಂಡಿದ್ದರ ಹಿನ್ನೆಲೆ ಏನು ಎಂದು ಎರಡನೆಯ ಪ್ರಶ್ನೆಯನ್ನು ಮುಂದಿಟ್ಟೆ. ಅದಕ್ಕೆ ಕುಲಕರ್ಣಿಯವರು ‘ಕರ್ನಾಟಕಿ ಅಂತ ಹಚಗೊಳ್ಳೋದು ಅಭಿಮಾನದ ಸಂಕೇತ’ ಎಂದು ಅಭಿಪ್ರಾಯಪಟ್ಟರು. ಕೂಡಲೇ ಜಂಗಮಶೆಟ್ಟಿಯವರು ಬಾಯಿಹಾಕಿ ‘ಅದಾ ಹೇಳ್ರಿ ಇನ್ನೊಮ್ಮಿ. ಅದಾ ಬೇಕಾಗದ ನಮಗ. ನಮ್ಮ ವ್ಹಿ. ಶಾಂತಾರಾಂ ಬಿಜಾಪುರದವ್ನ. ಅವನ ಮೊದಲನೇ ಹೆಂಡತಿ ಜಮಖಂಡಿಯಾಕಿ ಅಲ್ಲೇನ್ರಿ?’ ಎಂದು ಸಾತ್ ಕೊಟ್ಟರು. ಅಮೀರ್​ಬಾಯಿ ನಟಿಸಿದ ಸಿನೆಮಾದ ನೆಗೆಟಿವ್ಸ್​ ಸುಟ್ಟುಹೋಗಿಬಿಟ್ಟವು ಎಂದು ಕುಲಕರ್ಣಿಯವರು ಹೇಳುವಾಗ, ‘ಯಪ್ಪೋ! ಅದರಾಗ ನಮ್ಮ ಬಿಜಾಪುರದ ಹಂದಿಗನೂರ ಸಿದ್ರಾಮಪ್ಪ ಆ್ಯಕ್ಟ್​ ಮಾಡಿದ್ದನ್ರೀ’ ಎಂದು ನಿಟ್ಟುಸಿರು ಹಾಕಿದರು. ಶೆಟ್ಟಿಯವರು ಚರ್ಚೆಯಲ್ಲಿ ಬರುವ ಯಾವ್ಯಾವುದೋ ಎಳೆಗಳನ್ನು ಹಿಡಿದು ಬಿಜಾಪುರಕ್ಕೆ ತಳುಕುಹಾಕಿ ಸಂಭ್ರಮಪಡುತ್ತಿದ್ದರು. ಕುಲಕರ್ಣಿ ಮುಂದುವರೆದು ನುಡಿದರು : ‘ಅಮೀರ್​ಬಾಯಿ ಕರ್ನಾಟಕಿ ಅಂತಂದರ ಮುಗದಹೋಯ್ತು. ಶಿ ವಾಝ್ ಬಿಯಾಂಡ್ ಆಲ್​ ದಿಸ್ ಥಿಂಗ್ಸ್​ ಅಂಡ್​ ಶಿ ವಾಝ್ ಆಲ್​ ಫಾರ್ ಸುರಯ್ಯ ಅಂಡ್​ ನೂರ್​ಜಹಾನ್​. ಇನ್ನೂ ಒಂದ ಕೈ ಮ್ಯಾಲೇನ ಅಂತಿಳಕೋರಿ. ನಮ್ಮ ಶಾಂತಾರಾಮನ ಷಡ್ಡಕ, ನಂದಾಳ ಅಪ್ಪಾ, ಈ ವಿನಾಯಕ ಸೈತ ತನ್ನ ಹೆಸರಿಗಿ ಅಭಿಮಾನದಿಂದ ಹೇಳ್ಕೊಳೋ ಮಾನಸಿಕ ತಯಾರಿ ಮಾಡ್ಕೊಂಡಿದ್ರು ಆ ಜನ. ಇಷ್ಟೆಲ್ಲ ಈ ಬೆಂಗಳೂರ್ ಮಂದಿ ಹೊಯ್ಕೋತಾರಲ್ಲ-ಕನ್ನಡ ಭಾಷಾ ಆಗಬೇಕು, ನೆಲಾ ಆಗಬೇಕು, ಜಲಾ ಆಗಬೇಕು, ಆಫೀಸಾಗಬೇಕು, ಸಿಕ್ಕಾ ಆಗಬೇಕು, ಬೋರ್ಡಾಗಬೇಕು, ಸುಡಗಾಡ ಸುಂಟಿ ಆಗಬೇಕು ಅಂತ ಮೈಸೂರು ಬೆಂಗಳೂರೊಳಗ ಒಬ್ಬ ನಟಿ ಅಥವಾ ಒಬ್ಬ ಸಾಹಿತಿ ತನ್ನ ಸರ್​ನೇಮ್ ಕರ್ನಾಟಕಿ ಅಂತ ಹಚ್ಕೊಂಡಿದ್ರೆ ತೋರಸ್ರೀ. ಅಮೀರ್​ಬಾಯಿ ಈ ಅಭಿಮಾನವನ್ನ 50 ವರ್ಷದ ಹಿಂದ ಮಾಡಿದಳು. ಇದ ನೋಡ್ರೀ, 1937ನೇ ಇಸ್ವಿಯೊಳಗ ನಮ್ಮ ಧಾರವಾಡದ ಮುಧೋಳಕರ್ ‘ಕರ್ನಾಟಕ ಫಿಲಮ್ಸ್​’ ಅನ್ನೋ ಬ್ಯಾನರಿನೊಳಗ ಸಿನಿಮಾ ತಗದ್ರು. ಆಗೆಲ್ಲಿತ್ತು ಕರ್ನಾಟಕ? ಎಲ್ಲಿತ್ತು ಯೂನಿಫಿಕೇಶನ್ನು?

Abhijnana anecdote of Singer actress Amirbai Karnataki by Kannada writer Rahamat Tarikere

ಅಮೀರ್​ಬಾಯಿಯ ಜೀವನ ಕಥನ

ಮೈಸೂರ್ ಸ್ಟೇಟಂತಿತ್ತು ಆವಾಗ. ಲೀನಾ ಚಂದಾವರ್ಕರ್, ಗಂಗೂಬಾಯಿ ಹಾನಗಲ್, ಅಮೀರ್​ಬಾಯಿ ಕರ್ನಾಟಕಿ, ಶಾಂತಾ ಹುಬ್ಳೀಕರ್, ವಣಕುದ್ರಿ ಶಾಂತಾರಾಂ, ಸುರೇಶ್ ಹೆಬಳೀಕರ್-ಎಷ್ಟು ಬೇಕು ನಿಮಗ? ವ್ಹಿ. ಶಾಂತಾರಾಂ ಬೆಂಗಳೂರದಾಗ ಯಾವುದೋ ಫಂಕ್ಷನ್ನಿಗೆ ಬಂದಾಗ ಮುಜುಗರ ಇಲ್ಲದೇ ಹೇಳ್ದ -ಹುಬ್ಬಳ್ಳ್ಯಾಗ ನಾ ಡೆಕ್ಕನ್ ಟಾಕೀಸ್​ನಾಗ ಗೇಟ್​ಮನ್ ಇದ್ದೆ ಅಂತ. ಅವರಪ್ಪ ರೇಲವೇದಾಗ ಕೆಲಸ ಮಾಡ್ತಿದ್ದ. ಅವರವ್ವಾ ಅಲ್ಲೇ ಹೊರಗಡೆ ಈ ಚಾದಂಗಡಿ ಇಟ್ಟಿದ್ದಳು. ತಾಳಿಪಟ್ಟು, ಸಾಬೂದಾನಿ ಕಿಚಡಿ ಮಾಡತಿದ್ದಳು. ಇಂವ ಶಾಂತಾರಾಮ್ ಸಪ್ಲೇ ಮಾಡತಿದ್ದ. ನಾವು ಉತ್ತರ ಕರ್ನಾಟಕದ ಮಂದಿ, ವೇದಿಕೆ ಛೇಂಜಾದರೆ ಎಂದೂ ಹೆಸರು ಬದಲಿಸೂದಿಲ್ಲ. ನಮ್ಮ ಐಡೆಂಟಿಟಿ ಛೇಂಜ್ ಮಾಡ್ಕೊಳ್ಳೋದಿಲ್ಲ. ನಮಗ ಕಾಂಪ್ರೋಮೈಸ್​ ಅವಕಾಶ ಬಂದಿಲ್ಲ, ಬರೂದಿಲ್ಲ. ನಮ್ಮ ಸ್ವಾಭಿಮಾನ ಅಂಥದ್ದು’ ಎಂದು ಘೋಷಿಸಿದರು ಗುಡುಗುಸಿಡಿಲು ಒಟ್ಟಿಗೆ ಕಳಚಿ ಬಿದ್ದಂತಾಯಿತು.

(ಸೌಜನ್ಯ : ಪಲ್ಲವ ಪ್ರಕಾಶನ, 8880087235)

ಇದನ್ನೂ ಓದಿ : Autobiography : ‘ಗಿರಿಜವ್ವನ ಮಗ’ನ ನವ್ಯಕಲೆ ತಗಣಿ ಪೇಂಟಿಂಗ್ ಮತ್ತು ಮಾರವಾಡಿಗಳ ಅಹಿಂಸಾ ತತ್ವ

Published On - 10:03 am, Sat, 4 December 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ