ನಾನೆಂಬ ಪರಿಮಳದ ಹಾದಿಯಲಿ: ನೌಕರಿ ಮಾಡೂ ಜಗಾದಾಗ ಎಂದೂ ಮನಿ ಪರಿಸ್ಥಿತಿ ಹೇಳಬಾರದರೀ…

‘ಮರುದಿನ ರಾಜೀನಾಮೆ ಪತ್ರ ತಗೊಂಡು ಎಂಡಿ ಕ್ಯಾಬೀನಿಗೆ ಹೋಗಿ, ‘ಸರ್ ಇದ ರಾಜೀನಾಮೆ ತಗೋರಿ ನಂದು. ಆಫೀಸನ್ಯಾಗ ಅಡ್ಜಸ್ಟ್​ ಮಾಡಿಸಿಕೊಳ್ಳೂದರಾಗ ಭಾಳ ಬಿಝಿ ಆಗಬ್ಯಾಡ್ರೀ. ಆಮೇಲೆ ನಿಮ್ಮ ಹೆಂಡತಿ ಬ್ಯಾರೇಯವರ ಜೋಡಿ ಅಡ್ಜಸ್ಟ್ ಆಗಿಬಿಟ್ರ ಕಷ್ಟ ನೋಡರೀ... ಹಿಂಗಂತಂದು ನಿರುಮ್ಮಳವಾಗಿ ಹೊರಬಿದ್ದೆ ಅವರ ಉತ್ತರಕ್ಕೂ ಕಾಯದೇ.‘ ವಿಜಯಾ ಕುಲಕರ್ಣಿ

ನಾನೆಂಬ ಪರಿಮಳದ ಹಾದಿಯಲಿ: ನೌಕರಿ ಮಾಡೂ ಜಗಾದಾಗ ಎಂದೂ ಮನಿ ಪರಿಸ್ಥಿತಿ ಹೇಳಬಾರದರೀ...
ಧಾರವಾಡದ ವಿಸ್ಮಿತಾಸ್ ಕಿಚನ್ ನ ವಿಜಯಾ ಕುಲಕರ್ಣಿ
Follow us
ಶ್ರೀದೇವಿ ಕಳಸದ
|

Updated on:Jan 26, 2021 | 4:24 PM

ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ

ಧಾರವಾಡದಲ್ಲಿ ಗೃಹೋದ್ಯೋಗದಲ್ಲಿ ತೊಡಗಿಕೊಂಡ ವಿಜಯಾ ಕುಲಕರ್ಣಿ ಅವರು ಈ ಸರಣಿಯ ಮೂಲಕ ತಮ್ಮ ಬದುಕನ್ನೊಮ್ಮೆ ಸಂಕ್ಷಿಪ್ತವಾಗಿ ಹಿಂದಿರುಗಿ ನೋಡಿದ್ದಾರೆ.

‘ಟೇಲರ್ ಹತ್ತರ ಬ್ಲೌಸ್ ಹೊಲೀಲಿಕ್ಕೆ ಕೊಟ್ಟರ ಹೊಲಗೀ ರೊಕ್ಕ ಗಂಡನ್ನ ಕೇಳಬಾರದು ವಿಜಿ’

ಅತ್ತೆಯ ಮಾತುಗಳೇ ಇಂದಿಗೂ ನನ್ನ ಮನಸಲ್ಲಿ ಹಚ್ಚಹಸಿರಾಗಿವೆ. 2006ರಲ್ಲಿ ಇದ್ದಕಿದ್ದಂತೆ ನನ್ನ ಗಂಡನ ಸರಕಾರಿ ನೌಕರಿ ಇಲ್ಲವಾಯಿತು, ಅವರು ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದ JOC Board ಮುಚ್ಚಿತು. ಆಗ ನನಗೆ ಏನು ಮಾಡಬೇಕೆಂದು ತೋಚದಂಥ ಸ್ಥಿತಿ. ನನ್ನ ಪ್ರಕಾರ ಮುಂಜಾನೆಯ ಚಹಾ, ಕಪ್ಪಿನೊಳಗೆ ತುಳುಕಾಡಿ ಮುಗುಳುನಗುವುದೂ ಕಾಂಚಾಣದಿಂದಲೇ. ಆಗ ಅತ್ತೆ, ‘ಯಾರಾದರೂ ಒಬ್ರು ದುಡಿಲಿಕ್ಕೇ ಬೇಕು ಈಗ ಅನಕಾತ ನೌಕರಿ ಮಾಡು’ ಅಂದರು. ಸರಿ ಎಂದು ಸಂದರ್ಶನಕ್ಕೆ ಹೋದೆ. ಅಲ್ಲಿ ನಿಮ್ಮ ಗಂಡ ಏನು ಮಾಡುತ್ತಾರೆ ಅಂದಾಗ, ಸತ್ಯ ಹರಿಶ್ಚಂದ್ರನ ಮೊಮ್ಮಗಳ ಹಾಗೆ ‘ಹಿಂಗ ಆಗೇದರೀ’ ಅಂತ ಹೇಳಿಕೊಂಡೆ. ೩೦೦೦ ಸಾವಿರ ಸಂಬಳಕ್ಕೆ ನೌಕರಿ ಸಿಕ್ಕಿತು. ಹೇಳಿಕೊಳ್ಳುವಂತಹ ದೊಡ್ಡ ಕಂಪನಿ ಅಲ್ಲ, ಮೊದಲನೇ ತಿಂಗಳ ಸಂಬಳ ಬಂದಾಗ ಖುಶಿ ಪಟ್ಟೆ. ಇದು ಮನೀ ಖರ್ಚಿಗಿರೀ ಅತ್ತ್ಯಾ ಎಂದು ಅವರ ಕೈಗೆ 1,500 ಇಟ್ಟೆ. ಉಳಿದ ಹಣವನ್ನು ಬಸ್ ಪಾಸಿಗೆ ಮತ್ತೆ ನನ್ನ ಖರ್ಚಿಗೆ ಇಟ್ಟುಕೊಂಡೆ.

ಎರಡನೇ ತಿಂಗಳ ಸಂಬಳ ನನ್ನ ಅಕೌಂಟಿಗೆ ಬಂದಿದ್ದಿಲ್ಲ, ಆಗ ಎಚ್​ಆರ್​ ಹತ್ತಿರ ಹೋಗಿ ಕೇಳಿದೆ. ಅದಕ್ಕೆ ಅವರು,  ‘ಎಂಡಿ ಹಾಕಬೇಡ ಅಂದಾರ್ರೀ’ ಅಂದಾಗ, ನಾನೇನು ತಪ್ಪ ಮಾಡಿದೆ ಅಂತ ಗೊತ್ತಾಗಲಿಲ್ಲ, ಎಂಡಿ ಕ್ಯಾಬೀನಿಗೆ ಹೋಗಿ ಕೇಳಿದಾಗ, ಹೌದು ಹಾಕಿಲ್ಲ ಅಂದರು. ಯಾಕೆ ಅಂತ ಕೇಳಿದಾಗ, ಕೆಲವೊಂದು ಆಫೀಸ್ ರೂಲ್ಸ್​ಗೆ ಅಡ್ಜಸ್ಟ್ ಆಗಬೇಕು ಆವಾಗಷ್ಟೇ ಪೇಮೆಂಟ್ ಅಂದರು, ಮಾತಿನ ಹಿಂದಿರುವ ಉದ್ದೇಶ ಗೊತ್ತಾಗಲಾರದೇ, ಎಲ್ಲಾ ರೂಲ್ಸ್ ಫಾಲೋ ಮಾಡತಾ ಇದ್ದೀನಲ್ರೀ ಅಂದೆ. ‘ಎರಡ ಮಕ್ಕಳು ನಿಮಗ, ಎಷ್ಟ ಮುಗ್ಧವಾಗಿ ನಡ್ಕೋತೀರಿ…’ ಅಂದಾಗ, ಅವರಿಗೆ ತಗದ ಕಪಾಳಕ್ಕ ಬಾರಸಬೇಕು ಅನ್ನಿಸ್ತು. ಏನೂ ಉತ್ತರ ಕೊಡಲಾರದೆ ಹೊರ ಬಂದೆ. ಹೊರಗಡೆ ನಾರಾಯಣ ಅಂತ ಹುಡುಗ, ಅಲ್ಲಿ ಅಕೌಂಟ್ಸನಲ್ಲಿ ಕೆಲಸ ಮಾಡತಾ ಇದ್ದಾ, ಅವನು ಕರದು ಮ್ಯಾಡಮ್ ಬರ್ರೀ ಇಲ್ಲೆ ಅಂದಾ, ಈ ಕಂಪನಿ ನಿಮಗ ಅಲ್ಲರೀ, ಬೇರೇ ಕಡೆ ಕೆಲಸ ಹುಡಕರೀ ಅಂದಾಗ, ಯಾಕ ಹಿಂಗ ಅವರು ಅಂದೆ. ಆವಾಗ ಆ ಹುಡುಗ ಹೇಳಿದ ಮಾತು ಎಂದಿಗೂ ಮರಿಯಲಾರದ್ದು. ‘ನೌಕರಿ ಮಾಡೂ ಜಗಾದಾಗ ಎಂದೂ ಮನಿ ಪರಿಸ್ಥಿತಿ ಹೇಳಬಾರದರೀ ಮ್ಯಾಡಮ್’ ಅಂದಾಗ ಎಚ್ಚೆತ್ತುಕೊಂಡೆ. ಆದರೂ ನೂರಾರು ಪ್ರಶ್ನೆಗಳು ಕಾಡಿದ್ವು. ನಾನೇನ ಹೇಳಬಾರದ್ದ ಹೇಳಿದೆ ಅಂತ.

ಮರುದಿನ ಆಫೀಸಿಗೆ ಬಂದು ರಾಜೀನಾಮೆ ಪತ್ರ ಬರದು, ಎಂಡಿ ಕ್ಯಾಬೀನಿಗೆ ಹೋಗಿ, ‘ಸರ್ ಇದ ರಾಜೀನಾಮೆ ತಗೋರಿ ನಂದು. ಆಫೀಸನ್ಯಾಗ ಅಡ್ಜಸ್ಟ್​ ಮಾಡಿಸಿಕೊಳ್ಳೂದರಾಗ ಭಾಳ ಬಿಝಿ ಆಗಬ್ಯಾಡ್ರೀ. ಆಮೇಲೆ ನಿಮ್ಮ ಹೆಂಡತಿ ಬ್ಯಾರೇವ್ರ ಜೋಡಿ ಅಡ್ಜಸ್ಟ್ ಆಗಿಬಿಟ್ರ ಕಷ್ಟ ನೋಡರೀ’ ಹಿಂಗಂತಂದು ನಿರುಮ್ಮಳವಾಗಿ ಹೊರಬಿದ್ದೆ ಅವರ ಉತ್ತರಕ್ಕೂ ಕಾಯದೇ. ಕಂಡಕಂಡಲ್ಲಿ ವೈಯಕ್ತಿಕ ಸಮಸ್ಯೆಗಳನ್ನು ಹಂಚಿಕೊಳ್ಳಬಾರದು ಎಂದು ಕಲಿತ ಮೊದಲ ಪಾಠ ಅದು. ಹೊರಗಿನ ಜಗತ್ತನ್ನು ನಾನು ಹೇಗೇ ನೋಡಬೇಕು ಎಂಬುದರ ಬದಲಾಗಿ, ಜಗತ್ತು ನನ್ನನ್ನು ಹೇಗೇ ನೋಡಬೇಕು ಎಂಬುದನ್ನು ನಾನು ಜಗತ್ತಿಗೆ ತೋರಿಸಿ ಕೋಡಬೇಕು ಎಂದು ನಿರ್ಧಾರ ಮಾಡಿದೆ. ಕಂಡಕಂಡವರ ಮುಂದೆಲ್ಲಾ ಅಳಲಾದೀತೇ? ಅದರ ಪರಿಣಾಮ ನೋಡಿದ್ದೆ. ಎಲ್ಲರೂ ಹಾಗಿರುವುದಿಲ್ಲ ಎಂಬುದಕ್ಕೆ ನನ್ನ ಹೊಸ ನೌಕರಿ ಸಾಕ್ಷಿ ಆಯಿತು. ಅಲ್ಲಿಂದ ಹೊರಬಂದಾಗ ಸುತ್ತಮುತ್ತಲಿನ ವಾತಾವರಣ ಹಿತವೆನಿಸಿತು.

ಇದೆಲ್ಲದರ ನಡುವೆ ಒಂದು ವರ್ಷದ ತನಕ ಮಕ್ಕಳ ಜವಾಬ್ದಾರಿಯನ್ನು ಅತ್ತೆ ತೆಗೆದುಕೊಂಡರು. ಆದರೆ ಓಡಾಡುವುದು ಕಷ್ಟವೆನಿಸಿ, ನವನಗರಕ್ಕೆ ಮನೆ ಮಾಡಿದೆ, ಆಗ ಗಂಡ, ನಾನು ಬರುವುದಿಲ್ಲ ಅನ್ನುವ ಹಟ. ಅತ್ತೆ ಒಂದೇ ಮಾತು ಹೇಳಿದ್ದು, ಅವ ಬರಲಿಲ್ಲ ಅಂದರ ಇಲ್ಲ, ಒಬ್ಬಕಿನ ಇರು ಹುಡುಗೂರನ ಕರಕೊಂಡು ಅಂದರು. ಅದು ಅತ್ತೆ ಕೊಟ್ಟ ಭಂಡ ಧೈಯ೯! ಮನೆ ಮಾಡಿ ಒಬ್ಬಳೇ ಮಕ್ಕಳೊಟ್ಟಿಗೆ ಶಿಪ್ಟ್​ ಆದೆ. ಮಕ್ಕಳನ್ನು ಬೇಬಿ ಸಿಟ್ಟಿಂಗ್​ನಲ್ಲಿ ಬಿಟ್ಟು ಆಫೀಸಿಗೆ ಓಡಬೇಕು, ಅವರಿಗೆ ತಿಂಡಿ, ಊಟ, ಸಂಜೆಗೆ ಏನಾದರೂ ಎಂದು ಎಲ್ಲವನ್ನೂ ಅಚ್ಚುಕಟ್ಟಾಗಿ ಪ್ಯಾಕ್ ಮಾಡಬೇಕು. ಒಂದೊಂದು ದಿನಾ ಅಳು ಬರೋದು, ಏನಾಯ್ತು ಜೀವನ ಅಂತ, ಆದರೆ ಎಂದೂ ಧೈರ್ಯಗೆಡಲಿಲ್ಲ. ಮೊದಲನೇ ದಿನ ಬೇಬಿ ಸಿಟ್ಟಿಂಗ್​ನಲ್ಲಿ ಮಕ್ಕಳನ್ನು ಬಿಟ್ಟು ಬರುವಾಗ ನನಗೆ ಆದ ಸಂಕಟ ಹೇಳತೀರದು. ನನ್ನ ಮಗಳು ಅಂದು ನನ್ನ ಮಗನಿಗೆ ಅಮ್ಮನಾದಳು, ನೀ ಏನೂ ಕಾಳಜಿ ಮಾಡಬೇಡಮ್ಮ ನಾನು ವಿಶ್ರುತಗ ನೋಡಕೋತೇನಿ ಅಂದಾಗ, ಅಪ್ಪಿ ಮುದ್ದಾಡಿ ಮಕ್ಕಳನ್ನು ಬಿಟ್ಟು ಬಂದಾಗ, ಕಣ್ಣು ಮಂಜು.

ಇದೆಲ್ಲದರ ನಡುವೆ ಬಾಜೂ ಮನಿ ಆಂಟಿ ದಿನಾಲೂ ನಿಮ್ಮ ಮನಿಯವರು ಎಲ್ಲಿ ಅಂತ ಕಂಡಾಗೊಮ್ಮೆ ಕೇಳೋದು. ನನಗೆ ಇರಿಸು ಮುರಿಸಾಗಿ ಹೇಳಿ ಹೇಳಿ ಬೇಜಾರಾಗಿ ಒಂದು ದಿನ, ‘ಆಂಟಿ ನಿಮ್ಮ ಮಗಗ ಹೆಂಗಿದ್ದರೂ ಕನ್ಯಾ ಸಿಕ್ಕಿಲ್ಲ ನನ್ನ ಸೊಸಿ ಮಾಡಕೊಂಡ ಬಿಡರೀ’ ಅಂದಿದ್ದೇ ತಡ ನಮ್ಮ ಮನೆ ಓನರ್ ಆಂಟೀ ನಕ್ಕಿದ್ದೇ ನಕ್ಕಿದ್ದು. ಹೀಗೇ ಶುರುವಾದ ಬದುಕು, ಮೊದಲನೇ ವರ್ಷ ನಾನು ಮಕ್ಕಳ ಫೀಸ್ ತುಂಬಲು ದುಡ್ಡು ಹೊಂದಿಸಿಕೊಳ್ಳಬೇಕು ಅನ್ನುವುದರಲ್ಲಿ, ತಂದೆಯಂತಿರುವ ಅಕ್ಕ ಎಂದಿಗೂ ನನ್ನ ಕೈ ಬಿಡಲಿಲ್ಲ. ಸದಾ ಬೆನ್ನ ಹಿಂದೆ. ಹೀಗೆ ಹೊಸ ಬದುಕನ್ನು ಬದುಕಲು ಕಲಿತು ಒಂದು ವರ್ಷವಾಗಿತ್ತು. ಆಗಾಗ ಅತ್ತೆ, ಬಾವ ಎಲ್ಲರೂ ಬಂದು ಹೋಗತಾ ಇದ್ದರು, ಗಂಡ ಮಾತ್ರ ಒಂದು ವರ್ಷವಾಗಿತ್ತು ಬಂದಿರಲಿಲ್ಲ. ಅವರಿಗೆ ಹೀಗೆ ನಾನು ದುಡಿಯುವ ಹಾಗಾಯಿತಲ್ಲ ಎಂಬ ಕೊರಗು. ಆದರೂ ಏನು ಹೊಳೆಯಿತೋ ಏನೋ ಅದೊಂದು ದಿನ, ‘ನಿನ್ನ ಜೋಡಿ ನಾನೂ ಬರತೀನಿ ಏನರೇ ನೌಕರಿ ಮಾಡತೇನಿ ಅಂದಾಗ ಸಮಾಧಾನ’ ಈ ಮಾತಿಗಾಗಿ ನಾನು ವರ್ಷದ ತನಕ ಕಾದಿದ್ದೆ. ‘ಬಾ ಏನರೇ ನೌಕರಿಗೆ ಹತ್ತು ಅಂದೆ.’ ಆದರೆ ನನಗೆ ಗೊತ್ತಿತ್ತು ಅದು ಸುಲಭದ ಮಾತಲ್ಲ ಅಂತ. ಸರಕಾರಿ ಸಂಬಳ ತೆಗೆದುಕೊಂಡವರು ಮೀಡಿಯಾ ಎಂಬ ಲೋಕಕ್ಕೆ ಕಾಲಿಟ್ಟರು. ಆಗಷ್ಟೇ ನಂಗೂ ಅತ್ತೆಗೂ ನಮ್ಮ ಅಕ್ಕತಂಗಿಯರಿಗೂ ಸಮಾಧಾನ. ನಮ್ಮ ಪರಿಸ್ಥಿತಿ ಸುಧಾರಿಸುವವರೆಗೂ ನಾನು ಹಾಗೂ ನನ್ನ ಮನೆಯವರು ಎರಡು ವರ್ಷಗಳ ತನಕ ಯಾವುದೇ ಕಾಯ್ರಕ್ರಮದಲ್ಲಿ ಭಾಗಿಯಾಗಿರಲಿಲ್ಲ. ಯಾರಿಗೆ ಗೊತ್ತು, ಯಾರೂ ಹೇಗೂ ಕೊಂಕು ಮಾತು ಆಡಬಹುದು. ಆ ದುಗುಡ ನನಗೆ ಬೇಕಿರಲಿಲ್ಲ.

ಎರಡೂ ಕೈಯಿಂದ ಚಪ್ಪಾಳೆ ತಟ್ಟಿದರೆ ಸಪ್ಪಳ ಛಂದ. ಹಾಗೇ ಇಬ್ಬರೂ ಕೂಡಿ ದುಡಿಯಲು ಶುರು ಮಾಡಿದಾಗ ಯಾವುದೇ ಅಡಚಣೆಗಳಿಲ್ಲದೇ ಬದುಕು ಒಂದು ಸಮತೋಲನಕ್ಕೆ ಬಂತು. ಎರಡು ವರ್ಷ ಮಕ್ಕಳನ್ನು ನಾವು ಎಲ್ಲಿಯೂ ಕರೆದುಕೊಂಡ ಹೋಗಿದ್ದಿಲ್ಲ. ಇವೆಲ್ಲ ನೆನಪಾದಾಗ ವಿಷಾದದ ನಗೆ ಮನಸಿನಲ್ಲಿ ಈಗಲೂ. ಆದರೆ ನನ್ನ ಅಕ್ಕತಂಗಿಯರು, ಅತ್ತೆ ಮನೆಯವರು ನನ್ನನ್ನು, ನನ್ನ ಮಕ್ಕಳನ್ನು ಎಂದಿಗೂ ಕೈ ಬಿಡಲಿಲ್ಲ. ಅಪ್ಪ ಅಮ್ಮನನ್ನುಕಳೆದುಕೊಂಡ ನನಗೆ ಅತ್ತೆ ಮಾವ ಅವರ ರೂಪದಲ್ಲಿ ದೊರತೆದ್ದು ಪುಣ್ಯವೇ. ಈಗ ಎರಡು ವರ್ಷಗಳಿಂದ ನಾನು ನೌಕರಿಯ ಜೊತೆಗೆ ಖಾರಪುಡಿ ವ್ಯಾಪಾರ, ಜೊತೆಗೆ ಕೈಮಗ್ಗದ ಸೀರೆಯ ವ್ಯಾಪಾರವನ್ನು ಶುರು ಮಾಡಿಕೊಂಡೆ. ಆದರೆ ಅದರಲ್ಲಿ ಸ್ವಲ್ಪ ಕೈ ಸುಟ್ಟುಕೊಂಡೆ. ಆದರೆ ಎದೆಗುಂದಲಿಲ್ಲ. ಆಗ ಸುತ್ತಮುತ್ತಲಿನವರ ಕೊಂಕು ಮಾತು ನನ್ನನ್ನು ತುಂಬಾ ಧೃತಿಗೆಡಿಸಿತು. ಒಮ್ಮೆಲೆ ಮತ್ತೆ ಜೀವನದಲ್ಲಿ ಏರುಪೇರು, ಅದು ಕೈಯಾರೆ ನಾನೇ ಮಾಡಿಕೊಂಡಿದ್ದು, ಆದರೆ ಮುಖದ ಮೇಲಿನ ಮುಗಳನಗೆಯನ್ನು ಎಂದಿಗೂ ಮಾಸಲು ಬಿಡಲಿಲ್ಲ. ಮತ್ತೆ ಸುಧಾರಿಸಿಕೊಂಡೆ.

ವಿಜಯಾ ಕುಲಕರ್ಣಿ ಅವರ ಹೊಸ ಸಾಹಸ!

ಏನಾದರೂ ಮಾಡಲೇಬೇಕು ಎಂಬ ಛಲ ಮಾತ್ರ ನನ್ನಿಂದ ದೂರಾಗಲಿಲ್ಲ. ಸತತವಾಗಿ ಪ್ರಯತ್ನ ಪಟ್ಟಿದ್ದರಿಂದ ವಿಸ್ಮಿತಾಸ್ ಕಿಚನ್ ಶುರುವಾಯಿತು. ಒಂದೇ ಕನಸು ಬದುಕಿಗೆ, ನನ್ನ ಮಕ್ಕಳಿಗೆ ಎಂದೂ ಯಾವ ರೀತಿಯಿಂದಲೂ ಕಡಿಮೆಯಾಗಬಾರದು. ಅವರ ವಿದ್ಯಾಭ್ಯಾಸಕ್ಕೆ ಯಾವುದೇ ಕುಂದುಕೊರತೆಗಳು ಅಡ್ಡಿಯಾಗಬಾರದು. ಹೀಗಾಗಿ ದುಡಿಯುವ ಶಕ್ತಿ ಇರುವವರೆಗೂ ನಾನು ದುಡಿಯಬೇಕು. ಇದೆಲ್ಲದರೊಂದಿಗೆ ನಾನು ಬರೆಯುವ ಓದುವ ರುಚಿಯನ್ನು ಹೆಚ್ಚಿಸಿಕೊಂಡಿದ್ದು ಫೇಸ್​ಬುಕ್ ಸ್ನೇಹಿತರಿಂದ. ನಾನು ಈ ಅನುಭವವನ್ನು ಮೊಬೈಲಿನಲ್ಲಿ ಟೈಪ್​ ಮಾಡುತ್ತಿದ್ದೇನೆಂದರೆ ಅದಕ್ಕೆ ಕಾರಣ ನನ್ನ ಸ್ನೇಹಿತೆ ರೂಪಾ ಮಾಚಿಗಣಿ. ಆಕೆಯೇ ನನಗೆ ಟೈಪಿಂಗ್ ಹೇಳಿಕೊಟ್ಟಿದ್ದು. ಸಾಹಿತ್ಯ ಬಳಗವನ್ನು ಪರಿಚಯಿಸಿಕೊಟ್ಟಿದ್ದು ರಾಜಕುಮಾರ ಮಡಿವಾಳರ.

ಎಲ್ಲವನ್ನೂ ಮೀರಿ ಬದುಕುವುದು ಒಂದು ಕಲೆ. ಅದನ್ನು ಕಲಿಯಲು ಶ್ರಮಪಟ್ಟಿದ್ದೇನೆ. ಏನೇ ಆದರೂ ನಗುನಗುತ್ತಲೇ ಬದುಕಲೇಬೇಕು. ಅಳುತ್ತ ಯಾಕೆ ಬದುಕಬೇಕು? ಓದು ಬರೆವಣಿಗೆ ಅನ್ನುವುದು ನನಗೆ ಗೊತ್ತಿಲ್ಲದಿದ್ದರೆ ಇಷ್ಟೊತ್ತಿಗೆ ನನ್ನ ಮಾನಸಿಕ ಸ್ಥಿತಿ ಏನಾಗಿರುತ್ತಿತ್ತೋ ಗೊತ್ತಿಲ್ಲ. ಈಗ ಕಥೆಗಳನ್ನು ಬರೆಯಲಾರಂಭಿಸಿದ್ದೇನೆ. ಒಂದು ಸಂಕಲನ ತರುವ ಆಸೆಯಿದೆ.

***

ಪರಿಚಯ: ಧಾರವಾಡದ ವಿಜಯಾ ಕುಲಕರ್ಣಿ ವಿವಿಧ ಕಂಪೆನಿಗಳ ಸೇಲ್ಸ್​ ವಿಭಾಗದಲ್ಲಿ ಕೆಲಸ ಮಾಡಿ ಇದೀಗ ವಿಸ್ಮಿತಾಸ್ ಕಿಚನ್ ಎಂಬ ಗೃಹೋದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಓದು-ಬರಹ, ಗುಡ್ಡಗಾಡು ತಿರುಗಾಟ, ಪ್ರಾಚೀನ ದೇವಸ್ಥಾನ ನೋಡುವುದು, ಸಂಗೀತ ಕೇಳುವುದು ಇವರ ಹವ್ಯಾಸಗಳು.

ನಾನೆಂಬ ಪರಿಮಳದ ಹಾದಿಯಲಿ: ಬ್ರಹ್ಮಾಂಡಕ್ಕೇ ಕಾವು ಕೊಟ್ಟೆ!

Published On - 4:21 pm, Tue, 26 January 21

‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ