World Laughter Day 2025: ಸರ್ವ ರೋಗಕ್ಕೂ ನಗುವೊಂದೇ ಔಷಧಿ; ವಿಶ್ವ ನಗು ದಿನದ ಇತಿಹಾಸ, ಮಹತ್ವ ತಿಳಿಯಿರಿ
ಚಿಂತೆಯೆಲ್ಲಾ ಬಿಡಿ, ಸದಾ ನಗುತ್ತಿರಿ ಎಂದು ತಿಳಿದವರು ಹೇಳುತ್ತಿರುತ್ತಾರೆ. ಈ ನಗು ಸಾಮಾಜಿಕ ಸಂಬಂಧವನ್ನು ಬಲಪಡಿಸುವುದು ಮಾತ್ರವಲ್ಲದೆ, ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿ. ಆದ್ರೆ ಅನೇಕರಿಗೆ ಈ ನಗುವಿನ ಪ್ರಯೋಜನಗಳ ಬಗ್ಗೆ ತಿಳಿದೇ ಇಲ್ಲ. ಹಾಗಾಗಿ ಈ ನಗುವಿನ ಮಹತ್ವ ಮತ್ತು ಅದರ ಆರೋಗ್ಯ ಪ್ರಯೋಜನಗಳ ಬಗ್ಗೆ ಜನರಿಗೆ ತಿಳಿಸಲು, ಜಾಗೃತಿ ಮೂಡಿಸಲು ಪ್ರತಿವರ್ಷ ಮೇ ತಿಂಗಳ ಮೊದಲನೇ ಭಾನುವಾರದಂದು ವಿಶ್ವ ನಗು ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ.

ಸರ್ವ ರೋಗಕ್ಕೂ ನಗುವೊಂದೇ (Laughter) ಔಷಧಿ ಎಂಬ ಮಾತಿದೆ. ನಗು ಮೊಗದಲ್ಲಿ ಸಂತಸವನ್ನು ಮೂಡಿಸುವುದು ಮಾತ್ರವಲ್ಲದೆ ನಗುವು ಒತ್ತಡವನ್ನು ಕಡಿಮೆ ಮಾಡುವುದರಿಂದ ಹಿಡಿದು ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸುವವರಿಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು (Health Benefits) ಹೊಂದಿದೆ ಎಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಇದೇ ಕಾರಣಕ್ಕೆ ಯಾವಾಗಲೂ ನಗುತ್ತಾ ಇರಬೇಕು, ನಗಿಸುತ್ತಾ ಇರಬೇಕು ಎನ್ನುತ್ತಾರೆ. ಹೀಗೆ ನಗುವಿನ ಅಸಂಖ್ಯಾತ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಈ ಒತ್ತಡದ ಜೀವನದಲ್ಲಿ ಸಂತೋಷವಾಗಿರುವುದು ಎಷ್ಟು ಮುಖ್ಯ ಎಂಬುದನ್ನು ಒತ್ತಿ ಹೇಳಲು ಪ್ರತಿ ವರ್ಷ ಮೇ ತಿಂಗಳ ಮೊದಲನೇ ಭಾನುವಾರದಂದು ವಿಶ್ವ ನಗು (World Laughter Day) ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಹಿನ್ನೆಲೆ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.
ವಿಶ್ವ ನಗು ದಿನದ ಇತಿಹಾಸ:
ವಿಶ್ವ ನಗು ದಿನವನ್ನು 1988 ರಲ್ಲಿ ನಗು ಯೋಗ ಆಂದೋಲನದ ಸಂಸ್ಥಾಪಕ ಡಾ. ಮದನ್ ಕಟಾರಿಯಾ ಸ್ಥಾಪಿಸಿದರು. ನಗುವಿನ ಸಕಾರಾತ್ಮಕ ಪರಿಣಾಮಗಳು ಮತ್ತು ವ್ಯಕ್ತಿಯ ಒಟ್ಟಾರೆ ಆರೋಗ್ಯದ ಮೇಲೆ ನಗು ಬೀರುವ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವುದು ಇದರ ಗುರಿಯಾಗಿದೆ. ಮೊದಲ ವಿಶ್ವ ನಗು ದಿನವನ್ನು 1998 ರಲ್ಲಿ ಮುಂಬೈನಲ್ಲಿ ಮೇ 10 ರಂದು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ವಿಶೇಷ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ವಿಶ್ವ ನಗು ದಿನದ ಉದ್ದೇಶ ಮತ್ತು ಮಹತ್ವ:
ಈ ದಿನವನ್ನು ಆಚರಿಸುವ ಹಿಂದಿನ ಉದ್ದೇಶ ಜನರಲ್ಲಿ ಸಂತೋಷವನ್ನು ಹರಡುವುದು ಮಾತ್ರವಲ್ಲದೆ ನಗುವಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಜನರಿಗೆ ತಿಳಿಸುವುದು, ಜನರಲ್ಲಿ ಏಕತೆ ಮತ್ತು ಸದ್ಭಾವನೆಯ ಭಾವನೆಯನ್ನು ಉತ್ತೇಜಿಸುವುದಾಗಿದೆ. ಅಲ್ಲದೆ ಈ ದಿನ ಪ್ರಪಂಚದಾದ್ಯಂತದ ಜನರು ತಮ್ಮ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಮತ್ತು ಸಂತೋಷದಾಯಕ ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ಮೈಂಡ್‌ಫುಲ್‌ನೆಸ್ ಅಭ್ಯಾಸಗಳನ್ನು ಆರಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ. ಈ ದಿನವು ಜನರು ಜೀವನದಲ್ಲಿ ಸಕಾರಾತ್ಮಕ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ.
ವಿಶ್ವ ನಗು ದಿನದ ಪ್ರಾಥಮಿಕ ಉದ್ದೇಶವೆಂದರೆ ಜನರು ತಮ್ಮ ಜೀವನದಲ್ಲಿ ಸಂತೋಷಕ್ಕೆ ಆದ್ಯತೆ ನೀಡುವಂತೆ ಪ್ರೋತ್ಸಾಹಿಸುವುದು. ಆರೋಗ್ಯಕರ ಮತ್ತು ತೃಪ್ತಿಕರ ಜೀವನ ನಡೆಸಲು ನಗುವಿನ ಅಸಂಖ್ಯಾತ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವುದು ಇದರ ಗುರಿಯಾಗಿದೆ. ಹೆಚ್ಚುವರಿಯಾಗಿ, ಸಾಮಾಜಿಕ ಸಂಪರ್ಕಗಳನ್ನು ಉತ್ತೇಜಿಸಲು ಮತ್ತು ವ್ಯಕ್ತಿಗಳ ನಡುವಿನ ಸಂಬಂಧಗಳನ್ನು ಬಲಪಡಿಸಲು ನಗುವಿನ ಪಾತ್ರದ ಬಗ್ಗೆ ತಿಳಿಸುವುದಾಗಿದೆ.
ಇದನ್ನೂ ಓದಿ: ಪತ್ರಿಕೋದ್ಯಮ ಸಮಾಜದ ಕನ್ನಡಿ; ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ
ನಗುವಿನ ಆರೋಗ್ಯ ಪ್ರಯೋಜನಗಳು:
- ನಗುವು ಒತ್ತಡವನ್ನು ಕಡಿಮೆ ಮಾಡುತ್ತದೆ, ಇದು ಆರೋಗ್ಯದ ಮೇಲೆ ಬೀರುವ ಅನೇಕ ದುಷ್ಪರಿಣಾಮಗಳನ್ನು ತಡೆಗಟ್ಟುವಲ್ಲಿ ಸಹಾಯಕವಾಗಿದೆ.
- ನಗು ದೇಹದಲ್ಲಿ ಸಿರೊಟೋನಿನ್ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ, ಇದು ನಮ್ಮ ಮನಸ್ಥಿತಿಯನ್ನು ಉತ್ತಮವಾಗಿರಿಸುತ್ತದೆ ಮತ್ತು ಖಿನ್ನತೆ ಮತ್ತು ಆತಂಕದ ಅಪಾಯವನ್ನು ಕಡಿಮೆ ಮಾಡುತ್ತದೆ.
- ನಗುವುದರಿಂದ ಸಕಾರಾತ್ಮಕತೆ ಹೆಚ್ಚಾಗುತ್ತದೆ. ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಕುಟುಂಬ ಸದಸ್ಯರೊಂದಿಗೆ ನಗುವ ಮೂಲಕ ಭಾವನಾತ್ಮಕ, ಸಾಮಾಜಿಕ ಸಂಬಂಧಗಳನ್ನು ಬಲಪಡಿಸಬಹುದು.
- ನಗುವುದರಿಂದ ರಕ್ತ ಪರಿಚಲನೆಯೂ ಸುಧಾರಿಸುತ್ತದೆ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
- ನಗುವುದರಿಂದ ಎಂಡಾರ್ಫಿನ್ ಎಂಬ ಹಾರ್ಮೋನ್ ಉತ್ಪತ್ತಿಯಾಗುತ್ತದೆ, ಇದು ಒತ್ತಡ, ಆತಂಕ ಖಿನ್ನತೆಯನ್ನು ನಿವಾರಿಸುತ್ತದೆ.
- ನಗುವುದರಿಂದ ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ, ಇದು ಸ್ಮರಣಶಕ್ತಿಯನ್ನೂ ಸುಧಾರಿಸುತ್ತದೆ.
- ನಗು ಚಿಕಿತ್ಸೆಯು ನಿದ್ರಾಹೀನತೆಯ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯಕವಾಗಿದೆ. ಚೆನ್ನಾಗಿ ನಗುವುದರಿಂದ ನಿಮ್ಮ ದೇಹದಲ್ಲಿ ಮೆಲಾನಿನ್ ಹಾರ್ಮೋನ್ ಉತ್ಪಾದನೆ ಹೆಚ್ಚಾಗುತ್ತದೆ, ಇದು ನಿಮಗೆ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ