World Press Freedom Day 2025: ಪತ್ರಿಕೋದ್ಯಮ ಸಮಾಜದ ಕನ್ನಡಿ; ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ
ಸಮಾಜದಲ್ಲಿ ತನ್ನದೇ ಛಾಪು ಮೂಡಿಸಿರುವ ಪತ್ರಿಕೋದ್ಯಮವು ಸಹ ಅನೇಕ ಸವಾಲುಗಳನ್ನು ಎದುರಿಸುತ್ತವೆ. ಪತ್ರಕರ್ತರು ಸತ್ಯದ ಅನಾವರಣಗೊಳಿಸಲು ತಮ್ಮ ಪ್ರಾಣವನ್ನೇ ಪಣಕಿಡುತ್ತಾರೆ. ಎಷ್ಟೇ ಬೆದರಿಕೆ ಬಂದರೂ ಇದ್ಯಾವುದಕ್ಕೂ ಜಗ್ಗದೆ ಸತ್ಯಾಸತ್ಯತೆಗಳನ್ನು ಜನರಿಗೆ ತಲುಪಿಸುವಂತಹ ಕೆಲಸವನ್ನು ಪತ್ರಿಕೋದ್ಯಮ ಮಾಡುತ್ತಿದೆ. ಹೀಗೆ ಪತ್ರಕರ್ತರ ಸುರಕ್ಷತೆಗಾಗಿ ಧ್ವನಿ ಎತ್ತಲು, ಪತ್ರಿಕೋದ್ಯಮದ ಕೊಡುಗೆಗಳನ್ನು ಸ್ಮರಿಸಲು ಪ್ರತಿವರ್ಷ ಮೇ 02 ರಂದು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ.

ಸತ್ಯ ಸಂಗತಿಗಳನ್ನು ಸಾರ್ವಜನಿಕರಿಗೆ ತಲುಪಿಸುವ ಜವಾಬ್ದಾರಿಯನ್ನು ಹೊಂದಿರುವ ಪತ್ರಿಕೋದ್ಯಮವನ್ನು (Journalism) ಸಂವಿಧಾನದ (constitution) ನಾಲ್ಕನೇ ಅಂಗವೆಂದು ಕರೆಯಲಾಗುತ್ತದೆ. ಪತ್ರಿಕಾ ರಂಗವು ನಮಗೆ ಈ ಜಗತ್ತಿನಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದರ ಸಂಪೂರ್ಣ ಸುದ್ದಿಗಳನ್ನು ಒದಗಿಸುತ್ತದೆ. ಅಷ್ಟೇ ಅಲ್ಲದೆ ಸತ್ಯವನ್ನು ಸಾರ್ವಜನಿಕರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತವೆ. ಸುದ್ದಿ ಕೊಡುವುದಷ್ಟೇ ಅಲ್ಲ ಮುಖ್ಯವಾಗಿ ಪತ್ರಿಕೋದ್ಯವು ಸಾರ್ವಜನಿಕರು ಮತ್ತು ಸರ್ಕಾರದ ನಡುವಿನ ಕೊಂಡಿಯಾಗಿ ಕಾರ್ಯವನ್ನು ನಿರ್ವಹಿಸುತ್ತದೆ. ಆದರೆ ಕೆಲವೊಮ್ಮೆ ಮಾಧ್ಯಮಗಳು ಬೆದರಿಕೆ, ಸೆನ್ಸಾರ್ಶಿಪ್, ಹಿಂಸೆಗಳಂತಹ ಸವಾಲುಗಳನ್ನು ಎದರಿಸುತ್ತವೆ. ಹೀಗಾಗಿ ಪತ್ರಕರ್ತರಿಗೆ ನ್ಯಾಯಮಾರ್ಗದಲ್ಲಿ ತಮ್ಮ ಕರ್ತವ್ಯವವನ್ನು ನಿರ್ವಹಿಸಲು ಪೂರಕ ವಾತಾವರಣವನ್ನು ಕಲ್ಪಿಸಲು, ಮಾಧ್ಯಮದ ಕೊಡುಗೆಗಳನ್ನು ಸ್ಮರಿಸಲು ಮಾಧ್ಯಮ ಸ್ವಾತಂತ್ರ್ಯದ ಮಹತ್ವದ ಬಗ್ಗೆ ಜನರಿಗೆ ತಿಳಿಸಲು ಹಾಗೂ ಪತ್ರಕರ್ತರ ಸುರಕ್ಷತೆಗಾಗಿ ಧ್ವನಿ ಎತ್ತಲು ಪ್ರತಿವರ್ಷ ಮೇ 03 ರಂದು ವಿಶ್ವ ಪತ್ರಿಕಾ ಸ್ವಾತಂತ್ರ್ಯ (World Press Freedom Day) ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ಆಚರಣೆಯ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ.
ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ಇತಿಹಾಸ:
1991 ರಲ್ಲಿ, ಆಫ್ರಿಕನ್ ಪತ್ರಕರ್ತರು ಮೊದಲ ಬಾರಿಗೆ ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಧ್ವನಿ ಎತ್ತಿದರು. ಮೇ 3 ರಂದು, ಈ ಪತ್ರಕರ್ತರು ಪತ್ರಿಕಾ ಸ್ವಾತಂತ್ರ್ಯದ ತತ್ವಗಳ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿದರು, ಇದನ್ನು ವಿಂಡ್‌ಹೋಕ್ ಘೋಷಣೆ ಎಂದೂ ಕರೆಯುತ್ತಾರೆ. ಬಳಿಕ ಪತ್ರಿಕಾ ಸ್ವಾತಂತ್ರ್ಯವನ್ನು ಖಾತರಿಪಡಿಸುವ ಮತ್ತು ಕರ್ತವ್ಯದ ಸಂದರ್ಭದಲ್ಲಿ ಪ್ರಾಣವನ್ನು ಕಳೆದುಕೊಂಡ ಪತ್ರಕರ್ತರನ್ನು ಸ್ಮರಿಸುವ ಮತ್ತು ಗೌರವಿಸುವ ಉದ್ದೇಶದಿಂದ 1991 ರಲ್ಲಿ ಯುನೆಸ್ಕೋದ ಸಾಮಾನ್ಯ ಸಭೆಯ ಶಿಫಾರಸ್ಸಿನ ನಂತರ 1993 ರಲ್ಲಿ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಆಚರಿಸುವ ನಿರ್ಣಯವನ್ನು ಮಾಡಲಾಗಿತು. ನಂತರ 1994 ರಲ್ಲಿ ಮೊದಲ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಇದನ್ನೂ ಓದಿ: ಟ್ಯೂನ ಮೀನು ದಿನವನ್ನು ಆಚರಿಸಲು ಕಾರಣವೇನು? ಈ ಆಚರಣೆಯ ಇತಿಹಾಸ, ಮಹತ್ವ ತಿಳಿಯಿರಿ
ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ಮಹತ್ವ:
ಬೆದರಿಕೆಗಳು, ಹಿಂಸೆ ಮತ್ತು ಸೆನ್ಸಾರ್‌ಶಿಪ್ ಸೇರಿದಂತೆ ಪ್ರಪಂಚದಾದ್ಯಂತ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಪತ್ರಿಕಾ ಸ್ವಾತಂತ್ರ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಅಂತರರಾಷ್ಟ್ರೀಯ ಪತ್ರಿಕಾ ಸ್ವಾತಂತ್ರ್ಯ ದಿನದ ಉದ್ದೇಶವಾಗಿದೆ.
ಪತ್ರಕರ್ತರು ಅಪಾಯಕ್ಕೆ ಸಿಲುಕುವ ಬಗ್ಗೆ ಹಾಗೂ ಕರ್ತವ್ಯದ ವೇಳೆ ಪ್ರಾಣವನ್ನೇ ಕಳೆದುಕೊಂಡ ಪತ್ರಕರ್ತರ ಬಗ್ಗೆ ಕೇಳಿದ್ದೇವೆ. ಹೀಗೆ ಪ್ರಾಣ ಕಳೆದುಕೊಂಡ ಪತ್ರಕರ್ತರಿಗೆ ಗೌರವ ಸಲ್ಲಿಸಲು, ಪತ್ರಿಕಾ ಸ್ವಾತಂತ್ರ್ಯದ ತತ್ವ ಮತ್ತು ಮಹತ್ವಗಳ ಬಗ್ಗೆ ತಿಳಿಸಲು, ಮಾಧ್ಯಮಗಳ ಮಹತ್ವ ಮತ್ತು ಪತ್ರಿಕೋದ್ಯಮ ವೃತ್ತಿಯ ಅಪಾಯಗಳ ಬಗ್ಗೆ ಜನರಿಗೆ ತಿಳಿಸಲು ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ. ಹೀಗೆ ಒಟ್ಟಾರೆಯಾಗಿ ಅನೇಕ ಬೆದರಿಕೆಗಳನ್ನು ಎದುರಿಸುತ್ತಿದ್ದರೂ ಸತ್ಯಕ್ಕಾಗಿ ಹೋರಾಡುತ್ತಿರುವ ಪತ್ರಕರ್ತರು ಮತ್ತು ಸುದ್ದಿ ಸಂಸ್ಥೆಗಳಿಗೆ ಈ ದಿನವನ್ನು ಸಮರ್ಪಿಸಲಾಗಿದೆ.
1997 ರಿಂದ ಪ್ರತಿ ವರ್ಷ ಮೇ 3 ರಂದು, ಪತ್ರಿಕಾ ಸ್ವಾತಂತ್ರ್ಯ ದಿನದಂದು, ‘ಗಿಲ್ಲೆರ್ಮೊ ಕ್ಯಾನೊ ವರ್ಲ್ಡ್ ಪ್ರೆಸ್ ಫ್ರೀಡಂ ಪ್ರಶಸ್ತಿ’ಯನ್ನು ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಗಮನಾರ್ಹ ಕೆಲಸ ಮಾಡುತ್ತಿರುವ ವ್ಯಕ್ತಿ ಅಥವಾ ಸಂಸ್ಥೆಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ