Awards : ‘ಬೇಡೋಜ’ರು ಹೆಚ್ಚಿದಂತೆಲ್ಲಾ ‘ನೀಡೋಜ’ರೂ ಹೆಚ್ಚುತ್ತಿರುವುದು ಗುಟ್ಟಾಗಿಯೇನೂ ಉಳಿದಿಲ್ಲ ಈಗ
Literature : ‘ಹೆಣ್ಣುಮಕ್ಕಳು ಸಾಹಿತಿಗಳಾದಲ್ಲಿ ಪುರಸ್ಕಾರ-ಸ್ಥಾನಮಾನಗಳ ಆಮಿಷವೊಡ್ಡಿ ಬೇರೆಬೇರೆ ರೀತಿಯ ಶೋಷಣೆಗಳೂ, ದೌರ್ಜನ್ಯಗಳೂ, ಬ್ಲ್ಯಾಕ್ಮೇಲ್ಗಳೂ, ಉಂಡೆನಾಮಗಳೂ, ಇತರೇ ಕಿರುಕುಳಗಳು ಕೆಲವು ಪ್ರತಿಷ್ಠಿತರಿಂದ, ಅಧಿಕಾರಸ್ಥರಿಂದ ನಡೆಯುವುದು ಸಾರಸ್ವತಲೋಕ ಎಷ್ಟು ಅಧೋಗತಿಗಿಳಿದಿದೆಯೆಂಬುದರ ಕತೆಯನ್ನಷ್ಟೇ ಹೇಳುವುದಿಲ್ಲ: ಬದಲಾಗಿ ಭವಿಷ್ಯದ ಕೆಟ್ಟ ದಿನಗಳನ್ನೂ ದುರದೃಷ್ಟ ರೀತಿಯಲ್ಲಿ ಸೂಚಿಸುತ್ತವೆ.’ ದಿನೇಶ್ ಕುಕ್ಕುಜಡ್ಕ
Literature : ಒಬ್ಬ ಹಿರಿಯ ಸಾಹಿತಿ ಗೆಳೆಯರೊಬ್ಬರಲ್ಲಿ ಬಹಿರಂಗವಾಗಿಯೇ ಹೇಳುತ್ತಿದ್ದರಂತೆ! “ನೋಡಿ ಪ್ರಶಸ್ತಿ ಗೆಲ್ಲುವುದು ಅಂಥಾ ಬಹ್ಮವಿದ್ಯೆಯೇನೂ ಅಲ್ಲ. ಪುಸ್ತಕ ಬಂದಾದ ಮೇಲೆ ಕನ್ನಡದ ಹಿರಿಯ-ಪ್ರತಿಷ್ಠಿತ-ಪ್ರಭಾವೀ ಟಾಪ್ ಮೋಸ್ಟ್ ಹತ್ತಿಪ್ಪತ್ತು ಪ್ರಭೃತಿಗಳಿಗೆ ಉಚಿತವಾಗಿ ಪುಸ್ತಕ ಕಳಿಸಿಕೊಡೋದು. ಆ ಬಳಿಕ ಅವರ ಅಭಿಪ್ರಾಯ ಕೋರಿ ಅನುನಯದ ಪತ್ರವೊಂದನ್ನು ಬರೆಯುವುದು. ಅವರಿಂದ ಪ್ರತಿಕ್ರಿಯೆ ಬರುತ್ತದೋ ಬಿಡುತ್ತದೋ; ಒಂದಲ್ಲ ಒಂದು ರೀತಿಯಲ್ಲಿ ಅವರ ನಿರಂತರ ಸಂಪರ್ಕ ಸಾಧಿಸುವುದು! ನೋಡಿ… ಮುಂದೆ ಪ್ರತಿಷ್ಠಿತ ಪ್ರಶಸ್ತಿಯ ಆಯ್ಕೆ ಕಮಿಟಿಯಲ್ಲಿ ಜ್ಯೂರಿಗಳಾಗಿ ಇರುವವರು ಆ ಇಪ್ಪತ್ತು ಮಂದಿಯಲ್ಲಿ ಯಾರಾದರೂ ನಾಲ್ಕೈದು ಮಂದಿಯೇ ಆಗಿರುತ್ತಾರೆ. ಸಹಜವಾಗಿಯೇ ನಿಮಗೆ ಅಂಕಗಳು ಬೀಳುತ್ತವೋ ಇಲ್ಲವೋ…?” ಲಜ್ಜೆಗೆಟ್ಟ ನಡೆವಳಿಕೆಗಳು ಹೀಗೂ ಇರುತ್ತವೆ! ದಿನೇಶ್ ಕುಕ್ಕುಜಡ್ಕ, ವ್ಯಂಗ್ಯಚಿತ್ರಕಲಾವಿದರು
*
ಒಮ್ಮೆ ನಮ್ಮೂರ ಸಾಹಿತಿಯೊಬ್ಬರಿಗೆ ಪತ್ರವೊಂದು ಬಂದಿತ್ತು. “ನೀವು ನಮ್ಮ ಪ್ರತಿಷ್ಠಾನ ಕೊಡಮಾಡುವ ಇಂಥ ಪ್ರಶಸ್ತಿಯೊಂದಕ್ಕೆ ಆಯ್ಕೆಯಾಗಿದ್ದೀರಿ. ನಮ್ಮ ಪ್ರತಿಷ್ಠಾನವು ಸ್ಥಾಪಿಸಿರುವ ದತ್ತಿನಿಧಿಗೆ ಇಷ್ಟು ಸಾವಿರಗಳನ್ನು ತಾವು ಭರಿಸಬೇಕು. ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಖರ್ಚಿನ ಬಾಬ್ತು ತಗಲುವ ಮೊತ್ತ ರೂ…. ಇಷ್ಟನ್ನು ಭರಿಸಬೇಕೆಂದು ಕೋರಿಕೆ…”
ತೀರಾ ಇತ್ತೀಚೆಗೆ ಗ್ರಾಮಮಟ್ಟದ ಒಂದೆರಡು ಸಂಘಟನೆಗಳಲ್ಲೂ, ಮೂರ್ನಾಲ್ಕು ತಾಲೂಕು ಮಟ್ಟದ ಸಂಘಟನೆಗಳಲ್ಲೂ ವಿವಿಧ ಹಂತದ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ‘ಚುರುಕು ವ್ಯಕ್ತಿತ್ವದ’ ಲೋಕಲ್ ವ್ಯಕ್ತಿಯೋರ್ವರು ಅದೆಲ್ಲೋ ದೂರದೂರಿನ ವಿಶ್ವವಿದ್ಯಾನಿಲಯವೊಂದರ ‘ಗೌರವ ಡಾಕ್ಟರೇಟ್’ ಪ್ರಶಸ್ತಿಗೆ ಭಾಜನರಾದರು.
‘ಬೇಡೋಜ’ರು ಹೆಚ್ಚಿದಂತೆಲ್ಲಾ ‘ನೀಡೋಜ’ರೂ ಹೆಚ್ಚುತ್ತಿರುವುದು ಗುಟ್ಟಾಗಿಯೇನೂ ಉಳಿದಿಲ್ಲ ಈಗ. ಡಾಕ್ಟರೇಟುಗಳೂ- ಅದರ ‘ರೇಟು’ಗಳೂ ಎಲ್ಲಿ ಎಷ್ಟೆಂಬುದು ಜನಜನಿತ!
ಒಬ್ಬ ಹಿರಿಯ ಸಾಹಿತಿ ಗೆಳೆಯರೊಬ್ಬರಲ್ಲಿ ಬಹಿರಂಗವಾಗಿಯೇ ಹೇಳುತ್ತಿದ್ದರಂತೆ! “ನೋಡಿ ಪ್ರಶಸ್ತಿ ಗೆಲ್ಲುವುದು ಅಂಥಾ ಬಹ್ಮವಿದ್ಯೆಯೇನೂ ಅಲ್ಲ. ಪುಸ್ತಕ ಬಂದಾದ ಮೇಲೆ ಕನ್ನಡದ ಹಿರಿಯ-ಪ್ರತಿಷ್ಠಿತ-ಪ್ರಭಾವೀ ಟಾಪ್ ಮೋಸ್ಟ್ ಹತ್ತಿಪ್ಪತ್ತು ಪ್ರಭೃತಿಗಳಿಗೆ ಉಚಿತವಾಗಿ ಪುಸ್ತಕ ಕಳಿಸಿಕೊಡೋದು. ಆ ಬಳಿಕ ಅವರ ಅಭಿಪ್ರಾಯ ಕೋರಿ ಅನುನಯದ ಪತ್ರವೊಂದನ್ನು ಬರೆಯುವುದು. ಅವರಿಂದ ಪ್ರತಿಕ್ರಿಯೆ ಬರುತ್ತದೋ ಬಿಡುತ್ತದೋ; ಒಂದಲ್ಲ ಒಂದು ರೀತಿಯಲ್ಲಿ ಅವರ ನಿರಂತರ ಸಂಪರ್ಕ ಸಾಧಿಸುವುದು! ನೋಡಿ… ಮುಂದೆ ಪ್ರತಿಷ್ಠಿತ ಪ್ರಶಸ್ತಿಯ ಆಯ್ಕೆ ಕಮಿಟಿಯಲ್ಲಿ ಜ್ಯೂರಿಗಳಾಗಿ ಇರುವವರು ಆ ಇಪ್ಪತ್ತು ಮಂದಿಯಲ್ಲಿ ಯಾರಾದರೂ ನಾಲ್ಕೈದು ಮಂದಿಯೇ ಆಗಿರುತ್ತಾರೆ. ಸಹಜವಾಗಿಯೇ ನಿಮಗೆ ಅಂಕಗಳು ಬೀಳುತ್ತವೋ ಇಲ್ಲವೋ…?” ಲಜ್ಜೆಗೆಟ್ಟ ನಡವಳಿಕೆಗಳು ಹೀಗೂ ಇರುತ್ತವೆ!
ದೊಡ್ಡದೊಡ್ಡ ಪ್ರಶಸ್ತಿಗಳಿಂದ ಹಿಡಿದು ಸಣ್ಣಪುಟ್ಟ ದತ್ತಿನಿಧಿ ಪ್ರಶಸ್ತಿಗಳವರೆಗೂ ಆಯ್ಕೆ ಸಮಿತಿಯಲ್ಲಿರುವವರ ವೈಯಕ್ತಿಕ ಪರಿಚಯಗಳೂ, ಸಂಬಂಧಗಳೂ, ಜಾತಿ ಇತ್ಯಾದಿ ವಿಚಾರಗಳೂ ಕೆಲಸ ಮಾಡುತ್ತಿರುವುದನ್ನು ‘ಆಫ್ ದ ರೆಕಾರ್ಡ್ ‘ಮಾತುಕತೆಗಳಲ್ಲಿ ಅವರಿವರು ಮಾತಾಡುವುದನ್ನೂ ಕೇಳಿಯೇ ಇರುತ್ತೇವೆ. ಹಾಗೆಂದು ಎಲ್ಲಾ ಕಡೆಯೂ ಇದೇ ಮಾನದಂಡ ಕೆಲಸ ಮಾಡುತ್ತದೆ ಎಂಬುದೂ ಅಲ್ಲ. ಉದಾಹರಣೆಗೆ, ರಾಜ್ಯಸರಕಾರ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿಗಳಲ್ಲಿ ಶೇ.25-30 ರಷ್ಟು ನಿಜವಾದ ಸಾಧಕರಿಗೇ ಸಲ್ಲುತ್ತದೆ ಎಂಬುದೂ ನಿಜವೇ. ಆದರೆ ಉಳಿದ ಶೇಖಡಾವಾರು ಯಾರಿಗೆ, ಯಾವ ಪಕ್ಷದ ಹಿಂಬಾಲಕರಿಗೆ, ಯಾವ ಜಾತಿಯ ಹಿಂಬಾಲಕರಿಗೆ ಎಷ್ಟೆಷ್ಟು ಸಂದಿವೆ ಎಂಬ ಲೆಕ್ಕಾಚಾರಗಳು ನಡೆಯುತ್ತಿರುವುದೂ ಕೂಡಾ ಗುಟ್ಟಾಗಿ ಉಳಿದಿಲ್ಲ ಈಗ.
ಪ್ರಶಸ್ತಿಗಾಗಿ ಬಯೋ ವಿವರಗಳನ್ನು ಕಳಿಸಿ ಸ್ವಯಂ ಅರ್ಜಿ ಹಾಕಿಕೊಳ್ಳುವ ವ್ಯವಸ್ಥೆಯೇ ನಿಜವಾದ ಸಾಧಕರಿಗೆ ಅತ್ಯಂತ ಮುಜುಗರ ತರುವ ವಿಚಾರ. ಮತ್ತು ಆ ಕಾರಣಕ್ಕಾಗಿಯೇ ಹಲವು ನಿಜಸಾಧಕರು ಇನ್ನೂ ತೆರೆಮರೆಯಲ್ಲೇ ಉಳಿದಿರುವುದರ ಹಿಂದಿನ ನಿಜ ಕಾರಣ ಇರಬಹುದೆನ್ನಿಸುತ್ತದೆ ನನಗೆ. ಮೊದಲನೆಯದಾಗಿ ಈ ಒಪ್ಪಿತ ‘ಅರ್ಜಿ ವ್ಯವಸ್ಥೆ’ಯೇ ಅಷ್ಟು ಸಮಂಜಸವಲ್ಲದ್ದು. ಅದಾದ ಬಳಿಕ ವಿವಿಧ ಹಂತಗಳಲ್ಲಿ ನಡೆಯುವ ಲಾಭಿಗಳು ನಿಜವಾದ ಸಾಧಕರಿಂದ ಪ್ರಶಸ್ತಿ ಗೌರವಗಳನ್ನು ದೂರವೇ ಇರಿಸಿಬಿಡುತ್ತದೆ. ಈ ಕಾರಣಕ್ಕಾಗಿಯೇ ಎಲ್ಲೋ ಅಪರೂಪಕ್ಕೊಮ್ಮೊಮ್ಮೆ ಶ್ರೀಯುತ ಹರೇಕಳ ಹಾಜಬ್ಬರಂಥವರಿಗೆ, ಸಾಲುಮರದ ತಿಮ್ಮಕ್ಕರಂಥವರಿಗೆ, ಮಂಜಮ್ಮ ಜೋಗತಿಯಂಥವರಿಗೆ ಪ್ರಶಸ್ತಿ ಬಂದಾಗ ಸಹೃದಯ ಮನಸ್ಸುಗಳು ಹಿಗ್ಗಿ ನಲಿಯುವುದು. ಏಕೆಂದರೆ ಅಸಹಜವೇ ಸಹಜವಾಗಿಬಿಡುವ ದುರಂತ ಕಾಲದಲ್ಲಿ, ಕೆಲವೊಮ್ಮೆ ಅಚಾನಕ್ಕಾಗಿ ಘಟಿಸುವ ‘ಸಹಜವೆನ್ನಿಸುವ’ ಬೆಳವಣಿಗೆಗಳು ಸಾರ್ವಜನಿಕರ ಸಂಭ್ರಮದ ನಿಜಕಾರಣವಾಗಿ ಬಿಡುತ್ತದೆ!
ಸಾಹಿತ್ಯ ಪ್ರಪಂಚ ಇವತ್ತು ಯಾವುದೇ ರಾಜ್ಯದ ರಾಜಕೀಯ ಕ್ಷೇತ್ರಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಅದರಲ್ಲೂ ಇಂಥ ಪ್ರಶಸ್ತಿ ಪುರಸ್ಕಾರಗಳ ವಿಚಾರ ಬಂದಾಗಂತೂ ಬಹಿರಂಗವಾಗಿ ಹೇಳಲಾರದಷ್ಟು ಮುಜುಗರದ ಸಂಗತಿಗಳೂ ಇವೆ ಇಲ್ಲಿ! ನಾವು ಅತೀ ಹೆಚ್ಚು ಗೌರವಿಸುವ ಅದೆಷ್ಟೋ ಮಂದಿ ಸಾಹಿತಿ ಕಲಾವಿದರು ಒಂದು ಸ್ಥಾನಮಾನಕ್ಕಾಗಿ ನಡೆಸುವ ದೈನೇಸಿ ಲಾಬಿಗಳು ನಿಜಕ್ಕೂ ಖೇದಕರ ಬೆಳವಣಿಗೆ.
ಈ ವಿಪರ್ಯಾಸದ ಬೆಳವಣಿಗೆಗೆ ಇನ್ನೂ ಕರಾಳ ಮುಖಗಳಿವೆ. ಹೆಣ್ಣುಮಕ್ಕಳು ಸಾಹಿತಿಗಳಾದಲ್ಲಿ ಪುರಸ್ಕಾರ-ಸ್ಥಾನಮಾನಗಳ ಆಮಿಷವೊಡ್ಡಿ ಬೇರೆಬೇರೆ ರೀತಿಯ ಶೋಷಣೆಗಳೂ, ದೌರ್ಜನ್ಯಗಳೂ, ಬ್ಲ್ಯಾಕ್ಮೇಲ್ಗಳೂ, ಉಂಡೆನಾಮಗಳೂ, ಇತರೇ ಕಿರುಕುಳಗಳು ಕೆಲವು ಪ್ರತಿಷ್ಠಿತರಿಂದ ಹಾಗೂ ಅಧಿಕಾರಸ್ಥರಿಂದ ನಡೆಯುವುದು ಸಾರಸ್ವತಲೋಕ ಎಷ್ಟು ಅಧೋಗತಿಗಿಳಿದಿದೆಯೆಂಬುದರ ಕತೆಯನ್ನಷ್ಟೇ ಹೇಳುವುದಿಲ್ಲ: ಬದಲಾಗಿ ಭವಿಷ್ಯದ ಕೆಟ್ಟ ದಿನಗಳನ್ನೂ ದುರದೃಷ್ಟ ರೀತಿಯಲ್ಲಿ ಸೂಚಿಸುತ್ತವೆ.
ಇಷ್ಟಾಗಿಯೂ ಕೆಲವೊಂದೆಡೆ ಕೆಲವಾರು ಸಮ್ಮಾನಗಳು ಅರ್ಹರಿಗಷ್ಟೇ ದೊರಕುತ್ತಿರುವುದನ್ನು ಕೂಡಾ ಅಲ್ಲಗಳೆಯಬಾರದು. ಮತ್ತು ಅದು ಹಾಗಿರುವುದೇ ಸಹಜವಾದದ್ದು. ಎಲ್ಲೆಡೆಯೂ ಹೀಗೇ ಸಹಜವಾಗಿಯೇ ಇರುತ್ತಿದ್ದರೆ ನಾವು ಈ ಕುರಿತು ಇಷ್ಟು ತಲೆಕೆಡಿಸಿಕೊಳ್ಳುವ ಅಗತ್ಯವೇ ಇರುತ್ತಿರಲಿಲ್ಲ ಅಲ್ಲವೇ?
*
ನಿರೀಕ್ಷಿಸಿ ವಿಮರ್ಶಕ ಸಿ. ಎಸ್. ಭೀಮರಾಯ ಅವರ ಪ್ರತಿಕ್ರಿಯೆ
ನಿಮ್ಮ ಪ್ರತಿಕ್ರಿಯೆಗಳಿಗೂ ಸ್ವಾಗತ : tv9kannadadigital@gmail.com
ಈ ವಿಷಯಕ್ಕೆ ಸಂಬಂಧಿಸಿದ ಪ್ರತಿಕ್ರಿಯೆ : Awards : ಪ್ರಶಸ್ತಿ ಎಂಬ ‘ಕೀರ್ತಿಶನಿ’ ಮತ್ತು ‘ಯಶೋಲಕ್ಷ್ಮಿ’ಯ ಕುರಿತು ಡಾ. ಎಚ್. ಎಸ್. ರಾಘವೇಂದ್ರ ರಾವ್
Published On - 4:33 pm, Sun, 5 December 21