Rain : ‘ಬಿತ್ತೊಂದು ಹನಿ, ಉಲಿದಂತೆ ಅವನ ಧ್ವನಿ ರೊಯ್ಯರೊಯ್ಯನೆ ಪಾರಿವಾಳದ ದಾರಿ’

ಅಮ್ಮ ಗದರಿಸಿದರೂ ಅವನ ಅಪ್ಪುಗೆಯಿಂದ ಹೊರಬರಲು ಹಟ ಮಾಡುತ್ತಿದ್ದೆ. ಅವನ ಅಪ್ಪುಗೆಯ ಬಿಗಿ ಜೋರಾದಷ್ಟು ಜಗದ ಯಾವುದೇ ಢೋಲು, ಧಿಮಾಕು ಕೇಳದೇ ಬರೀ ಅವನದೇ ಗುನುಗು ಅಹಾ… ಕಿವಿಗಿಡುವ ಅವನ ಚುಂಬನ. ಮುಂಗುರುಳ ನರ್ತನ. ಬಾಹುಗಳ ಬಂಧನ. ಎಷ್ಟು ಹೊತ್ತು ಬೇಕಾದರೂ ಅವನ ತೋಳಬಂಧಿಯಲ್ಲಿ ಜೋಕಾಲಿಯಾಡಿ ತೂಗುವ ಮನಸ್ಸು.

Rain : ‘ಬಿತ್ತೊಂದು ಹನಿ, ಉಲಿದಂತೆ ಅವನ ಧ್ವನಿ ರೊಯ್ಯರೊಯ್ಯನೆ ಪಾರಿವಾಳದ ದಾರಿ’
ಕವಿಗಳಾದ ನಂದಿನಿ ಹೆದ್ದುರ್ಗ ಮತ್ತು ವಿಶಾಲಾ ಆರಾಧ್ಯ
Follow us
|

Updated on:Aug 14, 2021 | 5:49 PM

ಟಿವಿ9 ಕನ್ನಡ ಡಿಜಿಟಲ್ ; ಮಳೆ ಬಂತು ಮಳೆ (Rain) ಚಿತ್ತಬಂದಂತೆ ಸುರಿಯುತ್ತಿರುವ ಮಳೆಗೆ ಸೃಜನಶೀಲ ಆವರಣ ತೊಡಿಸುತ್ತಾರೆ ಅಕ್ಷರಪ್ರಿಯರು. ಅವರವರ ಸ್ಮೃತಿಗೆ ಲಹರಿಗೆ ಧಾರೆಗೆ ಮೌನಕ್ಕೆ ಮುರಿಯುವಿಕೆಗೆ ‘ಮಳೆ’ ಇಲ್ಲಿ ಯಾವ ರೂಪದಲ್ಲಿಯೂ ಹರಿಯುವ ಸಾಧ್ಯತೆ ಇರುತ್ತದೆ. ಅಸ್ಮಿತೆ, ಒಳಸೆಲೆ, ಬ್ರೂನೋ ದಿ ಡಾರ್ಲಿಂಗ್ ಕೃತಿಗಳನ್ನು ಪ್ರಕಟಿಸಿರುವ ಹಾಸನ ಜಿಲ್ಲೆಯ ಹೆದ್ದುರ್ಗದಲ್ಲಿ ವಾಸವಾಗಿರುವ ಕವಿ ನಂದಿನಿ ಹೆದ್ದುರ್ಗ ಅವರು 2020ರಲ್ಲಿ ಬರೆದ ‘ಲಯವಿಲಯ’ ಕವಿತೆ ಕಳಿಸಿದ್ದಾರೆ. ‘ಗೊಂಬೆಗೊಂದು ಚೀಲ’ ಕವಿತಾ ಸಂಕಲನ ಪ್ರಕಟಿಸಿರುವ ಲೇಖಕಿ ವಿಶಾಲಾ ಆರಾಧ್ಯ ಮಳೆಗೆಳಯನಿಗೊಂದು ಪತ್ರ ಬರೆದಿದ್ದಾರೆ. 

*

ಲಯವಿಲಯ

ಬಾನ ಬಯಲೆಲ್ಲಾ ಇದ್ದಿಲಿದ್ದಿಲ ಗಡ್ಡೆ ಕಡಲನ್ನೆ ಅಡಗಿಸಿದೆ ಅಲ್ಲಿ ದೊಡ್ಡ ನೀರ್ಗುಡ್ಡೆ ಎಲ್ಲಾ ಎಲ್ಲೆಗಳಿಂದ ಮೆಲ್ಲ ಮೆಲ್ಲನೆ ಎಲರು. ಮುಟ್ಟಿ ಮುತ್ತಿಟ್ಟು ಮರದ ತುದಿ ಚಿಗುರು

ಎಳ್ಳು ಹೂವಿನ ಬಳ್ಳಿ ಮೈಯ ತುಂಬೆಲ್ಲಾ ಹಳದಿ ಬೊಟ್ಟಿನ ವಲ್ಲಿ. ಹಾರುವ ಚಿಟ್ಟೆ, ಹೀರುವ ಜೇನು ಫಳಗುಡುವ ಗರಿಕೆ ಅದಕೆ ಬೆಳಕಿನದೇ ರವಿಕೆ ಅಂಗಳದಲಿ ಆಡುತಿವೆ ಭೂಮಿ ತೂಗುವ ಜೋಡಿ ಹಕ್ಕಿ ಬಿತ್ತೊಂದು ಹನಿ, ಉಲಿದಂತೆ ಅವನ ಧ್ವನಿ ರೊಯ್ಯರೊಯ್ಯನೆ ಪಾರಿವಾಳದ ದಾರಿ ಗುಬ್ಬಕ್ಕಿಯೆರಡು ಹಾರಿ ಮೋಡ ಕೂಡಿದ್ದಕ್ಕೆ ಕವ್ಹೋ ಕವ್ಹೋ ನಲ್ಲೆಯರು ಅಲ್ಲೆಲ್ಲೊ ಕೂಗಿ ಜಗದ ಚಿತ್ತಾರಕೆ ಸೋತು ನನ್ನ ಪುರುಸೊತ್ತು.

ಮೋಡ ಚಿತ್ರಿಸಿ,ಮುಗಿಲ ಕ್ಲಿಕ್ಕಿಸಿ, ಹಕ್ಕಿಗಿಷ್ಟು ಅಕ್ಕಿ ಚೆಲ್ಲಿ… ಹೆಸರಿಗೇ ಓದು ಸುತ್ತೆಲ್ಲಾ ಕಣ್ಕಟ್ಟು ಕತ್ತಲು ದಟ್ಟೈಸುತಿದೆ ಎತ್ತಲೆತ್ತಲೂ ಸಣ್ಣ ಮಿಂಚು,ಪಿಸುಗುಟ್ಟುತಿದೆ ನಭದ ಒಡಲು

ಧೋ ಧೋ ಧೋ ಧೊ ಧೋ ಧೋ ಎನ್ನುತ್ತಿದೆ ಎಲ್ಲೊ… ಢಿಕ್ಕಿ..ಢೀ..ಢಿಕ್ಕಿ..ಢಿಕ್ಕಿ…ಢಿಕ್ಕಿ ಅಲ್ಲಿ..ಇಲ್ಲಿ..ಎಲ್ಲಿ ಅದೋ ಆ ಅಲ್ಲಿ ಆ ಬಯಲ ದೂರದಲ್ಲಿ ಗಡಚಿಕ್ಕುತ್ತಿದೆ ಅವುಡು,ಮುಗಿಲಲ್ಲವದು ಮಳೆಯ ಸದ್ದು

ಭರ್ರಭರ್ರನೆ ತಿರ್ರತಿರ್ರನೆ ಹುಯ್ಯುತಿದೆ ಗಾಳಿ ರಣೋದ್ವೇಗ ದಾಳಿ ಮರ ಮುರಿವ ಹಾಗೆ,ಸೂರು ಹಾರುವ ಹಾಗೆ ಆಕಾಶದ ಹಕ್ಕಿ ನೆಲಕೆ ಕುಕ್ಕುವ ಹಾಗೆ ಹೆಬ್ಬುಲಿ ಹಸಿದು ತೋಳಕ್ಕೆ ಜಿಗಿದ ಹಾಗೆ ಜಗಕೆ ಸೊಕ್ಕಿಳಿವ ಹಾಗೆ, ಉಗ್ಘಡಿಸೊ ಮಳೆಯಲ್ಲೂ ಬೆವರಿಳಿವ ಹಾಗೆ.. ಮೊಗದ ತುಂಬಾ ನೀರಿಳಿವ ಹಾಗೆ.

ಬೆಚ್ಚಿಬಿದ್ದೆ ಒಮ್ಮೆಗೆ ಕೇಳಿರಲಿಲ್ಲ ಈ ಹಿಂದೆ ಎಂದೂ ಹೀಗೆ ಗವ್ವಗವ್ವೆಂದಿತು ಮನೆಯ ಒಳಹೊರಗು ಅವ್ವಾ..ಚೀರುತ್ತ ಬಂದೆ. ಹಾರಿತ್ತು ಕುರ್ಚಿ ,ಅಲ್ಲಿಟ್ಟ ಛತ್ರಿ ಅತ್ತಿಂದ ಇತ್ತಾ ಇತ್ತಿಂದ ಅತ್ತಾ ಎತ್ತೆತ್ತ ಸುತ್ತಮುತ್ತಾ ಎದೆಯೆಲ್ಲಾ ದಿಗಿಲು, ಭಳಿಭಳಿರೆ… ಭಳಿಭಳಿರೆ ಕೋರೈಸೊ ಮುಗಿಲು

ಮುನ್ನ ಮುರಿಯಿತು ಮರದ ಹರೆ ಆಮೇಲೆ ಮರವೇ…! ಹಾರಿದವು ಹೆಂಚು, ಏನಿತ್ತೊ ಸಂಚು? ಎಳ್ಳುಹೂವಿನ ಬಳ್ಳಿ ಸೂರು ನೀರಿನ ತೊರೆಯ ಪ್ರವಾಹದಲ್ಲಿ

ಬಾನ ದಾರಿ, ಬಯಲ ದಾರಿ, ನೆಲದ ದಾರಿ ಎದೆಯ ದಾರಿ, ಕಣ್ಣ ದಾರಿ ಧಾರಾಕಾರ ಧಾರೆ ಧಾರೆ ಧಾರೆ… ಎದ್ದಂತೆ ಹೆದ್ದೆರೆ ಅಮ್ಮಾ…ಅವ್ವಾ…ಅಯ್ಯೋ… ಇದು ಇದುವೆ ಇದುವೆ ಪ್ರಳಯ! ಎಲ್ಲವೂ‌ ಲಯ ವಿಲಯ

ಮಳೆದಾರ ಹರಿವ ಮೊದಲೇ ಊರ ಕೊನೆಯಿಂದ ಕೇಳುತಿದೆ ಮೂರು ಸುತ್ತಿನ ಧಡಾಕಿ… ಸೂತಕದ ತೋಪು ಅಂಗಳದಲಿ ಒಂಟಿಚಪ್ಪಲಿಯ ಆಕ್ರಂದನ ರಣರಣರಣ… ಭಣಭಣಭಣ ಮ…ರ…ಣ.

ನೆನೆಯದ ಪುಟ್ಟ ಹಕ್ಕಿಯೊಂದು ಚಿಂವ್ಗುಟ್ಟಿ ಮೆಟ್ಟಿಲು ಹತ್ತಿ, ಉಳಿದಿದ್ದ ಅಕ್ಕಿ ಹೆಕ್ಕಿ!

*

rain series

ಸೌಜನ್ಯ : ಅಂಜರ್ಜಾಲ

ಮಳೆಗೆಳೆಯನಿಗೊಂದು ಪತ್ರ

ನಾವು ಅತಿಯಾಗಿ ಪ್ರೀತಿಸುವ ಯಾವುದೇ ವಸ್ತುವಾಗಲಿ, ವ್ಯಕ್ತಿಯನ್ನಾಗಲಿ ‘ತುಂಬಾ ಹಚ್ಚಿಕೊಳ್ಳಬೇಡ’ ಎಂದು ತಂದೆ ತಾಯಿ ಮತ್ತು ಅರಿತವರು ಹೇಳುತ್ತಲೇ ಇರುತ್ತಾರೆ. ಹೌದಲ್ವಾ? ನಾನು ಅವನು ಬಂದೊಡನೆ ಎಷ್ಟು ಪುಳಕಿತಳಾಗುತ್ತಿದ್ದೆ. ಅಪ್ಪ ಮನೆಯಲ್ಲಿ ಇಲ್ಲದೆ ಹೊರಗಡೆ ಹೋಗಿದ್ದಾಗ ಅವನು ಬಂದರಂತೂ ಅವನ ಆಗಮನಕ್ಕೆ ಮೈ ಜುಂ ಎನ್ನುತ್ತಿತ್ತು. ಓಡಿ ಹೋಗಿ ಅವನನ್ನು ಅಂಗಳದಲ್ಲಿಯೇ ಅಪ್ಪಿ ಮುದ್ದಾಡುತ್ತಿದ್ದೆ. ಇಲ್ಲಾ ಅವನೇ ಅಪ್ಪಿ ಮೈಯೆಲ್ಲಾ ಮುತ್ತಿಕ್ಕಿ ತಂಪಲ್ಲೂ ಬಿಸಿಯೇರಿಸುತ್ತಿದ್ದ! ಅಮ್ಮ ಗದರಿಸಿದರೂ ಅವನ ಅಪ್ಪುಗೆಯಿಂದ ಹೊರಬರಲು ಹಟ ಮಾಡುತ್ತಿದ್ದೆ. ಅವನ ಅಪ್ಪುಗೆಯ ಬಿಗಿ ಜೋರಾದಷ್ಟು ಜಗದ ಯಾವುದೇ ಢೋಲು, ಧಿಮಾಕು ಕೇಳದೇ ಬರೀ ಅವನದೇ ಗುನುಗು ಅಹಾ… ಕಿವಿಗಿಡುವ ಅವನ ಚುಂಬನ. ಮುಂಗುರುಳ ನರ್ತನ. ಬಾಹುಗಳ ಬಂಧನ. ಎಷ್ಟು ಹೊತ್ತು ಬೇಕಾದರೂ ಅವನ ತೋಳಬಂದಿಯಲ್ಲಿ ಜೋಕಾಲಿಯಾಡಿ ತೂಗುವ ಮನಸ್ಸು. ಒಳಗಿದ್ದ ವಿರಹದ ಕೊಳೆಯೆಲ್ಲಾ ಕೊಚ್ಚಿ ಹೋಗುವಷ್ಟು ಹೊತ್ತು ಅವನೊಡನಿದ್ದರೆ ಸಮಾಧಾನ. ಬಂದವನು ಬಂದಂತೆ ಹೋಗುತ್ತಿದ್ದ. ಹೋಗುವಾಗ ಮತ್ತೆ ಬರುವ ಭರವಸೆ ಇತ್ತೇ ಹೋಗುತ್ತಿದ್ದ. ಅವನು ಬಂದು ಹೋದ ನಂತರ ನನ್ನಲ್ಲಾಗುತ್ತಿದ್ದ ಬದಲಾವಣೆ ಅಪ್ಪ ಅಮ್ಮ ಇಬ್ಬರಿಗೂ ನನ್ನ ದೇಹದ ಲಕ್ಷಣಗಳ ಮೂಲಕ ಕಂಡುಬಿಡುತ್ತಿತ್ತು. ಮೈಯೆಲ್ಲಾ ಬಿಸಿಯಾಗಿ, ಮೂಗೆಲ್ಲಾ ಸುರುಸುರು ಸೋರಿ, ಕೊಹ್.. ಕೊಹ್.. ಕೆಮ್ಮಿದರೆ ಅಮ್ಮ ಆತಂಡಗೊಂಡು ಹಣೆ ಮುಟ್ಟಿ ನೋಡಿ ಗುಳಿಗೆ ಸದ್ದಿಲ್ಲದೆ ಕೊಟ್ಟು ಹೋಗುತ್ತಿದ್ದಳು. ಅಪ್ಪ ಮಳೆಯಲ್ಲೆ ನೆಂದೆಯೇನು? ಎಂದು ಅನುಮಾನ ವ್ಯಕ್ತಪಡಿಸಿ ಖಾತ್ರಿಯಾದ ನಂತರ ಜ್ವರ ಕಡಿಮೆಯಾಗುವವರೆಗೂ ಮೂದಲಿಸಿ, ಬೈಗುಳಾಯಣ ನಡೆಯುತ್ತಿತ್ತು. ಅವರಿಗೆ ನನ್ನ ಮೇಲಿನ ಪ್ರೀತಿಗೆ ಬೈದರೂ ನನಗೆ ಆ ಮಳೆಯ ಮೇಲಿನ ಪ್ರೀತಿ ಮತ್ತೆ ಮತ್ತೆ ಹೆಚ್ಚಾಗುತ್ತಿತ್ತು.

ಹೌದು ಆ ಸುಂದರ ಕ್ಷಣಗಳನ್ನು ಹೊತ್ತು ತರುವ ಮಳೆಯು ನನಗೆ ಪ್ರಿಯ ಸಖನಂತೆ ಭಾಸವಾಗುತ್ತಿತ್ತು. ಚಿಕ್ಕಂದಿನಿಂದಲೂ ಜೋರು ಮಳೆಯಾದರೆ ದಾರಿಯಲ್ಲಿ ಹರಿಯುವ ನೀರನ್ನು ಸೋಜಿಗದಿಂದ ನದಿಯೇನೋ ಎನ್ನುವಂತೆ ನೋಡಿ ನಲಿಯುತ್ತಿದ್ದೆವು. ಹಾದಿಯಲ್ಲಿ ಸಣ್ಣ ಸಣ್ಣ ಹಳ್ಳದಲ್ಲಿ ನಿಂತ ನೀರಲ್ಲಿ ಎರಡೂ ಕಾಲಿನಿಂದ ಮೇಲೆ ಹಾರಿ ಕುಪ್ಪಳಿಸಿದಾಗ ಆಚೆ ಹಾರುವ ನೀರನ್ನು ಕಂಡು ನಕ್ಕು ಖುಷಿಗೊಳ್ಳುತ್ತಿದ್ದೆನು. ಒಮ್ಮೆ ಜೂನ್ ಜುಲೈ ತಿಂಗಳ ಮಳೆಗಾಲದಲ್ಲಿ ಧೋ ಎಂದು ಇಡೀ ದಿನ ಸುರಿದ ಮಳೆಗೆ ಬೆದರಿ ಇನಿಯ ಕೋಪಗೊಂಡು ಏನೋ ಒದರುತ್ತಿದ್ದಾನೆ ಎಂದು ಕಿವಿಮುಚ್ಚಿ ಮಲಗಿ ನಿದ್ದೆಗೆ ಜಾರಿದ್ದೆ. ಬೆಳಗ್ಗೆ ಎದ್ದರೆ ಊರಿನ ಕೆರೆ ತುಂಬಿ ಕೋಡಿ ಹರಿದಿತ್ತು. ನಮ್ಮೂರಿನ ಹೆಂಗಸರು ಗಂಡಸರಾದಿಯಾಡಿ ಹರಿಯುವ ಕೋಡಿ ನೋಡಲು ಕೆರೆಯ ದಾರಿ ಹಿಡಿದು ಸಾಗಿದ್ದರು. ನಾನೂ ಸಹ ಹೆಜ್ಜೆ ಹಾಕಿ ಅಣ್ಣನೊಡನೆ ಸಾಗಿದ್ದೆ. ಕೆರೆಯ ನೀರೆಲ್ಲಾ ಹಳದಿ ಬಣ್ಣ ಮಿಶ್ರಿತ ಕೆಂಪು ಕೆಂಪಿನ ತೆರೆಗಳು ಜುಳು ಜುಳು ಹರಿದು ಕೋಡಿಯಿಂದ ಇಳಿದು ಧಾರೆಧಾರೆಯಾಗಿ ಹರಿಯುತ್ತಿದ್ದ ನೀರು. ಅಲ್ಲಿ ಹೋಗಲು ಮನಸ್ಸು ತಹತಹಿಸುತ್ತಿತ್ತು. ಅಣ್ಣನೊಡನೆ ‘ಬಾ ಹೋಗೋಣ’ ಅಲ್ಲಿ ಎಂದರೆ ‘ಏಯ್ ಸುಮ್ಮನಿರೇ… ನೀನೂ ಕೊಚ್ಚಿಕೊಂಡು ಹೋಗ್ತೀಯಾ ಅಷ್ಟೇ ಆ ರಭಸಕ್ಕೆ’ ಎಂದು ಹೆದರಿಸಿದ್ದ.

ಮಳೆಹನಿಗಳ ಆ ಚಿಟಪಟ ಸದ್ದು ಕೇಳಿದೊಡನೆ ಈಗಲೂ ಮನಸ್ಸು ಒಳಗೊಳಗೇ ಹಿಗ್ಗುತ್ತದೆ. ಶರೀರ ಸಡಿಲಾಗಿ ನಿರಾಳಗೊಂಡಂತೆ. ಕಿವಿಗೆ ಬೀಳುವ ಅದರ ಸದ್ದು ಇನಿಯನ ಪಿಸುಗುಡುವ ಕಿವಿಮಾತಿನಂತೆ ಮಧುರ. ಭೋರೆಂದು ಸುರಿದರಂತೂ ಎದೆಯೊಳಗೆ ಸಾವಿರ ನದಿಗಳು ಹರಿದಂತೆ ಸಂಭ್ರಮ. ಒಮ್ಮೆ ಹಲಸೂರಿನಲ್ಲಿ ಅಕ್ಕನ ಸ್ನೇಹಿತರ ಮನೆಗೆ ‘ಆಂಜಿ’ ಜೊತೆಗೆ ಹೋಗಿದ್ದಾಗ ಇದ್ದಕ್ಕಿದ್ದಂತೆ ಶುರುವಾದ ಮಳೇ ಕೈಯ್ಯಲ್ಲಿ ಛತ್ರಿಯೂ ಇರದೆ, ಪುಟ್ಟ ಎರಡು ವರ್ಷದ ಕೂಸನ್ನು ಎತ್ತಿಕೊಂಡು ‘ಬರದಿರು ಎಂದು ಎಷ್ಟು ಬೇಡಿಕೊಂಡರೂ ಬಂದೇ ಬಂದ ಮಳೆಯೇ ಐ ಹೇಟ್ ಯು’ ಅಂತ ಮುನಿಸಿಕೊಂಡಿದ್ದೆ. ಶಪಿಸಿದ್ದೆ. ಆದರೂ ನನ್ನೊಳಗೆ ಇರುವ ಈ ಮಳೆಯ ಇನಿಯನ ಪ್ರೀತಿ ಮಾತ್ರ ಕಿಂಚಿತ್ ಸಹ ಕಡಿಮೆಯಾಗಿಲ್ಲ. ಸಿನಿಮಾಗಳಲ್ಲಿ ಬರುವ ಹಾಡಿನ ದೃಶ್ಯದಲ್ಲಿ ಮಳೆ ಬಂದರಂತೂ ಮನಸ್ಸು ಅರಳುತ್ತದೆ. ಪ್ರಕೃತಿಯ ಈ ಪುನರಾವರ್ತನ ಕ್ರಿಯೆ ನಿಜಕ್ಕೂ ಸೋಜಿಗವೇ. ನದಿ ಸಾಗರಗಳು ತುಂಬುವುದು. ಸೂರ್ಯನ ಶಾಖಕ್ಕೆ ಆವಿಯಾಗುವುದು ಮತ್ತೆ ತಿಳಿ ಬಾನ ತುಂಬಾ ಬಿಳಿ ಬಿಳಿ ಮೋಡವಾಗಿ ಹತ್ತಿಯಂತೆ ಇಂಜಿ ಇಂಜಿ ಹರಿದಾಡುವುದು ಆ ದೃಶ್ಯ ಕಂಡರಂತೂ ‘ಬೆಳ್ಳಿ ಮೋಡವೇ ಎಲ್ಲಿ ಓಡುವೆ ನನ್ನ ಬಳಿಗೆ ನಲಿದು ಬಾ’ ಈ ಹಾಡು ಎಷ್ಟು ಸಾರಿ ಮೌನವಾಗಿ ಗುನುಗುತ್ತೇನೋ ತಿಳಿಯದು. ತಂಪಾದ ಮಳೆಯಲ್ಲೂ ಬೆವರಹರಿಸುವ ಈ ಪ್ರೇಮದ ಮಳೆ ಸುರಿದು ‘ಟಿಪ್ ಟಿಪ್ ಬರಸಾ ಪಾನಿ… ಪಾನೀ ಮೆ ಆಗ್ ಲಗಾಯಿ’ ಅನ್ನುವಂತೆ ಮಳೆಯನ್ನು ಪ್ರೀತಿಸದವರಾರು? ಎಷ್ಟೇ ಮಳೆ ಸಿರಿದರೂ ಮನೆ ಮಾರು ಕೊಚ್ಚಿಕೊಂಡು ಹೋದರು ಅವನಿಗಾಗಿ ನಾವು ಕಾಯಲೇಬೇಕು. ಮಳೆ ಎಂದರೆ ನಿರೀಕ್ಷೆ, ಮಳೆ ಎಂದರೆ ಭರವಸೆ, ಮಳೆಯೆಂದರೆ ನಿಸ್ವಾರ್ಥ ಅನುಭೂತಿ. ತುಂತುರಿನ ಸೊಬಗಲ್ಲಿ ಮಳೆಬಿಲ್ಲ ಬಣ್ಣಗಳ ನೋಡುವ ಹಿತವೇ ಬೇರೆ. ಸಮೃದ್ಧಿಯ ಭಾವ, ಹಸಿರಿನ ಹೊನ್ನನ್ನು ಹರಿಸುವ ತಾಯಿ.

rain series

ಸೌಜನ್ಯ : ಅಂತರ್ಜಾಲ

ಮಳೆಯ ಮುಸ್ಸೂಚನೆಯಲ್ಲಿ ಬರುವ ಮಿಂಚು ಇಡೀ ಭೂಮಿಗೆ ಬೆಳಕನ್ನು ‘ಫಳಾರ್’ ಎಂದು ಒಂದೇ ಕ್ಷಣ ನೀಡಿ ಆತಂಕ ಸೋಜಿಗ ನೀಡುವ, ಗುಡುಗುಡು ಎಂದು ಗುಡುಗಿ ಎದೆ ‘ಝಲ್’ ಎನ್ನಿಸಿ ಶಿವನ ಢಮರುಗವೇನೋ ಎನ್ನಿಸುವ ಭೀತಿ, ಆನಂದದ ಅನುಭೂತಿಯನ್ನು ಕೊಡುವ ದೇವಲೋಕದ ನೀರೆಯೇ ಈ ನೀರ ಮಳೆ. ಪಿರಿಯಾಪಟ್ಟಣದ ಅ ಕೆರೆದಂಡೆಯಲ್ಲಿ ಗೆಳತಿ ಜಯಂತಿ ನಾಯಕ್ ಜೊತೆಗೆ ತಿರುಗಾಡಲು ಹೋಗುತ್ತಿದ್ದ ಆ ಸಮಯದಲ್ಲಿ ಮಳೆ ಬಂದರೆ ಆ ಕೆರೆಗೆ ಬರುವ ಬಿಳಿ ಬಿಳಿ ಕೊಕ್ಕರೆಗಳ ಹಾರಾಟ. ಮಳೆ ಹನಿಗಳು ಕೆರೆಯ ನೀರ ಮೇಲೆ ಬಿದ್ದಾಗ ಏಳುವ ಬಿಂದುಗಳ ಬುಗ್ಗೆಯನ್ನು ನಾನು ‘ಮೀನು ಮೀನು’ ಎಂದರೆ ‘ಮೀನಲ್ವೇ ಮೇಲಿನಿಂದ ಬೀಳುತ್ತಿರುವ ಮಳೆಯ ಹನಿಗಳ ಮೀನುಗಳು’ ಎಂದು ನಗುತ್ತಿದ್ದಳು. ಯೌವ್ವನದ ಆ ದಿನಗಳಲ್ಲಿ ಹೆಚ್ಚು ಸುಖವಿತ್ತ ಕ್ಷಣಗಳ ಪಟ್ಟಿಯಲ್ಲಿ ಮಳೆಯದೇ ಮುಂಚೂಣಿಯ ದಾಖಲೆ. ಈಗೀಗ ಮಳೆಯಲ್ಲಿ ನೆನೆದರೆ ತುಂಬಾ ಆರೋಗ್ಯ ಕೆಡುವ ಕಾರಣ. ಹೊರಗಡೆ ಹೋದಾಗಲೆಲ್ಲಾ ಛತ್ರಿ ಜೊತೆಗೇ ತೆಗೆದುಕೊಂಡು ಹೋಗಬೇಕು. ಛತ್ರಿ ಹಿಡಿದು ಮಳೆಯಲ್ಲಿ ನಡೆದು ಬಂದರೂ ಆ ನಡಿಗೆಯೂ ಸಹ ಕವನದಂತೆ, ಸ್ವಲ್ಪ ನಡೆದರೆ ಹನಿಗನವದಂತೆ, ದೂರ ನಡೆದರೆ ನೀಳ್ಗವನದಂತೆ ಭಾಸವಾಗುತ್ತದೆ. ಒಟ್ಟಿನಲ್ಲಿ ತಲೆಯನ್ನು ನೆನೆಸದೆ ಮಳೆಯಲ್ಲಿ ಇಡುವ ಹೆಜ್ಜೆಗಳನ್ನು ಗಟ್ಟಿಯಾಗಿ ಇಟ್ಟರೆ ಪಾದಗಳ ಮೇಲೆ ಬೀಳುವ ಹನಿ ಹಾರುವ ಮಣ್ಣಿನ ಚಿನುಕು ಮನಸ್ಸನ್ನು ಯಾರಿಗೂ ಪುಳಕಗೊಳಿಸದಿರದು.

ಜಾನಪದರಲ್ಲಿಯೂ ಮಳೆಯ ಬಗ್ಗೆ ಎಂತಹ ಸಂವೇದನೆಯಿತ್ತು ಎನ್ನಲು ‘ಮಾಯದಂತ ಮಳೆ ಬಂತಣ್ಣ’ ಎಂಬ ಗೀತೆ ಕೇಳಿದರೆ ತಿಳಿಯುತ್ತದೆ. ಬರಗಾಲದ ಒಂದು ಗೀತೆ ‘ಯಾತಕ್ಕೆ ಮಳೆ ಹೋದವೋ ಶಿವ ಶಿವ ಲೋಕತಲ್ಲಣಿಸುತಾವೋ’ ಇವೆಲ್ಲವೂ ಜಾನಪದ ಕವಿಮನಸ್ಸುಗಳಿಂದ ಹೊರಬಂದ ಅದ್ಭುತ ರಚನೆಗಳು. ಹೀಗೆ ಪ್ರಕೃತಿಯ ಈ ಸುಂದರ ಸೊಬಗಿಗೆ ಕಾರಣವಾದ ಮಳೆಯನ್ನು ಎಷ್ಟು ಹೊಗಳಿದರೂ ಮತ್ತು ಅದರ ಬಗ್ಗೆ ಎಷ್ಟು ಹೇಳಿದರೂ ಪದಗಳಿಗೆ ಸಿಗದ ಅನುಭೂತಿ ಮಳೆ. ರಜೆಯಿದ್ದ ದಿನವಂತೂ ಮಳೆ ಬಂದರೆ ಅದರ ಮಜವನ್ನೂ ಅನುಭವಿಸಿಯೇ ತೀರಬೇಕು. ಬಿಸಿಬಿಸಿ ಬಜ್ಜಿಯೋ ಬೋಂಡವನ್ನೋ ಮಾಡಿ ಸ್ಟ್ರಾಂಗ್ ಕಾಫಿ ಜೊತೆಗೆ ಕೂತು ತಿನ್ನುವ ಮಜವೇ ಬೇರೆ. ಮಳೆ ಬಂದೊಡನೆ ಕರೆಂಟ್ ಹೋಗುವುದಂತೂ ಖಚಿತ. ಮಂದಬೆಳಕಿನಲ್ಲಿ ಧೋ ಧೋ ಹನಿಗಳ ಸದ್ದಿನಲ್ಲಿ ಕಾರಣವೇ ಇಲ್ಲದ ಭಯ, ಖುಷಿ, ಆತಂಕದಲ್ಲಿ ಕಳೆವ ಸಮಯ ಅತಿ ಸುಂದರ. ಮಳೆಯ ಬಗ್ಗೆ, ನೀರಿನ ಬಗ್ಗೆ, ಸಾಗುವ ನದಿಗಳ ಬಗ್ಗೆ ಕವನ ಬರೆಯದ ಕವಿಯೇ ಇಲ್ಲ. ಮಳೆಯೊಂದು ಮನದ ಹೊನಲು.

(ಈ ಸರಣಿ ಇಲ್ಲಿಗೆ ಮುಗಿಯಿತು)

ಇದನ್ನೂ ಓದಿ : Rain : ‘ಜಡಂ ಗಡಾ, ನಿಸ್ತೇಜಂ ಗಡಾ ಒಡಲೊಳ್ ಗುಡುಗುಟ್ಟುಗುಂ ಗುಡಾ

Published On - 5:27 pm, Sat, 14 August 21

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ