Rain : ಊರ ತಿರಗೋ ಈ ‘ಹರಾಹುರಿ ಪಂಢರಾಪುರಿ’ಯ ವಾರಕರಿ ಅಸನರಿ ಮನಸ್ಯಾ ಅಲ್ಲ ಮತ್ತ…

Kannada Play : ‘ಇಂದಿನ ಸೇಝ್ (SEZ)ನ ಅಥವಾ ಬಹುರಾಷ್ಟ್ರೀಯ ಕಂಪನಿಗಳ ಸ್ಥಾಪನೆಗಳ ಸಂದರ್ಭದಲ್ಲಿ ನಮ್ಮ ಆಡಳಿತಾರೂಢರ ನಡೆಗಳು ಮತ್ತು ನೀತಿಗಳು ಬಂಡವಾಳಿಗರ ಪರವಾಗಿಯೇ ಇರುತ್ತವೆ. ಅಭಿವೃದ್ಧಿಯ ಖರೆ ವ್ಯಾಖ್ಯಾನ ಏನು? ಇಂಥ ಇಂದಿನ ಇಂಡಿಯಾವನ್ನು ಶೋಧಿಸುವ ಯತ್ನ ‘ಉದ್ವಸ್ಥ’ ನಾಟಕದಲ್ಲಿದೆ’ ಡಾ. ಡಿ. ಎಸ್. ಚೌಗಲೆ

Rain : ಊರ ತಿರಗೋ ಈ ‘ಹರಾಹುರಿ ಪಂಢರಾಪುರಿ’ಯ ವಾರಕರಿ ಅಸನರಿ ಮನಸ್ಯಾ ಅಲ್ಲ ಮತ್ತ...
ಕವಿ ರಾಮು ಅವರ ರಾಮು ಕವಿತೆಗಳ ಮುಖಪುಟ ಮತ್ತು ಲೇಖಕ ಡಿ. ಎಸ್. ಚೌಗಲೆ
Follow us
|

Updated on: Aug 11, 2021 | 6:09 PM

ಟಿವಿ9 ಕನ್ನಡ ಡಿಜಿಟಲ್ ; ಮಳೆ ಬಂತು ಮಳೆ (Rain) ಇಂದಿನಿಂದ ಶುರುವಾಗುವ ಹೊಸ ಸರಣಿ. ಚಿತ್ತಬಂದಂತೆ ಸುರಿಯುತ್ತಿರುವ ಮಳೆಗೆ ಸೃಜನಶೀಲ ಆವರಣ ತೊಡಿಸುತ್ತಾರೆ ಅಕ್ಷರ ಪ್ರಿಯರು. ಅವರವರ ಸ್ಮೃತಿಗೆ ಲಹರಿಗೆ ಧಾರೆಗೆ ಮೌನಕ್ಕೆ ಮುರಿಯುವಿಕೆಗೆ ‘ಮಳೆ’ ಇಲ್ಲಿ ಯಾವ ರೂಪದಲ್ಲಿಯೂ ಹರಿಯುವ ಸಾಧ್ಯತೆ ಇರುತ್ತದೆ. ‘ಮಳೆ ನನ್ನನ್ನು ನೂರಾರು ಸಂಗತಿಗಳಿಗೆ ಕನೆಕ್ಟ್ ಮಾಡುತ್ತದೆ. ಮಳೆಯ ಆ ಸದ್ದು, ಅದರ ಅನುರಣನ ಸೋಜಿಗ. ಭೂಮಿ, ಆಕಾಶ ಒಂದಾಗುವುದು ಇದೇ ಮಳೆಯಿಂದ. ಬಾಲ್ಯದಿಂದಲೂ ಮಳೆಯಲ್ಲಿ ನೆಂದು ಒದ್ದೆಯಾಗುವುದೆಂದರೆ ಒಂದು ದಿವ್ಯ ಅನುಭವ’ ಎನ್ನುತ್ತಾರೆ ‘ಅಗ್ನಿಸೂಕ್ತ’ ಮತ್ತು ‘ರಾಮು ಕವಿತೆಗಳು’ ಕೃತಿಗಳನ್ನು ಕನ್ನಡಕ್ಕೆ ಕೊಟ್ಟ ಮೈಸೂರಿನ ನಿವಾಸಿ ಕವಿ ರಾಮು. ಗಾಂಧಿ ವರ್ಸಸ್ ಗಾಂಧಿ, ಗಾಂಧಿ-ಅಂಬೇಡ್ಕರ, ಪೇಯಿಂಗ್ ಗೆಸ್ಟ್, ಕಿರವಂತ, ಶುದ್ಧ, ಚದುರಂಗ ಮತ್ತು ಕತ್ತೆ ಶುದ್ಧವಂಶ, ಸತ್ಯ ಶೋಧಕ ನಾಟಕಗಳನ್ನು ಮತ್ತು ಕಥೆ, ಕಾದಂಬರಿಗಳನ್ನು ರಚಿಸಿದ, ಅನುವಾದಿಸಿದ ಬೆಳಗಾವಿಯ ಡಾ. ಡಿ. ಎಸ್. ಚೌಗಲೆ ಅವರ ‘ಉದ್ವಸ್ಥ’ ನಾಟಕದ ಆಯ್ದ ದೃಶ್ಯ ಇಲ್ಲಿ ಓದಿಗಿದೆ.

*

ಮಳೆ

ಬಂತು ಮಳೆ ಆಹ ಮುಳ್ಳು ಬೇಲಿಯಲ್ಲೂ ಹಾಡು ಉಕ್ಕಿ ಉಕ್ಕಿ. ಅದೋ ಮಳೆ ಅಲ್ಲಿ, ಓ ಇಲ್ಲಿ, ಎಲ್ಲೆಲ್ಲು _ ನನ್ನ ಹುಡುಗಿಯ ಕೆನ್ನೆ ಗುಳಿ ಮೇಲು, ಈ ಹಾಡ ಮೇಲು. ಆ ದಿಕ್ಕು ಈ ಗಾಳಿ ಆ ಬಾನು ಎಲ್ಲ ಇದರೊಳಗೆ ತಲ್ಲೀನ. ಹದಿಹರೆಯ ನೆಲಗನ್ನೆ ಮೀಯುವುದ ಕದ್ದು ಇಣುಕುತಿರೊ ಖುಷಿಗಾರ ಲೋಕ.

ನಾದ ಅಲ್ಲ ಇದು ಗುಡುಗು ಆದರೂ ಹಾಡೆ. ಆ ಮರಳ ತೊಡೆಯೇರಿ ಇಳಿದಾಡೊ ತೊರೆ

ಆ ತೊರೆಯ ಕಂಡು ಜಾರುವ ಮರಳು. ಎಲ್ಲ ದೇವರು ಈಗ, ಕಂಡದ್ದೆಲ್ಲ ಮೂರ್ತಿ- ಈ ಮಂದ ಬೆಳಕಲ್ಲಿ ಅನಿಸಿದ್ದೆಲ್ಲ ಮಂತ್ರ – ನನ್ನ ಹಸುವಿಗೆ ಮೇವು ವಿಕ್ಕಿ ನಾನಿಗೆ ಮುತ್ತು ನೆನೆದ ನಾಯಿಗೆ ಹಸುಬೆ ಎಲ್ಲ ನೈವೇದ್ಯ.

ಮುಳ್ಳು ಮುಳ್ಳಿಗು ಹೂವು ಎಲ್ಲೆಲ್ಲು ಅವತಾರ. ಈ ಕಾಫಿ ಬಟ್ಟಲೊಳಗೆ ಈ ರೊಟ್ಟಿ ತುಂಡೊಳಗೆ ಅವನ ಅಂಬಲಿಯೊಳಗೆ ಈ ಚಿಟಕಿ ನಸ್ಯದಲ್ಲೂ. ತುದಿಯಲ್ಲಿ ಚಿಗುರಿ ಒಣ ಚೆಕ್ಕೆ ಸುಕ್ಕುಗಳ ಮೈಯ ಬಿಟಕೊಂಡು ತೊಯ್ದು ಪಟ ಪಟನಿಂತ ಈ ಮರದ ವಾಸನೆಯಂಥ ವಾಸನೆಯ ಜೀವಂತ ದೇವರು ಬಂತು. ಇದೊ ಹಿಡಕೋ ಮುಟ್ಟು ಮುಟ್ಟು. ಯಾವುದೋ ನಿಸ್ಸೀಮ ದೀಪದ ಕುಡಿಯ ಕಡಿದು ನೆಟ್ಟ ಹಾಗೆ ನಿನ್ನೆ ಬೋಳು ಬೋಳಾಗಿದ್ದ ಮರದಿಂದ ಇವತ್ತು ಥರಾವರಿ ಚಿಗುರುಕಣ್ಣು

ಈ ಮಳೆದನಿಯಲ್ಲಿ ಹೊಳೆದನಿ ಮಲಗಿ ಹೊಳೆದಡದ ಬಳೆದನಿ ಮಲಗಿ ಖುಷಿಯ ಕಣ್ಣೀರಲ್ಲಿ ಪಿಸುಮಾತು ಸ್ವಪ್ನ ದನಿ ಮಲಗಿ ಮಳೆಬೆರಳಲ್ಲಿ ರೋಮಾಂಚ ತಂತಿಯ ಮೀಟಿ ದೇವಜಾತಿ

ಎಂಥ ಲಯವಿನ್ಯಾಸ ಅಮೃತ ಗಾನ.

ನಾಳೆ ತರಗಾಗೊ ನಿನ್ನೆಯ ಚಿಗುರೆ, ತರಗಾಗಿ ಮತ್ತೆ ಚಿಗುರಾಗಿ ಬಿದ್ದೆದ್ದು ಜನ್ಮಗಳ ಹರಿಸುತಿರೊ ಮರವೆಂಬ ಹೊಳೆಯೇ

ಈ ಚಿಗುರ ಮುಟ್ಟುತಲೆ ನಾಳಿನ ತರಗ ಮುಟ್ಟಿದ ಹಾಗೆ ಎನಿಸಿಬಿಟ್ಟರೆ ನನಗೆ! ಹಾಗಾಗದಿರಲಿ. ನಿನ್ನ ತೆರೆ ನಿನ ಹಕ್ಕಿ ನಿನ ಚಿಗುರು ನನ್ನ ಅಂಗೈಲಿ ಕುಣಿದಾಡಲಿ ಕುಣಿ ಕುಣಿದು ಉದಿರಾಡಲಿ

ಇದೊ, ಇನ್ನೊಂದು ಹನಿಬಿತ್ತು ಈ ಬೀಜ ಕಣ್ತೆರೆದು ಚಿಗುರಾಡಲಿ.

*

rain series

ಉದ್ವಸ್ಥ ನಾಟಕದ ದೃಶ್ಯ

ಉದ್ವಸ್ಥ ನಾಟಕ ಜಾಗತೀಕರಣ ತಂದೊಡ್ಡಿರುವ ಹಲವು ಪ್ರಶ್ನೆಗಳನ್ನು ಎತ್ತುತ್ತದೆ. ಅದು ಸೃಷ್ಟಿಸಿರುವ ಭ್ರಮೆ ಮತ್ತು ವಾಸ್ತವದ ಹಾನಿಗಳನ್ನು ಅನುಭವಿಸುತ್ತ ಸಾಗುತ್ತಿದ್ದೇವೆ. ಅಧಿಕಾರಶಾಹಿ ಮತ್ತು ರಾಜಸತ್ತೆಯ ಆಂತರಿಕ ಒಡಂಬಡಿಕೆಗಳು ರೈತರ,ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸಿವೆ. ಇಂದಿನ “ಸೇಜ್” (SEZ) ನ ಅಥವಾ ಬಹುರಾಷ್ಟ್ರೀಯ ಕಂಪನಿಗಳ ಸ್ಥಾಪನೆಗಳ ಸಂದರ್ಭದಲ್ಲಿ ನಮ್ಮ ಆಡಳಿತಾರೂಢರ ನಡೆಗಳು ಮತ್ತು ನೀತಿಗಳು ಬಂಡವಾಳಿಗರ ಪರವಾಗಿಯೇ ಇರುತ್ತವೆ. ಅಭಿವೃದ್ಧಿಯ ಖರೆ ವ್ಯಾಖ್ಯಾನ ಏನು? ಇಂಥ ಇಂದಿನ ಇಂಡಿಯಾವನ್ನು ಶೋಧಿಸುವ ಯತ್ನ ಇಲ್ಲಿದೆ. 2013ರಲ್ಲಿ ಈ ನಾಟಕ ಪ್ರಯೋಗ ಕಂಡಿತ್ತು. ಪ್ರದೀಪ ತಿಪಟೂರು ಇದರ ನಿರ್ದೇಶಕರು. ಸಾಗರದ ಸ್ಪಂದನ ತಂಡ ಅಭಿನಯಿಸಿತ್ತು. ಈಗ ಬೆಂಗಳೂರಿನ ದೃಶ್ಯ ತಂಡವು ಈ ನಾಟಕದ ತಾಲೀಮಿನಲ್ಲಿ ತೊಡಗಿಕೊಂಡಿದೆ. ದಾಕ್ಷಾಯಣಿ ಭಟ್ ಇದರ ನಿರ್ದೇಶಕಿ. ಡಾ. ಡಿ. ಎಸ್. ಚೌಗಲೆ 

ದೃಶ್ಯ-೩

(ಬೆಳಕು)

(ನಿವೇದಕ ಪ್ರವಾಹ ಪೀಡಿತ ಓಣಿಗೆ ಬರುವನು. ಕೆಲವರು ಚಿಲುಮಿ ಮತ್ತು ಬೀಡಿ ಸೇದುತ್ತಿರುವವರು. ಎಲೆ-ಅಡಿಕೆ ತಿನ್ನುವ ತಯಾರಿಯಲ್ಲಿರುವವರೂ ಇದ್ದಾರೆ. ಅಲ್ಲಿ ಮಳೆಯಲ್ಲಿ ಹಾನಿಗೊಂಡ ಮನೆಗಳಿವೆ.)

(ನಿವೇದಕನನ್ನು ಬೆನ್ನಟ್ಟಿ ಒಂದಷ್ಟು ಜನರು ಬರುತ್ತಿರುವರು.)

ನಿವೇದಕ : (ಹೊರಳಿ) ನೀ… ನೀವ್ ನನ್ನ ಹಿಂದಿಂದ ಬರಾಕತ್ತೇರಿ? ಯಾಕ? (ಅವರು ದುರುಗುಟ್ಟಿ ನೋಡುವರು.)

ಒಬ್ಬ : ನಾವ್ ನಿನ್ನ ಬೆನ್ನಟ್ಟತಿಲ್ಲ.. ನೀನಽ ನಮ್ಮ ಬೆನ್ನ ಹಿಂದ ಬಿದ್ದಿ.

ಮತ್ತೊಬ್ಬ : ನಾವೂ ನೋಡಾಕತ್ತೀವಿ. ಆಂ!?

ನಿವೇದಕ : ಇಲ್ಲ.. ನಾನ್ಯಾಕ ನಿಮ್ಮ ಬೆನ್ನ ಹತ್ತಲಿ… ನೀವಽ ಬೆನ್ನ ಹತ್ತೇರಿ… ಎರಡ್ಮೂರ ದಿನ ಆತು, ನಾನೂ ನೋಡಾಕತ್ತೇನಿ. ಮೊನ್ನಿಯಂತು ಖಬರಿಗೆಟ್ಟ ಓಡಿದ್ನಿ.. ಓಡೇ ಓಡಿದ್ನಿ… ಆ ಸಂಪಿನವರ ಮಧ್ಯೆ ತಪ್ಪಿಸಿಕೊಂಡ್ನಿ… ಇಲ್ಲದಿದ್ದರ!?

ಮಗದೊಬ್ಬ : ಇಲ್ಲದಿದ್ದರ… ದೊಡ್ಡ ಸುದ್ದಿ ಆಗತಿತ್ತು ಅಂತಲ್ಲ ನೀ ಹೇಳೋದು (ನಗು)

ನಿವೇದಕ : (ತುಸು ಕಕ್ಕಾವಿಕ್ಕಿ) ಹಂಗಽ ಏನಾದ್ರು… ನನಗೊತ್ತಿಲ್ಲ…

ಒಬ್ಬ : ಅವರು ನಾವಲ್ಲ… ನಮ್ಮಂಗ ಇರೋರು! ಇದ್ದಿರಲೂಬಹುದು.

ನಿವೇದಕ : ಇಲ್ಲ. ನೀವ ಸುಳ್ಳ ಹೇಳಾಕತ್ತೇರಿ. (ತುಸು ಯೋಚಿಸಿ) ಆ ರಾತ್ರಿ ಬೆನ್ನಟ್ಟಿದೋರು ಇಲ್ಲ ಫ್ಲೇಕ್ಸಿನಿಂದ… ಛೆ ಛೆ… ನೀವಽ ಅವರೆಲ್ಲ… ಕನಫ್ಯೂಜ್ ಮಾಡಬ್ಯಾಡ್ರಿ…

ಇನ್ನೊಬ್ಬ : ಅದ್ಹೆಂಗ? ನಿನಗೆಲ್ಲೋ ಭ್ರಮೆಯಿರಬೇಕು. ನಾವು ನಿನ್ನ ಭೇಟಿ ಆದದ್ದs ಇದ ಮೊದಲು.

ಮತ್ತೊಬ್ಬ : ನಾವs ನಿನ್ನನ್ನ ಅನುಮಾನಸತಿದೀವಿ… ಯಾರೋ ಡಿಟೆಕ್ಟಿವ್ ತರಹ…

ನಿವೇದಕ : ಅದೇನೂ ಅಲ್ಲ… ನಾನೊಬ್ಬ ಸಾಮಾನ್ಯ ಮನಸ್ಯಾ… (ತಡೆದು-ಯೋಚಿಸಿ) ಏನಽ ಅನ್ನಿರಿ. ನೀವ್ ಆ ಪುಢಾರಿಗಳ ಕಡೆಯವರಽ ಆಗೇರಿ. ಆ ಸರ್ಕಲ್ಲಿನ ಫ್ಲೇಕ್ಸಿನೋರು…

ಒಬ್ಬ : (ನಗುತ್ತ) ಇವಗ್ಯಾನೋ ಹುಚ್ಚ ಹಿಡದೇತಿ ಅಂತ ಕಾಣತೇತಿ. ಹುಚ್ಚರ ದವಾಖಾನಿಗಿ ಹಾಕಬೇಕ ಇಂವಗ.

ಇನ್ನೊಬ್ಬ : ಮಳಿಗಾಳಿಗಿ ನಮ್ಮ ಹೊಲಮನಿ ಹಾಳಾಗ್ಯಾವ. ಅದರ ಚಿಂತ್ಯಾಗ ನಾವಿದ್ದರ, ಇಂವ ನಮ್ಮನ್ನ ನೋಡ್ಯಾನ ಅಂತಾನ. (ನಗು)

ಒಬ್ಬ : ಹಾಂಗ ನೋಡಿದರ ನಮ್ಮ ರೂಪಗಳು ಭಾಳದಾವು. ನೀ ತಿಳಕೊಂಡವರು ನಮ್ಮಂಗ ಇದ್ದಿರಲೂಬಹುದು. ಇಲ್ಲ ನಾವ್ ಅವರಂಗ…

ಮಗದೊಬ್ಬ : ನೀನೇನಾರ ತಿಳಕೋ ನಮಗೇನೂ ಫರಕಿಲ್ಲ.

ಮತ್ತೊಬ್ಬ : ನಾವ ಫೋಟೊಗ್ರಾಫರಗ ಕಾಯಾಕತ್ತೇವಿ. ಮನಿ ಹಾಳಾಗೇತಿ, ಪರಿಹಾರಕ್ಕ ಅರ್ಜಿ ಹಾಕೋರೀದೀವಿ… ಆಗಾ ಅಲ್ಲಿ ನೋಡು, ಬಿದ್ದಾವಲ್ಲ ಮಳಿಗಿ, ಆಂ! ಅವು, ನೋಡಿದಿ ಏನು?

ನಿವೇದಕ : ಹಾಂ. ಹೌದು…

(ಅಷ್ಟರಲ್ಲಿ ಫೋಟೊಗ್ರಾಫರ್ ಬರುವನು. ಇವರಲ್ಲಿ ಒಂದಿಬ್ಬರು ಫೋಟೋವನ್ನು ಮನೆ ಬಿದ್ದ ಭಾಗದಲ್ಲಿ ನಿಂತು ತೆಗೆಸಿಕೊಳ್ಳುವರು.)

rain series

ಉಧ್ವಸ್ಥ ನಾಟಕದ ದೃಶ್ಯ

ಒಬ್ಬ : (ನಿವೇದಕನಿಗೆ) ಆ ಫೋಟೊ ತೆಗೆಸಿಕೊಳ್ಳೊ ಬಿದ್ದ ಮನಿಗಳ ಅದಾವಲ್ಲ!

ನಿವೇದಕ : ಹಾಂ.

ಒಬ್ಬ : ಅವು ಯಾರದವು ಅಂತ ತಿಳಕೊಂಡೇರಿ?

ನಿವೇದಕ : ಯಾರದ್ದು? ಅಲ್ಲಿ ತೆಗೆಸಿಕೊಳ್ಳಾವರದ್ದು!

ಒಬ್ಬ : ಅವು ನಮ್ಮವುಗಳ್ಯಾರದ್ದೂ ಅಲ್ಲ.

ನಿವೇದಕ : ಹಾಂ! ಮತ್ತ?

ಮತ್ತೊಬ್ಬ : ಅಗಾ… ಅಲ್ಲಿ ನೋಡ, ಆ ದಿನ್ನಿ ಮ್ಯಾಲಿನ ಸುಣ್ಣ ಬಳಿದ ಹೆಂಚಿನ ಮನಿಗಳು, ಅವು ನಮ್ಮವು…

ನಿವೇದಕ : (ಅಚ್ಚರಿ-ಆಘಾತ) ಆಂ! ಇದು ಮೋಸಲ್ಲೇನ? ಹಿಂಗ ಮಾಡಬಾರದು…

ಇನ್ನೊಬ್ಬ : (ನಿವೇದಕನ ಮೈಮ್ಯಾಲೇರಿ ಬಂದಂತೆ) ಭಾಳ ಚಾಲಾಕಿ ಮಾಡ್ಲಾಕ ಹೋಗಬ್ಯಾಡ… ಚಳವಳಿ, ಸಂಪು.. ಅನ್ನೋರ ಹಿಂದ ಬೀಳಾಕ ಹ್ವಾದರ…

(ತುಸು ತಡೆದು) ಭಾಳ ಡಿಟೇಲ್ಸ್ ಬ್ಯಾಡ… (ಉಳಿದವರಿಗೆ) ಬರ್ರಿ ಹೊರಡೋಣ… (ಎಲ್ಲರೂ ಹೊರಡುವರು.)

(ಒಬ್ಬ ತಿರುಗಿ ಬಂದು) ಆ ಫ್ಲೇಕ್ಸಿನೊಳಗಿನವರು… ನಾವಽನ. ಅಗೋಚರ ಮತ್ತ ಗೋಚರ! ಗಾಯಬ್ ಕೂಡ ಆಗ್ತಿರತೀವಿ… (ಹೊರಡುವನು) (ನಿವೇದಕ ಆವಾಕ್ಕಾಗಿದ್ದಾನೆ. ಕತ್ತಲೆ)

(ಬೆಳಕು. ಪ್ರವಾಹಪೀಡಿತ ಪ್ರದೇಶದಲ್ಲಿಯೆ ಬೀಡಿ, ಚಿಲುಮೆ ಸೇದುತ್ತಿದ್ದವರು ದಂಗು ಬಡಿದ ನಿವೇದಕನ ಸುತ್ತ ನೆರೆದಿರುವರು. ವಾರಕರಿಯೂ ಇದ್ದಾನೆ.)

ನಿವೇದಕ : (ವಾರಕರಿ ನೋಡಿ) ಅರೆ, ನೀನಿಲ್ಲಿ..?

ವಾರಕರಿ : ಮತ್ತ ಇಲ್ಲಿಗೇನಽ ಬರಾಕತಿದ್ನಿ…

ರೈತ ೧ : ಈ ವಾರಕರಿಗಳ ಬಗ್ಗೆ ಕೇಳಬ್ಯಾಡ್ರಿ… ಇಂದಿಲ್ಲಿ ನಾಳಿ ಇನ್ನೆಲ್ಲೋ ಇರತಾರ.. ಧಡಿಪಡಿ ಕಡಿ ಬಂದಾನ. ನೀವ್ಯಾಕೊ ಒಂಥರ ಸುಂದ ಇದ್ರಿ. ಅದಕ್ಕ ಬಂದ್ವಿ.

ನಿವೇದಕ : ಆಂ, ಹಂಗೇನಿಲ್ಲ. ಏನೋ ಜರ ಸುಸ್ತು. (ತಡೆದು) ಇವ ಸಿಕ್ಕಿದ್ದ ಅದಕ್ಕಂದ್ನಿ.

ಕೂಲಿ ೧ : (ಬೀಡಿ ಎಳೆದು) ಇಂವ ಕವಠೆ ಮಹಾಂಕಾಳ ಕಡಿಯಂವ… ಪಂಡರಪುರದ ಮಾರಾಜರ ಶಿಷ್ಯ… ಹಂಗಽ ದಿಂಡಿಯೊಳಗ ಅಲ್ಲಿಂದ ಇಲ್ಲಿ-ಇಲ್ಲಿಂದ ಅಲ್ಲಿ ಅಂತ ನಡಕೊಂತ ತಿರಗತಿರತಾನ. ಬರೆ ಪಂಡರಪುರಕ ಅಟ ಹೋಗೋಲ್ಲ.

ನಿವೇದಕ : ಮತ್ತೆಲ್ಲೆಲ್ಲಿ ಹೋಗತಾನ?

ರೈತ೨ : ಏಯ್ ಅದನ್ನ ಕೇಳಬ್ಯಾಡೆಳ್ರಿ.

ನಿವೇದಕ : ಯಾಕ?

ರೈತ೨ : (ಚಿಲುಮಿ ತಯಾರಿ ಮಾಡಿ, ತಂಬಾಕ ಹಾಕಿ ಕಡ್ಡಿಗೀರಿ ದಮ್ಮೆಳೆದು ಹೊಗೆ ಬಿಡುತ್ತ) ಪ್ರತಿ ವರಸಾ ಧರ್ಮಸ್ಥಳಕ್ಕ, ಗೋಕರ್ಣಕ್ಕ ನಡಕೋಂತ ಹೋಗತಾರು ಈ ವಾರಕರಿಗಳು. (ನಿವೇದಕ ವಾರಕರೀನ ನೋಡುವನು. ಆತ ಹಲ್ಕಿಸಿದಂತೆ ನಗುವನು.)

ಅಲ್ಲಲ್ಲಿ ಗುಡಿಯೊಳಗ ವಾಸ ಮಾಡೋದು, ಊರ ಮಂದಿ ವಾರಕರಿ ಬಂದಾರಂತ ಊಟ ಹಾಕತಾರ… ಕೆಲವರು ರೊಕ್ಕಾನು ಕೊಡತಾರು…

ಕೂಲಿ : ಛಲೋ ಪ್ರವಚನಾ ಮತ್ತ ಭಜನಿ ಹಾಡ ಹೇಳತಾರ… ರಾತ್ರಿ ಕಳೆಯೊದು, ಮತ್ತ ಮುಂದಿನ ಊರಿಗಿ… ಹಿಂಗಽ….

ನಿವೇದಕ : ಹಂಗಿದ್ದರ ಒಂದ ಭಜನಾ ಸ್ಯಾಂಪಲ್ಲಿಗಿ ಆಗಲೆಲ! ಏನಂತೀರಿ?

ರೈತ ೨ : ಅಗದಿ ಬಾಯಾಗಿನ ಮಾತ ಕಸಿದಕೊಂಡ್ರಿ ಸಾಹೇಬರ…

ವಾರಕರಿ : ಒಮ್ಮಿಗೇನ ಭಜನಾ? (ತುಸು ತೆರದು) ನೀವ ಬಯಸೇರ ಅಂದಮ್ಯಾಲ… ಪ್ರಯತ್ನ ಮಾಡತ್ಯಾನ… ತಗೋರಿ ತಾಳ, ತಂಬೂರಿ, ಪಕ್ವಾಜ್… (ವಾರಕರಿ ಹಾಡುವನು. ಉಳಿದವರೂ ಧ್ವನಿಗೂಡಿಸುವರು.)

ಅಭಂಗ : ಕನ್ನಡ ಸತಿಗೆ ಮರಾಠಿ ಪತಿ ಒಬ್ಬರ ಮಾತು ಇನ್ನೊಬ್ಬರಿಗೆ ಅರ್ಥವಾಗದು ಹಾಗೆ ಮಾಡದಿರು ಕಮಲಾಪತಿ ಎನ್ನನು ನೀಡೆನಗೆ ಸಜ್ಜನರ ಸಹವಾಸವನು ಅವಳು ಕರೆದಳು ಬಾ ಇಲ್ಲಿ ಎಂದು ಅವನು ನೀಡಿದನು ಸವಟು ತಂದು ತುಕಾರಾಮನೆಂಬ ಪರಸ್ಪರ ಭೇದವಿದ್ದಲ್ಲಿ ಸುಖದ ಬದಲಿಗೆ ದುಃಖ ಬೆಳೆಯುವದಲ್ಲಿ ||

rain series

ಉದ್ವಸ್ಥ ನಾಟಕದ ದೃಶ್ಯ

ನಿವೇದಕ : ಖರೇನ.. ಮನಸ್ಸ ಹಗರಾತು…

ರೈತ ೧ : ಈ ಮಳಿ ಗಾಳಿಗಿ ಬ್ಯಾಸತ್ತಾಗ ಹಿಂಗಽ ಒಂದ ಆಸರಿ ನೋಡ್ರಿ… ಬ್ಯಾಸರಿಕೆ, ಹಳಹಳಿಕಿ ಕಳಕೊಳ್ಳಾಕ…

ನಿವೇದಕ : ಅಲ್ಲ ವಾರಕರಿ, ನೀ ಮಾರಾ?ದವ ಕನ್ನಡ ಛಲೂನಽ ರೂಢಿ ಮಾಡಿಕೊಂಡಿ…

ವಾರಕರಿ : ಸಾಹೇಬರಽ ಕವಠೆ ಮಹಾಂಕಾಳದ ಪಕ್ಕದಾಗ ಜತ್ತ ಬರಾಂಗಿಲ್ಲ ಏನ್ರಿ…

ನಿವೇದಕ : ಹೌಂದಲ್ಲ.. ಮರತಽ ಬಿಟ್ಟಿದ್ನಿ, ನಿನ್ನ ಭಜನದಾಗ…

ರೈತ ೨ : ಒಂದ ಮಜಾ ಗೊತ್ತೇನ್ರಿ…

ನಿವೇದಕ : ಏನದು?

ರೈತ೨ : ನೀ ಹೇಳು…

ಕೂಲಿ : ಬ್ಯಾಡ ತಗಿ… ನೀನಽ ಛಂದಾಗಿ ಹೇಳಾಂವ.. ನಾ ಹೇಳಂದ್ರ?

ರೈತ ೨ : ಸರಿ ಹಂಗಾರ. ಏನಂದರ… ಈ ಕಡಿ ಗೋವಾದೋರು ಮಹಾದಾಯಿ ಅಂತ ತಂಟಿ ತಗೀತಾರ – ಭಾ?

ಹಿಡಕೊಂಡ ಗುದ್ದಾಡೋರದೇನ ಹೊಸದಲ್ಲ… ಇನ್ನ ಉತ್ತರ ಕರ್ನಾಟಕ ಬ್ಯಾರೇನ ರಾಜ್ಯ ಆಗಲಿ ಅನ್ನೋ ಪುಢಾರಿಗಳೂ ಅದಾರ… ಇದನ್ನ ತಾವ ಅರೀದೇನಲ್ಲ…

(ಇನ್ನೊಂದು ದಮ್ಮೆಳೆವನು) ಇದರ ಬೀಜ… ಅಂದರ ಉತ್ತರ ಕರ್ನಾಟಕ ಬ್ಯಾರೆ ಆಗಲಿ ಅನ್ನೋದರ ಹಿಂದಿನ ಕತಿ.. ಈ ವಾರಕರಿ ಹೇಳ್ಯಾನ..

ನಿವೇದಕ : ಹೌಂದೇನು? ಅಲೆಲೆಲೆ.. ನಾ ಏನೋ ತಿಳಕೊಂಡಿದ್ನೆಲ್ಲ!

ವಾರಕರಿ : ಅಣ್ಣಾರ ಅವರ ಏನಾರ ಹೇಳತಾರ ಬಿಡ್ರಿ…

ಕೂಲಿ : ಎಯ್ ಅದ್ಯಾಕ ನಾಚಕೋತಿ ಹೇಳೋ..

ರೈತ ೧ : ಇಂವ ನಾಕಾರು ಊರ ತಿರಗೋ ‘ಹರಾಹುರಿ ಪಂಢರಾಪುರಿ’ಯ ವಾರಕರಿ… ಅಸನರಿ ಮನಸ್ಯಾ ಅಲ್ಲ ಹಂ ಮತ್ತ…

ವಾರಕರಿ : ಆತರೆಪ.. ನಾ ಕಿವಿಗಿ ಕೇಳಿಸಿಕೊಂಡದ್ದ ಹೇಳಾಕತ್ತೇನಿ. ಖರೆ ಖೊಟ್ಟಿ ಗೊತ್ತಿಲ್ಲ ಹಂ ಮತ್ತ…

ರೈತ ೨ : ಮತ್ತ ಹೇಳಲ್ಲ…

ವಾರಕರಿ : ನಮ್ಮ ಕಡೀ ದೊಡ್ಡ ಪುಢಾರಿ ರಾಷ್ಟ್ರೀಯ ಪ್ರಜಾಪಕ್ಷದ ಅಧ್ಯಕ್ಷ ಶಾಮರಾವ ಕದಮ್ ನಿಮ್ಮ ಕಡಿ ಆಗಾಗ ಬರತಿರತಾರ… ಹಂಗ ನೋಡಿದರ ಪೈಲೆ ಭಂಷಂ ರಾಜಕಾರಣದಾಗ ಇದ್ದವರsನ… ಆದರ ಕೇಂದ್ರಕ್ಕ ಹ್ವಾದಮ್ಯಾಲ ಅದನ್ನ ಬಿಟ್ಟಾರ… ಅವರು ಇಲ್ಲಿ ನಿಮ್ಮ ಪುಢಾರಿಗಳಿಗಿ ಕಿವ್ಯಾಗ ಹೇಳಿದ್ರು…

ಕೂಲಿ ೧ : ಏನಂತ?

ವಾರಕರಿ : ತಡಿ ಅದನ್ನ ಹೇಳಾಕತ್ತೀನಿ… (ತಡೆದು) ಮ್… ಮಾದಾಯಿ ಸಮಸ್ಯೆ ಬಗಿಹರಿಬೇಕಂದರ ಗೋವಾ… ಇನ್ನ ಭಾಷಾ ಸಮಸ್ಯಾನೂ ತಣ್ಣಗಾಗಬೇಕಾದರ, ಗೋವಾ ಜತಿಗಿ ದಕ್ಷಿಣ ಮಾರಾಷ್ಟ್ರ ಸೇರಿಸಿ ನಿಮ್ಮ ಉತ್ತರ ಕರ್ನಾಟಕ ಕೂಡಿಸಿಕೊಂಡನ ‘ಉತ್ತರ ಕರ್ನಾಟಕ’ ರಾಜ್ಯ ಬ್ಯಾರಿ ಆಗಲಿ ಅಂತ ಸಲ್ಲಾ ಕೊಟ್ರು… ಮತ್ತ ಇಲ್ಲಿ ಪುಢಾರಿಗಳು ಶಾಮರಾವ ಕದಮ್‌ರ ಖಾಸಾ ಶಿಷ್ಯ… ಮತ್ತೇನ ಕೇಳತಿ, ಎಂಥ ಶಾಣ್ಯಾ ಅದಿಲೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿ… ಅಂತ ಕೂಗಾಕ ಸುರುವು ಮಾಡಿದ್ರು… ಅಷ್ಟಽ…

ಎಲ್ಲರೂ : ಅಬಬಬಬ… ಭಲೆ ಕತಿ ಏಳ…

ನಿವೇದಕ : (ಎದ್ದು ಅವನ ಬಳಿ ಸರಿದು ಅಪ್ಪುತ್ತ) ಶಾಭಾಶ್… ನಾ ಏನ ತಿಳಕೊಂಡಿದ್ನಿ ಬಿಡು… ಎಂಥ ಒಳಸೂಕ್ಷ್ಮ ಹೇಳಿದಿ… ಆದರ ಬ್ಯಾರೆ ರಾಜ್ಯ ಆಗೋದಿಲ್ಲ ತಗಿ… ಕಾರಣ ಅದಕ್ಕ ದುಡಿದವರಽ ಕರ್ನಾಟಕದ ಉತ್ತರ ಭಾಗದೋರು, ಹಾಂ!

ಕೂಲಿ ೧ : ಬರೊಬ್ಬರಿ ಹೇಳಿದ್ರಿ… ಆದರ ಈ ವಾರಕರಿ ಮಾತ್ರ ಭಾಳ ಖಂವಟ ಕಾಣತಾನ ಹಂ…

ವಾರಕರಿ : ನಾಕೂರು ನೀರ ಕುಡಿದ್ಯಾನಲ್ಲ! (ನಗು)

ರೈತ : (ತಮಾಷೆಯಾಗಿ) ಇಂವ್ನ ಹಿಂಗಽ ಬಿಟ್ಟರ… ರಾಜ್ಯ ಬಡದ ಹೋಳ ಮಾಡ್ಯಾನು… (ನಗು) (ಜತೆಗೆ ಎಲ್ಲರೂ ನಗುವರು. ಕತ್ತಲೆ)

ಇದನ್ನೂ ಓದಿ : Rain : ನಾ ‘ಪ್ಲುವಿಯೋಫೈಲ್‌’, ನೀ ಎನ್ನ ರೂಹ್​! ಇರ್ತೀಯಲ್ವಾ?