VIDEO: ಪಂದ್ಯದ ಬಳಿಕ ಸಹ ಆಟಗಾರನನ್ನು ಅಶ್ಲೀಲವಾಗಿ ಬೈದ ಶ್ರೇಯಸ್ ಅಯ್ಯರ್
IPL 2025 RCB vs PBKS: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಫೈನಲ್ ಆಡಲಿರುವ ತಂಡಗಳಾವುವು ಎಂಬುದು ನಿರ್ಧಾರವಾಗಿದೆ. ಜೂನ್ 3 ರಂದು ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ಚಾಂಪಿಯನ್ ಪಟ್ಟ ಅಲಂಕರಿಸಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೋಲುಣಿಸಿ ಪಂಜಾಬ್ ಕಿಂಗ್ಸ್ ಫೈನಲ್ಗೆ ಪ್ರವೇಶಿಸಿದೆ. ಈ ಗೆಲುವಿನ ರೂವಾರಿ ಶ್ರೇಯಸ್ ಅಯ್ಯರ್. ಆದರೆ ಅದೇ ಅಯ್ಯರ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನೀಡಿದ 203 ರನ್ಗಳ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು 19 ಓವರ್ಗಳಲ್ಲಿ 207 ರನ್ ಬಾರಿಸಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಬಳಿಕ ಉಭಯ ತಂಡಗಳು ಪರಸ್ಪರ ಹಸ್ತಲಾಘವ ಮಾಡಲು ಮುಂದಾಗಿದ್ದರು. ಇದೇ ವೇಳೆ ಪಂಜಾಬ್ ಕಿಂಗ್ಸ್ ತಂಡದ ಆಟಗಾರ ಶಶಾಂಕ್ ಸಿಂಗ್ಗೆ ಎದುರಾಗಿದ್ದಾರೆ.
ಶಶಾಂಕ್ ಸಿಂಗ್ನನ್ನು ನೋಡುತ್ತಿದ್ದಂತೆ ತಾಳ್ಮೆ ಕಳೆದುಕೊಂಡ ಶ್ರೇಯಸ್ ಅಯ್ಯರ್, ಅಶ್ಲೀಲವಾಗಿ ನಿಂದಿಸಿದರು. ಅಲ್ಲದೆ ಇಬ್ಬರು ಶೇಕ್ ಹ್ಯಾಂಡ್ ಮಾಡದೇ ಮುಂದುವರೆದರು.
ಶ್ರೇಯಸ್ ಅಯ್ಯರ್ ಹೀಗೆ ಕೋಪಗೊಳ್ಳಲು ಮುಖ್ಯ ಕಾರಣ, ನಿರ್ಣಾಯಕ ಹಂತದಲ್ಲಿ ಶಶಾಂಕ್ ಸಿಂಗ್ ವಿಕೆಟ್ ಕೈಚೆಲ್ಲಿರುವುದು. 17ನೇ ಓವರ್ನ 4ನೇ ಎಸೆತದಲ್ಲಿ ಒಂದು ರನ್ ಓಡುವ ಯತ್ನದಲ್ಲಿ ಶಶಾಂಕ್ ರನೌಟ್ ಆಗಿದ್ದರು. ಆದರೆ ಅವರು ರನೌಟ್ ಆಗಲು ಮುಖ್ಯ ಕಾರಣ ನಿಧಾನಗತಿಯಲ್ಲಿ ಓಡಿರುವುದು ಎಂಬುದು ರಿಪ್ಲೇನಲ್ಲಿ ಕಂಡು ಬಂತು.
ಇದರಿಂದ ಕುಪಿತಗೊಂಡಿದ್ದ ಶ್ರೇಯಸ್ ಅಯ್ಯರ್, ಶಶಾಂಕ್ ಸಿಂಗ್ ಎದುರಾಗುತ್ತಿದ್ದಂತೆ ಬೈದಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.