AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಬ್ಲ್ಯುಟಿಒದಲ್ಲಿ ಭಾರತ ನೀಡಿದ ನೋಟೀಸ್​ಗೆ ಅಮೆರಿಕದ ನಿರ್ಲಕ್ಷ್ಯ; ಭಾರತದಿಂದ ಪ್ರತಿಸುಂಕ ವಿಧಿಸುವ ಸಾಧ್ಯತೆ

US rejects India's notice at WTO: ಉಕ್ಕು ಮತ್ತು ಅಲೂಮಿನಿಯಂ ವಸ್ತುಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸುವ ನಿರ್ಧಾರ ಮಾಡಿರುವ ಅಮೆರಿಕ ವಿರುದ್ಧ ಭಾರತ ಪ್ರತಿಸುಂಕ ಹೇರುವ ಸಾಧ್ಯತೆ ಇದೆ. ಈ ಸಂಬಂಧ ಡಬ್ಲ್ಯುಟಿಒದಲ್ಲಿ ಭಾರತ ನೋಟೀಸ್ ಕೊಟ್ಟಿತ್ತು. ಭಾರತದ ನೋಟೀಸ್ ಅನ್ನು ಅಮೆರಿಕ ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಭಾರತವು ಕೆಲ ಅಮೆರಿಕನ್ ವಸ್ತುಗಳ ಮೇಲೆ ಆಮದು ಸುಂಕ ಏರಿಸಬಹುದು ಎನ್ನಲಾಗಿದೆ.

ಡಬ್ಲ್ಯುಟಿಒದಲ್ಲಿ ಭಾರತ ನೀಡಿದ ನೋಟೀಸ್​ಗೆ ಅಮೆರಿಕದ ನಿರ್ಲಕ್ಷ್ಯ; ಭಾರತದಿಂದ ಪ್ರತಿಸುಂಕ ವಿಧಿಸುವ ಸಾಧ್ಯತೆ
ಡಬ್ಲ್ಯುಟಿಒ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 02, 2025 | 1:56 PM

Share

ನವದೆಹಲಿ, ಜೂನ್ 2: ಭಾರತದ ಉಕ್ಕು ಮತ್ತು ಅಲೂಮಿನಿಯಂ ವಸ್ತುಗಳ ಮೇಲೆ ಬಹಳ ಹೆಚ್ಚು ಆಮದು ಸುಂಕ ವಿಧಿಸುವ ಅಮೆರಿಕಕ್ಕೆ ತಾನೂ ಪ್ರತಿಸುಂಕ (retaliatory tariffs) ವಿಧಿಸುವುದಾಗಿ ಭಾರತವು ಡಬ್ಲ್ಯುಟಿಒದಲ್ಲಿ ಎಚ್ಚರಿಕೆಯ ನೋಟೀಸ್ ಕೊಟ್ಟಿದೆ. ಮೇ 9ರಂದು ಭಾರತ ಕೊಟ್ಟ ಆ ನೋಟೀಸ್ ಅನ್ನು ಅಮೆರಿಕ ತಿರಸ್ಕರಿಸಿದೆ. ತಾನು ದೇಶೀಯ ಉದ್ಯಮ ರಕ್ಷಿಸಲು ಆ ಕ್ರಮ ತೆಗೆದುಕೊಂಡಿಲ್ಲ. ಆದ್ದರಿಂದ ಈ ವಿಚಾರದಲ್ಲಿ ಭಾರತದ ಜೊತೆ ಯಾವುದೇ ಚರ್ಚೆ ಮಾಡುವ ಅಗತ್ಯ ಇಲ್ಲ ಎಂದು ಅಮೆರಿಕ ಹೇಳುತ್ತಿದೆ. ತನ್ನ ಎಚ್ಚರಿಕೆಗೆ ಬಗ್ಗೆ ಅಮೆರಿಕದ ಮೇಲೆ ಭಾರತವು ಡಬ್ಲ್ಯುಟಿಒದಲ್ಲಿ ನೋಟೀಸ್ ನೀಡಿದಂತೆ ಪ್ರತಿಸುಂಕ ಕ್ರಮ ಜರುಗಿಸಬಹುದು ಎಂದು ಹೇಳಲಾಗುತ್ತಿದೆ.

ವರದಿಗಳ ಪ್ರಕಾರ, ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುವ ಆಲ್ಮಂಡ್, ವಾಲ್ನಟ್ ಇತ್ಯಾದಿ ಡ್ರೈಫ್ರೂಟ್​ಗಳಿಗೆ ನೀಡಲಾಗುತ್ತಿರುವ ರಿಯಾಯಿತಿಯನ್ನು ಭಾರತ ಹಿಂಪಡೆಯಬಹುದು. ಅಮೆರಿಕದಿಂದ ಬರುವ ವಿವಿಧ ಲೋಹಗಳ ಮೇಲೆ ಹೆಚ್ಚಿನ ಆಮದು ಸುಂಕ ವಿಧಿಸಬಹುದು.

ಮಾರ್ಚ್ 12ಕ್ಕೆ ಜಾರಿಯಾಗುವಂತೆ ಎಲ್ಲಾ ಉಕ್ಕು ಮತ್ತು ಅಲೂಮಿನಿಯಂ ಆಮದುಗಳ ಮೇಲೆ ಶೇ. 25ರಷ್ಟು ಸುಂಕ ವಿಧಿಸಲು ಅಮೆರಿಕ ಸರ್ಕಾರ ಫೆಬ್ರುವರಿ 10ರಂದು ನಿರ್ಧಾರ ತೆಗೆದುಕೊಂಡಿತ್ತು. ಇಷ್ಟಕ್ಕೆ ಸುಮ್ಮನಾಗದ ಟ್ರಂಪ್ ಸರ್ಕಾರ, ಜೂನ್ 4ರಂದು ಅನ್ವಯ ಆಗುವಂತೆ ಸುಂಕವನ್ನು ಶೇ. 50ಕ್ಕೆ ಹೆಚ್ಚಿಸಲು ಮೇ 30ರಂದು ನಿರ್ಧರಿಸಿತು.

ಇದನ್ನೂ ಓದಿ: ಬ್ರಹ್ಮಪುತ್ರ ನದಿಯನ್ನು ಚೀನಾ ತಡೆದರೆ ಭಾರತಕ್ಕೆ ಎಂಥ ಹಾನಿ? ಚೀನಾದಿಂದ ಭಾರತಕ್ಕೆ ಹರಿದುಬರುವ ಬೇರೆ ನದಿಗಳ್ಯಾವುವು?

ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಅಮೆರಿಕ ಹೇಳುತ್ತಿದೆ. ಈ ಕಾರಣವೊಡ್ಡಿ ಭಾರತದ ನೋಟೀಸ್ ಅನ್ನು ಅಮೆರಿಕ ತಿರಸ್ಕರಿಸಿದೆ.

ಅಮೆರಿಕವು ತನ್ನ ಲೋಹ ಉದ್ದಿಮೆಗಳನ್ನು ರಕ್ಷಿಸಲು ಆಮದು ಸುಂಕ ಏರಿಸಿದೆ. ತಾನೂ ಕೂಡ ಅಮೆರಿಕಕ್ಕೆ ನೀಡಿರುವ ರಿಯಾಯಿತಿ ಇತ್ಯಾದಿ ಸೌಲಭ್ಯವನ್ನು ಕೈಬಿಡುತ್ತೇವೆ ಎಂದು ಭಾರತವು ಮೇ 9ರಂದು ಅಧಿಕೃತವಾಗಿ ಡಬ್ಲ್ಯುಟಿಒದಲ್ಲಿ ಅಧಿಸೂಚನೆ ಹೊರಡಿಸಿತು. ಅಮೆರಿಕಕ್ಕೆ 30 ದಿನಗಳ ಕಾಲಾವಕಾಶ ಕೊಟ್ಟಿತು. ಅದು ಜೂನ್ 8ಕ್ಕೆ ಮುಗಿಯುತ್ತದೆ.

ಭಾರತದ ಪ್ರಸ್ತಾಪಿತ ಪ್ರತಿಸುಂಕ ಕ್ರಮವು ಬಹುಪಕ್ಷೀಯ ವ್ಯಾಪಾರ ನಿಯಮಗಳಿಗೆ ಸಂಬದ್ಧವಾಗಿಲ್ಲ. ಅಮೆರಿಕವು ಸುಂಕ ಏರಿಕೆ ಮಾಡಿರುವುದು ಲೋಹ ಉದ್ದಿಮೆಗಳ ರಕ್ಷಣೆಗೆ ಅಲ್ಲ. ಆರ್ಟಿಕಲ್ 8.2 ಅಡಿಯಲ್ಲಿ ಇರುವ ರಿಯಾಯಿತಿ ಮತ್ತಿತರ ಸೌಲಭ್ಯಗಳನ್ನು ಹಿಂಪಡೆಯುವ ಭಾರತದ ಪ್ರಸ್ತಾಪಕ್ಕೆ ಯಾವುದೇ ಆಧಾರ ಇಲ್ಲ ಎಂದು ಅಮೆರಿಕ ಸರ್ಕಾರವು ಡಬ್ಲ್ಯುಟಿಒಗೆ ಉತ್ತರಿಸಿದೆ.

ಇದನ್ನೂ ಓದಿ: GST collections: ಮೇ ತಿಂಗಳಲ್ಲಿ 2.01 ಲಕ್ಷ ಕೋಟಿ ರೂನಷ್ಟು ಜಿಎಸ್​​ಟಿ ಸಂಗ್ರಹ

ಈಗ ಚೆಂಡು ಭಾರತದ ಅಂಗಳದಲ್ಲಿದೆ. ಅಮೆರಿಕದ ಕೆಲ ವಸ್ತುಗಳ ಮೇಲೆ ಭಾರತವು ಟ್ಯಾರಿಫ್ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಕೆಲ ಮೂಲಗಳನ್ನು ಉಲ್ಲೇಖಿಸಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ