GST collections: ಮೇ ತಿಂಗಳಲ್ಲಿ 2.01 ಲಕ್ಷ ಕೋಟಿ ರೂನಷ್ಟು ಜಿಎಸ್ಟಿ ಸಂಗ್ರಹ
GST collections in May month: 2025ರ ಮೇ ತಿಂಗಳಲ್ಲಿ ಭಾರತ ಸರ್ಕಾರ ಸಂಗ್ರಹಿಸಿದ ಜಿಎಸ್ಟಿ ಮೊತ್ತ 2.01 ಲಕ್ಷ ಕೋಟಿ ರೂ ಆಗಿದೆ. 2024ರ ಮೇ ತಿಂಗಳಲ್ಲಿ 1.72 ಲಕ್ಷ ಕೋಟಿ ರೂ ಜಿಎಸ್ಟಿ ಸಿಕ್ಕಿತ್ತು. ಹಿಂದಿನ ತಿಂಗಳಲ್ಲಿ, ಅಂದರೆ, 2025ರ ಏಪ್ರಿಲ್ ತಿಂಗಳಲ್ಲಿ ದಾಖಲೆಯ 2.37 ಲಕ್ಷ ಕೋಟಿ ರೂ ಟ್ಯಾಕ್ಸ್ ಕಲೆಕ್ಷನ್ಸ್ ಬಂದಿತ್ತು.

ನವದೆಹಲಿ, ಜೂನ್ 1: ಕಳೆದ ತಿಂಗಳು (2025ರ ಮೇ) ಭಾರತದಲ್ಲಿ 2.01 ಲಕ್ಷ ಕೋಟಿ ರೂ ಜಿಎಸ್ಟಿ ಸಂಗ್ರಹ (GST collections) ಆಗಿದೆ. ಹಿಂದಿನ ವರ್ಷದ ಇದೇ ತಿಂಗಳಲ್ಲಿ (2024ರ ಮೇ) 1.72 ಲಕ್ಷ ಕೋಟಿ ರೂ ಜಿಎಸ್ಟಿ ಹರಿದು ಬಂದಿತ್ತು. ಅದಕ್ಕೆ ಹೋಲಿಸಿದರೆ ಈ ವರ್ಷದ ಮೇ ತಿಂಗಳಲ್ಲಿ ಜಿಎಸ್ಟಿ ಸಂಗ್ರಹ ಶೇ. 16.4ರಷ್ಟು ಹೆಚ್ಚಾಗಿದೆ. ಭಾನುವಾರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶದಿಂದ ಈ ಮಾಹಿತಿ ತಿಳಿದುಬಂದಿದೆ.
2025ರ ಮೇ ತಿಂಗಳಲ್ಲಿ ಒಟ್ಟಾರೆ ಜಿಎಸ್ಟಿ ಆದಾಯ (GST revenue) 4.37 ಲಕ್ಷ ಕೋಟಿ ರೂನಷ್ಟು ದಾಖಲಾಗಿದೆ. ಹಿಂದಿನ ವರ್ಷದಲ್ಲಿ ಇದು 3.83 ಲಕ್ಷ ಕೋಟಿ ರೂ ನಷ್ಟಿತ್ತು. ಇದರಲ್ಲಿ ಶೇ. 14.3ರಷ್ಟು ಏರಿಕೆ ಆಗಿದೆ.
ಇದನ್ನೂ ಓದಿ: ಇಎಲ್ಐ ಸ್ಕೀಮ್ಗೆ ಯುಎಎನ್ ಸಕ್ರಿಯಗೊಳಿಸಲು ಡೆಡ್ಲೈನ್ ವಿಸ್ತರಣೆ; ಏನಿದು ಯೋಜನೆ, ಸುಲಭದಲ್ಲಿ ಯುಎಎನ್ ಆ್ಯಕ್ಟಿವೇಟ್ ಹೇಗೆ?
ಇನ್ನು, ಮೇ ತಿಂಗಳಲ್ಲಿ ಸರ್ಕಾರವು ಜಿಎಸ್ಟಿ ರೀಫಂಡ್ ಮಾಡಿದ ಪ್ರಮಾಣ 27,210 ಕೋಟಿ ರೂ. ಹಿಂದಿನ ವರ್ಷದ ಮೇಗೆ ಹೋಲಿಸಿದರೆ ರೀಫಂಡ್ ಶೇ. 4ರಷ್ಟು ಕಡಿಮೆ ಆಗಿದೆ.
ಈ ರೀಫಂಡ್ ಕಳೆದು ಉಳಿಯುವ ನಿವ್ವಳ ಜಿಎಸ್ಟಿ ಆದಾಯ 1,73,841 ಕೋಟಿ ರೂ ಆಗುತ್ತದೆ. ಇದರಲ್ಲಿ ಶೇ. 20.4ರಷ್ಟು ಹೆಚ್ಚಳ ಆಗಿದೆ.
ಈ ಬಾರಿಯ ಬಜೆಟ್ನಲ್ಲಿ ಸರ್ಕಾರವು ಜಿಎಸ್ಟಿ ಆದಾಯದಲ್ಲಿ ಶೇ. 11ರಷ್ಟು ಏರಿಕೆ ಆಗಬಹುದು ಎಂದು ನಿರೀಕ್ಷಿಸಿದೆ. ಒಟ್ಟಾರೆ 11.78 ಲಕ್ಷ ಕೋಟಿ ರೂನಷ್ಟು ನಿವ್ವಳ ಜಿಎಸ್ಟಿ ತೆರಿಗೆಗಳು ಸಿಗಬಹುದು ಎಂಬುದು ಸರ್ಕಾರದ ಎಣಿಕೆ.
ಇದನ್ನೂ ಓದಿ: ADB support: ನಗರ ಮೂಲಸೌಕರ್ಯ ಬಲಪಡಿಸಲು ಭಾರತಕ್ಕೆ 10 ಬಿಲಿಯನ್ ಡಾಲರ್ ನೆರವಿಗೆ ಎಡಿಬಿ ಸಿದ್ಧ
ಈ ಹಣಕಾಸು ವರ್ಷದ ಮೊದಲೆರಡು ತಿಂಗಳಲ್ಲಿ ಜಿಎಸ್ಟಿ ಸಂಗ್ರಹ 2 ಲಕ್ಷ ಕೋಟಿ ರೂ ದಾಟಿದೆ. ಏಪ್ರಿಲ್ನಲ್ಲಿ 2.37 ಲಕ್ಷ ಕೋಟಿ ರೂ ತೆರಿಗೆ ಸಿಕ್ಕಿತ್ತು. ಇದು ಇತಿಹಾಸದಲ್ಲೇ ಯಾವುದೇ ತಿಂಗಳಲ್ಲಿ ಬಂದ ಜಿಎಸ್ಟಿ ಸಂಗ್ರಹ. ಬಜೆಟ್ ಎಣಿಕೆಯಂತೆ ಈ ವರ್ಷದ ಜಿಎಸ್ಟಿ ಸಂಗ್ರಹದ ಗುರಿ ಈಡೇರುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




