ಇಎಲ್ಐ ಸ್ಕೀಮ್ಗೆ ಯುಎಎನ್ ಸಕ್ರಿಯಗೊಳಿಸಲು ಡೆಡ್ಲೈನ್ ವಿಸ್ತರಣೆ; ಏನಿದು ಯೋಜನೆ, ಸುಲಭದಲ್ಲಿ ಯುಎಎನ್ ಆ್ಯಕ್ಟಿವೇಟ್ ಹೇಗೆ?
Know how to activate UAN online: ಹೊಸ ಉದ್ಯೋಗಿಗಳಿಗೆ ಅನ್ವಯ ಆಗುವ ಇಎಲ್ಐ ಸ್ಕೀಮ್ ಅಡಿಯಲ್ಲಿ ಯುಎಎನ್ ನಂಬರ್ ಅನ್ನು ಸಕ್ರಿಯಗೊಳಿಸುವುದು ಕಡ್ಡಾಯ. ಈ ಕಾರ್ಯಕ್ಕೆ ಮೇ 30ಕ್ಕೆ ಇದ್ದ ಡೆಡ್ಲೈನ್ ಅನ್ನು ಜೂನ್ 30ಕ್ಕೆ ವಿಸ್ತರಿಸಲಾಗಿದೆ. ಯುಎಎನ್ ಸಕ್ರಿಯಗೊಳಿಸುವುದು ಮಾತ್ರವಲ್ಲ, ಬ್ಯಾಂಕ್ ಖಾತೆಗೆ ಆಧಾರ್ ಜೋಡಿತವಾಗಿರಬೇಕು. ಈ ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ...

ನವದೆಹಲಿ, ಜೂನ್ 1: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಉದ್ಯೋಗ ಆಧಾರಿತ ಪ್ರೋತ್ಸಾಹಕ ಯೋಜನೆಯಾದ ಇಎಲ್ಐ ಸ್ಕೀಮ್ (ELI- Employee linked incentive scheme) ಅಡಿಯಲ್ಲಿ ಫಲಾನುಭವ ಪಡೆಯಲು ಇಪಿಎಫ್ ಸದಸ್ಯರು ತಮ್ಮ ಯುಎಎನ್ ನಂಬರ್ ಅನ್ನು ಆ್ಯಕ್ಟಿವೇಟ್ (UAN activation) ಮಾಡಬೇಕು ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು. ಇಎಲ್ಐ ಸ್ಕೀಮ್ ಲಾಭ ಪಡೆಯಲು ಇವೆರಡು ಕಾರ್ಯಗಳಿಗೆ ನೀಡಿರುವ ಗಡುವನ್ನು ಜೂನ್ 30ಕ್ಕೆ ವಿಸ್ತರಿಸಲಾಗಿದೆ. ಈ ಹಿಂದೆ ಹಲವು ಬಾರಿ ಡೆಡ್ಲೈನ್ ವಿಸ್ತರಿಸಲಾಗಿತ್ತು. ಮೇ 31ರವರೆಗೆ ಕಾಲಾವಕಾಶ ಇತ್ತು. ಈಗ ಮತ್ತೆ ಅದನ್ನು ಒಂದು ತಿಂಗಳು ವಿಸ್ತರಿಸಲಾಗಿದೆ. ಮೇ 30, ಶುಕ್ರವಾರ ಇಪಿಎಫ್ಒ ಸಂಸ್ಥೆ ಸುತ್ತೋಲೆ ಹೊರಡಿಸಿ, ಈ ಮಾಹಿತಿ ನೀಡಿದೆ.
ಏನಿದು ಯುಎಎನ್ ನಂಬರ್?
ಇಪಿಎಫ್ ಖಾತೆ ಇರುವವರಿಗೆ ಯುಎಎನ್ ನೀಡಲಾಗುತ್ತದೆ. ಪ್ಯಾನ್ ನಂಬರ್ ರೀತಿ ಇದೂ ಒಂದು ಅನನ್ಯ ಸಂಖ್ಯೆ. 12 ಅಂಕಿಗಳಿರುವ ನಂಬರ್. ಒಂದು ಯುಎಎನ್ ಅಡಿ ಒಬ್ಬ ವ್ಯಕ್ತಿಯ ಎಲ್ಲಾ ಇಪಿಎಫ್ ಖಾತೆಗಳೂ ಒಳಗೊಂಡಿರುತ್ತವೆ. ಉದ್ಯೋಗಿಯು ಕೆಲಸ ಬದಲಿಸಿದಾಗ ಹೊಸ ಇಪಿಎಫ್ ಖಾತೆ ಮಾಡಲಾಗುತ್ತದೆಯಾದರೂ ಹಳೆಯ ಯುಎಎನ್ ನಂಬರ್ ಅನ್ನು ಮುಂದುವರಿಸಲಾಗುತ್ತದೆ. ಹಳೆಯ ಇಪಿಎಫ್ ಖಾತೆಯನ್ನು ಹೊಸ ಖಾತೆಯೊಂದಿಗೆ ಜೋಡಿಸಲು ಈ ಯುಎಎನ್ ಬೇಕಾಗುತ್ತದೆ.
ಇದನ್ನೂ ಓದಿ: ಇಪಿಎಸ್ ಪೆನ್ಷನ್ ಸ್ಕೀಮ್; ಕನಿಷ್ಠ ಪಿಂಚಣಿ 3,000 ರೂಗೆ ಏರುತ್ತಾ, 9,000 ರೂಗೆ ಏರುತ್ತಾ? ಇಲ್ಲಿದೆ ಡೀಟೇಲ್ಸ್
ಯುಎಎನ್ ಸಕ್ರಿಯಗೊಳಿಸುವುದು ಹೇಗೆ?
- ಇಪಿಎಫ್ಒ ಮೆಂಬರ್ ಪೋರ್ಟಲ್ಗೆ ಹೋಗಿ
- ಆ್ಯಕ್ಟಿವೇಟ್ ಯುಎಎನ್ ಕ್ಲಿಕ್ ಮಾಡಿ
- ಯುಎಎನ್, ಆಧಾರ್ ಸಂಖ್ಯೆ, ಹೆಸರು, ಜನ್ಮದಿನಾಂಕ, ಮೊಬೈಲ್ ನಂಬರ್ (ಆಧಾರ್ ಜೋಡಿತ) ನಮೂದಿಸಿ
- ಮೊಬೈಲ್ ನಂಬರ್ಗೆ ಬರುವ ಒಟಿಪಿಯನ್ನು ಸಲ್ಲಿಸಿರಿ.
ಈಗ ಯುಎಎನ್ ಆ್ಯಕ್ಟಿವೇಟ್ ಆಗುತ್ತದೆ. ಅದಾದ ಬಳಿಕ ಮೊಬೈಲ್ ನಂಬರ್ಗೆ ಪಾಸ್ವರ್ಡ್ ಬರುತ್ತದೆ. ಯುಎಎನ್ ಮತ್ತು ಪಾಸ್ವರ್ಡ್ ಬಳಸಿ ಇಪಿಎಫ್ ಪೋರ್ಟಲ್ಗೆ ನೀವು ಲಾಗಿನ್ ಆಗಬಹುದು. ಅಲ್ಲಿ ನಿಮ್ಮ ಎಲ್ಲಾ ಇಪಿಎಫ್ ಅಕೌಂಟ್ಗಳನ್ನು ಒಂದೇ ಲಿಸ್ಟ್ನಲ್ಲಿ ನೋಡಬಹುದು. ಅಡ್ವಾನ್ಸ್ ಪಡೆಯುವುದು, ಇಡೀ ಹಣ ವಿತ್ಡ್ರಾ ಮಾಡುವುದು ಇತ್ಯಾದಿ ಕಾರ್ಯಗಳನ್ನು ಮಾಡಬಹುದು.
ಇಎಲ್ಐ ಸ್ಕೀಮ್ ಯಾವುದು?
ಎಂಪ್ಲಾಯೀ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್ ಅನ್ನು 2024ರ ಬಜೆಟ್ನಲ್ಲಿ ಘೋಷಿಸಲಾಗಿದೆ. ಇದು ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶದಿಂದ ರೂಪಿಸಲಾಗಿರುವ ಯೋಜನೆ. ಇದರಲ್ಲಿ ಮೂರು ಸ್ಕೀಮ್ಗಳಿವೆ.
ಇದನ್ನೂ ಓದಿ: ವಿಲೀನಗೊಳ್ಳದ ಇಪಿಎಫ್ ಖಾತೆಗೆ ಬಡ್ಡಿ ಹಣ ಕ್ರೆಡಿಟ್ ಆಗುತ್ತಾ? ಇಲ್ಲಿದೆ ಡೀಟೇಲ್ಸ್
ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುತ್ತಿರುವವರಿಗೆ ಸರ್ಕಾರವು ಒಂದು ತಿಂಗಳ ಸಂಬಳವನ್ನು ಸಬ್ಸಿಡಿ ಅಥವಾ ಪ್ರೋತ್ಸಾಹಕವಾಗಿ ನೀಡುತ್ತದೆ. ಆದರೆ, ಈ ಹಣ ಗರಿಷ್ಠ 15,000 ರೂಗೆ ಮಿತಿಗೊಂಡಿರುತ್ತದೆ. ಇಂಥ ಚೊಚ್ಚಲ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಕಂಪನಿಗಳಿಗೂ ಸರ್ಕಾರ ಪ್ರೋತ್ಸಾಹಕ ಒದಗಿಸುತ್ತದೆ. ಉದ್ಯೋಗಿಗೆ ನೀಡಲಾಗುವ ಇಪಿಎಫ್ ಕೊಡುಗೆಯಲ್ಲಿ ಸರ್ಕಾರವೂ ಒಂದು ಭಾರತ ಹೊರುತ್ತದೆ.
ಹಾಗೆಯೇ, ಕಂಪನಿಗಳು ಹೆಚ್ಚುವರಿ ಉದ್ಯೋಗಿಗಳನ್ನು ಸೇರಿಸಿಕೊಂಡಾಗಲೂ ಸರ್ಕಾರವು ಇಪಿಎಫ್ ಕೊಡುಗೆಯ ಭಾರವನ್ನು ಹಂಚಿಕೊಳ್ಳುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ