EPFO: ಇಪಿಎಸ್ ಪೆನ್ಷನ್ ಸ್ಕೀಮ್; ಕನಿಷ್ಠ ಪಿಂಚಣಿ 3,000 ರೂಗೆ ಏರುತ್ತಾ, 9,000 ರೂಗೆ ಏರುತ್ತಾ? ಇಲ್ಲಿದೆ ಡೀಟೇಲ್ಸ್
Will minimum pension under EPS get increased?: ಎಂಪ್ಲಾಯೀ ಪೆನ್ಷನ್ ಸ್ಕೀಮ್ನಲ್ಲಿ ಸದ್ಯ 1,000 ರೂ ಇರುವ ಕನಿಷ್ಠ ಪಿಂಚಣಿಯನ್ನು 3,000 ರೂಗೆ ಏರಿಸುವ ಸಾಧ್ಯತೆ ಇದೆ. ಕೆಲ ವರದಿಗಳು ಕನಿಷ್ಠ ಇಪಿಎಸ್ ಪಿಂಚಣಿಯು 7,500 ರೂ ಅಥವಾ 9,000 ರೂಗೆ ಏರಿಸುವ ಸಾಧ್ಯತೆಯೂ ಇದೆ ಎನ್ನುತ್ತಿವೆ. ಇಪಿಎಫ್ ಅನ್ನು ನಿಭಾಯಿಸುವ ಇಪಿಎಫ್ಒ ಸಂಸ್ಥೆಯೇ ಇಪಿಎಸ್ ಸ್ಕೀಮ್ ನಡೆಸುತ್ತದೆ. ಇಪಿಎಸ್ಗೆ ಅರ್ಹನಾದ ಉದ್ಯೋಗಿಗೆ ಇಪಿಎಸ್ ಜೊತೆಗೆ ಇಪಿಎಫ್ ಖಾತೆಯೂ ಇರುತ್ತದೆ.

ನವದೆಹಲಿ, ಮೇ 29: ಉದ್ಯೋಗಿ ಪಿಂಚಣಿ ಯೋಜನೆಯಾದ ಇಪಿಎಸ್ (EPS) ಅಡಿಯಲ್ಲಿ ನೀಡಲಾಗುವ ಕನಿಷ್ಠ ಪೆನ್ಷನ್ ಮೊತ್ತವನ್ನು (minimum pension) ಸರ್ಕಾರ ಏರಿಸುವ ಸಾಧ್ಯತೆ ಇದೆ. ಮನಿಕಂಟ್ರೋಲ್ ಸೇರಿದಂತೆ ಕೆಲ ಮಾಧ್ಯಮಗಳಲ್ಲಿ ಬಂದ ವರದಿಗಳ ಪ್ರಕಾರ, ಕನಿಷ್ಠ ಇಪಿಎಸ್ ಪೆನ್ಷನ್ ಅನ್ನು 1,000 ರೂನಿಂದ 3,000 ರೂಗೆ ಏರಿಸಬಹುದು. ಮುಂದಿನ ಕೆಲ ತಿಂಗಳಲ್ಲಿ ಇದು ಜಾರಿಯಾಗುವಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ.
ಇನ್ನೂ ಕೆಲ ವರದಿಗಳ ಪ್ರಕಾರ ಕನಿಷ್ಠ ಇಪಿಎಸ್ ಪಿಂಚಣಿಯನ್ನು 7,500 ರೂ ಅಥವಾ 9,000 ರೂಗೂ ಏರಿಸುವ ಸಾಧ್ಯತೆ ಇದೆ. ಜೀವನ ವೆಚ್ಚ ಗಣನೀಯವಾಗಿ ಏರಿರುವ ಹಿನ್ನೆಲೆಯಲ್ಲಿ ಕನಿಷ್ಠ ಪಿಂಚಣಿಯನ್ನು ಸಾಕಷ್ಟು ಹೆಚ್ಚಿಸಬೇಕೆಂಬ ಆಗ್ರಹವಂತೂ ಇದೆ. ಆದರೆ, ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಖಾತ್ರಿ ಇಲ್ಲ. ಆದರೆ, 1,000 ರೂ ಇರುವ ಕನಿಷ್ಠ ಪಿಂಚಣಿಯನ್ನು ಏರಿಕೆ ಮಾಡುವುದು ನಿಶ್ಚಿತ ಎನ್ನಲಾಗುತ್ತಿದೆ.
ಏನಿದು ಇಪಿಎಸ್ ಪೆನ್ಷನ್?
ಇಪಿಎಸ್ ಎನ್ನುವುದು ಇಪಿಎಫ್ಒ ಸಂಸ್ಥೆಯಿಂದಲೇ ನಡೆಸಲಾಗುವ ರಿಟೈರ್ಮೆಂಟ್ ಸ್ಕೀಮ್. ಇಪಿಎಫ್ ಮತ್ತು ಇಪಿಎಸ್ ಎರಡನ್ನೂ ಇಪಿಎಫ್ಒ ನಿಭಾಯಿಸುತ್ತದೆಯಾದರೂ ಎರಡರ ಉದ್ದೇಶ ಭಿನ್ನವಾಗಿದೆ. ಇಪಿಎಫ್ನಲ್ಲಿ ನಿವೃತ್ತ ಉದ್ಯೋಗಿ ಲಂಪ್ಸಮ್ ಹಣ ಪಡೆಯಬಹುದು. ಇಪಿಎಸ್ನಲ್ಲಿ ಪಿಂಚಣಿ ಸಿಗುತ್ತದೆ.
ಇಪಿಎಸ್ಗೆ ಯಾರು ಅರ್ಹರು?
ಒಬ್ಬ ವ್ಯಕ್ತಿ ಕೆಲಸಕ್ಕೆ ಸೇರಿದಾಗ ಅವರ ಮೂಲ ವೇತನ ಮತ್ತು ತುಟ್ಟಿಭತ್ಯೆಯು ಸೇರಿ ತಿಂಗಳಿಗೆ 15,000 ರೂ ಮೀರಿರಬಾರದು. ಅಂಥವರಿಗೆ ಇಪಿಎಫ್ ಜೊತೆಗೆ ಇಪಿಎಸ್ ಅಕೌಂಟ್ ಅನ್ನೂ ತೆರೆಯಲಾಗುತ್ತದೆ.
ಇದನ್ನೂ ಓದಿ: ವಿಲೀನಗೊಳ್ಳದ ಇಪಿಎಫ್ ಖಾತೆಗೆ ಬಡ್ಡಿ ಹಣ ಕ್ರೆಡಿಟ್ ಆಗುತ್ತಾ? ಇಲ್ಲಿದೆ ಡೀಟೇಲ್ಸ್
ಉದ್ಯೋಗಿಯ ಸಂಬಳದಲ್ಲಿ ಶೇ. 12ರಷ್ಟು ಮೂಲವೇತನದ ಹಣವನ್ನು ಇಪಿಎಫ್ಗೆ ಮುರಿದುಕೊಳ್ಳಲಾಗುತ್ತದೆ. ಅಷ್ಟೇ ಮೊತ್ತವನ್ನು ಕಂಪನಿಯು ಆ ಉದ್ಯೋಗಿಯ ಇಪಿಎಫ್ ಅಕೌಂಟ್ಗೆ ನೀಡುತ್ತದೆ. ಇಲ್ಲಿ ಉದ್ಯೋಗಿಯು ಇಪಿಎಸ್ಗೆ ಅರ್ಹರಿದ್ದಲ್ಲಿ ಕಂಪನಿಯ ಕೊಡುಗೆಯು ಇಪಿಎಫ್ ಮತ್ತು ಇಪಿಎಸ್ಗೆ ಹಂಚಿಹೋಗುತ್ತದೆ. ಇಪಿಎಫ್ ಅಕೌಂಟ್ಗೆ ಶೇ. 3.67ರಷ್ಟು ಕೊಡುಗೆ ಹೋದರೆ, ಇಪಿಎಸ್ಗೆ ಶೇ. 8.33ರಷ್ಟು ಕೊಡುಗೆ ಹೋಗುತ್ತದೆ. ಸರ್ಕಾರದಿಂದಲೂ ಶೇ. 1.16ರಷ್ಟು ಕೊಡುಗೆ ಸಿಗುತ್ತದೆ.
10 ವರ್ಷವಾದರೂ ಕೆಲಸ ಮಾಡಿರಬೇಕು…
ಇಪಿಎಸ್ ಸೌಲಭ್ಯ ಇರುವ ಉದ್ಯೋಗಿಯು ಕನಿಷ್ಠ 10 ವರ್ಷ ಸೇವಾವಧಿ ಹೊಂದಿದ್ದರೆ ಮಾತ್ರ ಪಿಂಚಣಿಗೆ ಅರ್ಹರಿರುತ್ತಾರೆ. ಇಲ್ಲವಾದರೆ, ಅವರ ಇಪಿಎಸ್ ಅಕೌಂಟ್ನಲ್ಲಿ ಜಮೆಯಾಗಿರುವ ಹಣವನ್ನು ಲಂಪ್ಸಮ್ ಆಗಿ ಹಿಂಪಡೆಯಲು ಮಾತ್ರ ಅವಕಾಶ ಇರುತ್ತದೆ.
ಇಪಿಎಫ್ನಂತೆ ಇಪಿಎಸ್ ಹಣಕ್ಕೆ ಬಡ್ಡಿ ಸಿಕ್ಕೋದಿಲ್ಲ…
ಇಪಿಎಫ್ ಅಕೌಂಟ್ಗೆ ಸರ್ಕಾರವು ವರ್ಷಕ್ಕೆ ನಿರ್ದಿಷ್ಟ ಬಡ್ಡಿ ಹಣವನ್ನು ಜಮೆ ಮಾಡುತ್ತದೆ. ಇಪಿಎಸ್ ಅಕೌಂಟ್ಗೆ ಸರ್ಕಾರವು ಬಡ್ಡಿ ತುಂಬಿಸುವುದಿಲ್ಲ. ಆದರೆ, ಸರ್ಕಾರ ಪ್ರತೀ ತಿಂಗಳು ಉದ್ಯೋಗಿಯ ಮೂಲವೇತನದ ಶೇ. 1.16ರಷ್ಟು ಹಣವನ್ನು ಇಪಿಎಸ್ ಅಕೌಂಟ್ಗೆ ಹಾಕುತ್ತದೆ.
ಇದನ್ನೂ ಓದಿ: ಹಳೆಯ ಇಪಿಎಫ್ ಅಕೌಂಟ್ಗಳನ್ನು ಹೊಸ ಅಕೌಂಟ್ಗೆ ವಿಲೀನಗೊಳಿಸದಿದ್ದರೆ ಸಮಸ್ಯೆಗಳೇನು? ಇಲ್ಲಿದೆ ಡೀಟೇಲ್ಸ್
ಇಪಿಎಫ್ಗೂ ಇಪಿಎಸ್ಗೂ ಏನು ವ್ಯತ್ಯಾಸ?
ಇಪಿಎಫ್ ಎನ್ನುವುದು ಉದ್ಯೋಗಿಯ ನಿವೃತ್ತಿ ಕಾಲಕ್ಕೆ ಬೇಕಾದ ಹಣವನ್ನು ಉಳಿಸಲು ಕಲ್ಪಿಸಿರುವ ಮಾರ್ಗ. ಅಂದರೆ, ಸೇವಿಂಗ್ಸ್ ಸ್ಕೀಮ್. ನಿವೃತ್ತರಾದಾಗ ವ್ಯಕ್ತಿಯು ಇಪಿಎಫ್ ಖಾತೆಯಲ್ಲಿರುವ ಹಣವನ್ನು ಲಂಪ್ಸಮ್ ಆಗಿ ಹಿಂಪಡೆಯಬಹುದು.
ಇಪಿಎಸ್ ಎನ್ನುವುದು ಪಿಂಚಣಿಗೆಂದು ಮಾಡಿರುವ ಸ್ಕೀಮ್. ಇಲ್ಲಿ ವ್ಯಕ್ತಿ ನಿವೃತ್ತರಾದಾಗ ಅವರಿಗೆ ನಿರ್ದಿಷ್ಟ ಪಿಂಚಣಿಯನ್ನು ನೀಡಲಾಗುತ್ತದೆ.
ಇಪಿಎಸ್ನಲ್ಲಿ ಪಿಂಚಣಿ ಹೇಗೆ ನಿಗದಿಯಾಗುತ್ತದೆ?
ಇಪಿಎಸ್ನಲ್ಲಿ ಉದ್ಯೋಗಿಗೆ ಪಿಂಚಣಿ ನಿಗದಿ ಮಾಡಲು ಒಂದು ಸೂತ್ರ ಇದೆ. ಸಂಬಳ ಮತ್ತು ಸೇವಾವಧಿಯನ್ನು ಆಧರಿಸಿದ ಸೂತ್ರ ಅದು.
Pensionable Salary × Pensionable Service) / 70
ಇಲ್ಲಿ ಐದು ವರ್ಷಗಳ ಸರಾಸರಿ ಮಾಸಿಕ ಮೂಲವೇತನವನ್ನು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: ತೆರಿಗೆ ಪಾವತಿದಾರರಿಗೆ ಖುಷಿ ಸುದ್ದಿ, ಐಟಿಆರ್ ಫೈಲಿಂಗ್ಗೆ ಡೆಡ್ಲೈನ್ ಜುಲೈ 31 ಅಲ್ಲ, ಸೆಪ್ಟೆಂಬರ್ 15ರವರೆಗೆ ವಿಸ್ತರಣೆ
ಉದಾಹರಣೆಗೆ, ಉದ್ಯೋಗಿಯು ಕೊನೆಯ ಐದು ವರ್ಷದ ಸೇವಾವಧಿಯಲ್ಲಿ ಮಾಸಿಕ ಮೂಲವೇತನ 15,000 ರೂ ಆಗಿದೆ ಎಂದಿಟ್ಟುಕೊಳ್ಳಿ. ಅವರ ಒಟ್ಟು ಸೇವಾವಧಿ 30 ವರ್ಷ ಇದ್ದಲ್ಲಿ ಆಗ ಈ ಸೂತ್ರ ಹೀಗಿರುತ್ತದೆ:
ಮಾಸಿಕ ಪಿಂಚಣಿ = (15,000 × 30) / 70 = 6,428 ರೂ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








