EPFO: ಇಪಿಎಫ್ ಟ್ರಾನ್ಸ್ಫರ್ ಈಗ ತ್ವರಿತ, ಸರಳ; ಫಾರ್ಮ್ 13ರಲ್ಲಿ ತುಸು ಬದಲಾವಣೆ
EPFO makes members' EPF transfer process easier: ನಿಮ್ಮ ಹೊಸ ಇಪಿಎಫ್ ಖಾತೆಗೆ ಹಳೆಯ ಅಕೌಂಟ್ನ ಹಣ ವರ್ಗಾಯಿಸಲು ಎರಡೂ ಕಂಪನಿಗಳ ಅನುಮೋದನೆ ಅವಶ್ಯಕತೆ ಇತ್ತು. ಆದರೆ, ಈಗ ಫಾರ್ಮ್ 13 ಅಲ್ಲಿ ಬದಲಾವಣೆ ಮಾಡಲಾಗಿದೆ. ಹಿಂದಿನ ಇಪಿಎಫ್ ಕಚೇರಿ ಮಾತ್ರವೇ ಅನುಮೋದನೆ ನೀಡಿದರೆ ಸಾಕು. ಇಪಿಎಫ್ ಹಣ ವರ್ಗಾವಣೆ ತಾನಾಗೇ ಆಗುತ್ತದೆ.

ನವದೆಹಲಿ, ಏಪ್ರಿಲ್ 28: ಕಂಪನಿಗಳು ಬದಲಿಸಿದಾಗೆಲ್ಲಾ ಪ್ರತ್ಯೇಕ ಪಿಎಫ್ ಖಾತೆಗಳು (EPF accounts) ಸೃಷ್ಟಿಯಾಗುತ್ತವೆ. ಇದರಿಂದ ಒಬ್ಬ ಉದ್ಯೋಗಿ ಬಳಿ ಒಂದಕ್ಕಿಂತ ಹೆಚ್ಚು ಪ್ರಾವಿಡೆಂಟ್ ಫಂಡ್ ಅಕೌಂಟ್ಗಳಿರುವ ಸಾಧ್ಯತೆ ಹೆಚ್ಚು. ಹೊಸ ಪಿಎಫ್ ಖಾತೆಗೆ ಹಳೆಯ ಅಕೌಂಟ್ ಅನ್ನು ವಿಲೀನಗೊಳಿಸಬೇಕಾಗುತ್ತದೆ. ಈ ಪ್ರಕ್ರಿಯೆಯನ್ನು ಇಪಿಎಫ್ಒ ಸಂಸ್ಥೆ (EPFO) ಸರಳಗೊಳಿಸಿದೆ. ವಿಲೀನಗೊಳಿಸಲು ಅರ್ಜಿ ಸಲ್ಲಿಸಬೇಕಾದ ತಲೆನೋವು ಉದ್ಯೋಗಿಗಳಿಗೆ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಪ್ರಕ್ರಿಯೆಯಲ್ಲಿ ಬದಲಾವಣೆ ತರಲಾಗಿದೆ.
ಫಾರ್ಮ್ 13ನಲ್ಲಿ ಬದಲಾವಣೆ
ನಿಮ್ಮ ಹೊಸ ಇಪಿಎಫ್ ಖಾತೆಗೆ ಹಳೆಯ ಖಾತೆಯನ್ನು ವರ್ಗಾವಣೆ ಮಾಡಲು ಎರಡು ಇಪಿಎಫ್ ಕಚೇರಿಗಳು (EPF offices) ಭಾಗಿಯಾಗುತ್ತವೆ. ನೀವು ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಯ ನೊಂದಾಯಿತ ಇಪಿಎಫ್ ಕಚೇರಿ ಬೇರೆ ಇರಬಹುದು. ಈಗ ಕೆಲಸ ಮಾಡುವ ಕಂಪನಿಯ ಇಪಿಎಫ್ ಕಚೇರಿ ಬೇರೆ ಇರಬಹುದು. ಪಿಎಫ್ ಅಕೌಂಟ್ ಅನ್ನು ವರ್ಗಾವಣೆ ಆಗಬೇಕಾದರೆ ಎರಡೂ ಕಚೇರಿಗಳಿಂದ ಅನುಮೋದನೆ ಸಿಗಬೇಕಾಗುತ್ತದೆ. ಈಗ ಈ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಲಾಗಿದೆ.
ಇಪಿಎಫ್ಒ ಸಂಸ್ಥೆ ಫಾರ್ಮ್ 13ನಲ್ಲಿ ಬದಲಾವಣೆ ತಂದಿದೆ. ಅದರ ಪ್ರಕಾರ, ಹಿಂದಿನ ಇಪಿಎಫ್ ಕಚೇರಿ ಅನುಮೋದನೆ ನೀಡಿದರೆ ಸಾಕು, ಪಿಎಫ್ ಅಕೌಂಟ್ನಲ್ಲಿರುವ ಹಣವು ಹೊಸ ಖಾತೆಗೆ ತಾನಾಗೇ ವರ್ಗಾವಣೆ ಆಗಿ ಹೋಗುತ್ತದೆ. ಹೊಸ ಇಪಿಎಫ್ ಕಚೇರಿಯ ಅನುಮೋದನೆಯ ಅವಶ್ಯಕತೆ ಇರುವುದಿಲ್ಲ.
ಇದನ್ನೂ ಓದಿ: 24 ಕ್ಯಾರಟ್ ಚಿನ್ನಗಳಲ್ಲೇ ಬೆಲೆಗಳಲ್ಲಿ ಹೇಗೆ ವ್ಯತ್ಯಾಸ? ಜಿಎಸ್ಟಿ ಸೇರಿ ವಿವಿಧ ಹೆಚ್ಚುವರಿ ಬೆಲೆ ಬಗ್ಗೆ ತಿಳಿದಿರಿ
ಹಾಗೆಯೇ, ಹಿಂದಿನ ಕಂಪನಿಯಾಗಲೀ, ಈಗಿನ ಕಂಪನಿಯಾಗಲೀ ಈ ಅನುಮೋದನೆಯಲ್ಲಿ ಯಾವ ಪಾತ್ರ ಹೊಂದಿರುವುದಿಲ್ಲ. ಎಲ್ಲವೂ ಇಪಿಎಫ್ ಕಚೇರಿಗಳ ಮಟ್ಟದಲ್ಲಿ ನಡೆದು ಹೋಗುತ್ತದೆ.
ಕೆವೈಸಿ ದಾಖಲೆಗಳು ಸರಿಹೊಂದದಿದ್ದಾಗ ಮಾತ್ರ ಉದ್ಯೋಗದಾತರ ಪಾತ್ರ
ನೀವು ಹೊಸದಾಗಿ ಕೆಲಸಕ್ಕೆ ಸೇರಿದಾಗ ಇಪಿಎಫ್ ಖಾತೆ ರಚನೆಗೆ ಕೆವೈಸಿ ದಾಖಲೆಗಳನ್ನು ನೀಡಬೇಕಾಗುತ್ತದೆ. ಆಧಾರ್, ಪ್ಯಾನ್, ಬ್ಯಾಂಕ್ ವಿವರ ಇತ್ಯಾದಿ ಇರುವ ಕೆವೈಸಿ ದಾಖಲೆಗಳನ್ನು ಸರಿಯಾಗಿ ಇಪಿಎಫ್ಒ ಸಿಸ್ಟಂನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆಗ ಇಪಿಎಫ್ ಕಚೇರಿ ಮಟ್ಟದಲ್ಲೇ ಪಿಎಫ್ ಟ್ರಾನ್ಸ್ಫರ್ ತಾನಾಗೇ ಆಗಿ ಹೋಗುತ್ತದೆ. ಆದರೆ, ಕೆವೈಸಿ ದಾಖಲೆ ಸರಿಯಾಗಿ ಅಪ್ಡೇಟ್ ಆಗಿರದಿದ್ದಾಗ, ಟ್ರಾನ್ಸ್ಫರ್ ರಿಕ್ವೆಸ್ಟ್ ಅನ್ನು ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಯವರು ವೆರಿಫೈ ಮಾಡಿ ಅನುಮೋದಿಸಬೇಕಾಗುತ್ತದೆ.
ಇದನ್ನೂ ಓದಿ: ಇಪಿಎಫ್ನ ಯುಎಎನ್ ನಂಬರ್ ಸಕ್ರಿಯಗೊಳಿಸಲು ಆಧಾರ್ ಫೇಸ್ ಅಥೆಂಟಿಕೇಶನ್ ಫೀಚರ್
ಇಪಿಎಫ್ಒ ಪೋರ್ಟಲ್ಗೆ ಅವರು ಲಾಗಿನ್ ಆಗಿ, ತಮ್ಮ ಮಾಜಿ ಉದ್ಯೋಗಿಯ ದಾಖಲೆಗಳು ಸರಿಯಾಗಿವೆ ಎಂಬುದನ್ನು ದೃಢೀಕರಿಸಿ, ಅನುಮೋದನೆ ನೀಡುತ್ತಾರೆ. ಇದಾದ ಬಳಿಕವಷ್ಟೇ ಇಪಿಎಫ್ ಕಚೇರಿಯು ಪಿಎಫ್ ವರ್ಗಾವಣೆ ಮಾಡುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ