EPF rate: ಆರ್ಬಿಐ ದರ ಕಡಿಮೆಗೊಳಿಸಿದ್ದರಿಂದ ಇಪಿಎಫ್ಒ ಬಡ್ಡಿಯೂ ಕಡಿಮೆ ಆಗುತ್ತಾ? ಈ ವರ್ಷಕ್ಕೆ ಎಷ್ಟಿರಬಹುದು ಬಡ್ಡಿದರ? ಇಲ್ಲಿದೆ ಡೀಟೇಲ್ಸ್
EPFO deposit rates for 2024-25: ಆರ್ಬಿಐ ತನ್ನ ರಿಪೋ ದರವನ್ನು ಶೇ. 6.50ರಿಂದ ಶೇ. 6.25ಕ್ಕೆ ಇಳಿಸಿದ ಬಳಿಕ ಇಪಿಎಫ್ಒ ಕೂಡ ಬಡ್ಡಿ ಕಡಿಮೆ ಮಾಡಬಹುದು ಎನ್ನುವ ಪ್ರಶ್ನೆ ಎದ್ದಿದೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಈ ಹಣಕಾಸು ವರ್ಷಕ್ಕೆ ಇಪಿಎಫ್ಒನ ಬಡ್ಡಿದರದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇಲ್ಲ. 2023-24ಕ್ಕೆ ಇಪಿಎಫ್ ಠೇವಣಿಗಳಿಗೆ ಶೇ. 8.25ರಷ್ಟು ಬಡ್ಡಿ ನೀಡಲಾಗಿತ್ತು. 2024-25ರ ವರ್ಷಕ್ಕೂ ಇದೇ ದರ ಮುಂದುವರಿಯಬಹುದು ಎನ್ನಲಾಗಿದೆ.

ನವದೆಹಲಿ, ಫೆಬ್ರುವರಿ 13: ಆರ್ಬಿಐ ಕಳೆದ ವಾರ ಬಡ್ಡಿದರವನ್ನು ಇಳಿಸಿದ ಬಳಿಕ ಬ್ಯಾಂಕಿಂಗ್ ಹಾಗೂ ಇತರ ಕ್ಷೇತ್ರಗಳಲ್ಲಿ ಠೇವಣಿ ದರಗಳು ಮತ್ತು ಸಾಲದ ದರಗಳು ತುಸು ತಗ್ಗುವ ನಿರೀಕ್ಷೆ ಇದೆ. ಹಾಗೆಯೇ, ಸ್ಮಾಲ್ ಫೈನಾನ್ಸ್ ಸ್ಕೀಮ್ಗಳ ಮೇಲೂ ಇದರ ಪರಿಣಾಮವಾಗಬಹುದು. ಉದ್ಯೋಗಿಗಳ ಇಪಿಎಫ್ ಹಣಕ್ಕೆ ನೀಡಲಾಗುವ ಬಡ್ಡಿಯಲ್ಲಿ ವ್ಯತ್ಯಾಸವಾಗಬಹುದೆ ಎನ್ನುವ ಅನುಮಾನ ಹಲವರಲ್ಲಿ ಹುಟ್ಟಿರಬಹುದು. ಇಪಿಎಫ್ಒ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಸದ್ಯ ಇಪಿಎಫ್ಒ 2023-24ರ ವರ್ಷಕ್ಕೆ ಶೇ. 8.2ರಷ್ಟು ವಾರ್ಷಿಕ ಬಡ್ಡಿ ನೀಡಿದೆ. ಈ ವರ್ಷಕ್ಕೂ (2024-25) ಅಷ್ಟೇ ಬಡ್ಡಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ದೇಶಾದ್ಯಂತ ಆರೂವರೆ ಕೋಟಿ ಇಪಿಎಫ್ ಖಾತೆಗಳಿವೆ. ಹಿಂದಿನ ಹಣಕಾಸು ವರ್ಷದಲ್ಲಿ (2023-24) ಇಪಿಎಫ್ಒ ಬಳಿ 13 ಲಕ್ಷ ಕೋಟಿ ರೂ ನಿಧಿ ಇತ್ತು. ಇದಕ್ಕೆ ಶೇ. 8.25ರಷ್ಟು ಬಡ್ಡಿ ಸೇರಿಸಿದೆ. 2024-25ರ ಹಣಕಾಸು ವರ್ಷದಲ್ಲಿ 5 ಕೋಟಿ ಸಂಖ್ಯೆಯಲ್ಲಿ ಕ್ಲೇಮ್ಗಳನ್ನು ಮಾಡಲಾಗಿದೆ. ಒಟ್ಟು 2.05 ಲಕ್ಷ ಕೋಟಿ ರೂನಷ್ಟು ಹಣವನ್ನು ಸದಸ್ಯರು ಹಿಂಪಡೆದಿದ್ದಾರೆ. 2023-24ಕ್ಕೆ ಹೋಲಿಸಿದರೆ ಈ ಕ್ಲೇಮ್ ಸಂಖ್ಯೆ ತುಸು ಕಡಿಮೆ ಆದರೂ ಹಿಂಪಡೆಯಲಾದ ಹಣದ ಪ್ರಮಾಣ ಹೆಚ್ಚಿದೆ.
ಇಪಿಎಫ್ಒ ಸಂಸ್ಥೆ ಉದ್ಯೋಗಿಗಳ ಇಪಿಎಫ್ ಖಾತೆಯಲ್ಲಿರುವ ಹಣವನ್ನು ವಿವಿಧ ಡೆಟ್ ಸೆಕ್ಯೂರಿಟಿಗಳು, ಇಟಿಎಫ್ ಇತ್ಯಾದಿ ಕಡೆ ಹೂಡಿಕೆ ಮಾಡುತ್ತವೆ. ಡೆಟ್ ಫಂಡ್ಗಳಲ್ಲಿ ಅದರ ಹೂಡಿಕೆ ಹೆಚ್ಚಿರುತ್ತದೆ. ಅದರಲ್ಲಿ ಸಿಗುವ ರಿಟರ್ಸ್ ಆಧಾರಿತವಾಗಿ ಇಪಿಎಫ್ ಹಣಕ್ಕೆ ಬಡ್ಡಿಯನ್ನು ನಿಗದಿ ಮಾಡಲಾಗುತ್ತದೆ.
ಇಪಿಎಫ್ಒ ಸಂಸ್ಥೆ ಸ್ವತಂತ್ರವಾಗಿ ಬಡ್ಡಿದರ ನಿಗದಿ ಮಾಡುವ ಹಾಗಿಲ್ಲ. ಇಪಿಎಫ್ಒ, ಕೇಂದ್ರೀಯ ಟ್ರಸ್ಟಿ ಮಂಡಳಿ ಮತ್ತು ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಮತ್ತಿತರರು ಸೇರಿ ಸಮಾಲೋಚನೆ ನಡೆಸುವುದುಂಟು. ಹೀಗೆ ನಿರ್ಧರಿಸಲಾದ ಬಡ್ಡಿದರವನ್ನು ಸಿಬಿಟಿ ಗಮನಕ್ಕೆ ತರಲಾಗುತ್ತದೆ.
ಇದನ್ನೂ ಓದಿ: ಕೆಲಸ ಬದಲಿಸಿದಾಗ ಹಳೆಯ ಇಪಿಎಫ್ ಹಣ ಹೊಸ ಖಾತೆಗೆ ವರ್ಗಾಯಿಸುವ ಕ್ರಮ
ಸಿಬಿಟಿ ಅನುಮೋದನೆ ಬಳಿಕ ಹಣಕಾಸು ಸಚಿವಾಲಯದ ಒಪ್ಪಿಯೂ ಬೇಕಾಗುತ್ತದೆ. ಇದಾದ ಬಳಿಕ ವರ್ಷದ ದ್ವಿತೀಯಾರ್ಧದಲ್ಲಿ ಇಪಿಎಫ್ ಖಾತೆಗಳಿಗೆ ಬಡ್ಡಿ ಹಣ ಜಮೆ ಆಗುತ್ತದೆ. ಅಂದರೆ, 2024-25ರ ಹಣಕಾಸು ವರ್ಷಕ್ಕೆ ಇಪಿಎಫ್ ಖಾತೆಗಳಲ್ಲಿರುವ ಹಣಕ್ಕೆ 2025ರ ಸೆಪ್ಟೆಂಬರ್ ಬಳಿಕ ಬಡ್ಡಿ ಜಮೆ ಆಗಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ