ITR deadline: ತೆರಿಗೆ ಪಾವತಿದಾರರಿಗೆ ಖುಷಿ ಸುದ್ದಿ, ಐಟಿಆರ್ ಫೈಲಿಂಗ್ಗೆ ಡೆಡ್ಲೈನ್ ಜುಲೈ 31 ಅಲ್ಲ, ಸೆಪ್ಟೆಂಬರ್ 15ರವರೆಗೆ ವಿಸ್ತರಣೆ
Income Tax Returns deadline extended to September 15th: 2024-25ರ ಹಣಕಾಸು ವರ್ಷದ ಆದಾಯಕ್ಕೆ ಸಲ್ಲಿಸಲಾಗುವ ಐಟಿ ರಿಟರ್ನ್ಸ್ಗೆ ಗಡುವು ಹೆಚ್ಚಿಸಲಾಗಿದೆ. ಜುಲೈ 31ರವರೆಗೆ ಇದ್ದ ಕಾಲಾವಕಾಶ ಈಗ ಸೆಪ್ಟಂಬರ್ 15ರವರೆಗೂ ಇರುತ್ತದೆ. ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ಇದನ್ನು ತಿಳಿಸಿದ್ದು, ಅಧಿಕೃತವಾಗಿ ಅಧಿಸೂಚನೆಯೊಂದನ್ನು ಪ್ರತ್ಯೇಕವಾಗಿ ಹೊರಡಿಸಲಿದೆ.

ನವದೆಹಲಿ, ಮೇ 27: ಪ್ರಸಕ್ತ ಸಾಲಿನ ಮೌಲ್ಯಮಾಪನ ವರ್ಷಕ್ಕೆ (2025-26 assessment year) ಸಲ್ಲಿಸಲಾಗುವ ಐಟಿ ರಿಟರ್ನ್ಸ್ಗೆ ಇರುವ ಡೆಡ್ಲೈನ್ ಅನ್ನು ವಿಸ್ತರಿಸಲಾಗಿದೆ. ಜುಲೈ 31ಕ್ಕೆ ಇದ್ದ ಗಡುವನ್ನು ಸೆಪ್ಟೆಂಬರ್ 15ರವರೆಗೆ ಹಿಗ್ಗಿಸಲಾಗಿದೆ. ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಇಂದು ಮೇ 27ರಂದು ಪತ್ರಿಕಾ ಪ್ರಕಟಣೆಯಲ್ಲಿ ಈ ವಿಚಾರವನ್ನು ತಿಳಿಸಿದೆ. ಐಟಿಆರ್ ಫಾರ್ಮ್ಗಳಲ್ಲಿ ಬಹಳಷ್ಟು ಪರಿಷ್ಕರಣೆ ಮಾಡಲಾಗಿದೆ. ಇದೂ ಸೇರಿದಂತೆ ಟಿಡಿಎಸ್ ಕ್ರೆಡಿಟ್ ಆಗಬೇಕಿರುವುದ ಇತ್ಯಾದಿ ಕಾರಣಕ್ಕೆ ಐಟಿಆರ್ ಸಲ್ಲಿಕೆಗೆ ಕಾಲಾವಕಾಶವನ್ನು ಹೆಚ್ಚಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಎಕ್ಸ್ ಪೋಸ್ಟ್ನಲ್ಲಿ ತಿಳಿಸಲಾಗಿದೆ.
ತೆರಿಗೆ ಹೊಂದಾಣಿಕೆ ನಿಯಮ ಸರಳಗೊಳಿಸಿರುವುದು, ಪಾರದರ್ಶಕತೆ ಹೆಚ್ಚಿಸಿರುವುದು, ನಿಖರ ಮಾಹಿತಿ ಸಿಗುವಂತೆ ಮಾಡಿರುವುದು ಇತ್ಯಾದಿ ಹಲವು ರೀತಿಯ ರಚನಾತ್ಮಕ ಪರಿಷ್ಕರಣೆ ಮತ್ತು ಬದಲಾವಣೆಗಳನ್ನು ತರಲಾಗಿದೆ. ಇದಕ್ಕೆ ಪೂರಕವಾಗಿ ಸಿಸ್ಟಂ ಅಭಿವೃದ್ಧಿಗೆ ಹೆಚ್ಚುವರಿ ಕಾಲಾವಕಾಶ ಬೇಕಾಗಿದೆ. ಹಾಗೆಯೇ, ಟಿಡಿಎಸ್ ಸ್ಟೇಟ್ಮೆಂಟ್ಗಳು ಜೂನ್ನಲ್ಲಿ ಪ್ರತಿಫಲಿತವಾಗಲು ಆರಂಭಿಸುತ್ತವೆ. ಹೀಗಾಗಿ, ಐಟಿಆರ್ ಸಲ್ಲಿಕೆಯನ್ನು ವಿಸ್ತರಿಸುವುದು ಸೂಕ್ತ ಎನಿಸಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಸಂಬಂಧ ಅಧಿಕೃತವಾಗಿ ಅಧಿಸೂಚನೆಯೂ ಪ್ರಕಟವಾಗಲಿದೆ.
Kind Attention Taxpayers!
CBDT has decided to extend the due date of filing of ITRs, which are due for filing by 31st July 2025, to 15th September 2025
This extension will provide more time due to significant revisions in ITR forms, system development needs, and TDS credit… pic.twitter.com/MggvjvEiOP
— Income Tax India (@IncomeTaxIndia) May 27, 2025
ಇದನ್ನೂ ಓದಿ: ವಿಲೀನಗೊಳ್ಳದ ಇಪಿಎಫ್ ಖಾತೆಗೆ ಬಡ್ಡಿ ಹಣ ಕ್ರೆಡಿಟ್ ಆಗುತ್ತಾ? ಇಲ್ಲಿದೆ ಡೀಟೇಲ್ಸ್
ಜೂನ್ 15ರ ಬಳಿಕ ಐಟಿಆರ್ ಸಲ್ಲಿಸುವುದು ಉತ್ತಮವಾ?
ಹಿಂದಿನ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯು ತಾತ್ವಿಕವಾಗಿ ಏಪ್ರಿಲ್ 1ರಂದು ಆರಂಭವಾಗುತ್ತದೆ. ಜುಲೈ 31ರವರೆಗೆ ಗಡುವು ಇರುತ್ತದೆ. ಆದರೆ, ಈ ಬಾರಿ ಜೂನ್ 15ರ ನಂತರ ಐಟಿಆರ್ ಸಲ್ಲಿಕೆಗೆ ಯತ್ನಿಸುವುದು ಉತ್ತಮ ಎಂದು ಪರಿಣಿತರು ಹೇಳುತ್ತಿದ್ದಾರೆ.
ಐಟಿಆರ್ ಫಾರ್ಮ್ಗಳು ಲಭ್ಯ ಇವೆಯಾದರೂ, ಅವುಗಳನ್ನು ಸಲ್ಲಿಸಲು ಬೇಕಾದ ಆನ್ಲೈನ್ ಸಾಫ್ಟ್ವೇರ್ ಇತ್ಯಾದಿ ಯುಟಿಲಿಟಿಗಳನ್ನು ಆದಾಯ ತೆರಿಗೆ ಬಿಡುಗಡೆ ಮಾಡಿಲ್ಲ. ಹೀಗಾಗಿ, ರಿಟರ್ನ್ಸ್ ಫೈಲ್ ಮಾಡುವುದನ್ನು ಮುಂದೂಡುವುದು ಸೂಕ್ತ ಎನ್ನುವ ಅಭಿಪ್ರಾಯ ಇದೆ.
ಮತ್ತೊಂದು ಕಾರಣ ಎಂದರೆ, ಹೊಸ ಟಿಡಿಎಸ್ ಸರ್ಟಿಫಿಕೇಟ್ ಅನ್ನು ಜೂನ್ 15ಕ್ಕೆ ಪಡೆದ ಬಳಿಕ ಐಟಿಆರ್ ಸಲ್ಲಿಸುವುದು ಉತ್ತಮ. 2024-25ರ ಹಣಕಾಸು ವರ್ಷದಲ್ಲಿ ಗಳಿಸಿದ ಆದಾಯಕ್ಕೆ ಟಿಡಿಎಸ್ ಅನ್ವಯ ಆಗುತ್ತದೆ. ಆ ರೀತಿ ಟಿಡಿಎಸ್ ಕಟ್ಟಿದ್ದರೆ ಅದರ ಇಟಿಡಿಎಸ್ ರಿಟರ್ನ್ ಫೈಲ್ ಮಾಡಬೇಕು. ಅದಕ್ಕೆ ಮೇ 31ರವರೆಗೆ ಕಾಲಾವಕಾಶ ಇರುತ್ತದೆ. ಇಟಿಡಿಎಸ್ ರಿಟರ್ನ್ ಸಲ್ಲಿಸಿದ 3-4 ದಿನಗಳ ನಂತರ ಅದು ಫಾರ್ಮ್ 26ಎಎಸ್ನಲ್ಲಿ ಕಾಣುತ್ತದೆ.
ಇದನ್ನೂ ಓದಿ: ಟ್ಯಾಕ್ಸ್ ಸಮಯ; ಭಾರತದಲ್ಲಿ 7 ರೀತಿಯ ತೆರಿಗೆದಾರರು, 7 ಐಟಿಆರ್ ಫಾರ್ಮ್ಗಳು; ಯಾವುದು ಯಾರಿಗೆ? ಇಲ್ಲಿದೆ ಡೀಟೇಲ್ಸ್
ಆದಾಯದಾತರು ಫಾರ್ಮ್ 16 ಅಥವಾ ಫಾರ್ಮ್ 16ಎ ನಲ್ಲಿ ಆ ಆದಾಯಕ್ಕೆ ಟಿಡಿಎಸ್ ಸರ್ಟಿಫಿಕೇಟ್ ಅನ್ನು ಜೂನ್ 15ರೊಳಗೆ ನೀಡಬೇಕು. ಈ ಟಿಡಿಎಸ್ ಸರ್ಟಿಫಿಕೇಟ್ಗಳು ಇದ್ದಾಗ ಐಟಿ ರಿಟರ್ನ್ಸ್ ಫೈಲ್ ಮಾಡುವುದು ಬಹಳ ಸುಲಭದ ಕೆಲಸವಾಗುತ್ತದೆ. ಈ ಕಾರಣಕ್ಕೆ, ತೆರಿಗೆ ಪಾವತಿದಾರರು ಐಟಿಆರ್ ಫೈಲಿಂಗ್ ಮಾಡುವ ಕೆಲಸವನ್ನು ಜೂನ್ 15ರ ನಂತರ ಇಟ್ಟುಕೊಳ್ಳಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:52 pm, Tue, 27 May 25








