Record Dividend: ಸರ್ಕಾರಕ್ಕೆ ಆರ್ಬಿಐನಿಂದ 2.70 ಲಕ್ಷ ಕೋಟಿ ರೂ ಡಿವಿಡೆಂಡ್; ಇದು ಸಾರ್ವಕಾಲಿಕ ಗರಿಷ್ಠ ಮೊತ್ತ
RBI decides to give Rs 2.70 trillion as dividend to govt: ರಿಸರ್ವ್ ಬ್ಯಾಂಕ್ 2024-25ರ ಹಣಕಾಸು ವರ್ಷಕ್ಕೆ ಸರ್ಕಾರಕ್ಕೆ 2.70 ಲಕ್ಷ ಕೋಟಿ ರೂನಷ್ಟು ಡಿವಿಡೆಂಡ್ ನೀಡಲು ನಿರ್ಧರಿಸಿದೆ. 2023-24ರಲ್ಲಿ 2.1 ಲಕ್ಷ ಕೋಟಿ ರೂ ಡಿವಿಡೆಂಡ್ ನೀಡಲಾಗಿತ್ತು. ಆರ್ಬಿಐ ಒಂದು ವರ್ಷದಲ್ಲಿ ಎರಡು ಲಕ್ಷ ಕೋಟಿ ರೂ ಲಾಭಾಂಶ ನೀಡಿದ್ದು ಅದೇ ಮೊದಲು. ಈಗ ಸತತ ಎರಡನೇ ವರ್ಷ ಎರಡು ಲಕ್ಷ ಕೋಟಿಗೂ ಅಧಿಕ ಡಿವಿಡೆಂಡ್ ಅನ್ನು ಸರ್ಕಾರಕ್ಕೆ ನೀಡುತ್ತಿದೆ ಆರ್ಬಿಐ.

ನವದೆಹಲಿ, ಮೇ 23: ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷೆಯಂತೆ ಈ ಬಾರಿ ಹೊಸ ದಾಖಲೆಯ ಮೊತ್ತದಷ್ಟು ಡಿವಿಡೆಂಡ್ (RBI dividend) ಅನ್ನು ಸರ್ಕಾರಕ್ಕೆ ನೀಡಲು ನಿರ್ಧರಿಸಿದೆ. ವರದಿ ಪ್ರಕಾರ, 2024-25ರ ಹಣಕಾಸು ವರ್ಷಕ್ಕೆ ಸರ್ಕಾರಕ್ಕೆ ಆರ್ಬಿಐ 2.69 ಲಕ್ಷ ಕೋಟಿ ರೂ ಲಾಭಾಂಶ ವರ್ಗಾಯಿಸಲಿದೆ. ಹಿಂದಿನ ವರ್ಷದಲ್ಲಿ (2023-24) 2.1 ಲಕ್ಷ ಕೋಟಿ ರೂ ಡಿವಿಡೆಂಡ್ ನೀಡಿತ್ತು. ಅದು ಹೊಸ ದಾಖಲೆ ಎನಿಸಿತ್ತು. ಆದರೆ, ಈ ಬಾರಿ ಡಿವಿಡೆಂಡ್ ಶೇ. 27ರಷ್ಟು ಹೆಚ್ಚಾಗಿದೆ. ಇದು ಆರ್ಬಿಐನಿಂದ ಸರ್ಕಾರಕ್ಕೆ ನೀಡಲಾಗುತ್ತಿರುವ ಗರಿಷ್ಠ ಡಿವಿಡೆಂಡ್ ಮೊತ್ತವಾಗಿದೆ. 2022-23ರಲ್ಲಿ ಆರ್ಬಿಐನಿಂದ ಸರ್ಕಾರಕ್ಕೆ ನೀಡಲಾಗಿದ್ದ ಡಿವಿಡೆಂಡ್ 87,416 ಕೋಟಿ ರೂ ಮಾತ್ರವೇ ಇತ್ತು.
ಸರ್ಕಾರಕ್ಕೆ ಬಹಳ ಅಗತ್ಯವಾದ ಸಂದರ್ಭದಲ್ಲಿ ಆರ್ಬಿಐ ಸಹಾಯ…
ಜಾಗತಿಕ ಅನಿಶ್ಚಿತ ಪರಿಸ್ಥಿತಿ, ಪಾಕಿಸ್ತಾನದೊಂದಿಗೆ ಗಡಿ ಸಂಘರ್ಷ ಇತ್ಯಾದಿ ಘಟನೆಗಳು ಭಾರತದ ಆರ್ಥಿಕ ಮುನ್ನಡೆಗೆ ತುಸು ತಡೆಯಾಗಿವೆ. ಈ ಹಂತದಲ್ಲಿ ಆರ್ಥಿಕ ಬೆಳವಣಿಗೆಗೆ ಚುರುಕು ಮೂಡಿಸಲು ಸರ್ಕಾರ ಈ ವರ್ಷ ಸಾಕಷ್ಟು ವೆಚ್ಚ ಮಾಡುವುದು ಅನಿವಾರ್ಯವಾಗಿದೆ. ಈ ಕಾರಣಕ್ಕೆ ಆರ್ಬಿಐನಿಂದ ಸಿಗಲಿರುವ 2.70 ಲಕ್ಷ ಕೋಟಿ ರೂ ಹಣವು ಸರ್ಕಾರಕ್ಕೆ ಸಹಾಯಕವಾಗಲಿದೆ.
ಇದನ್ನೂ ಓದಿ: ಭಾರತ ಮಾತ್ರವಲ್ಲ, ಅಮೆರಿಕ ಬಿಟ್ಟು ಬೇರೆಲ್ಲೇ ಐಫೋನ್ ತಯಾರಿಸಿದ್ರೂ ಶೇ. 25 ಸುಂಕ: ಆ್ಯಪಲ್ಗೆ ಟ್ರಂಪ್ ಬೆದರಿಕೆ
ಆರ್ಬಿಐನ ಹೊಸ ಗವರ್ನರ್ ಸಂಜಯ್ ಮಲ್ಹೋತ್ರಾ ಅಧ್ಯಕ್ಷತೆಯಲ್ಲಿ ಮೇ 15ರಂದು ನಡೆದ ಆರ್ಬಿಐನ 616ನೇ ಕೇಂದ್ರೀಯ ನಿರ್ದೇಶಕರ ಮಂಡಳಿ ಸಭೆಯಲ್ಲಿ 2,68,590.07 ಕೋಟಿ ರೂ ಡಿವಿಡೆಂಡ್ ನೀಡುವ ನಿರ್ಧಾರ ಕೈಗೊಳ್ಳಲಾಯಿತು.
ಎಕನಾಮಿಕ್ ಕ್ಯಾಪಿಟಲ್ ಫ್ರೇಮ್ವರ್ಕ್ ಎನ್ನುವ ಸೂತ್ರದ ಆಧಾರದ ಮೇಲೆ ಡಿವಿಡೆಂಡ್ ಎಷ್ಟೆಂಬುದನ್ನು ನಿರ್ಧರಿಸಲಾಗುತ್ತದೆ. ಈ ಫ್ರೇಮ್ವರ್ಕ್ ಪ್ರಕಾರ ಆದಾಯದ ಶೇ. 7.50ರಿಂದ 4.50ರಷ್ಟನ್ನು ಕಂಟಿಂಜೆಂಟ್ ರಿಸ್ಕ್ ಬಫರ್ ಎಂದು ಪರಿಗಣಿಸಲಾಗಿದೆ. ಈ ರಿಸ್ಕ್ ಬಫರ್ ಮೊತ್ತವನ್ನು ಉಳಿಸಿಕೊಂಡು ಉಳಿದವನ್ನು ಡಿವಿಡೆಂಡ್ ರೂಪದಲ್ಲಿ ಸರ್ಕಾರಕ್ಕೆ ನೀಡಲಾಗುತ್ತದೆ.
ಇದನ್ನೂ ಓದಿ: ಬ್ಯಾಂಕುಗಳನ್ನು ನಿಯಂತ್ರಿಸುವ ಆರ್ಬಿಐಗೆ ಆದಾಯ ಎಲ್ಲಿಂದ ಬರುತ್ತೆ? ಇಲ್ಲಿದೆ ಡೀಟೇಲ್ಸ್
ಆರ್ಬಿಐ ಪ್ರತೀ ವರ್ಷವೂ ಸರ್ಕಾರಕ್ಕೆ ಡಿವಿಡೆಂಡ್ ನೀಡುತ್ತದೆ. ಬಾಂಡ್ಗಳಿಂದ ಸಿಗುವ ಬಡ್ಡಿ, ಫೋರೆಕ್ಸ್ ರಿಸರ್ವ್ಸ್ನಲ್ಲಿರುವ ಆಸ್ತಿಗಳ ಮೌಲ್ಯ ಹೆಚ್ಚಳದಿಂದ ಸಿಗುವ ಲಾಭ ಇತ್ಯಾದಿಯು ಆರ್ಬಿಐಗೆ ಪ್ರಮುಖ ಆದಾಯ ಮೂಲವಾಗಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:50 pm, Fri, 23 May 25




