ಸರ್ಕಾರದ ಈ ಕ್ರಮ ಎಚ್ಎಎಲ್ಗೆ ಕಹಿ ಎನಿಸಿದರೂ, ದೇಶದ ಭವಿಷ್ಯಕ್ಕೆ ಉತ್ತಮ: ಮಾಜಿ ವಾಯುಸೇನೆ ಮುಖ್ಯಸ್ಥರ ಅನಿಸಿಕೆ
Ex IAF chief RKS Bhadauria welcomes AMCA production model: ಭಾರತದಲ್ಲೇ ಸ್ವಂತವಾಗಿ ಐದನೇ ತಲೆಮಾರಿನ ಫೈಟರ್ ಜೆಟ್ಗಳನ್ನು ಅಭಿವೃದ್ಧಿಪಡಿಸುವ ಎಎಂಸಿಎ ಯೋಜನೆಯನ್ನು ಬಹಳ ಜನರು ಪ್ರಶಂಸಿಸಿದ್ದಾರೆ. ಎಎಂಸಿಯ ಜಾರಿಗೊಳಿಸುವ ಯೋಜನೆಗೆ ಮೇ 27ರಂದು ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಖಾಸಗಿ ವಲಯವನ್ನೂ ಒಳಗೊಳ್ಳುವ ಈ ಯೋಜನೆಯು ಸರ್ಕಾರದ ಬಹಳ ದೊಡ್ಡ ನಡೆಯಾಗಿದೆ ಎಂದು ಮಾಜಿ ವಾಯುಸೇನಾ ಮುಖ್ಯಸ್ಥ ಆರ್.ಕೆ.ಎಸ್. ಭದೂರಿಯಾ ಹೇಳಿದ್ದಾರೆ.

ನವದೆಹಲಿ, ಜೂನ್ 1: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್ಕ್ರಾಫ್ಟ್ (AMCA) ತಯಾರಿಕೆ ಮಾದರಿಯು ಎಚ್ಎಎಲ್ಗೆ ಕಹಿ ಎನಿಸಿದರ ದೇಶದ ರಕ್ಷಣಾ ಉದ್ಯಮ ವಲಯದ ಇಕೋಸಿಸ್ಟಂ ದೃಷ್ಟಿಯಿಂದ ಬಹಳ ಉತ್ತಮ ಹೆಜ್ಜೆ ಎಂದು ಮಾಜಿ ವಾಯುಸೇನಾ ಮುಖ್ಯಸ್ಥರಾದ ಆರ್.ಕೆ.ಎಸ್. ಭದೂರಿಯಾ (RKS Bhadauria) ಹೇಳಿದ್ದಾರೆ. ಎಎಂಸಿಎ ಎಂಬುದು ಐದನೇ ತಲೆಮಾರಿನ ಫೈಟರ್ ಜೆಟ್ಗಳನ್ನು ಭಾರತದಲ್ಲೇ ನಿರ್ಮಿಸುವ ಒಂದು ಯೋಜನೆ. ಎಚ್ಎಎಲ್ನಂತಹ ಸರ್ಕಾರಿ ಸ್ವಾಮ್ಯದ ಡಿಫೆನ್ಸ್ ದಿಗ್ಗಜರ ಜೊತೆಗೆ ಖಾಸಗಿ ವಲಯದ ಕಂಪನಿಗಳನ್ನೂ ಈ ಕಾರ್ಯದಲ್ಲಿ ಒಳಗೊಳ್ಳಲಾಗುತ್ತಿರುವುದು ಮಹತ್ವದ ಸಂಗತಿ.
ಸರ್ಕಾರದ ಈ ಕ್ರಮವನ್ನು ಬಹಳ ದೊಡ್ಡ ನಡೆ ಎಂದು ಅನೇಕರು ಬಣ್ಣಿಸಿದ್ದಾರೆ. ಭದೂರಿಯಾ ಕೂಡ ಇದಕ್ಕೆ ಧ್ವನಿಗೂಡಿಸಿದ್ದಾರೆ. ‘ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್ನಲ್ಲಿ ಖಾಸಗಿ ವಲಯವನ್ನು ಸಮರ್ಪಕವಾಗಿ ಜೋಡಿಸಿಕೊಳ್ಳುವ ನಿಟ್ಟಿನಲ್ಲಿ ಇದು ಬಹಳ ದೊಡ್ಡ ಕ್ರಮ ಎನಿಸಿದೆ. ಖಾಸಗಿ ವಲಯದ ಸಾಮರ್ಥ್ಯದ ಬಗ್ಗೆ ಸರ್ಕಾರಕ್ಕಿರುವ ವಿಶ್ವಾಸ ಬಹಳ ದೊಡ್ಡದಾಗಿದೆ’ ಎಂದು ಮಾಜಿ ವಾಯುಸೇನಾ ಮುಖ್ಯಸ್ಥರು ಎಎಂಸಿಎ ಎಕ್ಸಿಕ್ಯೂಷನ್ ಮಾಡಲ್ ಅನ್ನು ಪ್ರಶಂಸಿಸಿದ್ದಾರೆ.
ಎಎಂಸಿಎ ಯೋಜನೆಯ ಪರಿಕಲ್ಪನೆ ಶುರುವಾಗಿ ವರ್ಷಗಳೇ ಆದರೂ ಅದನ್ನು ಹೇಗೆ ಕಾರ್ಯಗತಗೊಳಿಸಬೇಕು ಎನ್ನುವ ರೂಪುರೇಖೆ ಹಾಕಲಾಗಿರಲಿಲ್ಲ. ಇದೀಗ ಆ ಯೋಜನೆ ಜಾರಿಗೊಳಿಸುವ ಹೊಸ ಮಾದರಿಯನ್ನು ರೂಪಿಸಲಾಗಿದ್ದು, ಮೇ 27ರಂದು ಸರ್ಕಾರ ಅನುಮೋದನೆ ಕೂಡ ನೀಡಿದೆ. ಅದರ ಪ್ರಕಾರ, ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ ಅಥವಾ ಎಡಿಎ ಸಂಸ್ಥೆಯು ಎಎಂಸಿಎ ಯೋಜನೆಯನ್ನು ಜಾರಿಗೊಳಿಸಲು ನೇತೃತ್ವ ವಹಿಸುತ್ತದೆ.
ಇದನ್ನೂ ಓದಿ: ಎಚ್ಎಎಲ್ ಮೇಲೆ ಕಣ್ಣಿಟ್ಟಿಲ್ಲ; ಲೇಪಾಕ್ಷಿ-ಮಡಕಸಿರಾವನ್ನು ಏರೋಸ್ಪೇಸ್ ಹಬ್ ಮಾಡುವ ಗುರಿ: ಚಂದ್ರಬಾಬು ನಾಯ್ಡು ಸ್ಪಷ್ಟನೆ
ಸರ್ಕಾರಿ ಮತ್ತು ಖಾಸಗಿ ವಲಯದ ಯಾವುದೇ ಕಂಪನಿಗಳು ಎಎಂಸಿಎ ಅಡಿಯ ಯಾವುದೇ ಯೋಜನೆಗೆ ಬಿಡ್ ಸಲ್ಲಿಸಬಹುದು. ವೈಯಕ್ತಿಕವಾಗಿ ಅಥವಾ ಜಂಟಿಯಾಗಿ, ಅಥವಾ ಒಂದು ಕನ್ಸಾರ್ಟಿಯಂ ರೀತಿ ಸಮೂಹವಾಗಿ ಕಂಪನಿಗಳು ಡಿಫೆನ್ಸ್ ಪ್ರಾಜೆಕ್ಟ್ಗಳ ಗುತ್ತಿಗೆಗೆ ಬಿಡ್ ಸಲ್ಲಿಸಲು ಮುಕ್ತಾವಕಾಶ ಪಡೆದಿರುತ್ತವೆ.
ಈ ಮೊದಲು ಡಿಫೆನ್ಸ್ ಪ್ರಾಜೆಕ್ಟ್ಗಳೆಂದರೆ ಎಚ್ಎಎಲ್ಗೆ ಮೊದಲ ಆದ್ಯತೆ ಇತ್ತು. ಇದರಿಂದಾಗಿ ಎಚ್ಎಎಲ್ಗೆ ಕೆಲಸದ ಹೊರೆ ವಿಪರೀತವಾಗಿ, ತನ್ನ ಕೈಲಿರುವ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸಲು ಕಷ್ಟವಾಗುತ್ತಿತ್ತು. ಈಗ ಖಾಸಗಿ ಕ್ಷೇತ್ರದ ಕಂಪನಿಗಳಿಗೂ ಕೆಲಸದ ಹಂಚಿಕೆಯಾಗುವುದರಿಂದ ಎಚ್ಎಎಲ್ಗೆ ಕೈಮೀರುವಷ್ಟು ಕೆಲಸದ ಹೊರೆ ಆಗದಿರಬಹುದು. ಇದು ಸಕಾರಾತ್ಮಕವಾಗಿ ಯೋಚಿಸಬಹುದಾದ ಸಂಗತಿ. ಆರ್.ಕೆ.ಎಸ್. ಭೂದೂರಿಯಾ ಕೂಡ ಇದೇ ಅಂಶವನ್ನು ಎತ್ತಿ ತೋರಿಸುತ್ತಾರೆ.
ಪಾಕಿಸ್ತಾನಕ್ಕೆ ಏನೇ ಸಿಗಲಿ, ಭಾರತವು ಐದನೇ ತಲೆಮಾರಿನ ಜೆಟ್ ಆಮದು ಮಾಡಿಕೊಳ್ಳುವುದು ಬೇಡ
ಪಾಕಿಸ್ತಾನಕ್ಕೆ ಚೀನಾ ದೇಶ ತನ್ನ ಹೊಸ ಮಾದರಿಯ ಶಸ್ತ್ರಾಸ್ತ್ರಗಳನ್ನು ನೀಡಿ ಸಹಾಯ ಮಾಡುತ್ತದೆ. ಚೀನಾದ ಜೆ-17 ಫೈಟರ್ ಜೆಟ್ಗಳು ಪಾಕಿಸ್ತಾನದ ಬಳಿ ಇವೆ. ಕೆಲ ವರದಿಗಳ ಪ್ರಕಾರ, ಚೀನಾದ ಐದನೇ ತಲೆಮಾರಿನ ಫೈಟರ್ ಜೆಟ್ಗಳಾದ ಜೆ-20 ಮತ್ತು ಜೆ-35 ಅನ್ನು ಪಾಕಿಸ್ತಾನ ಪಡೆಯುವ ಸಾಧ್ಯತೆ ಇದೆ. ಇದೇನಾದರೂ ಆದರೆ, ವಾಯು ಸಮರದಲ್ಲಿ ಭಾರತದ ಮೇಲೆ ಪಾಕಿಸ್ತಾನ ಮೇಲುಗೈ ಸಾಧಿಸಬಹುದು ಎನ್ನುವ ಭಯ ಇದೆ. ಆದರೆ, ಭಾರತದ ಮಾಜಿ ವಾಯುಸೇನಾ ಮುಖ್ಯಸ್ಥರು ಇದನ್ನು ತಳ್ಳಿಹಾಕುತ್ತಾರೆ.
ಇದನ್ನೂ ಓದಿ: ಭಾರತದ ಮಿಲಿಟರಿ ಉತ್ಪಾದನೆ ಮತ್ತು ರಫ್ತು ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ
ಪಾಕಿಸ್ತಾನ ಯಾವುದೇ ಫೈಟರ್ ಜೆಟ್ ಪಡೆಯಲಿ. ನಾವು ಅದನ್ನು ಎದುರಿಸುವ ಮಾರ್ಗಗಳನ್ನು ಹುಡುಕಬಹುದು. ಹಾಗಂತ ಭಾರತವೂ ಐದನೇ ತಲೆಮಾರಿನ ಜೆಟ್ಗಳನ್ನು ಆಮದು ಮಾಡಿಕೊಳ್ಳುವ ಬದಲು ಎಎಂಸಿಎ ಯೋಜನೆಯತ್ತ ಗಮನ ಕೊಡಬೇಕು ಎಂದು ಭದೂರಿಯಾ ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








