Telecom Survey: ಭಾರತದ ಎಷ್ಟು ಮನೆಗಳಲ್ಲಿ ಸ್ಮಾರ್ಟ್ಫೋನ್ ಇದೆ? ಇಲ್ಲಿದೆ ಕುತೂಹಲಕಾರಿ ಅಂಕಿ ಅಂಶ
Comprehensive Modular Survey: Telecom 2025: ಭಾರತದಲ್ಲಿ ಮೊಬೈಲ್ ಬಳಸುತ್ತಿರುವವರ ಪೈಕಿ ಶೇ. 85ರಷ್ಟು ಮಂದಿ ಬಳಿ ಸ್ಮಾರ್ಟ್ಫೋನ್ ಇದೆ. ಈ ವಿಚಾರದಲ್ಲಿ 15ರಿಂದ 29 ವರ್ಷ ವಯಸ್ಸಿನ ಶೇ. 95.5 ಮಂದಿ ಸ್ಮಾರ್ಟ್ಫೋನ್ ಬಳಸುತ್ತಿದ್ದಾರೆ. ಶೇ. 86ರಷ್ಟು ಮನೆಗಳಲ್ಲಿ ಇಂಟರ್ನೆಟ್ ಸೌಲಭ್ಯ ಇದೆ. ಇಂಟರ್ನೆಟ್ ಬಳಸದೇ ಇರುವವರು, ಅದಕ್ಕೆ ಕಾರಣಗಳನ್ನೂ ನೀಡಿದ್ದಾರೆ. ಈ ಬಗ್ಗೆ ಒಂದು ವರದಿ...

ನವದೆಹಲಿ, ಜೂನ್ 1: ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ (MoSPI- Ministry of Statistics and Programme Implementation) ಇತ್ತೀಚೆಗೆ ಬಿಡುಗಡೆ ಮಾಡಿದ ಒಂದು ದತ್ತಾಂಶ ಕುತೂಹಲಕಾರಿ ಎನಿಸಿದೆ. ಅದರ ಪ್ರಕಾರ, ಭಾರತದ ಶೇ. 85ರಷ್ಟು ಮನೆಗಳಲ್ಲಿ ಕನಿಷ್ಠ ಒಬ್ಬ ವ್ಯಕ್ತಿಯ ಬಳಿಯಾದರೂ ಸ್ಮಾರ್ಟ್ಫೋನ್ಗಳಿವೆಯಂತೆ. ಅದರಲ್ಲೂ 15ರಿಂದ 29 ವರ್ಷ ವಯಸ್ಸಿನ ವಯೋಮಾನ ಗುಂಪಿನಲ್ಲಂತೂ ಬಹಳ ಹೆಚ್ಚು ಸ್ಮಾರ್ಟ್ಫೋನ್ ಬಳಕೆ ಇದೆ. ಮೊಬೈಲ್ ಫೋನ್ ಬಳಸುತ್ತಿರುವ ಆ ವಯಸ್ಸಿನ ಶೇ. 95.5 ವ್ಯಕ್ತಿಗಳು ಸ್ಮಾರ್ಟ್ಫೊನ್ ಇಟ್ಟುಕೊಂಡಿದ್ದಾರಂತೆ. ನಗರ ಭಾಗದಲ್ಲಿ ಈ ವಯಸ್ಸಿನ ಶೇ. 97.6ರಷ್ಟು ವ್ಯಕ್ತಿಗಳ ಬಳಿ ಸ್ಮಾರ್ಟ್ಫೋನ್ ಇದೆ. 2025ರ ಟೆಲಿಕಾಂ ಸಮೀಕ್ಷೆಯಲ್ಲಿ ಈ ಹಲವು ಸಂಗತಿಗಳು ಹೊರಬಂದಿವೆ. ಶೇ. 86.3ರಷ್ಟು ಮನೆಗಳಲ್ಲಿ ಇಂಟರ್ನೆಟ್ ಸೌಲಭ್ಯ ಸಿಕ್ಕಿದೆ.
ಶೇ. 99.5 ಮಂದಿ ಯುವಜನರಿಗೆ ಯುಪಿಐ ಬಳಕೆ ಗೊತ್ತಿದೆ
ಜನವರಿಯಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ಈ ಸಮೀಕ್ಷೆ ನಡೆದಿದೆ. 15ರಿಂದ 29 ವರ್ಷ ವಯಸ್ಸಿನ ವ್ಯಕ್ತಿಗಳಲ್ಲಿ ಆನ್ಲೈನ್ ಬ್ಯಾಂಕಿಂಗ್ ವಹಿವಾಟು ನಡೆಸಬಲ್ಲಂತಹರ ಪೈಕಿ ಶೇ. 99.5ರಷ್ಟು ಮಂದಿಗೆ ಯುಪಿಐ ಬಳಕೆ ತಿಳಿದಿದೆ ಎಂದು ಈ ಸಮೀಕ್ಷೆ ಹೇಳುತ್ತದೆ.
ಇದನ್ನೂ ಓದಿ: 2024-25ರಲ್ಲಿ ಶೇ. 4.8 ವಿತ್ತೀಯ ಕೊರತೆ; ಸರ್ಕಾರದ ಗುರಿ ಈಡೇರಿಕೆ
ಮೊಬೈಲ್ ಫೋನ್ ಬಳಸುವ 15 ವರ್ಷ ಮೇಲ್ಪಟ್ಟ ವಯೋಮಾನದ ಗುಂಪನ್ನು ಇನ್ನಷ್ಟು ಗಮನಿಸಿದಾಗ, ಗ್ರಾಮೀಣ ಭಾಗದಲ್ಲಿ ಶೇ. 79.2ರಷ್ಟು ಪುರುಷರ ಬಳಿ ಸ್ಮಾರ್ಟ್ಫೋನ್ ಇದೆ. ಶೇ. 75.6ರಷ್ಟು ಮಹಿಳೆಯರಲ್ಲಿ ಸ್ಮಾರ್ಟ್ಫೊನ್ ಇದೆ.
ಇನ್ನು, ನಗರ ಪ್ರದೇಶಗಳಲ್ಲಿ ಮೊಬೈಲ್ ಹೊಂದಿರುವ 15 ವರ್ಷ ಮೇಲ್ಪಟ್ಟ ವಯಸ್ಸಿನವರಲ್ಲಿ ಶೇ. 89.4ರಷ್ಟು ಪುರುಷರು, ಶೇ. 86.2ರಷ್ಟು ಮಹಿಳೆಯರು ಸ್ಮಾರ್ಟ್ಫೊನ್ ಬಳಸುತ್ತಿದ್ದಾರೆ.
35,000 ಕುಟುಂಬಗಳ ಸಮೀಕ್ಷೆ…
ಯೋಜನಾ ಮತ್ತು ಸಾಂಖ್ಯಿಕ ಇಲಾಖೆಯಿಂದ ದೇಶಾದ್ಯಂತ ಈ ಸಮೀಕ್ಷೆ ನಡೆಸಲಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಕೆಲ ಗ್ರಾಮಗಳನ್ನು ಹೊರತಪಡಿಸಿ ಬಹುತೇಕ ಎಲ್ಲೆಡೆ ಸಮೀಕ್ಷೆ ನಡೆಸಲಾಗಿದೆ ಎಂದು ಹೇಳಲಾಗಿದೆ. ಒಟ್ಟಾರೆ 34,950 ಕುಟುಂಬಗಳು ಹಾಗು 1,42,065 ವ್ಯಕ್ತಿಗಳನ್ನು ಸಮೀಕ್ಷೆಯಲ್ಲಿ ಸಂದರ್ಶಿಸಲಾಗಿದೆ. ಈ ಪೈಕಿ ಗ್ರಾಮೀಣ ಭಾಗದಲ್ಲಿ 19,071 ಮನೆಗಳು ಹಾಗೂ 82,573 ವ್ಯಕ್ತಿಗಳ ಸಂದರ್ಶನ ಆಗಿದೆ. ನಗರ ಭಾಗದಲ್ಲಿ 15,879 ಕುಟುಂಬಗಳು ಹಾಗೂ 59,492 ವ್ಯಕ್ತಿಗಳನ್ನು ಸಮೀಕ್ಷೆಯಲ್ಲಿ ಮಾತನಾಡಿಸಲಾಗಿದೆ.
ಇದನ್ನೂ ಓದಿ: ಪಿಪಿಪಿ ಲೆಕ್ಕದ ಜಿಡಿಪಿ ಅಮೆರಿಕದ್ದು 28 ಟ್ರಿಲಿಯನ್, ಭಾರತದ್ದು 15 ಟ್ರಿಲಿಯನ್ ಡಾಲರ್; ಇದು ಯಾವ ಲೆಕ್ಕಾಚಾರ?
ಇಂಟರ್ನೆಟ್ ಬಳಸದೇ ಇರುವವರು ನೀಡಿದ ಪ್ರಮುಖ ಕಾರಣಗಳಿವು…
ಈ ರಾಷ್ಟ್ರವ್ಯಾಪಿ ಸಮೀಕ್ಷೆಯಲ್ಲಿ ಕೆಲ ಮನೆಗಳಲ್ಲಿ ಇಂಟರ್ನೆಟ್ ಬಳಕೆ ಮಾಡುತ್ತಿಲ್ಲದಿರುವುದು ತಿಳಿದುಬಂದಿದೆ. ಇವರು ಇಂಟರ್ನೆಟ್ ಬಳಸದೇ ಇರಲು ಏನು ಕಾರಣ? ಇಲ್ಲಿದೆ ಅವರು ನೀಡಿದ ವಿವಿಧ ಕಾರಣಗಳು:
- ವಾಸ ಇರುವ ಪ್ರದೇಶಗಳಲ್ಲಿ ಇಂಟರ್ನೆಟ್ ಸರ್ವಿಸ್ ಲಭ್ಯ ಇಲ್ಲದೇ ಇರುವುದು
- ಇಂಟರ್ನೆಟ್ ಸರ್ವಿಸ್ ಲಭ್ಯ ಇದ್ದರೂ, ಅದರ ಅಗತ್ಯತೆ ಇಲ್ಲದಿರುವುದು
- ಇಂಟರ್ನೆಟ್ ಎಂದರೇನು, ಅದರ ಬಳಕೆ ಹೇಗೆ ಎನ್ನುವ ಅರಿವು ಇಲ್ಲದಿರುವುದು
- ಇಂಟರ್ನೆಟ್ ಬಳಕೆಗೆ ಅನುಮತಿ ಇಲ್ಲದಿರುವುದು
- ಉಪಕರಣ (ಸ್ಮಾರ್ಟ್ಫೋನ್ ಇತ್ಯಾದಿ) ಬೆಲೆ ಅಧಿಕ ಇರುವುದು.
- ಇಂಟರ್ನೆಟ್ನಲ್ಲಿ ಸ್ಥಳೀಯ ಭಾಷೆ ಮತ್ತು ವಿಷಯದ ಕೊರತೆ ಇರುವುದು
- ಭದ್ರತೆಯ ಭಯ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:58 am, Sun, 1 June 25








