Fiscal Deficit: 2024-25ರಲ್ಲಿ ಶೇ. 4.8 ವಿತ್ತೀಯ ಕೊರತೆ; ಸರ್ಕಾರದ ಗುರಿ ಈಡೇರಿಕೆ
India's fiscal deficit at 4.8pc of GDP in 2024-25: ಭಾರತದ ಫಿಸ್ಕಲ್ ಡೆಫಿಸಿಟ್ 2024-25ರ ಹಣಕಾಸು ವರ್ಷದಲ್ಲಿ ಶೇ. 4.8ರಷ್ಟಿರುವುದು ಮಹಾಲೇಖಪಾಲರ ವರದಿಯಿಂದ ತಿಳಿದುಬಂದಿದೆ. ಈ ದತ್ತಾಂಶದ ಪ್ರಕಾರ ಆ ವರ್ಷ 15.77 ಲಕ್ಷ ಕೋಟಿ ರೂ ಕೊರತೆ ಬಂದಿದೆ. ಇದು ಜಿಡಿಪಿಯ ಶೇ. 4.8ರಷ್ಟಿದೆ. ಸರ್ಕಾರ ಕೂಡ ಶೇ. 4.8ಕ್ಕೆ ವಿತ್ತೀಯ ಕೊರತೆಯನ್ನು ಮಿತಿಗೊಳಿಸಲು ಇಟ್ಟಿದ್ದ ಗುರಿ ಈಡೇರಿದಂತಾಗಿದೆ.

ನವದೆಹಲಿ, ಮೇ 30: ಭಾರತದ ವಿತ್ತೀಯ ಕೊರತೆ 2024-25ರಲ್ಲಿ ಜಿಡಿಪಿಯ ಶೇ. 4.8ರಷ್ಟಿದೆ. ಸರ್ಕಾರ ತನ್ನ ಪರಿಷ್ಕೃತ ಅಂದಾಜಿನಲ್ಲಿ ಇಷ್ಟೇ ಗುರಿ ನಿಗದಿ ಮಾಡಿತ್ತು. ಆ ಗುರಿ ಸರಿಯಾಗಿ ಈಡೇರಿದೆ. ಇಂದು ಶುಕ್ರವಾರ ಮಹಾಲೇಖಪಾಲರು (Comptroller General of Accounts) ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, 2024-25ರ ಹಣಕಾಸು ವರ್ಷದಲ್ಲಿ ಸರ್ಕಾರದ ವಿತ್ತೀಯ ಕೊರತೆ 15.77 ಲಕ್ಷ ಕೋಟಿ ರೂನಷ್ಟಿದೆ. ಇದು ಜಿಡಿಪಿಯ ಶೇ. 4.8ರಷ್ಟಾಗುತ್ತದೆ.
2024-25ರಲ್ಲಿ ಸರ್ಕಾರಕ್ಕೆ ತೆರಿಗೆ ಮತ್ತು ತೆರಿಗೆಯೇತರ ಆದಾಯ ಸೇರಿ ಒಟ್ಟಾರೆ ಆದಾಯ 30.36 ಲಕ್ಷ ಕೋಟಿ ರೂ ಬಂದಿದೆ. ಬಜೆಟ್ನಲ್ಲಿ ಮಾಡಲಾಗಿದ್ದ ಅಂದಾಜಿಗಿಂತ ತುಸು ಕಡಿಮೆ ತೆರಿಗೆ ಆದಾಯ ಸಿಕ್ಕಿದೆ.
ಇನ್ನು, ಆ ವರ್ಷ ಸರ್ಕಾರ ಮಾಡಿರುವ ವೆಚ್ಚ 46.56 ಲಕ್ಷ ಕೋಟಿ ರೂ. ಇದೆ. ಇದು ಸರ್ಕಾರ ಮಾಡಿದ ಅಂದಾಜಿಗೆ ಶೇ. 98.7ರಷ್ಟಾಗುತ್ತದೆ. ಒಟ್ಟಾರೆ 15.77 ಲಕ್ಷ ಕೋಟಿ ರೂ ಕೊರತೆ ಕಂಡುಬಂದಿದೆ.
ಇದನ್ನೂ ಓದಿ: ಭಾರತದ ಜಿಡಿಪಿ 4ನೇ ಕ್ವಾರ್ಟರ್ನಲ್ಲಿ ಶೇ. 7.4; ಇಡೀ ವರ್ಷಕ್ಕೆ ಶೇ. 6.5 ಬೆಳವಣಿಗೆ; ನಿರೀಕ್ಷೆ ಮೀರಿಸಿ ವೃದ್ಧಿಸಿದ ಆರ್ಥಿಕತೆ
ಭಾರತದಲ್ಲಿ 2024-25ರಲ್ಲಿ ನೇರ ತೆರಿಗೆ ಸಂಗ್ರಹ 27.02 ಲಕ್ಷ ಕೋಟಿ ರೂ ಇದೆ. ಹಿಂದಿನ ವರ್ಷದಕ್ಕೆ ಹೋಲಿಸಿದರೆ ಇದು ಶೇ. 15.59ರಷ್ಟು ಹೆಚ್ಚಳ ಆಗಿದೆ.
ಸರ್ಕಾರವು ಆಹಾರ, ರಸಗೊಬ್ಬರ, ಪೆಟ್ರೋಲಿಯಂ ಇತ್ಯಾದಿಯ ಸಬ್ಸಿಡಿಗಳಿಗೆ 4.14 ಲಕ್ಷ ಕೋಟಿ ರೂ ವ್ಯಯಿಸಿದೆ. ಇದು ಅಂದಾಜಿಗಿಂತ ತುಸು ಹೆಚ್ಚಿದೆ.
ಸರ್ಕಾರದ ಬಂಡವಾಳ ವೆಚ್ಚ 10.52 ಲಕ್ಷ ಕೋಟಿ ರೂನಷ್ಟಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಇದು ಹೆಚ್ಚು ವಿನಿಯೋಗವಾಗಿದೆ. ಈ ಬಂಡವಾಳ ವೆಚ್ಚವು ನಿಗದಿತ ಗುರಿಗಿಂತ ಮೇಲೆ ಹೋಗಿದೆ.
ಇದನ್ನೂ ಓದಿ: ಪಿಪಿಪಿ ಲೆಕ್ಕದ ಜಿಡಿಪಿ ಅಮೆರಿಕದ್ದು 28 ಟ್ರಿಲಿಯನ್, ಭಾರತದ್ದು 15 ಟ್ರಿಲಿಯನ್ ಡಾಲರ್; ಇದು ಯಾವ ಲೆಕ್ಕಾಚಾರ?
2023-24ರಲ್ಲಿ ಆರ್ಬಿಐ 2.11 ಲಕ್ಷ ಕೋಟಿ ರೂ ಡಿವಿಡೆಂಡ್ ಅನ್ನು ಸರ್ಕಾರಕ್ಕೆ ನೀಡಿತ್ತು. ಸರ್ಕಾರಕ್ಕೆ ಇದು ಬಹಳ ಸಹಾಯಕವಾಗಿದೆ. ಹಾಗೆಯೇ, 2024-25ರ ವರ್ಷದಲ್ಲೂ ಆರ್ಬಿಐ ಬರೋಬ್ಬರಿ 2.69 ಲಕ್ಷ ಕೋಟಿ ರೂನಷ್ಟು ಡಿವಿಡೆಂಡ್ ಅನ್ನು ಸರ್ಕಾರಕ್ಕೆ ಕೊಟ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ