ಪಿಪಿಪಿ ಲೆಕ್ಕದ ಜಿಡಿಪಿ ಅಮೆರಿಕದ್ದು 28 ಟ್ರಿಲಿಯನ್, ಭಾರತದ್ದು 15 ಟ್ರಿಲಿಯನ್ ಡಾಲರ್; ಇದು ಯಾವ ಲೆಕ್ಕಾಚಾರ?
India's GDP in PPP terms is 15 trillion USD: ಭಾರತದ ನಾಮಿನಲ್ ಜಿಡಿಪಿ 4 ಟ್ರಿಲಿಯನ್ ಡಾಲರ್ ಆಸುಪಾಸಿನಷ್ಟಿದೆ. ಆದರೆ, ಪಿಪಿಪಿ ಜಿಡಿಪಿ 15 ಟ್ರಿಲಿಯನ್ ಡಾಲರ್ ಇದೆ. ಈ ಪಿಪಿಪಿ ಲೆಕ್ಕಾಚಾರದ ಜಿಡಿಪಿಯಲ್ಲಿ ಚೀನಾ 37 ಟ್ರಿಲಿಯನ್ ಡಾಲರ್ ಹೊಂದಿದ್ದರೆ, ಅಮೆರಿಕ 19 ಟ್ರಿಲಿಯನ್ ಡಾಲರ್ನಷ್ಟಿದೆ. ನಾಮಿನಲ್ ಜಿಡಿಪಿಗೂ ಪಿಪಿಪಿ ಜಿಡಿಪಿಗೂ ಏನು ವ್ಯತ್ಯಾಸ ಎನ್ನುವ ವಿವರ ಇಲ್ಲಿದೆ...

ನವದೆಹಲಿ, ಮೇ 30: ಭಾರತದ ಜಿಡಿಪಿ 4 ಟ್ರಿಲಿಯನ್ ಡಾಲರ್ ದಾಟಿದೆ, ಜಪಾನ್ ಆರ್ಥಿಕತೆಯನ್ನೂ ಮೀರಿಸಿ ವಿಶ್ವದ ನಂ. 4ನೇ ಸ್ಥಾನಕ್ಕೆ ಹೋಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಪಿಪಿಪಿ ಲೆಕ್ಕಾಚಾರದ ಜಿಡಿಪಿಯಲ್ಲಿ (GDP in PPP terms) ಭಾರತದ ಆರ್ಥಿಕತೆ ಇನ್ನೂ ಬೃಹತ್ತಾಗಿದೆ. ಈ ವಿಷಯದ ಬಗ್ಗೆ ಮಾತನಾಡಿರುವ ನೀತಿ ಆಯೋಗ್ ಉಪಾಧ್ಯಕ್ಷ ಸುಮನ್ ಬೆರಿ ಅವರು, ಭಾರತದ ಪಿಪಿಪಿ ಜಿಡಿಪಿ ಗಾತ್ರ 15 ಟ್ರಿಲಿಯನ್ ಡಾಲರ್ನಷ್ಟಿದೆ. ಚೀನಾ, ಅಮೆರಿಕ ಬಿಟ್ಟರೆ ಭಾರತದ ಆರ್ಥಿಕತೆಯೇ (Indian Economy) ಅತಿ ದೊಡ್ಡದೆನಿಸಿದೆ ಎಂದು ಹೇಳಿದ್ದಾರೆ.
ಪಿಪಿಪಿ ಎಂದರೆ ಪರ್ಚೇಸಿಂಗ್ ಪವರ್ ಪ್ಯಾರಿಟಿ. ಈ ಪಿಪಿಪಿ ಲೆಕ್ಕದಲ್ಲಿ ಅಮೆರಿಕದ ಜಿಡಿಪಿ 29 ಟ್ರಿಲಿಯನ್ ಡಾಲರ್ ಆಗುತ್ತದೆ. ಇದಕ್ಕೆ ಹೋಲಿಸಿದರೆ ಭಾರತದ ಜಿಡಿಪಿಯು ಅದರ ಅರ್ಧಕ್ಕಿಂತ ತುಸು ಹೆಚ್ಚಿದೆ. ಆದರೆ, ಪಿಪಿಪಿ ಲೆಕ್ಕದಲ್ಲಿ ಚೀನಾ ಎಲ್ಲಕ್ಕಿಂತ ಮುಂದಿದೆ. ನಾಮಿನಲ್ ಲೆಕ್ಕದಲ್ಲಿ 18 ಟ್ರಿಲಿಯನ್ ಡಾಲರ್ ಜಿಡಿಪಿ ಇರುವ ಚೀನಾ ದೇಶವು ಪಿಪಿಪಿ ಲೆಕ್ಕದಲ್ಲಿ ಬರೋಬ್ಬರಿ 37 ಟ್ರಿಲಿಯನ್ ಡಾಲರ್ ಆರ್ಥಿಕತೆ ಎನಿಸಿದೆ.
ಇದನ್ನೂ ಓದಿ: ಭಾರತದ ಜಿಡಿಪಿ 4ನೇ ಕ್ವಾರ್ಟರ್ನಲ್ಲಿ ಶೇ. 7.4; ಇಡೀ ವರ್ಷಕ್ಕೆ ಶೇ. 6.5 ಬೆಳವಣಿಗೆ; ನಿರೀಕ್ಷೆ ಮೀರಿಸಿ ವೃದ್ಧಿಸಿದ ಆರ್ಥಿಕತೆ
ಭಾರತದ ತಲಾದಾಯ ಎಷ್ಟಿದೆ?
ನಾಮಿನಲ್ ಲೆಕ್ಕದಲ್ಲಿ ಭಾರತದ ಜಿಡಿಪಿ ತಲಾದಾಯವು 3,000-3,500 ಡಾಲರ್ ಇದೆ. ಜಾಗತಿಕವಾಗಿ 135-145ನೇ ಸ್ಥಾನ ಪಡೆಯುತ್ತದೆ. ಆದರೆ, ಪಿಪಿಪಿ ಲೆಕ್ಕದಲ್ಲಿ ಭಾರತದ ಜಿಡಿಪಿ ತಲಾದಾಯವು 10,500 ಡಾಲರ್ ಇದೆ. ಜಾಗತಿಕವಾಗಿ ಅದರ ಸ್ಥಾನವು 100ರ ಆಸುಪಾಸಿನಲ್ಲಿದೆ.
ಏನಿದು ನಾಮಿನಲ್ ಮತ್ತು ಪಿಪಿಪಿ ಜಿಡಿಪಿ ಲೆಕ್ಕಾಚಾರ?
ನಾಮಿನಲ್ ಲೆಕ್ಕದ ಜಿಡಿಪಿಯಲ್ಲಿ ಪ್ರಸಕ್ತ ಮಾರುಕಟ್ಟೆ ವಿನಿಮಯ ದರಗಳನ್ನು ಆಧರಿಸಲಾಗಿರುತ್ತದೆ. ಭಾರತದ ಮಾರುಕಟ್ಟೆಯಲ್ಲಿರುವ ಎಲ್ಲಾ ಸರಕು ಮತ್ತು ಸೇವೆಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯವನ್ನು (ಡಾಲರ್ ಲೆಕ್ಕ) ಇದು ಪ್ರತಿಬಿಂಬಿಸುತ್ತದೆ.
ಆದರೆ, ಪಿಪಿಪಿ ಲೆಕ್ಕದಲ್ಲಿ ಸ್ಥಳೀಯ ಜೀವನ ವೆಚ್ಚ, ಕರೆನ್ಸಿಯ ಖರೀದಿ ಶಕ್ತಿ ಇತ್ಯಾದಿ ಅಂಶಗಳನ್ನು ಪರಿಗಣಿಸಲಾಗುತ್ತದೆ. ಉದಾಹರಣೆಗೆ, ಅಮೆರಿಕದಲ್ಲಿ ಒಂದು ಸಾವಿರ ಡಾಲರ್ನಲ್ಲಿ ಒಬ್ಬ ವ್ಯಕ್ತಿ ಒಂದು ತಿಂಗಳು ಜೀವನ ಮಾಡುವುದು ಕಷ್ಟ. ಆದರೆ, ಭಾರತದಲ್ಲಿ 10,000 ರುಪಾಯಿಯಲ್ಲಿ ಹೆಚ್ಚು ಆರಾಮವಾಗಿ ಜೀವಿಸಬಹುದು. ಅಮೆರಿಕಕ್ಕೆ ಹೋಲಿಸಿದರೆ ಭಾರತದಲ್ಲಿ ಜೀವನ ವೆಚ್ಚ ಕಡಿಮೆ ಇರುತ್ತದೆ.
ಇದನ್ನೂ ಓದಿ: ಅಮೆರಿಕಕ್ಕೆ ತಿರುಗುಬಾಣವಾಗ್ತಿದ್ಯಾ ಟ್ರೇಡ್ ವಾರ್?; ಮೊದಲ ಕ್ವಾರ್ಟರ್ನಲ್ಲಿ ಜಿಡಿಪಿ ಕುಸಿತ
ಭಾರತದಲ್ಲಿ ನೀವು ಒಂದು ಸಾವಿರ ಡಾಲರ್ ಹೊಂದಿದ್ದು ಅದನ್ನು ರುಪಾಯಿಗೆ ಪರಿವರ್ತಿಸಿದರೆ 86,000 ರೂ ಆಗುತ್ತದೆ. ಈ ಹಣದಲ್ಲಿ ಅಮೆರಿಕದಲ್ಲಿಗಿಂತ ಹೆಚ್ಚು ಐಷಾರಾಮಿ ಜೀವನವನ್ನು ಭಾರತದಲ್ಲಿ ನಡೆಸಬಹುದು. ಇಂಥ ಅಂಶಗಳನ್ನು ಪಿಪಿಪಿ ಲೆಕ್ಕಾಚಾರದಲ್ಲಿ ಪರಿಗಣಿಸಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ