Indian Economy: ಜಾಗತಿಕ ಅನಿಶ್ಚಿತತೆ ಮಧ್ಯೆಯೂ ಭಾರತದ ಆರ್ಥಿಕತೆ ಅತ್ಯುತ್ತಮ ಬೆಳವಣಿಗೆ: ಆರ್ಬಿಐ ಅಂದಾಜು
Indian economic growth projection: ವಿಶ್ವದ ಪ್ರಮುಖ ಆರ್ಥಿಕತೆಗಳ ಪೈಕಿ ಭಾರತ ಈ ವರ್ಷವೂ ಅತಿವೇಗದ ಬೆಳವಣಿಗೆ ದಾಖಲಿಸಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಜಾಗತಿಕ ಅನಿಶ್ಚಿತ ಪರಿಸ್ಥಿತಿ ನಡುವೆಯೂ ಭಾರತದ ಆರ್ಥಿಕತೆಯು ಇತರ ದೇಶಗಳಿಗಿಂತ ಉತ್ತಮವಾಗಿ ಸಾಗಲಿದೆ ಎಂದು ಆರ್ಬಿಐ ಹೇಳಿದೆ. ನ್ಯಾಷನಲ್ ಮ್ಯಾನುಫ್ಯಾಕ್ಚರಿಂಗ್ ಮಿಷನ್, ಅನುಭೋಗ ಹೆಚ್ಚಳ, ಬಂಡವಾಳ ವೆಚ್ಚ ಹೆಚ್ಚಳ ಇತ್ಯಾದಿ ಅಂಶಗಳು ಭಾರತದ ಆರ್ಥಿಕತೆಗೆ ಸಹಕಾರಿಯಾಗಲಿವೆ ಎಂದೆನ್ನಲಾಗಿದೆ.

ನವದೆಹಲಿ, ಮೇ 29: ಕಳೆದ ಕೆಲ ವರ್ಷಗಳಿಂದ ವಿಶ್ವದ ದೊಡ್ಡ ಆರ್ಥಿಕತೆಗಳ ಪೈಕಿ ಭಾರತ ಅತಿ ವೇಗದ ಬೆಳಣಿಗೆ ದಾಖಲಿಸುತ್ತಾ ಬಂದಿದೆ. ಪ್ರಸಕ್ತ ಹಣಕಾಸು ವರ್ಷದಲ್ಲೂ (2025-26) ಈ ಓಟ ಮುಂದುವರಿಯಲಿದೆ ಎಂದು ಬಹಳಷ್ಟು ತಜ್ಞರು ಹೇಳುತ್ತಿದ್ದಾರೆ. ಆರ್ಥಿಕ ಅನಿಶ್ಚಿತ ಸ್ಥಿತಿ ಸೇರಿದಂತೆ ಕೆಲ ಜಾಗತಿಕ ವಿದ್ಯಮಾನಗಳಿಂದಾಗಿ ಈ ವರ್ಷ ಜಾಗತಿಕವಾಗಿ ಆರ್ಥಿಕತೆಯ ಬೆಳವಣಿಗೆ ವೇಗ (GDP growth rate) ಕಡಿಮೆ ಆಗುತ್ತಿದೆ. ಈ ಮಧ್ಯೆಯೂ ಭಾರತದ ಅತಿವೇಗದ ಬೆಳವಣಿಗೆಯ ಸ್ಥಾನ ಕುಂದದು ಎಂದು ಆರ್ಬಿಐ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.
ಕಳೆದ ವರ್ಷ (2024-25) ಭಾರತದ ಜಿಡಿಪಿ ಶೇ. 6.3ರಿಂದ ಶೇ. 6.5ರಷ್ಟು ಹೆಚ್ಚಳ ಕಂಡಿರಬಹುದು ಎನ್ನುವ ಅಂದಾಜಿದೆ. ಇದು ಸಾಧಾರಣ ಎನಿಸಿದರೂ ಇತರ ದೊಡ್ಡ ಆರ್ಥಿಕತೆಗಳಿಗೆ ಹೋಲಿಸಿದರೆ ಹೆಚ್ಚಿದೆ. ನಾಳೆ, ಶುಕ್ರವಾರ ಸರ್ಕಾರದಿಂದ ಕೊನೆಯ ಕ್ವಾರ್ಟರ್ನ ಜಿಡಿಪಿ ದತ್ತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ಬೌದ್ಧ ದೇಶಗಳಿಗೆ ರಫ್ತಾಗಲಿದೆ ಕಾಲಾನಮಕ್ ಅಕ್ಕಿ; ಬುದ್ಧನಿಗೆ ಸಂಬಂಧಿಸಿದ ಈ ಕಪ್ಪು ಅಕ್ಕಿಯ ವಿಶೇಷತೆ ಏನು ಗೊತ್ತಾ?
ಐಸಿಐಸಿಐ ಬ್ಯಾಂಕ್ನ ಆರ್ಥಿಕತ ತಜ್ಞರು ಮಾಡಿದ ಅಂದಾಜು ಪ್ರಕಾರ ಜನವರಿಯಿಂದ ಏಪ್ರಿಲ್ ವರೆಗಿನ ಕ್ವಾರ್ಟರ್ನ್ಲಲಿ ಭಾರತದ ಜಿಡಿಪಿ ಶೇ. 7ರಷ್ಟು ಹೆಚ್ಚಾಗಿರಬಹುದು. 2024-25ರಲ್ಲಿ ಒಟ್ಟಾರೆ ಆರ್ಥಿಕತೆಯು ಶೇ. 6.3ರಷ್ಟು ಹೆಚ್ಚಬಹುದು ಎಂದು ಈ ವರದಿಯಲ್ಲಿ ನಿರೀಕ್ಷಿಸಲಾಗಿದೆ.
2025-26ರಲ್ಲಿ ಭಾರತದ ಆರ್ಥಿಕತೆ ಬೆಳವಣಿಗೆ ಇನ್ನಷ್ಟು ವೇಗ?
ಆರ್ಬಿಐನ ವಾರ್ಷಿಕ ವರದಿಯು 2025-26ರ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಹೆಚ್ಚು ಆಶಾದಾಯಕವಾಗಿದೆ. ಅನುಭೋಗ ಬೇಡಿಕೆ (consumption demand) ಮತ್ತೆ ಕುದುರಿರುವುದು, ಅಂದರೆ, ಜನರು ಮಾಡುತ್ತಿರುವ ವೆಚ್ಚವು ಹೆಚ್ಚಾಗಿರುವುದು, ಸರ್ಕಾರದಿಂದಲೂ ಬಂಡವಾಳ ವೆಚ್ಚ (capital expenditure) ಹೆಚ್ಚಾಗಲಿರುವುದು ಭಾರತದ ಆರ್ಥಿಕತೆಯನ್ನು ಈ ವರ್ಷ ಬಲಪಡಿಸಬಹುದು ಎಂದು ಈ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.
ನ್ಯಾಷನಲ್ ಮ್ಯಾನುಫ್ಯಾಕ್ಚರಿಂಗ್ ಮಿಷನ್ನಿಂದ ಮತ್ತಷ್ಟು ಬಲ
2025-26ರ ಬಜೆಟ್ನಲ್ಲಿ ಘೋಷಿಸಲಾಗಿದ್ದ ನ್ಯಾಷನಲ್ ಮ್ಯಾನುಫ್ಯಾಕ್ಚರಿಂಗ್ ಮಿಷನ್ ಭಾರತದ ತಯಾರಿಕಾ ಕ್ಷೇತ್ರಕ್ಕೆ ದೊಡ್ಡ ಶಕ್ತಿ ಸಿಗಲಿದ್ದು, ಉದ್ಯೋಗಾವಕಾಶಗಳೂ ಹೆಚ್ಚಲಿವೆ ಎಂದು ಹೇಳಿರುವ ಆರ್ಬಿಐ ವರದಿಯು, ಭಾರತ ವಿವಿಧ ದೇಶಗಳೊಂದಿಗೆ ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದವನ್ನೂ ಸ್ವಾಗತಿಸಿದೆ.
ಇದನ್ನೂ ಓದಿ: ಏಪ್ರಿಲ್ನಲ್ಲಿ ಐಐಪಿ ಶೇ. 2.7 ಹೆಚ್ಚಳ; ನಿರೀಕ್ಷೆಗಿಂತಲೂ ಹೆಚ್ಚು ಏರಿಕೆ ಕಂಡ ಔದ್ಯಮಿಕ ಉತ್ಪಾದನೆ
‘ಭಾರತವು ವಿವಿಧ ದೇಶಗಳೊಂದಿಗೆ 14 ಮುಕ್ತ ವ್ಯಾಪಾರ ಒಪ್ಪಂದ ಹಾಗೂ 6 ಆದ್ಯತಾ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದೆ. ಇನ್ನೂ ಕೆಲ ದೇಶಗಳೊಂದಿಗೆ ಹೊಸ ವ್ಯಾಪಾರ ಒಪ್ಪಂದಗಳನ್ನು ಅಂತಿಮಗೊಳಿಸಲು ಮಾತುಕತೆ ನಡೆಯುತ್ತಿದೆ. ಇವೆಲ್ಲವೂ ಕೂಡ ಭಾರತದ ವ್ಯಾಪಾರ ವಹಿವಾಟು ಚಟುವಟಿಕೆಯನ್ನು ತೀವ್ರಗೊಳಿಸಲಿದೆ’ ಎಂದು ಹೇಳಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








