India GDP: ಭಾರತದ ಜಿಡಿಪಿ 4ನೇ ಕ್ವಾರ್ಟರ್ನಲ್ಲಿ ಶೇ. 7.4; ಇಡೀ ವರ್ಷಕ್ಕೆ ಶೇ. 6.5 ಬೆಳವಣಿಗೆ; ನಿರೀಕ್ಷೆ ಮೀರಿಸಿ ವೃದ್ಧಿಸಿದ ಆರ್ಥಿಕತೆ
India GDP registers 7.4pc growth in Q4: ಭಾರತದ ಜಿಡಿಪಿ 2024-25ರ ಕೊನೆಯ ತ್ರೈಮಾಸಿಕದಲ್ಲಿ ಶೇ. 7.4ರಷ್ಟು ಹೆಚ್ಚಳ ಕಂಡಿದೆ. ಇಡೀ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 6.5ರಷ್ಟು ಬೆಳವಣಿಗೆ ದಾಖಲಿಸಿದಂತಾಗಿದೆ. 2023-24ರಲ್ಲಿ ಜಿಡಿಪಿ ಶೇ. 9.2ರಷ್ಟು ಹೆಚ್ಚಿತ್ತು. ಅದಕ್ಕೆ ಹೋಲಿಸಿದರೆ 2024-25ರ ಜಿಡಿಪಿ ದರ ಕಡಿಮೆ ಆಗಿದೆ. ಇದು ಕಳೆದ ನಾಲ್ಕು ವರ್ಷದಲ್ಲೇ ಅತಿ ಕಡಿಮೆ ವಾರ್ಷಿಕ ವೃದ್ಧಿದರ ಎನಿಸಿದೆ.

ನವದೆಹಲಿ, ಮೇ 30: ಭಾರತದ ಆರ್ಥಿಕತೆ ಹೆಚ್ಚಿನ ಜನರ ಲೆಕ್ಕಾಚಾರ ಮೀರಿಸಿ ಹೆಚ್ಚು ವೃದ್ಧಿ ಕಂಡಿದೆ. ಇಂದು ಸರ್ಕಾರದಿಂದ ಬಿಡುಗಡೆಯಾದ ದತ್ತಾಂಶದ ಪ್ರಕಾರ 2024-25ರ ಹಣಕಾಸು ವರ್ಷದ ಕೊನೆಯ ಕ್ವಾರ್ಟರ್ ಆದ ಜನವರಿಯಿಂದ ಮಾರ್ಚ್ವರೆಗಿನ ಅವಧಿಯಲ್ಲಿ ಭಾರತದ ಜಿಡಿಪಿ (India GDP growth) ಶೇ. 7.4ರಷ್ಟು ಹೆಚ್ಚಾಗಿದೆ. ಹೆಚ್ಚಿನ ತಜ್ಞರು ಮತ್ತು ಹಣಕಾಸು ಸಂಸ್ಥೆಗಳು ಕೊನೆಯ ಕ್ವಾರ್ಟರ್ನಲ್ಲಿ ಶೇ. 6.4ರಿಂದ ಶೇ. 7ರ ಶ್ರೇಣಿಯಲ್ಲಿ ಜಿಡಿಪಿ ಬೆಳೆಯಬಹುದು ಎಂದು ಎಣಿಸಿದ್ದುವು. ಎಲ್ಲರ ನಿರೀಕ್ಷೆ ಮೀರಿಸಿ ಜಿಡಿಪಿ ವೃದ್ಧಿ ಕಂಡಿದೆ.
ಕೊನೆಯ ಕ್ವಾರ್ಟರ್ನಲ್ಲಿ ಶೇ. 7.4ರಷ್ಟು ಬೆಳೆದರೂ ಇಡೀ ವರ್ಷದಲ್ಲಿ (2024-25) ಆರ್ಥಿಕತೆ ಶೇ. 6.5ರಷ್ಟು ಮಾತ್ರ ಹೆಚ್ಚಾಗಿದೆ. ಇದೂ ಕೂಡ ಹಲವರ ನಿರೀಕ್ಷೆಗಿಂತ ಹೆಚ್ಚಾಗಿದೆಯಾದರೂ, ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಬಹಳ ಕಡಿಮೆ ಆಗಿದೆ. ಕಳೆದ ನಾಲ್ಕು ವರ್ಷದಲ್ಲೇ ಇದು ಕಡಿಮೆ ವೃದ್ಧಿ ದರ ಎನಿಸಿದೆ. 2023-24ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ 9.2ರಷ್ಟು ಹೆಚ್ಚಳ ದಾಖಲಿಸಿದೆ.
ಇದನ್ನೂ ಓದಿ: ಅಮೆರಿಕಕ್ಕೆ ತಿರುಗುಬಾಣವಾಗ್ತಿದ್ಯಾ ಟ್ರೇಡ್ ವಾರ್?; ಮೊದಲ ಕ್ವಾರ್ಟರ್ನಲ್ಲಿ ಜಿಡಿಪಿ ಕುಸಿತ
ಕೊನೆಯ ಕ್ವಾರ್ಟರ್ನಲ್ಲಿ ರಿಯಲ್ ಜಿಡಿಪಿ 51.35 ಲಕ್ಷ ಕೋಟಿ ರೂ
ಜನವರಿಯಿಂದ ಮಾರ್ಚ್ವರೆಗಿನ ತ್ರೈಮಾಸಿಕದಲ್ಲಿ ರಿಯಲ್ ಜಿಡಿಪಿ 51.35 ಲಕ್ಷ ಕೋಟಿ ರೂ ಇರಬಹುದು ಎಂದು ಅಂದಾಜಿಸಲಾಗಿದೆ. ಹಿಂದಿನ ವರ್ಷದ ಇದೇ ಕ್ವಾರ್ಟರ್ನಲ್ಲಿ (2024ರ ಜನವರಿಯಿಂದ ಮಾರ್ಚ್ ಕ್ವಾರ್ಟರ್) ರಿಯಲ್ ಜಿಡಿಪಿ 47.82 ಲಕ್ಷ ಕೋಟಿ ರೂ ಇತ್ತು. ಅಂದರೆ, ಶೇ. 7.4ರಷ್ಟು ಜಿಡಿಪಿ ಹೆಚ್ಚಳ ಆಗಿದೆ.
ಇವತ್ತಿನ ಮಾರುಕಟ್ಟೆ ದರಗಳನ್ನು ಗಣನೆಗೆ ತೆಗೆದುಕೊಳ್ಳುವ ನಾಮಿನಲ್ ಜಿಡಿಪಿ ಈ 4ನೇ ಕ್ವಾರ್ಟರ್ನಲ್ಲಿ ಶೇ. 10.8ರಷ್ಟು ಬೆಳವಣಿಗೆ ಕಂಡಿದೆ.
ಕೃಷಿ ಕ್ಷೇತ್ರ ಬೆಳವಣಿಗೆ, ತಯಾರಿಕಾ ಕ್ಷೇತ್ರ ಮಂದ
ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಇಂದು ಶುಕ್ರವಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, 2024ರ ಮಾರ್ಚ್ ಕ್ವಾರ್ಟರ್ನಲ್ಲಿ ಕೇವಲ 0.9 ಪ್ರತಿಶತದಷ್ಟು ಬೆಳೆದಿದ್ದ ಕೃಷಿ ಕ್ಷೇತ್ರ ಈ ಬಾರಿ ಶೇ. 5ರಷ್ಟು ಪ್ರಗತಿ ದಾಖಲಿಸಿದೆ. ಜಿಡಿಪಿಯು ನಿರೀಕ್ಷಿಸಿದುದಕ್ಕಿಂತ ಹೆಚ್ಚಾಗಲು ಕೃಷಿಯೂ ಒಂದು ಕಾರಣವಾಗಿದೆ.
ಇದನ್ನೂ ಓದಿ: ಜಾಗತಿಕ ಅನಿಶ್ಚಿತತೆ ಮಧ್ಯೆಯೂ ಭಾರತದ ಆರ್ಥಿಕತೆ ಅತ್ಯುತ್ತಮ ಬೆಳವಣಿಗೆ: ಆರ್ಬಿಐ ಅಂದಾಜು
ಇನ್ನೊಂದೆಡೆ, ಭಾರತ ಬಹಳ ಮುತುವರ್ಜಿ ತೋರುತ್ತಿರುವ ತಯಾರಿಕಾ ಕ್ಷೇತ್ರದ ಬೆಳವಣಿಗೆ ಮಂದಗೊಂಡಿದೆ. ಕಳೆದ ವರ್ಷದ ಕೊನೆಯ ಕ್ವಾರ್ಟರ್ನಲ್ಲಿ ಶೇ. 11.3ರಷ್ಟು ಹೆಚ್ಚಿದ್ದ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ ಈ ಬಾರಿ ಬೆಳವಣಿಗೆ ಕಂಡಿದ್ದು ಶೇ. 4.8ರಷ್ಟು ಮಾತ್ರ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:35 pm, Fri, 30 May 25








