Awards : ಪ್ರಶಸ್ತಿ ಎಂಬ ‘ಕೀರ್ತಿಶನಿ’ ಮತ್ತು ‘ಯಶೋಲಕ್ಷ್ಮಿ’ಯ ಕುರಿತು ಡಾ. ಎಚ್. ಎಸ್. ರಾಘವೇಂದ್ರ ರಾವ್

ಶ್ರೀದೇವಿ ಕಳಸದ

|

Updated on:Dec 05, 2021 | 2:43 PM

Young Writers : ‘ಯುವ ಲೇಖಕರಂತೂ ಇಂತಹ ಪ್ರಶಸ್ತಿಗಳು ಎಚ್ಚರಿಕೆಯಿಂದ ನೋಡಬೇಕಾದ ‘ಮುಳ್ಳಿನ ಕಿರೀಟ’ವೆನ್ನುವುದನ್ನು ಗ್ರಹಿಸಬೇಕು, ಬೆಳೆಯುತ್ತ ಹೋಗಬೇಕು. ಕೇವಲ ‘ಜನಪ್ರಿಯ’ವಲ್ಲದ ಓದು, ಗಂಭೀರವಾದ ಚರ್ಚೆ ಮತ್ತು ವಿಮರ್ಶೆಗಳೇ ಬರವಣಿಗೆಗೆ ಸಲ್ಲುವ ನಿಜವಾದ ಪ್ರಶಸ್ತಿ.’ ಡಾ. ಎಚ್. ಎಸ್. ರಾಘವೇಂದ್ರ ರಾವ್

Awards : ಪ್ರಶಸ್ತಿ ಎಂಬ ‘ಕೀರ್ತಿಶನಿ’ ಮತ್ತು ‘ಯಶೋಲಕ್ಷ್ಮಿ’ಯ ಕುರಿತು ಡಾ. ಎಚ್. ಎಸ್. ರಾಘವೇಂದ್ರ ರಾವ್
ವಿಮರ್ಶಕ, ಅನುವಾದಕ ಡಾ. ಎಚ್. ಎಸ್. ರಾಘವೇಂದ್ರ ರಾವ್

Awards : ಸರ್ಕಾರ, ಅದರಿಂದ ಪೋಷಿತವಾದ ಸಂಸ್ಥೆಗಳು ಮತ್ತು ಹತ್ತು ಹಲವು ಖಾಸಗೀ ಸಂಸ್ಥೆಗಳು ಪ್ರಶಸ್ತಿ ಕೊಡುವ ಕೆಲಸದಲ್ಲಿ ನಿರತವಾಗಿವೆ. ಇವೆಲ್ಲವೂ ಸರಿಯೋ ತಪ್ಪೋ ಆದ ಮಾನದಂಡಗಳನ್ನು ರೂಪಿಸಿಕೊಂಡಿರುತ್ತವೆ. ಸರಿ-ತಪ್ಪುಗಳು ದೃಷ್ಟಿಕೋನಗಳ ಪ್ರಶ್ನೆಯೇ ಹೊರತು ಅಬ್ಸಲ್ಯೂಟ್ ಅಲ್ಲ. ಆದರೆ ಇಂತಹ ನಿಯಮಗಳ ಚೌಕ್ಕಟ್ಟಿನೊಳಗೆ ಕೂಡ ಅಪಾರವಾದ ಸ್ವಜನಪಕ್ಷಪಾತ ಮತ್ತು ವಶೀಲಿಬಾಜಿಗಳಿಗೆ ಅವಕಾಶ ಇರುತ್ತದೆ. ಇದೆಲ್ಲದರ ನಡುವೆಯೂ ಸಾರ್ವಜನಿಕ ಮನ್ನಣೆ ಇರುವ ಅನೇಕ ‘ಯೋಗ್ಯ’ರಿಗೆ ಪ್ರಶಸ್ತಿಗಳು ಬರುತ್ತವೆ. ಅವರೆಲ್ಲರೂ ಅರ್ಜಿ ಗುಜರಾಯಿಸಿ ರಾಜಕೀಯ ಮಾಡಿರುವುದಿಲ್ಲ. ಇನ್ನೆಷ್ಟೋ ‘ಯೋಗ್ಯ’ರಿಗೆ ಬರುವುದಿಲ್ಲ. ಅದು ಅನ್ಯಾಯವೇ ಹೌದು. ಇಂಥ ಸನ್ನಿವೇಶದಲ್ಲಿ ವಿಷಾದ, ಕೋಪ, ಅಸಹಾಯಕತೆ, ವಂಚನೆಯೆಂಬ ಹುಯಿಲುಗಳು ಕೇವಲ ಸಹಜ. ಡಾ. ಎಚ್. ಎಸ್. ರಾಘವೇಂದ್ರ ರಾವ್, ಅನುವಾದಕ, ವಿಮರ್ಶಕ

*

ಇದು ಹಿರಿಯ ಲೇಖಕ-ಅನುವಾದಕರಾದ ಡಾ. ಮಹಾಬಲೇಶ್ವರ ರಾವ್ ಅವರ ಮಾತುಗಳಿಗೆ ಕೊಡುತ್ತಿರುವ ಪ್ರತಿಕ್ರಿಯೆಯಲ್ಲ. ಹಲವು ಕಾಲ ಕಾಲದಿಂದ ಚರ್ಚೆಯಾಗುತ್ತಿರುವ ನಿಮಗೆಲ್ಲರಿಗೂ ತಿಳಿದಿರುವ ಸಂಗತಿಗಳನ್ನು ಮತ್ತೊಮ್ಮೆ ಹೇಳುತ್ತಿದ್ದೇನೆ, ಅಷ್ಟೆ. ಜೀವನ, ಸಮಾಜ ಮತ್ತು ಸಂಬಂಧಗಳಲ್ಲಿ ‘ರಾಜಕೀಯ’ದ ಅಂಟು ಇಲ್ಲದ ಯಾವ ಸಂಗತಿಯೂ ಇಲ್ಲ. ನೊಬೆಲ್ ಪ್ರಶಸ್ತಿಯಿಂದ ಹಿಡಿದು ಕ್ಷುಲ್ಲಕವಾದ ಬಹುಮಾನಗಳವರೆಗೆ ಯಾವುದೂ ಇದಕ್ಕೆ ಅಪವಾದವಲ್ಲ. ಯೋಗ್ಯತೆಗೆ ಸರಿಯಾಗಿಯೇ ಕೊಟ್ಟಾಗಲೂ ಅದನ್ನು ತೀರ್ಮಾನಿಸುವ ಮಾನದಂಡಗಳಿಗೂ ರಾಜಕೀಯದ ಲೇಪ ಇರುತ್ತದೆ. ‘ರಾಜಕೀಯ’ವೆನ್ನುವುದು ವಿಭಿನ್ನ ತಿಳಿವಳಿಕೆ ಮತ್ತು ನಿಲುವುಗಳ ಮುಖಾಮುಖಿ. ಅದರ ಜೊತೆಗೆ ರಾಜಕೀಯಕ್ಕೆ ಸಂಬಂಧಪಟ್ಟ ಮನುಷ್ಯರ ದುರ್ಗುಣ-ಸುಗುಣಗಳ ಸಂಕೀರ್ಣ ಆಯಾಮವೂ ಇರುತ್ತದೆ. ಈಗ ನೀಡಲಾಗುತ್ತಿರುವ ಪ್ರಶಸ್ತಿಗಳ ಸಮರ್ಥನೆ ಅಥವಾ ನಿರಾಕರಣೆ ಮಾಡುವುದಕ್ಕಿಂತ ಹೆಚ್ಚಾಗಿ ಈ ವಿದ್ಯಮಾನಗಳನ್ನು ಹೇಗೆ ನೋಡಬೇಕೆಂದು ನಾನು ಯೋಚಿಸುತ್ತಿದ್ದೇನೆ.

ಸರ್ಕಾರ, ಅದರಿಂದ ಪೋಷಿತವಾದ ಸಂಸ್ಥೆಗಳು ಮತ್ತು ಹತ್ತು ಹಲವು ಖಾಸಗೀ ಸಂಸ್ಥೆಗಳು ಪ್ರಶಸ್ತಿ ಕೊಡುವ ಕೆಲಸದಲ್ಲಿ ನಿರತವಾಗಿವೆ. ಇವೆಲ್ಲವೂ ಸರಿಯೋ ತಪ್ಪೋ ಆದ ಮಾನದಂಡಗಳನ್ನು ರೂಪಿಸಿಕೊಂಡಿರುತ್ತವೆ. ಸರಿ-ತಪ್ಪುಗಳು ದೃಷ್ಟಿಕೋನಗಳ ಪ್ರಶ್ನೆಯೇ ಹೊರತು ಅಬ್ಸಲ್ಯೂಟ್ ಅಲ್ಲ. ಆದರೆ ಇಂತಹ ನಿಯಮಗಳ ಚೌಕ್ಕಟ್ಟಿನೊಳಗೆ ಕೂಡ ಅಪಾರವಾದ ಸ್ವಜನಪಕ್ಷಪಾತ ಮತ್ತು ವಶೀಲಿಬಾಜಿಗಳಿಗೆ ಅವಕಾಶ ಇರುತ್ತದೆ. ಇದೆಲ್ಲದರ ನಡುವೆಯೂ ಸಾರ್ವಜನಿಕ ಮನ್ನಣೆ ಇರುವ ಅನೇಕ ‘ಯೋಗ್ಯ’ರಿಗೆ ಪ್ರಶಸ್ತಿಗಳು ಬರುತ್ತವೆ. ಅವರೆಲ್ಲರೂ ಅರ್ಜಿ ಗುಜರಾಯಿಸಿ ರಾಜಕೀಯ ಮಾಡಿರುವುದಿಲ್ಲ. ಇನ್ನೆಷ್ಟೋ ‘ಯೋಗ್ಯ’ರಿಗೆ ಬರುವುದಿಲ್ಲ. ಅದು ಅನ್ಯಾಯವೇ ಹೌದು. ಇಂಥ ಸನ್ನಿವೇಶದಲ್ಲಿ ವಿಷಾದ, ಕೋಪ, ಅಸಹಾಯಕತೆ, ವಂಚನೆಯೆಂಬ ಹುಯಿಲುಗಳು ಕೇವಲ ಸಹಜ.

Kannada Critic Translator HS Raghavendra Rao thoughts about Literature and Awards

ಸೌಜನ್ಯ : ಅಂತರ್ಜಾಲ

ಆದರೆ, ನಿಜವಾದ ಕಲೆ ಮತ್ತು ಕಲಾವಿದ, ಪ್ರಶಸ್ತಿಗಳು ಬರಲಿಲ್ಲವೆಂದು ಕೊರಗುವುದಿಲ್ಲ, ಬರಲೆಂದು ಪ್ರಯತ್ನಿಸುವುದಿಲ್ಲ, ಬಂದಿತೆಂದು ಬೀಗುವುದಿಲ್ಲ. ಜೀನ್ ಪಾಲ್ ಸಾರ್ತ್ರ್ ನಂತಹ ಲೇಖಕ ನೊಬೆಲ್ ಪ್ರಶಸ್ತಿಯನ್ನೇ ತಿರಸ್ಕರಿಸಿದ. ಕುವೆಂಪು ಹೇಳಿದ ಹಾಗೆ ಲೇಖಕನಿಗೆ ‘ಕೀರ್ತಿಶನಿ’ ಮತ್ತು ಯಶೋಲಕ್ಷ್ಮಿ’ಗಳ ನಡುವಿನ ಅಂತರ ಗೊತ್ತಿರುತ್ತದೆ. ಅವನು ಮನುಷ್ಯನೆಲೆಯಲ್ಲಿ ಆಗುವ ತಾತ್ಕಾಲಿಕ ಬೇಸರವನ್ನು ಮರೆತು ಕಲೆಯಲ್ಲಿ ತಲ್ಲೀನಾಗುತ್ತಾನೆ. ಯುವ ಲೇಖಕರಂತೂ ಇಂತಹ ಪ್ರಶಸ್ತಿಗಳು ಎಚ್ಚರಿಕೆಯಿಂದ ನೋಡಬೇಕಾದ ‘ಮುಳ್ಳಿನ ಕಿರೀಟ’ವೆನ್ನುವುದನ್ನು ಗ್ರಹಿಸಬೇಕು, ಬೆಳೆಯುತ್ತ ಹೋಗಬೇಕು. ಕೇವಲ ‘ಜನಪ್ರಿಯ’ವಲ್ಲದ ಓದು, ಗಂಭೀರವಾದ ಚರ್ಚೆ ಮತ್ತು ವಿಮರ್ಶೆಗಳೇ ಬರವಣಿಗೆಗೆ ಸಲ್ಲುವ ನಿಜವಾದ ಪ್ರಶಸ್ತಿ. ಇಂಥ ಸಂಗತಿಗಳಿಗೆ ಕೂಡ ಸಾಂಸ್ಕೃತಿಕವಾದ ಒತ್ತಡಗಳನ್ನು ಮೀರಿದ ಕಾಲಾತೀತವಾದ ಆಯಾಮಗಳಿರುತ್ತವೆ. ಸಮಕಾಲೀನ ಒತ್ತಡಗಳೂ ಇರುತ್ತವೆ. ಮೂರು ದಿನ ಫಳಫಳ ಮೆರೆಯುವ ಉಲ್ಕೆ, ಧೂಮಕೇತುಗಳೇ ಬೇರೆ. ಅನಂತ ಕಾಲ ಮಿನುಗುವ ನಕ್ಷತ್ರಗಳೇ ಬೇರೆ.

ಯಾವುದೇ ಭಾಷೆಯ ಸಂಸ್ಕೃತಿಗೆ ಯಾವುದೇ ಪ್ರಶಸ್ತಿ ಮತ್ತು ರಾಜಕೀಯಗಳನ್ನು ಮೀರಿ ಒಳ್ಳೆಯದನ್ನು ಗುರುತಿಸುವ, ಗೌರವಿಸುವ ಶಕ್ತಿ, ಅಭಿರುಚಿ ಇರುತ್ತದೆ. ಇಂತಹ ಶಕ್ತಿ ಅಭಿರುಚಿಗಳೂ ಸಾಮಾಜಿಕ ಸಂಗತಿಗಳ ಪರಿಣಾಮವಾಗಿ ಬದಲಾಗಬಹುದು. ಆದರೆ ಆಯಾ ಕಲಾಮಾಧ್ಯಮಗಳನ್ನು ಬಲ್ಲವರು ಅವುಗಳ ಸಾತತ್ಯ ಹಾಗೂ ಚಲನಶೀಲತೆಗಳನ್ನು ಗುರುತಿಸುತ್ತಾರೆ. ಅವರು ‘ಜ್ಞಾನಪೀಠ’, ‘ಪದ್ಮಶ್ರೀ’ಗಳನ್ನು ಮೀರಿಯೂ ನಿಜವಾದ ಬರಹಗಾರರನ್ನು ಗುರುತಿಸುತ್ತಾರೆ. ನನಗೆ ಕರ್ನಾಟಕದ ಈ ಸಾಮರ್ಥ್ಯದಲ್ಲಿ ನಂಬಿಕೆ ಇದೆ. ಶತಮಾನಗಳ ತನಕ ಸಾಹಿತ್ಯಕ ಚರ್ಚೆಗಳ ಅಂಚಿನಲ್ಲಿಯೂ ಇಲ್ಲದಿದ್ದ, ನಿಜಕ್ಕೂ ಜೀವಂತವಾದ ಜನಪದ ಮಹಾಕಾವ್ಯಗಳು ಈಗ ಮುನ್ನೆಲೆಗೆ ಬಂದಿವೆ. ಒಂದೇ ಒಂದು ಪ್ರಶಸ್ತಿಯೂ ಬರದ ಮಧುರಚೆನ್ನ, ಕೊಡಗಿನ ಗೌರಮ್ಮ ಇಂದು ಕನ್ನಡದ ಮುಖ್ಯ ಲೇಖಕರು. ಜೀವಮಾನವಿಡೀ ಒಂದೇ ಒಂದು ‘ಪೇಂಟಿಂಗ್’ ಅನ್ನೂ ಮಾರಲಾಗದ ವಿನ್ಸೆಂಟ್ ವಾನ್ ಗೋ ಇಂದು ಜಗತ್ತಿನ ಅತ್ಯಂತ ಶ್ರೇಷ್ಠ ಕಲಾವಿದರ ಸಾಲಿನಲ್ಲಿದ್ದಾನೆ. ಈ ನಂಬಿಕೆ, ಈ ತಿಳಿವಳಿಕೆ ಇರುವಾಗ, ನಿಜವಾದ ಸೃಜನಶೀಲತೆಗೆ ಕೀಳರಿಮೆಯೂ ಇರುವುದಿಲ್ಲ, ಕೊರಗೂ ಇರುವುದಿಲ್ಲ.

ಇದನ್ನೂ ಓದಿ : Writer : ‘ಇಂಗ್ಲಿಷ್​ನಲ್ಲಿ ಬರೆದಿದ್ದರೆ ಇಷ್ಟು ಹೊತ್ತಿಗೆ ನನಗೆ ಕೆಲವು ಪ್ರಶಸ್ತಿಗಳು ಬರುತ್ತಿದ್ದವು!’ ಲೇಖಕ ಮಹಾಬಲೇಶ್ವರ ರಾವ್ ಬೇಸರ

(ನಿರೀಕ್ಷಿಸಿ ಕಾರ್ಟೂನಿಸ್ಟ್​ ದಿನೇಶ್ ಕುಕ್ಕುಜಡ್ಕ ಅವರ ಪ್ರತಿಕ್ರಿಯೆ)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada