Sydney Diary : ಎಲ್ಲಿ ಸರಕಾರಗಳು ಸೋಲುತ್ತವೆಯೋ ಅಲ್ಲಿ ಪ್ರಶಸ್ತಿಗಳು ವಿಜೃಂಭಿಸುತ್ತವೆ
Awards : ‘ಶಾಲೆ ಕಟ್ಟಿದ ಹರೆಕಾಳ ಹಾಜಬ್ಬ ಮತ್ತು ಕೆರೆಗಳನ್ನು ಕಟ್ಟಿಸಿದ ಕಾಮೇಗೌಡರು ಮಾಡಿದ ಕೆಲಸ ಶ್ರೇಷ್ಠ ಮತ್ತು ಪ್ರಶಂಸೆಗೆ ಪಾತ್ರವಾಗಬೇಕಾದದ್ದೇ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಎಲ್ಲರೂ ಮುಖ್ಯವಾಗಿ ಗಮನಿಸಲು ಮರೆತುಹೋದ ವಿಷಯವೆಂದರೆ ಇವರು ಈ ಕೆಲಸಗಳನ್ನು ಯಾಕೆ ಮಾಡಬೇಕಾಗಿ ಬಂತು?’ ಶ್ರೀಹರ್ಷ ಸಾಲಿಮಠ
Sydney Diary : ಸಿಡ್ನಿ ಡೈರಿ – ಎಷ್ಟೋ ಸಾರಿ ನಾನು ತುಂಬಾ ಸಾಧಾರಣ ಮನುಷ್ಯ ಅಂತ ಹೇಳುವುದರಲ್ಲೆ ಸಮಯ ಕಳೆದು ಸೋತುಹೋಗಿರುತ್ತೇನೆ. ಗೆಲುವಿಗಿಂತ ಗಣನೀಯವಾಗಿ ಹೆಚ್ಚಾಗಿರುವ ನನ್ನ ಅನೇಕ ಸೋಲುಗಳು ಇವರಿಗೆ ಕಾಣುತ್ತಿಲ್ಲವೋ ಅಥವಾ ಕಡೆಗಣಿಸುತ್ತಿದ್ದಾರೋ ಗೊತ್ತಿಲ್ಲ. ಬಹುಷಃ ಈ ಸಾಮಾಜಿಕ ನಡವಳಿಕೆಯ ಒತ್ತಡವೂ ಪ್ರಶಸ್ತಿಗಳ ಬಗ್ಗೆ ಒಂದು ಅಸಡ್ಡೆ ಹುಟ್ಟಲು ಕಾರಣವಾಗಿರಬಹುದು. ಕೆಲಸಕ್ಕೆ ಸೇರಿದ ಮೇಲೆ ಕಂಪನಿಗಳಲ್ಲಿ ಇಲ್ಲಿಯವರೆಗೂ ಒಂದೇ ಒಂದು ಸಾರಿಯೂ ಸೆಲ್ಫ್ ಅಪ್ರೈಸಲ್ಗಳಲ್ಲಿ ಪಾಲ್ಗೊಂಡಿಲ್ಲ. ಸೆಲ್ಫ್ ಅಪ್ರೈಸಲ್ ಅಂದರೆ ನಾವು ಕಳೆದ ವರ್ಷಗಳಲ್ಲಿ ಎಷ್ಟು ಸಾಧನೆ ಮಾಡಿದ್ದೇವೆ ಕಂಪನಿಗಾಗಿ ಏನೆಲ್ಲ ಕರಾಮತ್ತು ಮಾಡಿದ್ದೇವೆ ಅಂತ ಹಿರಿಯರೆದುರಿಗೆ ಕೊಚ್ಚಿಕೊಳ್ಳಬೇಕು. ಅದರ ಆಧಾರದ ಮೇಲೆ ನಮ್ಮ ಪ್ರೊಮೋಶನ್ಗಳು ಸಂಬಳ ಹೆಚ್ಚಿಸುವುದು ಎಲ್ಲ ನಿಂತಿರುತ್ತದೆ. ಇಂತಹ ಮೀಟಿಂಗ್ಗಳಲ್ಲಿ “ನೀವು ಎಲ್ಲಾ ನೋಡಿದ್ದೀರಿ. ನಿಮಗೆಲ್ಲ ಗೊತ್ತಿರುತ್ತದೆ. ನೀವು ನಿರ್ಧಾರ ಕೈಗೊಳ್ಳಿ” ಅಂತ ಹೇಳಿ ಎದ್ದು ಬಂದಿರುವುದಷ್ಟೇ. ಶ್ರೀಹರ್ಷ ಸಾಲಿಮಠ
(ಕಂತು : 7)
ಪ್ರಶಸ್ತಿಗಳ ಬಗ್ಗೆ ನನಗೆ ಅಸಡ್ಡೆ ಶುರುವಾದದ್ದು ಯಾವಾಗ ಎಂಬುದು ನನಗೆ ಸರಿಯಾಗಿ ನೆನಪಿಲ್ಲ. ಪ್ರಾಥಮಿಕ ಶಾಲೆಯಲ್ಲಿದ್ದಾಗ ಬಹಳ ಬಹುಮಾನಗಳು ಬರುತ್ತಿದ್ದವು. ಶಾಲಾ ಮಟ್ಟದಲ್ಲಿ, ತಾಲ್ಲೂಕು ಮಟ್ಟದಲ್ಲಿ ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಸಾಮಾನ್ಯವಾಗಿ ಒಂದಿಲ್ಲೊಂದು ಬಹುಮಾನ ಅಂತ ನನ್ನದಿರುತ್ತಿತ್ತು. ಪ್ರಬಂಧ ಮತ್ತು ಹಾಡು ಹೊರತುಪಡಿಸಿ ಚರ್ಚೆ, ಆಶುಭಾಷಣ, ಕ್ವಿಜ್ ಸೇರಿದಂತೆ ಬಹುತೇಕ ಸ್ಪರ್ಧೆಗಳಲ್ಲಿ ಬಹುಮಾನ ಪಡೆದದ್ದಿದೆ. ನನಗೆ ಬರುತ್ತಿದ್ದ ಬಹುಮಾನದ ಬಗ್ಗೆ ಅದೆಂತಹ ವ್ಯಸನ ನಮ್ಮ ಟೀಚರುಗಳಿಗೆ ಶುರುವಾಗಿತ್ತೆಂದರೆ ನನ್ನನ್ನು ಓಟದ ಸ್ಪರ್ಧೆಗೂ ಕಳಿಸಿಬಿಡುತ್ತಿದ್ದರು! ನಿಜವೆಂದರೆ ನಾನು ಅಥ್ಲೆಟಿಕ್ಸ್ನಲ್ಲಿ ಯಾವತ್ತೂ ಅಷ್ಟಕ್ಕಷ್ಟೇ! ಹಾಡು ಯಾವತ್ತೂ ನನಗೆ ಒಲಿದದ್ದಿಲ್ಲ. ಪ್ರಬಂಧದಲ್ಲಿ ನನಗೆ ಪ್ರಶಸ್ತಿ ಬರದಿರಲು ಮುಖ್ಯ ಕಾರಣವೊಂದಿತ್ತು. ಉದಾಹರಣೆಗೆ ಹೇಳಬೇಕೆಂದರೆ “ಭಾರತದಲ್ಲಿ ಜನಸಂಖ್ಯಾ ಸ್ಪೋಟದ ಸಮಸ್ಯೆ ಮತ್ತು ಪರಿಹಾರಗಳು” ಎಂಬುದು ಪ್ರಬಂಧದ ವಿಷಯವಾಗಿದ್ದರೆ ನಾನು ಬರೆಯುತ್ತಿದ್ದುದು ಹೀಗಿರುತ್ತಿತ್ತು,
‘‘ಜನಸಂಖ್ಯೆಯು ದೇಶವೊಂದರ ಆರ್ಥಿಕ ಬೆಳವಣಿಗೆ ಮತ್ತು ಬೀಳುವಿಕೆಯಲ್ಲಿ ಸಮಾನ ಪಾತ್ರವಹಿಸುತ್ತದೆ. ಭಾರತದಂತಹ ದೇಶ ಜನಸಂಖ್ಯೆಯ ವಿಷಯದಲ್ಲಿ ಮೌಢ್ಯತೆಯ ಪರಿಧಿಯನ್ನು ದಾಟದೆ ಮುನ್ನಡೆಯುತ್ತಿರುವುದರಿಂದ ಜನಸಂಖ್ಯೆಯನ್ನು ಸದ್ಯದ ಮಟ್ಟಿಗೆ ವಿಷವೆಂದೇ ಪರಿಗಣಿಸಬಹುದು. 1991 ರ ಜನಗಣತಿಯ ಅಂಕಿಅಂಶಗಳಂತೆ…’’
ಮೊದಲ ಬಹುಮಾನ ಪಡೆದವನ ಪ್ರಬಂಧ ಹೀಗಿರುತ್ತಿತ್ತು.
ಪೀಠಿಕೆ: ‘‘ನಮ್ಮ ದೇಶವು ಭಾರತ ದೇಶವಾಗಿದೆ. ಭಾರತ ದೇಶವು ಎರಡನೆಯ ಅತಿ ದೊಡ್ಡ ಜನಸಂಖ್ಯೆಯನ್ನು ಹೊಂದಿದೆ. ಆದರೆ ವಿಸ್ತಾರದಲ್ಲಿ ಏಳನೆಯ ಸ್ಥಾನದಲ್ಲಿದೆ…’’
ವಿಷಯ ಬೆಳವಣಿಗೆ: ‘‘ಭಾರತ ದೇಶದಲ್ಲಿ ಹತ್ತು ವರ್ಷಗಳಿಗೊಮ್ಮೆ ಜನಗಣತಿ ನಡೆಸಲಾಗುತ್ತದೆ. ಇದರಂತೆ 1991 ರಲ್ಲಿಯೂ ನಡೆಸಲಾಯಿತು. ಇದರಲ್ಲಿ ಕೆಲವು ಮುಖ್ಯ ಅಂಕಿಅಂಶಗಳನ್ನು ಪ್ರಸ್ಥಾಪಿಸಲಾಗಿದೆ…’’
ಉಪಸಂಹಾರ: ‘‘ಈ ಎಲ್ಲಾ ವಿಷಯಗಳಿಂದ ನಾವು ತಿಳಿದುಕೊಳ್ಳುವುದೇನೆಂದರೆ…’’
ತಾಲ್ಲೂಕು ಜಿಲ್ಲಾ ಮಟ್ಟದಲ್ಲಿ ನನ್ನ ಪ್ರಬಂಧದ ಬಗ್ಗೆ ನನಗೆ ಹಿನ್ನುಣಿಕೆ ಬರದಿದ್ದರೂ ಶಾಲಾ ಮಟ್ಟದ ಸ್ಪರ್ಧೆಗಳಲ್ಲಿ ನನಗೆ ಶಿಕ್ಷಕರಿಂದ ಹಿನ್ನುಣಿಕೆ ಬರುತ್ತಿತ್ತು. ವಿಶೇಷವಾಗಿ ನನಗೆ ಹೇಳುತ್ತಾ ನೀನು ವಿಷಯಗಳನ್ನು ಪಾಯಿಂಟುಗಳನ್ನು ಚನ್ನಾಗಿ ಬರೆದಿದ್ದಿಯಾದರೂ ನೇರವಾಗಿ ವಿಷಯವನ್ನೆ ಬರೆದುಬಿಟ್ಟಿದ್ದೀಯಾ. ಮೊದಲು ಪೀಠಿಕೆ ಹಾಕಬೇಕು ಆಮೇಲೆ ವಿಷಯವನ್ನು ಮಂಡಿಸಬೇಕು ಅಂತ ಹೇಳಿ ಪ್ರೊಟೊಕಾಲ್ಗಳನ್ನು ಪಾಲಿಸದ ಕಾರಣ ನನಗೆ ಬಹುಮಾನ ಬರುವುದಿಲ್ಲವೆಂದು ಹೇಳುತ್ತಿದ್ದರು. ಜೀವನದಲ್ಲಿ ಒಂದಾದರೂ ಪ್ರೊಟೊಕಾಲ್ ಅನ್ನು ಪಾಲಿಸಿಬಿಟ್ಟರೆ ನಾನು ಎಲ್ಲಿ ಉದ್ಧಾರವಾಗಿಬಿಡುತ್ತೇನೋ ಎಂಬ ಭಯದಿಂದ ಇಲ್ಲಿಯವರೆಗೂ ಪಾಲಿಸಿದ್ದಿಲ್ಲ! ಆದರೆ ಈ ಬಹುಮಾನಗಳು ಅದೆಷ್ಟು ಅತಿಯಾಗಿಬಿಟ್ಟವೆಂದರೆ ಬಹುಮಾನ ಬಂದಾಗ ಸಂತೋಷವಾಗುವುದೇ ನಿಂತುಹೋಗಿಬಿಟ್ಟಿತು! ಬಹುಮಾನ ಬರುವುದು ಅಂದರೆ ನನ್ನ ಸುತ್ತಮುತ್ತಲಿನ ಜನಗಳಿಂದ ನನ್ನ ಸಾಮಾಜಿಕ ನಡವಳಿಕೆಗಳ ಬಗ್ಗೆ ಅತಿಯಾದ ಗಮನಿಕೆ ನಡೆಯುವುದು.
ನನ್ನ ಆಟ ಓಟದ ಸಮಯ ಓದಿನ ಸಮಯ ಮಾತಿನ ಟೋನ್ ಪಿಚ್ಗಳು ಎಲ್ಲವೂ ಅಳತೆಗೆ ಒಳಪಡುತ್ತಿದ್ದವು. ಅನೇಕರು ತಮ್ಮ ಮಕ್ಕಳಿಗೆ ನನ್ನ ನಡವಳಿಕೆಗಳನ್ನೆ ಬೆಳೆಸಿಕೊಳ್ಳಲು ಹೇಳುತ್ತಿದ್ದರು. ನನಗೆ ಗೊತ್ತಿರುವಂತೆ ನಾಲ್ಕು ಜನ ನನ್ನ ಹೆಸರನ್ನು ತಮ್ಮ ಮಕ್ಕಳಿಗೆ ಇಟ್ಟಿದ್ದಾರೆ. ನಿನ್ನಂತೆ ಆಗಲಿ ಅಂತ ನಿನ್ನ ಹೆಸರಿಟ್ಟಿದ್ದೇವೆ ಅಂತ ನನ್ನ ಎದುರಿಗೇ ಹೇಳಿಕೊಂಡಿದ್ದರು. ಹೆಸರು ಇಡೊ ಅಂತಹ ಅದ್ಯಾವ ಸಾಧನೆ ಮಾಡಿದ್ದೇ ಅದ್ಯಾವ ಪ್ರತಿಭೆ ಹೊಂದಿದ್ದೇನೆ ಅಂತ ನನಗೆ ಇದುವರೆಗೂ ತಿಳಿದಿಲ್ಲ. ಓದುವ ಹುಚ್ಚಿದೆ ಮತ್ತು ತಿಳಿದಿರೋದರಲ್ಲಿ ಕೊಂಚ ಬರೆಯಬಲ್ಲೆ ಅನ್ನೋದು ಬಿಟ್ಟರೆ ಹಾಡು, ಚಿತ್ರಕಲೆ, ನಾಟ್ಯ, ವಾದ್ಯ ಯಾವುದೂ ನನಗೆ ಒಲಿದಿಲ್ಲ. ಎಷ್ಟೋ ಸಾರಿ ನಾನು ತುಂಬಾ ಸಾಧಾರಣ ಎವರೇಜ್ ಮನುಷ್ಯ ಅಂತ ಹೇಳುವುದರಲ್ಲೆ ಸಮಯ ಕಳೆದು ಸೋತುಹೋಗಿರುತ್ತೇನೆ. ಗೆಲುವಿಗಿಂತ ಗಣನೀಯವಾಗಿ ಹೆಚ್ಚಾಗಿರುವ ನನ್ನ ಅನೇಕ ಸೋಲುಗಳು ಇವರಿಗೆ ಕಾಣುತ್ತಿಲ್ಲವೋ ಅಥವಾ ಕಡೆಗಣಿಸುತ್ತಿದ್ದಾರೋ ಗೊತ್ತಿಲ್ಲ. ಬಹುಷಃ ಈ ಸಾಮಾಜಿಕ ನಡವಳಿಕೆಯ ಒತ್ತಡವೂ ಪ್ರಶಸ್ತಿಗಳ ಬಗ್ಗೆ ಒಂದು ಅಸಡ್ಡೆ ಹುಟ್ಟಲು ಕಾರಣವಾಗಿರಬಹುದು. ಕೆಲಸಕ್ಕೆ ಸೇರಿದ ಮೇಲೆ ಕಂಪನಿಗಳಲ್ಲಿ ಇಲ್ಲಿಯವರೆಗೂ ಒಂದೇ ಒಂದು ಸಾರಿಯೂ ಸೆಲ್ಫ್ ಅಪ್ರೈಸಲ್ಗಳಲ್ಲಿ ಪಾಲ್ಗೊಂಡಿಲ್ಲ. ಸೆಲ್ಫ್ ಅಪ್ರೈಸಲ್ ಅಂದರೆ ನಾವು ಕಳೆದ ವರ್ಷಗಳಲ್ಲಿ ಎಷ್ಟು ಸಾಧನೆ ಮಾಡಿದ್ದೇವೆ ಕಂಪನಿಗಾಗಿ ಏನೆಲ್ಲ ಕರಾಮತ್ತು ಮಾಡಿದ್ದೇವೆ ಅಂತ ಹಿರಿಯರೆದುರಿಗೆ ಕೊಚ್ಚಿಕೊಳ್ಳಬೇಕು. ಅದರ ಆಧಾರದ ಮೇಲೆ ನಮ್ಮ ಪ್ರೊಮೋಶನ್ಗಳು ಸಂಬಳ ಹೆಚ್ಚಿಸುವುದು ಎಲ್ಲ ನಿಂತಿರುತ್ತದೆ. ಇಂತಹ ಮೀಟಿಂಗ್ ಗಳಲ್ಲಿ “ನೀವು ಎಲ್ಲಾ ನೋಡಿದ್ದೀರಿ. ನಿಮಗೆಲ್ಲ ಗೊತ್ತಿರುತ್ತದೆ. ನೀವು ನಿರ್ಧಾರ ಕೈಗೊಳ್ಳಿ” ಅಂತ ಹೇಳಿ ಎದ್ದು ಬಂದಿರುವುದಷ್ಟೇ.
ನಾನು ನೋಡಿರುವಂತೆ ದೊಡ್ಡವರ ಪ್ರಶಸ್ತಿಗಳ ಲೋಕ ಚಿಕ್ಕವರ ಪ್ರಶಸ್ತಿ ಲೋಕಕ್ಕಿಂತ ತೀರಾ ಸಂಕುಚಿತವಾದದ್ದು. ಚಿಕ್ಕವರ ಲೋಕದಲ್ಲಿ ಒಂದು ಪ್ರಾಮಾಣಿಕ ಸ್ಪರ್ಧಾತ್ಮಕತೆಯಾದರೂ ಇರುತ್ತದೆ. ದೊಡ್ಡವರ ಪ್ರಶಸ್ತಿಗಳಲ್ಲಿ ಅದಿಲ್ಲ. ಪ್ರತಿ ಸಾರಿ ಒಂದು ಸಂಸ್ಥೆ ಒಂದು ಸಾಹಿತ್ಯ ಪ್ರಶಸ್ತಿ ಕೊಡುವಾಗ ನೋಡುತ್ತೇನೆ. ಪ್ರಶಸ್ತಿ ವಿಜೇತ, ತೀರ್ಪುಗಾರ ಮತ್ತು ಪ್ರಶಸ್ತಿ ಕೊಡುವವರು ಪ್ರತಿದಿನ ಒಟ್ಟಿಗೆ ಕೂತು ಚಾ ಕುಡಿಯುತ್ತಿರುತ್ತಾರೆ. ಒಂದು ದಿನ ಪ್ರಶಸ್ತಿ ಬಂದಿದೆ ಅಂತ ಫೇಸ್ಬುಕ್ನಲ್ಲಿ ಹಾಕಿಕೊಳ್ಳುತ್ತಾರೆ. ಕೆಳಗೆ ಇವರಿಗೆ ಮುಗಿಬಿದ್ದು ಅಭಿನಂದನೆ ಸಲ್ಲಿಸುವವರೂ ಜೊತೆಗೆ ಚಾ ಕುಡಿಯುವ ಗೆಳೆಯರೇ! ಈ ರೀತಿಯ ಕ್ಲೋಸ್ಡ್ ಸರ್ಕ್ಯುಟ್ ಸಂಭ್ರಮಾಚರಣೆಗಳಿಂದ ಅದ್ಯಾವ ಸಂತೋಷ ಆತ್ಮತೃಪ್ತಿ ಸಿಗಲು ಸಾಧ್ಯ ಎಂಬುದು ತಿಳಿಯುತ್ತಿಲ್ಲ.
ಹಾಗಾಗಿಯೇ ಹಠ ಹಿಡಿದು ಯಾವತ್ತಿಗೂ ನನ್ನ ಹೆಸರು ಕೇಳದವರು ಪರಿಚಯ ಇರದವರು ಮಾತ್ರ ನನ್ನ ಪುಸ್ತಕದ ಮುನ್ನುಡಿ ಬರೆಯಬೇಕು ಅಂತ ಪ್ರಕಾಶಕರಿಗೆ ಹೇಳಿ ಮುನ್ನುಡಿ ಬರೆಸುವ ಜವಾಬ್ದಾರಿ ಅವರ ಮೇಲೆಯೆ ಹೊರಿಸಿದ್ದೆ. ಪರಿಚಯಸ್ಥರು ಮುಲಾಜಿಗೆ ಬಿದ್ದು ಮೆಚ್ಚುಗೆಯ ಮುನ್ನುಡಿ ಬರೆದುಬಿಟ್ಟರೆ ಎಂಬ ಅಳುಕೂ ಇತ್ತು. ಇವಾಗೇನೋ ಮೆಚ್ಚುಗೆಯ ಮುನ್ನುಡಿ ಬರೆಸಿಕೊಂಡುಬಿಡಬಹುದು, ಆದರೆ ಮುಂದಿನ ಪೀಳಿಗೆಯಲ್ಲಿ ಓದಿದವರಿಗೆ ಮುನ್ನುಡಿಯಲ್ಲಿರುವ ಮೆಚ್ಚುಗೆಗೂ ಬರಹದ ಗುಣಮಟ್ಟಕ್ಕೂ ತಾಳೆಯಾಗದೆ ಹೋದರೆ ಮುಂದೆ ಇತಿಹಾಸದುದ್ದಕ್ಕೂ ನಾನು ಅದೆಷ್ಟು ಮುಜುಗರ ಅನುಭವಿಸಬೇಕಾಗಬಹುದು! ಗೆಳೆಯರು ಮೆಚ್ಚುಗೆ ವ್ಯಕ್ತಪಡಿಸುವುದಕ್ಕಿಂತ ನನ್ನ ಪರಿಚಯವೇ ಇರದ ಹೆಸರೇ ಕೇಳದಿರುವವರು ಒಂದು ಲೇಖನವನ್ನು ಮೆಚ್ಚಿ ಒಂದು ಸಾಲು ಬರೆದು ಕಳಿಸುತ್ತಾರಲ್ಲ ಆ ತೃಪ್ತಿಯನ್ನು ಯಾವ ಪ್ರಶಸ್ತಿಯೂ ತಂದುಕೊಡದು.
ಎಷ್ಟೋ ಸಾರಿ ನನಗೆ ಈ ಪ್ರಶಸ್ತಿಗಳ ಪ್ರಸ್ತುತತೆ ಏನು ಎಂಬುದೇ ಹೊಳೆಯುವುದಿಲ್ಲ. ಇಂಡಿಯಾ ದೇಶದಲ್ಲಿರುವಷ್ಟು ನಾಗರಿಕ ಪ್ರಶಸ್ತಿಗಳನ್ನು ನಾನು ಯಾವ ಮುಂದುವರಿದ ದೇಶದಲ್ಲೂ ಕಂಡಿಲ್ಲ. ಭಾರತರತ್ನ ಪದ್ಮಪ್ರಶಸ್ತಿಗಳು ಸಹ ಪ್ರಸ್ತುತತೆಯನ್ನು ಹೊಂದಿಲ್ಲ ಎಂದು ಯಾವತ್ತೂ ನನಗನ್ನಿಸಿದೆ. ಎಲ್ಲಿ ಸರಕಾರಗಳು ಸೋಲುತ್ತವೆಯೋ ಅಲ್ಲಿ ಪ್ರಶಸ್ತಿಗಳು ವಿಜೃಂಭಿಸುತ್ತವೆ. ನಿಜ ಹೇಳಬೇಕೆಂದರೆ ಪ್ರಶಸ್ತಿಗಳನ್ನು ನೀಡುವುದು ಸರಕಾರಕ್ಕೆ ಮತ್ತು ಸಮಾಜಕ್ಕೆ ನಾಚಿಕೆಗೇಡಿನ ವಿಷಯ. ಎರಡು ಮುಖ್ಯ ಉದಾಹರಣೆಗಳನ್ನು ಹೇಳಬೇಕೆಂದರೆ ಶಾಲೆ ಕಟ್ಟಿದ ಹರೆಕಾಳ ಹಾಜಬ್ಬ ಮತ್ತು ಕೆರೆಗಳನ್ನು ಕಟ್ಟಿಸಿದ ಕಾಮೇಗೌಡರದು. ಇವರು ಮಾಡಿದ ಕೆಲಸ ಶ್ರೇಷ್ಠ ಹಾಗೂ ಪ್ರಶಂಸೆಗೆ ಪಾತ್ರವಾಗಬೇಕಾದದ್ದೇ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಎಲ್ಲರೂ ಮುಖ್ಯವಾಗಿ ಗಮನಿಸಲು ಮರೆತುಹೋದ ವಿಷಯವೆಂದರೆ ಇವರು ಈ ಕೆಲಸಗಳನ್ನು ಯಾಕೆ ಮಾಡಬೇಕಾಗಿ ಬಂತು?
ಹಣ್ಣು ಮಾರುವ ಕಸುಬಿನ ಹಾಜಬ್ಬ ಅವರು ತಮ್ಮ ಜೀವಮಾನದ ದುಡಿಮೆಯನ್ನೆಲ್ಲ ಒತ್ತೆಯಿಟ್ಟು ಸಾರ್ವಜನಿಕ ಶಾಲೆ ಕಟ್ಟಿಸಬೇಕಾದ ಪ್ರಸಂಗ ಬಂದದ್ದು ಯಾಕೆ? ಕುರಿಗಳನ್ನು ಮಾರಿ ಕೆರೆಗಳನ್ನು ಕಟ್ಟಿಸಬೇಕಾದ ಪರಿಸ್ಥಿತಿ ಕಾಮೇಗೌಡರಿಗೆ ಕಂಡದ್ದು ಹೇಗೆ? ಇದಕ್ಕೆ ಸರಳ ಉತ್ತರವೆಂದರೆ ಇಲ್ಲಿ ಸರಕಾರ ಸೋತಿದೆ! ಪ್ರತಿಯೊಬ್ಬರಿಗೂ ಸಹ ಶಿಕ್ಷಣ ಒದಗಿಸಬೇಕಾದದ್ದು ಸರಕಾರದ ಕರ್ತವ್ಯ, ಎಲ್ಲರಿಗೂ ಕುಡಿಯವ ಮತ್ತು ಬಳಕೆಗೆ ನೀರನ್ನು ಒದಗಿಸಬೇಕಾದದ್ದು ಸರಕಾರದ ಕೆಲಸ. ಇದಕ್ಕಾಗಿ ದೊಡ್ಡ ಮಟ್ಟದ ತೆರಿಗೆಯನ್ನು ನಾಗರಿಕರಿಂದ ಕಟ್ಟಿಸಿಕೊಳ್ಳಲಾಗುತ್ತದೆ. ತಾನು ಮಾಡಬೇಕಾದ ಕೆಲಸವನ್ನು ಸರಕಾರ ಸಾಮಾನ್ಯ ನಾಗರಿಕರಿಂದ ಮಾಡಿಸಿ ಕಡೆಗೆ ಅವರಿಗೊಂದು ಪ್ರಶಸ್ತಿ ಕೊಟ್ಟು ಕೈತೊಳೆದುಕೊಂಡು ತನ್ನ ಜವಾಬ್ದಾರಿಯಿಂದ ಜಾಣ್ಮೆಯಿಂದ ಜಾರಿಕೊಳ್ಳುತ್ತದೆ ಸರಕಾರ. ಸರಕಾರದ ಅಯೋಗ್ಯತನವನ್ನು ಪ್ರಶ್ನಿಸಬೇಕಾದ ನಾಗರಿಕರು ಪ್ರಶಸ್ತಿಗಳಿಗೆ ಚಪ್ಪಾಳೆ ತಟ್ಟಿ ತಾವೆಂತಹ ಅಪ್ರಬುದ್ಧರು ಅಂತ ತೋರಿಸಿಕೊಳ್ಳುತ್ತಾರೆ. ಅಷ್ಟಕ್ಕೂ ಈ ಸರಕಾರದ ಮುಖ್ಯ ಹುದ್ದೆಯಲ್ಲಿರುವ ರಾಜಕಾರಣಿಗಳು ಈ ಪ್ರಶಸ್ತಿಗಳನ್ನು ಕೊಡಮಾಡಿ ಚಪ್ಪಾಳೆ ತಟ್ಟುವಾಗ ತಮ್ಮ ಅಸಾಮರ್ಥ್ಯದ ಬಗ್ಗೆ ಒಮ್ಮೆಯೂ ಅವರ ಒಳಮನಸ್ಸು ಚುಚ್ಚುವುದಿಲ್ಲವೇ ಅಂತ ಅನ್ನಿಸುತ್ತದೆ.
ಬುಡಕಟ್ಟು ಜನರ ಏಳಿಗೆಯಾಗಲಿ, ಪರಿಸರ ರಕ್ಷಣೆಯಾಗಲಿ, ಶಿಕ್ಷಣ, ಮಳೆ ಸಂಗ್ರಹಣೆ ಇಂತಹ ಎಲ್ಲವೂ ಸರಕಾರದ ಕರ್ತವ್ಯ. ಅದಕ್ಕಾಗಿ ನಾಗರಿಕರು ತಮ್ಮ ಜೀವ ಸವೆಸಬೇಕಾಗಿಲ್ಲ. ಆಸ್ಟ್ರೇಲಿಯಾ ಸರಕಾರ ನಾಗರಿಕ ಪ್ರಶಸ್ತಿಗಳನ್ನು ಕೊಡುತ್ತದೆ. ಇದರಲ್ಲಿ ಸಮಾಜ ಸೇವೆಗಾಗಿ ಕೊಡುವ ಪ್ರಶಸ್ತಿ ಇಲ್ಲವೇ ಇಲ್ಲವೆನ್ನಬಹುದು. ಸರಕಾರ ತನ್ನ ನಾಗರಿಕರನ್ನು ಚನ್ನಾಗಿ ನೋಡಿಕೊಳ್ಳುವುದರಿಂದ ಇಲ್ಲಿ ಸಮಾಜ ಸೇವೆಯ ಮತ್ತು ಸಮಾಜಸೇವಕರ ಅವಶ್ಯಕತೆ ಬೀಳುವುದೇ ಇಲ್ಲ. ಹಾಗಾಗಿ ಬಹುತೇಕ ಪ್ರಶಸ್ತಿಗಳು ತಮ್ಮ ಕ್ಷೇತ್ರಗಳಲ್ಲಿ ಏರಿದ ಎತ್ತರಕ್ಕೆ ಸೀಮಿತವಾಗಿರುತ್ತವೆ. ಉದಾಹರಣೆಗೆ ಜೈಲು ಸಿಬ್ಬಂದಿಗಳಿಗೆ ಪ್ರತಿವರ್ಷ ಒಂದೂವರೆ ಸಾವಿರ ಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ. ವಿವಿಧ ಸರಕಾರಿ ಸೇವೆಗಳಲ್ಲಿ ಕ್ಷಮತೆ ತೋರಿದವರಿಗೆ ಪ್ರಶಸ್ತಿ ವಿತರಿಸಲಾಗುತ್ತದೆ. ಬರಹಗಾರರಿಗೆ, ಕ್ರೀಡಾಪಟುಗಳಿಗೆ, ನೂರು ವರ್ಷ ಪೂರೈಸಿದವರಿಗೆ, ಯುದ್ಧಗಳಲ್ಲಿ ಮತ್ತು ಅನಿರೀಕ್ಷಿತ ಸಂದರ್ಭಗಳಲ್ಲಿ ಸಮಯಪ್ರಜ್ಞೆ ತೋರಿ ಜನರ ಪ್ರಾಣ ಉಳಿಸಿದವರಿಗೆ ಗೌರವ ತೋರಲು ವಿತರಿಸಲಾಗುತ್ತದೆ. ಇಲ್ಲಿನ ಸರಕಾರಕ್ಕೆ ಆತ್ಮಸಾಕ್ಷಿ ಇದೆ ಎಂದು ಭಾಸವಾಗುತ್ತದೆ. ಸರಕಾರ ಎಂದರೆ ಜನರೇ ತಾನೆ? ಜನರಿಗೆ ಆತ್ಮಸಾಕ್ಷಿ ಇದೆ.
ನಮ್ಮ ಮನೆಯೆದುರಿಗೆ ಗುಂಡಿಯಿದ್ದರೆ ಏನು ಮಾಡಬೇಕು? ನಮ್ಮೆದುರಿಗೆ ಮೂರು ಆಯ್ಕೆಗಳಿವೆ. ಒಂದು ನಾವೆಲ್ಲ ಸೇರಿ ಸರಿ ಮಾಡಿಕೊಳ್ಳುವುದು. ಎರಡು ಯಾರಾದರೂ ಒಬ್ಬ ಸರಿಮಾಡುವವರೆಗೆ ಕಾದು ಆತ ಸರಿಮಾಡಿದ ಮೆಲೆ ಆತನಿಗೆ ಸರಕಾರದ ವತಿಯಿಂದ ಪ್ರಶಸ್ತಿ ಕೊಟ್ಟಾಗ ಆತನನ್ನು ಕೊಂಡಾಡುವುದು. ಮೂರನೆಯದು ಸರಕಾರದ ವಿರುದ್ದ ತಿರುಗಿ ಬಿದ್ದು ಸರಕಾರ ಅದನ್ನು ರಿಪೇರಿ ಮಾಡಿಸಿ ಮತ್ತೆ ಈ ರೀತಿ ಪದೇಪದೆ ಆಗದಂತೆ ತಡೆಯುವುದು. ಯಾವುದು ಸರಿ? ನನ್ನ ಪ್ರಕಾರ ಮೂರನೆಯದು ಸರಿ. ಯಾಕೆಂದರೆ ನಾಗರಿಕನ ಕೆಲಸವೆಂದರೆ ಸರಿಯಾಗಿ ತೆರಿಗೆ ಕಟ್ಟುವುದು, ಸಮಾಜಕ್ಕೆ ಪಿಡುಗಾಗದಿರುವುದು ಮತ್ತು ಸರಕಾರ ತಪ್ಪು ಮಾಡಿದರೆ ಅದನ್ನು ಎಚ್ಚರಿಸುವುದು. ಇಷ್ಟು ಮಾತ್ರ! ದೇಶಭಕ್ತಿ ಎಂದರೆ ಇಷ್ಟೇ.
ಹಿಂದೊಮ್ಮೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರೊಂದಿಗೆ ಮಾತನಾಡುವಾಗ ಅವರು ಹೇಳಿದ್ದ ಮಾತೊಂದು ಈ ಸಂದರ್ಭದಲ್ಲಿ ನೆನಪಾಗುತ್ತದೆ. ಪ್ರಾಮಾಣಿಕ ಅಧಿಕಾರಿಯನ್ನು ಎಲ್ಲರೂ ಹಾಡಿ ಹೊಗಳುತ್ತಾರೆ ಅಂದರೆ ಭ್ರಷ್ಟನಾಗಿರುವುದು ಸಾಮಾನ್ಯ ಪ್ರಾಮಾಣಿಕನಾಗಿರುವುದು ವಿಶೇಷ ಅಂತ ಎಲ್ಲರ ಅನಿಸಿಕೆ. ಆದರೆ ಪ್ರಾಮಾಣಿಕರಾಗಿರಬೇಕಾದದ್ದು ಎಲ್ಲರ ಸಹಜ ವರ್ತನೆಯಾಗಿರಬೇಕು. ಖಂಡಿತಾ ಬಹಳ ದೊಡ್ಡ ತೊಂದರೆ ಸಮಾಜದ ದೃಷ್ಟಿಕೋನದಲ್ಲಿದೆ.
ಹಿಂದಿನ ಕಂತು : Sydney Diary : ಬಕ್ಕೇಶ್ವರ, ಬಸವಾರಾಧ್ಯ, ರಾಘವೇಂದ್ರಸ್ವಾಮಿ, ಗುರುವಾಯೂರಪ್ಪನ ಆಶೀರ್ವಾದದಿಂದ