Updated on: Nov 23, 2024 | 8:00 AM
ಪರ್ತ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂಲಕ ರಿಷಭ್ ಪಂತ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ 47 ವರ್ಷಗಳ ಹಳೆಯ ದಾಖಲೆಯನ್ನು ಅಳಿಸಿ ಹಾಕುವ ಮೂಲಕ ಎಂಬುದು ವಿಶೇಷ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಷಭ್ ಪಂತ್ 78 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 37 ರನ್ ಬಾರಿಸಿದ್ದರು.
ಈ 37 ರನ್ಗಳೊಂದಿಗೆ ಆಸ್ಟ್ರೇಲಿಯಾದಲ್ಲಿ ಟೆಸ್ಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿದೇಶಿ ಬ್ಯಾಟರ್ ಎಂಬ ದಾಖಲೆಯನ್ನು ರಿಷಭ್ ಪಂತ್ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಇಂಗ್ಲೆಂಡ್ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಅಲೆನ್ ನಾಟ್ ಹೆಸರಿನಲ್ಲಿತ್ತು.
ಆಸ್ಟ್ರೇಲಿಯಾದಲ್ಲಿ 22 ಟೆಸ್ಟ್ ಇನಿಂಗ್ಸ್ ಆಡಿರುವ ಇಂಗ್ಲೆಂಡ್ನ ಅಲೆನ್ ನಾಟ್ 33.84 ರ ಸರಾಸರಿಯಲ್ಲಿ ಒಟ್ಟು 643 ರನ್ ಕಲೆಹಾಕಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಪಿಚ್ನಲ್ಲಿ ಅತ್ಯಧಿಕ ಟೆಸ್ಟ್ ರನ್ ಕಲೆಹಾಕಿದ ವಿಕೆಟ್ ಕೀಪರ್ ಬ್ಯಾಟರ್ ಎನಿಸಿಕೊಂಡಿದ್ದರು.
ಇದೀಗ ಆಸ್ಟ್ರೇಲಿಯಾದಲ್ಲಿ ಆಡಿದ 13 ಇನಿಂಗ್ಸ್ಗಳ ಮೂಲಕ ರಿಷಭ್ ಪಂತ್ ಒಟ್ಟು 661 ರನ್ ಗಳಿಸಿದ್ದಾರೆ. ಈ ಮೂಲಕ ಅಲೆನ್ ನಾಟ್ ಅವರ ದಾಖಲೆ ಮುರಿದು, ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಕೆಟ್ ಕೀಪರ್ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇನ್ನು ರಿಷಭ್ ಪಂತ್ ಅವರ 37 ರನ್ಗಳ ಕೊಡುಗೆಯೊಂದಿಗೆ ಟೀಮ್ ಇಂಡಿಯಾ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 150 ರನ್ಗಳಿಸಿ ಆಲೌಟ್ ಆಗಿದೆ. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿರುವ ಆಸ್ಟ್ರೇಲಿಯಾ ತಂಡವು ಮೊದಲ ದಿನದಾಟದ ಮುಕ್ತಾಯದ ವೇಳೆಗೆ 67 ರನ್ಗಳಿಗೆ 7 ವಿಕೆಟ್ ಕಳೆದುಕೊಂಡಿದೆ.