IND vs AUS: ‘ಹೌದು ನಾನು ಒಪ್ಪುತ್ತೇನೆ’; ತನ್ನ ಪ್ರದರ್ಶನದ ಬಗ್ಗೆ ಬೇಸರ ಹೊರಹಾಕಿದ ಕೊಹ್ಲಿ
Virat Kohli: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ನಿರೀಕ್ಷಿಸಿದ ಪ್ರದರ್ಶನ ನೀಡದಿರುವ ಬಗ್ಗೆ ರವಿ ಶಾಸ್ತ್ರಿಯವರೊಂದಿಗೆ ಮಾತನಾಡಿರುವ ವಿರಾಟ್ ಕೊಹ್ಲಿ ಬೇಸರ ಹೊರಹಾಕಿದ್ದಾರೆ. ತಮ್ಮ ಇತ್ತೀಚಿನ ಪ್ರದರ್ಶನದಲ್ಲಿನ ನ್ಯೂನತೆಗಳನ್ನು ಒಪ್ಪಿಕೊಂಡಿರುವ ಕೊಹ್ಲಿ ನಾನು ಶಿಸ್ತುಬದ್ಧವಾಗಿ ಆಡಲಿಲ್ಲ ಎಂದಿದ್ದಾರೆ. ಹಾಗೆಯೇ ಮೆಲ್ಬೋರ್ನ್ ಮೈದಾನದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿಯ ಬ್ಯಾಟ್ ಅದ್ಯಾಕೋ ಮೌನಕ್ಕೆ ಶರಣಾಗಿದೆ. ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಶತಕ ಸಿಡಿಸಿದ್ದ ವಿರಾಟ್ ಆ ಬಳಿಕ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಶತಕವಿರಲಿ, ಕೊಹ್ಲಿ ಬ್ಯಾಟ್ನಿಂದ ಅರ್ಧಶತಕದ ಇನ್ನಿಂಗ್ಸ್ ಹೊರಬರುವುದು ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಾಲ್ಕನೇ ಟೆಸ್ಟ್ಗೆ ಭರ್ಜರಿ ಸಿದ್ಧತೆ ನಡೆಸಿರುವ ಕೊಹ್ಲಿ, ಬಾಕ್ಸಿಂಗ್ ಡೇ ಟೆಸ್ಟ್ ಆರಂಭಕ್ಕೂ ಮುನ್ನ ರವಿಶಾಸ್ತ್ರಿ ಅವರೊಂದಿಗೆ ಮಾತುಕತೆ ನಡೆಸಿದ್ದು, ತನ್ನ ಪ್ರದರ್ಶನದ ಬಗ್ಗೆ, ತಂಡ ತನ್ನ ಮೇಲಿಟ್ಟಿರುವ ನಿರೀಕ್ಷೆಗಳ ಬಗ್ಗೆ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ನಾನು ಶಿಸ್ತುಬದ್ಧವಾಗಿ ಆಡಲಿಲ್ಲ
ಈ ವೇಳೆ ಕಳೆದ ಕೆಲವು ಇನ್ನಿಂಗ್ಸ್ನಲ್ಲಿ ನಿರೀಕ್ಷಿತ ಪ್ರದರ್ಶನ ಕಂಡುಬರದಿರುವ ಬಗ್ಗೆ ರವಿಶಾಸ್ತ್ರಿ ಕೊಹ್ಲಿ ಬಳಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಕೊಹ್ಲಿ, ‘ಹೌದು, ಕೊನೆಯ ಎರಡು ಮೂರು ಇನ್ನಿಂಗ್ಸ್‌ಗಳು ನಾನು ಬಯಸಿದ ರೀತಿಯಲ್ಲಿ ನಡೆಯಲಿಲ್ಲ ಎಂಬುದನ್ನು ನಾನು ಒಪ್ಪುತ್ತೇನೆ. ನಾನು ಶಿಸ್ತುಬದ್ಧವಾಗಿ ಆಡಲಿಲ್ಲ, ಇದು ಟೆಸ್ಟ್ ಕ್ರಿಕೆಟ್ ತರುವ ಸವಾಲು. ನಿಸ್ಸಂಶಯವಾಗಿ ಈ ಪಿಚ್‌ಗಳು ಕಳೆದ ಬಾರಿಗಿಂತ ಈ ಬಾರಿ ಸಾಕಷ್ಟು ಸವಾಲಿನವಾಗಿವೆ. ಹಾಗಾಗಿ ಇಲ್ಲಿ ಬ್ಯಾಟಿಂಗ್‌ಗೆ ವಿಭಿನ್ನ ವಿಧಾನದ ಅಗತ್ಯವಿದೆ. ಆದಾಗ್ಯೂ, ಇಲ್ಲಿನ ವಿಭಿನ್ನ ಸನ್ನಿವೇಶಗಳನ್ನು ಎದುರಿಸಲು ಮತ್ತು ತಂಡದ ನಿರೀಕ್ಷೆಗೆ ತಕ್ಕಂತೆ ಆಡಲು ಮತ್ತು ನನ್ನ ತಂಡಕ್ಕೆ ದೊಡ್ಡ ಕೊಡುಗೆಯನ್ನು ನೀಡಲು ಬಯಸುತ್ತೇನೆ ಎಂದಿದ್ದಾರೆ.
ನಿರೀಕ್ಷೆಗಳು ಯಾವಾಗಲೂ ಇರುತ್ತವೆ
ಪ್ರತಿ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ‘ನಿರೀಕ್ಷೆಗಳು ಯಾವಾಗಲೂ ಇರುತ್ತವೆ. ನನ್ನ ಪ್ರಕಾರ ಇಷ್ಟು ದಿನ ದೇಶಕ್ಕಾಗಿ ಆಡಿದ ನಂತರ ಇಷ್ಟು ರನ್ ಗಳಿಸಿದ ನಂತರ, ನಿರೀಕ್ಷೆಗಳು ಯಾವಾಗಲೂ ಇರುತ್ತವೆ. ನಿಮ್ಮ ಯೋಜನೆಗಳನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಮತ್ತು ನೀವು ಇರುವ ಜಾಗವನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ನೀವು ನಿರೀಕ್ಷೆಗಳ ಮೇಲೆ ಕೇಂದ್ರೀಕರಿಸಲು ಪ್ರಾರಂಭಿಸಿದರೆ, ಏನು ಮಾಡಬೇಕೆಂಬುದನ್ನು ನೀವು ಮರೆತುಬಿಡುತ್ತೀರಿ. ಹಾಗಾಗಿ ನಾನು ಹೊಂದಿರುವ ಆಟದ ಯೋಜನೆಯನ್ನು ಅನುಸರಿಸುವುದು ಮಾತ್ರ ನನ್ನ ಗುರಿಯಾಗಿದೆ. ಆಡುವ ವಿಧಾನದಲ್ಲಿ ಬಹಳ ಶಿಸ್ತುಬದ್ಧರಾಗಿರುವುದು ಮತ್ತು ಆಟದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇದೇ ನನ್ನನ್ನು ವರ್ಷಗಳಿಂದ ಯಶಸ್ವಿಯಾಗಿ ಉಳಿಯಲು ಕಾರಣವಾಗಿದೆ ಎಂದಿದ್ದಾರೆ.
ಸಾಕಷ್ಟು ಉತ್ತಮ ನೆನಪುಗಳಿವೆ
ವಾಸ್ತವವಾಗಿ ಮೆಲ್ಬೋರ್ನ್ ಮೈದಾನದಲ್ಲಿ ಕೊಹ್ಲಿ ಆಡಿರುವ ಮೂರು ಟೆಸ್ಟ್ ಪಂದ್ಯಗಳಲ್ಲಿ 52.66 ಸರಾಸರಿಯಲ್ಲಿ 316 ರನ್ ಗಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಕೊಹ್ಲಿ, ‘ಇದೊಂದು ವಿಶೇಷ ಸ್ಥಳ. ನಾನು ಹೇಳಬೇಕೆಂದರೆ ನನ್ನ ಮೊದಲ ಪ್ರವಾಸದಿಂದಲೇ ಈ ಮೈದಾನದಲ್ಲಿ ಉತ್ತಮವಾಗಿ ಆಡಿದ್ದೇನೆ. ಇದೀಗ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವು ಕಳೆದ ಟೆಸ್ಟ್ ಪಂದ್ಯಗಳ ಕೆಲವು ಉತ್ತಮ ನೆನಪುಗಳನ್ನು ಮರಳಿ ತರುತ್ತದೆ ಎಂದು ನಾನು ಭಾವಿಸಿದ್ದೇನೆ. ಕಳೆದ ಪ್ರವಾಸದಲ್ಲಿ ನಾವು ಸರಣಿ ಗೆಲ್ಲುವಲ್ಲಿ ಈ ಮೈದಾನದಲ್ಲಿ ಸಾಧಿಸಿದ್ದ ಗೆಲುವು ಪ್ರಮುಖ ಕಾರಣವಾಯಿತು. ಆದ್ದರಿಂದ ಈ ಮೈದಾನವು ಸ್ಮರಣೀಯವಾಗಿದೆ. ಇದಾದ ಬಳಿಕ 2014-15ರಲ್ಲೂ ಇಲ್ಲಿ ಟೆಸ್ಟ್ ಶತಕ ಬಾರಿಸಿದ್ದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ ಇತರ ಸ್ವರೂಪಗಳಲ್ಲಿಯೂ ಈ ಮೈದಾನದೊಂದಿಗೆ ಸಾಕಷ್ಟು ಉತ್ತಮ ನೆನಪುಗಳಿವೆ. ಬಂದು ಆಟವಾಡಲು ಇದು ವಿಶೇಷ ಸ್ಥಳವಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ